ರಾಮಾಯಣವನ್ನು ನೆನಪಿಸುವ ರಾಮ, ಸೀತೆಯರ ಲೀಲಾವೈಭವವನ್ನು ಸಾರುವ ಹಲವಾರು ಕ್ಷೇತ್ರಗಳಲ್ಲಿ ಮುತ್ತತ್ತಿ ಕ್ಷೇತ್ರವೂ ಒಂದು. ಹನುಮಂತನು ಆರಾಧ್ಯದೈವವಾಗಿರುವ ಈ ಸುಂದರ ಕ್ಷೇತ್ರ, ಬೆಂಗಳೂರಿನಿಂದ ಸುಮಾರು 130 ಕಿ.ಮೀ. ದೂರದಲ್ಲಿ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿದೆ. ಒಂದು ದಿನದ ಪ್ರವಾಸಕ್ಕೆ ಇದೊಂದು ಸುಂದರ, ಸೂಕ್ತ ಸ್ಥಳ. ಬೆಂಗಳೂರಿನಿಂದ ಮೊದಲು ಕನಕಪುರಕ್ಕೆ ಹೋಗಿ ಅಲ್ಲಿಂದ ಸಾತನೂರಿನ ಮಾರ್ಗವಾಗಿ ಹೋದರೆ ಹಲಗೂರು ಎಂಬ ಹಳ್ಳಿ ಸಿಗುತ್ತದೆ. ಈ ಹಲಗೂರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿ ಮುತ್ತತ್ತಿ ಕ್ಷೇತ್ರವಿದೆ. ಬೆಂಗಳೂರಿನಿಂದ ಚೆನ್ನಪಟ್ಟಣಕ್ಕೆ ಹೋಗಿ ಅಲ್ಲಿಂದ ಹಲಗೂರಿಗೆ ಹೋಗಿಯೂ ಈ ಕ್ಷೇತ್ರ ತಲಪಬಹುದು. ಎಲ್ಲ ಕಡೆಯೂ ಬಸ್ ಸೌಲಭ್ಯವಿದೆ. ಆದರೆ ಮತ್ತೆ ಮತ್ತೆ ಬಸ್ ಬದಲಾಯಿಸುವುದರಿಂದಲೂ ತಡವಾಗುವುದರಿಂದಲೂ ಸ್ವಂತ ಇಲ್ಲವೇ ಖಾಸಗಿ ವಾಹನದಲ್ಲಿ ಹೋಗುವುದು ಹೆಚ್ಚು ಅನುಕೂಲಕರ.

ಕಾವೇರಿ ವನ್ಯಧಾಮ ಎಂಬ ಹಸಿರಾದ, ದಟ್ಟವಾದ, ಸುಂದರ ಕಾಡಿನ ಮಧ್ಯೆ ಮುತ್ತತ್ತಿ ಎಂಬ ಈ ಪುಟ್ಟ ಹಳ್ಳಿಯಿದೆ. ಇಲ್ಲಿ ಹರಿಯುವ ಕಾವೇರಿ ನದಿ, ದಟ್ಟವಾದ ಹಸಿರು ಕಾಡು, ಬೆಟ್ಟಗುಡ್ಡಗಳು, ಇವೆಲ್ಲವೂ ಇಲ್ಲಿನ ಪ್ರಕೃತಿಯನ್ನು ಬಹಳ ರಮಣೀಯವಾಗಿಸಿವೆ. ಮುತ್ತತ್ತಿಗೆ ಐದು ಕಿ.ಮೀ. ಮೊದಲು ಭೀಮೇಶ್ವರಿ ಎಂಬ ಜಲ, ವನ ವಿಹಾರ ಸ್ಥಳವೂ ಇದೆ. ಇಲ್ಲಿ ಜಂಗಲ್ ಲಾಡ್ಜ್‌ನವರು ಜಲ, ವನವಿಹಾರಗಳನ್ನು ನಡೆಸುತ್ತಾರೆ. ಇಂಥ ಸುಂದರ ಪ್ರಕೃತಿಯ ನಡುವೆ ಒಂದು ಪುಟ್ಟ ಮಣಿಯಂತಿದೆ ಈ ಮುತ್ತತ್ತಿ ಕ್ಷೇತ್ರ. ಇಲ್ಲಿ ಒಂದು ಪುಟ್ಟದಾದ ಆಂಜನೇಯನ ಗುಡಿಯಿದೆ. ಹೂಗಳಿಂದ ಅಲಂಕರಿಸಲಾದ, ಒಂದು ಕಡೆಗೆ ಮುಖ ತಿರುಗಿದ ಕಪ್ಪು ಶಿಲೆಯ ಆಂಜನೇಯನ ವಿಗ್ರಹ ನೋಡಲು ಬಹು ಸುಂದರ.

ಇಲ್ಲಿನ ಹನುಮಂತನಿಗೆ ಮುತ್ತೆತ್ತರಾಯ, ಅಥವಾ ಮುತ್ತತ್ತಿರಾಯ ಎಂದು ಹೆಸರು. ಈ ಹೆಸರು ಬರಲು ಕಾರಣವಾದ ಕಥೆಯೇ ಇಲ್ಲಿನ ಸ್ಥಳಪುರಾಣ. ಅದೇ ಈ ಸ್ಥಳಕ್ಕೆ ಮುತ್ತತ್ತಿ ಎಂಬ ಹೆಸರು ಬರಲೂ ಕಾರಣ. ಅದು ಹೀಗಿದೆ –
ಶ್ರೀರಾಮ, ಲಕ್ಷ್ಮಣರು ಲಂಕೆಗೆ ಹೋಗಿ ರಾವಣನನ್ನು ಕೊಂದು ಸೀತೆಯನ್ನು ಬಿಡಿಸಿಕೊಂಡು ಅವಳೊಂದಿಗೆ ಅಯೋಧ್ಯೆಗೆ ಹಿಂದಿರುಗುತ್ತಿದ್ದಾಗ ಈ ಮಾರ್ಗವಾಗಿ ಹೋದರಂತೆ. ಆಗ ಅವರಿಗೆ ಈ ಸುಂದರ ಸ್ಥಳದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಬೇಕೆನಿಸಿ ಇಲ್ಲಿ ಸ್ವಲ್ಪ ಕಾಲ ನಿಂತರು. ಇಡೀ ಕಪಿಸೇನೆಯೂ ವಿಶ್ರಮಿಸಿಕೊಳ್ಳತೊಡಗಿತು. ಸೀತೆಗಂತೂ ಈ ಸ್ಥಳ ಬಹಳ ಇಷ್ಟವಾಯಿತು. ಎಷ್ಟೋ ಕಾಲ ರಾವಣನ ಲಂಕೆಯಲ್ಲಿ ಬಂಧನದಲ್ಲಿದ್ದ ಅವಳು ಇಲ್ಲಿನ ರಮ್ಯ ಪ್ರಕೃತಿಯನ್ನು ನೋಡಿ ಮೈಮರೆತಳು. ಒಬ್ಬಳೇ ಕಾವೇರಿ ನದಿಯ ದಂಡೆಯ ಮೇಲೆ ಕುಳಿತು ನದಿಯ ಸೊಬಗನ್ನು ಆಸ್ವಾದಿಸುತ್ತಾ ಮೈಮರೆತಳು. ಅನಂತರ ತಂಪಾದ ಆಹ್ಲಾದಕರ ಹೊಳೆಯಲ್ಲಿ ಇಳಿದು ಸ್ನಾನ ಮಾಡಿದಳು. ಆಗ ಅವಳು ಧರಿಸಿದ್ದ ಮುತ್ತಿನ ಮೂಗುತಿಯು ಜಾರಿ ನೀರಲ್ಲಿ ಬಿದ್ದುಹೋಯಿತು. ಆದರೆ ಇದು ಅವಳಿಗೆ ತಿಳಿಯಲೇ ಇಲ್ಲ. ಸ್ವಲ್ಪ ಹೊತ್ತಿನ ಬಳಿಕ ಅವಳಿಗೆ ಮುತ್ತಿನ ಮೂಗುತಿ ಬಿದ್ದು ಹೋಗಿರುವುದು ಅರಿವಾಗಿ, ಅವಳು ಬಹಳ ದುಃಖಗೊಂಡು ಅಳತೊಡಗಿದಳು ಎಲ್ಲರೂ ವಿಶ್ರಾಂತಿಯಲ್ಲಿದ್ದು ಯುದ್ಧದ ಆಗುಹೋಗುಗಳ ವಿಷಯಗಳನ್ನು ಚರ್ಚಿಸುತ್ತಾ ಆನಂದವಾಗಿರಲು, ಎಲ್ಲಿಂದಲೋ ಸ್ತ್ರೀಯೋರ್ವಳ ಅಳುವಿನ ಶಬ್ದ ಹನುಮಂತನಿಗೆ ಕೇಳಿಸಿತು. ಯಾರು ಹೀಗೆ ಅಳುತ್ತಿರಬಹುದು ಎಂದು ಅಲ್ಲೆಲ್ಲಾ ನೋಡಿದಾಗ ಸೀತೆಯು ಕಾಣದಿರಲು, ಅವನು ಅಳುವಿನ ಶಬ್ದದ ದಿಕ್ಕನ್ನರಸಿ ಹೋಗಿ ಸೀತೆಯ ಬಳಿಗೆ ಬಂದನು. ಅಳುವಿನ ಕಾರಣವನ್ನು ಸೀತೆಯಿಂದ ತಿಳಿದುಕೊಂಡ ಅವನು, “ಇಷ್ಟೆಯೇ? ಇದೀಗ ಆ ಮೂಗುತಿಯನ್ನು ಹುಡುಕಿ ತರುತ್ತೇನೆ!” ಎಂದು ನದಿಯಲ್ಲಿ ತನ್ನ ಬಾಲವನ್ನು ಇಳಿಬಿಟ್ಟನು. ಆ ಬಾಲವನ್ನು ನೀಳವಾಗಿ ಬೆಳೆಸಿ ನದಿಯನ್ನೆಲ್ಲಾ ಶೋಧಿಸಿ, ಕೊನೆಗೂ ಮುಳುಗಿದ್ದ ಆ ಮುತ್ತಿನ ಮೂಗುತಿಯನ್ನು ಮೇಲೆತ್ತಿ ಸೀತೆಗೆ ಕೊಟ್ಟನು. ಆಗ ಸೀತೆಯು ಬಹಳ ಸಂತೋಷಗೊಂಡು ಹನುಮಂತನನ್ನು `ಮುತ್ತೆತ್ತರಾಯ’ ಎಂದು ಹರಸಿದಳು. ಅಂದಿನಿಂದ ಹನುಮಂತನಿಗೆ ಮುತ್ತೆತ್ತರಾಯ ಎಂಬ ಹೆಸರಾಯಿತು. ಈ ಮುತ್ತೆತ್ತರಾಯನು ಇಲ್ಲಿ ನೆಲೆಸಿದ ಕಾರಣ, ಈ ಕ್ಷೇತ್ರಕ್ಕೆ ಮುತ್ತತ್ತಿ ಎಂಬ ಹೆಸರಾಯಿತು.







Leave a Reply