ಶ್ರೀ ಚೈತನ್ಯರು ಶ್ರೀಕೃಷ್ಣನ ಅವತಾರವಾದರೆ, ಶ್ರೀ ನಿತ್ಯಾನಂದ ಪ್ರಭುಗಳು ಶ್ರೀ ಬಲರಾಮನ ಅವತಾರ.
ಐಹಿಕ ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಲು ಶ್ರೀ ಚೈತನ್ಯ ಮಹಾಪ್ರಭು ಅವತರಿಸಿ ಸೂರ್ಯನಂತೆ ಬೆಳಗಿದರು. ಕೃಷ್ಣ ಪ್ರೇಮವನ್ನು ಎಲ್ಲೆಡೆಯೂ ಹರಡಿದರು. ಇವರಂತೆಯೇ ಶ್ರೀಲ ನಿತ್ಯಾನಂದ ಪ್ರಭುಗಳ ಅವತಾರವಾಯಿತು. ಆ ಸಂದರ್ಭದಲ್ಲಿ ಸೂರ್ಯ ಚಂದ್ರರಿಬ್ಬರೂ ಏಕಕಾಲದಲ್ಲಿ ಉದಯಿಸಿದ್ದಾರೆ ಎಂಬ ಮಾತು ಜನಜನಿತವಾಗಿತ್ತು. ಲೋಕ ಕಲ್ಯಾಣಾರ್ಥ ಅವರಿಬ್ಬರೂ ಕೈಗೊಂಡ ಕಾರ್ಯಗಳು ಅಪೂರ್ವ.

ಗೌರಚಂದ್ರ ಅಂದರೆ ಶ್ರೀ ಚೈತನ್ಯ ಮಹಾಪ್ರಭುಗಳೊಂದಿಗೆ ಶ್ರೀ ನಿತ್ಯಾನಂದ ಪ್ರಭುಗಳ ಮೊದಲ ಭೇಟಿ ಅತ್ಯಂತ ಸ್ವಾರಸ್ಯಕರವಾಗಿದೆ. ಗೌರಚಂದ್ರರ ಅವತಾರವಾಗಿದೆ ಎನ್ನುವುದು ತಿಳಿದ ಕೂಡಲೇ ನಿತ್ಯಾನಂದರು ನವದ್ವೀಪಕ್ಕೆ ಬರುತ್ತಾರೆ. ನಂದನ ಆಚಾರ್ಯರ ಮನೆಯಲ್ಲಿ ತಂಗುತ್ತಾರೆ. ಗೌರಚಂದ್ರರು ಒಂದಲ್ಲಾ ಒಂದು ರೀತಿಯಲ್ಲಿ ನಿತ್ಯಾನಂದರ ಆಗಮನವನ್ನು ಪ್ರಕಟಿಸುತ್ತಾರೆ.
ಆದರೆ ಯಾರಿಗೂ ಅರ್ಥವಾಗುವುದಿಲ್ಲ. “ಇನ್ನು ಒಂದೆರಡು ದಿನಗಳಲ್ಲಿ ಅತ್ಯುನ್ನತ, ಗೌರವಾನ್ವಿತ ವ್ಯಕ್ತಿಯೊಬ್ಬರ ಆಗಮನವಾಗುತ್ತದೆ. ಯಾರು ಬಂದಿದ್ದಾರೆ ಮತ್ತು ಎಲ್ಲಿಂದ ಬಂದಿದ್ದಾರೆ ಎನ್ನುವುದನ್ನು ಪತ್ತೆ ಮಾಡಿ” ಎಂದು ಹರಿದಾಸ ಮತ್ತು ಶ್ರೀವಾಸ ಪಂಡಿತರಿಗೆ ಆದೇಶಿಸುತ್ತಾರೆ.” ಅವರಿಬ್ಬರೂ ನವದ್ವೀಪದಲ್ಲಿ ನಿತ್ಯಾನಂದರಿಗಾಗಿ ಹುಡುಕುತ್ತಾರೆ.
ಆದರೆ ಗಂಟೆಗಟ್ಟಲೆ ಹುಡುಕಿದರೂ ಸಿಗುವುದಿಲ್ಲ. ನವದ್ವೀಪಕ್ಕೆ ಅಪರಿಚಿತರಾರೂ ಬಂದಿಲ್ಲ ಎಂದು ಮಹಾಪ್ರಭುಗಳಿಗೆ ಅರುಹುತ್ತಾರೆ. ಮಹಾಪ್ರಭುಗಳು ನಗುತ್ತಾ, “ನಿಮಗೆಲ್ಲ ಅವಧೂತ ನಿತ್ಯಾನಂದರು ಗೊತ್ತಿಲ್ಲವೇ? ಬನ್ನಿ, ನಂದನ ಆಚಾರ್ಯರ ಮನೆಗೆ ಹೋಗೋಣ. ಅವರು ಅಲ್ಲಿಯೇ ಇದ್ದಾರೆ.” ಹೀಗೆ ಹೇಳುತ್ತಾ ಅವರು ಹೊರಡುತ್ತಾರೆ.
ಎಲ್ಲರೂ ಅವರನ್ನು ಹಿಂಬಾಲಿಸುತ್ತಾರೆ. ಅಲ್ಲಿ ಅವರಿಗೆಲ್ಲಾ ನಿತ್ಯಾನಂದರ ದರ್ಶನವಾಗುತ್ತದೆ. ಅವರು ಕಣ್ಣು ರೆಪ್ಪೆ ಮಿಟುಕಿಸದೆ ವಿಶ್ವಂಭರರನ್ನೇ ದಿಟ್ಟಿಸಿ ನೋಡಿದರು. ಭಾಗವತದ ಶ್ಲೋಕವನ್ನು ಪಠಿಸಲು ಚೈತನ್ಯರು ಶ್ರೀವಾಸ ಪಂಡಿತರಿಗೆ ಸೂಚಿಸಿದರು. ಶ್ರೀ ಕೃಷ್ಣನ ಆಕರ್ಷಕ ರೂಪವನ್ನು ಕೊಂಡಾಡುವ ಶ್ಲೋಕವನ್ನು (ಭಾಗವತ 10.21.5) ಕೇಳುತ್ತಾ ನಿತ್ಯಾನಂದರು ಸಿಂಹದಂತೆ ಗರ್ಜಿಸಿದರು.
ಅವರು ಎಷ್ಟು ಮೇಲಕ್ಕೆ ಜಿಗಿದರೆಂದರೆ ಎಲ್ಲರಿಗೂ ಅವರ ಮೂಳೆ ಮುರಿದರೇನು ಗತಿ ಎಂದು ಯೋಚಿಸುವಂತಾಯಿತು. “ಕೃಷ್ಣ ಕಾಪಾಡು” ಎಂದು ಪ್ರಾರ್ಥಿಸಿದರು. ಅನಂತರ ನಿತ್ಯಾನಂದರು “ಎಲ್ಲಿ ಆ ಗೋಪಾಲಕ ಬಾಲಕ?” ಎಂದು ಕೇಳಿದರು. ವಿಶ್ವಂಭರರನ್ನು ನೋಡುತ್ತಾ ನುಡಿದರು, “ನೀನು ಎಲ್ಲಿದ್ದೆ? ನಾನು ಎಲ್ಲ ಕಡೆ ಹುಡುಕಿದೆ, ಆದರೆ ನಿನ್ನ ಬಗೆಗೆ ಸುದ್ದಿಯೇ ಇಲ್ಲ! ಕೊನೆಗೆ, ನವದ್ವೀಪದಲ್ಲಿ ವಾಸಿಸುತ್ತಿದ್ದಾನೆ ಎಂದು ಕೇಳಿದೆ.
ಆ ಕಳ್ಳನನ್ನು ಹಿಡಿಯಲು ಬಂದೆ. ಇಂದು ನಾನು ನಿನ್ನನ್ನು ಹಿಡಿದಿರುವೆ. ಅದು ಹೇಗೆ ತಪ್ಪಿಸಿಕೊಳ್ಳುವೆ?” ಹೀಗೆ ಹೇಳುತ್ತಾ ನಿತ್ಯಾನಂದ ಪ್ರಭು ನಕ್ಕರು, ಅತ್ತರು ಮತ್ತು ನರ್ತಿಸಿದರು. ವಿಶ್ವಂಭರರು ನಿತ್ಯಾನಂದರನ್ನು ಆಲಂಗಿಸಿಕೊಂಡರು. ಅಲ್ಲಿ ನೆರೆದಿದ್ದ ಭಕ್ತರು ತಾವು ಈ ಅಪೂರ್ವ ಸಂಗಮವನ್ನು ನೋಡುವ ಅವಕಾಶ ದೊರೆತ ಅದೃಷ್ಟವಂತರು ಎಂದು ಭಾವಿಸಿದರು.
ಉಭಯ ಪ್ರಭುಗಳೂ ಮೊದಲ ಬಾರಿ ಭೇಟಿ ಮಾಡಿದ ಸ್ಥಳವನ್ನು ಒಂದು ಸುಂದರ ದೇಗುಲದ ಮೂಲಕ ಸುಸ್ಮರಣೀಯವಾಗಿಡಲಾಗಿದೆ. ಅದೇ ಶ್ರೀ ಗೌರ ನಿತ್ಯಾನಂದ ಮಂದಿರ.
ಜನ್ಮ ಮತ್ತು ಬಾಲ್ಯ
ಏಕಚಕ್ರ ಎಂಬ ಗ್ರಾಮದಲ್ಲಿ ಹಡಾಯ್ ಪಂಡಿತ ಮತ್ತು ಪದ್ಮಾವತಿಯೆಂಬ ದೈವೀಕ ದಂಪತಿಯ ಪುತ್ರರಾಗಿ ನಿತ್ಯಾನಂದ ಪ್ರಭುಗಳು ಜನಿಸಿದರು. ಮಗು ನೋಡಲು ಅತ್ಯಂತ ಸುಂದರವಾಗಿದ್ದು, ಮನ್ಮಥನನ್ನೇ ನಾಚಿಸುವಂತ್ತಿತ್ತು. ಈ ಮಗುವಿನ ರೂಪಕ್ಕೆ ಎಲ್ಲರೂ ಮನ ಸೋತಿದ್ದರು.
ನಿತ್ಯಾನಂದನ ಬಾಲ ಲೀಲೆಗಳು ಇಡೀ ಏಕಚಕ್ರ ಗ್ರಾಮವನ್ನುಸೆಳೆದಿತ್ತು.

ಶ್ರೀ ನಿತ್ಯಾನಂದ ಪ್ರಭುಗಳ ಜನ್ಮಸ್ಥಳ, ಏಕಚಕ್ರ.
ಏಕೆಂದರೆ ಅವರ ಆಟಗಳು ಬಹಳ ವಿಶೇಷವಾಗಿದ್ದವು. ಸದಾ ಅವರು ತಮ್ಮ ಸ್ನೇಹಿತರೊಡಗೂಡಿ ದೈವೀಕ ಪಾತ್ರಗಳ ಅನುಕರಣೆಯನ್ನು ಮಾಡುತ್ತಾ ನಾಟಕವನ್ನು ಆಡುತ್ತಿದ್ದರು. ಶ್ರೀರಾಮ, ಲಕ್ಷ್ಮಣ, ಶ್ರೀಕೃಷ್ಣ, ಬಲರಾಮ, ವಿಷ್ಣುವಿನ ವಿವಿಧ ಅವತಾರದ ಪಾತ್ರಗಳು ಆಕರ್ಷಕವಾಗಿದ್ದವು.
ಬಹಳ ಸ್ವಾರಸ್ಯಕರ ಪ್ರಸಂಗ. ರಾಮಾಯಣದ ಲಕ್ಷ್ಮಣನ ಪಾತ್ರವನ್ನು ನಿತ್ಯಾನಂದರು ಅಭಿನಯಿಸುತ್ತಾರೆ. ರಾಮ-ರಾವಣರ ಯುದ್ಧದಲ್ಲಿ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ. ಲಕ್ಷ್ಮಣ ಪಾತ್ರಧಾರಿ ನಿಜವಾಗಿಯೂ ಸತ್ತಂತೆ ಬಿದ್ದಿರಬೇಕು. ಇಲ್ಲಿ ನಿತ್ಯಾನಂದರು ಉಸಿರಾಡದೆ ಬಿದ್ದುಕೊಂಡು ಎಷ್ಟು ಹೊತ್ತಾದರೂ ಏಳದಿದ್ದಾಗ ಮಕ್ಕಳೆಲ್ಲರೂ ಗಾಬರಿಯಾಗಿ ಮನೆಗೆ ಓಡಿ ಹೋಗಿ ನಿತ್ಯಾನಂದರ ತಂದೆ ತಾಯಿಗಳಿಗೆ ತಿಳಿಸುತ್ತಾರೆ.
ಅವರು ಕೂಡ ಗಾಬರಿಕೊಂಡು ಆಳುತ್ತಾ ಓಡಿ ಬರುತ್ತಾರೆ. ತಕ್ಷಣವೇ ಹನುಮಂತ ಪಾತ್ರಧಾರಿ ಹುಡುಗನಿಗೆ ನೆನಪು ಬರುತ್ತದೆ. ಓಡಿ ಹೋಗಿ ಸಂಜೀವಿನಿ ಮೂಲಿಕೆಯನ್ನು ತಂದಂತೆ ಏನೋ ಒಂದು ಸೊಪ್ಪನ್ನು ತರುತ್ತಾನೆ. ಅದನ್ನು ಹಿಂಡಿ ಅವನ ಮೂಗಿಗೆ ಹಿಡಿದಾಗ ನಿತ್ಯಾನಂದರು ಪ್ರಜ್ಞೆ ಮರಳಿ ಪಡೆಯುತ್ತಾರೆ. ಈ ಆಟದ ಪರಿ ಅರ್ಥವಾದಾಗ ಜನರೆಲ್ಲ ಹರ್ಷೋದ್ಗಾರ ಮಾಡುತ್ತಾರೆ.
ಸಂನ್ಯಾಸಿಗೆ ದಾನ
ಶ್ರೀ ನಿತ್ಯಾನಂದರಿಗೆ ಹನ್ನೆರಡು ವರ್ಷವಾಗಿದ್ದಾಗ ಅವರ ತಂದೆ ಮನೆಗೆ ಒಬ್ಬ ಸಂನ್ಯಾಸಿಯು ಅತಿಥಿಗಳಾಗಿ ಬಂದರು. ಮರುದಿನ ಹೊರಡುವ ಮುನ್ನ ಸಂನ್ಯಾಸಿಗಳು ಕೇಳಿದರು, “ಇದು ಬಹಳ ಕಠಿಣವಾದದ್ದು ಆದರೂ ನಾನು ಕೇಳುತ್ತಿದ್ದೇನೆ, ನಿಮ್ಮ ಮಗನನ್ನು ನನಗೆ ಭಿಕ್ಷೆಯಾಗಿ ನೀಡಿ, ಅವನು ಮುಂದೆ ಬಹಳ ದೊಡ್ಡ ಕಾರ್ಯವನ್ನು ಮಾಡಲಿದ್ದಾನೆ. ಅವನಿಗೆ ತರಬೇತಿ ನೀಡುತ್ತೇನೆ.”

ಹಡಾಯ್ ಪಂಡಿತರಿಗೆ ಬಹಳ ಆತಂಕವಾಯಿತು. ಸಂನ್ಯಾಸಿಯು ಕೇಳಿದ್ದನ್ನು ನೀಡಬೇಕೆನ್ನುವ ಗೃಹಸ್ಥ ಧರ್ಮಪಾಲನೆ ಮತ್ತು ನಿತ್ಯಾನಂದರ ಬಗೆಗಿದ್ದ ಸಹಜ ವಾತ್ಸಲ್ಯಗಳು ಅವರನ್ನು ಎಳೆಯುತ್ತಿದ್ದವು.
ಕೊಟ್ಟ ಮಾತನ್ನು ಪಾಲಿಸಲು ಸಂನ್ಯಾಸಿಗೆ ಮಗುವನ್ನು ದಾನವಾಗಿ ನೀಡಿದರು. ನಿತ್ಯಾನಂದರು ಸಂನ್ಯಾಸಿಯೊಡನೆ ಹೊರಟು ಹೋದರು. ನಿತ್ಯಾನಂದರ ವಿರಹ ವೇದನೆಯನ್ನು ತಾಳಲಾರದೆ ಅವರ ತಂದೆ ತಾಯಿ ದೇಹ ತ್ಯಜಿಸಿ ಪರಮ ಲೋಕವನ್ನು ಸಂದರು.
ನಿತ್ಯಾನಂದರು ಸಂನ್ಯಾಸಿಯೊಡನೆ ತೀರ್ಥ ಯಾತ್ರೆಯನ್ನು ಮಾಡಿ ಕೊನೆಯಲ್ಲಿ ನವದ್ವೀಪಕ್ಕೆ ಬಂದು ಶ್ರೀ ಚೈತನ್ಯರನ್ನು ಭೇಟಿ ಮಾಡಿದರು.
ವೈಷ್ಣವ ತತ್ವಗಳನ್ನು ಪ್ರಚಾರ ಮಾಡುತ್ತಾ ನಿತ್ಯಾನಂದರು ಜಗನ್ನಾಥಪುರಿಗೆ ಬಂದು ಶ್ರೀ ಜಗನ್ನಾಥ ಪ್ರಭುವಿನ ದರ್ಶನವನ್ನು ಮಾಡಿ, ಆ ಪರಮನ ಪ್ರೀತಿಯಲ್ಲಿ ಮೈಮರೆತರು. ಪುನಃ ಅವರು ಮಥುರಾ ಬೃಂದಾವನದಲ್ಲಿ ಸಂಚರಿಸಿದರು.
ದಿವ್ಯ, ಪ್ರೇಮೋನ್ಮಾದ
ಈ ನಡುವೆ ಶ್ರೀ ಚೈತನ್ಯ ಮಹಾಪ್ರಭು ನವದ್ವೀಪದಲ್ಲಿ ಕೃಷ್ಣಪ್ರೇಮದ ಪ್ರಚಾರ ಕಾರ್ಯ ಪ್ರಾರಂಭಿಸಿದ್ದರು. ಅವರ ಕರೆಯಂತೆ ನಿತ್ಯಾನಂದರು ವೃಂದಾವನದಿಂದ ತಮ್ಮ ಸಂಗಡಿಗರೊಂದಿಗೆ ಬಂಗಾಳಕ್ಕೆ ಹೊರಟರು. ಅವರು ಪಾನಿಹಾಟಿಯಲ್ಲಿ ರಾಘವ ಪಂಡಿತರ ಮನೆಯಲ್ಲಿ ತಂಗಿದರು.

ಅಲ್ಲಿ ಅವರು ಅನೇಕ ಬಾರಿ ಕೃಷ್ಣಪ್ರೇಮದ ಉನ್ಮಾದದಲ್ಲಿ ಚೀರುತ್ತಿದ್ದರು, ನರ್ತಿಸುತ್ತಿದ್ದರು. ಅವರು ನರ್ತಿಸುವಾಗ ಯಾರನ್ನಾದರೂ ದಿಟ್ಟಿಸಿ ನೋಡುತ್ತಿದ್ದರು. ಆಗ ಆ ವ್ಯಕ್ತಿ ಭಾವಾವೇಶದಿಂದ ನೆಲಕ್ಕೆ ಕುಸಿಯುತ್ತಿದ್ದರು. ಇದು ಪತಿತರನ್ನು ವಿಮೋಚನೆಗೊಳಿಸುವ ಆರಂಭವಾಗಿತ್ತು.
ಕೆಲವು ಬಾರಿ ಅವರು ಸಿಂಹಾಸನದ ಮೇಲೆ ಕುಳಿತು ಅಭಿಷೇಕ ಮಾಡುವಂತೆ ತಮ್ಮ ಸೇವಕರಿಗೆ ಆದೇಶಿಸುತ್ತಿದ್ದರು!
ರಾಘವ ಪಂಡಿತರ ನೇತೃತ್ವದಲ್ಲಿ ಅಭಿಷೇಕಕ್ಕೆ ತಯ್ಯಾರಿಯಾಗುತ್ತಿತ್ತು. ನೂರಾರು ಬಿಂದಿಗೆಯಲ್ಲಿ ಗಂಗಾ ನದಿ ನೀರು ತಂದು ಅದರಲ್ಲಿ ಸುವಾಸಿತ ದ್ರವ್ಯಗಳನ್ನು ಹಾಕುತ್ತಿದ್ದರು. ಅನಂತರ ಸಂತೋಷದಿಂದ ನಿತ್ಯಾನಂದರನ್ನು ಕೊಂಡಾಡುತ್ತಾ ಅಭಿಷೇಕ ಮಾಡುತ್ತಿದ್ದರು. ಅನಂತರ ನಿತ್ಯಾನಂದರಿಗೆ ಹೊಸ ವಸ್ತ್ರಗಳನ್ನು ತೊಡಿಸುತ್ತಿದ್ದರು.
ಅವರ ವಿಶಾಲ ಎದೆಯು ತುಳಸಿ ಸೇರಿಸಿದ ಹೂವಿನ ಹಾರದಿಂದ ಕಂಗೊಳಿಸುತ್ತಿತ್ತು. ಚಿನ್ನ ಲೇಪಿತ ಸಿಂಹಾಸನದ ಮೇಲೆ ಕುಳಿತು ನಿತ್ಯಾನಂದರು ಎಲ್ಲರತ್ತ ಕೃಪಾದೃಷ್ಟಿ ಬೀರುತ್ತಿದ್ದರು. ಹೀಗೆ ನಿತ್ಯಾನಂದರು ಭಕ್ತಿಪ್ರೇಮವನ್ನು ಹರಡುತ್ತಾ ಪಾನಿಹಾಟಿಯಲ್ಲಿ ಮೂರು ತಿಂಗಳು ತಂಗಿದ್ದರು.
ಜಗಾಯ್ ಮಾಧಾಯ್ ಉದ್ಧಾರ
ನಿತ್ಯಾನಂದ ಪ್ರಭುಗಳು ಮನೆಮನೆಗೆ ಹೋಗಿ ಶ್ರೀ ಚೈತನ್ಯರ ಬೋಧನೆಗಳನ್ನು ನೀಡಿದ ಅಗ್ರಗಣ್ಯರು. ಜಗಾಯ್, ಮಾಧಾಯ್‌ಯಂತಹ ಪತಿತರನ್ನು ಉದ್ದರಿಸಿದವರು ಅವರೇ.

ಜಗಾಯ್ ಮತ್ತು ಮಾಧಾಯ್ ಸೋದರರು ಒಂದು ಉತ್ತಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸದವರು. ಆದರೆ ಕೆಟ್ಟ ಸಹವಾಸದಿಂದ ಕುಡುಕರಾದರು. ವೇಶ್ಯೆಯರ ಸಹವಾಸ ಮಾಡಿದರು, ಜೂಜುಕೋರರಾದರು ಮತ್ತು ಮಾಂಸ ಭಕ್ಷಕರಾದರು.
ಈ ಸೋದರರನ್ನು ವಿಮೋಚನೆ ಮಾಡೋಣ. ಆಗ ಇದು ಚೈತನ್ಯ ಮಹಾಪ್ರಭುಗಳಿಗೆ ದೊಡ್ಡ ಕೀರ್ತಿಯನ್ನು ತಂದು ಕೊಡುತ್ತದೆ ಎಂದು ನಿತ್ಯಾನಂದರು ಹೇಳಿದರು. ಆ ಸೋದರರು ಬೀದಿಗಳಲ್ಲಿ ಗದ್ದಲ ಉಂಟುಮಾಡುತ್ತಿದ್ದಾರೆ, ಮತ್ತು ಅಲ್ಲಿ ಜನರ ಗುಂಪು ಇದೆ ಎಂದು ಜನರು ಹೇಳುತ್ತಿದ್ದರು. ಆದರೆ ನಿತ್ಯಾನಂದ ಪ್ರಭು ಎಷ್ಟು ಕರುಣಾ ಸ್ವಭಾವದವರಾಗಿದ್ದರೆಂದರೆ, ಈ ಇಬ್ಬರು ವ್ಯಕ್ತಿಗಳಲ್ಲಿ ಕೆಟ್ಟ ನಡವಳಿಕೆ, ಪಾಪಗಳಿದ್ದರೂ ಅವರನ್ನು ವಿಮೋಚನೆ ಮಾಡೋಣ ಎಂದು ನಿರ್ಧರಿಸಿದರು.
ಆ ಸೋದರರು ನಿತ್ಯಾನಂದ ಪ್ರಭುಗಳ ಮೇಲೆ ಎರಗಿ ಅವರನ್ನು ಗಾಯಗೊಳಿಸಿದರು. “ಸರಿ, ಸರಿ. ನೀವು ಗಾಯಗೊಳಿಸಿರುವಿರಿ. ರಕ್ತ ಸುರಿಯುತ್ತಿದೆ. ಪರವಾಗಿಲ್ಲ. ನೀವು ಹರೇ ಕೃಷ್ಣ ಮಂತ್ರವನ್ನು ಜಪಿಸಿ. ಅದೇ ಚೈತನ್ಯ ಮಹಾಪ್ರಭುಗಳ ಧ್ಯೇಯ” ಎಂದು ನಿತ್ಯಾನಂದರು ನುಡಿದರು.
ಈ ಸೋದರರು ನಿತ್ಯಾನಂದರನ್ನು ಗಾಯಗೊಳಿಸಿದ್ದಾರೆ ಎಂದು ಮಹಾಪ್ರಭುಗಳು ಕೋಪೋದ್ರಿಕ್ತರಾದರು. ಆಗ ನಿತ್ಯಾನಂದ ಪ್ರಭುಗಳು ಮನವಿ ಮಾಡಿದರು, ಈ ಅವತಾರದಲ್ಲಿ ಯಾವುದೇ ಆಯುಧವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ವಚನವಿತ್ತಿದ್ದೀರಿ. ಆದುದರಿಂದ ಅವರನ್ನು ಕೊಲ್ಲಬೇಡಿ. ಅವರ ಬಗೆಗೆ ಕರುಣೆ ಇರಲಿ.
ಇದು ವೈಷ್ಣವ ಧರ್ಮ. ಆಗ ಶ್ರೀ ಚೈತನ್ಯ ಮಹಾಪ್ರಭು ಆ ಸೋದರರಿಗೆ ಒಂದು ಷರತ್ತು ಹಾಕಿದರು. “ನಾನು ಇನ್ನು ಪಾಪ ಕರ್ಮಗಳನ್ನು ಮಾಡುವುದಿಲ್ಲ” ಎಂದು ನೀವು ನನಗೆ ವಚನವಿತ್ತರೆ, ನಾನು ನಿಮ್ಮನ್ನು ಸ್ವೀಕರಿಸುವೆ. ಅನಂತರ ಸೋದರರು ಶರಣಾಗಲು ನಿತ್ಯಾನಂದರು ನಿಮಿತ್ತರಾದರು.
ನೀಲಾಚಲದಲ್ಲಿ
ನಿತ್ಯಾನಂದರಿಗೆ ಚೈತನ್ಯರನ್ನು ನೋಡಬೇಕೆನ್ನಿಸಿತು. ಅದು ಮಹಾಪ್ರಭುಗಳ ಅಪೇಕ್ಷೆಯೂ ಆಗಿತ್ತು! ನಿತ್ಯಾನಂದರು ನೀಲಾಚಲಕ್ಕೆ ಬಂದ ಕೂಡಲೇ ಅವರು ಹೂವಿನ ತೋಟದಲ್ಲಿ ತಂಗಿದರು ಮತ್ತು ಧ್ಯಾನಾಸಕ್ತರಾದರು. ಮಹಾಪ್ರಭು ಅಲ್ಲಿಗೇ ಬಂದು ನಿತ್ಯಾನಂದರನ್ನು ಕೊಂಡಾಡಿದರು.
ಚೈತನ್ಯರನ್ನು ನೋಡಿ ನಿತ್ಯಾನಂದ ಪ್ರಭು ಆನಂದಪರವಶರಾದರು. ಪರಸ್ಪರ ಆಲಂಗಿಸಿಕೊಂಡರು, ಕೊಂಡಾಡಿದರು. ಮಹಾಪ್ರಭುಗಳ ಒಂದು ವಿಶೇಷ ಲಕ್ಷಣವೆಂದರೆ, ನಿತ್ಯಾನಂದ ಮತ್ತು ಅದ್ವೈತರನ್ನು ಕೊಂಡಾಡುವುದನ್ನು ಅವರು ಎಂದಿಗೂ ಮರೆಯುವುದಿಲ್ಲ. ಇದು ಮಹಾಪ್ರಭುಗಳ ಪ್ರೇಮ!
ವಿವಾಹ ಪ್ರಸ್ತಾಪ
ಒಂದು ದಿನ ಉಭಯ ಪ್ರಭುಗಳು ಅನೇಕ ವಿಷಯಗಳನ್ನು ಮಾತನಾಡಿಕೊಂಡರು. ತಮ್ಮ ಅವತಾರಗಳ ಬಗೆಗೆ, ತಮ್ಮ ಧ್ಯೇಯಗಳನ್ನು ಕುರಿತು ಸಂವಾದ ನಡೆಯಿತು. ಮಹಾಪ್ರಭು ನುಡಿದರು, “ ಪ್ರಿಯ ನಿತ್ಯಾನಂದ, ಬಂಗಾಳಕ್ಕೆ ಹಿಂದಿರುಗಿ ಮತ್ತು ಮದುವೆಯಾಗಿ. ಪ್ರಚಾರ ಕಾರ್ಯವನ್ನು ಮುಂದುವರಿಸಿ. ಆಗ ಎಲ್ಲರೂ ವಿಮೋಚನೆಗೊಳ್ಳವರು.

ನಿತ್ಯಾನಂದರು ಉತ್ತರಿಸಿದರು, “ನೀವು ಸ್ತ್ರೀ ಆಕರ್ಷಣೆಯಿಂದ ವಿಮುಖರಾದಿರಿ. ಕೃಷ್ಣನಾಮ ಸಂಕೀರ್ತನೆಯಲ್ಲಿ ತೊಡಗಿದಿರಿ. ನೀವು ಎಲ್ಲ ರೀತಿಯ ಸಂತೋಷಗಳನ್ನು ಬಿಟ್ಟುಬಿಟ್ಟಿರಿ ಮತ್ತು ಭಿಕ್ಷುಕನ ವೃತ್ತಿ ಹಿಡಿದಿರಿ. ನನಗೆ ನೀವಲ್ಲದೆ ಇನ್ಯಾರೂ ಇಲ್ಲ. ನಾನು ನಿಮ್ಮ ಶಾಶ್ವತ ಸೇವಕ. ನಿಮ್ಮ ಆದೇಶವನ್ನು ಮೀರಲಾರೆ.
“ ಹೀಗೆ ಹೇಳಿ ನಿತ್ಯಾನಂದರು ಮೌನವಾದರು. ಆಗ ಮಹಾಪ್ರಭು ಅವರ ಕೈ ಹಿಡಿದು ಹೇಳಿದರು,. “ನಾವಿಬ್ಬರೂ ಎಂದಿಗೂ ಬೇರೆಯಾಗುವುದಿಲ್ಲ. ನೀವು ಪ್ರತಿ ವರ್ಷ ಇಲ್ಲಿಗೆ ಬರುವುದು ಬೇಡ. ನೀವು ಅಪೇಕ್ಷಿಸಿದಾಗ ನನ್ನನ್ನು ನೋಡ ಬಹುದು. ಕೀರ್ತನೆಯಲ್ಲಿ ನೀವು ನರ್ತಿಸಿದಾಗ ಅಥವಾ ನನ್ನ ತಾಯಿ ನನಗಾಗಿ ಅಡುಗೆ ಮಾಡಿದಾಗ ನಾನು ಅಲ್ಲಿರುವೆ.“
ಅನಂತರ ನಿತ್ಯಾನಂದ ಪ್ರಭು ಬಂಗಾಳಕ್ಕೆ ಹೊರಟರು. ಚೈತನ್ಯರ ಆದೇಶದಂತೆ ಜಾಹ್ನವಾ ದೇವಿ ಮತ್ತು ಅವಳ ಸೋದರಿ ವಸುಧಾ ದೇವಿಯನ್ನು ವಿವಾಹವಾದರು. ಬಂಗಾಳವನ್ನು ತಮ್ಮ ಪ್ರಚಾರ ಕ್ಷೇತ್ರವನ್ನಾಗಿ ಮಾಡಿಕೊಂಡರು. ಹರಿನಾಮದ ಪ್ರವಾಹದಲ್ಲಿ ಇಡೀ ಬಂಗಾಳವನ್ನು ಮುಳುಗಿಸಿ ಚೈತನ್ಯರ ಆಸೆಯನ್ನು ಪೂರೈಸಿದರು.
ಅವರು ತಮ್ಮ ಗೃಹಸ್ಥಾಶ್ರಮ ಧರ್ಮ ಮತ್ತು ಶ್ರೀ ಶ್ಯಾಮಸುಂದರ ವಿಗ್ರಹ ಆರಾಧನೆ ಎರಡನ್ನೂ ಸಮರ್ಪಣಾಭಾವದಿಂದ ನಿರ್ವಹಿಸುತ್ತಿದ್ದರು. ಜಾಹ್ನವಾ ದೇವಿ ಮತ್ತು ವಸುಧಾ ಅವರಿಬ್ಬರೂ ತಮ್ಮ ಪತಿ ನಿತ್ಯಾನಂದರೊಂದಿಗೆ ಆನಂದದಿಂದ ಇದ್ದರು. ಒಂದು ಶುಭದಿನದಂದು ವಸುಧಾ ಅವರು ಗಂಡು ಮಗುವಿಗೆ ಜನ್ಮವಿತ್ತರು.
ಅತ್ಯಂತ ಸುಂದರವಾಗಿದ್ದ ಮಗುವು ಶ್ರೀ ಗೌರಚಂದ್ರರ ಅವತಾರವೆಂದು ಭಾವಿಸಲಾಗಿತ್ತು. ವೀರಚಂದ್ರ (ವೀರಭದ್ರ) ಎಂದು ಮಗುವಿಗೆ ನಾಮಕರಣ ಮಾಡಲಾಯಿತು. ಮಗುವಿನ ದೈವೀ ರೂಪ ಮತ್ತು ಲೀಲೆಗಳನ್ನು ಕಂಡು ಜನರು ಆನಂದತುಂದಿಲರಾದರು. ವೀರಭದ್ರರು ಸಂನ್ಯಾಸಿಯಾಗಿ, ನಿತ್ಯಾನಂದ ಮತ್ತು ಚೈತನ್ಯರ ಪ್ರಚಾರ ಕಾರ್ಯವನ್ನು ಮುಂದುವರೆಸಿದರು.
ನಿತ್ಯಾನಂದ ಪ್ರಭುಗಳ ಲೀಲೆಗಳು ಅಸೀಮಿತ. ಕೆಲವು ಮುಖ್ಯವಾದವನ್ನು ಉಲ್ಲೇಖಿಸಬಹುದು.
ಸಪ್ತಗ್ರಾಮದ ವರ್ತಕರ ವಿಮೋಚನೆ
ನಿತ್ಯಾನಂದರು ತಮ್ಮ ಸಂಗಾತಿಗಳೊಂದಿಗೆ ಸಪ್ತಗ್ರಾಮಕ್ಕೆ ಬಂದರು. ಈ ಹಿಂದೆ ಅಲ್ಲಿ ಏಳು ಋಷಿಗಳಿದ್ದರಂತೆ. ಅದನ್ನು ತ್ರಿವೇಣಿ ಘಾಟ್ ಎಂದೂ ಕರೆಯುತ್ತಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಿದು. ನಿತ್ಯಾನಂದರು ಈ ಸಂಗಮದಲ್ಲಿ ಮಿಂದು ತಮ್ಮ ಪ್ರೀತಿಯ ಭಕ್ತ ಉದ್ಧಾರಣ ದತ್ತರ ಮನೆಯಲ್ಲಿ ತಂಗಿದರು. ದತ್ತರು ಕಾಯಾ, ವಾಚಾ ಮತ್ತು ಮನಸಾ ತಮ್ಮ ಗುರುವಿನ ಸೇವೆಗೈದರು.
ನಿತ್ಯಾನಂದರು ಸಪ್ತಗ್ರಾಮದಲ್ಲಿ ಪ್ರತಿಯೊಬ್ಬ ವರ್ತಕರ ಮನೆಯಲ್ಲಿಯೂ ಸಂಕೀರ್ತನೆ ನಡೆಸಿದರು. ವರ್ತಕರೂ ಕೂಡ ಅವರ ಚರಣ ಕಮಲವನ್ನು ಪೂಜಿಸಿದರು ಮತ್ತು ಕೃಷ್ಣ ನಾಮ ಸಂಕೀರ್ತನೆಯಲ್ಲಿ ತೊಡಗಿಕೊಂಡರು. ವರ್ತಕ ಸಮುದಾಯದ ಕೃಷ್ಣಭಕ್ತಿಯನ್ನು ಕಂಡು ಜಗತ್ತು ಬೆರಗಾಯಿತು. ಅನಂತರ ನಿತ್ಯಾನಂದರು ತಮ್ಮ ಸಂಗಾತಿಗಳೊಂದಿಗೆ ಶಾಂತಿಪುರಕ್ಕೆ ಬಂದು ತಮಗೆ ಅತ್ಯಂತ ಪ್ರಿಯರಾದ ಅದ್ವೈತ ಆಚಾರ್ಯರ ಮನೆಯಲ್ಲಿ ತಂಗಿದರು.
ಪರಸ್ಪರ ಆನಂದತುಂದಿಲರಾದರು. ಅದ್ವೈತ ಆಚಾರ್ಯರು ನಿತ್ಯಾನಂದರನ್ನು ಸ್ತುತಿಸಿದರು, “ನಿಮ್ಮ ಹೆಸರು ನಿತ್ಯಾನಂದ, ದಿಟವಾಗಿ ನೀವು ನಿತ್ಯಾನಂದರು, ಶಾಶ್ವತ ಪರಮಾನಂದರು. ನೀವು ಶ್ರೀ ಚೈತನ್ಯರ ಅಲೌಕಿಕ ಗುಣಗಳ ಸಾಕಾರ ರೂಪ. ನೀವು ಎಲ್ಲ ಜೀವಿಗಳನ್ನು ಮುಕ್ತಗೊಳಿಸುವಿರಿ. ಚೈತನ್ಯರು ಬೋಧಿಸಿದ ಪ್ರೇಮಭಕ್ತಿಯನ್ನು ನೀಡಲು ನೀವು ಅವತರಿಸಿರುವಿರಿ. ತನ್ನ ಹೆಡೆಗಳ ಮೇಲೆ ವಿಶ್ವವನ್ನೇ ಎತ್ತಿ ಹಿಡಿದಿರುವ ಅನಂತ, ನೀವು. ”
ನವದ್ವೀಪದಲ್ಲಿ ಚೈತನ್ಯರ ಅನೇಕ ಭಕ್ತರಿದ್ದರು. ಹಾಗೆಯೇ ದುಷ್ಕರ್ಮಿಗಳೂ ಇದ್ದರು. ಅವರನ್ನು ಕೃಷ್ಭಭಕ್ತರನ್ನಾಗಿ ಮಾಡಿದ ಹೆಗ್ಗಳಿಕೆ ನಿತ್ಯಾನಂದರಿಗೆ ಸಲ್ಲುತ್ತದೆ. ಒಮ್ಮೆ ಹೀಗಾಯಿತು –
ಕಳ್ಳರ ಮನಪರಿವರ್ತನೆ
ನವದ್ವೀಪದಲ್ಲಿ ಯುವ ಬ್ರಾಹ್ಮಣನಿದ್ದನು. ಅವನು ಮಹಾ ಚೋರ. ತನ್ನದೇ ಗುಂಪು ಕಟ್ಟಿಕೊಂಡು ಕಳ್ಳತನ ಮಾಡುತ್ತಿದ್ದ ಮತ್ತು ಸುಲಿಗೆ ಮಾಡುತ್ತಿದ್ದ. ಅವನು ಒಂದು ದಿನ ನಿತ್ಯಾನಂದರನ್ನು ನೋಡಿದ.

ಅವರು ಧರಿಸಿದ್ದ ಆಭರಣಗಳ ಮೇಲೆ ಅವನ ದೃಷ್ಟಿ ಹರಿಯಿತು. ಹೇಗಾದರೂ ಅದನ್ನು ಕಿತ್ತುಕೊಳ್ಳಬೇಕೆಂದು ಯೋಚಿಸಿದ. ಮಿತ್ರನಂತೆ ನಟಿಸಿ ನಿತ್ಯಾನಂದರೊಂದಿಗೆ ಸಂಚರಿಸಿದ. ಅವಕಾಶ ಮಾಡಿಕೊಂಡು ಆಭರಣಗಳನ್ನು ತೆಗೆದುಕೊಳ್ಳುವುದು ಅವನ ಯೋಜನೆಯಾಗಿತ್ತು. ಆದರೆ ನಿತ್ಯಾನಂದರಿಗೆ ಅದೆಲ್ಲಾ ತಿಳಿದಿತ್ತು.
ಹಿರಣ್ಯ ಪಂಡಿತನೆಂಬ ಸಜ್ಜನ ಬ್ರಾಹ್ಮಣನ ಮನೆಯಲ್ಲಿ ನಿತ್ಯಾನಂದರು ತಂಗುವ ವ್ಯವಸ್ಥೆಯಾಗಿತ್ತು. ಇದನ್ನು ಅರಿತ ಕಳ್ಳ ಬ್ರಾಹ್ಮಣನು ತನ್ನ ತಂಡದೊಂದಿಗೆ ಯೋಜನೆಯನ್ನು ರೂಪಿಸಿದ, “ಮಿತ್ರರೇ ನಾವು ಯಾಕೆ ಕಷ್ಟಪಡಬೇಕು. ಚಂಡೀದೇವಿಯ ಅನುಗ್ರಹ ನಮಗಿದೆ. ಈ ಸಂನ್ಯಾಸಿ ಹಾಕಿಕೊಂಡಿರುವ ಆಭರಣಗಳು ಚಿನ್ನ, ವಜ್ರ ಮತ್ತು ಮುತ್ತುಗಳಿಂದ ಮಾಡಿದವುಗಳಾಗಿವೆ.
ಅವು ಲಕ್ಷಾಂತರ ರೂಪಾಯಿಗಳನ್ನು ತಂದುಕೊಡುತ್ತವೆ. ಈ ರಾತ್ರಿ ಅದನ್ನು ಕಳವು ಮಡೋಣ. ನೀವು ಆಯುಧಗಳೊಂದಿಗೆ ಸಿದ್ಧರಾಗಿ. ಈ ಹಿರಣ್ಯ ಪಂಡಿತನ ಮನೆಗೆ ಖನ್ನ ಹಾಕೋಣ.” ಅದರಂತೆ ಅವರು ಕತ್ತಿ, ಚಾಕು ಇತ್ಯಾದಿ ಆಯುಧಗಳೊಂದಿಗೆ ಆ ರಾತ್ರಿ ಹಿರಣ್ಯ ಪಂಡಿತನ ಮನೆಯ ಬಳಿ ಸೇರಿದರು.
ಸಮೀಪದ ಮರದ ಕೆಳಗೆ ಕುಳಿತು ನಿತ್ಯಾನಂದರು ಮಲಗಲೆಂದು ಕಾದರು. ನಿತ್ಯಾನಂದರ ಹಾರ, ಬಳೆ, ಕಿವಿಯ ಆಭರಣ, ಕಾಲಿನ ಆಭರಣ ಇತ್ಯಾದಿಗಳನ್ನು ಪಡೆಯಲು ಕಳ್ಳರ ಗುಂಪಿನಲ್ಲಿ ಒಪ್ಪಂದವಾಯಿತು!
ಆ ರಾತ್ರಿ ನಿತ್ಯಾನಂದ ಪ್ರಭುಗಳ ಅಪೇಕ್ಷೆಯಂತೆ ನಿದ್ರಾದೇವಿಯು ಕಳ್ಳರನ್ನು ಸೆಳೆದಳು. ಅವರೆಲ್ಲರೂ ತಾವಿದ್ದ ಕಡೆಯೇ ನಿದ್ರೆಗೆ ಜಾರಿದರು. ಬೆಳಗ್ಗೆ ಕಾಗೆಗಳು ಕೂಗಿದಾಗಲೇ ಅವರಿಗೆ ಎಚ್ಚರ! ಯೋಜನೆ ಕಾರ್ಯಗತವಾಗಲಿಲ್ಲ. ಅವರಿಗೆಲ್ಲಾ ನಿರಾಶೆ. ಎಬ್ಬಿಸಲಿಲ್ಲ ಎಂದು ಪರಸ್ಪರ ದೋಷಾರೋಪ ಮಾಡಿಕೊಂಡರು.
ಆಗ ಅವರ ನಾಯಕನಾದ ಬ್ರಾಹ್ಮಣನು ಹೇಳಿದನು, “ಜಗಳ ಬೇಡ. ಪ್ರತಿ ದಿನ ನಾವು ಸೋಲುತ್ತೇವೆಯೇ? ಚಂಡೀದೇವಿಯನ್ನು ಪೂಜಿಸದೆ ಬಂದದ್ದೇ ಹೀಗಾಗಲು ಕಾರಣ. ಈವತ್ತು ಅವಳಿಗೆ ಮಾಂಸ ಮತ್ತು ಮದ್ಯವನ್ನು ಅರ್ಪಿಸಿ ಬರೋಣ. ಖಂಡಿತ ನಮ್ಮ ಕೆಲಸ ಸಫಲವಾಗುತ್ತದೆ.”
ಅದರಂತೆ ಅವರು ತಮ್ಮ ಆಯುಧಗಳೊಂದಿಗೆ ರಾತ್ರಿ ಅಲ್ಲಿಗೆ ಬಂದರು. ಎಲ್ಲರೂ ಮಲಗುವುದನ್ನೇ ಕಾದಿದ್ದು ಒಳ ನುಗ್ಗಲು ಸಿದ್ಧರಾದರು. ಆದರೆ ಇಡೀ ಮನೆಯನ್ನು ಬೇರೆ ದಿವ್ಯ ಆಯುಧಧಾರಿಗಳು ಕಾಯುತ್ತಿದ್ದರು. ಅವರ ಬಳಿ ಹರಿತವಾದ ಆಯುಧಗಳಿದ್ದವು. ಅವುಗಳಿಂದ ಅವರು ತಮ್ಮನ್ನು ಕೊಲ್ಲುವುದು ಸುಲಭ ಎನ್ನುವುದು ಕಳ್ಳರಿಗೆ ಅರ್ಥವಾಯಿತು.
ಆದರೆ ಕಾವಲುಗಾರರು ಎಲ್ಲಿಂದ ಬಂದರೆನ್ನುವುದು ತಿಳಿಯಲಿಲ್ಲ. ಕಳ್ಳರ ನಾಯಕ ಹೇಳಿದನು, “ಬಹುಶಃ ನಿತ್ಯಾನಂದರನ್ನು ನೋಡಲು ಯಾರೋ ಶ್ರೀಮಂತರು ಬಂದಿರಬೇಕು. ಇವರೆಲ್ಲ ಅವರ ಕಾವಲು ಪಡೆ ಇರಬಹುದು.” ಹೀಗೆಂದು ಭಾವಿಸಿ ಅವರೆಲ್ಲರೂ ಕೆಲವು ದಿನಗಳ ನಂತರ ಬರುವುದೆಂದು ನಿರ್ಧರಿಸಿ ಹಿಂದಿರುಗಿದರು. ನಿತ್ಯಾನಂದರು ಆರಾಮವಾಗಿ ಮಲಗಿದರು!
ಕೆಲವು ದಿನಗಳ ಅನಂತರ ಕಳ್ಳರು ಪುನಃ ಬಂದರು. ಅಂದು ದಟ್ಟ ಕತ್ತಲೆ, ಏನೂ ಕಾಣಿಸುತ್ತಿರಲಿಲ್ಲ. ಅವರು ನಿತ್ಯಾನಂದರ ಮನೆಯ ಬಳಿಗೆ ಬಂದಾಗ ಅವರಿಗೆಲ್ಲಾ ಕಣ್ಣು ಕಾಣಿಸದಂತಾಯಿತು. ಹೀಗಾಗಿ ಅವರ ಬುದ್ಧಿಶಕ್ತಿ ಕೆಲಸ ಮಾಡಲಿಲ್ಲ. ಕೆಲವರು ಹಳ್ಳದಲ್ಲಿ ಬಿದ್ದರೆ ಮತ್ತೊಬ್ಬರು ಕೊಳಚೆ ನೀರಿನ ಮೋರಿಯಲ್ಲಿ ಬಿದ್ದರು! ಇದರೊಂದಿಗೆ ದಿಢೀರನೆ ಬಿರುಗಾಳಿ ಮತ್ತು ಮಳೆ ಉಂಟಾಯಿತು.
ಇದು ಇಂದ್ರದೇವನ ಲೀಲೆಯಾಗಿತ್ತು. ಕಳ್ಳರು ನಡುಗಿದರು. ಕೊನೆಗೆ ಕಳ್ಳರ ನಾಯಕನಾದ ಬ್ರಾಹ್ಮಣನಿಗೆ ಮನಪರಿವರ್ತನೆಯಾಯಿತು. “ನಿತ್ಯಾನಂದ ದೇವರಿರಬೇಕು. ಜನರು ಹೇಳುವುದು ನಿಜವಿರಬಹುದು. ನಾವು ದೇವರ ಆಭರಣ ಕದಿಯಲು ಯೋಜಿಸಿದ್ದರಿಂದಲೇ ಇಷ್ಟೆಲ್ಲಾ ಕಷ್ಟಪಡಬೇಕಾಯಿತು.
ಈಗ ನಮ್ಮನ್ನು ಯಾರು ರಕ್ಷಿಸುತ್ತಾರೆ? ನಿತ್ಯಾನಂದರಿಗೆ ಶರಣಾಗುವುದೊಂದೇ ದಾರಿ.” ಅವನು ಮನದಲ್ಲಿಯೇ ಅವರ ಚರಣಕಮಲಕ್ಕೆ ಪ್ರಾರ್ಥಿಸಿದನು. ಇತರ ಕಳ್ಳರೂ ಅದೇ ರೀತಿ ಮಾಡಿದಾಗ ಎಲ್ಲರಿಗೂ ಕಣ್ಣು ಕಾಣಿಸುವಂತಾಯಿತು. ಅನಂತರ ಎಲ್ಲರೂ ಗಂಗಾ ನದಿಯಲ್ಲಿ ಮಿಂದು ನಿತ್ಯಾನಂದರ ಮನೆಗೆ ಬಂದು ಕಾಲಿಗೆರಗಿದರು. ನಿತ್ಯಾನಂದರು ಅವರಿಂದ ನಡೆದುದನ್ನು ಕೇಳಿ ಅವರನ್ನು ವಿಮೋಚನೆಗೊಳಿಸಿದರು. ಅವರೆಲ್ಲರೂ ಕೂಡಲೇ ನಿತ್ಯಾನಂದರ ಭಕ್ತರಾದರು.
ಅಂತರ್ಧಾನ
ನಿತ್ಯಾನಂದರು ಕಡದಹಾದಲ್ಲಿ ಆಶ್ರಮ ಸ್ಥಾಪಿಸಲು ನಿರ್ಧರಿಸಿದರು. ಅಂತೆಯೇ ಅಲ್ಲಿಗೆ ಹೋದರು. ಜಾಹ್ನವಾ ದೇವಿ ಮತ್ತು ವಸುಧಾ ಅವರಿಬ್ಬರೂ ತಮ್ಮ ಪತಿ ನಿತ್ಯಾನಂದರೊಂದಿಗೆ ಆನಂದದಿಂದ ಇದ್ದರು. ಅನಂತರ ಅವರು ವಸುಧಾ ಮತ್ತು ಜಾಹ್ನವಾ ಅವರೊಂದಿಗೆ ಏಕಚಕ್ರ ಪಟ್ಟಣಕ್ಕೆ ಬಂದರು.

ಬಂಕರಾಯ ವಿಗ್ರಹ, ಏಕಚಕ್ರ.
ಅಲ್ಲಿ ಬಂಕಾರಾಯನ ವಿಗ್ರಹವನ್ನು ಕಂಡು ಭಾವಾವೇಶಗೊಂಡರು. ಪ್ರಜ್ಞೆ ಮರಳಿದ ಮೇಲೆ ತಮ್ಮ ದೇವನಿಗೆ ಪೂಜೆ ಸಲ್ಲಿಸಿದರು. ಕೆಲವು ದಿನಗಳ ಕಾಲ ನಿತ್ಯಾನಂದರು ಅಲ್ಲಿಯೇ ಇದ್ದರು. ಅನಂತರ ಒಂದು ದಿನ ಬಂಕಾರಾಯನ ಮಂದಿರದೊಳಗೆ ಪ್ರವೇಶಿಸಿದರು. ಮತ್ತು ಅಲ್ಲಿಯೇ ಅಂತರ್ಧಾನರಾದರು. ಈ ಅಗಲಿಕೆಯಿಂದ ಎಲ್ಲರೂ ದುಃಖಿತರಾದರು. ಆದರೆ, ವೀರಭದ್ರನನ್ನು ಕಂಡು ಸಮಾಧಾನಮಾಡಿಕೊಳ್ಳುತ್ತಿದ್ದರು.
ಯಾರು ಶ್ರೀ ನಿತ್ಯಾನಂದರ ಲೀಲೆಗಳನ್ನು ಓದುವರೋ ಅಥವಾ ಕೇಳುವರೋ ಅವರು ಕೃಷ್ಣಪ್ರೇಮ ಎನ್ನುವ ನಿಧಿಯನ್ನು ಪಡೆಯುವರು. ಶ್ರೀ ಕೃಷ್ಣ ಚೈತನ್ಯ ಮತ್ತು ಶ್ರೀ ನಿತ್ಯಾನಂದರಿಗೆ ಜಯವಾಗಲಿ!






Leave a Reply