ಉರೈವೂರು ಕಮಲವಲ್ಲಿ ನಾಚಿಯಾರ್‌ ದೇವಸ್ಥಾನ

ದೇವೋತ್ತಮನನ್ನು ಪ್ರೀತಿಸಿದ ರಾಜಕುಮಾರಿ

ಆಂಗ್ಲಮೂಲ: ಸಂಪತ್‌ಕುಮಾರ ರಾಮಾನುಜ ದಾಸನ್‌ (ಅಶ್ವಿನ್‌ ಎಸ್‌.)

ಒಂದಾನೊಂದು ಕಾಲದಲ್ಲಿ ಬ್ರಹ್ಮ, ಶಿವ ಮತ್ತು ವಿಷ್ಣು – ಈ ಮೂವರಲ್ಲಿ ಯಾರು ಶ್ರೇಷ್ಠರು ಎಂಬ ಬಗೆಗೆ ಮುನಿಗಳಲ್ಲಿ ಚರ್ಚೆ ನಡೆಯಿತು. ಆದರೆ ಅವರಿಗೆ ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಭೃಗು ಮಹರ್ಷಿಗಳನ್ನು ಕೇಳಲು ತೀರ್ಮಾನಿಸಿದರು. ತಮ್ಮ ಶಂಕೆಗೆ ಪರಿಹಾರ ಕಂಡು ಹಿಡಿಯಲು ಅವರೇ ಸೂಕ್ತರಾದವರೆಂದು ಈ ಋಷಿಗಳು ಭಾವಿಸಿದರು. ಅವರೆಲ್ಲರ ಅನುಮಾನಗಳು ನಿವಾರಣೆಯಾಗುವಂತಹ ಉತ್ತರವನ್ನು ತಾವು ನೀಡುವುದಾಗಿ ಭೃಗು ಮುನಿಗಳು ಹೇಳಿದರು. ಆದರೆ ಅದಕ್ಕೆ ಮುನ್ನ ಈ ತ್ರಿಮೂರ್ತಿಗಳನ್ನು ಪರೀಕ್ಷಿಸಬೇಕೆಂದರು.

ಭೃಗು ಮುನಿಗಳು ಮೊದಲು ಶಿವ ಮತ್ತು ಪಾರ್ವತಿ ವಾಸಿಸುವ ಕೈಲಾಸಕ್ಕೆ ಹೋದರು. ಆದರೆ ಕೈಲಾಸದಲ್ಲಿ ದ್ವಾರಪಾಲಕರು ಅವರನ್ನು ತಡೆದರು. ಶಿವ ಮತ್ತು ಪಾರ್ವತಿ ಏಕಾಂತದಲ್ಲಿರುವುದರಿಂದ ಯಾರೂ ಅವರಿಗೆ ತೊಂದರೆ ಕೊಡಬಾರದೆಂದು ದ್ವಾರಪಾಲಕರು ಹೇಳಿದರು. ಸುಲಭವಾಗಿ ಸಿಗಲಾರದ ಶಿವನು ಭಕ್ತರಿಗೆ ನೆರವಾಗುವ ಸೂಕ್ತ ವ್ಯಕ್ತಿಯಲ್ಲವೆಂದು ಭೃಗು ಮಹರ್ಷಿಗಳು ಭಾವಿಸಿ ಅವನು ಅತಿ ಶ್ರೇಷ್ಠನಾಗುವುದು ಸಾಧ್ಯವಿಲ್ಲ ಎಂದು ಯೋಚಿಸಿದರು.

ನಿರಾಶೆಯಿಂದ ಅವರು ಬ್ರಹ್ಮ ಮತ್ತು ಸರಸ್ವತಿ ವಾಸಿಸುವ ಸತ್ಯ ಲೋಕಕ್ಕೆ ಬಂದರು. ಆದರೆ ಬ್ರಹ್ಮ ಕೂಡ ಅವರನ್ನು ಭೇಟಿ ಮಾಡಲು ಸಿದ್ಧವಾಗಿರಲಿಲ್ಲ. ಬ್ರಹ್ಮ ಕೂಡ ಶ್ರೇಷ್ಠ ಅಲ್ಲವೆಂದು ಅವರು ತೀರ್ಮಾನಿಸಿದರು.

ಕೊನೆಗೆ, ಭೃಗು ಮಹರ್ಷಿಗಳು ಶ್ರೀಮನ್ನಾರಾಯಣ ಮತ್ತು ಶ್ರೀ ಲಕ್ಷ್ಮೀ ವಾಸಿಸುವ ವೈಕುಂಠಕ್ಕೆ ಬಂದರು. ಅವರು ವೈಕುಂಠವನ್ನು ಪ್ರವೇಶಿಸುತ್ತಲೇ ಅವರಿಗೆ ಅಲ್ಲಿ ಭವ್ಯ ಸ್ವಾಗತ ದೊರೆಯಿತು. ಭಗವಂತನನ್ನು ಸುಲಭವಾಗಿ ಕಾಣಲು ಸಾಧ್ಯವಿರುವ ಕಾರಣ ಶ್ರೀ ನಾರಾಯಣನೇ ಶ್ರೇಷ್ಠನೆಂದು ಅವರು ಭಾವಿಸಿದರು.

ಶ್ರೀಮನ್ನಾರಾಯಣನು ಮಹರ್ಷಿಗಳನ್ನು ಬರಮಾಡಿಕೊಂಡು ಅವರ ಪಾದ ಪೂಜೆ ಮಾಡಿದನು. ಆದರೆ ಭಗವಂತನನ್ನು ಪರೀಕ್ಷಿಸಲು ಬಂದಿದ್ದ ಭೃಗು ಮಹರ್ಷಿಗಳು, ತಮ್ಮ ಕಾಲಿನಿಂದ ಪ್ರಭುವಿನ ಎದೆಗೆ ಒದ್ದರು. ನಾರಾಯಣನು ಮುನಿಗಳ ಕ್ಷಮೆ ಯಾಚಿಸಿದನು. ತನ್ನ ಗಟ್ಟಿಯಾದ ಎದೆಯಿಂದ ಅವರ ಕಾಲಿಗೆ ಗಾಯವಾಯಿತೆ ಎಂದು ಆತಂಕದಿಂದ ಕೇಳಿದನು.

ತನ್ನ ಸ್ವಾಮಿಯು ಅಷ್ಟು ನಿಷ್ಠೆಯಿಂದ ಸ್ವಾಗತಿಸಿ ಪೂಜಿಸಿದರೂ ಮುನಿಗಳ ವರ್ತನೆಯಿಂದ ಕುಪಿತಗೊಂಡ ಲಕ್ಷ್ಮಿಯು ಅವರನ್ನು ಶಪಿಸಿದಳು. ಅವಳು ಎಷ್ಟು ಕೋಪೋದ್ರೇಕಗೊಂಡಳೆಂದರೆ ಎಲ್ಲ ಬ್ರಾಹ್ಮಣರೂ ದಾರಿದ್ರ್ಯದಲ್ಲಿ ಕೊಳೆಯಲಿ ಎಂದು ಶಪಿಸಿ, ಭೂಮಿಯಲ್ಲಿ ಅವತರಿಸಲು ಹೊರಟಳು. ದೇವೋತ್ತಮನು ಕೂಡ ಅವಳನ್ನು ಅನುಸರಿಸಲು ನಿರ್ಧರಿಸಿದನು.

ದೇವಿಯ ಜನ್ಮ

ಅದೇ ಸಮಯದಲ್ಲಿ, ಚೋಳ ನಾಡಿನ ಕುಂಭಕೋಣಂ ಅನ್ನು ಧರ್ಮ ವರ್ಮನ್‌ ಎಂಬ ರಾಜನು ಆಳುತ್ತಿದ್ದನು. ಒಮ್ಮೆ ರಾಜನು ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ, ಕೊಳದಲ್ಲಿನ ಕಮಲ ಪುಷ್ಪದ ಮೇಲೆ ಮಗುವೊಂದನ್ನು ಕಂಡನು. ಮಕ್ಕಳಿಲ್ಲದ ರಾಜನು ಆ ಮಗುವನ್ನು ದತ್ತುವಾಗಿ ಸ್ವೀಕರಿಸಲು ನಿರ್ಧರಿಸಿ ಅದಕ್ಕೆ ಕಮಲವಲ್ಲಿ ಎಂದು ನಾಮಕರಣ ಮಾಡಿದನು. ಆ ಮಗು ಸಾಕ್ಷಾತ್‌ ಶ್ರೀ ಲಕ್ಮಿಯೇ. ಮುಂದೆ ಅವಳು ಶ್ರೀರಂಗಕ್ಕೆ ಭೇಟಿ ನೀಡಿದಾಗ ಶ್ರೀ ರಂಗನಾಥನ ದರ್ಶನ ಮಾಡಿದಳು. ಆ ಕ್ಷಣವೇ ಅವಳು ಭಗವಾನ್‌ ರಂಗನಾಥನೇ ತನ್ನ ಪತಿ ಎಂದು ತೀರ್ಮಾನಿಸಿಬಿಟ್ಟಳು. ಅವಳ ಆಸೆಯನ್ನು ನೆರವೇರಿಸಲು ಭಗವಂತನು ಚೋಳ ರಾಜನ ಅರಮನೆಗೆ ಬಂದು ರಾಜಕುಮಾರಿ ಕಮಲವಲ್ಲಿಯನ್ನು ವರಿಸಿದನು. ಈ ದೈವೀ ವಿವಾಹವನ್ನು ಕೊಂಡಾಡಲು ರಾಜನು ಉರೈವೂರಿನಲ್ಲಿ ದೇವಸ್ಥಾನವನ್ನು ನಿರ್ಮಿಸಿದನು. ಇಲ್ಲಿ ಕಮಲವಲ್ಲಿ ದೇವಿಯನ್ನು ಮದುವೆಗೆ ಸಿದ್ಧವಾದ, ಕುಳಿತಿರುವ ಭಂಗಿಯಲ್ಲಿ ನೋಡಬಹುದಾಗಿದೆ. ವಿವಾಹ ಉಡುಗೆಯಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದ ಶ್ರೀ ರಂಗನಾಥನನ್ನು ಇಲ್ಲಿ ಅಳಗಿಯ ಮನವಾಲನ್‌ ಎಂದು ಕರೆಯಲಾಗುತ್ತದೆ. ಅಂದರೆ `ಸುಂದರ ಮದುಮಗ.’

ಉತ್ಸವಗಳು

ಪ್ರತಿ ವರ್ಷ ಪಂಕುನಿ (ಫಾಲ್ಗುಣ) ಮಾಸದಲ್ಲಿ, ಉರೈವೂರು ಮಂದಿರದಲ್ಲಿ ಅತ್ಯಂತ ಮಹತ್ತ್ವದ ಉತ್ಸವ ನಡೆಯುತ್ತದೆ. ಶ್ರೀ ರಂಗನಾಥನು ತನ್ನೆಲ್ಲ ವೈಭವಗಳೊಂದಿಗೆ ಶ್ರೀರಂಗಂ ಮಂದಿರದಿಂದ ತೆರಳುವನು. ಕಾವೇರಿ ನದಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ, 6 ಕಿ.ಮೀ. ಯಾತ್ರೆಗೆಂದು ಅವನು ಬೆಳಗ್ಗೆ 4 ಗಂಟೆಗೆ ಅಲ್ಲಿಂದ ಚಿನ್ನದ ಪಲ್ಲಕ್ಕಿಯಲ್ಲಿ ಹೊರಡುವನು. ಉರೈವೂರಿನಲ್ಲಿ ಕಲ್ಯಾಣ ಉತ್ಸವಕ್ಕಾಗಿ ತನ್ನ ಪ್ರೀತಿಯ ಕಮಲವಲ್ಲಿ ನಾಚಿಯಾರ್‌ ಅನ್ನು ಅವನು ಭೇಟಿ ಮಾಡುವನು. ಈ ಶುಭದಿನದಂದು, ಶ್ರೀ ರಂಗನಾಥ ಮತ್ತು ಕಮಲವಲ್ಲಿ ನಾಚಿಯಾರ್‌ ಅವರ ವಿವಾಹ ವಿಧಿಗಳನ್ನು ಉರೈವೂರು ಮಂದಿರದಲ್ಲಿ ನೋಡಬಹುದು. ಕಮಲವಲ್ಲಿ ಜೊತೆ ಸ್ವಲ್ಪ ಸಮಯವಿದ್ದು ಭಗವಂತನು ಶ್ರೀರಂಗಕ್ಕೆ ಹಿಂದಿರುಗುವನು.

ಈ ದೇವಸ್ಥಾನದಲ್ಲಿ ಡೋಲೋತ್ಸವ, ವಸಂತೋತ್ಸವ ಮತ್ತು ನವರಾತ್ರಿ ಉತ್ಸವಗಳನ್ನೂ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.

ಈ ಮಂದಿರದ ವಿಶೇಷವೆಂದರೆ ದೇವಿಯು ಉತ್ತರ ಮುಖ ಮಾಡಿರುವ ಏಕೈಕ ದಿವ್ಯ ದೇಶಂ ಇದು. ಇಲ್ಲಿ ದೇವಿಯು ಶ್ರೀರಂಗಂನತ್ತ ಮುಖ ಮಾಡಿದ್ದಾಳೆ.

ತಿರುಪ್ಪಣಿ ಆಳ್ವಾರ್‌

ಉರೈವೂರು ಶ್ರೇಷ್ಠ ಸಂತ ತಿರುಪ್ಪಣಿ ಆಳ್ವಾರ್‌ ಅವರ ಜನ್ಮ ಸ್ಥಳ. ವೀಣೆ ನುಡಿಸುವುದರಲ್ಲಿ ಪ್ರವೀಣರಾಗಿದ್ದ ಅವರು ಶ್ರೀ ರಂಗನಾಥನನ್ನು ಕೊಂಡಾಡುವ ಹಾಡುಗಳನ್ನು ಹಾಡುತ್ತಿದ್ದರು. ಆದರೆ ಕೆಳ ಜಾತಿಯಲ್ಲಿ ಜನಿಸಿದ್ದ ಅವರು ಶ್ರೀರಂಗಂಗೆ ಹೋಗುವ ಬದಲಾಗಿ ಕಾವೇರಿ ನದಿಯ ದಡದಲ್ಲಿ ಕುಳಿತು ಶ್ರೀರಂಗಂ ಗುಡಿಯ ಕಡೆ ನೋಡುತ್ತಾ ಹಾಡುತ್ತಿದ್ದರು.

ಅವರಿಂದ ಸಂಪ್ರೀತನಾದ ಶ್ರೀ ರಂಗನಾಥನು ಅವರ ಭಕ್ತಿಯನ್ನು ಜಗತ್ತಿಗೇ ತೋರಲು ಒಂದು ಲೀಲೆಯನ್ನು ಪ್ರದರ್ಶಿಸಿದ.

ಎಂದಿನಂತೆ, ಒಂದು ದಿನ ಬೆಳಗ್ಗೆ ಆಳ್ವಾರರು ಕಾವೇರಿ ತೀರದಲ್ಲಿ ಹಾಡುತ್ತಿದ್ದರು. ಶ್ರೀರಂಗಂ ಮಂದಿರದ ಪೂಜಾರಿ ಸಾರಂಗ ಮುನಿಗಳು ಶ್ರೀ ರಂಗನಾಥನಿಗಾಗಿ ನೀರು ಒಯ್ಯಲು ಅಲ್ಲಿಗೆ ಬಂದರು. ಭಕ್ತಿ ಪರವಶತೆಯಲ್ಲಿದ್ದ ಆಳ್ವಾರರಿಗೆ ಸಾರಂಗ ಮುನಿಗಳು ಬಂದದ್ದು ತಿಳಿಯಲಿಲ್ಲ. ಕೆಳ ಜಾತಿಯವರಾದ ಅವರನ್ನು ದೂರ ಸರಿಯುವಂತೆ ಮುನಿಗಳು ಹೇಳಿದರೂ ಆಳ್ವಾರರು ತಮ್ಮ ಭಕ್ತಿಯಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ ಅದು ಅವರ ಮನ ಹೊಕ್ಕಲೇ ಇಲ್ಲ. ಆಗ ಸಾರಂಗ ಮುನಿಗಳು ಸಣ್ಣ ಕಲ್ಲೊಂದನ್ನು ಆಳ್ವಾರರತ್ತ ಎಸೆದಾಗ ಅವರಿಗೆ ಎಚ್ಚರವಾಯಿತು. ಅವರು ತತ್‌ಕ್ಷಣ ದೂರ ಸರಿದರು. ಭಗವಂತನ ಸೇವೆಗೆ ವಿಳಂಬ ಮಾಡಿದ ಅಪರಾಧ ಪ್ರಜ್ಞೆ ಅವರನ್ನು ಕಾಡಿತು.

ಪೂಜಾರಿಯು ಮಂದಿರಕ್ಕೆ ಹೋದಾಗ ಅವರಿಗೆ ಅಲ್ಲಿ ಆಶ್ಚರ್ಯ ಕಾದಿತ್ತು. ಭಗವಂತನ ಮೂರ್ತಿಯಿಂದ ರಕ್ತ ಸುರಿಯುತ್ತಿತ್ತು. ಅವರು ತಿರುಪ್ಪಣಿ ಆಳ್ವಾರರಿಗೆ ಕಲ್ಲಿನಿಂದ ತಲೆಗೆ ಎಲ್ಲಿ ಹೊಡೆದು ಗಾಯಗೊಳಿಸಿದ್ದರೋ ಅದೇ ಸ್ಥಳದಿಂದ ಭಗವಂತ ರಕ್ತ ಹರಿಸುತ್ತಿದ್ದ! ಭಯಭೀತರಾದ ಸಾರಂಗರು ಭಗವಂತನಲ್ಲಿ ಇದಕ್ಕೆ ಕಾರಣವೇನೆಂದು ಕೋರಿದರು. ಅವರು ಯಾರಿಗೆ ಕಲ್ಲು ಹೊಡೆದರೋ ಅವನು ತನ್ನ ಭಕ್ತನೆಂದು ನುಡಿದ ಭಗವಂತನು, ಅವನು ಹಾಡುವಾಗ ತಾನು ಅವನಲ್ಲಿಯೇ ಇದ್ದುದಾಗಿ ಹೇಳಿದನು. ಆದುದರಿಂದ ಪೂಜಾರಿಯು ಆಳ್ವಾರರಿಗೆ ಕಲ್ಲಿನಿಂದ ಹೊಡೆದಾಗ ತನಗೂ ಗಾಯವಾಯಿತೆಂದು ಪ್ರಭು ವಿವರಿಸಿದ. ಆಳ್ವಾರರನ್ನು ಭುಜದ ಮೇಲೆ ಕೂರಿಸಿಕೊಂಡು ತರುವಂತೆ ಭಗವಂತನು ಸಾರಂಗ ಮುನಿಗಳಿಗೆ ಆದೇಶಿಸಿದನು.

ಸಾರಂಗ ಮುನಿಗಳು ಹಿಂದಿರುಗಿ ಬಂದು ತಿರುಪ್ಪಣಿ ಆಳ್ವಾರರಿಗೆ ಎಲ್ಲವನ್ನೂ ವಿವರಿಸಿದರು. ಶ್ರೀ ರಂಗನಾಥನಿಗೆ ಖುದ್ದಾಗಿ ಪ್ರತಿ ದಿನ ಸೇವೆಗೈಯುವ ಮುನಿಗಳ ಭುಜದ ಮೇಲೇ ಕೂರಲು ಆಳ್ವಾರರು ಒಪ್ಪಲಿಲ್ಲ. ಆದರೆ ಇದು ಭಗವಂತನ ಆದೇಶವೆಂದು ಅವರು ಮನವರಿಕೆ ಮಾಡಿಕೊಟ್ಟ ಮೇಲೆ ಆಳ್ವಾರರು ಒಪ್ಪಿದರು.

ಆಳ್ವಾರರನ್ನು ಸಾರಂಗ ಮುನಿಗಳು ಭುಜದ ಮೇಲೆ ಕೂರಿಸಿಕೊಂಡು ಮಂದಿರಕ್ಕೆ ಬರುತ್ತಿದ್ದ ವಿಚಿತ್ರ ದೃಶ್ಯವನ್ನು ಕಂಡು ಎಲ್ಲರೂ ಚಕಿತರಾದರು. ಈ ಜನ್ಮದಲ್ಲಿ ತಮಗೆ ಭಗವಂತನ ದರ್ಶನವಾಗದೆಂದು ಭಾವಿಸಿದ್ದ ಆಳ್ವಾರರಿಗೆ ಅದೇ ಮೊದಲ ಬಾರಿಗೆ ತಮ್ಮ ಪ್ರೀತಿಯ ದೇವರನ್ನು ಕಂಡು ಪರಮಾನಂದವಾಯಿತು. ಅವರು ತಮ್ಮ ಕೈಗಳನ್ನು ಮೇಲಕ್ಕೆತ್ತಿ ಶ್ರೀ ರಂಗನಾಥನನ್ನು ಕೊಂಡಾಡುತ್ತ ಶ್ಲೋಕಗಳನ್ನು ಹಾಡಿದರು.

ಈ ಲೇಖನ ಶೇರ್ ಮಾಡಿ