ನಮ್ಮಾಳ್ವಾರ್‌

ಮಹಾನ್‌ ಸಂತ ಶ್ರೀ ನಮ್ಮಾಳ್ವಾರ್‌  ಭೂಲೋಕದಲ್ಲಿ ಭವ್ಯ ಬದುಕನ್ನು ಬಾಳಿದ ಮೇಲೆ ಆಧ್ಯಾತ್ಮಿಕ ಲೋಕಕ್ಕೆ (ವೈಕುಂಠ) ಹಿಂದಿರುಗಿದ ದಿನವನ್ನು ವೈಕುಂಠ ಏಕಾದಶೀ ಎಂದು ಆಚರಿಸಲಾಗುತ್ತಿದೆ.  ತನ್ನ ಪ್ರೀತಿಯ ಭಕ್ತನು ವೈಕುಂಠಕ್ಕೆ ಹಿಂದಿರುಗುತ್ತಿರುವುದರಿಂದ ಶ್ರೀ ವಿಷ್ಣುವು ಎಷ್ಟು ಪ್ರಸನ್ನನಾದನೆಂದರೆ ಅವನು ಸ್ವತಃ  ಅವರನ್ನು ವೈಕುಂಠದ ಉತ್ತರದ ದ್ವಾರದಲ್ಲಿ ಬರಮಾಡಿಕೊಂಡನು. ಆದುದರಿಂದ ಇದರ ಸ್ಮರಣಾರ್ಥ ಎಲ್ಲ ವಿಷ್ಣು ದೇವಾಲಯಗಳಲ್ಲಿ ಈ ದಿನ ಉತ್ತರದ ದ್ವಾರವನ್ನು ತೆರೆಯಲಾಗುವುದು. 

ಶ್ರೀ ವೈಷ್ಣವ  ಸಂಪ್ರದಾಯದ 12 ಆಳ್ವಾರ್‌ಗಳಲ್ಲಿ ನಮ್ಮಾಳ್ವಾರ್‌ ಐದನೆಯವರು.  ಅವರು ಕರಿಯಾರ್‌ – ಉದಿಯ ನಂಗಿಯಾರ್‌ ದಂಪತಿ ಮಗನಾಗಿ ಆವಿರ್ಭವಿಸಿದರು.‌ ಅದು ಕಲಿಯುಗದ ಆರಂಭದ ವರ್ಷ‌, ಪ್ರಮಾತಿನಾಮ ಸಂವತ್ಸರ.  ಶ್ರೀಕೃಷ್ಣನು ಈ ಲೋಕದಿಂದ ನಿರ್ಗಮಿಸಿದ ಕೇವಲ 43 ದಿನಗಳ ಅನಂತರ ನಮ್ಮಾಳ್ವಾರ್‌ ಈ ಲೋಕವನ್ನು ಪ್ರವೇಶಿಸಿದರು. ಆಂಗ್ಲ ಲೆಕ್ಕಾಚಾರದ ಪ್ರಕಾರ, ಅವರು ಕ್ರಿಸ್ತ ಪೂರ್ವ‌ 3102ರಲ್ಲಿ ಜನಿಸಿದರು.

ಈಗಿನ ಆಳ್ವಾರ್‌ ತಿರುನಗರಿಯಲ್ಲಿ ಅವತರಿಸಿದ ನಮ್ಮಾಳ್ವಾರ್‌  ಅವರ ಹುಟ್ಟು ಮತ್ತು ಆರಂಭದ ದಿನಗಳು ಕುತೂಹಲಕಾರಿಯಾಗಿವೆ. ಅವರು ಜನಿಸಿದಾಗ ಕರಿಯಾರ್‌ ದಂಪತಿ ಆನಂದತುಂದಿಲರಾದರು. ದಿವ್ಯಪ್ರಭೆಯ ಮಗುವನ್ನು ನೋಡಿ ಸಂತಸಪಟ್ಟರು. ಆದರೆ ಅತಿ ಶೀಘ್ರದಲ್ಲಿ ಅವರ ಸಂತೋಷವು ಹತಾಶೆಯಾಯಿತು! ಮಗುವಿಗೇನಾಯಿತು? ಮಗುವು ತನ್ನ ದೇಹದಲ್ಲಿ ಚಲನೆ ತೋರಲಿಲ್ಲ,  ಮುದ್ದಿಸಿದಾಗ ಏನೂ ಪ್ರತಿಕ್ರಿಯೆ ಮಾಡಲಿಲ್ಲ, ಅಳಲಿಲ್ಲ ಮತ್ತು ಇಹಲೋಕವನ್ನು ನೋಡಲು ಕಣ್ಣನ್ನೂ ತೆರೆಯಲಿಲ್ಲ.

ಕರಿಯಾರ್‌ ದಂಪತಿ ನಿರಾಶೆಯ ಮಧ್ಯೆ ಮಗುವಿನ ಪೋಷಣೆ ಮಾಡಿದರು. ತಮ್ಮ ಮಗನು ಸಾಮಾನ್ಯ ಮಗುವಿನಂತೆ ಆಗುವನೆಂಬ ಆಸೆ ಹೊತ್ತರು. ಸಂಪ್ರದಾಯದಂತೆ 12ನೆಯ ದಿನ ಮಗುವಿಗೆ ಮಂಗಳ ಸ್ನಾನ ಮಾಡುವುದು ಪದ್ಧತಿ. ಅಂತೆಯೇ ನಮ್ಮಾಳ್ವಾರ್‌ ಅವರ ಪೋಷಕರು ಅವರಿಗೆ ಅಭ್ಯಂಜನ ಮಾಡಿದರು, ಹೊಸ ಉಡುಗೆ ತೊಡಿಸಿದರು ಮತ್ತು ಮಾರನ್‌ ಎಂದು ನಾಮಕರಣ ಮಾಡಿದರು.

ಆದರೆ ಮಗು ಮಾರನ್‌ ನಲ್ಲಿ ಬದಲಾವಣೆ ಕಾಣಲಿಲ್ಲ. ಅದು ಹಾಗೆಯೇ ಸ್ಥಿರವಾಗಿ ಮಲಗಿರುತ್ತಿತ್ತು. ಕರಿಯಾರ್‌ ದಂಪತಿಗೆ ದಿಕ್ಕೇ ತೋಚಲಿಲ್ಲ. ಹತಾಶರಾದ ಅವರು ಮಗುವನ್ನು ವಿಷ್ಣುವಿಗೆ ಸಮರ್ಪಿಸಲು ನಿರ್ಧರಿಸಿದರು.‌ ಅಂದರೆ ಸಮೀಪದ ಕುರುಗೂರು ವಿಷ್ಣು ದೇವಾಲಯದ ಬಳಿ ಇದ್ದ ಹುಣಸೇ ಮರದ ಕೆಳಗೆ ಮಗುವನ್ನು ಮಲಗಿಸಿ, ದೈವದ ಕೃಪೆಗೆ ಒಪ್ಪಿಸಿ ಭಾರಹೃದಯದಿಂದ ಹಿಂದಿರುಗಿದರು. ಈ ಹುಣಸೇ ಮರವು ತಾಮ್ರಪರ್ಣೀ ನದಿಯ ತಟದಲ್ಲಿದ್ದು, ಅದು ಅನಂತಶಯನ ಅವತಾರವೆಂದು ಪ್ರತೀತಿ ಉಂಟು.

ಇತ್ತ ನಮ್ಮಾಳ್ವಾರ್‌ ನಿಧಾನವಾಗಿ ತೆವಳುತ್ತ ಮರದ ಪೊಟರೆಯೊಳಗೆ ಸೇರಿಕೊಂಡರು! ಇಲ್ಲಿ ಅವರು ನಿರಂತರವಾಗಿ ಭಗವಂತನ ಧ್ಯಾನದಲ್ಲಿ ನಿರತರಾದರು.  ಅವರು ಏನನ್ನೂ ತಿನ್ನಲಿಲ್ಲ, ಕುಡಿಯಲಿಲ್ಲ ಅಥವಾ ಸುತಮುತ್ತ ಚಲಿಸಲಿಲ್ಲ. ಆದರೂ ಅವರು  ಪೊಟರೆಯೊಳಗೇ ಬೆಳೆದರು.

ಅವರ ಮನಸ್ಸಿನಲ್ಲಿ ಸದಾ ಭಗವಂತ ಇರುತ್ತಿದ್ದರಿಂದ ಅವರು ಆ ಪೊಟರೆಯೊಳಗೆ ಇದ್ದುಕೊಂಡೇ  ಸೃಷ್ಟಿಕರ್ತನ ಕೃಪೆಗೆ ಪಾತ್ರರಾದರು ಮತ್ತು ಭಗವಂತನ ಲೀಲೆಗಳನ್ನು  ಕಾಣುತ್ತಿದ್ದರು. ಹೀಗೆ ಎಷ್ಟು ವರ್ಷಗಳಾದವು, ಗೊತ್ತೇ? ಬರೋಬ್ಬರಿ 16 ವರ್ಷಗಳು! ಈ ಅದ್ಭುತ ಮಗು ಹೀಗೆ ಯೌವನಕ್ಕೆ ಕಾಲಿಟ್ಟಿತು.

ಶಿಷ್ಯನಿಗೆ ಕಂಡಿತು ಬೆಳಕು

ನಮ್ಮಾಳ್ವಾರ್‌ ಅವರ ಮಹಿಮೆ ವಿಶ್ವಕ್ಕೆ  ಹೇಗೆ ತಿಳಿಯಿತು? ಅದು ಅವರ ಶಿಷ್ಯ ಮಧುರಕವಿ ಆಳ್ವಾರ್‌ ಅವರಿಂದ ಲೋಕಪ್ರಿಯವಾಯಿತು. ಮಧುರಕವಿ ಆಳ್ವಾರ್‌ ಬ್ರಾಹ್ಮಣ ಸಮದಾಯಕ್ಕೆ ಸೇರಿದವರು. ಅವರ ಕುಟುಂಬವು ವೇದಪಾರಾಯಣದಲ್ಲಿ ತೊಡಗಿರುತ್ತಿತ್ತು. ವೇದಗಳು, ಉಪನಿಷತ್ತುಗಳು ಮತ್ತಿತರ ಗ್ರಂಥಗಳ ಅಧ್ಯಯನದ ಅನಂತರ ಮಧುರಕವಿ ಆಳ್ವಾರ್‌ ತೀರ್ಥಯಾತ್ರೆ ಕೈಗೊಂಡರು.

ಅಯೋಧ್ಯೆ, ಕಾಶೀ, ಮಥುರಾ, ಕಂಚಿ, ದ್ವಾರಕಾ ಮತ್ತಿತರ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ ಮೇಲೆ ಅವರು ಬದರೀನಾಥಕ್ಕೆ ಬಂದರು. ಒಂದು ರಾತ್ರಿ ಬದರಿಯಿಂದ ವಾಪಸಾಗುವಾಗ ಅವರು ವಿಚಿತ್ರವಾದ ಬೆಳಕನ್ನು ಕಂಡರು. ಅದು ದಕ್ಷಿಣದ ಭಾಗದಿಂದ ಬರುತ್ತಿತ್ತು.

ಅದು ಸೋಜಿಗವಾಗಿ ಕಂಡರೂ ಅವರು ಸಾಮಾನ್ಯ ವಿಷಯ ಎನ್ನುವಂತೆ ಸುಮ್ಮನಾದರು. ಆದರೆ ಮಧುರಕವಿ ಆಳ್ವಾರರು ಈ ದೀಪದ ಕಾಂತಿಯನ್ನು ಪದೇ ಪದೇ ರಾತ್ರಿಯ ವೇಳೆ ಕಂಡರು. ಅದೇನು ಎಂದು ಪತ್ತೆ ಮಾಡಲು ಅವರು ಬೆಳಕು ಬರುತ್ತಿದ್ದ ದಿಕ್ಕನ್ನೇ ಅನುಸರಿಸಿದರು. ವಿಂಧ್ಯಾವನ್ನೂ ದಾಟಿ ಕುರುಗೂರು ತಲಪಿದರು.

ಮಧುರಕವಿ ಆಳ್ವಾರ್‌ ಕುತೂಹಲ ಮತ್ತು ಭಕ್ತಿಭಾವದಿಂದ ಎಲ್ಲ ಕಡೆ ವಿಚಾರಿಸಿದರು. ವಿಶೇಷ ಬೆಳಕು ಎಲ್ಲಿಂದ ಬರುತ್ತಿದೆ ಎನ್ನುವುದನ್ನು ತಿಳಿಯುವುದು ಅವರ ಉದ್ದೇಶವಾಗಿತ್ತು. ಊರಿನ ಜನರು  ಮರದ ಒಳಗಿದ್ದ ನಮ್ಮಾಳ್ವಾರ್‌ ಅವರ ಬಗೆಗೆ ತಿಳಿಸಿದರು. ಮಧುರಕವಿ ಆಳ್ವಾರ್  ಕೂಡಲೇ ಹುಣಸೇಮರದ ಬಳಿಗೆ ಹೋದರು.

ಪ್ರಶಾಂತ ಮತ್ತು ಮನಮೋಹಕ ಮುಖದ ನಮ್ಮಾಳ್ವಾರ್‌  ಪದ್ಮಾಸನದಲ್ಲಿ  ಕುಳಿತು ಧ್ಯಾನಮಗ್ನರಾಗಿದ್ದರು. ತಾವು ಅನುಸರಿಸಿ ಬಂದ ಬೆಳಕು ನಮ್ಮಾಳ್ವಾರ್‌ ಅವರಿಂದಲೇ ಬರುತ್ತಿದ್ದುದನ್ನೂ ಅವರು ಕಂಡರು. ಮಧುರಕವಿ ಆಳ್ವಾರ್‌ ಪ್ರಶ್ನೆಗಳ ಮಳೆಯನ್ನೇ ಸುರಿಸಿದರೂ ನಮ್ಮಾಳ್ವಾರ್‌ ಏನೂ ಪ್ರತಿಕ್ರಿಯಿಸಲಿಲ್ಲ.

ನಮ್ಮಾಳ್ವಾರ್‌ ಶಿಷ್ಯರಾದರು ಮಧುರಕವಿ

ಐಹಿಕ ವಿಷಯಗಳನ್ನು ಕುರಿತ ಪ್ರಶ್ನೆಗಳಗೆ ನಮ್ಮಾಳ್ವಾರ್‌ ಉತ್ತರಿಸಲಿಲ್ಲ. ಆಗ ಮಧುರಕವಿ ಆಳ್ವಾರ್‌ ಒಂದು ತಾತ್ತ್ವಿಕ ಪ್ರಶ್ನೆಯನ್ನು ಕೇಳಿದರು. ಅದು ತಮಿಳಿನಲ್ಲಿ ಕೇಳಿದ ಪ್ರಶ್ನೆಯಾಗಿತ್ತು.  “ಶೆತ್ತತ್ತಿನ್‌ ವಯತ್ತಿಲೆ ಪೆರಿಯದು ಪಿರಂದಾಲ್‌ ವಿತ್ತೈತಿನ್ರುಂ ಎಂಗೇ ಕಿಡಿಕ್ಕುಂ?”  ಅಂದರೆ, “ಸತ್ತವರ ಗರ್ಭಕೋಶದಲ್ಲಿ ಒಂದು ಸೂಕ್ಷ್ಮ ಜೀವಿಯು ಹುಟ್ಟಿದರೆ, ಅದು ಏನನ್ನು ತಿನ್ನುತ್ತದೆ ಮತ್ತು ಎಲ್ಲಿ ನೆಲೆಸುತ್ತದೆ?”  ಇದರ ಅರ್ಥ‌ : “ಈ ಶರೀರವು ನಿರುಪಯುಕ್ತ ವಸ್ತುಗಳಿಂದ ಮಾಡಲ್ಪಟ್ಟಿದೆ. ಆತ್ಮವು ಏನನ್ನು ತಿನ್ನುತ್ತದೆ ಮತ್ತು ದೇಹದಲ್ಲಿ ಎಲ್ಲಿ ವಾಸಿಸುತ್ತದೆ?”

ಈ ತಾತ್ತ್ವಿಕ ಪ್ರಶ್ನೆಗೆ ನಮ್ಮಾಳ್ವಾರ್‌ ಉತ್ತರಿಸಿದರು. ಅದೇ ಅವರು ಮೊದಲ ಬಾರಿ ಮಾತನಾಡಿದ್ದು! ಅವರೆಂದರು, “ಅತ್ತೈ ತಿನ್ನು ಅಂಗೇ ಕಿಡಕ್ಕುಂ” , ಅಂದರೆ “ಅದನ್ನೇ ತಿನ್ನುತ್ತದೆ ಮತ್ತು ಅಲ್ಲಿಯೇ ವಾಸಿಸುತ್ತದೆ”. ಏನಿದರ ಅರ್ಥ?‌  ಐಹಿಕ ಶರೀರದ  ಪೋಷಣೆಗೆ  ಆತ್ಮವು ವಸ್ತುವಿನ ಮೇಲೆ ಜೀವಿಸಿರಬೇಕಾಗುತ್ತದೆ. ಮತ್ತು ಶರೀರದಿಂದ ಆತ್ಮವನ್ನು ಗುರುತಿಸಲಾಗದ ಈ ಐಹಿಕ ಲೋಕದಲ್ಲಿಯೇ ಇರಬೇಕಾಗುತ್ತದೆ.

ನಮ್ಮಾಳ್ವಾರ್‌ ಅವರ ಉತ್ತರ ಕೇಳಿ ಮಧುರಕವಿ ಆಳ್ವಾರ್‌ ಅವರಿಗೆ ನಮ್ಮಾಳ್ವಾರ್‌ ಅತ್ಯಂತ ಪ್ರಗತಿಹೊಂದಿದ ಭಕ್ತರು  ಮತ್ತು ಆಧ್ಯಾತ್ಮಿಕ ಜ್ಞಾನದ ಭಂಡಾರ ಎನ್ನುವುದು ಅರ್ಥವಾಯಿತು. ಕೂಡಲೇ ಅವರ ಚರಣಕಮಲಗಳಿಗೆರಗಿ ಅವರ ಶಿಷ್ಯರಾದರು. ಈ ಗುರು ಶಿಷ್ಯನ ಬಾಂಧವ್ಯದಿಂದ ನಮ್ಮಾಳ್ವಾರ್‌ ಅವರ ಹಿರಿಮೆಯನ್ನು ವಿಶ್ವವು ಅರಿಯುವುದು ಸಾಧ್ಯವಾಯಿತು.

ಮತ್ತೊಂದು ವಿಶೇಷವಿದೆ. ಮಧುರಕವಿ ಆಳ್ವಾರ್‌ ವಯಸ್ಸಿನಲ್ಲಿ ನಮ್ಮಳ್ವಾರ್‌ ಅವರಿಗಿಂತ ಹಿರಿಯರು. ಅಲ್ಲದೆ ಮಧುರಕವಿ ಆಳ್ವಾರ್‌ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರೆ ನಮ್ಮಾಳ್ವಾರ್‌ ವೆಲ್ಲಾಲ ಎನ್ನುವ ಶೂದ್ರ ಜಾತಿಯಲ್ಲಿ ಜನಿಸಿದವರಾಗಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ವಿಷ್ಣವು ಎಲ್ಲ ಜಾತಿಯ ಜನರಿಗೂ ಲಭ್ಯ, ಮತ್ತು ಅವನ ಭಕ್ತರು, ವೈಷ್ಣವರು ಎಲ್ಲ ಜಾತಿ, ವರ್ಗ‌ ಮತ್ತು ವಯಸ್ಸನ್ನು ಮೀರಿದವರು ಎನ್ನುವುದು ಸ್ಪಷ್ಟವಾಗುತ್ತದೆ.

ಮಧುರಕವಿ ಆಳ್ವಾರ್‌ ಅವರು ನಮ್ಮಾಳ್ವಾರ್‌ ಅವರಿಂದ ವೇದಗಳ ಸಾರವನ್ನು ಅರುಹುವ ಪಾಶುರಗಳನ್ನು (ತಮಿಳು ಶ್ಲೋಕ) ಕಲಿತರು. ನಮ್ಮಾಳ್ವಾರ್‌ ಅವರ ಕೃತಿಗಳು ವೇದಗಳಷ್ಟು ಬೃಹತ್ತಾಗಿರದಿರಬಹುದು. ಆದರೆ ಅವು ವೇದಗಳ ಸಾರವನ್ನು ತಿಳಿಸುತ್ತವೆ ಮತ್ತು ಸಂಸ್ಕೃತ ಗೊತ್ತಿಲ್ಲದವರಿಗೆ ತಮಿಳಿನಲ್ಲಿ ಸರಳವಾಗಿ ವೇದಗಳನ್ನು ಕುರಿತಂತೆ ಹೇಳುತ್ತವೆ.  ಐಹಿಕ ಲೋಕದ ಬಂಧನದಿಂದ ಬಿಡುಗಡೆ ಹೊಂದಿ ಆಧ್ಯಾತ್ಮಿಕ ಲೋಕದತ್ತ ಸಾಗುವ ಮಾರ್ಗವನ್ನು ಅವು ಸೂಚಿಸುತ್ತವೆ. ಇದರಿಂದ ಭಗವಂತನಲ್ಲಿ ಭಕ್ತಿಯು ಹೆಚ್ಚುತ್ತದೆ.

ಮಧುಕರಕವಿ ಆಳ್ವಾರ್‌ ಅವರ ಧರ್ಮ‌ ಪ್ರಚಾರ ಕಾರ್ಯಕ್ರಮಗಳಿಂದಾಗಿ ನಮ್ಮಾಳ್ವಾರ ಅವರ ಹಿರಿಮೆಯು ಜಗತ್ತಿನ ಉದ್ದಗಲಕ್ಕೂ ಹರಡಿತು. ನಮ್ಮಾಳ್ವಾರ್‌ ಅವರ ಕಾವ್ಯಪ್ರತಿಭೆ ಮತ್ತು  ಭಕ್ತಿಭಾವ ಕಂಡು ವಿದ್ವನ್‌ ಜನರು ವಿಸ್ಮಿತರಾದರು. ಈ ಮಹತ್‌ ಕಾರ್ಯವು ಸ್ಥಳೀಯ ಪಾಂಡ್ಯ ರಾಜನ ಸಭೆಯನ್ನು ತಲಪುವವರೆಗೂ ಯಾವುದೇ ತಡೆ ಇಲ್ಲದೆ ಸಾಗುತ್ತಿತ್ತು.  ಐಹಿಕ ಲೋಕದಿಂದಲೇ ದೂರ ಉಳಿದಿದ್ದ ಈ ಶ್ರೇಷ್ಠ ಕವಿಯು ರಾಜನ ಸಭೆ ಪ್ರವೇಶಿಸಿದ್ದು ಹೇಗೆ?

ನಮ್ಮಾಳ್ವಾರ್‌  ಮಹಿಮೆ

ತಿರುನಗರಿ ಮತ್ತು ಸುತ್ತಮುತ್ತಲ ಪ್ರದೇಶಗಳ ರಾಜನಾಗಿದ್ದ ಪಾಂಡ್ಯ ರಾಜನು ಕವಿ-ಕಾವ್ಯಗಳ ವಿಷಯದಲ್ಲಿ ಒಂದು ಫರ್ಮಾನು ಹೊರಡಿಸಿದ್ದನು. ಯಾರೇ ಆಗಲಿ ಯಾವುದೇ ಕವಿತೆ ರಚಿಸಲಿ ಅವರು ಅದನ್ನು ರಾಜಸಭೆಯ ಪರಿಶೀಲನೆಗೆ ಕಳುಹಿಸಬೇಕು. ಆಸ್ಥಾನ-ಕವಿ  ಕಂಬತಾಳ್ವಾನ್‌ ನೇತೃತ್ವದ ಮಂಡಳಿಗೆ ಸಲ್ಲಿಸಬೇಕಾಗಿತ್ತು. ನಮ್ಮಾಳ್ವಾರ್‌ ಅವರು ತಮ್ಮ ಪಾಶುರಗಳನ್ನು ರಾಜಸಭೆಗೆ ಕಳುಹಿಸಿರಲಿಲ್ಲ!

ಆದುದರಿಂದ  ಮಧುರಕವಿ ಆಳ್ವಾರ್‌ ಅವರನ್ನು ಕರೆತರಲು ರಾಜನ ಸೈನಿಕರನ್ನು ಕಳುಹಿಸಲಾಯಿತು. ನಮ್ಮಾಳ್ವಾರ್‌ ಅವರನ್ನು ರಾಜಸಭೆಗೆ ಕರೆತಂದು ಅವರ ಕಾವ್ಯವನ್ನು ಪರಿಶೀಲನೆಗೆ ಒಪ್ಪಿಸಬೇಕೆಂದು ಸೈನಿಕರು ರಾಜನ ಸಂದೇಶವನ್ನು ಮಧುರಕವಿ ಆಳ್ವಾರರಿಗೆ ತಿಳಿಸಿದರು.

ಸೈನಿಕರ ಅಹಂಕಾರದಿಂದ ಕೋಪೋದ್ರೇಕಗೊಂಡ ಮಧುರಕವಿ ಆಳ್ವಾರರು ತಮ್ಮ ಗುರು ಈಗ ತಾವಿರುವ ಸ್ಥಳದಿಂದ ಕಿಂಚಿತ್ತೂ ಸರಿಯುವುದಿಲ್ಲ, ರಾಜಸಭೆಗೆ ಬರುವ ಮಾತು ದೂರವೇ ಉಳಿಯಿತು ಎಂದರು. ತಾಳೆಗರಿಯ ಮೇಲೆ ನಮ್ಮಾಳ್ವಾರ್‌ ಅವರ ಪಾಶುರದ ಒಂದು ಸಾಲನ್ನು ಬರೆದು ಅದನ್ನು ಸೈನಿಕರ ಕೈಗಿತ್ತು ರಾಜಸಭೆಗೆ ನೀಡುವಂತೆ ತಿಳಿಸಿದರು.

ತಾಳೆಗರಿಯಲ್ಲಿ ಬರೆದದ್ದು, “ಕಣ್ಣನ್‌ ಕಳಲ್‌ ಇನ್ನೈ ನಾನ್ನುಂ ಮನಂ ಉದಯೀರ್‌ ಎನ್ನುಂ ತಿರುನಾಮಂ ತೀಣ್ಣಂ ನಾರಣಮೆ”, ಅಂದರೆ “ ಯಾರ ಹೃದಯದಲ್ಲಿ  ಶ್ರೀ ಕೃಷ್ಣನ ಚರಣಕಮಲವನ್ನು ಕುರಿತು ಪ್ರೀತಿಯು ಇರುತ್ತದೆಯೋ ಅವರು ಈ ಮಂತ್ರವನ್ನು ಧ್ಯಾನಕ್ಕಾಗಿ ಸ್ವೀಕರಿಸುತ್ತಾರೆ, ಇದು ದಿಟವಾಗಿ ಭಗವಂತನ ಪವಿತ್ರನಾಮ.”

ಈ ಪಾಶುರವನ್ನು ಓದಿದ ಕೂಡಲೇ ಆಸ್ಥಾನ-ಕವಿ ಮತ್ತು 300 ಸದಸ್ಯರಿದ್ದ ಮಂಡಳಿಯು ನಮ್ಮಾಳ್ವಾರ್‌ ಅವರ ಶಿಷ್ಯರಾದರು.

ಸಂಪ್ರದಾಯದ ನಂಬಿಕೆಯಂತೆ ನಮ್ಮಾಳ್ವಾರ್‌ ಈ ಲೋಕದಲ್ಲಿ ತಮ್ಮ 32ನೆಯ ವಯಸ್ಸಿನವರಗೆ ಇದ್ದರು ಮತ್ತು ಸ್ವತಃ ಭಗವಂತನೇ ವೈಕುಂಠದ ದ್ವಾರದಲ್ಲಿ ಅವರನ್ನು ಬರಮಾಡಿಕೊಂಡನು. ಇದರ ಸಂತೋಷ ಸಂಭ್ರಮಕ್ಕಾಗಿ ಎಲ್ಲ ವಿಷ್ಣು ಮಂದಿರಗಳಲ್ಲಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದೆ.

ನಮ್ಮಾಳ್ವಾರ್‌ ಅವರು ಭಗವಂತನನ್ನು ಕೊಂಡಾಡುವ 1296 ಪಾಶುರಗಳನ್ನು ರಚಿಸಿದರು. ಎಲ್ಲ ವಿಷ್ಣು ದೇವಾಲಯಗಳಲ್ಲಿ ಶಟಾರಿಯನ್ನು ಇಟ್ಟಿರುತ್ತಾರೆ. ಅದು ನಮ್ಮಾಳ್ವಾರ್‌  ಅವರನ್ನು ಪ್ರತಿನಿಧಿಸುತ್ತದೆ. ಸದಾ ಭಗವಂತನ ಚರಣಕಮಲದಲ್ಲಿ ಧ್ಯಾನಿಸುತ್ತಿರಬೇಕು ಎನ್ನುವ ಅವರ ಅಪೇಕ್ಷೆಯನ್ನು ಅದು ಬಿಂಬಿಸುತ್ತದೆ. ಅದನ್ನು ಮಂದಿರಕ್ಕೆ ಬರುವ ಭಕ್ತರ ಶಿರಗಳಿಗೆ ಸಾಂಕೇತಿಕವಾಗಿ ಸ್ಪರ್ಶಿಸಲಾಗುತ್ತದೆ.

ಪ್ರಭುವಿನ ಪ್ರೀತಿಯ  ನಮ್ಮಾಳ್ವಾರ್‌ ಪಾಶುರ

ನಮ್ಮಾಳ್ವಾರ್ ಪಾಶುರಗಳೆಂದರೆ ಭಗವಂತನಿಗೆ ತುಂಬಾ ಪ್ರೀತಿ. ಅದನ್ನು ಯಾರು ಹೇಗೆ ಹೇಳುತ್ತಿದ್ದರೂ ಆನಂದದಿಂದ ಕೇಳುತಿದ್ದನಂತೆ.  ಒಂದು ಪ್ರಸಂಗವಿದೆ. ಅವನೊಬ್ಬ ಭಕ್ತ. ಅವನಿಗೆ ಅಡಿಕೆ ಜಗಿಯುವ ಚಟವಿತ್ತು. ಅವನು ಚೀಲದಲ್ಲಿ ಸಣ್ಣ ಸಾಲಗ್ರಾಮವನ್ನು ಇಟ್ಟುಕೊಂಡಿರುತ್ತಿದ್ದ ಮತ್ತು ಅದನ್ನು ತೆಗೆದುಕೊಂಡು ನಮ್ಮಾಳ್ವಾರ್‌ ಅವರ ಪಾಶುರಗಳನ್ನು ವಾಚಿಸುತ್ತಿದ್ದ.

ಅವನು ಅಡಿಕೆ ಮತ್ತು ಸಾಲಗ್ರಾಮವನ್ನು ಒಂದೇ ರೀತಿಯ ಬೇರೆ ಬೇರೆ ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟುಕೊಂಡಿದ್ದ. ಆದುದರಿಂದ ಅವನು ಎಷ್ಟೋ ಬಾರಿ ಸಾಲಗ್ರಾಮವನ್ನೇ ಅಡಕೆ ಎಂದು ಬಾಯಿಗೆ ಹಾಕಿಕೊಳ್ಳುತ್ತಿದ್ದ! ಅನಂತರ ಪಶ್ಚಾತ್ತಾಪದಿಂದ ತೆಗೆದು ತೊಳೆದು ಅದಕ್ಕೆ ಅಭಿಷೇಕ ಮಾಡುತ್ತಿದ್ದ!

ಆದರೆ ಅವನಿಗೆ ಚಟವನ್ನು ಬಿಡುವುದು ಸಾಧ್ಯವಾಗಿರಲಿಲ್ಲ. ಆದುದರಿಂದ ಅವನು ಒಬ್ಬ ಬ್ರಾಹ್ಮಣನಿಗೆ ಸಾಲಗ್ರಾಮವನ್ನು ನೀಡಿ ಅದನ್ನು ಕಾಪಾಡುವಂತೆ ಹೇಳಿದನು. ಆದರೆ ಭಗವಂತನಿಗೆ ಪಾಶುರ ಬರೆದ ಮತ್ತು ವಾಚಿಸುವ ಭಕ್ತರಿಬ್ಬರ ಮೇಲೆಯೂ ಪ್ರೀತಿ. ಆದುದರಿಂದ ಅವನು ಬ್ರಾಹ್ಮಣನ ಕನಸಿನಲ್ಲಿ ಬಂದು ಆ ಸಾಲಗ್ರಾಮವನ್ನು ಆ ಭಕ್ತನಿಗೆ ವಾಪಸು ನೀಡುವಂತೆ ತಿಳಿಸಿದನು.

ಆ ಭಕ್ತನು ಸಾಲಗ್ರಾಮವನ್ನು ಬಾಯಲ್ಲಿಟ್ಟುಕೊಂಡರೂ  ಅವನು ಪಾಶುರಗಳನ್ನು ವಾಚಿಸುತ್ತಿದ್ದ ರೀತಿ  ತನಗೆ ಇಷ್ಟ ಮತ್ತು ನಮ್ಮಾಳ್ವಾರ್‌ ಪ್ರೇಮದಿಂದ ಬರೆದ ಪಾಶುರಗಳು ತನಗೆ ಪ್ರೀತಿಯಾದುದೆಂದು ಭಗವಂತನು ಸಾರಿದ. ಇದಲ್ಲವೇ ಭಗವಂತನ ಭಕ್ತಪ್ರೇಮ!

ನಮ್ಮಾಳ್ವಾರ್‌ ಅವರಂತಹ ಭಕ್ತರ ಮತ್ತು ಮಧುರಕವಿ ಆಳ್ವಾರ್‌ ಅವರಂತಹ ಶಿಷ್ಯರ ಅನುಗ್ರಹ ಎಲ್ಲರ ಮೇಲಿರಲಿ.

ಭಗವಂತನ ಪವಿತ್ರ ನಾಮಗಳ ಜಪ (ಸಂಕೀರ್ತನೆ) ಮತ್ತು ಅದು ಕಲಿಯುಗದ ಸಂಕಷ್ಟಗಳನ್ನು ಹೇಗೆ ನಿವಾರಿಸಬಹುದು ಎನ್ನುವುದರ ಪ್ರಾಮುಖ್ಯವನ್ನು ನಮ್ಮಾಳ್ವಾರ್‌ ಒತ್ತಿ ಹೇಳಿದ್ದರು. ಶ್ರೀಲ ಪ್ರಭುಪಾದರು ಹರೇ ಕೃಷ್ಣ ಜಪವನ್ನು ಇಡೀ ವಿಶ್ವದಲ್ಲಿಯೇ ಹರಡಿದರು. ಈ ಮೂಲಕ ಅಸಂಖ್ಯ ಜನರಿಗೆ ಲೌಕಿಕ ಬಂಧನಗಳಿಂದ ಮುಕ್ತರಾಗಿ ಭಗವದ್ಧಾಮಕ್ಕೆ (ವೈಕುಂಠ ಲೋಕ) ಹಿಂದಿರುಗುವ ಅವಕಾಶವನ್ನು ಕಲ್ಪಿಸಿದರು.  

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi