ಭೂ ಮಾತೆಗೆ ನಮೋ ನಮೋ!

ಭೂ ತಾಯಿಯೊಂದಿಗೆ ಪುನರ್‌ ಮಿಲನ ಮತ್ತು ಅವಳ ಉತ್ಪನ್ನಗಳನ್ನು ಶ್ರೀ ಕೃಷ್ಣನಿಗೆ ಅರ್ಪಿಸುವುದು ನಮ್ಮ ಬದುಕಿನ ಕರ್ತವ್ಯವಾಗಬೇಕು.

ಭೂಮಿಯಿಂದ (ಮಣ್ಣಿನಿಂದ) ಉತ್ಪನ್ನವಾಗುವ ನಮ್ಮ ದೇಹ ಈ ಲೋಕದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ ಮೇಲೆ ಬೂದಿಯಾಗಿ ಮಣ್ಣನ್ನೇ ಸೇರುತ್ತದೆ.  ಹೀಗಾಗಿ “ಮಣ್ಣಿನಿಂದ ಬಂದೆವು, ಮಣ್ಣನ್ನೇ ಸೇರುತ್ತೇವೆ” ಎಂದು ಹೇಳುತ್ತಾರೆ. ಆದುದರಿಂದ ಭೂಮಿಯೊಂದಿಗೆ ನಮ್ಮದು ಅವಿನಾಭಾವ ಸಂಬಂಧ. ಭೂಮಿಯು ಒದಗಿಸುವ ಹಣ್ಣು, ತರಕಾರಿ, ಧಾನ್ಯಗಳು ನಮಗೆ ಪೌಷ್ಟಿಕಾಂಶ ನೀಡುತ್ತವೆ. ಆದುದರಿಂದ ಭೂಮಿಯ ಯೋಗಕ್ಷೇಮ ನಮ್ಮ ಕರ್ತವ್ಯ.

ನಮ್ಮ ಮನೋಭಾವವು ಅನಾರೋಗ್ಯಕರವಾಗಿದ್ದರೆ ಮತ್ತು ಭೂಮಿಯನ್ನು ಗೌರವಿಸುವಲ್ಲಿ ನಾವು ವಿಫಲವಾದರೆ, ನಾವು ಈ ಗ್ರಹವನ್ನು ಮಲಿನಗೊಳಿಸುತ್ತೇವೆ, ಮತ್ತು ಆ ಮಾಲಿನ್ಯವು ನಮ್ಮನ್ನು ದೈಹಿಕವಾಗಿ ದುರ್ಬಲಗೊಳಿಸುತ್ತದೆ. ‌ಭೂಮಿಯ ಮಹತ್ವ ಹೇಗೆ, ಏಕೆ?

ಭೂಲೋಕವು ಕೃಷ್ಣನ ಎಲ್ಲ ಐದು ಭೌತಿಕ ಶಕ್ತಿಗಳನ್ನು ಒಳಗೊಂಡಿದೆ. ಅವುಗಳೆಂದರೆ, ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ. ಇವು ಭಗವಂತನು ನಮಗೆ ನೀಡಿರುವ ಅಮೂಲ್ಯ ಕೊಡುಗೆ, ಆಸ್ತಿ. ಇವುಗಳನ್ನು ಹೊಂದಿರುವ ಭೂಮಿಯನ್ನು ರಕ್ಷಿಸಲು ಮತ್ತು ಗೌರವಿಸಲು ನಾವು ಬದ್ಧರಾಗಿರಬೇಕು. ಆದುದರಿಂದ ಭೂಮಿಯಿಂದ ಏನನ್ನೇ ತೆಗೆದುಕೊಂಡರೂ ಅದನ್ನು ಭಗವಂತನ ಸಂಪತ್ತು ಎಂದು ಭಾವಿಸಬೇಕು. 

ಗಣಿ, ಧಾನ್ಯ, ತರಕಾರಿ, ಹಣ್ಣು, ಹೂವು ಎಲ್ಲವೂ ಪರಮ ಪ್ರಭುವಿನದು. ಸಂಪದ್ಭರಿತ ಭೂತಾಯಿಯನ್ನು ಗೌರವಿಸಬೇಕಲ್ಲದೆ ಅವಳ ಉತ್ಪನ್ನಗಳನ್ನು ಭಗವಂತನಿಗೆ ಅರ್ಪಿಸಬೇಕು. ನಾವು ಪ್ರಾಮಾಣಿಕವಾಗಿ  ಅರ್ಪಿಸಿದರೆ, ಆಧ್ಯಾತ್ಮಿಕ ಜೀವನವಲ್ಲಿ ಮುನ್ನಡೆಯುತ್ತೇವೆ. ಆಗ ನಾವು ಧರ್ಮಶ್ರದ್ಧೆ ಉಳ್ಳವರಾಗುತ್ತೇವೆ ಮತ್ತು ಭೂಮಿಗೆ ಆನಂದದ ಮೂಲವಾಗುತ್ತೇವೆ.

ಭೂಮಿಯ ದುರುಪಯೋಗ

ಹೇಗೆ ಪಶುಗಳನ್ನು ಅವು ತಮ್ಮ ಮಾಲೀಕನ ಸೇವೆಗಾಗಿಯೇ ಬದುಕಿರುವಂತೆ ಶೋಷಿಸಲಾಗುತ್ತದೆಯೋ ಹಾಗೆ, ಕೃಷಿ ವಹಿವಾಟು ಭೂಮಿಯನ್ನು ಶೋಷಿಸುತ್ತಿದೆ. ಭೂಮಿಯ ಆರೋಗ್ಯ, ಸೌಂದರ್ಯ‌ ಮತ್ತು ಸ್ಥಿರತೆಯನ್ನು ಅಲಕ್ಷಿಸಿ ಆರ್ಥಿಕ ಲಾಭದ ಉತ್ಪಾದನೆಗಾಗಿ  ಉಳಲಾಗುತ್ತದೆ. ಆಧುನಿಕ ಕೃಷಿ ಪದ್ಧತಿಯ ಹೆಸರಿನಲ್ಲಿ ಇನ್ನಷ್ಟು ಶೋಷಣೆಯಾಗುತ್ತದೆ.  ಈ ರೀತಿಯ ಅಸ್ಥಿರ ಕೃಷಿ ವಿಧಾನಗಳನ್ನು ಮುಂದುವರಿಸಿದರೆ, ನಾವು ಕರಾಳ ಭವಿಷ್ಯವನ್ನು ಎದುರಿಸಬೇಕಾಗುತ್ತದೆ.

ಆದುದರಿಂದ ಅವಳನ್ನು ರಕ್ಷಿಸಲು ಮತ್ತು ಅವಳನ್ನು ಗೌರವಿಸಲು ಶ್ರೀಲ ಪ್ರಭುಪಾದರ ಮಾರ್ಗದರ್ಶನದಲ್ಲಿ ಕೃಷಿ ಸಮುದಾಯಗಳನ್ನು ರೂಪಿಸಲಾಯಿತು. ಇಲ್ಲಿನ ತೋಟಗಳನ್ನು ಸುಂದರವಾಗಿಡಲಾಗಿದೆ, ರಕ್ಷಿಸಲಾಗಿದೆ ಮತ್ತು ಉತ್ಪಾದನಾ ಶಕ್ತಿಯನ್ನಾಗಿ ಮಾಡಲಾಗಿದೆ. ಅಲ್ಲಿ ಯಾವುದನ್ನೂ ಹಾಳು ಮಾಡುವುದಿಲ್ಲ.

ಸೊಪ್ಪು, ತರಕಾರಿ ಸಿಪ್ಪೆ, ಹಣ್ಣುಗಳ ಸಿಪ್ಪೆ ಇತ್ಯಾದಿಗಳು ಕಾಂಪೋಸ್ಟ್‌  ಹೊಂಡವನ್ನು ಸೇರುತ್ತವೆ ಮತ್ತು ಗಿಡ ಮರಗಳಿಗೆ ಗೊಬ್ಬರವಾಗುತ್ತದೆ. ಇಲ್ಲಿ ಬೆಳೆದ ಗಿಡ ಮರ, ಹಣ್ಣುಹೂವು ನೋಡಲೇ ಚೆಂದ. ಪಟ್ಟಣಗಳಲ್ಲಿ ಮಿತ್ರರು ರಾಸಾಯನಿಕ ಗೊಬ್ಬರ ಹಾಕಿ ಬೆಳೆದ ತರಕಾರಿ ಮತ್ತು ಹಣ್ಣು ಸೇವಿಸುವುದನ್ನು ನೋಡಿದಾಗ ಇವರಿಗೆ ಕೃಷಿ ಸಮುದಾಯದ ಅರಿವು ಮೂಡಿಸಬೇಕೆನ್ನಿಸುತ್ತದೆ.

ನಗರಗಳಲ್ಲಿರುವ ಜನರು, ಗ್ರಾಮ ಸಮುದಾಯದಲ್ಲಿ ನಾವು ಕಾಣುವ ಆಸಕ್ತಿದಾಯಕವಾದುದೇನು ಎಂದು ಅಚ್ಚರಿ ಪಡಬಹುದು. ಹಾಗೆಯೇ  ಗ್ರಾಮವಾಸಿಗಳು ನಗರವಾಸಿಗಳ ಒತ್ತಡದ ಬದುಕು ನೋಡಿ ಅಚ್ಚರಿಪಡುತ್ತಾರೆ. ಆದರೆ ನಗರ ಮತ್ತು ಗ್ರಾಮ ಬದುಕಿನ ಸಮತೋಲನವನ್ನು ಕಾಪಾಡಿಕೊಳ್ಳಬೇಕಲ್ಲವೇ? 

ಭೂಮಿಯು ಆರೋಗ್ಯಪೂರ್ಣವಾಗಿದ್ದರೆ ಮತ್ತು ಸುಂದರವಾಗಿದ್ದರೆ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಅದೇ ರೀತಿ ಜನರು ಸೃಷ್ಟಿಕರ್ತನೊಂದಿಗೆ ಸಂಪರ್ಕ ಕಲ್ಪಿಸಿಕೊಂಡರೆ ತೃಪ್ತಿಯ ಭಾವನೆಯನ್ನು ಹೊಂದುತ್ತಾರೆ.‌  

ಆದರೆ ಏನಾಗಿದೆ? ಅಣುಸ್ಫೋಟ, ತೈಲಬಾವಿ ತೋಡುವಿಕೆ, ಅರಣ್ಯನಾಶ, ರಕ್ತಮಯ ಸಮರ ಮತ್ತು ಇತರ ಅನೇಕ ದೌರ್ಜನ್ಯಗಳು.  ಅವಳು ಅದನ್ನು ಸಹಿಸಿಕೊಂಡಿದ್ದರೂ  ನಮ್ಮ ಬದುಕಿನ ಅಗತ್ಯಗಳೂ ಸೇರಿದಂತೆ ತನ್ನ ಕೊಡುಗೆಯನ್ನು ತಡೆಹಿಡಿಯುವ ಶಕ್ತಿಯನ್ಣೂ ಹೊಂದಿದ್ದಾಳೆ ಎನ್ನುವುದನ್ನು ಮರೆಯಬಾರದು.  

ಸುಖ ಮತ್ತು ಭೂಮಿ

ಆರ್ಥಿಕ ಲಾಭದಿಂದ ಅಲ್ಲ, ಆಧ್ಯಾತ್ಮಿಕ ಬೆಳವಣಿಗೆಯಿಂದ ಸುಖ ಸಂತೋಷವು ದೊರೆಯುತ್ತದೆ. ಆದರೆ ನಾವು ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡುತ್ತೇವೆ. ಇದನ್ನು ತಡೆಯದಿದ್ದರೆ ಅದು ಭೂಮಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಮತ್ತು ನಮ್ಮ ಪ್ರವೃತಿಗೆ ನಾವೇ ಬೆಲೆ ತೆರಬೇಕಾಗುತ್ತದೆ.

ಕೃಷ್ಣಪ್ರಜ್ಞೆಯ ಗ್ರಾಮೀಣ ಸಮುದಾಯಗಳು ಆಧ್ಯಾತ್ಮ ಬಯಸುವವರಿಗೆ ಸರಳವಾದ, ಒತ್ತಡಮುಕ್ತ ಬದುಕನ್ನು ಉತ್ತೇಜಿಸಬಹುದು. ಅಂತಹ ಸಮುದಾಯಗಳು ನಮ್ಮಲ್ಲಿ ವಿಶ್ವಾಸವನ್ನು ಪುನರ್‌ ಸ್ಥಾಪಿಸಬಹುದು, ಭೂಮಿ ಮತ್ತುಅದರ ಅನೇಕ ಜೀವಿಗಳ ಬಗೆಗೆ ಮೆಚ್ಚುಗೆಯನ್ನು ಬೆಳೆಸಿಕೊಳ್ಳಲು ನೆರವಾಗಬಹುದು. ಇದರಿಂದ ಕೃಷ್ಣನಲ್ಲಿಗೆ ನಿಕಟವಾಗಲು ಸಹಾಯವಾಗುತ್ತದೆ. ಕೃಷ್ಣನಿಗಾಗಿ ಸಣ್ಣ ಪ್ರಮಾಣದಲ್ಲಿ ತೋಟಗಾರಿಕೆ ಮಾಡುವುದು ಕೂಡ  ಉತ್ತಮ ಕಾರ್ಯವೇ.‌

ಹಣ ಮಾಡಲು ಮತ್ತು ವೆಚ್ಚಮಾಡಲೆಂದೇ ದೇವರು ನಮ್ಮ ಬದುಕನ್ನು ಸೃಷ್ಟಿಸಿಲ್ಲ. ಆಧ್ಯಾತ್ಮಿಕ ಬೆಳವಣಿಗೆಗೆ ನಮ್ಮಲ್ಲಿನ ಶಕ್ತಿಯನ್ನು ವಿನಿಯೋಗಿಸಿಕೊಳ್ಳಬೇಕು ಮತ್ತು ಆ ಬೆಳವಣಿಗೆಯೊಂದಿಗಿನ ಸುಖಸಂತೋಷವನ್ನು ಅನುಭವಿಸಬೇಕು. ಭೂಮಾತೆಯೊಂದಿಗೆ ಪುನರ್ ಮಿಲನ ಮತ್ತು ಅವಳ ಉತ್ಪನ್ನವನ್ನು ಶ್ರೀಕೃಷ್ಣನಿಗೆ ಅರ್ಪಿಸುವುದರಿಂದ ಅದು ಸಾಧ್ಯ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi