ತಮಿಳುನಾಡಿನ ಸೇಲಂಗೆ 52 ಕಿ.ಮೀ. ದೂರದಲ್ಲಿದೆ ನಾಮಕ್ಕಲ್. (ಬೆಂಗಳೂರಿನಿಂದ 250 ಕಿ.ಮೀ.) ನಾಮಕ್ಕಲ್ ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಅದರ ಹೃದಯ ಭಾಗದಲ್ಲಿ ಸುಂದರ ಪರ್ವತವನ್ನು ನೋಡಬಹುದು. ಪರ್ವತದ ಸುತ್ತಲಿನ ಈ ನಗರ ದಿಟವಾಗಿಯೂ ಅದ್ಭುತ. ಬಹುಶಃ ಬೇರೆ ಎಲ್ಲಿಯೂ ಇಂತಹ ನಗರ ಇರಲಾರದು. ನಗರದ ಮಧ್ಯದಲ್ಲಿ ಪರ್ವತ ಇರುವುದು ಹೇಗೆ ಸಾಧ್ಯ ಎಂದು ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಯಾರು ಅದನ್ನು ಅಲ್ಲಿರಿಸಿದರು? ಪರ್ವತದ ಸುತ್ತ ನಗರವನ್ನು ನಿರ್ಮಿಸುವ ಅಗತ್ಯವಾದರೂ ಏನಿತ್ತು? ಇದಕ್ಕೆಲ್ಲ ತ್ರೇತಾ ಯುಗದ ಅಂತ್ಯದಲ್ಲಿನ ಭಗವಂತನ ಲೀಲೆಯೇ ಉತ್ತರ.
ನರಸಿಂಹ ಅವತಾರ ದರ್ಶನ – ಲಕ್ಷ್ಮಿಯ ಕೋರಿಕೆ
ಸತ್ಯ ಯುಗದಲ್ಲಿ ಭಕ್ತ ಪ್ರಹ್ಲಾದನನ್ನು ಅವನ ತಂದೆ ಹಿರಣ್ಯಕಶಿಪು ಹಿಂಸಿಸುತ್ತಿದ್ದಾಗ ಶ್ರೀ ವಿಷ್ಣು ತನ್ನ ಭಕ್ತನ ರಕ್ಷಣೆಗೆ ಧಾವಿಸಬೇಕಾಯಿತು. ತುರ್ತಾಗಿ ಬಂದ ಕಾರಣ ಪ್ರಭುವು ತನ್ನೊಂದಿಗೆ ಲಕ್ಷ್ಮೀದೇವಿ ಮತ್ತು ಗರುಡನನ್ನು ಕರೆತರಲಿಲ್ಲ. ಹೀಗಾಗಿ ಲಕ್ಷ್ಮಿಯು ಶ್ರೀ ವಿಷ್ಣುವಿನ ಬಳಿ ಹೋಗಿ ನರಸಿಂಹ ಅವತಾರದ ಲೀಲೆಗಳನ್ನು ನೋಡುವ ಅವಕಾಶ ಕಲ್ಪಿಸಬೇಕೆಂದು ಕೋರಿದಳು. ಅವಳ ಇಚ್ಛೆಯನ್ನು ಪೂರೈಸುವುದಾಗಿ ನುಡಿದ ಪ್ರಭುವು ಅವಳಿಗೆ ಈ ಪ್ರದೇಶದ (ನಾಮಕ್ಕಲ್) ಪವಿತ್ರ ಕಮಲಾಲಯ ಸರೋವರಕ್ಕೆ ಹೋಗಿ ಅದರ ದಡದಲ್ಲಿ ತಪಸ್ಸು ಮಾಡಲು ಸೂಚಿಸಿದ. ತಪಸ್ಸು ಮಾಡುವಾಗ “ಓಂ ನಮೋ ನಾರಾಯಣಾಯ” ಮಂತ್ರವನ್ನು ಜಪಿಸಲು ತಿಳಿಸಿದ.
ಮುಂದೆ, ತ್ರೇತಾಯುಗದ ಕೊನೆಯಲ್ಲಿ ಶ್ರೀ ಆಂಜನೇಯನು ಶ್ರೀ ರಾಮಚಂದ್ರನ ತಮ್ಮ ಲಕ್ಷ್ಮಣನನ್ನು ಕಾಪಾಡಲು ಸಂಜೀವಿನಿ ಪರ್ವತವನ್ನು ಲಂಕೆಗೆ ಹೊತ್ತು ತಂದನು. ಲಕ್ಷ್ಮಣನಿಗೆ ಪ್ರಜ್ಞೆ ಬಂದಮೇಲೆ ಹನುಮಂತನು ಸಂಜೀವಿನಿ ಪರ್ವತವನ್ನು ಪುನಃ ಹಿಮಾಲಯದಲ್ಲಿಟ್ಟು ಗಂಡಕಿ ನದಿಯಲ್ಲಿ ಸ್ನಾನ ಮಾಡಲು ಹೋದ. ಅಲ್ಲಿ ಅವನಿಗೆ ಸಾಲಿಗ್ರಾಮ ಶಿಲೆಯೊಂದು ದೊರೆಯಿತು. ಅವನು ಅದನ್ನು ಲಂಕೆಗೆ ಮರಳುವಾಗ ತನ್ನಲ್ಲಿಯೇ ಇರಿಸಿಕೊಂಡ.
ಈ ಪ್ರದೇಶದಲ್ಲಿ ಹನುಮಂತನು ಹಾರುತ್ತಿದ್ದಾಗ ಸಂಧ್ಯಾವಂದನೆಯ ಸಮಯವಾಯಿತು. ಆದುದರಿಂದ ಅವನು ಇಲ್ಲಿ ಇಳಿದ. ಅವನು ಕಮಲಾಲಯ ಸರೋವರದ ದಡಕ್ಕೆ ಬಂದು ಯಾರಾದರೂ ಕಾಣಬಹುದೇ ಎಂದು ಸುತ್ತಮುತ್ತ ಕಣ್ಣಾಡಿಸಿದ. ಪವಿತ್ರವಾದ ಸಾಲಿಗ್ರಾಮ ಶಿಲೆಯನ್ನು ಕೆಳಗಿಡುವಂತಿರಲಿಲ್ಲ. ಆದುದರಿಂದ ಅದನ್ನು ಯಾರ ಬಳಿಯಾದರೂ ಇಡುವುದು ಅವನ ಉದ್ದೇಶವಾಗಿತ್ತು. ಆಗ ಅವನು ತಪಸ್ಸು ಕೈಗೊಳ್ಳುತ್ತಿದ್ದ ಲಕ್ಷ್ಮಿಯನ್ನು ಕಂಡ. ತಾನು ಸಂಧ್ಯಾವಂದನೆ ಮಾಡುವವರೆಗೂ ಸಾಲಿಗ್ರಾಮವನ್ನು ಇಟ್ಟುಕೊಂಡಿರಲು ಅವಳನ್ನು ಕೋರಿ ಅವಳಿಗೆ ಅದನ್ನು ಕೊಟ್ಟ.
ಆದರೆ ಸಾಲಿಗ್ರಾಮ ಶಿಲೆಯು ಬೆಳೆಯುತ್ತಾ ಹೋಗಿ, ಲಕ್ಷ್ಮಿಗೆ ಅದು ತುಂಬ ಭಾರವಾಯಿತು. ಅವಳು ಅದನ್ನು ಕೆಳಗೆ ಇಟ್ಟುಬಿಟ್ಟಳು, ಮತ್ತು ಅದು ದೊಡ್ಡ ಪರ್ವತವಾಗಿ ಬೆಳೆಯಿತು. ಹನುಮಂತನು ವಾಪಸು ಬಂದಾಗ ಬೃಹತ್ ಪರ್ವತವನ್ನು ಕಂಡು ಚಕಿತನಾದ. ಅದು ಮೊದಲು ಅಲ್ಲಿರಲಿಲ್ಲವಲ್ಲ ಎಂದು ಯೋಚಿಸಿದ. ಮಾತೆ ಲಕ್ಷ್ಮೀ ದೇವಿಯು ಇಡೀ ಘಟನೆಯನ್ನು ವಿವರಿಸಿದಳು. ಈ ಪರ್ವತವನ್ನು ಎತ್ತಲು ಅವಳು ಹನುಮಂತನಿಗೆ ಹೇಳಿದಳು. ಸಂಜೀವಿನಿ ಪರ್ವತವನ್ನೇ ಎತ್ತಿದ್ದ ಹನುಮಂತನಿಗೆ ಇದು ಕಷ್ಟವಾಗಲಾರದು ಎಂದು ಅವಳು ಹೇಳಿದಳು. ಅವನು ತನ್ನ ಬಾಲವನ್ನು ಶಿಲೆಯ ಸುತ್ತ ಹಾಕಿದನು. ಆದರೆ ಅದು ಒಂದು ಅಂಗುಲವೂ ಕದಲಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಅವನಿಂದ ಶಿಲೆಯನ್ನು ಕದಲಿಸಲಾಗಲಿಲ್ಲ.
ಆಗ, ಇದ್ದಕ್ಕಿದಂತೆಯೇ ಪರ್ವತದ ಮೇಲ್ಭಾಗದಲ್ಲಿ ಪ್ರಜ್ವಲ ಬೆಳಕು ಕಂಡಿತು. ಅದು ಶ್ರೀ ನರಸಿಂಹನ ಅಲೌಕಿಕ ಶರೀರದಿಂದ ಹೊರಹೊಮ್ಮುತ್ತಿದ್ದ ಕಾಂತಿ. ಲಕ್ಷ್ಮೀ ದೇವಿ ಮತ್ತು ಹನುಮಂತರ ಅಪೇಕ್ಷೆಯಂತೆ ಪ್ರಭುವು ದರ್ಶನ ನೀಡಲು ಅಲ್ಲಿ ಪ್ರತ್ಯಕ್ಷನಾಗಿದ್ದ.
ಲಕ್ಷ್ಮೀ ದೇವಿಯು ಈ ಪರ್ವತದ ಬಳಿ ಭಗವಂತನ ಪವಿತ್ರ ನಾಮವನ್ನು ಜಪಿಸಿದ್ದರಿಂದ ಪ್ರಭುವು ಇದಕ್ಕೆ ನಾಮಗಿರಿ ಎಂದು ನಾಮಕರಣ ಮಾಡಿದ. `ನಾಮ’ ಎಂದರೆ ಭಗವಂತನ ಪವಿತ್ರ ನಾಮ ಮತ್ತು `ಗಿರಿ’ ಎಂದರೆ ಬೆಟ್ಟ. ಅನಂತರ ಈ ಪ್ರದೇಶವು ನಾಮಕ್ಕಲ್ ಎಂದು ಪ್ರಸಿದ್ಧಿಯಾಯಿತು. ತಮಿಳು ಭಾಷೆಯಲ್ಲಿ `ಕಲ್’ ಎಂದರೆ ಕಲ್ಲು. ಶ್ರೀ ನರಸಿಂಹನು ಲಕ್ಷ್ಮೀ ದೇವಿಯನ್ನು ನಾಮಗಿರಿ ತಾಯಾರ್ ಅಥವಾ ನಾಮಕೀರ್ತಿ ತಾಯಾರ್ ಎಂಬ ಹೆಸರು ಕೊಟ್ಟು ಆಶೀರ್ವದಿಸಿದ. ಇಂದಿಗೂ ಕೂಡ ಭಕ್ತರು ಮೊದಲು ನಾಮಗಿರಿ ತಾಯಾರ್ ದರ್ಶನ ಮಾಡಿ ಶ್ರೀ ನರಸಿಂಹನ ದರ್ಶನಕ್ಕೆ ತೆರಳುವರು.
ಶ್ರೀ ನರಸಿಂಹನು ಹನುಮಂತನನ್ನು ರಾಮಚಂದ್ರನಿಗೆ ಲಂಕೆಯಲ್ಲಿ ನೆರವಾಗಿ, ಅನಂತರ ನಾಮಕ್ಕಲ್‌ಗೆ ಬಂದು ತನ್ನನ್ನು ಪೂಜಿಸಲು ಸೂಚಿಸಿದ.
ನಾಮಕ್ಕಲ್ ಗುಹೆ ಮಂದಿರಗಳು
ನಾಮಕ್ಕಲ್‌ನಲ್ಲಿ ಮೂರು ಮುಖ್ಯ ಮಂದಿರಗಳಿವೆ. ಶ್ರೀ ಲಕ್ಷ್ಮೀ ನರಸಿಂಹ, ಶ್ರೀ ರಂಗನಾಥ ಮತ್ತು ಶ್ರೀ ಆಂಜನೇಯ ದೇವಸ್ಥಾನಗಳು. ಮೂಲತಃ ಆದಿಯಮನರು ಈ ಮಂದಿರಗಳನ್ನು 7ನೆಯ ಶತಮಾನದಲ್ಲಿ ನಿರ್ಮಿಸಿದರೆಂದು ನಂಬಲಾಗಿದೆ. ಅನಂತರ ಪಲ್ಲವರು ಮತ್ತು ಮದುರೈ ನಾಯಕರು 13ನೆಯ ಶತಮಾನದಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಿದರು. ಈ ಮಂದಿರಗಳು ಸುಂದರವಾಗಿ ಕೆತ್ತಿದ ಕಂಬಗಳ ಅಲಂಕೃತ ಮಂಟಪಗಳನ್ನು ಹೊಂದಿವೆ. ನಾಮಗಿರಿ ಪರ್ವತದ ಮೇಲೆ ನಾಮಕ್ಕಲ್ ಕೋಟೆ ಇದೆ.
ಶ್ರೀ ಲಕ್ಷ್ಮೀ ನರಸಿಂಹ ಮಂದಿರ
ನಾಮಗಿರಿಯ ಪಶ್ಚಿಮಕ್ಕೆ, ಬೆಟ್ಟದ ಬುಡದಲ್ಲಿಯೇ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಇದೇ ಮಂದಿರದ ಸಮುಚ್ಚಯದಲ್ಲಿ ಮೂರು ದೇವಾಲಯಗಳಿವೆ. ಮಧ್ಯದಲ್ಲಿ ಶ್ರೀ ನರಸಿಂಹ, ಅದರ ಎಡಕ್ಕೆ ನಾಮಗಿರಿ ತಾಯಾರ್ ಮತ್ತು ಬಲಕ್ಕೆ ಶ್ರೀ ಲಕ್ಷ್ಮೀ ನಾರಾಯಣ ಮಂದಿರಗಳಿವೆ. ಸದಾ ಶ್ರೀ ನರಸಿಂಹನ ದರ್ಶನ ಮಾಡಲು ಲಕ್ಷ್ಮೀ ತಾಯಾರ್ ಪೂರ್ವಕ್ಕೆ, ಭಗವಂತನ ಕಡೆಗೆ ಮುಖ ಮಾಡಿದ್ದಾಳೆ. ಅವಳು ಕಮಲದ ಪುಷ್ಪದ ಮೇಲೆ ಆಸೀನಳಾಗಿದ್ದು ತನ್ನ ಸುಂದರ ಕರಗಳಲ್ಲಿ ಕಮಲದ ಹೂವು ಹಿಡಿದಿದ್ದಾಳೆ. ಇವಳನ್ನು ಪೂಜಿಸಿದವರು ಗಣಿತದಲ್ಲಿ ಪರಿಣತರಾಗುವರೆಂದು ಹೇಳಲಾಗಿದೆ.
ಶ್ರೀ ನರಸಿಂಹ ಮಂದಿರದಲ್ಲಿ, ಪ್ರಭುವು ವೀರಾಸನದಲ್ಲಿ ವಿಜೃಂಭಿಸಿದ್ದಾನೆ. ಅವನ ಅಂಗೈಯಲ್ಲಿ ಹಿರಣ್ಯಕಶಿಪುವಿನ ರಕ್ತದ ಕಲೆಗಳಿವೆ. ಹಿರಣ್ಯಕಶಿಪುವನ್ನು ಕೊಲ್ಲಲು ಬಳಸಿದ್ದ ಅವನ ಉಗುರುಗಳು ಚೂಪಾಗಿವೆ. ತನ್ನ ಮೇಲಿನ ಎರಡು ಕೈಗಳಲ್ಲಿ ಅವನು ಸುದರ್ಶನ ಮತ್ತು ಪಾಂಚಜನ್ಯವನ್ನು ಹಿಡಿದುಕೊಂಡಿದ್ದಾನೆ. ಪಾಪಿಗಳನ್ನು ಶಿಕ್ಷಿಸಲು ಅವನ ಬಳಿ ದಂಡವೂ ಇದೆ. ಅವನ ಹಿಂದೆ ಚಾಮರಗಳನ್ನು ಹಿಡಿದ ಸನಕ, ಸನಂದನ, ಸೂರ್ಯದೇವ ಮತ್ತು ಚಂದ್ರದೇವ ಇದ್ದಾರೆ. ಶ್ರೀ ನರಸಿಂಹನ ಬಲ ಭಾಗದಲ್ಲಿ ಶಿವ ಮತ್ತು ಎಡ ಭಾಗದಲ್ಲಿ ಬ್ರಹ್ಮ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆದುದರಿಂದ ಇದನ್ನು ತ್ರಿಮೂರ್ತಿ ಸ್ಥಳವೆಂದೂ ಕರೆಯುತ್ತಾರೆ. ಗರ್ಭಗುಡಿಯ ಒಳಗಿನ ಗೋಡೆಗಳ ಮೇಲೆ ಶ್ರೀ ವೈಕುಂಠ ನಾರಾಯಣ, ಶ್ರೀ ಉಗ್ರ ನರಸಿಂಹ, ಶ್ರೀ ವರಾಹ ಮತ್ತು ಶ್ರೀ ವಾಮನನ ದರ್ಶನವನ್ನೂ ಮಾಡಬಹುದು. ಅಚ್ಚರಿಯ ವಿಷಯವೆಂದರೆ ಈ ದೇವಸ್ಥಾನದ ಮೇಲೆ ಗೋಪುರವಿಲ್ಲ. ಏಕೆಂದರೆ ದೇವರು ಇಲ್ಲಿ ಗುಹೆಯಲ್ಲಿದ್ದಾನೆ. ಅಂತಹ ಬೃಹತ್ ಸಾಲಿಗ್ರಾಮ ಪರ್ವತಕ್ಕೆ ಗೋಪುರವನ್ನು ನಿರ್ಮಿಸುವುದು ಸಾಧ್ಯವಾಗಲಿಲ್ಲ.
ಶ್ರೀ ಆಂಜನೇಯ ದೇವಸ್ಥಾನ
ಶ್ರೀ ನರಸಿಂಹ ಮಂದಿರದ ಎದುರಿಗೆ ಇರುವುದೇ ಶ್ರೀ ಆಂಜನೇಯ ದೇವಾಲಯ. ಇಲ್ಲಿಗೆ ಬರಲು ಒಂದಷ್ಟು ನಡೆಯಬೇಕು. ಹನುಮಾನ್ ಮೂರ್ತಿಯು 18 ಅಡಿ ಎತ್ತರವಿದೆ ಮತ್ತು ಅವನ ದೃಷ್ಟಿ ಸದಾ ಶ್ರೀ ನರಸಿಂಹನ ಪಾದದತ್ತಲೇ ಇರುತ್ತದೆ. ಶ್ರೀ ನರಸಿಂಹ ಮಂದಿರದ ಮುಂದಿನ ಗರುಡ ಕಂಬದಲ್ಲಿನ ರಂಧ್ರದ ಮೂಲಕ ಆಂಜನೇಯನು ಪ್ರಭುವಿನ ಪಾದಗಳತ್ತ ದೃಷ್ಟಿ ಇರಿಸಿದ್ದಾನೆ. ಆಂಜನೇಯನು ಬಯಲಿನಲ್ಲಿದ್ದು ಛಾವಣಿ ಕಟ್ಟಿಲ್ಲ. ಆಂಜನೇಯ ಮಂದಿರಕ್ಕೆ ಛಾವಣಿ ನಿರ್ಮಿಸಲು ಅನೇಕ ರಾಜರು ಪ್ರಯತ್ನಿಸಿದರೂ ನಿಷ್ಫಲವಾಯಿತು. ಶ್ರೀ ನರಸಿಂಹನಿಗೆ ಛಾವಣಿ ನಿರ್ಮಿಸುವುದು ಸಾಧ್ಯವಿರಲಿಲ್ಲ. ಹಾಗಾಗಿ, ಭಕ್ತ ಹನುಮಂತನಿಗೆ ಬಹುಶಃ ತನ್ನ ಮೇಲೆ ಸೂರು ಬೇಡವಾಯಿತೇನೋ. ಭಕ್ತ ಹನುಮಾನ್ ಶ್ರೀ ರಾಮಚಂದ್ರನಿಗೆ ಸೇವಕನಾಗಿ, ಸೈನಿಕನಾಗಿ, ರಾಜಕಾರಣಿಯಾಗಿ ಹೀಗೆ ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾನೆ. ಆದುದರಿಂದ ಇಲ್ಲಿ ಹನುಮಂತನು ಕೈಯಲ್ಲಿ ಜಪ ಮಾಲೆ ಹಿಡಿದುಕೊಂಡಿದ್ದಾನೆ ಮತ್ತು ಅವನ ಸೊಂಟದಲ್ಲಿ ಖಡ್ಗವಿದೆ. ಕಿರೀಟ ಮತ್ತು ಕವಚದಿಂದ ಅಲಂಕೃತನಾಗಿದ್ದಾನೆ. ಶ್ರೀ ಆಂಜನೇಯ ನಾಮಕ್ಕಲ್ ಧಾಮದ ರಕ್ಷಕ.
ಶ್ರೀ ರಂಗನಾಥ ದೇವಾಲಯ
ನಾಮಗಿರಿಯ ಮತ್ತೊಂದು ಭಾಗದಲ್ಲಿ, ಶ್ರೀ ಲಕ್ಷ್ಮೀ ನರಸಿಂಹ ಮಂದಿರದ ಹಿಂಭಾಗದಲ್ಲಿ ಇರುವುದೇ ಶ್ರೀ ರಂಗನಾಥ ದೇವಸ್ಥಾನ. ಒಂದು ನೂರು ಮೆಟ್ಟಿಲುಗಳನ್ನು ಏರಿದರೆ ಶ್ರೀ ರಂಗನಾಥನ ದರ್ಶನ ಸಾಧ್ಯ. ಶ್ರೀ ರಂಗನಾಥನು ಕಾರ್ಕೋಡಯ ಶಯನ ಭಂಗಿಯಲ್ಲಿದ್ದಾನೆ. ಕಾರ್ಕೋಡಕನು ಸರ್ಪಗಳ ರಾಜ. ಅವನು ಭಗವಂತನನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದ. ತನ್ನ ಸುರುಳಿಯ ಮೇಲೆ ಪ್ರಭು ಪವಡಿಸಬೇಕೆಂಬುದು ಅವನ ಅಪೇಕ್ಷೆಯಾಗಿತ್ತು. ಶ್ರೀ ರಂಗನಾಥನು ಚಕ್ರ, ಶಂಖ, ಬಿಲ್ಲು, ಬಾಣ, ಗದೆ ಮತ್ತು ಕತ್ತಿಯನ್ನು ಹಿಡಿದಿದ್ದಾನೆ.
ನಾಮಕ್ಕಲ್ ಮಂದಿರದ ವೇಳೆ
ಬೆಳಗ್ಗೆ 7-30 ರಿಂದ 1 ಗಂಟೆವರೆಗೆ. ಸಂಜೆ 4-30 ರಿಂದ 8-30 ರವರೆಗೆ
ಶನಿವಾರ ಮತ್ತು ಭಾನುವಾರ ಭಕ್ತರ ಭೇಟಿ ಹೆಚ್ಚು.
ಶ್ರೀ ರಂಗನಾಥ ಮಂದಿರದ ವೇಳೆ : ಬೆಳಗ್ಗೆ 9 ರಿಂದ 11 ಮತ್ತು ಸಂಜೆ 5 ರಿಂದ 7 ಗಂಟೆವರೆಗೆ.