ನಾಮ ಸಂಕೀರ್ತನೆ

ಆಂಗ್ಲ ಮೂಲ: ಬ್ಯಾಕ್‌ ಟು ಗಾಡ್‌ಹೆಡ್‌

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಅನೇಕ ಅಲೌಕಿಕ ಚಟುವಟಿಕೆಗಳಲ್ಲಿ ಅತ್ಯಂತ ಪ್ರಮುಖವಾದುದು ಸಂಕೀರ್ತನೆ ಕಾರ್ಯಕ್ರಮ. ಸಂಕೀರ್ತನೆಯು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ನಾಮ, ಕೀರ್ತಿ ಮತ್ತು ಲೀಲೆಗಳನ್ನು ಸಾಮೂಹಿಕವಾಗಿ ಜಪಿಸುವುದು. ಸಂಕೀರ್ತನೆಯ ಒಂದು ಭಾಗವಾಗಿ ಭಕ್ತರು ರಸ್ತೆಗಳಲ್ಲಿ ಜಪಿಸುತ್ತಾರೆ ಮತ್ತು ನರ್ತಿಸುತ್ತಾರೆ ಹಾಗೂ ಕೃಷ್ಣನನ್ನು ಕುರಿತ ಪುಸ್ತಕಗಳನ್ನು ಹಂಚುತ್ತಾರೆ. ಇವುಗಳೊಂದಿಗೆ ಶ್ರೀ ಕೃಷ್ಣ ಪ್ರಸಾದವನ್ನು ವಿತರಿಸುತ್ತಾರೆ. ಇವೆಲ್ಲವೂ ದೇವೋತ್ತಮ ಕೃಷ್ಣನನ್ನು ಕೊಂಡಾಡಲು.

ಸಂಕೀರ್ತನೆಯ ಪಿತೃವಾದ ಶ್ರೀ ಚೈತನ್ಯ ಮಹಾಪ್ರಭುಗಳು ಸ್ವತಃ ಕೃಷ್ಣನೇ ಆದರೂ ಕೃಷ್ಣ ಭಕ್ತನ ರೂಪದಲ್ಲಿ ಅವತರಿಸಿದರು. ಎಲ್ಲ ಜೀವಿಗಳ ಮೂಲವಾದ, ಶುದ್ಧ ದೈವೀ ಪ್ರಜ್ಞೆಯನ್ನು ಪುನರುಜ್ಜೀವಗೊಳಿಸಲು ಶ್ರೀ ಚೈತನ್ಯ ಮಹಾಪ್ರಭುಗಳು 500 ವರ್ಷಗಳ ಹಿಂದೆ ಆವಿರ್ಭವಿಸಿದರು ಈ ಪ್ರಜ್ಞೆಯನ್ನು ತಮ್ಮೊಳಗೇ ಪುನರುಜ್ಜೀವಗೊಳಿಸುವುದರಿಂದ ಮಾತ್ರವೇ ವ್ಯಕ್ತಿಯು ದೃಢ, ನಿಶ್ಚಲ ನೆಮ್ಮದಿ ಮತ್ತು ಸುಖವನ್ನು ಪಡೆಯಬಹುದು. ಇದು ಪ್ರತಿಯೊಬ್ಬರಿಗೂ ನಿಜವಾದ ಅಗತ್ಯವೆಂದು ಮನಗಂಡು ಸರ್ವಜ್ಞನಷ್ಟೇ ಅಲ್ಲ, ಸರ್ವವ್ಯಾಪಿಯೂ ಆಗಿರುವ ಮತ್ತು ಎಲ್ಲ ಜೀವಿಗಳ ಹೃದಯದಲ್ಲಿಯೂ ನೆಲೆಸಿರುವ ಶ್ರೀ ಕೃಷ್ಣನು ಶ್ರೀ ಚೈತನ್ಯರಾಗಿ ಅವತರಿಸಿದನು.

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

ಸಂಕೀರ್ತನೆ ಆಂದೋಲನವನ್ನು ಹರಡುವ ಮೂಲಕ ಶ್ರೀ ಚೈತನ್ಯರು ಕೃಷ್ಣ ಭಕ್ತರಾಗುವ ಮತ್ತು ಆ ರೀತಿಯಲ್ಲಿ ಪರಮಾನಂದ ಮತ್ತು ಜ್ಞಾನದ ಶಾಶ್ವತ ಬದುಕನ್ನು ಅಪೇಕ್ಷಿಸುವವರಿಗೆಲ್ಲ ಪರಿಪೂರ್ಣ ಉದಾಹರಣೆಯನ್ನು ನಿರೂಪಿಸಿದರು. ಚೈತನ್ಯ ಮಹಾಪ್ರಭು ಸ್ವಪ್ರತಿಷ್ಠೆ, ಅನೇಕ ಅನುಯಾಯಿಗಳು ಅಥವಾ ದೊಡ್ಡ ಕೀರ್ತಿಯನ್ನು ಪಡೆಯುವಲ್ಲಿ ಕಿಂಚಿತ್ತೂ ಆಸಕ್ತರಾಗಿರಲಿಲ್ಲ. ಆದರೆ ತಾವು ಹೋದ ಕಡೆಯಲ್ಲೆಲ್ಲ ಅವರು ಯಾವಾಗಲೂ ಕೃಷ್ಣನ ಪವಿತ್ರ ನಾಮವನ್ನು ಜಪಿಸುತ್ತಿದ್ದರು : ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ. ವಾಸ್ತವವಾಗಿ ಅವರು ಪರಮ ಪುರುಷನಾದರೂ ಅವರು ತಮ್ಮನ್ನು ವಿನಮ್ರ ಭಾವದಲ್ಲಿ ತೋರುತ್ತಿದ್ದರು. ಈ ರೀತಿಯಲ್ಲಿ ಅವರು ತಾವು ಭೇಟಿ ಮಾಡಿದವರೆಲ್ಲರ ಗೌರವವನ್ನು ಪಡೆದರು ಮತ್ತು ಸಂಕೀರ್ತನೆಯಲ್ಲಿ ತಮ್ಮ ಜೊತೆಗೂಡಬೇಕೆಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು.

ಈ ಕಲಿಯುಗದಲ್ಲಿ (ಜಗಳ ಕದನದ ಯುಗ) ಕೃಷ್ಣನ ಪವಿತ್ರ ನಾಮವು ಎಲ್ಲ ನಗರ, ಗ್ರಾಮ ಮತ್ತು ಪಟ್ಟಣಗಳಲ್ಲಿ ಕೇಳಿ ಬರುತ್ತದೆ ಎನ್ನುವ ಶ್ರೀ ಚೈತನ್ಯರ ಭವಿಷ್ಯವಾಣಿಯನ್ನು ಸಾಕಾರಗೊಳಿಸಲು ಇಂದಿನ ಇಸ್ಕಾನ್‌ ದುಡಿಯುತ್ತಿದೆ. ಅಂತಹ ಮಹತ್ತ್ವಪೂರ್ಣ ಧ್ಯೇಯವನ್ನು ಕಾರ್ಯಗತಗೊಳಿಸಲು ಶ್ರೀಲ ಪ್ರಭುಪಾದರು 70ರ ಇಳಿ ವಯಸ್ಸಿನಲ್ಲಿ ಭಾರತದಿಂದ ಅಮೆರಿಕಕ್ಕೆ ತೆರಳಿದರು ಮತ್ತು ಕೃಷ್ಣಪ್ರಜ್ಞೆ ಆಂದೋಲನವನ್ನು ಸ್ಥಾಪಿಸಿದರು. ಅವರ ಪ್ರಾಮಾಣಿಕತೆಯಿಂದ ಆಕರ್ಷಿತರಾದ ಕೆಲವು ಯುವಕರು ಅವರ ಜೊತೆಗೂಡುವವರೆಗೂ ಶ್ರೀಲ ಪ್ರಭುಪಾದರು ಸುಮಾರು ಒಂದು ವರ್ಷದ ಕಾಲ ಏಕಾಂಗಿಯಾಗಿ ಕಿಂಚಿತ್ತೂ ಉತ್ಸಾಹ ಕಳೆದುಕೊಳ್ಳದೆ ಸಂಕೀರ್ತನೆಯನ್ನು ನಡೆಸಿದರು. ಅಲ್ಲಿಂದಾಚೆಗೆ 7 ವರ್ಷಗಳಲ್ಲಿ 70ಕ್ಕೂ ಹೆಚ್ಚು ಕೃಷ್ಣ ಮಂದಿರಗಳು ಸ್ಥಾಪನೆಗೊಂಡವು. ಸಾವಿರಾರು ಭಕ್ತರು ಶ್ರೀ ಚೈತನ್ಯರ ಸಂಕೀರ್ತನೆಯಲ್ಲಿ ತೊಡಗಿಕೊಂಡರು.

ಅಷ್ಟು ಅಲ್ಪಾವಧಿಯಲ್ಲಿ ಅಷ್ಟೊಂದು ಆಸಕ್ತಿ ಮತ್ತು ಚಟುವಟಿಕೆಯನ್ನು ಕ್ರೋಡೀಕರಿಸುವುದು ಹೇಗೆ ಸಾಧ್ಯವಾಯಿತೆಂದು ಕೇಳಬಹುದು. ಇದು ಪರಮ ಪ್ರಭು ಶ್ರೀ ಕೃಷ್ಣನ ಯೋಜನೆ. ಅವನ ಅನುಮತಿ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದು. ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸುತ್ತಾನೆ, (4.7)

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್‌ ॥

“ಭರತ ವಂಶಜನಾದ ಅರ್ಜುನನೆ, ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ಸ್ವಯಂ ಅವತಾರ ಮಾಡುತ್ತೇನೆ.”

ಕೃಷ್ಣನ ಪವಿತ್ರ ನಾಮದ ಸಾಮೂಹಿಕ ಜಪ, ಸಂಕೀರ್ತನೆಯ ಈ ಯುಗಕ್ಕೆ ಆತ್ಮ ಸಾಕ್ಷಾತ್ಕಾರದ ನಿಜವಾದ ವಿಧಾನವನ್ನು ವಿತರಿಸಲು ಶ್ರೀಕೃಷ್ಣ ಶ್ರೀ ಚೈತನ್ಯ ಮಹಾಪ್ರಭುಗಳ ರೂಪದಲ್ಲಿ ಬರುತ್ತಾನೆ. ಆತ್ಮ ಸಾಕ್ಷಾತ್ಕಾರ ಮತ್ತು ಯೋಗವನ್ನು ಕುರಿತಂತೆ ಅನೇಕ ವಿಧಾನಗಳು ಇಂದು ಜನಪ್ರಿಯವಾಗಿವೆ. ಆದರೆ ಅತಿ ಕ್ಷಿಪ್ರವಾಗಿ ಮತ್ತು ಅತ್ಯಂತ ಪರಿಪೂರ್ಣ ಫಲವನ್ನು ಪಡೆಯಲು ನಾವು ದೇವೋತ್ತಮ ಶ್ರೀ ಕೃಷ್ಣನಿಂದಲೇ ನೇರವಾಗಿ ಮಾರ್ಗದರ್ಶನ ಪಡೆಯಬೇಕು.

ಕೃಷ್ಣನ ಸಾಹಿತ್ಯ ಅವತಾರವೆಂದು ಹೇಳಲಾಗುವ ಶ್ರೀ ವ್ಯಾಸ ದೇವ ಅವರು ವೈದಿಕ ಸಾಹಿತ್ಯಗಳಲ್ಲಿ ಶಿಖರಪ್ರಾಯವಾದ ಭಾಗವತದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವದ ಭವಿಷ್ಯ ನುಡಿಯುತ್ತಾರೆ. ಅವರು ಸಾರುತ್ತಾರೆ, (ಭಾಗವತ 11.5.32)

ಕೃಷ್ಣವರ್ಣಂ ತ್ವಿಷಾಕೃಷ್ಣಂ ಸಾಂಗೋಪಾಂಗಾಸ್ತ್ರಪಾರ್ಷದಮ್‌ ।
ಯಜ್ಞೈಃ ಸಂಕೀರ್ತನಪ್ರಾಯೈರ್ಯಜಂತಿ ಹಿ ಸುಮೇಧಸಃ ॥

“ಸತತವಾಗಿ ಕೃಷ್ಣನಾಮವನ್ನು ಹಾಡುತ್ತ ಭಗವದವತಾರವನ್ನು ಪೂಜಿಸಲು ಕಲಿಯುಗದಲ್ಲಿ ಮೇಧಾವಿಗಳು ಸಾಮೂಹಿಕ ಸಂಕೀರ್ತನೆ ನಡೆಸುತ್ತಾರೆ. ಭಗವಂತನ ವರ್ಣವು ಕಪ್ಪೇನಲ್ಲ. ಆದರೆ ಅವನು ತಾನೇ ಕೃಷ್ಣ. ಅವನು ತನ್ನ ಸಹಯೋಗಿಗಳು, ದಾಸರು, ಆಯುಧಗಳು ಮತ್ತು ಅಂತರಂಗದ ಸಂಗಾತಿಗಳು ಹೀಗೆ ಇತರರ ಜೊತೆಗೂಡಿರುತ್ತಾನೆ.”

ಭೌತಿಕ ಜೀವನದ ಆತಂಕ ಮತ್ತು ಹತಾಶೆಗಳಿಂದ ಮುಕ್ತಿಯನ್ನು ಬಯಸುವ ಯಾರೇ ಆಗಲಿ ಹರೇಕೃಷ್ಣ ಮಂತ್ರದ ಜಪವನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು ಮತ್ತು ಹೀಗೆ ಬದುಕಿನ ಗುರಿಯನ್ನು ಸಾಧಿಸಬಹುದು. ಮಾನವ ಜನ್ಮವು ಕೇವಲ ಪ್ರಾಣಿಗಳಂತೆ ತಿನ್ನುವುದು, ಮಲಗುವುದು, ಕೂಡುವುದು ಮತ್ತು ರಕ್ಷಿಸಿಕೊಳ್ಳುವುದಕ್ಕೆ ಇಲ್ಲ. ಅದು ಇರುವುದು ಆತ್ಮಸಾಕ್ಷಾತ್ಕಾರಕ್ಕಾಗಿ. ವೇದಾಂತ ಸೂತ್ರ ಹೇಳುತ್ತದೆ ಅಥಾತೋ ಬ್ರಹ್ಮ ಜಿಜ್ಞಾಸ. ಮಾನವ ಜನ್ಮ ಇರುವುದು ಪರಮ ಸತ್ಯನನ್ನು ತಿಳಿಯುವುದಕ್ಕೆ ಮತ್ತು ಆ ಪರಮ ಸತ್ಯ ಯಾವುದು?

ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ,

ಮತ್ತಃ ಪರತರಂ ನಾನ್ಯತ್‌ ಕಿಞ್ಚಿದಸ್ತಿ ಧನಞ್ಜಯ ।
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ॥

“ಧನಂಜಯ, ನನಗಿಂತ ಶ್ರೇಷ್ಠವಾದ ಸತ್ಯವಿಲ್ಲ. ಮಣಿಗಳನ್ನು ದಾರದಲ್ಲಿ ಪೋಣಿಸಿದ ಹಾಗೆ ಎಲ್ಲವೂ ನನ್ನನ್ನೇ ಅವಲಂಬಿಸಿದೆ.”

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।
ಇತಿ ಮತ್ವಾ ಭಜನ್ತೇ ಮಾಂ ಬುಧಾ ಭಾವಸಮನ್ವಿತಾಃ ॥

“ಎಲ್ಲ ಆಧ್ಯಾತ್ಮಿಕ ಮತ್ತು ಭೌತಿಕ ಜಗತ್ತುಗಳ ಮೂಲವು ನಾನೇ. ಎಲ್ಲವೂ ನನ್ನಿಂದ ಹೊರಸೂಸುತ್ತದೆ. ಇದನ್ನು ಸಂಪೂರ್ಣವಾಗಿ ತಿಳಿದ ಪ್ರಾಜ್ಞರು ನನ್ನ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ ಮತ್ತು ಹೃದಯತುಂಬಿ ನನ್ನನ್ನು ಪೂಜಿಸುತ್ತಾರೆ.”

ಹೀಗೆ ಪರಿಪೂರ್ಣ ಆಕರನಾದ ಕೃಷ್ಣನಿಂದ ಪರಿಪೂರ್ಣ ಮಾಹಿತಿಯನ್ನು ತೆಗೆದುಕೊಂಡರೆ ನಮಗೆ ಪರಿಪೂರ್ಣ ಫಲ – ಕೃಷ್ಣನ ಭಕ್ತಿಸೇವೆ – ಸಿಗುತ್ತದೆ. ಕೃಷ್ಣನು ಸರ್ವಶಕ್ತನಾಗಿರುವುದರಿಂದ ಅವನು ತನ್ನ ಹೆಸರು, ಗುಣಗಳು, ರೂಪ, ಲೀಲೆಗಳು ಮತ್ತು ಪರಿಕರವಾಗಿ ಉಪಸ್ಥಿತನಿದ್ದಾನೆ. ಆದ್ದರಿಂದ ಸುಮ್ಮನೆ ಕೃಷ್ಣನ ಹೆಸರನ್ನು ಜಪಿಸಿ ಕೇಳುವುದರಿಂದ ನಾವು ನೇರವಾಗಿ ಕೃಷ್ಣನೊಡನೆ ಸಹವಾಸ ಮಾಡಬಹುದು. ಹೀಗೆ ನಾವು ಭೌತಿಕ ಶಕ್ತಿಯ ಪ್ರಭಾವದಿಂದ ಮುಕ್ತರಾಗಿ ಕೃಷ್ಣನ ಆಧ್ಯಾತ್ಮಿಕ ಶಕ್ತಿಯ ಪ್ರಭಾವದೊಳಗೆ ಬರುತ್ತೇವೆ. ಇದುವೇ ಜೀವನದ ಪರಿಪೂರ್ಣತೆ.

ಈ ಲೇಖನ ಶೇರ್ ಮಾಡಿ