ದೀಕ್ಷೆ ಸ್ವೀಕರಿಸುವಾಗ…

ನನ್ನದೇ ದೃಷ್ಟಿಯಲ್ಲಿ ನನ್ನನ್ನು ನಾನು ಒಂದು ರೀತಿಯ ಪುನರುತ್ಥಾನದ ಮಾನವನೆಂದು ಪರಿಗಣಿಸಿಕೊಂಡಿದ್ದೆ. ಆದರೆ ಶ್ರೀಲ ಪ್ರಭುಪಾದರ ಗಹನವಾದ ಗ್ರಂಥಗಳನ್ನು ಓದಿದಾಗ ನಾನು ಯಾವುದರಲ್ಲಿ ತೊಡಗಿಕೊಳ್ಳಬೇಕೆಂಬುದು ನನಗೆ ಸ್ಪಷ್ಟವಾಯಿತು.

ಆಂಗ್ಲಮೂಲ: ಸತ್ಯರಾಜ ದಾಸ

ಅದು ಜುಲೈ 10, 1975. ಅತ್ಯಂತ ಸುಂದರವಾದ ಬೇಸಗೆಯ ದಿನ, ನಾನು 20 ವರ್ಷದ ಲವಲವಿಕೆಯ ಯುವಕನಾಗಿದ್ದರೂ ಈ ಸಂದರ್ಭದಲ್ಲಿ ಒಳಗೇ ಇರಲು ನನಗೆ ಯಾವ ಅಳುಕೂ ಇರಲಿಲ್ಲ. ಪುರಾತನ ಪರಂಪರೆಯ ಕೃಷ್ಣ ಪ್ರಜ್ಞೆಗೆ ನಾನು ದೀಕ್ಷೆ ಪಡೆಯುವವನಿದ್ದೆ. ಅದೂ ನನ್ನ ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಸಂಸ್ಥಾಪಕರೂ ಆಚಾರ್ಯರೂ ಆದ ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರಿಂದ ದೀಕ್ಷೆ ಸ್ವೀಕರಿಸುವವನಿದ್ದೆ.

ಈ ದಿಶೆಯಲ್ಲಿ ನಾನು ಕೆಲ ಸಮಯದಿಂದ ಕಾರ್ಯತತ್ಪರನಾಗಿದ್ದೆ. 1973ರಲ್ಲಿ, ಆಂದೋಲನವನ್ನು ಸೇರಿದಾಗ ಸಣ್ಣ ಪ್ರಯೋಗವನ್ನು ಮಾಡುವುದು ನನ್ನ ಉದ್ದೇಶವಾಗಿತ್ತು. ನಾನು ಆಗಷ್ಟೇ ಗಾಂಧೀಜಿಯವರ ಆತ್ಮಚರಿತ್ರೆ “ಮೈ ಎಕ್ಸಪೆರಿಮೆಂಟ್ಸ್‌ ವಿತ್‌ ಟ್ರೂತ್‌” ಓದಿದ್ದೆ. ಅದೇ ರೀತಿ ನಾನು ಪ್ರಯೋಗ ಮಾಡಿದರೆ ಎಂದು ರೋಮಾಂಚನಗೊಳ್ಳುತ್ತಿದ್ದೆ. ಆಂದೋಲನಕ್ಕೆ ಸೇರುವ ಮುನ್ನ ನಾನು ಇರ್ವಿಂಗ್‌ ಸ್ಟೋನ್‌ ಅವರ ಕೃತಿ “ಆಗೊನಿ ಅಂಡ್‌ ದಿ ಎಕ್ಸ್‌ಟೆಸಿ” ಓದಿದ್ದೆ. ಇದು ಖ್ಯಾತ ಕಲಾವಿದ ಮೈಕಲೇಂಜಲೋ ಅವರ ಬದುಕನ್ನು ಕುರಿತ ಕಥಾರೂಪ. ಪುನರುಜ್ಜೀವನ ಕಾಲದ ಈ ಶ್ರೇಷ್ಠ ಕಲಾವಿದನು ಪೋಪ್‌ ಸಿಕ್ಸ್‌ಟಸ್‌ IV ಅವರ ಮನವಿ ಮೇರೆಗೆ ಸಿಸ್ಟೈನ್‌ ಚಾಪಲ್‌ದ ಚಾವಣಿಯಲ್ಲಿ ಚಿತ್ರ ರಚಿಸುವ ನಿರ್ಧಾರ ಕೈಗೊಂಡಿದ್ದನು. ನಾನು ಇದರಿಂದ ಆಕರ್ಷಿತನಾಗಿದ್ದೆ. ಪೋಪ್‌ ಅವರಿಗಾಗಿ ಚಿತ್ರ ಕಲಾವಿದನಾದ ಮೈಕಲೇಂಜಲೋ ನಿರ್ಧಾರವು ಶರಣಾಗತಿಯ ಮನಸ್ಥಿತಿಯನ್ನು ತೋರುತ್ತಿತ್ತು. ಏಕೆಂದರೆ ಈ ಕಲಾವಿದನು ತನ್ನನ್ನು ತಾನು ಮೂಲತಃ ಶಿಲ್ಪಿ ಎಂದು ಭಾವಿಸಿದ್ದ.

ದೇವರ ಭಕ್ತನಾಗುವುದಕ್ಕಿಂತ ನನ್ನನ್ನು ನಾನು ಬೇರೆಯದೇ ಆಗಿ ಕಲ್ಪಿಸಿಕೊಂಡಿದ್ದೆ. ನಾನು ಸಂಗೀತಗಾರ, ಕಲಾವಿದ ಮತ್ತು ಒಂದು ರೀತಿಯಲ್ಲಿ ವಿದ್ವಾಂಸನಾಗಿದ್ದೆ. ಆದುದರಿಂದ ನನ್ನದೇ ರೀತಿಯಲ್ಲಿ ನನ್ನನ್ನು ನಾನು ಪುನರುಜ್ಜೀವನ ಕಾಲದ ವ್ಯಕ್ತಿ ಎಂದು ಭಾವಿಸಿಕೊಂಡಿದ್ದೆ. ಆದರೆ ಪುರಾತನ ವೈದಿಕ ಸಾಹಿತ್ಯವನ್ನು ಕುರಿತ ಶ್ರೀಲ ಪ್ರಭುಪಾದರ ಭಾಷಾಂತರ ಮತ್ತು ವ್ಯಾಖ್ಯಾನ ಗ್ರಂಥಗಳನ್ನು ಓದಿದಾಗ ನಾನು ಯಾವುದರಲ್ಲಿ ತೊಡಗಿಕೊಳ್ಳಬೇಕೆಂಬುದು ನನಗೆ ಸ್ಪಷ್ಟವಾಯಿತು. ಈ ಲೋಕದಲ್ಲಿ ಭಗವಂತನ ಧ್ಯೇಯ ಧರ್ಮದ ಮೂಲವು ಪೂರ್ವದಲ್ಲಿ ಎಂದು ಕೃಷ್ಣ ಪ್ರಜ್ಞೆಗೆ ಬರುವ ಮೊದಲು ನಾನು ಓದಿದ್ದೆ. ಅಮೆರಿಕದ ಯೋಗ ಗುಂಪುಗಳು ಮತ್ತು ಧ್ಯಾನ ಕೇಂದ್ರಗಳು ಸಂಪೂರ್ಣ ಆಧ್ಯಾತ್ಮಿಕವಾದ ಜೀವನ ವಿಧಾನಕ್ಕಾಗಿ ಹಾತೊರೆಯುತ್ತಿದ್ದ ನನಗೆ ತೃಪ್ತಿ ಉಂಟುಮಾಡಲಿಲ್ಲ. ನಾನು ಭಾರತಕ್ಕೆ ಚಿಕ್ಕ ಪ್ರವಾಸ ಕೈಗೊಂಡೆ. ಆದರೆ ನಿರಾಶೆಯಿಂದ ಹಿಂದಿರುಗಿದೆ. ಅನೇಕ ದೇವರು ಮತ್ತು ಕುಟುಂಬ ಆಧಾರಿತ ಜಾತಿ ತಾರತಮ್ಯಗಳಿಂದ ಸಾಂಪ್ರದಾಯಿಕ ಹಿಂದೂ ಧರ್ಮವು ತೀರಾ ಸೈದ್ಧಾಂತಿಕವೆನಿಸಿತು. ಆದರೂ, ಹಿಂದೂ ಧರ್ಮದ ಬೇರು ವೈದಿಕ ಸಾಹಿತ್ಯದಲ್ಲಿದೆ ಎಂಬುವುದು ನನಗೆ ಗೊತ್ತಿತ್ತು. ಆಧ್ಯಾತ್ಮಿಕ ಸತ್ಯದ ಈ ಮೂಲದಲ್ಲಿ ನಾನು ಆಸಕ್ತನಾದೆ.

ಸಂಸ್ಕೃತ ಕಲಿಕೆ

ವೇದಗಳನ್ನು ಸಂಸ್ಕೃತದಲ್ಲಿ ರಚಿಸಲಾಗಿದೆ ಎಂಬುವುದು ತಿಳಿದಿದ್ದರಿಂದ ನಾನು ನ್ಯೂಯಾರ್ಕ್‌ನ ಕ್ವೀನ್ಸ್‌ ಕಾಲೇಜಿನಲ್ಲಿ ಸಂಸ್ಕೃತ ತರಗತಿಗೆ ದಾಖಲಾದೆ. ಈ ಭಾಷೆಯನ್ನು ಕಲಿತರೆ ನಾನು ಗ್ರಂಥಗಳ ಅರ್ಥವನ್ನು ಸ್ವತಃ ಗ್ರಹಿಸಕೊಳ್ಳಬಹುದೆಂದು ಭಾವಿಸಿದೆ. ಇದರಿಂದ ನಾನು ಜನಪ್ರಿಯ ಯೋಗಿ ಮತ್ತು ಸ್ವಾಮಿಗಳ ವ್ಯಾಖ್ಯಾನಗಳನ್ನು ಅವಲಂಬಿಸಬೇಕಾಗಿಲ್ಲ ಎಂಬುವುದು ನನ್ನ ಯೋಚನೆ.

ನನ್ನ ಪ್ರಾಧ್ಯಾಪಕರು ಶ್ರೀಲ ಪ್ರಭುಪಾದರ “ಭಗವದ್ಗೀತೆ ಯಥಾ ರೂಪ”ವನ್ನು ಬೋಧನೆ ಸಮಯದಲ್ಲಿ ಬಳಸುತ್ತಿದ್ದರು. ನಾನು ಗೀತೆಯ ಅನೇಕ ಮುದ್ರಣಗಳನ್ನು ಓದಿದ್ದೆ. ಆದರೆ ಶ್ರೀಲ ಪ್ರಭುಪಾದರ ಕೃತಿಯನ್ನು ಓದಿದ ಮೇಲೆ ನನಗೆ ಕೃಷ್ಣನೇ ಸ್ವತಃ ದೇವರು ಮತ್ತು ಹಿಂದೂ ಧರ್ಮದ ಅಪಕೀರ್ತಿಗೆ ಕಾರಣವಾಗಿರುವ ಅನೇಕ ದೇವರುಗಳ ಕಲ್ಪನೆಯು ಇತ್ತೀಚಿನದೆಂಬುದು ಅರಿವಾಯಿತು. ನನಗಂತೂ ಇದು ಅತ್ಯಂತ ಮುಖ್ಯವಾದ ರಹಸ್ಯ ಬಹಿರಂಗ : ಹಿಂದೂ ತತ್ತ್ವವು ನೆಲೆಯೂರಿರುವ ಧರ್ಮವು ಪ್ರಬಲವಾದ ಏಕದೈವವಾದುದು!

ಅಧ್ಯಯನದ ಲಾಭ

ಜಾತಿ ಭೇದವನ್ನು ಕುರಿತಂತೆ ಬ್ರಿಟಿಷರು ಮತ್ತು ಅನೇಕ ಆಧುನಿಕ ಹಿಂದೂಗಳು ಅರ್ಥೈಸುವುದಕ್ಕೂ ವೈದಿಕ ಗ್ರಂಥಗಳಲ್ಲಿ ವಾಸ್ತವವಾಗಿ ಬೋಧಿಸಿರುವುದಕ್ಕೂ ಏನೇನೂ ಸಂಬಂಧವಿಲ್ಲ ಎಂಬುವುದನ್ನು ಅರಿತು ನನಗೆ ಆಶ್ಚರ್ಯವಾಯಿತು. ಜನ್ಮದಿಂದ ವ್ಯಕ್ತಿಯು ನಿರ್ದಿಷ್ಟ ಜಾತಿಗೆ ಸೇರಿದವನಾಗುತ್ತಾನೆಂಬ ತಪ್ಪು ಗ್ರಹಿಕೆ ಜನಪ್ರಿಯವಾಗಿದೆ. ಆದರೆ ವ್ಯಕ್ತಿಯ ಸಾಮಾಜಿಕ ಸ್ಥಾನವನ್ನು ನಿರ್ಧರಿಸುವುದು ಅವನ ಗುಣ ಮತ್ತು ಕೆಲಸ ಎಂದು ವೇದಗಳು, ಮುಖ್ಯವಾಗಿ ಭಗವದ್ಗೀತೆಯು ಬೋಧಿಸುತ್ತವೆ. ಉದಾಹರಣೆಗೆ ಒಬ್ಬ ವ್ಯಕ್ತಿಯನ್ನು ಬ್ರಾಹ್ಮಣನೆಂದು ಪರಿಗಣಿಸುವುದು ಅವನು ಬುದ್ಧಿಜೀವಿ ಎಂದೇ ವಿನಾ ಅವನು ಬ್ರಾಹ್ಮಣ ತಂದೆಗೆ ಹುಟ್ಟಿದವನೆಂದಲ್ಲ. ಸಂಸ್ಕೃತ ಪುಸ್ತಕಗಳಲ್ಲಿ ಇದು ಸ್ಪಷ್ಟವಾಗಿದೆ. ಆದುದರಿಂದ ನನ್ನ ಸಂಸ್ಕೃತ ಅಧ್ಯಯನವು ನನಗೆ ವೈದಿಕ ಸಾಹಿತ್ಯದ ತರ್ಕ ಮತ್ತು ಶ್ರೀಲ ಪ್ರಭುಪಾದರ ಭಾಷಾಂತರ ಮತ್ತು ವ್ಯಾಖ್ಯಾನದ ಯಥಾರ್ಥವನ್ನು ನೋಡಲು ನೆರವಾಯಿತು.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಭುಪಾದರು ಭಗವದ್ಗೀತೆಯ ಯಥಾ ರೂಪವನ್ನಷ್ಟೇ ಮುಂದಿಟ್ಟಿರಲಿಲ್ಲ, ಅವರು ಮೂಲ ವೈದಿಕ ಸಂಸ್ಕೃತಿಯ ಯಥಾ ರೂಪವನ್ನು ಸಮರ್ಥಿಸಿಕೊಳ್ಳುತ್ತಿದ್ದರು ಎಂಬ ಅಂಶ ನನಗೆ ಅರಿವಾಯಿತು. ನಾನು ಅದನ್ನೇ ಕಾಣಬಯಸಿದ್ದೆ ಎಂಬುವುದು ನನಗೆ ಗೊತ್ತಿತ್ತು.

ಸಂಸ್ಕೃತ ಭಾಷೆಯು ನನಗೆ ಹೆಚ್ಚು ಪರಿಚಯವಾದ ಮೇಲೆ ಮತ್ತು ಅದು ಸೇರಿದ್ದ ಪುರಾತನ ವೈದಿಕ ಪರಂಪರೆಯ ಬಗೆಗೆ ಅರಿಯುತ್ತಿದ್ದಂತೆ ನನಗೆ ಶ್ರೀಲ ಪ್ರಭುಪಾದರ ಪ್ರಾಮಾಣ್ಯದ ಬಗೆಗೆ ಮನವರಿಕೆಯಾಯಿತು. ನನ್ನ ಭಗವದ್ಗೀತೆಯ ಹಿಂಬದಿಯ ಪಟ್ಟಿಯಲ್ಲಿ ಹೆಸರಿದ್ದ ನ್ಯೂಯಾರ್ಕ್‌ ಸಿಟಿಯಲ್ಲಿನ ಪ್ರಭುಪಾದರ ಹರೇ ಕೃಷ್ಣ ಕೇಂದ್ರಕ್ಕೆ ಭೇಟಿ ನೀಡಬೇಕೆಂಬ ಒತ್ತಾಸೆ ನನಗುಂಟಾಯಿತು.

ಅದೃಷ್ಟವಶಾತ್‌, 1973ರ ವಸಂತ ಕಾಲದಲ್ಲಿ, ಮಳೆ ಬೀಳುತ್ತಿದ್ದಾಗ ಶ್ರೀಲ ಪ್ರಭುಪಾದರು ಬ್ರೂಕ್ಲಿನ್‌ನಲ್ಲಿ ಇದ್ದ ಹೆನ್ರಿ ರಸ್ತೆ ಮಂದಿರದಲ್ಲಿ ಉಪನ್ಯಾಸ ನೀಡುತ್ತಿದ್ದರು. ಶ್ರೀಲ ಪ್ರಭುಪಾದರು ಹೆಚ್ಚು ಪ್ರವಾಸದಲ್ಲಿ ಇರುತ್ತಿದ್ದರೂ ಅಂದು ಅಲ್ಲಿ ಉಪನ್ಯಾಸ ನೀಡುತ್ತಿದ್ದರು. ಇದು ಕೃಷ್ಣನು ನನಗೆ ತೋರಿದ ಕೃಪೆ ಎಂದು ನಾನು ಈಗ ಗ್ರಹಿಸಿದೆ. ಏಕೆಂದರೆ, ಸಿನಿಕನಾದ ನನಗೆ ಕೃಷ್ಣ ಪ್ರಜ್ಞೆಯ ತರ್ಕ ಸಮ್ಮತವನ್ನು ಪ್ರಭುಪಾದರಲ್ಲದೆ ಇನ್ಯಾರು ಮನವರಿಕೆ ಮಾಡಿಕೊಡುವುದು ಸಾಧ್ಯವಿತ್ತು?

ತಾರ್ಕಿಕ ಸಿದ್ಧಾಂತದ ವಾಸ್ತವತೆ ಮತ್ತು ಮೂಲ ತತ್ತ್ವದ ಸತ್ಯತೆ ಕುರಿತಂತೆ ನಾನು ಪ್ರಶ್ನೆಗಳ ಮಾಲೆಯನ್ನೇ ತಂದಿದ್ದರೂ ನಾನು ನಿರಾಸೆಯಿಂದ ವಾಪಸಾಗಲಿಲ್ಲ. ಶ್ರೀಲ ಪ್ರಭುಪಾದರ ಉಪನ್ಯಾಸದಿಂದ ನಾನು ದಿಗ್ಭ್ರಮೆಗೊಂಡೆ. ನಾನು ಕೇಳದೆಯೇ ಅವರು ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದರು! ಅದಕ್ಕೂ ಅಧಿಕವಾಗಿ!

ಆದರೂ ನಾನು ಆರೋಗ್ಯಪೂರ್ಣ ಸಿನಿಕತನವನ್ನು ಕಾಪಾಡಿಕೊಂಡಿದ್ದೆ. ಸತ್ಯದ ಅನ್ವೇಷಣೆಯಲ್ಲಿ ತರ್ಕ ಮತ್ತು ಕಾರಣವನ್ನು ಬಳಸಬೇಕೆಂದು ಧರ್ಮ ಗ್ರಂಥಗಳು ಸೂಚಿಸಿವೆ. ಹೀಗಾಗಿ ನಾನು ಒಂದು ಇಡೀ ವರ್ಷ ಶ್ರೀಲ ಪ್ರಭುಪಾದರ ಪುಸ್ತಕಗಳ ಗಾಢ ಅಧ್ಯಯನ ಮಾಡಿದೆ, ಮಂದಿರಕ್ಕೆ ಭೇಟಿ ನೀಡಿದೆ ಮತ್ತು ಪ್ರಶ್ನೆಗಳನ್ನು ಕೇಳಿದೆ. ಕೃಷ್ಣ ಪ್ರಜ್ಞೆಯ ಮೂಲ ಆಚರಣೆಗಳನ್ನು ನಾನು ಅಳವಡಿಸಿಕೊಂಡೆ. ಅಂದರೆ, ಜಪ ಮಾಲೆ ಮೂಲಕ ಪ್ರತಿ ದಿನ ಹರೇ ಕೃಷ್ಣ ಮಂತ್ರವನ್ನು ಪಠಿಸಲಾರಂಭಿಸಿದೆ ಮತ್ತು ಮಾಂಸ ಸೇವನೆ, ಅನೈತಿಕ ಲೈಂಗಿಕ ಕ್ರಿಯೆ, ಮದ್ಯ ಸೇವನೆ ಮತ್ತು ಜೂಜು ಇವುಗಳನ್ನು ಬಿಟ್ಟುಬಿಟ್ಟೆ. ಸಂತೋಷ ಮತ್ತು ಸುಖವನ್ನು ಅರಸುತ್ತ ನಾನು ಈ ಮೊದಲು ಈ ಎಲ್ಲ ಚಟುವಟಿಕೆಗಳಲ್ಲಿ ತೊಡಗಿದ್ದೆ. ಆದರೆ ಇಂದ್ರಿಯ ಆನಂದದಲ್ಲಿ ಎಷ್ಟೇ ಯಶಸ್ವಿಯಾದರೂ ನಿಜವಾದ ಸುಖ ನನ್ನಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ನನಗೆ ಹೇಗೋ ತಿಳಿಯುತ್ತಿತ್ತು. ಹಿಂದಿನದರ ಅವಲೋಕನ ಮಾಡಿದಾಗ, ನನ್ನ ಮೊದಲ ಲೋಲುಪತೆಯು ನನ್ನ ನಿರ್ಧಾರವನ್ನು ಪುನರ್‌ ಸ್ಥಾಪಿಸಲು ನೆರವಾಯಿತೆಂದು ನಾನು ಭಾವಿಸಿದೆ. ಏಕೆಂದರೆ ಇಂದ್ರಿಯ ತೃಪ್ತಿಹೊಂದಿದರೂ ನನ್ನ ಸಂತೋಷ ದಿನೇ ದಿನೇ ಕಡಮೆಯಾಗುತ್ತಿತ್ತು. ಲೌಕಿಕ ಅಸ್ತಿತ್ವದ ನೋವನ್ನು ಸ್ತಬ್ಧಗೊಳಿಸಲು ನಾನು ಪಾಪದ ಜೀವನದಲ್ಲಿ ತೊಡಗಿದ್ದರೂ ಅದು ಕಾರ್ಯಗತವಾಗುತ್ತಿರಲಿಲ್ಲ. ಬದಲಿಗೆ, ನಾನು ಹೆಚ್ಚು ಹೆಚ್ಚು ತೊಡಕಿಗೆ ಸಿಕ್ಕಿಕೊಳ್ಳುತ್ತಿದ್ದೆ. ನನಗೆ ಸಂತೋಷ ಮತ್ತು ಸ್ವಾತಂತ್ರ್ಯವನ್ನು ತಂದುಕೊಡುತ್ತಿದೆ ಎಂದು ನಾನು ಭಾವಿಸಿದ್ದ ಚಟುವಟಿಕೆಗಳೇ ವಾಸ್ತವವಾಗಿ ನನ್ನ ಸಂಕಟ ಮತ್ತು ಬಂಧನಗಳ ಮೂಲವಾಗಿದ್ದವು. ಯಾವುದು ರೋಗಕ್ಕೆ ಕಾರಣವೋ ಅದನ್ನೇ ನಾನು ಔಷಧವೆಂದು ಆಲಿಂಗಿಸಿಕೊಂಡಿದ್ದೆ.

ಆರಂಭದಲ್ಲಿ ನಾನು ಸ್ವಲ್ಪ ಹೆಚ್ಚು ತಪ್ಪು ಮಾಡಿದೆ. ಆದರೆ ನಾನು ಮೂಲ ನಿಯಮಗಳನ್ನು ಪಾಲಿಸುವುದರಲ್ಲಿ ಹೆಚ್ಚು ದೃಢನಾದಾಗ ನನಗೆ ನನ್ನ ಪ್ರಜ್ಞೆ ಶುದ್ಧವಾಗುತ್ತಿದೆ ಎನ್ನಿಸಿತು. ಕ್ರಮೇಣ ಶುದ್ಧ ಜೀವನ ನಡೆಸುವುದು ಸುಲಭವೆನಿಸಿತು. ಆದರೂ ವಿಷಯಗಳು `ಸುಲಭ’ವಾಗುತ್ತಿದ್ದರೂ ಅವು ಸವಾಲಾಗಿಯೇ ಇದ್ದವು. ಮತ್ತು ಜೀವಮಾನ ಬದ್ಧತೆಗೆ ಬೇಕಾಗಿರುವುದು ನನ್ನ ಬಳಿ ಇತ್ತೋ ಇಲ್ಲವೋ ಎಂಬುವುದು ನನಗೆ ತಿಳಿದಿರಲಿಲ್ಲ. ಈ ಅನಿಶ್ಚಿಯತೆ ಇದ್ದರೂ ನನ್ನ ಪ್ರಯೋಗಗಳು ಹೆಚ್ಚು ಗಂಭೀರವಾಗತೊಡಗಿದವು.

ನೇರ ಭೇಟಿ

1974ರಲ್ಲಿ, ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದ ರಥಯಾತ್ರೆ ಸಂದರ್ಭದಲ್ಲಿ ಶ್ರೀಲ ಪ್ರಭುಪಾದರ ಉಪನ್ಯಾಸವನ್ನು ನಾನು ಕೇಳಿದೆ. ಶ್ರೀಲ ಪ್ರಭುಪಾದರು ಅಂದು ಭಗವಂತನ ವೈಭವಗಳನ್ನು ಕೊಂಡಾಡುತ್ತ ಭಕ್ತರೊಂದಿಗೆ ಹಾಡಿದರು, ನರ್ತಿಸಿದರು. ಅವರು ಸಂತೋಷದಿಂದ ಇದ್ದರು. ಅದು ಎಲ್ಲರಿಗೂ ತಿಳಿಯುತ್ತಿತ್ತು. ಇಲ್ಲಿ ಒಬ್ಬರು ತಾವು ಬೋಧಿಸಿದ್ದನ್ನು ಆಚರಿಸುತ್ತಿದ್ದಾರೆ ಎಂದು ನಾನು ಯೋಚಿಸಿದೆ. ಈ ಘಟನೆಯು ಕೃಷ್ಣ ಪ್ರಜ್ಞೆಯ ವಿಧಾನಗಳಲ್ಲಿನ ನನ್ನ ನಂಬಿಕೆಯನ್ನು ಬಲಪಡಿಸಿತು. ಶ್ರೀಲ ಪ್ರಭುಪಾದರೇ ನನ್ನ ಆಧ್ಯಾತ್ಮಿಕ ಮಾರ್ಗದರ್ಶಿಗಳೆಂದೂ ಒಂದಲ್ಲ ಒಂದು ದಿನ ಅವರಿಂದ ದೀಕ್ಷೆ ಪಡೆಯುವೆನೆಂದೂ ನನಗೆ ಅಂದು ಅಲ್ಲಿಯೇ ತಿಳಿದು ಹೋಯಿತು. ನನ್ನ ಗೊಂದಲ ಏನೇ ಇದ್ದರೂ, ನಾನೊಂದು ಬದ್ಧತೆಯನ್ನು ಮಾಡಬೇಕೆಂಬುದು ನನಗೆ ಅರಿವಿತ್ತು. ಹಾಗೆ ಮಾಡದಿದ್ದರೆ ಅದು ನನ್ನನ್ನು ಕೀಳಾಗಿಸುತ್ತಿತ್ತು.

ಹೆಚ್ಚು ನಿಷ್ಠಾವಂತ ಅನುಯಾಯಿಯಾದ ಮೇಲೆ, ನಾನು ಪ್ರತಿ ದಿನ ಹೊರಗೆ ಸಂಚರಿಸಿ ಶ್ರೀಲ ಪ್ರಭುಪಾದರ ಪುಸ್ತಕಗಳನ್ನು ವಿತರಿಸುತ್ತಿದ್ದೆ. ಅದು ಹೇಗೋ ನನ್ನ ಮೇಲೆ ಅನುಗ್ರಹಿತವಾಗಿದ್ದ ಈ ಸಂಪತ್ತನ್ನು ಹಂಚಿಕೊಳ್ಳಬೇಕೆನಿಸಿತು. ಈ ದಿಶೆಯಲ್ಲಿ ನಾನು ಶ್ರೀ ಶ್ರೀ ರಾಧಾ ದಾಮೋದರ ಸಂಕೀರ್ತನ ತಂಡವನ್ನು ಸೇರಿದೆ. ಶ್ರೀಲ ಪ್ರಭುಪಾದರ ಸಾಹಿತ್ಯ ಮತ್ತು ಸಂದೇಶವನ್ನು ಜಗತ್ತಿಗೆ ಹರಡಲು ಮಗ್ನವಾಗಿದ್ದ ಭಕ್ತರ ತಂಡವದು.

ಫೆಬ್ರವರಿ 28, 1975. ಜಾರ್ಜಿಯಾದ ಅಟ್ಲಾಂಟದಲ್ಲಿ ಒಂದು ಚಳಿಯ ದಿನ. ನಾವು ಅಲ್ಲಿ ಶ್ರೀಲ ಪ್ರಭುಪಾದರನ್ನು ಭೇಟಿ ಮಾಡಲು ಬಂದಿದ್ದೆವು. ಕರಾಕಸ್‌ ಮತ್ತು ಮಿಯಾಮಿಗಳಲ್ಲಿ ಯಶಸ್ವೀ ಉಪನ್ಯಾಸಗಳ ಅನಂತರ ಅವರು ಇಲ್ಲಿಗೆ ಬರುವವರಿದ್ದರು. ಪ್ರಭುಪಾದರನ್ನು ಹಾರ್ದಿಕವಾಗಿ ಸ್ವಾಗತಿಸಲು ನೆರೆದಿದ್ದ ಸುಮಾರು 300 ಉತ್ಸಾಹಿಗಳಲ್ಲಿ ನಾನೂ ಒಬ್ಬನಾಗಿದ್ದೆ. ಈ ಗುಂಪಿನಲ್ಲಿ ಹಿರಿಯ ಮತ್ತು ಕಿರಿಯರಿಬ್ಬರೂ ಇದ್ದರು. ನಮ್ಮಲ್ಲಿ ಅನೇಕ ಭಕ್ತರು ದೀಕ್ಷೆ ಪಡೆದಿರಲಿಲ್ಲವಾದರೂ ನಾವು ತೀವ್ರವಾಗಿ ಬದ್ಧರಾಗಿದ್ದೆವು. ಬಹುಶಃ ಮುಂದಿನ ಆರು ತಿಂಗಳೊಳಗೆ ದೀಕ್ಷೆ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿದ್ದವು.

ಮುಂದಿನ ನಾಲ್ಕು ದಿನ ಬೆಳಗ್ಗೆ ನಾವು ಕೃಷ್ಣ ಪ್ರಜ್ಞೆಯ ಮೂಲ ತತ್ತ್ವ ಕುರಿತು ಶ್ರೀಲ ಪ್ರಭುಪಾದರು ನೀಡಿದ ಅತ್ಯಂತ ಸ್ಪಷ್ಟ ಮತ್ತು ಕರಾರುವಾಕ್ಕಾದ ನಿರೂಪಣೆಯನ್ನು ಕೇಳಿದೆವು. ಮೂಲ ತತ್ತ್ವಗಳ ವಿವರಣೆಯು ಯುವಕರಿಗೆ ಪುಸ್ತಕ ವಿತರಣೆ ಸಂದರ್ಭದಲ್ಲಿ
ಬೋಧಿಸಲು ನೆರವಾಗುವುದೆಂದು ಪ್ರಭುಪಾದರಿಗೆ ತಿಳಿದಿತ್ತು. ಮೂಲತತ್ತ್ವಗಳನ್ನು ಕುರಿತ ಅಂತಹ ಪ್ರಭುತ್ವಪೂರ್ಣ ವಿವರಣೆಯನ್ನು ಕೇಳಿ ನನಗೆ ಅದೇ ಸತ್ಯವನ್ನು ಇತರರಿಗೆ ತಿಳಿಸುವ ನನ್ನ ಸಾಮರ್ಥ್ಯದಲ್ಲಿ ವಿಶ್ವಾಸ ಮೂಡಿತು.

ಪ್ರಶ್ನೆಗೆ ಮೊದಲೇ ಉತ್ತರ

ಅಟ್ಲಾಂಟದ ಆ ಮುಂಜಾನೆ ಚಳಿಯಲ್ಲಿನ ಉಪನ್ಯಾಸಗಳ ಸಂದರ್ಭದಲ್ಲಿ ನಿತ್ಯ ಒಂದು ಕುತೂಹಲದಾಯಕ ಘಟನೆ ನಡೆಯುತ್ತಿತ್ತು. ಶ್ರೀಲ ಪ್ರಭುಪಾದರೊಂದಿಗೆ ನಿಕಟ ಬಾಂಧವ್ಯ ಬೆಳೆಸಿಕೊಳ್ಳಬೇಕೆಂಬ ಆಸೆಯಿಂದ ನಾನು ಅವರ ಉಪನ್ಯಾಸದ ಮುನ್ನ ಗಾಢವಾದ ಅನೇಕ ತಾತ್ತ್ವಿಕ ಪ್ರಶ್ನೆಗಳನ್ನು ಯೋಜಿಸುತ್ತಿದ್ದೆ. ಉಪನ್ಯಾಸದ ಅನಂತರ ಈ ಪ್ರಶ್ನೆಗಳನ್ನು ಕೇಳಿ ಆಧ್ಯಾತ್ಮಿಕ ವಿನಿಮಯದಲ್ಲಿ ಆನಂದಿಸುವ ಅವಕಾಶ ದೊರೆಯಬಹುದೆಂಬ ಆಸೆ ನನ್ನದು. ಆದರೆ ನಾನು ಕೇಳದೆಯೇ ಅವರು ತಮ್ಮ ಉಪನ್ಯಾಸಗಳಲ್ಲಿ ಆ ಪ್ರಶ್ನೆಗಳಿಗೆ ಉತ್ತರಿಸಿರುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ನಾನು ಆ ದಿನದ ಉಪನ್ಯಾಸಕ್ಕೆ ಸಂಬಂಧಿಸಿಲ್ಲದ ವಿಷಯಗಳ ಬಗೆಗೂ ಉದ್ದೇಶಪೂರ್ವಕವಾಗಿ ಪ್ರಶ್ನೆಗಳ ಬಗೆಗೆ ಯೋಚಿಸುತ್ತಿದ್ದೆ. ಆದರೆ ಯಾವಾಗಲೂ ಪ್ರಶ್ನೆಗಳಿಗೆ ಉತ್ತರಿಸಲಾಗಿರುತ್ತಿತ್ತು.

ನಾಲ್ಕನೆಯ ದಿನದ ವೇಳೆಗೆ ಅದು ಕಾಕತಾಳೀಯಕ್ಕಿಂತ ಹೆಚ್ಚಿನದೆಂದು ನನಗೆ ಖಚಿತವಾಗಿತ್ತು. ಆಧ್ಯಾತ್ಮಿಕ ಗುರುವಾಗಿ ಅವರಿಗೆ ನನ್ನ ಮನಸ್ಸು ನನಗಿಂತಾ ಹೆಚ್ಚಾಗಿ ತಿಳಿದಿತ್ತೆಂಬ ವಿಶ್ವಾಸ ನನಗಿತ್ತು. ಇದನ್ನು ಸ್ಪಷ್ಟಪಡಿಸಲೋ ಎಂಬಂತೆ, ಉಪನ್ಯಾಸದ ಅನಂತರ ಅವರು ನನ್ನ ಕಡೆ ತಿರುಗಿ (ನಾನು ಕೆಲವೇ ಅಡಿ ದೂರದಲ್ಲಿದ್ದೆ!), “ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಕಿದೆಯೇ?” ಎಂದು ಕೇಳಿದರು.

ಅದಕ್ಕೆ ಪ್ರತಿಯಾಗಿ ನಾನು ನನ್ನ ಬಾಯಿ ತೆರೆದು ಕುಳಿತುಬಿಟ್ಟೆ. ಉಪನ್ಯಾಸ ನೀಡಿದ ಮೇಲೆ ಆ ರೀತಿ ಕೇಳುವುದು ಅವರಿಗೆ ಸಾಮಾನ್ಯವಾಗಿತ್ತು. ಆದರೆ ಈ ಸಂದರ್ಭದಲ್ಲಿ ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ್ದರು. ನನಗಂತೂ ಅದು ವಿಶೇಷ ಅರ್ಥವನ್ನೇ ನೀಡಿತ್ತು.

ಶ್ರೀಲ ಪ್ರಭುಪಾದರು ಅಟ್ಲಾಂಟವನ್ನು ಬಿಡುವ ಮುನ್ನ ಮತ್ತು ನಾವು ಅವರ ಪುಸ್ತಕ ವಿತರಣೆಗಾಗಿ ದೇಶಾದ್ಯಂತ ನಮ್ಮ ಪ್ರವಾಸ ಮುಂದುವರಿಸುವ ಮುನ್ನ ಪ್ರಭುಪಾದರನ್ನು ಭೇಟಿ ಮಾಡುವ ಅವಕಾಶ ಲಭ್ಯವಾಯಿತು. ನಮ್ಮ ತಂಡದ ನಾಯಕರಾದ ತಮಾಲ ಕೃಷ್ಣ ಗೋಸ್ವಾಮಿ ಅವರು ಪ್ರಭುಪಾದರಿಗೆ ನಮ್ಮನ್ನೆಲ್ಲ ಭೇಟಿ ಮಾಡುವ ಇಚ್ಛೆ ಇದೆಯೆ ಎಂದು ಕೇಳಿದರು. ನಮಗೆಲ್ಲ ವಿಶೇಷ ಪ್ರೋತ್ಸಾಹ ನೀಡುವ ಆಶಯದಿಂದ ಅವರು ಒಪ್ಪಿದರು.

ಪ್ರಭುಪಾದರನ್ನು ಅನೇಕ ಬಾರಿ ನೋಡಿದ್ದೆ. ಅವರ ಧ್ವನಿ ಮುದ್ರಿಕೆಗಳನ್ನು ಕೇಳುತ್ತಿದ್ದೆ. ಮತ್ತು ಅವರ ಪುಸ್ತಕಗಳನ್ನು ಎಚ್ಚರಿಕೆಯಿಂದ ಓದುತ್ತಿದ್ದೆ. ಆದರೂ ವಾಸ್ತವವಾಗಿ ಭೇಟಿ ಮಾಡುತ್ತಿದ್ದದ್ದು ಇದೇ ಮೊದಲು. ಅನೇಕ ರೀತಿಯಲ್ಲಿ ಇದು ಪ್ರಮುಖ ಮತ್ತು ಆನಂದದಾಯಕ ಭೇಟಿಯಾಗಿದ್ದರೂ ನಾನು ಹೆದರಿದ್ದೆ ಮತ್ತು ಭಾವೋದ್ರೇಕಗೊಂಡಿದ್ದೆ. ಆಧ್ಯಾತ್ಮಿಕ ಪಥಕ್ಕೆ ನನ್ನ ಬದ್ಧತೆಯನ್ನು ಇದು ತೀವ್ರಗೊಳಿಸುವುದೆಂದು ನನಗೆ ತಿಳಿದಿತ್ತು. ಅದೇ ನನ್ನಲ್ಲಿ ಭೀತಿ ಮೂಡಿಸಿತು. ನಾನು ಸಿದ್ಧವಾಗಿರುವೆನೆ? “ದಾರುಣ ವೇದನೆ ಮತ್ತು ಆನಂದಪರವಶತೆ”ಯ ಲಕ್ಷಣಗಳು ನನ್ನ ಮನವನ್ನು ಪ್ರವೇಶಿಸಿದವು. ಮೈಕಲೇಂಜಲೋಗೆ ಶಿಲ್ಪವನ್ನು ನಿರ್ಮಿಸಬೇಕೆಂದಿತ್ತು. ಆದರೆ ಪೋಪರ ಅಪೇಕ್ಷೆಗೆ ಶರಣಾಗುವ ಮೂಲಕ ಅವನು ಚಿತ್ರಕಾರನಾಗಿ ಹೊಸ ಬದುಕಿನ ಶಿಲ್ಪವನ್ನು ರೂಪಿಸಿಕೊಂಡ.

ಎರಡು ವರ್ಷಗಳಿಂದ ಮಾತ್ರ ನಾನು ಒಪ್ಪಿಕೊಂಡಿದ್ದ ನನ್ನ ಆಧ್ಯಾತ್ಮಿಕ ಗುರು ಈಗ ನನ್ನ ಬದುಕಿನಲ್ಲಿ ಇನ್ನೂ ಹೆಚ್ಚು ನಿಕಟವಾಗಿ ಮತ್ತು ವೈಯಕ್ತಿಕವಾಗಿ ಪ್ರವೇಶಿಸುವವರಿದ್ದರು. ನಮ್ಮ ರಾಧಾ ದಾಮೋದರ ತಂಡವು ಕೃಷ್ಣನ ನಾಮಗಳನ್ನು ಹಾಡುತ್ತ, ನರ್ತಿಸುತ್ತ ಅವರ ಕೋಣೆಯತ್ತ ಸಾಗಿತು. ನಮ್ಮ, ಎಲ್ಲ ದೈವ ಸೋದರರ ಬಾಂಧವ್ಯವು ನಮ್ಮ ಆಧ್ಯಾತ್ಮಿಕ ತಂದೆ ಶ್ರೀಲ ಪ್ರಭುಪಾದರ ಆಶ್ರಯದಲ್ಲಿ ಗಾಢವಾಗುವುದೆಂದು ಆಗ ನನಗನಿಸಿತು.

ಶ್ರೀಲ ಪ್ರಭುಪಾದರಿಗೆ ನಮ್ಮನ್ನು ಒಬ್ಬೊಬ್ಬರನ್ನಾಗಿ ಪರಿಚಯಿಸಲಾಯಿತು. ನಾವು ಅವರಿಗೆ ಸುವಾಸಿತ ಪುಷ್ಪವನ್ನು ನೀಡಿದೆವು. ಅವರು ಅದನ್ನು ಸಂತೋಷದಿಂದ ಸ್ವೀಕರಿಸಿದರು. ಅನಂತರ ನಾವು ಸಾಷ್ಟಾಂಗ ನಮಸ್ಕಾರ ಮಾಡಿದೆವು. ನಮ್ಮೆಲ್ಲರ ಸೇವೆಗಳನ್ನು ತಮಾಲ ಕೃಷ್ಣ ಅವರು ವಿವರಿಸುತ್ತಿದ್ದಾಗ ಶ್ರೀಲ ಪ್ರಭುಪಾದರು ಹಸನ್ಮುಖರಾಗಿದ್ದರು.

“ಇವರು ಟಾಂ. ಭಕ್ತರು ಪ್ರಯಾಣಿಸುವ ಬಸ್ಸಿನ ವ್ಯವಸ್ಥೆ ಮಾಡುವರು.” ಪ್ರಭುಪಾದರು ತಲೆಯಾಡಿಸುತ್ತ ಒಪ್ಪಿಗೆ ಸೂಚಿಸಿದರು. “ಇವರು ಡ್ಯಾನಿ. ಇವರು ಸ್ವಚ್ಛತಾ ಕಾರ್ಯ ನಿರ್ವಹಿಸುವರು. ಪಾಕಶಾಲೆಯಲ್ಲಿ ಮ್ಯಾಕ್‌ಗೆ ನೆರವಾಗುವರು. ಬಾಬ್‌ ನಿಮ್ಮ ಪುಸ್ತಕಗಳನ್ನು ವಿತರಿಸುವರು…”

“ಓ?” ಎಂದು ಮಧ್ಯಪ್ರವೇಶಿಸಿದ ಪ್ರಭುಪಾದರು, “ತುಂಬ ಒಳ್ಳೆಯದು” ಎಂದರು. ತಮ್ಮ ಪುಸ್ತಕಗಳ ವಿತರಣೆಯು ಅವರಿಗೆ ಆದ್ಯತೆಯ ವಿಷಯವೆಂಬುದು ಇದರಿಂದ ಸ್ಪಷ್ಟವಾಯಿತು. ಇತರ ಎಲ್ಲ ಸೇವೆಗಳೂ ಮೌಲ್ಯವಾದುವೇ. ಅಲೌಕಿಕ ಜ್ಞಾನ ಮತ್ತು ಭಗವತ್‌ ಪ್ರೇಮವನ್ನು ಹರಡುವ ಪುಸ್ತಕ ವಿತರಣೆ ಸೇವೆಗೆ ಆ ಸೇವೆಗಳು ನೆರವಾಗುತ್ತವೆ.

ನನ್ನ ಪರಿಚಯ. ನಾನೂ ಪುಸ್ತಕ ವಿತರಕ. ನನ್ನ ಸೇವೆಯಿಂದ ಪ್ರಭುಪಾದರು ಸಂತುಷ್ಟರಾಗುವರೆಂಬ ವಿಶ್ವಾಸ ನನಗಿತ್ತು. ತಮಾಲ ಕೃಷ್ಣ ಗೋಸ್ವಾಮಿ ನನ್ನನ್ನು ಪರಿಚಯಿಸಿದರು, “ಇದು ಸ್ಟೀವ್‌. ಇವರೂ ನಿಮ್ಮ ಪುಸ್ತಕಗಳನ್ನು ವಿತರಿಸುವರು.” ಏನೂ ಪ್ರತಿಕ್ರಿಯೆ ಇಲ್ಲ. ನಾನು ಅವರಿಗೆ ಹೂವು ನೀಡಲು ಹೋದಾಗ ಅದೇ ಘಟನೆ ಪುನರಾವರ್ತನೆಯಾಯಿತು ಎಂದು ನಾನು ಅರ್ಥ ಮಾಡಿಕೊಂಡೆ. ಈ ಮೊದಲು ಪುಸ್ತಕ ವಿತರಕನ ಬಗೆಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರಿಂದ ನನಗೆ ಹೊಸದೇನೂ ಹೇಳುವ ಅಗತ್ಯ ಅವರಿಗಿರಲಿಲ್ಲ. ನಾನು ಕೇಳುವ ಮುನ್ನವೇ ನನ್ನ ಪ್ರಶ್ನೆಗಳಿಗೆ ಉತ್ತರಿಸಿದಂತೆ ಇದು. ಆದರೂ ಕೆಲ ಕ್ಷಣಗಳಾದ ಮೇಲೆ ಪ್ರಭುಪಾದರು ನನ್ನತ್ತ ನೋಡಿ, ಕೈಮುಗಿದು ಹೇಳಿದರು, “ತುಂಬ ಕೃತಜ್ಞತೆಗಳು.” ತತ್‌ಕ್ಷಣ ನಾನು ಎಂದೂ ಅನುಭವಿಸದ ಆಧ್ಯಾತ್ಮಿಕ ವಿನಿಮಯವನ್ನು ಅನುಭವಿಸಿದೆ. ಅವರು ನನ್ನ ಸೇವೆಯನ್ನು ಶ್ಲಾಘಿಸಿದರು. ನಾನು ಅವರ ಪ್ರೋತ್ಸಾಹವನ್ನು ಕೊಂಡಾಡಿದೆ. ನಾನು ನನ್ನ ಆಧ್ಯಾತ್ಮಿಕ ತಂದೆಯ ಬಳಿ ಇದ್ದೆನೆಂದು ಆ ಕ್ಷಣ ಅರಿತುಕೊಂಡೆ.

* * *

ನಾಲ್ಕು ತಿಂಗಳು ಕಳೆಯಿತು. ಕೃಷ್ಣ ಪ್ರಜ್ಞೆಯ ಸಂದೇಶವನ್ನು ಹಂಚುತ್ತ ನಾವು ಅಮೆರಿಕದಾದ್ಯಂತ ಸಂಚರಿಸುತ್ತಿದ್ದೆವು. ವಚನ ಬದ್ಧರಾದವರಿಗೆ ಶಾಸ್ತ್ರೋಕ್ತವಾಗಿ ದೀಕ್ಷೆ ನೀಡಲು ಪ್ರಭುಪಾದರು ನಮ್ಮನ್ನು ಷಿಕಾಗೋದಲ್ಲಿ ಭೇಟಿ ಮಾಡವರೆಂದು ಜುಲೈನಲ್ಲಿ ನಮಗೆ ಹೇಳಲಾಯಿತು. ಪವಿತ್ರ ಧಾರ್ಮಿಕ ವಿಧಿ ದೀಕ್ಷೆಯ ಮೂಲಕ ಇದೀಗ 75 ಯುವ ಭಕ್ತರು ವೈದಿಕ ಪರಂಪರೆಯೊಂದಿಗಿನ ಸಂಪರ್ಕವನ್ನು ಬಲಪಡಿಸಿಕೊಳ್ಳುವರು. ಅನಂತರ ನಾವೆಲ್ಲರೂ ಷಿಕಾಗೋದಲ್ಲಿ 1975ರ ರಥಗಳ ಉತ್ಸವದಲ್ಲಿ (ರಥ ಯಾತ್ರೆ) ಪಾಲ್ಗೊಳ್ಳುವೆವು.

ಶ್ರೀಮದ್‌ ಭಾಗವತವನ್ನು ಕುರಿತ ಶ್ರೀಲ ಪ್ರಭುಪಾದರ ಉಪನ್ಯಾಸಗಳನ್ನು ಕೇಳುತ್ತ ನಾವು ಪುನಃ ಅನೇಕ ಮುಂಜಾನೆಗಳನ್ನು ಕಳೆದೆವು. ಎವಾನ್‌ಸ್ಟನ್‌ ಮಂದಿರದ ದೊಡ್ಡ ಸಭಾಂಗಣದಲ್ಲಿ ಈ ಬಾರಿ ನೂರಾರು ಭಕ್ತರು ಸೇರುತ್ತಿದ್ದರು. ಪ್ರಭುಪಾದರು ಅಜಾಮಿಳನ ಬದುಕಿನ ಬಗೆಗೆ ವಿವರಿಸಲು ಈ ಅವಕಾಶವನ್ನು ಬಳಸಿಕೊಂಡರು. ಪಾಪಿಯಾಗಿದ್ದ ಅಜಾಮಿಳನು ತನ್ನ ಸಾವಿನ ಸಮಯದಲ್ಲಿ “ನಾರಾಯಣ! ನಾರಾಯಣ!” ಎಂದು ಭಗವಂತನನ್ನು ಕರೆಯುವ ಮೂಲಕ ತನ್ನನ್ನು ಕಾಪಾಡಿಕೊಂಡಿದ್ದನು.

ಈ ಕಥೆಯನ್ನು ಹೇಳುತ್ತ ಆನಂದಿಸುತ್ತಿದ್ದರು. ಏಕೆಂದರೆ ಇಲ್ಲಿ ಪವಿತ್ರ ನಾಮದ ಶಕ್ತಿ ಸ್ಪಷ್ಟವಾಗಿತ್ತು. ಅಜಾಮಿಳನು ತನ್ನ ಮಗನಿಗೆ ದೇವರ ನಾಮ ನಾರಾಯಣ ಎಂದು ಹೆಸರಿಟ್ಟಿದ್ದ. ಸಾವಿನ ಸಂದರ್ಭದಲ್ಲಿ ಅವನು ಪ್ರಾಮಾಣಿಕವಾಗಿ ಆ ಹುಡುಗನನ್ನು ಕರೆಯುತ್ತಿದ್ದ. ಅವನು ನಾರಾಯಣನ ಹೆಸರು ಕರೆದಿದ್ದರಿಂದ ಅವನು ಕಾಪಾಡಲ್ಪಟ್ಟ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆ ಪಡೆಯಲು ಅವಕಾಶ ಪಡೆದ. “ಇದು ಪವಿತ್ರ ನಾಮದ ಶಕ್ತಿ. ಲಕ್ಷ್ಯವಿಲ್ಲದೆ ಜಪಿಸಿದರೂ ತೀವ್ರ ಪ್ರಭಾವ ಬೀರುತ್ತದೆ” ಎಂದು ಪ್ರಭುಪಾದರು ಹೇಳಿದರು.

ಪವಾಡ

ಪ್ರಭುಪಾದರ ಷಿಕಾಗೋ ಉಪನ್ಯಾಸದ ನಾಲ್ಕನೆಯ ದಿನ ಪವಾಡವೊಂದು ನಡೆಯಿತು. ಅಜಾಮಿಳನ ಕಥೆ ಹೇಳುವಾಗ ಶ್ರೀಮನ್ನಾರಾಯಣನ ಹೆಸರನ್ನು ಅನೇಕ ಬಾರಿ ಪುನರುಚ್ಚರಿಸುತ್ತ ಪ್ರಭುಪಾದರು ಸಮಾಧಿಸ್ಥರಾದರು. ಅವರು ಇದನ್ನು ತುಂಬ ಅಪರೂಪವಾಗಿ, ಬಹಿರಂಗವಾಗಿ ತೋರುತ್ತಿದ್ದರು. ಕೋಣೆಯಲ್ಲಿ ಗಾಢ ಮೌನ ಆವರಿಸಿತು. ಈ ಅಲೌಕಿಕ ಘಟನೆಯನ್ನು ವೀಕ್ಷಿಸುವ ಕೃಪೆ ನಮಗೆ ಲಭಿಸಿತ್ತು. ನಾರಾಯಣನ ಹೆಸರನ್ನು ಕರೆಯುತ್ತ ಪ್ರಭುಪಾದರು ನಾರಾಯಣನನ್ನು ನೇರವಾಗಿ ನೋಡುತ್ತಿದ್ದರು. ಅವರ ಸಮಾಧಿಯಂತಹ ಸ್ಥಿತಿ ಮತ್ತು ಮಾತನಾಡಲಾಗದ ಪರಿಸ್ಥಿತಿಯು ಎರಡು ನಿಮಿಷಗಳವರೆಗೆ ಇತ್ತು. ಪರಿಶುದ್ಧ ಭಕ್ತನ ಆನಂದಪರವಶತೆಯ ಲಕ್ಷಣಗಳ ಬಗೆಗೆ ನಾನು ಓದಿದ್ದೆನಾದರೂ ಅದನ್ನು ನೋಡಿ ನಾನು ಬೆರಗಾದೆ. ಆಧ್ಯಾತ್ಮಿಕವಾಗಿ ಉನ್ನತಿಗೇರಿದ ಅವರ ಆ ಭಾವವನ್ನು ಕೋಣೆಯಲ್ಲಿದ್ದ ನಾವು ಎಂದೂ ಮರೆಯಲಾರೆವು.

ಶಾಶ್ವತದಂತೆ ಕಂಡ ಆ ಎರಡು ನಿಮಿಷಗಳ ಅನಂತರ ಶ್ರೀಲ ಪ್ರಭುಪಾದರೆಂದರು, “ಒಳ್ಳೆಯದು. ಎಲ್ಲರಿಗೂ ಕೃತಜ್ಞತೆಗಳು.” ಅನಂತರ ಅವರು ಕೀರ್ತನೆ ಆರಂಭಿಸಲು ಸೂಚನೆ ನೀಡಿದರು. ನಾನು ಎಂದೂ ಅನುಭವಿಸದ ಅತ್ಯಂತ ತೀವ್ರವಾದ ಸಂಕೀರ್ತನೆಯು ವಿಶಾಲ ಸಭಾಂಗಣವನ್ನೆಲ್ಲ ವ್ಯಾಪಿಸಿತು.

ದೀಕ್ಷೆ-ಭಾವೋದ್ರೇಕ

ಅನಂತರ ಬಂದಿತು ದೀಕ್ಷೆ. ನಿರೀಕ್ಷೆ ನನ್ನ ಹೃದಯವನ್ನು ತುಂಬಿತು. ನನ್ನ ಕಲ್ಪನೆಯು ಭಾವೋದ್ರೇಕಗೊಂಡಿತು. ಪುರಾತನ ಕಾಲದಲ್ಲಿ ಭಾರತದ ಪವಿತ್ರ ನದಿಗಳ ತಟದಲ್ಲಿ ಋಷಿಗಳು ಇಂತಹುದೇ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ದೃಶ್ಯವನ್ನು ಕಲ್ಪಿಸಿಕೊಂಡೆ. ಅವರ ಹೆಜ್ಜೆಗಳನ್ನು ಅನುಸರಿಸುವ ಅದೃಷ್ಟ ಈಗ ನನ್ನದಾಗುತ್ತದೆ. ಶುದ್ಧಿಕಾರಿ ಅಗ್ನಿ ಆಹುತಿಯೂ ಸೇರಿದಂತೆ ಆಕರ್ಷಕ ಮತ್ತು ವರ್ಣಮಯ ದೀಕ್ಷೆ ವಿಧಿಯನ್ನು ನಾನು ಎದುರುನೋಡುತ್ತಿದ್ದೆ. ಅನೇಕ ತಿಂಗಳುಗಳಿಂದ ನಾನು ಇದನ್ನು ನನ್ನ ಮನದಲ್ಲಿ ಕಲ್ಪಿಸಿಕೊಂಡಿದ್ದೆ. ಕೋಣೆಯು ಪುರಾತನ ವೈಷ್ಣವ ಧಾರ್ಮಿಕ ವಿಧಿಯ ಜ್ವಾಲೆಯ ಹೊಗೆಯಿಂದ ಆವರಿಸಲ್ಪಡುವುದು. ದೀಕ್ಷಾ ವಿಧಿಯ ಬಗೆಗೆ ನನಗೆ ತಿಳಿದಿತ್ತು. ನಾನು ನನ್ನ ಹಿರಿಯ ದೈವ ಸಹೋದರರ ದೀಕ್ಷಾ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಪ್ರತಿಯೊಬ್ಬ ದೀಕ್ಷಾರ್ಥಿಯೂ ಶ್ರೀಲ ಪ್ರಭುಪಾದರ ಬಳಿಗೆ ಬರುತ್ತಾರೆ. ಅವರು ಅವರಿಗೆ ಜಪ ಮಾಲೆ ಮತ್ತು ಆಧ್ಯಾತ್ಮಿಕ ಹೆಸರು ನೀಡುತ್ತಾರೆ. ಸಾಮಾನ್ಯವಾಗಿ ಈ ಹೆಸರು ಕೃಷ್ಣನ ಯಾವುದಾದರೂ ಪವಿತ್ರ ನಾಮವಾಗಿರುತ್ತದೆ (ಅಥವಾ ಅವನ ಸಹವರ್ತಿಗಳ ಹೆಸರು). ಈ ಹೆಸರಿನ ಜೊತೆಗೆ ದಾಸ ಅಥವಾ ದಾಸಿ ಎಂಬುದನ್ನು ಜೋಡಿಸಲಾಗುತ್ತದೆ. ಇದರ ಅರ್ಥ ಸೇವಕ ಅಥವಾ ಸೇವಕಿ ಎಂದು. ಈ ಹೆಸರು ಶಿಷ್ಯರಿಗೆ ಅವನು ಅಥವಾ ಅವಳು ಭಗವಂತನ ಸೇವಕರೆಂಬುದನ್ನು ನೆನಪಿಸುತ್ತದೆ.

ಈಗ ನನ್ನದೇ ದೀಕ್ಷೆ ನಡೆಯಲಿದೆ, ಶ್ರೀಲ ಪ್ರಭುಪಾದರು ಒಂದೊಂದೇ ಭಕ್ತರನ್ನು ಕರೆಯಲಾರಂಭಿಸಿದರು. ಅಲ್ಲಿ ನಾವು 75 ಜನರಿದ್ದೆವು. ನಾನು ಒಬ್ಬಂಟಿಗಲ್ಲ ಎಂಬ ಅಂಶವು ನನ್ನ ಭಯವನ್ನು ದೂರಮಾಡಿತ್ತು. ಆದರೂ ಅತಿ ಶೀಘ್ರದಲ್ಲಿ ಅಗ್ನಿಯನ್ನು ಹೊತ್ತಿಸಲಾಗುವುದೆಂದು ಯೋಚಿಸುತ್ತಿದಂತೆಯೇ ನನ್ನ ಮನದಲ್ಲಿ ದಾರುಣ ವೇದನೆ ಮತ್ತು ಆನಂದಪರವಶತೆಯ ವಿಷಯ ಹರಿಯುತ್ತಿತ್ತು. ದೀಕ್ಷೆವರೆಗಿನ ನನ್ನ ಇಡೀ ಬದುಕಿನ ಚಿತ್ರ ನನ್ನ ಕಣ್ಣ ಮುಂದೆ ಸುಳಿಯಿತು. ಸಂಸ್ಕೃತದಲ್ಲಿ ಅಗ್ನಿಯನ್ನು ಅಗ್ನಿಹೋತ್ರ ಎಂದು ಕರೆಯುವರೆಂದು ತಿಳಿದಿದ್ದ ನಾನು ಮನದಲ್ಲಿಯೇ ಪದಗಳ ಆಟ ಆಡತೊಡಗಿದೆ, “ಅಗ್ನಿ ಮತ್ತು ಆನಂದಪರವಶತೆ.” ಇದು ಆಡುವ ಸಮಯವಲ್ಲ ಎಂದು ಗೊತ್ತಿದ್ದರೂ ಆಡುತ್ತಿದ್ದೆ. ಅದರೂ ನಾನು ಹೆಚ್ಚು ಗಂಭೀರವಾಗಿರುವ ಪ್ರಮಾಣ ಮಾಡಿದೆ.

ಅಂತಹ ಧಾರ್ಮಿಕ ವಿಧಿಗಳ ಸಮಯದಲ್ಲಿ ಅಗ್ನಿಯನ್ನು ನೋಡುವುದು ಒಂದು ಅದ್ಭುತ ಅನುಭವ. ಆದರೆ, ಈ ಪ್ರಸ್ತುತ ಪರಿಸ್ಥಿತಿಯಲ್ಲಿ ನನ್ನಲ್ಲಿ ಮಿಶ್ರ ಭಾವನೆಗಳಿದ್ದವು. ಸುಂದರವಾದ ಅಗ್ನಿ ಕುಂಡದತ್ತ ಸಾಗಲು ಸಾಧ್ಯವಾಗುವಂತೆ ಶ್ರೀಲ ಪ್ರಭುಪಾದರು ನನ್ನ ಹೆಸರನ್ನು ಕರೆಯುವವರೆಗೆ ಕಾಯುವುದೇ ಕಷ್ಟವಾಯಿತು. ಮತ್ತೊಂದು ರೀತಿಯಲ್ಲಿ ನಾನು ಹೆದರಿದ್ದೆ! ಜೀವಮಾನ ಬದ್ಧತೆಯಿಂದ ನಾನು ಭಯಭೀತನಾಗಿದ್ದೆ. ಆದರೆ ಕೃಷ್ಣ ಪ್ರಜ್ಞೆಗೆ ಏನು ಅರ್ಪಿಸಲು ವ್ಯಕ್ತಿ ಸಿದ್ಧವಾಗಿರುವನೋ ಅದನ್ನೇ ಅದರಿಂದ ಪಡೆಯುವನೆಂದು ನನಗೆ ಗೊತ್ತಿತ್ತು. ನಾನು ದೃಢ ಮನಸ್ಸು ಮಾಡಿದ್ದೆ.

ನನ್ನ ಚಿತ್ತ ಕ್ಷೋಭೆಯನ್ನು ನಿವಾರಿಸಿಕೊಳ್ಳಲು ನಾನು ಪ್ರಭುಪಾದರ ಅನೇಕ ಹಿರಿಯ ಶಿಷ್ಯರ ಕೆಲಸವನ್ನು ನೋಡುತ್ತ ಆನಂದಿಸುತ್ತಿದ್ದೆ. ಅವರು ಯಜ್ಞದ ಮೊದಲು ಅಲಂಕೃತ ಅಡ್ಡ ಗೆರೆಗಳಲ್ಲಿ ಕಟ್ಟೆ ಕಟ್ಟಿ ಅದಕ್ಕೆ ಬಣ್ಣ ಹಚ್ಚುತ್ತಿದ್ದರು. “ನಿಜವಾಗಿಯೂ ಆಹುತಿ ನೀಡುವುದು ಏನನ್ನು?” ಎಂದು ನನಗೆ ನಾನೇ ಪ್ರಶ್ನಿಸಿಕೊಳ್ಳತೊಡಗಿದೆ. ಖಂಡಿತವಾಗಿಯೂ ಅದು ಮುಖ್ಯವಾಗಿ ನನ್ನ ಹುಸಿ ಅಹಂ, ಮಾಲಿಕತ್ವದ ಹುಸಿ ಭಾವನೆ. ನಾನು ಈಗ ದೇವರಲ್ಲ, ಅವನ ಅನುಗ್ರಹಿತ ಸೇವಕನೆಂದು ಒಪ್ಪಿಕೊಳ್ಳುತ್ತಿದ್ದೆ.

“ಓ, ಭಗವಂತನ ಸೇವಕ! ಇದು ಸಾಮಾನ್ಯವಾದುದಲ್ಲ!” ಎಂದು ಯೋಚಿಸಿದೆ.

ಈ ರೀತಿ ಯೋಚಿಸುತ್ತಿದ್ದಾಗ ಯಾರೋ ನನ್ನ ಹೆಸರು ಕೂಗುವುದು ಕೇಳಿಸಿತು. ಶ್ರೀಲ ಪ್ರಭುಪಾದರಿಂದ ದೀಕ್ಷೆ ಪಡೆಯಲು ಮುಂದೆ ಬರಬೇಕೆಂದು ತಮಾಲ ಕೃಷ್ಣ ನನ್ನನ್ನು ಕರೆಯುತ್ತಿದ್ದರು. ನಾನು ದೀರ್ಘವಾಗಿ ಉಸಿರೆಳೆದುಕೊಂಡು ಪ್ರಭುಪಾದರ ಬಳಿಗೆ ಸಾಗಿದೆ. ಅವರು ಜಪ ಮಾಲೆಯನ್ನು ನೀಡುತ್ತ ಕೇಳಿದರು, “ನಿಮಗೆ ನಾಲ್ಕು ನಿಯಮಗಳು ಗೊತ್ತೇ?”

ನಾನು ಉತ್ತರಿಸಿದೆ, “ಹೌದು. ಮದ್ಯ ಇಲ್ಲ, ಅನೈತಿಕ ಲೈಂಗಿಕ ಕ್ರಿಯೆ ಇಲ್ಲ, ಮಾಂಸ ಸೇವನೆ ಇಲ್ಲ ಮತ್ತು ಜೂಜು ಇಲ್ಲ.” ಏನು ಹೇಳಬೇಕೆಂದು ನಾನು ಅಭ್ಯಾಸ ಮಾಡಿಕೊಂಡಿದ್ದೆ.

ಪ್ರಭುಪಾದರೆಂದರು, “ಸರಿ. ಈ ನಾಲ್ಕು ತತ್ತ್ವಗಳನ್ನು ಅನುಸರಿಸಿ ಮತ್ತು ನಿಮ್ಮ ಜಪ ಮಾಲೆಯಲ್ಲಿ ಪ್ರತಿ ದಿನ ಕನಿಷ್ಠ 16 ಸುತ್ತು ಜಪ ಮಾಡಿ. ಹರೇ ಕೃಷ್ಣ” ನಾನು ಕಾಯುತ್ತಿದ್ದ ಕ್ಷಣ ಬಂದಿತು, “ನಿಮ್ಮ ಹೆಸರು ಸತ್ಯರಾಜ.”

ನಾನು ಕೂಡಲೇ ನನ್ನ ಸಹ ಪ್ರಯಾಣಿಕನತ್ತ ನೋಡಿದೆ. ಅವನಿಗೆ ನನಗಿಂತ ಸಂಸ್ಕೃತ ಚೆನ್ನಾಗಿ ಗೊತ್ತಿತ್ತು. “ಅದರ ಅರ್ಥ ಸತ್ಯದ ರಾಜ” ಎಂದು ಅವನು ವಿವರಿಸಿದ. ನಾನು ಪ್ರಭುಪಾದರತ್ತ ಹೆಮ್ಮೆಯ ದೃಷ್ಟಿ ಹರಿಸಿದೆ. ಹೌದು, ಇದು ನನ್ನ ಹೆಸರು – ನಾನು ಸತ್ಯದ ರಾಜ!

ಪ್ರಭುಪಾದರು ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೆಸರಿನೊಂದಿಗೆ ಸೇರಿಸುವುದನ್ನು ಪ್ರಕಟಿಸಿದರು : “ದಾಸ.”

ನಿಜವಾದ ತ್ಯಾಗವು ಹುಸಿ ಅಹಂ ಎಂದು ನಾನು ನೆನಪು ಮಾಡಿಕೊಳ್ಳುತ್ತಿರುವಾಗ ಪ್ರಭುಪಾದರು “ದಾಸ” ಎಂದು ಹೇಳುವ ಮುನ್ನ ಸ್ವಲ್ಪ ತಡೆದು ನಾನು ಇನ್ನೂ ವಿಶೇಷವೆಂದು ನನ್ನನ್ನು ಪರಿಗಣಿಸುತ್ತಿರುವುದನ್ನು ತೋರಿಸಿಕೊಟ್ಟರು. ನಾನು ಅರಿವಿಲ್ಲದಂತೆ ದೇವರನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೆ. ನಮ್ಮ ಲೌಕಿಕ ಅಸ್ತಿತ್ವಕ್ಕೆ ವಾಸ್ತವವಾಗಿ ಇದೇ ಕಾರಣ ಎಂದು ಪ್ರಭುಪಾದರು ತಮ್ಮ ಉಪನ್ಯಾಸಗಳಲ್ಲಿ ಅನೇಕ ಬಾರಿ ಹೇಳಿದ್ದಾರೆ : “ಭಗವಂತನ ಸ್ಥಾನವನ್ನು ಪಡೆಯಲು ಪ್ರಯತ್ನಿಸುವುದು ಮತ್ತು ನಾವು ಸಮೀಕ್ಷೆ ಮಾಡುವುದೆಲ್ಲದರ ಭೋಕ್ತನಾಗಲು ಯತ್ನಿಸುವುದು.” ನಾನು “ಸತ್ಯದ ರಾಜನ” ವಿನಮ್ರ ಸೇವಕ ಮಾತ್ರ ಎಂಬುವುದನ್ನು ದೀಕ್ಷೆ ಸಂದರ್ಭದಲ್ಲಿ ನನಗೆ ನೆನಪಿಸಿ ಪ್ರಭುಪಾದರು ನನಗೆ ಅಮೂಲ್ಯ ದಾರಿ ತೋರಿದರು.

ಉಳಿದದ್ದು ಆನಂದ

ಸತ್ಯ ರಾಜ ದಾಸ ಎಂಬ ಹೊಸ ಹೆಸರು ಮತ್ತು ಜಪಮಾಲೆಯೊಂದಿಗೆ ನಾನು ಸಾಗುತ್ತಿದಂತೆ ನನ್ನೊಳಗಿದ್ದ “ದಾರುಣ ವೇದನೆ ಮತ್ತು ಆನಂದಪರವಶತೆ” ವಿಷಯ ಕೂಡ ಹೊರನಡೆಯಿತು. ದಾರುಣ ವೇದನೆಯು ಭಗವಂತನ ವಿರುದ್ಧ ಸಿಡಿದೆದ್ದ ನನ್ನ ಕ್ರಮದ ಫಲ ಎಂದು ನಾನು ಅರಿತುಕೊಂಡೆ. ಈಗ, ಪ್ರಭುಪಾದರ ಅನುಗ್ರಹದಿಂದ ನಾನು ಭಗವಂತನ ಸೇವಕ ಎಂಬುವುದನ್ನು ತಿಳಿದುಕೊಂಡೆ. ಹೀಗಾಗಿ ವೇದನೆ ಹೊರಟುಹೋಯಿತು. ಯಜ್ಞದ ಅಗ್ನಿ ಉರಿದಾಗ, ಉಳಿದದ್ದು ಪರಮಾನಂದ ಎಂದು ನನಗೆ ಅರಿವಾಯಿತು.

ಈ ಲೇಖನ ಶೇರ್ ಮಾಡಿ