ಶ್ರೀಕೃಷ್ಣ ಪಾಕಶಾಲೆ
– ಎಂ.ಅಹಲ್ಯ
ನೆಲ್ಲಿಕಾಯಿ ಜಾಮ್

ಬೇಕಾಗುವ ಪದಾರ್ಥಗಳು :
ಬೆಟ್ಟದ ನೆಲ್ಲಿಕಾಯಿ – ಕಾಲು ಕೆ.ಜಿ
ಸಕ್ಕರೆ – ಕಾಲು ಕೆ.ಜಿ.
ಮಾಡುವ ವಿಧಾನ : ಬೆಟ್ಟದ ನೆಲ್ಲಿಕಾಯಿಗಳನ್ನು ನೀರಿನಲ್ಲಿ ಅಥವಾ ಅವಿಯಲ್ಲಿ ಬೇಯಿಸಬೇಕು. ಅನಂತರ ಬೀಜಗಳನ್ನು ತೆಗೆದು ಅದನ್ನು ರುಬ್ಬಿ ಅನಂತರ ಸಕ್ಕರೆ ಮತ್ತು ನೆಲ್ಲಿಕಾಯಿಗಳನ್ನು ಬಾಂಡ್ಲಿಯಲ್ಲಿ ಹಾಕಿ ಒಲೆಯ ಮೇಲೆ ಇಟ್ಟು 15 ಅಥವಾ 20 ನಿಮಿಷ ಬಾಡಿಸಬೇಕು. ಸ್ವಲ್ಪ ಗಟ್ಟಿಯಾದ ಅನಂತರ ಇಳಿಸಬೇಕು. ಇದನ್ನು 15 ದಿನಗಳವರೆಗೂ ಹೊರಗೆ ಇಟ್ಟು ಉಪಯೋಗಿಸಬಹುದು. ಚಪಾತಿಗೆ ಚೆನ್ನಾಗಿರುತ್ತದೆ, ಹಾಗೆಯೇ ತಿನ್ನಬಹುದು.
ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ

ಬೇಕಾಗುವ ಪದಾರ್ಥಗಳು :
ಬೆಟ್ಟದ ನೆಲ್ಲಿಕಾಯಿ – ಕಾಲು ಕೆ.ಜಿ.
ಹುಣಸೇಹಣ್ಣು- ಸಣ್ಣನಿಂಬೆಹಣ್ಣು ಗಾತ್ರದಷ್ಟು
ಅಚ್ಚಮೆಣಸಿನ ಪುಡಿ ( ಕೆಂಪು ಮೆಣಸಿನಪುಡಿ) 1 ಟೀ ಚಮದ
ಉಪ್ಪು – 1 ಟೀ ಚಮಚ
ಇಂಗು – ಸ್ವಲ್ಪ
ಅರಿಶಿನ – ಚಿಟಿಕೆ
ಬೆಲ್ಲ – ಸ್ವಲ್ಪ
ಎಣ್ಣೆ – 1 ಚಿಕ್ಕ ಸೌಟು
ಸಾಸಿವೆ – ಕಾಲು ಚಮಚ
ಮಾಡುವ ವಿಧಾನ: ನೆಲ್ಲಿಕಾಯಿಗಳನ್ನು ಬೇಯಿಸಬೇಕು ಅನಂತರ ಬೀಜವನ್ನು ತೆಗೆದರೆ ಹೋಳುಗಳಾಗುತ್ತವೆ. ಬಾಂಡ್ಲಿಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವಿನ ಸೊಪ್ಪನ್ನು ಒಗ್ಗರಣೆ ಮಾಡಿ, ಹುಣಸೆ ಹಣ್ಣಿನ ರಸವನ್ನು ಹಾಕಿ, ಉಪ್ಪು ಮೆಣಸಿನಪುಡಿ, ಬೆಲ್ಲ ಇಂಗು, ಅರಿಸಿನ ಎಲ್ಲವನ್ನೂ ಹಾಕಿ ಕುದಿಸಬೇಕು. ಅನಂತರ ನೆಲ್ಲಿಕಾಯಿಗಳನ್ನು ಹಾಕಿ ಸ್ವಲ್ಪ ಹೊತ್ತು ಕೆದಕಿ ಅನಂತರ ಇಳಿಸಬೇಕು. ಫ್ರಿಜ್‌ನಲ್ಲಿಟ್ಟರೆ ಒಂದು ತಿಂಗಳು ಇರುತ್ತದೆ.
ವಿಧಾನ – 2
ಬೆಟ್ಟದ ನೆಲ್ಲಿಕಾಯಿ – 5 ಅಥವಾ 6
ಹಸಿಮೆಣಸಿನಕಾಯಿ – 3 ಅಥವಾ 4
ಉಪ್ಪು – ಅರ್ಧ ಚಮಚ
ಇಂಗು – ಸ್ವಲ್ಪ
ಮಜ್ಜಿಗೆ ( ಅರ್ಧ ಲೋಟ),
ಸಾಸಿವೆ – ಕಾಲು ಚಮಚ
ಮಾಡುವ ವಿಧಾನ: ನೆಲ್ಲಿಕಾಯಿಗಳನ್ನು ಬೇಯಿಸಿ ಬೀಜವನ್ನು ತೆಗೆದು ಮಜ್ಜಿಗೆಯಲ್ಲಿ ಉಪ್ಪು ಮೆಣಸಿನಕಾಯಿಯನ್ನು ಸೀಳಿ ಹಾಕಬೇಕು. ಸಾಸಿವೆಯನ್ನು ಒಗ್ಗರಣೆ ಮಾಡಿ ಹಾಕಬೇಕು. ಇದನ್ನು 2-3 ದಿನಗಳಲ್ಲಿ ಉಪಯೋಗಿಸಿ ಮುಗಿಸಬೇಕು.
ವಿಧಾನ – 3
ಬೆಟ್ಟದ ನೆಲ್ಲಿಕಾಯಿ – ಕಾಲು ಕೆ.ಜಿ.
ಉಪ್ಪು – 1 ಟೀ ಚಮಚ
ಕೆಂಪು ಮೆಣಸಿನಕಾಯಿ – 9
ಇಂಗು – ಸ್ವಲ್ಪ
ಅರಿಶಿನ – ಚಿಟಿಕೆ
ಸಾಸಿವೆ – ಕಾಲು ಚಮಚಗಿಂತ ಕಮ್ಮಿ
ನಿಂಬೆ ಹಣ್ಣು – 1 ಅಥವಾ ಸ್ವಲ್ಪ ಹುಳಿ ಮಜ್ಜಿಗೆ
ಮಾಡುವ ವಿಧಾನ : ಮೆಣಸಿನ ಕಾಯಿ, ಉಪ್ಪು, ಇಂಗು, ಅರಿಶಿನ ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಮಾಡಿಕೊಳ್ಳಬೇಕು. ನೀರನ್ನು ಹಾಕಿ ಅರೆದು ಶೋಧಿಸಬೇಕು. ನೆಲ್ಲಿಕಾಯಿಯನ್ನು ಸಣ್ಣಗೆ ಅಥವಾ ದಪ್ಪ ಚೂರುಗಳನ್ನು ಮಾಡಿ ಶೋಧಿಸಿದ ರಸಕ್ಕೆ ಹಾಕಿ ನಿಂಬೆ ಹಣ್ಣಿನ ರಸವನ್ನು ಹಾಕಬೇಕು. ಅಥವಾ ಮಜ್ಜಿಗೆಯನ್ನು ಮಿಕ್ಸಿಗೆ ಹಾಕಿ ಅದನ್ನು ಶೋಧಿಸಿ ಹಾಕಬೇಕು. ಇದು ಮೂರು, ನಾಲ್ಕು ತಿಂಗಳವರೆಗೂ ಉಪಯೋಗಿಸಬಹುದು.
ಬೆಟ್ಟದ ನೆಲ್ಲಿಕಾಯಿಯ ಗಟ್ಟಿ ಚಟ್ನಿ

ಬೇಕಾಗುವ ಪದಾರ್ಥಗಳು :
ಬೆಟ್ಟದ ನೆಲ್ಲಿಕಾಯಿ – ಕಾಲು ಕೆ.ಜಿ.
ಕರಿಮೆಣಸು – 6 ಕಾಳುಗಳು
ಜೀರಿಗೆ – ಕಾಲು ಚಮಚಗಿಂತ ಕಡಮೆ
ಒಣಮೆಣಸಿನಕಾಯಿ – 7 ಅಥವಾ
ಅಚ್ಚಮೆಣಸಿನಪುಡಿ – 1 ಟೀ ಚಮಚ
ಉಪ್ಪು – 1 ಟೀ ಚಮಚ
ಇಂಗು – 1 ಚಿಟಿಕೆ
ಅರಿಶಿನ – 1 ಚಿಟಿಕೆ
ಮಾಡುವ ವಿಧಾನ: ಬೆಟ್ಟದ ನಲ್ಲಿಕಾಯಿಯನ್ನು ಬೇಯಿಸಿ ಬೀಜ ತೆಗೆದು, ಮೇಲೆ ತಿಳಿಸಿದ ಎಲ್ಲ ಸಾಮಾನುಗಳನ್ನು ಹಾಕಿ ರುಬ್ಬಬೇಕು. ಅನಂತರ ಒಂದು ಚಿಕ್ಕ ಸೌಟು ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ ಅನಂತರ ರುಬ್ಬಿರುವ ನೆಲ್ಲಿಕಾಯಿಯನ್ನು ಹಾಕಿ 1 ಸೆಕೆಂಡ್ ಕೆದಕಿ ಇಳಿಸಬೇಕು. ಇದೇ ತರಹ ಹಸಿಮೆಣಸಿನಕಾಯಿಯನ್ನು ಹಾಕಿ ಮಾಡಬಹುದು.
ಈ ತಿನಿಸುಗಳನ್ನು ಪರಮಾತ್ಮನಿಗರ್ಪಿಸಿ ಅನಂತರ ತಾವು ತಮ್ಮವರೂ ಕೂಡಿ ಸೇವಿಸಿ.






Leave a Reply