ಕಲಿಯುಗ ಧರ್ಮದ ದುರುಪಯೋಗ

ಆಖ್ಯಾಹಿ ವೃಷ ಭದ್ರಂ ವಃ ಸಾಧೂನಾಮಕೃತಾಗಸಾಮ್‌ ।

ಆತ್ಮವೈರೂಪ್ಯಕರ್ತಾರಂ ಪಾರ್ಥಾನಾಂ ಕೀರ್ತಿದೂಷಣಮ್‌ ॥

(ಶ್ರೀಮದ್‌ ಭಾಗವತ 1.17.13)

“ಹೇ ವೃಷಭನೇ, ನೀನು ನಿರಪರಾಧಿ ಮತ್ತು ತುಂಬ ಪ್ರಾಮಾಣಿಕನಾಗಿರುವೆ. ನಿನಗೆ ಸನ್ಮಂಗಲವಾಗಲಿ! ನಿನಗೆ ಈ ಊನಗಳನ್ನು ಮಾಡಿದ ಮತ್ತು ಇವುಗಳ ಮೂಲಕ ಪೃಥಾಪುತ್ರರ ಕೀರ್ತಿಗೆ ಕಳಂಕವನ್ನುಂಟುಮಾಡಿದ ದುಷ್ಟನು ಯಾರು ಎಂಬುದನ್ನು ನನಗೆ ದಯಮಾಡಿ ಹೇಳು.”

ಮಹಾರಾಜ ರಾಮಚಂದ್ರನ ಮತ್ತು ಅವನನ್ನೇ ಅನುಸರಿಸಿದ ಪಾಂಡವರು ಹಾಗೂ ಅವರ ವಂಶಜರ ಆಳ್ವಿಕೆಯ ಕೀರ್ತಿಯನ್ನು ಎಂದಿಗೂ ಮರೆಯುವಂತಿಲ್ಲ. ಏಕೆಂದರೆ, ಅವರ ರಾಜ್ಯದಲ್ಲಿ ತಪ್ಪು ಮಾಡದೆ ಪ್ರಾಮಾಣಿಕವಾಗಿದ್ದ ಜೀವಿಗಳಿಗೆ ಏನೂ ತೊಂದರೆ ಇರುತ್ತಿರಲಿಲ್ಲ. ಎತ್ತು ಮತ್ತು ಹಸುಗಳು ಅತ್ಯಂತ ನಿರಪರಾಧಿ ಪ್ರಾಣಿಗಳ ಸಂಕೇತಗಳಾಗಿವೆ. ಅವುಗಳ ಗೋಮಯ ಗೋಮೂತ್ರ ಕೂಡ ಮನುಷ್ಯರಿಗೆ ಉಪಯೋಗಕರವಾಗಿವೆ. ಪಾರ್ಥಪುತ್ರರ ವಂಶದವರಾದ ಪರೀಕ್ಷಿತ ಮಹಾರಾಜನಂತಹವರು ತಮ್ಮ ಕೀರ್ತಿ ಕೆಡುವುದರ ಬಗ್ಗೆ ಹೆದರುತ್ತಿದ್ದರು. ಆದರೆ, ಈ ಕಾಲದಲ್ಲಿ ಜನನಾಯಕರು ಅಂತಹ ಸಾಧುಪ್ರಾಣಿಗಳನ್ನು ಕೊಲ್ಲಲು ಕಿಂಚಿತ್ತೂ ಹಿಂಜರಿಯರು. ಆ ಪುಣ್ಯಶಾಲಿ ರಾಜರ ಆಳ್ವಿಕೆಗೂ ದೇವರ ನಿಯಮಗಳನ್ನು ತಿಳಿಯದ ಹೊಣೆಗೇಡಿಗಳಾದ ಇಂದಿನ ಅಧಿಕಾರಿಗಳ ಆಳ್ವಿಕೆಗೂ ಇರುವ ವ್ಯತ್ಯಾಸವನ್ನು ಇಲ್ಲಿ ತೋರಿಸಲಾಗಿದೆ.   

ಈ ಮಾತುಗಳನ್ನು ಭೂಮಿಯು (ಹಸು) ಧರ್ಮನಿಗೆ (ಎತ್ತು) ಹೇಳುತ್ತಿರುವುದು. ಆತ್ಮ ವೈರೂಪ್ಯ ಕರ್ತಾರಂ – ಎತ್ತು ಅಪರಿಚಿತ ವ್ಯಕ್ತಿಯಿಂದ ಹಿಂಸಿಸಲ್ಪಟ್ಟಿದೆ. ವಾಸ್ತವವಾಗಿ ಆ ಅಪರಿಚಿತ ವ್ಯಕ್ತಿ ಕಲಿ ಪುರುಷ. ಆದುದರಿಂದ ಹಸು ಹೇಳುತ್ತಿದೆ, “ನಿನಗೆ ಈ ರೀತಿ ಹಿಂಸೆ ಮಾಡಿದವರು ಯಾರು? ದಯೆಯಿಟ್ಟು ನನಗೆ ತಿಳಿಸು. ನೀನು ಸಾಧೂನಾಂ ಮತ್ತು ಅಕೃತಾಗಸಾಮ್‌. ಆದರೂ ಅವರು ನಿನ್ನನ್ನು ಹಿಂಸಿಸುತ್ತಿದ್ದಾರೆ.” ಧರ್ಮ, ಎತ್ತನ್ನು ವರ್ಣಿಸಲು ಈ ಎರಡು ಪದಗಳನ್ನು, ಸಾಧೂನಾಂ ಮತ್ತು ಅಕೃತಾಗಸಾಂ, ಉಪಯೋಗಿಸಲಾಗಿದೆ. ಪ್ರಭುಪಾದರು ಸಾಧೂನಾಂ ಅನ್ನು ತುಂಬ ಪ್ರಾಮಾಣಿಕ ಮತ್ತು ಅಕೃತಾಗಸಾಂ ಅನ್ನು ನಿರಪರಾಧಿ ಎಂದು ಭಾಷಾಂತರಿಸಿದ್ದಾರೆ. ಆದುದರಿಂದ, ಇಲ್ಲಿ ಎತ್ತು ಧರ್ಮದ ಸಂಕೇತವಾಗಿರುವುದು ಸ್ಪಷ್ಟ. ಮತ್ತು ಧರ್ಮ, ಎತ್ತು, ತುಂಬ ಪ್ರಾಮಾಣಿಕ ಮತ್ತು ನಿರಪರಾಧಿ ಎಂದು ಹೇಳಲಾಗಿದೆ. ಪ್ರಭುಪಾದರು ಭಾವಾರ್ಥದಲ್ಲಿ ಇದನ್ನು ಚೆನ್ನಾಗಿ ವಿವರಿಸಿದ್ದಾರೆ. ಹಸು ಮತ್ತು ಎತ್ತು ಎಷ್ಟು ನಿರಪರಾಧಿಗಳೆಂದರೆ ಅವು ಸದಾ ಮಾನವ ಸಮಾಜದ ಒಳಿತನ್ನೇ ಬಯಸುತ್ತವೆ. ಅದು ಹೇಗೆಂದರೆ ಅವುಗಳ ಗೋಮಯ ಗೋಮೂತ್ರ ಕೂಡ ಮಾನವ ಸಮಾಜಕ್ಕೆ ಲಾಭದಾಯಕವಾಗಿವೆ. ಆದರೂ ಈ ವ್ಯಕ್ತಿ, ಕಲಿ ಪುರುಷನು ಎತ್ತಿಗೆ ಹಿಂಸೆ ನೀಡುತ್ತಾನೆ.

ಕೆಲ ಸಮಯದ ಹಿಂದೆ ನಾನು ಪ್ರಯಾಣಿಸುತ್ತಿದ್ದಾಗ ನನ್ನ ಪಕ್ಕದಲ್ಲಿ ಅಮೆರಿಕದ ಒಬ್ಬ ವೃದ್ಧ ಕುಳಿತಿದ್ದ. ಅವನು ನನ್ನನ್ನು ನೋಡಿ ಕೇಳಿದ, “ನೀವು ಸಾಧುವೇ?” ನಾನೆಂದೆ, “ನಾನು ಭಾರತದ ಹಿಂದೂ ಸಾಧು.” ಅನಂತರ ಅವನೆಂದ, “ನಾನು ನಾಸ್ತಿಕ.” ನಾನು ಏನೂ ಹೇಳಲಿಲ್ಲ. ಅವನು ಮುಂದುವರಿಸಿದ, “ನಾನು ಅಮೆರಿಕ ಸೇನೆಯಲ್ಲಿದ್ದೆ. ಮತ್ತು ನಾವು ಇತಿಹಾಸ ಅಧ್ಯಯನ ಮಾಡಿದೆವು. ಅನೇಕ ಯುದ್ಧಗಳು ಧರ್ಮದ ಕಾರಣಕ್ಕಾಗಿಯೇ ನಡೆದಿವೆ. ಆದುದರಿಂದ ನಾನು ನಾಸ್ತಿಕನಾದೆ.” ಮತ್ತು ಐತಿಹಾಸಿಕವಾಗಿಯೂ ಅನೇಕ ಹೋರಾಟ ಮತ್ತು ಸಮರಗಳಿಗೆ ಸ್ಫೂರ್ತಿಯಾಗಿ ಧರ್ಮವನ್ನು ಬಳಸಿರುವುದುಂಟು. ಜಾಗತಿಕ ಸಮರಗಳಲ್ಲಿ ನಾಜಿ ಜರ್ಮನಿ ಸೈನಿಕರ ಸೊಂಟದ ಪಟ್ಟಿಯ ಮೇಲೆ `ದೇವರು ನಮ್ಮೊಡನಿದ್ದಾನೆ’ ಎಂದು ಕೆತ್ತಲಾಗಿತ್ತು. ಆದುದರಿಂದ ಸೈನಿಕರಿಗೆ `ದೇವರು ಜೊತೆಗಿದ್ದಾನೆ’ ಎಂದು ಯೋಚಿಸುವಂತೆ ಬೋಧಿಸಿ, `ನೀವು ಹೋಗಿ ಯುದ್ಧಮಾಡಿ’ ಎಂದು ಹೇಳಲಾಗುತ್ತಿತ್ತು. ಜಾಗತಿಕ ಸಮರದ ಸಮಯದಲ್ಲಿ, ಅಮೆರಿಕದಲ್ಲಿ `ದೇವರನ್ನು ಕೊಂಡಾಡಿ ಮತ್ತು ಯುದ್ಧ ಸಾಮಗ್ರಿ ಹಸ್ತಾಂತರಿಸಿ’ ಎಂಬ ಸಾಮಾನ್ಯ ಮಾತೊಂದು ಇತ್ತು. ಇವುಗಳ ಪರಿಣಾಮವಾಗಿ, ಜನರು ಧರ್ಮದ ಬಗೆಗೆ ತುಂಬ ನಿರಾಶರಾಗಿದ್ದರು. ಅಲ್ಲದೆ ದುಃಖಭರಿತರಾಗಿದ್ದರು.

ಶ್ರೀಲ ಪ್ರಭುಪಾದರು ವಿಚಾರಕನೊಬ್ಬನಿಗೆ ಬರೆದ ಒಂದು ಒಳ್ಳೆಯ ಪತ್ರವಿದೆ. 1970 ರಲ್ಲಿ ಯಾರೋ ಒಬ್ಬರು ಅವರಿಗೆ ಪತ್ರ ಬರೆದು ಧರ್ಮ ಮತ್ತಿತರ ವಿಷಯಗಳ ಬಗೆಗೆ ತಿಳಿಸುವಂತೆ ಕೋರಿದ್ದರು. ಆ ಪತ್ರದಲ್ಲಿ ಪ್ರಭುಪಾದರು ಧರ್ಮ ಎಂದರೆ ಏನೆಂದು ವಿವರಿಸಿದ್ದರು. ದೇವರನ್ನು ತಲಪುವುದಲ್ಲ, ಭಗವಂತನನ್ನು ಅರ್ಥಮಾಡಿಕೊಳ್ಳುವ ಉನ್ನತ ಮಟ್ಟ ತಲಪಲು, ಜೀವನದ ಅತ್ಯುನ್ನತ ಮಟ್ಟವನ್ನು ಮುಟ್ಟಲು ಗ್ರಹಿಕೆಯ ವಿವಿಧ ವೇದಿಕೆಗಳ ಮೂಲಕ ವ್ಯಕ್ತಿಯನ್ನು ಮೇಲಕ್ಕೆತ್ತುವ ವಿಧಾನ. ಪ್ರಭುಪಾದರು ಈ ವಿವರಣೆಯಲ್ಲಿ ಭಗವಂತನ ಹೆಸರನ್ನೂ ಕೂಡ ತರುವುದಿಲ್ಲ. ಮಾನವ ಜೀವನದ ಅತ್ಯುನ್ನತ ಮಟ್ಟವನ್ನು ತಲಪುವುದೇ ಧರ್ಮ.

ಜೀವನದ ಅರ್ಥ ಗ್ರಹಿಕೆಗೆ ಅನೇಕ ವೇದಿಕೆಗಳಿವೆ. ಪ್ರಭುಪಾದರು ಕರೆದ ಜೀವನದ ದೈಹಿಕ ಕಲ್ಪನೆಯೇ ಮೂಲ ವೇದಿಕೆ. ಉತ್ತಮ ಮತ್ತು ಹೆಚ್ಚಿನ ಐಹಿಕ ಸಂಪಾದನೆಯನ್ನು ಹೊಂದಿ ಅದರಲ್ಲಿ ಉನ್ನತ ಮಟ್ಟ ಏರುವ ಇಚ್ಛೆ ಜನರದು. ಅವರು ಅದನ್ನು ಉನ್ನತ ಮಟ್ಟದ್ದೆಂದು ಪರಿಗಣಿಸುತ್ತಾರೆ. ಬದುಕನ್ನು ಗ್ರಹಿಸಿಕೊಳ್ಳಲು ಮತ್ತೊಂದು ವೇದಿಕೆ ಇದೆ : ಇಂದ್ರಿಯ, ದೈಹಿಕ ವೇದಿಕೆ. ನನ್ನ ಗುರುತನ್ನು ಅರ್ಥಮಾಡಿಕೊಳ್ಳುವ ವೇದಿಕೆಯು ಕೇವಲ ದೇಹವಲ್ಲ. ನನಗೆ ಯೋಚಿಸುವ ಮನಸ್ಸಿದೆ ಮತ್ತು ನಾನು ಶಿಕ್ಷಣದ ಮೂಲಕ ನನ್ನನ್ನು ನಾನು ಉನ್ನತ ಮಟ್ಟಕ್ಕೆ ಏರಿಸಿಕೊಳ್ಳಬೇಕು. – ಅಂದರೆ ತನಗೆ ತಾನೇ ಮೇಲಕ್ಕೇರುವುದು. ಆದುದರಿಂದ ಜನರು ತಮ್ಮನ್ನು ತಾವು ಮೇಲ್ಮಟ್ಟಕ್ಕೆ ಏರಿಸಿಕೊಳ್ಳಲು ಶಿಕ್ಷಣ, ಕಲೆ, ಸಾಹಿತ್ಯ, ಸಂಗೀತಗಳಲ್ಲಿ ನಿರತರಾಗುವರು. ಅದಕ್ಕಿಂತ ಮೇಲಿನದೆಂದರೆ, ನಮ್ಮ ಗುರುತನ್ನು ಅರ್ಥಮಾಡಿಕೊಳ್ಳುವುದು – ಇದು ದೇಹವೇ? ಇದು ಮನಸ್ಸೇ? ಮತ್ತು ಬುದ್ಧಿಯೇ? ಅಥವಾ ಅದಕ್ಕಿಂತ ಮೇಲ್ಮಟ್ಟದ್ದು, ಆತ್ಮವನ್ನು ಅರ್ಥಮಾಡಿಕೊಳ್ಳುವುದು?

ಈ ರೀತಿಯಲ್ಲಿ, ಅರ್ಥಮಾಡಿಕೊಳ್ಳುವ ಈ ವೇದಿಕೆಗಳ ಮೂಲಕ ತಮ್ಮನ್ನು ಮೇಲ್ಮಟ್ಟಕ್ಕೆ ಏರಿಸಿಕೊಳ್ಳುವ ಮತ್ತು ಜೀವನದ ಉನ್ನತ ಮಟ್ಟಕ್ಕೆ ಬರುವ ವಿಧಾನವನ್ನೇ ಧರ್ಮ ಎಂದು ಕರೆಯುವರು. ಯಾವಾಗ ವ್ಯಕ್ತಿಯು ಹೆಚ್ಚು ಹೆಚ್ಚು ತಿಳುವಳಿಕೆ ಪಡೆಯುವನೋ ಮತ್ತು ಶಿಕ್ಷಿತನಾಗುವನೋ ಆಗ ಕೃತಜ್ಞತೆ, ನೀತಿ/ಧರ್ಮದ ಭಾವನೆಗಳೆಲ್ಲವೂ ತಿಳಿಯುತ್ತವೆ. ಕೃತಜ್ಞತೆಯ ಕಲ್ಪನೆ ಏಕಿದೆ? ಏಕೆಂದರೆ ನೀವು ಯಾರಿಂದಲಾದರೂ ಅನುಕೂಲಪಡೆದುಕೊಳ್ಳುವಿರಿ ಮತ್ತು ದೇವರಿಂದ ನೀವು ಎಷ್ಟೊಂದು ಪಡೆದುಕೊಳ್ಳುತ್ತಿರುವಿರಿ ಎಂಬುವುದು ನಿಮಗೆ ಅರ್ಥವಾದರೆ, ಆಗ ಸ್ವಾಭಾವಿಕವಾಗಿ ನೀವು ನಮಗೆ ಎಲ್ಲವನ್ನೂ ನೀಡುತ್ತಿರುವ ಭಗವಂತನ ಬಗೆಗೆ ಕೃತಜ್ಞತೆ ಬೆಳೆಸಿಕೊಳ್ಳುವಿರಿ.

ಈ ರೀತಿ ದೇವರನ್ನು ಅರಿತುಕೊಳ್ಳಲಾಗುವುದು ಮತ್ತು ಶ್ರೀಲ ಪ್ರಭುಪಾದರು ವಿವರಿಸುತ್ತಾರೆ, ಮಾನವ ಜೀವನದಲ್ಲಿ ಕೆಲವು ಕಟ್ಟಳೆಗಳ ಕರ್ತವ್ಯಗಳಿವೆ. ನಮ್ಮ ವೈದಿಕ ಸಂಸ್ಕೃತಿಯ ಪ್ರಕಾರ, ಧರ್ಮವು ಒಂದು ತರದ ಶ್ರದ್ಧೆಯಲ್ಲ. ಗ್ರಹಿಕೆಯ ವಿವಿಧ ವೇದಿಕೆಗಳ ಮೂಲಕ ಮಾನವ ಜನ್ಮವನ್ನು ಉದ್ಧಾರಗೊಳಿಸಿ ಅತ್ಯುನ್ನತ ಪದವಿಗೆ ತರುವ ಪ್ರಕ್ರಿಯೆಯೆ ಧರ್ಮ.

ಪ್ರಭುಪಾದರು ವಿವರಿಸುತ್ತಾರೆ, ವೈದಿಕ ಸಂಸ್ಕೃತಿಯು ಮಾನವ ಜೀವಿಗಳಿಗೆ ಕೆಲವು ಕರ್ತವ್ಯಗಳನ್ನು ಸೂಚಿಸುತ್ತದೆ. ಯಾವಾಗ ಮಾನವ ಜೀವಿಗಳು ಈ ಕರ್ತವ್ಯಗಳನ್ನು ನಿರ್ವಹಿಸುವರೋ ಮತ್ತು ಕೆಲವು ಚಟುವಟಿಕೆಗಳಿಂದ ದೂರವಿರುವರೋ ಆಗ ಅವರು ಭಗವಂತನನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಹೆಚ್ಚು ಅರ್ಹರಾಗುತ್ತಾರೆ. ವ್ಯಕ್ತಿಯ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸಲು ಇಂದ್ರಿಯ ನಿಯಂತ್ರಣ ಅಗತ್ಯ. ಮಾನವ ಜೀವಿಯ ಪ್ರಜ್ಞೆಯ ಮೇಲೆ ಸತತವಾಗಿ ಪ್ರಭಾವ ಬೀರುತ್ತಿರುವ ಪ್ರಕೃತಿಯ ಮೂರು ಗುಣಗಳು – ವ್ಯಕ್ತಿಯ ಯೋಚನೆ, ಹಾರೈಕೆ ಮತ್ತು ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ.

ಆ ಕರ್ತವ್ಯಗಳನ್ನು ನಿರ್ವಹಿಸಿದಾಗ, ಅವರು ತಳಮಟ್ಟದ ಗುಣದಿಂದ ಸತ್ತ್ವ ಗುಣಕ್ಕೆ ಏರುತ್ತಾರೆ. ಭಗವಂತನಲ್ಲಿ ಪ್ರೀತಿಯನ್ನು ಬೆಳೆಸಿಕೊಳ್ಳುವ ಹಂತಕ್ಕೆ ತರುವುದೇ ಅತ್ಯುನ್ನತ ಧರ್ಮ ಎಂದು ಪ್ರಭುಪಾದರು ವಿವರಿಸುತ್ತಾರೆ. ದೇವರನ್ನು ಅರ್ಥಮಾಡಿಕೊಳ್ಳುವುದಿದೆ, ದೇವರ ಬಗೆಗೆ ಭಯವಿದೆ, ದೇವರಿಗೆ ವಿಧೇಯರಾಗಿರುವುದಿದೆ. ಇವುಗಳೆಲ್ಲದವುಗಳಿಗಿಂತ ಉನ್ನತವಾದುದು ಒಂದು ಇದೆ. ಅದೇ ಭಗವಂತನಲ್ಲಿ ಪ್ರೀತಿ. ದೇವರಲ್ಲಿನ ಈ ಪ್ರೀತಿಯು ಭಾವುಕತೆ ಅಲ್ಲ, ಇದು ಅರ್ಥಗ್ರಹಿಕೆಯ ಮೇಲೆ ಆಧಾರಿತವಾಗಿದೆ. ಆದುದರಿಂದ ಭಾಗವತವು ಹೇಳುತ್ತದೆ, ಭಕ್ತ್ಯ ಶ್ರುತ ಗ್ರಹಿತ್ಯ, ಅಂದರೆ ಭಕ್ತಿಯು ಅಥವಾ ಭಗವಂತನಲ್ಲಿ ಪ್ರೀತಿಯು ಶ್ರುತ ಗ್ರಹಿತ್ಯ, ಗ್ರಹಿಕೆಯ ಬುನಾದಿ ಮೇಲೆ ಆಧಾರವಾಗಿರಬೇಕು. ಏಕೆಂದರೆ ಭಗವಂತನಲ್ಲಿ ಪ್ರೀತಿ ಎಂದು ಹೇಳಿದಾಕ್ಷಣ ಜನರು “ನೀವು ಯಾವುದೋ ತುಂಬ ಭಾವನಾತ್ಮಕ ವಿಷಯ, ಪ್ರಾರ್ಥನೆ ಇಂತಹ ವಿಷಯಗಳ ಬಗೆಗೆ ಮಾತನಾಡುತ್ತಿರುವಿರೆಂಬುದು ನನಗೆ ಗೊತ್ತು” ಎಂದು ಯೋಚಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಇದು ಗ್ರಹಿಕೆಯ ಲೋಪವನ್ನು ಸೂಚಿಸುತ್ತದೆ. ಆದುದರಿಂದ ಕೃಷ್ಣನು ಹೇಳುತ್ತಾನೆ, ಬುಧಾ ಭಾವಸಮನ್ವಿತಾಃ

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।

ಇತಿ ಮತ್ವಾ ಭಜನ್ತೇ ಮಾಂ ಬುಧಾ ಭಾವಸಮನ್ವಿತಾಃ ॥ 

(ಗೀತೆ, 10.8)

ಎಲ್ಲದರ ಮೂಲವನ್ನು ಕುರಿತ ವೇದಾಂತ ತತ್ತ್ವದಿಂದ ಆವೃತವಾಗಿರುವ ಭಗವದ್ಗೀತೆಯ ಒಂದು ಸುಂದರ ಶ್ಲೋಕವಿದು. ಕೃಷ್ಣನು ಹೇಳುತ್ತಿದ್ದಾನೆ, ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ – ಎಲ್ಲ ಆಧ್ಯಾತ್ಮಿಕ ಮತ್ತು ಭೌತಿಕ ಜಗತ್ತುಗಳ ಮೂಲವು ನಾನೇ. ಎಲ್ಲವೂ ನನ್ನಿಂದ ಹೊರಸೂಸುತ್ತವೆ. ಇತಿ ಮತ್ವಾ – ಇದನ್ನು ಸಂಪೂರ್ಣವಾಗಿ ತಿಳಿದವರು ಭಜನ್ತೇ ಮಾಂ ವಿದ್ವಾಂಸರು ನನ್ನ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ ಭಜನ್ತೇ ಮಾಂ ಮತ್ತು ಬುಧಾ – ಅವರು ಜ್ಞಾನಿಗಳು. ಅಂತಹವರು ಹೃದಯತುಂಬಿ ನನ್ನನ್ನು ಪೂಜಿಸುತ್ತಾರೆ.

ಹೀಗೆ ಈ ಶ್ಲೋಕವು ಭಾವ ಅಥವಾ ಭಕ್ತಿಯು ಹೇಗೆ ಇದೆ ಎಂಬುವುದನ್ನು ವಿವರಿಸುತ್ತದೆ. ಅದು ಭಾವೋದ್ರೇಕದಿಂದ ಅಲ್ಲ, ಅರ್ಥಮಾಡಿಕೊಳ್ಳುವ ಶಕ್ತಿಯಿಂದ. ಪ್ರಭುಪಾದರು ಹೇಳುತ್ತಾರೆ, ಭಗವಂತನಲ್ಲಿ ಪ್ರೀತಿಯನ್ನು ಬೆಳೆಸುವ ವೇದಿಕೆಗೆ ಒಬ್ಬರನ್ನು ಕರೆ ತರುವುದೇ ಅತ್ಯುನ್ನತ ಧರ್ಮ. ಧರ್ಮವನ್ನು ಹೇಗೆ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕೆಂಬುವುದನ್ನು ನಾವು ನೋಡಬಹುದು. ಆದರೆ ದುರದೃಷ್ಟವಶಾತ್‌, ಕಲಿಯುಗದಲ್ಲಿ ಕಳೆದ ಸುಮಾರು ಒಂದು ಸಾವಿರ ವರ್ಷಗಳಿಂದ, ಧರ್ಮವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ತಪ್ಪಾಗಿ ಅರ್ಥಮಾಡಿಕೊಳ್ಳಲಾಗುತ್ತಿದೆ ಮತ್ತು ರಾಜಕಾರಣಿಗಳು ಅಧಿಕಾರ ಪಡೆಯುವ ತಮ್ಮ ಹೋರಾಟಕ್ಕೆ ಅಥವಾ ವಾಣಿಜ್ಯ ಉದ್ದೇಶಗಳಿಗೆ ಸ್ಫೂರ್ತಿ ನೀಡಲು ಮಾತ್ರ ಬಳಸಿದ್ದಾರೆ. ಆದುದರಿಂದ ವಿದ್ಯಾವಂತರು ಧರ್ಮದಿಂದ ದೂರ ಇರಲು ಬಯಸುತ್ತಾರೆ. ಧರ್ಮದ ಜ್ಞಾನವನ್ನು ಪ್ರಸಾರ ಮಾಡುತ್ತಿರುವವರಿಗೆ ಹೆಚ್ಚಿನ ಜವಾಬ್ದಾರಿ, ಏಕೆಂದರೆ ನೀವು ಧರ್ಮದ ಹೆಸರಿನಲ್ಲಿ ಎಷ್ಟು ಬೇಕಾದರೂ ಮಾತನಾಡಬಹುದು, ಆದರೆ ಅದು ಮಾನವ ಸಮಾಜದಲ್ಲಿ ಒಂದು ರೂಪವಾಗಿ ಪರಿವರ್ತಿತವಾಗದಿದ್ದರೆ ಯಾರೂ ನಿಮ್ಮ ಅಭಿಪ್ರಾಯವನ್ನು ಸ್ವೀಕರಿಸುವುದಿಲ್ಲ.

ಆದುದರಿಂದಲೇ ಪ್ರಭುಪಾದರು 1974ರಲ್ಲಿ, ಮತ್ತೊಂದು ಪತ್ರದಲ್ಲಿ ಬರೆಯುತ್ತಾರೆ, ನಾವು ನಮ್ಮ ಚಾರಿತ್ರ್ಯ, ನಡತೆಯಲ್ಲಿ ಆದರ್ಶವಾಗಿರಬೇಕು ಮತ್ತು ಆಗ ಮಾತ್ರ ನಾವು ನಮ್ಮ ಸಮಾಜದ ಮೇಲೆ ಪ್ರಭಾವ ಬೀರುವುದು ಸಾಧ್ಯ. ಬ್ರಾಹ್ಮಣರು ಆದರ್ಶ ಚಾರಿತ್ರ್ಯ ಹೊಂದಿರುವುದಕ್ಕೆ ಹೆಸರಾದವರು. ಇದರಿಂದಾಗಿ ಅವರು ಸಮಾಜದ ಉಳಿದವರಿಗೆ ಧರ್ಮವನ್ನು ಬೋಧಿಸಬಹುದಾಗಿತ್ತು. ಧರ್ಮವು ಜನರನ್ನು ನೋಯಿಸಲೆಂದು ಇಲ್ಲ, ಅದರ ಉದ್ದೇಶ ಜನರಿಗೆ ಒಳಿತಾಗಲೆಂಬುದೇ ಆಗಿದೆ. ಹೇಗೆ? ಕ್ರಮೇಣ ಅವರನ್ನು ಮೇಲಕ್ಕೆತ್ತುತ್ತ ಮತ್ತು ಭಗವಂತನಲ್ಲಿ ಪ್ರೀತಿಯನ್ನು ಹೊಂದುವ ರೀತಿಯಲ್ಲಿ, ಕೃಷ್ಣ ಪ್ರಜ್ಞೆ ಹೊಂದುವಂತೆ ಅವರನ್ನು ಮಾನವ ಅಭಿವೃದ್ಧಿಯಲ್ಲಿ ಉನ್ನತ ಮಟ್ಟಕ್ಕೆತ್ತುವುದು. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಂತೆ, ಮಾನವ ಸಮಾಜವನ್ನು ಮೇಲಕ್ಕೆತ್ತಲು ನೆರವಾಗುವ ಈ ತತ್ತ್ವಗಳ ಆಧಾರದ ಮೇಲೆ ರಾಜ್ಯಭಾರ ಮಾಡಲು ರಾಜರಿಗೆ ಈ ಜ್ಞಾನವನ್ನು ಬೋಧಿಸಲಾಗಿದೆ.

ನಮ್ಮೆಲ್ಲರಿಗೂ ಆಸೆಗಳಿವೆ, ಲೌಕಿಕ ಆಸೆಗಳಿವೆ. ಇದನ್ನು ನಾವು ನಿರಾಕರಿಸುವುದು ಸಾಧ್ಯವಿಲ್ಲ ಎಂಬುವುದು ವಾಸ್ತವ. ಮತ್ತು ಅದನ್ನು ದಿಢೀರನೆ, ಸುಲಭವಾಗಿ ತೊಡೆದು ಹಾಕುವುದು ಸಾಧ್ಯವಿಲ್ಲ. ವೈದಿಕ ಸಂಸ್ಕೃತಿಯು ಈ ಎಲ್ಲ ವಿಷಯಗಳನ್ನೂ ಪ್ರಸ್ತಾವಿಸಿದೆ. ನಿಮ್ಮದು ಒಂದು ನಿರ್ದಿಷ್ಟ ಸ್ವಭಾವ, ವಿವಿಧ ಕರ್ತವ್ಯಗಳಲ್ಲಿ ತೊಡಗಿರುವ ನೀವು ಈ ಭಿನ್ನ ಸ್ವಭಾವಕ್ಕೆ ತಕ್ಕಂತೆ ಸಮಾಜವನ್ನು ವಿಭಾಗಿಸಿ ಮತ್ತು ಅವರು ಆ ಕರ್ತವ್ಯಗಳನ್ನು ವೈದಿಕ ಸಾಹಿತ್ಯ ಮತ್ತು ಬ್ರಾಹ್ಮಣರ ನಿರ್ದೇಶನದಂತೆ ಮಾಡಿದಾಗ ಎಲ್ಲರಿಗೂ ತಮ್ಮ ತಮ್ಮ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಗ್ರಹಿಕೆಯ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಜನರನ್ನು ಏರಿಸಲೆಂದೇ ಅದು ಉದ್ದೇಶಿತ. ಇದು ಬದುಕನ್ನು ಅರ್ಥಮಾಡಿಕೊಳ್ಳುವ ಮತ್ತು ಸಮಾನಾಂತರವಾಗಿ ದೈಹಿಕ ಬೇಡಿಕೆಗಳ ಬಗೆಗೆ ಅರಿಯುವುದನ್ನು ಕುರಿತದ್ದಾಗಿದೆ. ಭಿನ್ನವಾದ ಜನರಲ್ಲಿ ಭಿನ್ನವಾದ ಪ್ರೇರಣೆಗಳಿರುತ್ತವೆ ಮತ್ತು ನಾವು ಅವುಗಳ ಜೊತೆ ಸ್ವಾಭಾವಿಕವಾದ ರೀತಿಯಲ್ಲಿ ವ್ಯವಹರಿಸಬೇಕಾಗುತ್ತದೆ. ಆದರೆ ಅದೇ ವೇಳೆ ಒಬ್ಬರ ಪ್ರಜ್ಞೆಯನ್ನು ಮೇಲಕ್ಕೆತ್ತಲು ಪ್ರಯತ್ನಿಸಲೂಬೇಕು. ಇವೆಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ವೈದಿಕ ಸಂಸ್ಕೃತಿಯಲ್ಲಿ ವರ್ಣಾಶ್ರಮ ಪದ್ಧತಿಯನ್ನು ರೂಪಿಸಲಾಯಿತು. ಒಬ್ಬರನ್ನು ಅವರ ಪ್ರಜ್ಞೆಯಲ್ಲಿ ಆಧ್ಯಾತ್ಮಿಕವಾಗಿ ಉನ್ನತ ಮಟ್ಟಕ್ಕೆ ಏರಿಸಿದಾಗ ದೈಹಿಕ ಬೇಡಿಕೆಗಳು ಇಳಿಮುಖಗೊಳ್ಳುತ್ತವೆ. ಅದು ಎಲ್ಲರಿಗೂ ಸಾಧ್ಯವಾಗದು ಆದರೆ ಪ್ರತಿಯೊಬ್ಬರಿಗೂ ಅವರು ಯಾವುದೇ ಮಟ್ಟದಲ್ಲಿರಲಿ ಅದರಿಂದ ಮೇಲಕ್ಕೇರಲು ಅವರಿಗೆ ಒಂದು ಅವಕಾಶ ಸಿಗಬೇಕು. ವರ್ಣಾಶ್ರಮ ಪದ್ಧತಿಯನ್ನು ತಪ್ಪಾಗಿ ಗ್ರಹಿಸಲಾಗಿದೆ, ಧರ್ಮದ ಮೂಲ ಕಲ್ಪನೆಯಿಂದ ಧರ್ಮವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ.

ಮತ್ತು ಇಲ್ಲಿ ಹೀಗೆ ಹೇಳಿದೆ – ಈ ಬಗೆಗೆ ರಾಜರಿಗೆ ಅರಿವಿತ್ತು, ಈ ಜ್ಞಾನದಲ್ಲಿ ಅವರಿಗೆ ಅನುಭವವಿತ್ತು ಮತ್ತು ಅವರು ಸಮಾಜವನ್ನು ಆಳುತ್ತಿದ್ದರು, ಅವರಲ್ಲಿ ಅಧಿಕಾರವಿತ್ತು. ಅಧಿಕಾರ ಮತ್ತು ಸಂಪತ್ತು ಇದ್ದರೆ ಅದು ಮಾನವನನ್ನು ಭ್ರಷ್ಟಗೊಳಿಸಬಹುದು. ಹೀಗಾಗಿ ಪ್ರಬಲನಾದ ರಾಜನು, ಉತ್ಪಾದಕರೂ ಶ್ರೀಮಂತರೂ ಆದ ವೈಶ್ಯರು ಸಮಾಜದ ಈ ಎರಡೂ ವರ್ಗದವರು ಬ್ರಾಹ್ಮಣರ ಸಲಹೆ ಸೂಚನೆಯಂತೆ ನಡೆದುಕೊಳ್ಳುತ್ತಿದ್ದರು. ತಮ್ಮ ಅತ್ಯುನ್ನತ ಮಟ್ಟದ ಜ್ಞಾನ ಮತ್ತು ಸಾಕ್ಷಾತ್ಕಾರಗಳ ಕಾರಣ ಬ್ರಾಹ್ಮಣರು ತಮ್ಮ ಆಧ್ಯಾತ್ಮಿಕ ಗ್ರಹಿಕೆಯಲ್ಲಿ ಉನ್ನತ ಮಟ್ಟದಲ್ಲಿದ್ದರು. ಸಮಾಜದ ಪ್ರಬಲರು ಮತ್ತು ಶ್ರೀಮಂತರು ಅವರನ್ನು ಗೌರವಿಸುತ್ತಿದ್ದರು ಮತ್ತು ಅವರು ಈ ವರ್ಗದ ಜನರಿಗೆ ಆದೇಶ ನೀಡಬಹುದಿತ್ತು. ಬ್ರಾಹ್ಮಣರು ಯಾವಾಗಲೂ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುತ್ತಿದ್ದರು ಮತ್ತು ಅವರು ರಾಜ ಅಥವಾ ವೈಶ್ಯರಿಂದ ಉದ್ಯೋಗ ಸ್ವೀಕರಿಸುತ್ತಿರಲಿಲ್ಲ.

ಶ್ರೀಲ ಪ್ರಭುಪಾದರು ನೀಡುವ ಒಂದು ಮುಖ್ಯವಾದ ಉದಾಹರಣೆ – ಚಾಣಕ್ಯ ಪಂಡಿತನು ಪ್ರಧಾನ ಮಂತ್ರಿಯಾಗಿ ರಾಜನ ಅರಮನೆಗೆ ಹೋಗುತ್ತಿದ್ದನು ಮತ್ತು ರಾಜನಿಗೆ ಸಲಹೆಗಳನ್ನು ನೀಡಿ ತನ್ನ ಗುಡಿಸಲಿಗೆ ವಾಪಸು ಬಂದುಬಿಡುತ್ತಿದ್ದನು. ಅವನು ಗೌರವ ಧನ ಪಡೆಯುತ್ತಿರಲಿಲ್ಲ, ಏಕೆಂದರೆ ಬ್ರಾಹ್ಮಣರಿಗೆ ಈ ವಸ್ತುಗಳ ಅಗತ್ಯವಿರಲಿಲ್ಲ. ಅವನು ಸರಳವಾಗಿ ಜೀವಿಸುತ್ತಿದ್ದ.

ಹೀಗಾಗಿ ಬ್ರಾಹ್ಮಣರು ತುಂಬ ಸರಳವಾಗಿ ಜೀವಿಸಿದ್ದರು, ಏಕೆಂದರೆ ಅವರು ಆಧ್ಯಾತ್ಮಿಕ ಸಾಕ್ಷಾತ್ಕಾರದ ಆನಂದದಲ್ಲಿ ಮುಳುಗಿಬಿಟ್ಟಿದ್ದರು. ಲೌಕಿಕ ಅನುಕೂಲಗಳು, ಸಂತೋಷ ಅವರ ಏಕಾಗ್ರತೆಯನ್ನು ಭಂಗಪಡಿಸುತ್ತಿರಲಿಲ್ಲ – ಶುದ್ಧವಾದ ಆಧ್ಯಾತ್ಮಿಕ ಮೇಲ್ಮಟ್ಟವಿದ್ದರೆ ಅದು ಸಾಧ್ಯ. ಹೀಗಾಗಿ, ರಾಜರು ಈ ವಿಷಯಗಳಲ್ಲಿ ಅರಿವು ಪಡೆದಿದ್ದರು ಮತ್ತು ಅವರು ಧರ್ಮವನ್ನು ರಕ್ಷಿಸಿದರು ಮತ್ತು ಆದುದರಿಂದ ಇಲ್ಲಿ ಹೀಗೆ ಹೇಳಿದೆ – ಪಾರ್ಥಾನಾಂ ಕೀರ್ತಿ ದೂಷಣಂ – ಧರ್ಮಕ್ಕೆ ಹಾನಿ ಉಂಟಾಗುತ್ತಿದೆ ಮತ್ತು ಪಾಂಡವರ ವಂಶಸ್ಥರಾದ ಶ್ರೇಷ್ಠ ರಾಜರು ಇದನ್ನು ಸಹಿಸುವುದಿಲ್ಲ ಮತ್ತು ಅವರು ಇದನ್ನು ಸಹಿಸಿದರೆ ಧರ್ಮವನ್ನು ರಕ್ಷಿಸುತ್ತಿರುವ ತಮ್ಮ ಕೀರ್ತಿ, ಪ್ರಖ್ಯಾತಿಯನ್ನು ಕಳೆದುಕೊಳ್ಳುವರು. ಆದುದರಿಂದ ಇದಾಗುವುದು ಸಾಧ್ಯವಿಲ್ಲ, ನಿನಗೆ ಇದನ್ನು ಮಾಡಿದವರಾರು? ಭೂಮಿಯು ಇದನ್ನು ಕೇಳುತ್ತಿದ್ದಾಳೆ ಮತ್ತು ಅತಿ ಶೀಘ್ರದಲ್ಲಿ ನೀವು ಧರ್ಮ ಮಾತನಾಡುವುದನ್ನು, ಧರ್ಮ ತರಬಹುದಾದ ಎಲ್ಲ ಸಾತ್ತ್ವಿಕವಾದವುಗಳ ಸಾಕಾರ ರೂಪವನ್ನು ನೋಡುವಿರಿ. ಆ ಮಾತುಗಳನ್ನು ಕೇಳಿದುದರಿಂದಲೇ ಪರೀಕ್ಷಿತ ಮಹಾರಾಜನಿಗೆ ಈ ಎತ್ತು ಯಾರು ಈ ಹಸು ಯಾರು ಎಂಬುವುದು ಅರ್ಥವಾಯಿತು.

ಶ್ರೀಲ ಪ್ರಭುಪಾದರು ಧರ್ಮದ ಪರಿಶುದ್ಧ ಅಂಶಗಳನ್ನು ತಮ್ಮ ಗ್ರಂಥಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ದುರದೃಷ್ಟವಶಾತ್‌, ಆಧುನಿಕ ವಿದ್ವಾಂಸರು ಮತ್ತು ನಾಯಕರಿಗೆ ಸರಿಯಾದ ಗ್ರಹಿಕೆ ಇಲ್ಲ. ವರ್ಣಾಶ್ರಮ, ಧರ್ಮವನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಶಿಕ್ಷಿತರು ದೇವರಿಗೆ ಸಂಬಂಧಿಸಿದವುಗಳಿಂದ ದೂರವಿರಲು ಇಷ್ಟಪಡುತ್ತಾರೆ.

ಈ ಲೇಖನ ಶೇರ್ ಮಾಡಿ