ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ಸಮಾಗಮ
ಸಹಸ್ರಾರು ವರ್ಷಗಳ ಹಿಂದೆ ನರಸಿಂಹನ ರೂಪದಲ್ಲಿ ಅವತರಿಸಿದ ಭಗವಂತನು ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ನಡುವಿನ ಸಂಬಂಧವನ್ನು ಜಗತ್ತಿಗೆ ನಿರೂಪಿಸಿದ.

ಅದು ನಿಜಕ್ಕೂ ಉಗ್ರ ಸೌಂದರ್ಯ; ರುದ್ರ ರಮಣೀಯ ನೋಟ. ಕೋಪದ ಬೆಂಕಿಯುಗುಳುತ್ತಿರುವ ಕೆಂಪು ಕಣ್ಣುಗಳು. ಅರ್ಧ ಮನುಷ್ಯ; ಇನ್ನರ್ಧ ಸಿಂಹದ ಶರೀರ ಎಲ್ಲ ದಿಕ್ಕುಗಳಿಗೂ ಚಾಚಿಕೊಂಡಿರುವ ಬಲಿಷ್ಠ ಬಾಹುಗಳು. ಶಿರದ ಮೇಲೆ ನೆರಳಿನಂತೆ ನಿಂತು ಬುಸುಗುಡುತ್ತಿರುವ ಅಸಂಖ್ಯಾತ ಹೆಡೆಗಳ ಸರ್ಪ. ಅದೊಂದು ದೈತ್ಯ ದೇಹ.
ಅವನೇ ನರಸಿಂಹ! ಉಗ್ರ ನರಸಿಂಹ!!
ರಾಕ್ಷಸರ ದೊರೆ ಹಿರಣ್ಯಕಶಿಪುವಿನ ಮೇಲೆರಗಿ ಅವನನ್ನು ಸಂಹರಿಸುತ್ತಿದ್ದಾನೆ. ರಕ್ತ ಚಿಮ್ಮುತ್ತಿದೆ. ಉಕ್ಕಿ ಹರಿಯುತ್ತಿದೆ. ನರಸಿಂಹ ಅಕ್ಷರಶಃ ಸಿಂಹದಂತೆ ದಾಳಿ ಮಾಡುತ್ತಿದ್ದಾನೆ; ಘರ್ಜಿಸುತ್ತಿದ್ದಾನೆ. ಶಿರದಿಂದ ಇಳಿಬಿದ್ದಿರುವ ಹೊಂಬಣ್ಣದ ಕೇಸರ ಕೆದರಿ ಹೋಗಿದೆ. ಅವನ ಕೋಪ ಭಯಂಕರವಾಗಿದೆ.
ಅದೋ ನರಸಿಂಹ ಹಿರಣ್ಯಕಶಿಪುವಿನ ಎದೆ ಬಗೆದುಹಾಕಿದ. ರಕ್ಕಸನ ವಿರುದ್ಧ ವಿಜಯ ಘರ್ಜನೆ ಮೊಳಗಿಸಿದ. ಇಷ್ಟಾದರೂ ಅವನ ಪಕ್ಕದಲ್ಲಿ ನಿಂತಿರುವ ಮುದ್ದು ಬಾಲಕನ ಮೊಗದಲಿ ನಗುವಿದೆ! ಆ ಬಾಲಕನೀಗ ನರಸಿಂಹನಿಗೆ ಹೂಮಾಲೆ ಹಾಕುತ್ತಿದ್ದಾನೆ…
ನೀವು ಹರೇಕೃಷ್ಣ ದೇವಾಲಯಕ್ಕೆ ಮೊದಲ ಬಾರಿ ಬಂದಾಗ ಇಂಥದ್ದೊಂದು ರುದ್ರ ರಮಣೀಯ ಚಿತ್ರವನ್ನು ಕಂಡು ಅಚ್ಚರಿಪಟ್ಟಿರುತ್ತೀರಿ. ನರಸಿಂಹನ ಚಿತ್ರ ದೇವಾಲಯದ ಕೋಣೆಗಳಲ್ಲಿ ಅಥವಾ ಮಂಟಪಗಳಲ್ಲಿ ನಿಮ್ಮ ಕಣ್ಣಿಗೆ ಬೀಳುತ್ತದೆ. ಯಾರು ಈ ನರಸಿಂಹ? ಈ ಶಾಂತಿಪ್ರಿಯ, ಸಸ್ಯಹಾರಿ ಹರೇಕೃಷ್ಣ ಪಂಥದವರಿಗೂ ಈ ನರಸಿಂಹನಿಗೂ ಎಲ್ಲಿಂದೆಲ್ಲಿಯ ಸಂಬಂಧ? ಎಂಬೆಲ್ಲಾ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ.
ನೀವೇ ನೋಡಿದ ಹಾಗೆ ನರಸಿಂಹನದು ಅರ್ಧ ನರ, ಇನ್ನರ್ಧ ಸಿಂಹದ ಶರೀರ. ಅಂದರೆ ದೇಹ ಮನುಷ್ಯನದಾದರೆ, ಶಿರ ಸಿಂಹದ್ದು. ನರಸಿಂಹ ಎಂದರೆ ಕೃಷ್ಣನ ಅತ್ಯಂತ ಪ್ರಸಿದ್ಧ ಮತ್ತು ಪ್ರೀತಿಪಾತ್ರ ಅವತಾರಗಳಲ್ಲೊಂದು. ತನ್ನ ಭಕ್ತರ ರಕ್ಷಣೆಗಾಗಿ ತಾನು ಯಾವುದೇ ರೂಪವನ್ನು ಅವತಾರವನ್ನು ತಾಳಬಲ್ಲೆ ಎಂಬುದನ್ನು ಕೃಷ್ಣನರಸಿಂಹಾವತಾರದ ಮೂಲಕ ತೋರಿಸಿದ.
ಅಷ್ಟೇ ಅಲ್ಲ ಈ ವಿಶಿಷ್ಟ ಅವತಾರದ ಮೂಲಕ ತನ್ನ ಮತ್ತು ತನ್ನ ಶುದ್ಧ ಭಕ್ತರ ನಡುವಿನ ಸಂಬಂಧ ಎಂಥದ್ದು ಎಂಬುದನ್ನೂ ಸಾಬೀತು ಪಡಿಸಿದ. ಐದು ಸಾವಿರ ವರ್ಷಗಳ ಹಿಂದೆ ನೀಲಮೇಘ ಶ್ಯಾಮನಾಗಿ ಗೋಪಾಲಕನ ರೂಪದಲ್ಲಿ ವೃಂದಾವನದಲ್ಲಿ ಅವತರಿಸಿದ ಕೃಷ್ಣ ತನ್ನ ವೈವಿಧ್ಯಮಯ ಲೀಲೆಗಳ ಮೂಲಕ ಭಕ್ತರನ್ನು ಅನುಯಾಯಿಗಳನ್ನು ಸಂತಸಪಡಿಸಿದ, ದುಷ್ಟರಿಂದ ರಕ್ಷಿಸಿದ. ಇಲ್ಲಿ ನರಸಿಂಹನಾಗಿ ವಿಚಿತ್ರ ಅವತಾರ ಎತ್ತಿದ ಕೃಷ್ಣ ತನ್ನ ಭಕ್ತರನ್ನು ಯಾವ ದುಷ್ಟ ಶಕ್ತಿಯೂ ಪೀಡಿಸಲಾಗದು ಎಂಬುದನ್ನು ಮತ್ತೊಮ್ಮೆ ರುಜುವಾತುಪಡಿಸಿದ.
ಶ್ರೀ ನರಸಿಂಹ ದೇವರ ಅವತಾರ ಈ ಜಗತ್ತಿನ ಇತಿಹಾಸದ ಅತ್ಯಂತ ನಾಟಕೀಯ ಅಧ್ಯಾಯಗಳಲ್ಲೊಂದು. ವೈದಿಕ ಸಾಹಿತ್ಯಗಳಲ್ಲಿ, ವಿಶೇಷವಾಗಿ ಶ್ರೀಮದ್ ಭಾಗವತದಲ್ಲಿ ನರಸಿಂಹಾವತಾರದ ಕುರಿತು ಸವಿವರ ವರ್ಣನೆ ಇದೆ. ಈ ಘಟನಾವಳಿ ನಡೆದಿದ್ದು ಅತ್ಯಂತ ಪ್ರಾಚೀನ ಕಾಲದಲ್ಲಿ. ಸಹಸ್ರಾರು ವರ್ಷಗಳ ಹಿಂದೆ. ಅಂದು ಪರಮ ನಾಸ್ತಿಕವಾದಿ ಹಿರಣ್ಯಕಶಿಪು ಎಂಬ ರಾಕ್ಷಸ ಪರಾಕ್ರಮದಿಂದ ಅಟ್ಟಹಾಸದಿಂದ ಮೆರೆಯುತ್ತಿದ್ದ.

ಈ ಐಹಿಕ ಜಗತ್ತಿನಲ್ಲಿ ಅಮರತ್ವ ಸಾಧಿಸುವುದು ಅವನ ಗುರಿಯಾಗಿತ್ತು. ಹೇಗಾದರೂ ಮಾಡಿ ಸಾವೇ ಬರದಂಥ ಶಕ್ತಿ ಸಂಪಾದಿಸಬೇಕೆಂದು ಅವನು ಹಠ ತೊಟ್ಟಿದ್ದ. ಈ ಐಹಿಕ ಜಗತ್ತಿನಿಂದಾಚೆಗೆ ಇನ್ನೊಂದು ಸುಂದರ ಲೋಕವಿದೆ ಎಂಬ ಸತ್ಯ ಅಲ್ಪಮತಿಗಳಿಗೆಲ್ಲಿ ಅರ್ಥವಾಗಬೇಕು? ಹಿರಣ್ಯಕಶಿಪು ಮಹಾನ್ ಶೋಭಿ.
ಅವನಲ್ಲಿ ಹಣ, ಅಧಿಕಾರ ದಾಹ ಮಿತಿಮೀರಿತ್ತು. ಐಹಿಕ ಸುಖದ ಸುಪತ್ತಿಗೆಯಲ್ಲಿ ಆತ ವಿಹರಿಸುತ್ತಿದ್ದ. ಈ ಐಹಿಕ ಸುಖ-ಸಂಪತ್ತುಗಳು ಎಷ್ಟು ದಿನ ಇರಬಹುದು. ಹೆಚ್ಚೆಂದರೆ ನಮ್ಮ ದೇಹ ಇರುವ ತನಕ. ಆದ್ದರಿಂದ, ಸಾಧ್ಯವಾದಷ್ಟು ದಿನ ಸಾವನ್ನು ಮುಂದೂಡುವುದು, ಅಮರತ್ವ ಸಾಧಿಸುವುದು ಹಿರಣ್ಯಕಶಿಪುವಿನ ಗುರಿಯಾಗಿತ್ತು.
ಆದ್ದರಿಂದ ಅಮರತ್ವ ಸಾಧಿಸಲು, ಸಾವಿಲ್ಲದಂಥ ವರ ಪಡೆಯಲು ಹಿರಣ್ಯಕಶಿಪು ಸತತ 36 ಸಾವಿರ ವರ್ಷ ಕಾಲ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸನ್ನಾಚರಿಸಿದ. ಆತನ ತಪಸ್ಸಿನ ಪ್ರಭಾವ ಎಷ್ಟೊಂದು ತೀಕವಾಗಿತ್ತೆಂದರೆ ಇಡೀ ಜಗತ್ತಿನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು. ಕೊನೆಗೆ ದೇವತೆಗಳೆಲ್ಲ ಒಂದಾಗಿ ಬ್ರಹ್ಮನ ಬಳಿ ಬಂದು ಹೇಗಾದರೂ ಮಾಡಿ ಹಿರಣ್ಯಕಶಿಪುವಿನ ತಪಸ್ಸು ನಿಲ್ಲಿಸುವಂತೆ ಮೊರೆ ಇಟ್ಟರು.
ಬ್ರಹ್ಮ ದೇವನು ದೇವೋತ್ತಮ ಪರಮ ಪುರುಷನ ಪ್ರಭಾವಶಾಲಿ ಪ್ರತಿನಿಧಿ. ಈ ಐಹಿಕ ಜಗತ್ತನ್ನು ಸೃಷ್ಟಿಸುವ ಅಧಿಕಾರವನ್ನು ಭಗವಂತ ಅವನಿಗೆ ನೀಡಿದ್ದಾನೆ. ಹೀಗೆ ದೇವತೆಗಳ ಮೊರೆಗೆ ಓಗೊಟ್ಟ ಬ್ರಹ್ಮ ನೇರವಾಗಿ ತಪೋನಿರತ ಹಿರಣ್ಯಕಶಿಪುವಿನ ಬಳಿ ಬಂದ ಹಿರಣ್ಯಕಶಿಪು ಅಮರತ್ವ ಸಾಧಿಸುವ ಸಲುವಾಗಿ ಇಂಥ ಕಠಿಣ ತಪಸ್ಸನ್ನಾಚರಿಸುತ್ತಿದ್ದಾನೆ ಎಂಬುದು ಬ್ರಹ್ಮನಿಗೆ ತಿಳಿದಿತ್ತು.
ಆದರೆ ಅಂಥ ವರ ಕೊಡುವುದು ಆತನಿಗೆ ಸಾಧ್ಯವಿರಲಿಲ್ಲ. ಬ್ರಹ್ಮ ಸೃಷ್ಟಿಯಿಂದ ಲಯದವರೆಗೆ ಲಕ್ಷಾಂತರ ವರ್ಷ ಬದುಕುತ್ತಾನೆ. ಆತ ದೀರ್ಘಾಯುಷಿ ನಿಜ. ಆದರೆ ಅವನಿಗೂ ಸಾವಿದೆ. ಆದ್ದರಿಂದ ಆತ ಇನ್ನೊಬ್ಬರಿಗೆ ಸಾವು ಬರದಂಥ ವರ ನೀಡಲಾರ. ಹಿರಣ್ಯಕಶಿಪುವಿಗೆ ಅಮರತ್ವ ಕಲ್ಪಿಸುವ ಶಕ್ತಿ ಅವನ ಬಳಿ ಇಲ್ಲ. ಆದ್ದರಿಂದ ಹಿರಣ್ಯಕಶಿಪುವಿನ ಎದುರು ಪ್ರತ್ಯಕ್ಷನಾದ ಬ್ರಹ್ಮ, ಈ ವಿಷಯವನ್ನು ಅವನಿಗೆ ತಿಳಿಸಿದ.
ಬಹಳ ಕುತಂತ್ರಿಯಾದ ಹಿರಣ್ಯಕಶಿಪು ಆಗ ವಿಚಿತ್ರವಾದ ಇನ್ನೊಂದು ಬೇಡಿಕೆಯನ್ನು ಬ್ರಹ್ಮನ ಮುಂದಿಟ್ಟ ‘ನನಗೆ ಅಮರತ್ವದ ವರ ನೀಡದಿದ್ದರೆ ಬೇಡ. ಅದರ ಬದಲು ಈ ವರವನ್ನಾದರೂ ಕರುಣಿಸು. ಯಾವುದೇ ಆಯುಧ ಅಥವಾ ಶಸ್ತ್ರಾಸ್ತ್ರದ ಮೂಲಕ, ಹಗಲು ಅಥವಾ ರಾತ್ರಿ ಮನೆಯ ಒಳಗೆ ಅಥವಾ ಹೊರಗೆ ನೆಲದಲ್ಲಿ ಅಥವಾ ಗಾಳಿಯಲ್ಲಿ ಮೃಗಗಳಿಂದ ಅಥವಾ ಮನುಷ್ಯರಿಂದ ಬದುಕಿರುವ ಅಥವಾ ಸತ್ತಿರುವ ಜೀವಿಯಿಂದ ನನಗೆ ಸಾವು ಬರಬಾರದು. ಅಂಥ ವರ ನೀಡು!’ ಎಂದು ಹಿರಣ್ಯಕಶಿಪು ತನ್ನ ಬೇಡಿಕೆ ಮುಂದಿಟ್ಟ ಬ್ರಹ್ಮ ಅದಕ್ಕೆ ಒಪ್ಪಿ’ತಥಾಸ್ತು’ ಎಂದು ಬಿಟ್ಟ.
ಹೀಗೆ ಬ್ರಹ್ಮನಿಂದ ವಿಶಿಷ್ಟ ವರ ಪಡೆದ ಹಿರಣ್ಯಕಶಿಪು ಉತ್ಸಾಹದಿಂದ ಬೀಗಿದ, ಏನಾದರಾಗಲಿ, ಒಂದಲ್ಲಾ ಒಂದು ರೀತಿಯಲ್ಲಿ ಅಮರತ್ವದ ವರವನ್ನೇ ಪಡೆದೆ ಎಂದು ಒಳಗೊಳಗೇ ಹೆಮ್ಮೆಪಟ್ಟ. ಹೀಗೆ ಬಹುತೇಕ ಯಾರಿಂದಲೂ, ಯಾವುದರಿಂದಲೂ ಸಾವು ಬರದಂಥ ವರವನ್ನು ಪಡೆದ ಹಿರಣ್ಯಕಶಿಪು ಮತ್ತಷ್ಟು ಕೊಬ್ಬಿಹೋದ. ಇನ್ನು ಅವನನ್ನು ತಡೆಯುವವರಾರು? ಅವನ ಅಟ್ಟಹಾಸವನ್ನು ಮೆಟ್ಟುವವರ್ಯಾರು?
ಆತ ಮೊದಲೇ ನಾಸ್ತಿಕ, ದುರಹಂಕಾರಿ. ಈ ವರದಿಂದ ಇನ್ನಷ್ಟು ದರ್ಪಿಷ್ಟನಾದ. ದೇವೋತ್ತಮ ಪರಮ ಪುರುಷನ ಮೇಲೆ ಅವನಿಗಿದ್ದ ದ್ವೇಷ ಮತ್ತಷ್ಟು ಹೆಚ್ಚಿತ್ತು. ದೇವೋತ್ತಮನ ಮೇಲೆ ಹಿರಣ್ಯಕಶಿಪು ಕೋಪಗೊಳ್ಳಲು ಒಂದು ಕಾರಣವಿದೆ. ಹಿಂದೆ ಈ ಹಿರಣ್ಯಕಶಿಪುವಿನ ಸೋದರ ಹಿರಣ್ಯಾಕ್ಷನೂ ಇದೇ ರೀತಿ ಲೋಕಕಂಟಕನಾಗಿ ಮೆರೆಯುತ್ತಿದ್ದ.

ಆಗ ವರಾಹ ರೂಪದಲ್ಲಿ ಅವತರಿಸಿದ ದೇವೋತ್ತಮ ಪರಮ ಪುರುಷನು ಹಿರಣ್ಯಾಕ್ಷನ ಹುಟ್ಟಡಗಿಸಿದ್ದ. ಅಂದಿನಿಂದಲೂ ದೇವೋತ್ತಮನ ಮೇಲೆ ಇನ್ನಿಲ್ಲದ ದ್ವೇಷ ಬೆಳೆಸಿಕೊ೦ಡಿದ್ದ ಹಿರಣ್ಯಕಶಿಪು ಹೇಗಾದರೂ ಮಾಡಿ ತನ್ನ ಸೋದರನ ಸಾವಿಗೆ ಸೇಡು ತೀರಿಸಿಕೊಳ್ಳಬೇಕೆಂದು ಹೊಂಚುಹಾಕುತ್ತಿದ್ದ. ಈಗ ಬ್ರಹ್ಮನಿಂದ ವರ ಪಡೆದ ಬಳಿಕ ಮತ್ತಷ್ಟು ಬಲಿಷ್ಠನಾದ ಆತ, ಮೊದಲಿಗಿಂತಲೂ ಹೆಚ್ಚಿನ ಕ್ರೌರ್ಯದಿಂದ ಇದ್ದ ಬದ್ದ ರಾಜರ ಮೇಲೆಲ್ಲಾ ದಾಳಿ ನಡೆಸಲಾರಂಭಿಸಿದ.
ಇಡೀ ಜಗತ್ತನ್ನು ಕೈವಶ ಮಾಡಿಕೊಂಡು ಭಗವಂತನಿಗೆ ಸಡ್ಡುಹೊಡೆಯುವುದು ಅವನ ಗುರಿಯಾಗಿತ್ತು. ಪ್ರತಿಯೊಂದು ಗ್ರಹದ ಮೇಲೂ ದಾಳಿ ಮಾಡಿ ದೇವಾನುದೇವತೆಗಳನ್ನೆಲ್ಲ ಮಣಿಸಿದ. ಅವರನ್ನೆಲ್ಲ ಬೆದರಿಸಿ, ಬಲವಂತವಾಗಿ ತನ್ನನ್ನೇ ಎಲ್ಲರೂ ಪೂಜಿಸಬೇಕು ಎಂದು ಆಜ್ಞೆ ವಿಧಿಸಿದ. ಈತನ ದಬ್ಬಾಳಿಕೆಗೆ, ಬರ್ಬರ ಆಳ್ವಿಕೆಗೆ ಸಿಲುಕಿ ಜನ ತತ್ತರಿಸಿ ಹೋದರು.
ಯಾವುದೇ ಕ್ಷಣದಲ್ಲೂ ಬಂದೆರಗಬಹುದಾದ ಸಾವಿಗಾಗಿ ಹೆದುರುತ್ತ ಬದುಕು ಸವೆಸುತ್ತಿದ್ದರು. ಈ ಆಧುನಿಕ ಯುಗದಲ್ಲೂ ಕೆಲವು ಸರ್ವಾಧಿಕಾರಿಗಳು ಇದೇ ರೀತಿ ದುರಾಡಳಿತ ನಡೆಸುವುದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಹಿರಣ್ಯಕಶಿಪು ಇವರೆಲ್ಲರಿಗಿಂತಲೂ ಕ್ರೂರಿಯಾಗಿದ್ದ. ಹೀಗೆ ಆತ ಕ್ರಮೇಣ ಇಡೀ ಜಗತ್ತಿನ ಮೇಲೆ ತನ್ನ ಹಿಡಿತ ಸ್ಥಾಪಿಸಿದ.
ಇಡೀ ಭೂಮಂಡಲವನ್ನು ತನ್ನ ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು, ಹಿ೦ಸಿಸತೊಡಗಿದ. ಕೊನೆಗೆ ಅಸಹಾಯಕರಾದ ಜನರು ಬೇರೇನೂ ತೋಚದೆ ತಮ್ಮನ್ನು ರಕ್ಷಿಸುವಂತೆ ಭಗವಂತನಲ್ಲಿ ಮೊರೆ ಇಟ್ಟರು. ತನಗೆ ಸಾವೇ ಇಲ್ಲ ಎಂದು ಹಿರಣ್ಯಕಶಿಪು ಬೀಗುತ್ತಿದ್ದ. ಆದರೆ ಸಾವು ತನ್ನ ಮನೆಯಲ್ಲೇ ಹೊಂಚು ಹಾಕಿ ಕುಳಿತಿದೆ ಎಂಬುದು ಅವನಿಗೆ ಗೊತ್ತೇ ಇರಲಿಲ್ಲ!
ಹಿರಣ್ಯಕಶಿಪುವಿಗೆ ನಾಲ್ವರು ಮಕ್ಕಳು. ಈ ಪೈಕಿ ಒಬ್ಬನ ಅತ್ಯಂತ ಸುಂದರ, ಚತುರಮತಿ. ಅವನೇ ಪ್ರಹ್ಲಾದ. ಈತ ತಾಯಿ ಗರ್ಭದಲ್ಲಿರುವಾಗಲೇ ಒಮ್ಮೆ ನಾರದರು ಕೃಷ್ಣಪ್ರಜ್ಞೆ ಕುರಿತು ಮಾತನಾಡುವುದನ್ನು ಕೇಳಿಸಿಕೊಂಡಿದ್ದ. ಹೀಗಾಗಿ ಈತ ಹುಟ್ಟಿನಿಂದಲೇ ಶ್ರೀ ಕೃಷ್ಣನ ಪರಮ ಭಕ್ತನಾಗಿದ್ದ. ಅವನ ಗುಣ-ನಡತೆ ಕೂಡ ಅದಕ್ಕೆ ತಕ್ಕಹಾಗಿತ್ತು.
ಈತ ಇತರ ಮಕ್ಕಳಿಗೆ ಆದರ್ಶ ಪ್ರಾಯನಾಗಿದ್ದ. ಅದಕ್ಕೆ ಸರಿಯಾಗಿ ತಂದೆ ಹಿರಣ್ಯಕಶಿಪು ಮಹಾನ್ ಕ್ರೂರಿಯೂ, ದೇವೋತ್ತಮನ ದ್ವೇಷಿಯೂ ಆಗಿದ್ದರಿಂದ ಪ್ರಹ್ಲಾದನ ಆದರ್ಶ ಗುಣಗಳು ಇನ್ನಷ್ಟು ಪ್ರಜ್ವಲವಾಗಿ ಕಾಣಿಸುತ್ತಿದ್ದವು. ಚಿಕ್ಕ ಬಾಲಕನಾಗಿದ್ದಾಗಲೇ ಈತ ಭಗವಂಶವನ್ನು ಕುರಿತು ತಪಸ್ಸನ್ನಾಚರಿಸುತ್ತಿದ್ದ. ಆ ವಯಸ್ಸಿಗೇ ಅತ್ಯಂತ ಪ್ರೌಢ ಮನೋಧರ್ಮ ಬೆಳೆಸಿಕೊಂಡಿದ್ದ ಪ್ರಹ್ಲಾದನಿಗೆ ಐಹಿಕ ಸುಖದಂಥ ಕುಲ್ಲಕ ವಿಚಾರಗಳ ಬಗ್ಗೆ ಕಿಂಚಿತ್ತೂ ಆಸಕ್ತಿ ಇರಲಿಲ್ಲ.
ಹುಟ್ಟಿದ ದಿನದಿಂದಲೂ ಪ್ರಹ್ಲಾದನೆಂದರೆ ಹಿರಣ್ಯಕಶಿಪುವಿಗೆ ಇನ್ನಿಲ್ಲದ ಪ್ರೀತಿ. ಆದರೆ, ಯಾವಾಗ ಪ್ರಹ್ಲಾದ ತನ್ನ ಸಹಪಾಠಿಗಳಿಗೆ ಕೃಷ್ಣಪ್ರಜ್ಞೆಯ ಪಾಠ ಹೇಳಿಕೊಡುತ್ತಿದ್ದಾನೆಂಬುದು ತಿಳಿಯಿತೋ, ಅಲ್ಲಿಂದ ಆ ಪ್ರೀತಿ ದಿನೇ ದಿನೇ ಕಡಿಮೆಯಾಗುತ್ತಾ ಬಂತು.
ಅದಕ್ಕೂ ಮೊದಲು ಆತ ಪ್ರಹ್ಲಾದನನ್ನು ಕರೆದು ತೊಡೆ ಮೇಲೆ ಕೂರಿಸಿಕೊಂಡ. ಗುರುಕುಲದಲ್ಲಿ ಯಾವ ಪಾಠ ಕಲಿಯುತ್ತಿರುವೆ ಮಗೂ?’ ಎಂದು ಪ್ರೀತಿಯಿಂದಲೇ ಪ್ರಶ್ನಿಸಿದ ‘ಐಹಿಕ ಸುಖದ ಪೊಳ್ಳುತನ ಮತ್ತು ಬುದ್ಧಿವಂತರು ಭಗವಂತನ ಸೇವೆಯಲ್ಲಿ ತೊಡಗಬೇಕಾದ ಅವಶ್ಯಕತೆ ಏನು ಎಂಬುದನ್ನು ಕಲಿತುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಅಪ್ಪಾಜಿ’ ಎಂದು ಪ್ರಹ್ಲಾದ ಮುಗ್ಧವಾಗಿ ಉತ್ತರಿಸಿದ.

ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಮೈಎಲ್ಲಾ ಉರಿದುಹೋಯಿತು. ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಗನೇ ತನ್ನ ಪರಮ ಶತ್ರು ಕೃಷ್ಣನ ಭಕ್ತನಾಗಿರುವುದನ್ನು ಅವನಿಂದ ಸಹಿಸಕೊಳ್ಳಲಾಗಲಿಲ್ಲ. ಹಿಂದೆ ಮುಂದೆ ಯೋಚಿಸದೆ ಆತ ತನ್ನ ಮಗನನ್ನು ಕೊಂದು ಹಾಕುವಂತೆ ಸೈನಿಕರಿಗೆ ಆದೇಶಿಸಿದ. ಆದರೆ ಈ ಆದೇಶ ಪಾಲಿಸುವುದು ಸೈನಿಕರಿಗೆ ಸಾಧ್ಯವಾಗಲೇ ಇಲ್ಲ. ಅವನನ್ನು ಆನೆಗಳಿಂದ ತುಳಿಸಲಾಯಿತು, ಬೆಟ್ಟದ ಮೇಲಿಂದ ಎಸೆಯಲಾಯಿತು, ಹರಿತವಾದ ಆಯುಧಗಳಿಂದ ತಿವಿಯಲಾಯಿತು. ಗದೆಯಿ೦ದ ಅಪ್ಪಳಿಸಲಾಯಿತು. ವಿಷ ತಿನ್ನಿಸಲಾಯಿತು.
ಕ್ರೂರವಾಗಿ ಹಿಂಸಿಸಲಾಯಿತು. ಊಹ್ಞೂ… ಪರಮಾಶ್ಚರ್ಯ, ಏನೇ ಮಾಡಿದರೂ ಪ್ರಹ್ಲಾದ ಮಾತ್ರ ಸಾಯಲಿಲ್ಲ. ಆತ ಮೊದಲಿನ ಹಾಗೆಯೇ ನಸುನಗುತ್ತಲೇ ಇದ್ದ. ಈ ಎಲ್ಲ ಸಂದರ್ಭಗಳಲ್ಲೂ ಆತ ನಿರಾಳ ಮತ್ತು ನಿಶ್ಚಿಂತೆಯಿಂದ ಕೃಷ್ಣನನ್ನು ಧ್ಯಾನಿಸುತ್ತಲೇ ಇದ್ದ. ಹೀಗಾಗಿ ಅವನ ಕೂದಲು ಕೊಂಕಿಸುವುದು ಹಿರಣ್ಯಕಶಿಪ್ಪವಿಗೆ ಸಾಧ್ಯವಾಗಲಿಲ್ಲ.
ಇದನ್ನು ನೋಡಿ ಹಿರಣ್ಯಕಶಿಪುವಿಗೆ ಮತ್ತಷ್ಟು ರೇಗಿ ಹೋಯಿತು. ತಾನೇ ಈ ಜಗದ ನಿಯಂತ್ರಕ. ತನಗಿಂತ ಬಲಿಷ್ಠರಾರೂ ಇಲ್ಲಿಲ್ಲ ಎಂಬ ಭ್ರಮೆಯಲ್ಲಿದ್ದ ಅವನಿಗೆ ಪ್ರಹ್ಲಾದನನ್ನು ಸಾಯಿಸುವುದು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ತಿಳಿಯದೇ ತಲೆ ಚಿಟ್ಟುಹಿಡಿದುಹೋಯಿತು.
ನನಗಿಂತ ಬಲಿಷ್ಠರು ಇಲ್ಲಿ ಯಾರಿದ್ದಾರೆ? ನನ್ನ ಮಗನನ್ನು ಕಾಪಾಡುತ್ತಿರುವವರು ಯಾರು? ಇಷ್ಟೆಲ್ಲ ನೋವುಗಳನ್ನು ನಗುನಗುತ್ತ ಸಹಿಸಿಕೊಳ್ಳುವ ಶಕ್ತಿಯನ್ನು ಈ ಪುಟ್ಟ ಬಾಲಕನಲ್ಲಿ ತುಂಬಿದವರು ಯಾರು? ಎಂಬಿತ್ಯಾದಿ ಪ್ರಶ್ನೆಗಳು ಅವನ ನಿದ್ದೆಗೆಡಿಸಿದವು. ಕೊನೆಗೊಮ್ಮೆ ಗಟ್ಟಿ ನಿರ್ಧಾರಕ್ಕೆ ಬಂದ ಆತ, ಮಗನನ್ನು ತನ್ನ ಕೈಯಾರೆ ಕೊಲ್ಲಲು ದೃಢ ನಿಶ್ಚಯಮಾಡಿದ.
ತನ್ನೆದುರು ಮುಗ್ಧನಂತೆ ನಿಂತಿರುವ ಮಗನೆದುರು ಕ್ರೋಧಾವೇಶದಿಂದ ಘರ್ಜಿಸಿದ ಹಿರಣ್ಯಕಶಿಪು ‘ನಿನಗೆ ಇಷ್ಟೊಂದು ತಾಕತ್ತು ಎಲ್ಲಿಂದ ಬಂತು? ನಿನ್ನಲ್ಲಿ ಅಂಥ ಶಕ್ತಿ ತುಂಬಿದವರು ಯಾರು? ಆ ಶಕ್ತಿಯ ಮೂಲ ಯಾವುದು ಹೇಳು?’ ಎಂದು ಅಬ್ಬರಿಸಿದೆ.
‘ಅಪ್ಪಾಜಿ, ನಿನ್ನ ಶಕ್ತಿಯ ಮೂಲವೇ ನನ್ನ ಶಕ್ತಿಯ ಮೂಲ. ಈ ಜಗತ್ತಿನ ಶಕ್ತಿಯ ಮೂಲ. ಅವನೇ ದೇವೋತ್ತಮ ಪರಮ ಪುರುಷ, ಶ್ರೀಕೃಷ್ಣ’ ಎಂದು ಶಾಂತನಾಗಿ ಉತ್ತರಿಸಿದ ಪ್ರಹ್ಲಾದ. ಅಷ್ಟಕ್ಕೆ ನಿಲ್ಲಿಸದೇ ತನ್ನ ತಂದೆಗೆ ನಾಲ್ಕು ಬುದ್ಧಿಮಾತು ಹೇಳಿದ ‘ಪ್ರಿಯ ತಂದೆಯೇ, ಈ ರಾಕ್ಷಸೀ ಪ್ರವೃತ್ತಿಯನ್ನು ನಿಲ್ಲಿಸು.
ನಿನ್ನ ಹೃದಯದಲ್ಲಿರುವ ಮಿತ್ರ-ಶತ್ರು ಎಂಬ ಭೇದ ಭಾವ ಕಿತ್ತೆಸೆ. ಎಲ್ಲರ ಜತೆಗೂ ಸಮನಾಗಿ ವರ್ತಿಸು. ಹದ್ದು ಮೀರಿದ ಮತ್ತು ದಾರಿ ತಪ್ಪಿದವರನ್ನು ಹೊರತು ಪಡಿಸಿದರೆ ಈ ಜಗತ್ತಿನಲ್ಲಿ ಯಾರಿಗೂ ಶತ್ರುಗಳಿಲ್ಲ. ಎಲ್ಲರನ್ನೂ ಸಮಾನತೆಯ ದೃಷ್ಟಿಯಿಂದ ನೋಡಿದಾಗ ನಾವು ಭಗವಂತನಿಗೆ ಪರಿಪೂರ್ಣ ಪೂಜೆ ಸಲ್ಲಿಸಿದಂತಾಗುತ್ತದೆ’ (ಭ 7.8.9) ಎಂದು ಪ್ರಹ್ಲಾದ ನುಡಿದ.
ಈ ಮಾತುಗಳು ಹಿರಣ್ಯಕಶುಪಿನ ಕೋಪವನ್ನು ಮತ್ತಷ್ಟು ಹೆಚ್ಚಿಸಿತೇ ವಿನಃ ಅದರಿಂದ ಕಿಂಚಿತ್ತೂ ಪ್ರಯೋಜನವಾಗಲಿಲ್ಲ. “ಓಹೋ, ನಿನ್ನ ಭಗವಂತನ ಬಗ್ಗೆ ಅಷ್ಟೊಂದು ಕಟ್ಟಿಕೊಂಡೆಯಲ್ಲಿ ಅವರೆಲ್ಲಿದ್ದಾನೆ ತೋರಿಸು ಆರ್ಭಟಿಸಿದ ಹಿರಣ್ಯಕಶಿಪು.

“ಅಪ್ಪಾಜಿ, ಅವನು ಎಲ್ಲೆಲ್ಲೂ ಇದ್ದಾನೆ’ ಎಂದ ಪ್ರಹ್ಲಾದ.
‘ಎಲ್ಲೆಲ್ಲೂ ಇದ್ದನೋ? ಹಾಗಾದರೆ ನನ್ನೆದುರಿನ ಈ ಕಂಬದಲ್ಲೂ ಇದ್ದಾನೋ? ಸುಮ್ಮನೆ ಬಾಯಿಗೆ ಬಂದಂತೆ ಅಸಂಬದ್ಧ ಹರಟಬೇಡ. ನಿನ್ನದು ಅತಿಯಾಯಿತು. ಈಗಲೇ ನಿನ್ನ ತಲೆ ಕತ್ತರಿಸುತ್ತೇನೆ. ಆ ನಿನ್ನ ದೇವೋತ್ತಮ ಪರಮ ಪುರುಷ ಬಂದು ನಿನ್ನನ್ನು ಕಾಪಾಡುತ್ತಾನೆಯೋ ನೋಡೋಣ’ (ಭ. 7.8.12-13) ಎಂದು ಅಬ್ಬರಿಸಿದ ಹಿರಣ್ಯಕಶಿಪು ಪ್ರಹ್ಲಾದನ ಶಿರಚ್ಛೇದನ ಮಾಡಲು ಮುಂದಾದ.
ಕೋಪೋದ್ರಿಕ್ತನಾದ ಹಿರಣ್ಯಕಶಿಪು ಮೊದಲು ತನ್ನೆದುರಿದ್ದ ಅಮೃತ ಶಿಲೆಯ ಕಂಬಕ್ಕೆ ಮುಷ್ಟಿಯಿಂದ ಬಲವಾಗಿ ಗುದ್ದಿದ. ಹೇಳಿಕೇಳಿ ಹಿರಣ್ಯಕಶಿಪು ಮಹಾನ್ ಶಕ್ತಿಶಾಲಿ, ಅವನು ಕಂಬಕ್ಕೆ ಗುದ್ದುತ್ತಿದ್ದಂತೆ ಬರಸಿಡಿಲು ಅಪ್ಪಳಿಸಿದಂತೆ ಶಬ್ದವಾಯಿತು. ಆ ಸದ್ದಿಗೆ ಇಡೀ ಜಗತ್ತು ಒಮ್ಮೆಲೆ ಬೆಚ್ಚಿ ಬಿತ್ತು. ಭಯಂಕರ ಸದ್ದಿನೊಂದಿ ಆ ಕಂಬ ಸಿಡಿದು ಚೂರಾಯಿತು.
ಅದರೊಳಗಿಂದ ಒಂದು ವಿಚಿತ್ರ ಆಕೃತಿ ಹೊರ ಬಂತು. ಸಿಂಹದ ತಲೆ, ಪಂಜಗಳು, ಮನುಷ್ಯನ ಶರೀರ ಹೊಂದಿದ್ದ ನರಸಿಂಹ ಹಿರಣ್ಯಕಶಿಪುವಿನ ಆಸ್ಥಾನದಲ್ಲಿ ಬೃಹದಾಕಾರದ ದೇಹ ಹೊತ್ತು ನಿಂತಿದ್ದು ನೋಡನೋಡುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ನರಸಿಂಹನ ದಿವ್ಯ ರೂಪ ತುಂಬಿಕೊಂಡಿತ್ತು.
ನರಸಿಂಹನ ಕಣ್ಣುಗಳು ಕೋಪದಿಂದ ಕುದಿಯುತ್ತಿದ್ದವು. ಭಕ್ತ ಪ್ರಹ್ಲಾದನ ವಿರುದ್ಧ ಹಿರಣ್ಯಕಶಿಪು ಎಸಗಿದ ಕೌರ್ಯವನ್ನು ನೋಡಿ ನೋಡಿ ನರಸಿಂಹನ ಸಹನೆ ಮಿತಿಮೀರಿತ್ತು. ನರಸಿಂಹನ ಉರಿಗಣ್ಣುಗಳು ಸಭಾಂಗಣದಲ್ಲಿದ್ದ ಜನರ ಗುಂಪಿನ ಮಧ್ಯೆ ತನ್ನ ಕೋಪಕ್ಕೆ ಕಾರಣವಾದ ಆ ದುರುಳನನ್ನು ಹುಡುಕಾಡಿದವು.
ಇತ್ತ ಹಿರಣ್ಯಕಶಿಪುವಿನ ಮೂರ್ಖತನವೂ ಮೇರೆ ಮೀರಿತ್ತು. ತನ್ನೆಲ್ಲ ವಿರೋಧಿಗಳನ್ನು ಮಟ್ಟಹಾಕಿದಂತೆ ಈ ನರಸಿಂಹನನ್ನೂ ಸಂಹರಿಸಬಲ್ಲೆನೆಂಬ ಹುಂಬತನದಿಂದ ಆತ ಮುನ್ನುಗ್ಗಿದ. ನರಸಿಂಹನ ವಿರುದ್ಧ ಭಯಂಕರವಾಗಿ ಕಾದಾಡಿದ. ನರಸಿಂಹನು ಬೇಕೆಂದೆ ಒಂದಿಷ್ಟು ಹೊತ್ತು ಹಿರಣ್ಯಕಶಿಪುವಿನ ಜತೆ ಹೋರಾಡಿದ.
ಹಿರಣ್ಯಕಶಿಪು ಜಗತ್ತಿನ ಅತ್ಯಂತ ಬಲಶಾಲಿ ಎನಿಸಿಕೊಂಡಿದ್ದರೂ ನರಸಿಂಹನ ಪಾಲಿಗೆ ಅವನೊಂದು ಆಟಿಕೆಯಾಗಿದ್ದ. ದೇವಾನುದೇವತಗಳೆಲ್ಲಾ ಈ ಕಾಳಗವನ್ನು ಕುತೂಹಲದಿಂದ ನೋಡುತ್ತಿರುವಂತೆಯೇ ನರಸಿಂಹ ತನ್ನ ಯುದ್ಧಕೌಶಲ್ಯ ಪ್ರದರ್ಶಿಸಿದ ಮತ್ತೊಂದು ದಿವ್ಯ ಲೀಲೆಯನ್ನು ಜಗತ್ತಿಗೆ ತೋರಿಸಿದ. ಹಿರಣ್ಯಕಶಿಪುವನ್ನು ಅನಾಮತ್ತಾಗಿ ಮೇಲೆತ್ತಿದ ನರಸಿಂಹ. ತನ್ನ ತೊಡೆ ಮೇಲೆ ಮಲಗಿಸಿಕೊಂಡ. ತನ್ನ ಚೂಪಾದ ಉಗುರುಗಳಿ೦ದ ಆ ಕ್ರೂರ ರಾಕ್ಷಸನ ಹೊಟ್ಟೆ ಬಗೆದು ಹಾಕಿದ.
ಹೀಗೆ ನರಸಿಂಹನ ರೂಪದಲ್ಲಿ ಅವತರಿಸಿದ ದೇವೋತ್ತಮ ಪರಮ ಪುರುಷ ತನ್ನ ಅಸಾಧಾರಣ ಶಕ್ತಿಯಿಂದ ಲೋಕಕಂಟಕನಾಗಿದ್ದ ಹಿರಣ್ಯಕಶಿಪುವನ್ನು ಸಂಹರಿಸಿದ. ಅದರ ಜತೆಗೆ ಬ್ರಹ್ಮ ಅವನಿಗೆ ನೀಡಿದ್ದ ವರ ಸುಳ್ಳಾಗದಂತೆಯೂ ನೋಡಿಕೊಂಡ.

ಬ್ರಹ್ಮನೀಡಿದ ವರದಂತೆ ಹಿರಣ್ಯಕಶಿಪು ಮನುಷ್ಯ ಅಥವಾ ಪ್ರಾಣಿಯಿಂದ ಸಾಯಲಿಲ್ಲ. ಅವರನ್ನು ಕೊಂದಿದ್ದು ಅರ್ಥ ಪ್ರಾಣಿ; ಇನ್ನರ್ಧ ಸಿಂಹದ ದೇಹ ಹೊಂದಿದ ನರಸಿಂಹ! ಹಾಗೆಯೇ ಅವನು ಆಕಾಶದಲ್ಲೋ, ನೆಲದಲ್ಲೋ ಸಾಯಲಿಲ್ಲ. ಸತ್ತಿದ್ದು ನರಸಿಂಹನ ತೊಡೆ ಮೇಲೆ! ಹಾಗೆಯೇ ನರಸಿಂಹ ಅವನನ್ನು ಕೊಂದಿದ್ದು ಸಭಾಂಗಣದ ಹೊಸ್ತಿಲ ಮೇಲೆ.
ಅದು ಅರಮನೆಯ ಹೊರಗೂ ಅಲ್ಲ ಒಳಗೂ ಅಲ್ಲಲ್ಲಿ ಹಿರಣ್ಯಕಶಿಪು ಸತ್ತಿದ್ದು ಮುಸ್ಸಂಜೆ ಹೊತ್ತಿನಲ್ಲಿ, ಅದು ಹಗಲೂ ಅಲ್ಲ ರಾತ್ರಿಯೂ ಅಲ್ಲ. ನರಸಿಂಹ ಅವನ ಮೇಲೆ ದಾಳಿ ಮಾಡಿದ್ದು ಯಾವುದೇ ಆಯುಧದಿಂದಲ್ಲ, ಉಗುರಿನಿಂದ!! ಹಿರಣ್ಯಕಶಿಪ್ಪನಿಗೆ ಬ್ರಹ್ಮ ನೀಡಿದ ವರಗಳನ್ನು ಕಾಪಾಡಬೇಕಾದ ಅವಶ್ಯಕತೆ ಕೃಷ್ಣನಿಗಿರಲಿಲ್ಲ. ಆದರೂ ಬ್ರಹ್ಮ ತನ್ನ ಪರಮ ಭಕ್ತನಾಗಿದ್ದರಿಂದ ಕೃಷ್ಣ ಹಾಗೆ ಮಾಡಿದ. ತನ್ನ ಪರಮ ಭಕ್ತರು ನೀಡಿದ ವಾಗ್ದಾನವನ್ನು ಕಾಪಾಡುವುದೆಂದರೆ ಕೃಷ್ಣನಿಗೆ ಎಲ್ಲಿಲ್ಲದ ಪ್ರೀತಿ, ಉತ್ಸಾಹ.
ಹಿರಣ್ಯಕಪುವನ್ನು ಸಂಹರಿಸಿದ ಏಷ್ಟೋ ಹೊತ್ತಿನ ನಂತರವೂ ನರಸಿಂಹ ಕೋಪದಿಂದ ಘರ್ಜಿಸುತ್ತಲೇ ಇದ್ದ. ಇನ್ನೂ ಕ್ರೋಧದಿಂದ ಭುಸುಗುಡುತ್ತಲೇ ಇದ್ದ. ಇದನ್ನು ಕಂಡು ಸುತ್ತಮುತ್ತಲಿದ್ದ ಕೆಲವರು ಭಯಭೀತರಾದರು. ಆದರೆ ಪ್ರಹ್ಲಾದನಿಗೆ ಮಾತ್ರ ಒಂದಿಷ್ಟೂ ಭಯವಾಗಲಿಲ್ಲ.
ಉಳಿದವರ ಕಣ್ಣಿಗೆ ಭಯಂಕರವಾಗಿ ಕಾಣಿಸುತ್ತಿದ್ದ ನರಸಿಂಹ ಅವನ ಕಣ್ಣಿಗೆ ಮಾತ್ರ ತನ್ನ ಪರಮ ಆರಾಧ್ಯ ದೈವ ಶ್ರೀಕೃಷ್ಣನಂತೆಯೇ ಕಂಡಿದ್ದ. ಕೈಯಲ್ಲಿ ಹೂಮಾಲೆ ಹಿಡಿದ ಪ್ರಹ್ಲಾದ ನಿಧಾನವಾಗಿ ನರಸಿಂಹನನ್ನು ಸಮೀಪಿಸಿದ. ತನ್ನ ಭಕ್ತ ಪ್ರಹ್ಲಾದನನ್ನು ಕಂಡು ನರಸಿಂಹನಿಗೂ ಸಮಾಧಾನವಾಯಿತು. ಪ್ರಹ್ಲಾದ ಆ ಹೂಮಾಲೆಯನ್ನು ಅತ್ಯಂತ ಭಕ್ತಿ, ವಿನಯಪೂರ್ವಕವಾಗಿ ಪ್ರಹ್ಲಾದನ ಕೊರಳಿಗೆ ಹಾಕಿದ. ಅತ್ಯಂತ ಸಂತೃಪ್ತನಾದ ನರಸಿಂಹ “ಏನು ವರ ಬೇಕಾದರೂ ಕೇಳು’ ಎಂದು ಪ್ರಹ್ಲಾದನಿಗೆ ಸೂಚಿಸಿದ.
ಆದರೆ ಪ್ರಹ್ಲಾದ ಮಾತ್ರ ಇದರಿಂದ ವಿಚಲಿತನಾಗಲಿಲ್ಲ. ‘ಪ್ರಭು, ನನಗೆ ನಿನ್ನ ಕುರಿತು ತಪಸ್ಸು ಮಾಡುವುದರಲ್ಲೇ ಸಂಪೂರ್ಣ ತೃಪ್ತಿ ಇದೆ. ಆದರೂ ನನ್ನ ತಂದೆ ಮೇಲಿನ ಅನುಕಂಪದಿಂದಾಗಿ, ಅವನ ಒಳಿತಿಗಾಗಿ ಕೇಳುತ್ತಿದ್ದೇನೆ. ತಂದೆ ಹಿರಣ್ಯಕಶಿಪುವನ್ನು ಅವನ ದುರಾಚಾರಗಳ ಪಾಪಕೂಪದಿಂದ ರಕ್ಷಿಸು’ ಎಂದು ನರಸಿಂಹನನ್ನು ಅವನು ಕೇಳಿಕೊಂಡ.
ಅದಕ್ಕೆ ನರಸಿಂಹನು, ‘ಪ್ರಿಯ ಪ್ರಹ್ಲಾದ, ಓ ನನ್ನ ಶುದ್ಧ ಭಕ್ತನೇ, ಓ ಸಂತ ಸತ್ಪುರುಷನೇ, ನಿನ್ನ ತಂದೆಯು ನಿನ್ನ ಕುಟುಂಬದ ಇತರೆ 24 ಮಂದಿ ಪೂರ್ವಿಕರ ಜತೆ ಸದ್ಗತಿ ಪಡೆದಿದ್ದಾನೆ. ಅವನ ಪಾಪಗಳೆಲ್ಲವೂ ನಾಶವಾಗಿ ಅವನು ಪುನೀತನಾಗಿದ್ದಾನೆ. ನೀನು ಹುಟ್ಟಿದ್ದರಿಂದ ನಿಮ್ಮ ಇಡೀ ವಂಶ ಉದ್ಧಾರವಾಗಿದೆ.
ಎಲ್ಲಿಯೇ ಆಗಲಿ, ಯಾವ ಕಾಲದಲ್ಲೇ ಆಗಲಿ ಒಬ್ಬ ಸತ್ಪುರುಷ, ಸದ್ಗುಣ ಸಂಪನ್ನನಾದ ಶುದ್ಧ ಭಕ್ತ ಹುಟ್ಟಿದರೆ ಅವನಿದ್ದ ಸ್ಥಳ, ಅವನ ವಂಶ ಅವನಿಂದ ಪಾಪ ವಿಮೋಚನೆಗೊಳ್ಳುತ್ತದೆ. ಆ ವಂಶದಲ್ಲಿ ಅತ್ಯಂತ ಹೀನ ಅಪರಾಧಿಗಳಿದ್ದರೂ ಕೂಡ, ಅವರೂ ಪುನೀತರಾಗುತ್ತಾರೆ. ಅವರಿಗೂ ಸದ್ಗತಿ ಪ್ರಾಪ್ತವಾಗುತ್ತದೆ’ (ಭ. 7.10.18-19) ಎಂದು ನರಸಿಂಹ ವಿವರಿಸಿದ.
ಇಂದಿನ ಐಹಿಕ ಸಮಾಜದಲ್ಲೂ ನಾಸ್ತಿಕರು ಮತ್ತು ಆಸ್ತಿಕರ ಮಧ್ಯೆ ನಿರಂತರ ಸಮರ ನಡೆಯುತ್ತಲೇ ಇದೆ. ಐಹಿಕವಾದ ಕೀಳು ಅಭಿರುಚಿಗಳಿಂದ ಸಮಾಜ ಕಲುಷಿತಗೊಳ್ಳುವುದರ ವಿರುದ್ಧ ಮತ್ತು ಆ ರೀತಿ ಸಮಾಜವನ್ನು ಕಲುಷಿತಗೊಳಿಸುವವರ ವಿರುದ್ಧ ಶುದ್ಧ ಭಕ್ತರು ನಿರಂತರ ಹೋರಾಟ ಮುಂದುವರಿಸಬೇಕು.

ನಾಸ್ತಿಕರಿಂದ ಕಲುಷಿತಗೊಂಡಿರುವ ಈ ಸಮಾಜದಲ್ಲಿ ತಮ್ಮ ಅಮೋಘ ಸೇವೆ ಮತ್ತು ಶುದ್ಧ ಭಕ್ತಿಯ ಮೂಲಕ ಕೃಷ್ಣಪ್ರಜ್ಞೆ ಜಾಗೃತಗೊಳಿಸುವ ಕೆಲಸದಲ್ಲಿ ನಿರತರಾದವರ ಮೇಲೆ ನರಸಿಂಹನ ಕರುಣೆ ಸದಾ ಇದ್ದೇ ಇರುತ್ತದೆ. ನಂಬಿಕಸ್ಥ ಮತ್ತು ಶುದ್ಧ ಭಕ್ತರಿಗೆ ನರಸಿಂಹ ಸದಾ ಆಶ್ರಯ ನೀಡುತ್ತಾನೆ. ಯಾವುದೇ ಸಮಯದಲ್ಲಿ ಅಪಾಯ ಎದುರಾದರೂ ಭಕ್ತರು ನರಸಿಂಹನನ್ನು ಧ್ಯಾನಿಸಬೇಕು. ಈ ಮಂತ್ರವನ್ನು ಜಪಿಸಬೇಕು;
ತವ ಕರಕಮಲ ವಾರೆ ನಖಂ ಅದ್ಭುತ ಶೃಂಗಂ
ದಲಿತ ಹಿರಣ್ಯಕಶಿಪು ತನು ಭೃಂಗಂ
ಕೇಶವ ಧೃತ ನರಹರಿ ರೂಪ ಜಯಜಗದೀಶ ಹರೇ
“ಓ ಕೇಶವಾ, ಓ ಜಗದೊಡೆಯಾ, ಓ ಹರಿ, ಅರ್ಧ ನರ, ಅರ್ಧ ಸಿಂಹದ ಅವತಾರ ಎತ್ತಿದವನೇ, ನಿನಗೆ ವಂದನೆ. ನಾವು ಎರಡು ಬೆರಳುಗಳ ಮಧ್ಯೆ ಹುಳುವನ್ನು ಹೊಸಕಿ ಹಾಕುವಂತೆ, ನೀನು ಹಿರಣ್ಯಕಶಿಪುವಿನ ದೈತ್ಯ ದೇಹವನ್ನು ನಿನ್ನ ಅದ್ಭುತ ಕರಕಮಲಗಳ ಉಗುರುಗಳಿಂದ ಹೊಸಕಿ ಹಾಕಿದೆ!’






Leave a Reply