– ಸತ್ಯರಾಜ ದಾಸ
ಪ್ರಯೋಗಾಲಯದಲ್ಲಿ, ಪ್ರನಾಳದಲ್ಲಿ (ಇನ್ ವಿಟ್ರೊ) ಬೆಳೆಸಿದ ಷ್ಮೀಟ್ ಎಂದು ಕರೆಯುವ ಮಾಂಸವು ಜನರ ಮತ್ತು ವಿಜ್ಞಾನಿಗಳಷ್ಟೇ ಅಲ್ಲ, ಚಿಂತಕರ ಗಮನವನ್ನೂ ಸೆಳೆದಿದೆ. ಇದರ ಪ್ರತಿಪಾದಕರು ಹೇಳಿಕೊಳ್ಳುವಂತೆ ಇದು ಹಿಂಸಾರಹಿತ ಮತ್ತು ಸಂಸ್ಕರಿಸಿದ ಮಾಂಸವೇ?
ಷ್ಮೀಟ್ ಮಾಂಸವು ಇನ್ ವಿಟ್ರೊ (ಪ್ರನಾಳದಲ್ಲಿ ಬೆಳೆಸಿದ) ವಿಧಾನದಲ್ಲಿ ಕೃಷಿ ಮಾಡಿದ ಮಾಂಸವಾಗಿದ್ದು, ಇದು ಪ್ರಾಣಿ ಹಿಂಸಾ ಮುಕ್ತವಾಗಿದೆ. ಪ್ರಾಣಿಯನ್ನು ಕೊಲ್ಲದೆಯೇ ಪ್ರಾಣಿ ಕಾಂಡ ಕೋಶ (ಸ್ಟೆಮ್ ಸೆಲ್) ಬಳಸಿ ಪ್ರಯೋಗಾಲಯದಲ್ಲಿ ಬೆಳೆಸಿದ ಆಹಾರ ಉತ್ಪನ್ನ ಎಂದು ಹೇಳಲಾಗಿದೆ.. ಕೆಲವು ದಶಕಗಳಿಂದ ಸುದ್ದಿಯಲ್ಲಿರುವ ಷ್ಮೀಟ್ ಕುರಿತು ಸಂಶೋಧನೆ ನಡೆಸಿರುವ ಡಾ. ಮಾರ್ಕ್ ಪೋಸ್ಟ್ ಅದರ ಪ್ರಸಕ್ತ ರೂಪಕ್ಕೆ ಕಾರಣಕರ್ತರು. ಡಾ. ಪೋಸ್ಟ್ ಅವರು ನೆದರ್ಲ್ಯಾಂಡ್ಸ್ ವಿಶ್ವವಿದ್ಯಾಲಯದಲ್ಲಿ ಫಿಸಿಯಾಲಜಿ ಪ್ರಾಧ್ಯಾಪಕ. ಹಿಂಸೆ ಇಲ್ಲದೆ ಮಾಂಸ ಉತ್ಪಾದನೆ ಎಂದು ಅವರು ಹೇಳಿದರು. ಇತ್ತೀಚೆಗೆ ಈ ಕೃತಕ, “ಸುಸಂಸ್ಕೃತ” ಮಾಂಸವು ಬಳಕೆಯಲ್ಲಿದೆ ಎಂದೂ ಹೇಳಲಾಗಿದೆ.
ಆದರೆ ವಿಷಯ ಅದಲ್ಲ. ಅದು ಪ್ರಾಣಿ ಹಿಂಸೆಯನ್ನು ಹೇಗೆ ತಡೆದಿದೆ ಎನ್ನುವುದು ಮುಖ್ಯ ವಿಚಾರ.
ವಿಧಾನ ಸ್ವಲ್ಪ ಸಂಕೀರ್ಣವಾದದ್ದೇ. ಡಾ. ಪೋಸ್ಟ್ ಕಸಾಯಿಖಾನೆಗಳಲ್ಲಿ ಸಿಗುವ, ತ್ಯಜಿಸಲ್ಪಟ್ಟ ಪಶುಗಳ ಕತ್ತಿನ ಮಾಂಸದಿಂದ ಸ್ಟೆಮ್ ಸೆಲ್‌ಗಳನ್ನು ಮೊದಲು ತೆಗೆದುಕೊಂಡರು. ಅನಂತರ ಪಶು ಭ್ರೂಣದಿಂದ ಪಡೆದ ಸೀರಂ (ರಕ್ತ ಸಾರ) ಅನ್ನು ಬೆಳೆಯಲು ಬಳಸಿದರು ಮತ್ತು ಪೌಷ್ಟಿಕಾಂಶ ಮತ್ತು ಪ್ರೋಟೀನುಗಳಿಂದ ಶೀಟ್ ಮೇಲೆ (ಹಾಳೆ) ಗಟ್ಟಿ ಮಾಡಲಾದ ಮಾಂಸ ಕೋಶಗಳ ಪೋಷಣೆ ಮಾಡಿದರು. ಹೀಗೆ ಅಸಂಖ್ಯ ಕೋಶಗಳನ್ನು ಬೆಳೆಸಿದ ಮೇಲೆ, ಅವು ತಮ್ಮಿಂದ ತಾವೇ ಒಂದು ಪ್ರೋಟೀನನ್ನು ಸಂಯೋಜಿಸಿದವು. ಅದನ್ನೇ ಷ್ಮೀಟ್ ಎನ್ನುತ್ತಾರೆ. ಅಂದರೆ ಮಾಂಸ. ಇದನ್ನು ಸಂಸ್ಕರಿಸಿದ ಮಾಂಸ ಎಂದು ಕರೆಯುತ್ತಾರೆ.
ಪ್ರಯೋಗಾಲಯದ ಮಾಂಸ ಉತ್ಪಾದನೆಯನ್ನು ಶ್ಲಾಘಿಸಬೇಕು, ಏಕೆಂದರೆ ಅದು ಸಾಂಪ್ರದಾಯಿಕ ಮಾಂಸ ಮತ್ತು ಉತ್ಪನ್ನಗಳಿಗಾಗಿ ಪ್ರಾಣಿಗಳನ್ನು ಕೊಲ್ಲಲು ಬಳಸುವ ನೀರು, ನೆಲ, ಇಂಧನ ಬಳಕೆಯನ್ನು ಸಾಕಷ್ಟು ಉಳಿತಾಯ ಮಾಡುತ್ತದೆ. ಪ್ರಾಣಿ ಕೊಲ್ಲುವ ವಿಚಾರ ಕೂಡ ಇರದು ಎಂದೆಲ್ಲಾ ವಾದಿಸುವವರಿದ್ದಾರೆ. ಇದು ಪರಿಸರ ಮಾಲಿನ್ಯವನ್ನೂ ತಡೆಯುತ್ತದೆ ಎಂದು ಅವರು ಹೇಳುತ್ತಾರೆ. ನಿಜವೇ?
ನ್ಯೂಯಾರ್ಕ್ ಡೈಲಿ ನ್ಯೂಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ (ಆಗಸ್ಟ್ 7, 2013) ಪ್ರಕಾರ, ಇದು ಹಿಂಸೆ ಮುಕ್ತ ಎನ್ನುವುದು ಸರಿಯಲ್ಲ ಮತ್ತು ಅದರ ಬಳಕೆಯಲ್ಲಿ ಅನೇಕ ಅಪಾಯಗಳಿವೆ. ಈ ಮಾಂಸ ಸೃಷ್ಟಿಗೆ ಕರುವಿನ ಭ್ರೂಣದ ಸೀರಂ ಅಗತ್ಯ. ಗರ್ಭಸ್ಥ ಪಶುವನ್ನು ಕೊಲ್ಲುವುದರಿಂದ ಅದನ್ನು ಪಡೆಯುವುದು ಸಾಧ್ಯ. “ಇದು ಹಿಂಸಾರಹಿತವೇ“ ಎಂದು ಲೇಖನವು ಪ್ರಶ್ನಿಸಿತು.
ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಇನ್ ವಿಟ್ರೊ ಮಾಂಸವು ಹಿಂಸಾರಹಿತವಾಗಿ ಬಂದದ್ದು ಎಂದು ಸಮರ್ಥಿಸಲಾಗಿದೆ. ಪ್ರನಾಳ ಮಾಂಸ ಉತ್ಪನ್ನವು “ದಾನಿ ದನಗಳ ಹಿಂಡ” ನ್ನು ಕಲ್ಪಿಸುತ್ತದೆ. ಗೋ ಹತ್ಯೆ ಮಾಡದಂತೆ ಮಾಂಸವನ್ನು ಉತ್ಪಾದಿಸಲು ಈ ಗೋವುಗಳು ಕೆಲವು ಕೋಶಗಳನ್ನು ನೀಡುತ್ತವೆ. ಹೌದು, ಮೊದಲ ಇನ್ ವಿಟ್ರೊ ಹ್ಯಾಂಬರ್ಗರ್ ಅನ್ನು ಜೀವಂತ ಗೋವುಗಳ ಸ್ಟೆಂ ಸೆಲ್ಗಳಿಂದ ಮಾಡಲಾಯಿತು. ಆದರೆ ಇನ್ ವಿಟ್ರೊ ಹ್ಯಾಂಬರ್ಗರ್ ಬೆಳೆಯಲು ದಾನಿ ಪಶುಗಳು ಮಾತ್ರ ಅಗತ್ಯವಾದ ಪ್ರಾಣಿ ಉತ್ಪನ್ನವಲ್ಲ. ಕೋಶಗಳಿಗೆ ಒದಗಿಸುವ ಪೌಷ್ಟಿಕಾಂಶ, ವಿಟಮಿನ್ ಮತ್ತು ಬೆಳೆದ ಹಾರ್ಮೋನುಗಳನ್ನು ಒದಗಿಸುವ ಸಕ್ಕರೆ ಮತ್ತು ಆಮ್ನಿಯೋ ಆಮ್ಲಗಳ ಮಿಶ್ರಣ ಹಾಗೂ ಪೂರಕವಾಗಿ ಭ್ರೂಣ ಸೀರಂ. ಅಲ್ಲಿಗೆ, ಪ್ರಾಣಿಗಳ ಅಗತ್ಯವಿದೆ ಎಂದಾಯಿತಲ್ಲವೆ?
ಆದುದರಿಂದ ಲಾಭವೇನು? ಕೊಲೆಯು ಕೊಲೆಯೇ. ಡಾ. ಪೋಸ್ಟ್ ಅವರ ಕೃತಕ ಬರ್ಗರ್ ಸಾಂಪ್ರದಾಯಿಕ ಮಾಂಸ ಭಕ್ಷಣೆಗಿಂತ ಕಡಮೆ ಪ್ರಾಣಿಗಳನ್ನು ಕೊಲ್ಲುತ್ತದೆ ಎಂದು ವಾದಿಸುವವರು ಇದ್ದಾರೆ. ಆದರೆ ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಖಂಡಿತ ತಪ್ಪು. ಶ್ರೀಲ ಪ್ರಭುಪಾದರು ಹೇಳುವಂತೆ, “ನೀವು ಗೋವುಗಳನ್ನು ಏಕೆ ಕೊಲ್ಲಬೇಕು? ಗೋವುಗಳನ್ನು ರಕ್ಷಿಸಬೇಕು. ನೀವು ಹಸುವಿನ ಹಾಲನ್ನು ಪಡೆದು ಅನೇಕ ತಿನಿಸುಗಳನ್ನು ತಯಾರಿಸಲು ಬಳಸಬಹುದು. ಮಾಂಸ ಭಕ್ಷಣೆಯ ಬಗೆಗೆ ಹೇಳುವುದಾದರೆ, ಹಸುಗಳು ಸಾಯುತ್ತವೆಯಲ್ಲವೆ? ನೀವು ಸ್ವಲ್ಪ ಕಾಯಬೇಕು. ಸತ್ತ ಹಸುಗಳು ನಿಮಗೆ ಲಭ್ಯ. ನೀವು ಸತ್ತ ಹಸುಗಳನ್ನು ತೆಗೆದುಕೊಳ್ಳಿ ಮತ್ತು ಮಾಂಸ ಭಕ್ಷಿಸಿ. ಇದೇನು ಕೆಟ್ಟ ಸಲಹೆಯೇ? ಮಾಂಸ ಭಕ್ಷಣೆಯನ್ನು ನಿರ್ಬಂಧಿಸುತ್ತಿಲ್ಲ, “ಕೊಲ್ಲ ಬೇಡಿ” ಎಂದಷ್ಟೇ ಹೇಳುತ್ತೇವೆ. ಹಸು ಸತ್ತಾಗ, ನೀವು ಅದನ್ನು ಭಕ್ಷಿಸಬಹುದು.”
ಅಸ್ವಾಭಾವಿಕ, ಅಸಹಜ
ಹೇಗೆ ಮಾಡಿದರೂ ಸರಿ, ಷ್ಮೀಟ್ ಒಂದು ಅಸಹಜ, ವೈಜ್ಞಾನಿಕವಾಗಿ ಕೃತಕವಾದ ಉತ್ಪನ್ನ. ತಾಮಸ ಗುಣದ ಕೃತಕ ಆಹಾರವು ಮುಖ್ಯವಾಗಿ ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಅನನುಕೂಲವಾದುದು ಎಂದು ಭಗವದ್ಗೀತೆಯು ಹೇಳುತ್ತದೆ.
“ಪ್ರಾಣಿಗಳನ್ನು ಕೊಲ್ಲುವುದರಿಂದ ಮತ್ತು ಭೂಮಿಯನ್ನು ಹಾಳು ಮಾಡುವುದರಿಂದ ಆಹಾರ ಸಮಸ್ಯೆ ನೀಗದು. ಅದು ನಾಗರಿಕತೆಯಲ್ಲ. ಅರಣ್ಯದಲ್ಲಿ ವಾಸಿಸುವ ಮತ್ತು ಆಹಾರ ಉತ್ಪಾದಿಸಲು ಅನರ್ಹರಾದವರು ಪ್ರಾಣಿಗಳನ್ನು ಕೊಂದು ಜೀವಿಸುತ್ತಾರೆ. ಆದರೆ ಪ್ರಗತಿ ಹೊಂದಿದ ಮಾನವ ಸಮಾಜವು ಕೃಷಿ ಮತ್ತು ಗೋ ಸಂರಕ್ಷಣೆಯಿಂದ ಆಹಾರ ಉತ್ಪಾದಿಸಿಕೊಳ್ಳಬೇಕು. ನಿಮ್ಮ ಹಲ್ಲುಗಳು ಸಸ್ಯಾಹಾರಕ್ಕೆ ತಕ್ಕುನದಾಗಿದೆ. ಹುಲಿಗೆ ಮಾಂಸವನ್ನು ತಿನ್ನುವ ಹಲ್ಲುಗಳಿವೆ. ಪ್ರಕೃತಿಯು ಹಾಗೆ ಮಾಡಿದೆ. ಆದುದರಿಂದ ಅದು ಪ್ರಾಣಿಗಳನ್ನು ಕೊಲ್ಲುತ್ತದೆ… ಅದರ ಬಳಿ ಉಗುರುಗಳಿವೆ, ಹಲ್ಲುಗಳಿವೆ ಮತ್ತು ಬಲವಿದೆ. ಆದರೆ ನಿಮಗೆ ಅಂತಹ ಬಲವಿಲ್ಲ. ಹುಲಿಯಂತೆ ನೀವು ಗೋವುಗಳ ಮೇಲೆ ಎರಗಿ ಕೊಲ್ಲಲಾಗದು. ನೀವು ಕಸಾಯಿಖಾನೆಯನ್ನು ನಿರ್ಮಿಸಬೇಕು. ಯಾರೋ ಅಲ್ಲಿ ಪ್ರಾಣಿಯನ್ನು ಕೊಲ್ಲುತ್ತಾರೆ, ನೀವು ಮನೆಯಲ್ಲಿ ಕುಳಿತು ಅದರ ಮಾಂಸ ಸೇವಿಸುವಿರಿ. ಏನಿದು? ಹುಲಿಯಂತೆ ಹಸುವಿನ ಮೇಲೆ ಎರಗಿ, ಕೊಂದು ಮಾಂಸವನ್ನು ಭಕ್ಷಿಸುವಿರಾ? ನೀವು ಹಾಗೆ ಮಾಡಲಾಗದು” ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ.
ಗೋ ಸಂರಕ್ಷಣೆ
ಪ್ರಾಣಿಗಳನ್ನು ಕೊಲ್ಲದೆಯೇ ಷ್ಮೀಟ್ ಅನ್ನು ಉತ್ಪಾದಿಸುತ್ತೇವೆ ಎಂದು ಹೇಳಿಕೊಳ್ಳುವ ವಿಜ್ಞಾನಿಗಳು ಅನೇಕ ವಿಧಾನಗಳನ್ನೂ ಹುಡುಕುತ್ತಾರೆ. ಆದರೆ ಇಸ್ಕಾನ್ ಪ್ರಾಣಿಗಳನ್ನು ಸಂರಕ್ಷಿಸುವ ಯೋಜನೆಗಳನ್ನು ಹಾಕಿಕೊಂಡಿದೆ. ಇದನ್ನು ವಿಜ್ಞಾನಿಗಳು ಗಮನಿಸಬೇಕು. ಇಸ್ಕಾನ್ ಪ್ರಾಣಿಗಳೂ ಜೀವಿ ಎನ್ನುವುದನ್ನು ಪರಿಗಣಿಸಿ ಅದಕ್ಕೆ ರಕ್ಷಣೆಯನ್ನು ನೀಡುತ್ತಿದೆ. ಕೃಷ್ಣಪ್ರಜ್ಞೆಯ ಭಕ್ತರು ಸಾತ್ವಿಕವಾಗಿ ಬದುಕುತ್ತಾರೆ. ಅಸಹಜ ಉತ್ಪನ್ನಗಳನ್ನು ಸೃಷ್ಟಿಸಲು ಪ್ರಕೃತಿಯನ್ನು ದುರುಪಯೋಗಪಡಿಸಿಕೊಳ್ಳುವ ಅಗತ್ಯವಿಲ್ಲ. ಭಕ್ತನು ಕೃಷ್ಣನ ಸಹಜ ವರದಾನವನ್ನು ಆನಂದಿಸುತ್ತಾನೆ ಮತ್ತು ಅದನ್ನು ದಿವ್ಯ ಸೇವೆಯಲ್ಲಿ ತೊಡಗಿಸುತ್ತಾನೆ.