ಪುಷ್ಟಿದಾಯಕ ಕೂರ್ಮಾಗಳು

ಕೂರ್ಮಾ ಎಲ್ಲದರ ಜೊತೆ ತಿನ್ನಲು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದನ್ನು ಚಪಾತಿ, ಪೂರಿ, ಪರೋಟ, ದೋಸೆ, ರೊಟ್ಟಿ ಮತ್ತು ಅನ್ನದ ಜೊತೆಯಲ್ಲಿ ತಿನ್ನಬಹುದು. ಇದು ಹಲವಾರು ತರಕಾರಿಗಳ ಮತ್ತು ಪನ್ನೀರಿನ ಮಿಶ್ರಣವಾಗಿರುವುದರಿಂದ ರುಚಿಕರವಾಗಿರುವುದಲ್ಲದೆ ಪೌಷ್ಟಿಕವಾಗಿಯೂ, ಆರೋಗ್ಯಕ್ಕೆ ಉತ್ತಮವಾಗಿಯೂ ಇರುತ್ತದೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಆಲೂ ಮೇಥಿ ಕೂರ್ಮಾ

ಬೇಕಾಗುವ ಪದಾರ್ಥಗಳು :

ಮೆಂತ್ಯ ಸೊಪ್ಪು – 2 ಕಟ್ಟು

ಆಲೂಗಡ್ಡೆ – 3

ಚೆಕ್ಕೆ – 1 ಚಿಕ್ಕ ಚೂರು

ಲವಂಗ – 3

ಏಲಕ್ಕಿ – 2

ಶುಂಠಿ – ಸ್ವಲ್ಪ

ತೆಂಗಿನ ಹಾಲು – 1 ಕಪ್‌

ಅಚ್ಚ ಖಾರದ ಪುಡಿ – 1 1/2 ಚಮಚ

ಧನಿಯಾ ಪುಡಿ – 1 ಚಮಚ

ಜೀರಿಗೆ ಪುಡಿ – 1/2 ಚಮಚ

ಅರಿಶಿನ – ಸ್ವಲ್ಪ

ಇಂಗು – 1 ಚಿಟಿಕೆ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 3 ಚಮಚ

ಮಾಡುವ ವಿಧಾನ : ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಆಲೂಗಡ್ಡೆ ಬೇಯಿಸಿ, ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ನುಣ್ಣಗೆ ಪುಡಿಮಾಡಿಕೊಳ್ಳಿ. ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಚೆಕ್ಕೆ, ಲವಂಗ, ಏಲಕ್ಕಿ, ಸಣ್ಣದಾಗಿ ಕತ್ತರಿಸಿದ ಶುಂಠಿ ಹಾಕಿ ಬಾಡಿಸಿ. ಅನಂತರ ಮೆಂತ್ಯಸೊಪ್ಪು, ಅರಿಶಿನ, ಉಪ್ಪನ್ನು ಹಾಕಿ ಎಣ್ಣೆಯಲ್ಲೇ ಚೆನ್ನಾಗಿ ಬೇಯಿಸಿ. ಆಮೇಲೆ ಅಚ್ಚ ಖಾರದ ಪುಡಿ, ಧನಿಯಾಪುಡಿ, ಜೀರಿಗೆಪುಡಿ, ಇಂಗು, ಬೇಯಿಸಿ ಪುಡಿಮಾಡಿದ ಆಲೂಗಡ್ಡೆ, ತೆಂಗಿನಕಾಯಿ ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಇಳಿಸುವ ಮೊದಲು ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಆಲೂ-ಮೇಥಿ ಕೂರ್ಮಾ ಸವಿಯಲು ಸಿದ್ಧ. ಇದು ಅನ್ನ ಮತ್ತು ರೋಟಿಯ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಷಾಹಿ ಪನ್ನೀರ್‌ ಕೂರ್ಮಾ

ಬೇಕಾಗುವ ಪದಾರ್ಥಗಳು :

ಪನ್ನೀರ್‌ ತುಂಡುಗಳು – 2 ಕಪ್‌

ಅಚ್ಚ ಖಾರದ ಪುಡಿ – 1 ಚಮಚ

ಧನಿಯಾ ಪುಡಿ – 1 ಚಮಚ

ಜೀರಿಗೆ ಪುಡಿ – 1/2 ಚಮಚ

ಹಾಲು – 1 ಕಪ್‌

ಖೋವಾ – 1/2 ಕಪ್‌

ಹಸಿಮೆಣಸಿನಕಾಯಿ – 4

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಫ್ರೆಶ್‌ ಕ್ರೀಮ್‌ – 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 5 ಚಮಚ

ಮಾಡುವ ವಿಧಾನ : ಮೊದಲು ಪನ್ನೀರ್‌ ತುಂಡುಗಳನ್ನು ಎಣ್ಣೆಯಲ್ಲಿ ಕರಿಯಿರಿ. ಅದೇ ಎಣ್ಣೆಗೆ ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿ. ಅನಂತರ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಕಾಯಿಸಿದ ಹಾಲನ್ನು ಹಾಕಿ ಕುದಿಸಿ. ಕುದಿ ಬಂದ ಅನಂತರ ಎಣ್ಣೆಯಲ್ಲಿ ಕರಿದ ಪನ್ನೀರ್‌, ಖೋವಾ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಬೇಯಿಸಿ, ಇಳಿಸುವ ಮೊದಲು ಫ್ರೆಶ್‌ ಕ್ರೀಮ್‌ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಯಾದ ಷಾಹಿ ಪನ್ನೀರ್‌ ಕೂರ್ಮ ಸವಿಯಲು ಸಿದ್ಧ.

ಪಾಲಕ್‌ ಪನ್ನೀರ್‌ ಕೂರ್ಮಾ

ಬೇಕಾಗುವ ಪದಾರ್ಥಗಳು :

ಪಾಲಕ್‌ ಸೊಪ್ಪು – 4 ಕಟ್ಟು

ಪನ್ನೀರ್‌ ತುಂಡುಗಳು – 1 ಕಪ್‌

ಚೆಕ್ಕೆ – 2 ಚಿಕ್ಕ ತುಂಡು

ಲವಂಗ – 4

ಏಲಕ್ಕಿ – 2

ಶುಂಠಿ – ಸ್ವಲ್ಪ

ಹಸಿಮೆಣಸಿನಕಾಯಿ – 3

ಅಚ್ಚ ಖಾರದ ಪುಡಿ – 1 ಚಮಚ

ಧನಿಯಾ ಪುಡಿ – 1 ಚಮಚ

ಜೀರಿಗೆ ಪುಡಿ – 1/2 ಚಮಚ

ಅರಿಶಿನ – ಸ್ವಲ್ಪ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 3 ಚಮಚ

ಮಾಡುವ ವಿಧಾನ : ಮೊದಲು ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ಸ್ವಲ್ಪ ನೀರಿನಲ್ಲಿ 5 ನಿಮಿಷ ಬೇಯಿಸಿ. ಅನಂತರ ಪಾಲಕ್‌ಸೊಪ್ಪು, ಶುಂಠಿ, ಹಸಿಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಪನ್ನೀರನ್ನು ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದ ಅನಂತರ ಲವಂಗ, ಚೆಕ್ಕೆ, ಏಲಕ್ಕಿ ಹಾಕಿ ಬಾಡಿಸಿ, ಆಮೇಲೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಬಾಡಿಸಿ. ಅನಂತರ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಅರಿಶಿನ, ಉಪ್ಪನ್ನು ಹಾಕಿ ಕುದಿಸಿ. ಕೊನೆಯದಾಗಿ ಎಣ್ಣೆಯಲ್ಲಿ ಕರಿದ ಪನ್ನೀರನ್ನು ಹಾಕಿ ಕುದಿಸಿ ಇಳಿಸಿ. ಇದು ಚಪಾತಿ, ರೋಟಿಯ ಜೊತೆ ತಿನ್ನಲು ತುಂಬ ರುಚಿಯಾಗಿ ಇರುತ್ತದೆ.

ವೆಜಿಟೆಬಲ್‌ ಕೂರ್ಮಾ

ಬೇಕಾಗುವ ಪದಾರ್ಥಗಳು :

ಸಣ್ಣಗೆ ಹೆಚ್ಚಿದ ಬೀನ್ಸ್‌, ಆಲೂಗಡ್ಡೆ, ಕ್ಯಾರೆಟ್‌, ಕಾಲಿಫ್ಲವರ್‌, ಹಸಿ ಬಟಾಣಿ – ತಲಾ 1 ಕಪ್‌

ಒಣ್ಣಕೊಬ್ಬರಿ ತುರಿ – 3 ಚಮಚ

ಗಸಗಸೆ – 2 ಚಮಚ

ಹಸಿಮೆಣಸಿನಕಾಯಿ – 5

ಹುರಿಗಡಲೆ – 1 ಚಮಚ

ಅಚ್ಚ ಖಾರದ ಪುಡಿ – 1 ಚಮಚ

ಒಣಮೆಣಸಿನಕಾಯಿ – 2

ಜೀರಿಗೆ ಪುಡಿ – 1 ಚಮಚ

ಶುಂಠಿ – ಸ್ವಲ್ಪ

ಧನಿಯಾಪುಡಿ – 1 ಚಮಚ

ಕರಿಬೇವು – 1 ಎಸಳು

ಅರಿಶಿನ – ಸ್ವಲ್ಪ

ಫ್ರೆಶ್‌ ಕ್ರೀಮ್‌ – 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 3 ಚಮಚ

ಮಾಡುವ ವಿಧಾನ : ಎಲ್ಲ ತರಕಾರಿಗಳನ್ನು ನೀರಿನಲ್ಲಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಅನಂತರ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಬೇಯಿಸಿಕೊಂಡ ತರಕಾರಿಗಳನ್ನು ಒಂದು ಕಡೆ ಇಟ್ಟುಕೊಳ್ಳಿ. ಹುರಿಗಡಲೆ, ಒಣಕೊಬ್ಬರಿ ತುರಿ, ಗಸಗಸೆ, ಹಸಿಮೆಣಸಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಎಣ್ಣೆಗೆ ಕರಿಬೇವು, ಸಣ್ಣಗೆ ಮುರಿದ ಒಣಮೆಣಸಿನಕಾಯಿ, ಜಜ್ಜಿದ ಶುಂಠಿ, ಧನಿಯಾಪುಡಿ, ಅಚ್ಚ ಖಾರದ ಪುಡಿ ಹಾಕಿ ಬಾಡಿಸಿ, ಅನಂತರ ಬೇಯಿಸಿಕೊಂಡ ತರಕಾರಿಗಳನ್ನು ಹಾಕಿ ಸ್ವಲ್ಪ ಹೊತ್ತು ಎಣ್ಣೆಯಲ್ಲಿ ಬೇಯಿಸಿ. ಅರಿಶಿನಪುಡಿ, ರುಬ್ಬಿಕೊಂಡ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಬೇಕಾಗುವಷ್ಟು ನೀರು ಸೇರಿಸಿ ಕುದಿಸಿ, ಚೆನ್ನಾಗಿ ಕುದಿಸಿದ ಅನಂತರ ಫ್ರೆಶ್‌ ಕ್ರೀಮ್‌ ಹಾಕಿ ಇಳಿಸಿ, ಇದು ಪೂರಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ.

ಈ ಲೇಖನ ಶೇರ್ ಮಾಡಿ