108 ದಿವ್ಯದೇಶಗಳ ಅಕ್ಷರ ದರ್ಶನ…
ಸಾಕ್ಷಾತ್ ದೇವೋತ್ತಮ ಪರಮಪುರುಷ ಶ್ರೀಕೃಷ್ಣ ಅವತರಿಸಿ ಬಂದ ಪುಣ್ಯಭೂಮಿ ಭಾರತ. ಇಲ್ಲಿ ಭಗವಂತನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿವಿಧ ಸ್ಥಳಗಳಲ್ಲಿ ಬಗೆ ಬಗೆಯ ನಾಮರೂಪಗಳಿಂದ ನೆಲೆಸಿರುವನು. ಹೀಗೆ ಭಗವಾನ್ ಶ್ರೀಮನ್ನಾರಾಯಣನು ನೆಲೆಸಿರುವ ನೂರಾ ಎಂಟು ಪರಮ ಪವಿತ್ರ ಸ್ಥಳಗಳನ್ನು (‘ದಿವ್ಯ ದೇಶಗಳು’ ಎಂದು ಕರೆಯಲಾಗಿದೆ.) ಪರಮೋನ್ನತ ಭಕ್ತರಾದ ಆಳ್ವಾರರು ತಮ್ಮ ಮಂಗಳಾ ಶಾಸನಗಳಲ್ಲಿ ಸ್ತುತಿಸಿದ್ದಾರೆ. ಈ ಕ್ಷೇತ್ರಗಳನ್ನು “ದಿವ್ಯದೇಶ” ಗಳೆಂದು ಕರೆಯುತ್ತಾರೆ.

ದಿವ್ಯ ದೇಶಗಳು ಏಳು ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದು, ತೊಂಡೈನಾಡಿನಲ್ಲಿ 22, ಚೋಳ ನಾಡಿನಲ್ಲಿ 40, ನಡುನಾಡಿನಲ್ಲಿ 2, ಪಾಂಡ್ಯನಾಡಿನಲ್ಲಿ 18, ಮಲಯನಾಡಿನಲ್ಲಿ 13, ವಡು ನಾಡಿನಲ್ಲಿ 1 ಮತ್ತು ವಿನ್ನುಲಗ ತಿರುಪತಿಯಲ್ಲಿ 2 ಇವೆ.
ಅವುಗಳಲ್ಲಿ 27 ದಿವ್ಯದೇಶಗಳಲ್ಲಿ ಭಗವಂತನು ಶಯನ ಭಂಗಿಯಲ್ಲಿಯೂ, 21 ಕ್ಷೇತ್ರಗಳಲ್ಲಿ ಕುಳಿತಭಂಗಿಯಲ್ಲಿಯೂ ಹಾಗೂ 60 ಕ್ಷೇತ್ರಗಳಲ್ಲಿ ನಿಂತ ಭಂಗಿಯಲ್ಲಿಯೂ ದರ್ಶನ ನೀಡುತ್ತಿರುವನು. ಅಲ್ಲದೆ; ಪೂರ್ವಾಭಿಮುಖವಾಗಿ 19, ಪಶ್ಚಿಮಾಭಿಮುಖವಾಗಿ 19, ಉತ್ತರಾಭಿಮುಖವಾಗಿ 3 ಮತ್ತು ದಕ್ಷಿಣಾಭಿಮುಖವಾಗಿ 7 ಸ್ಥಳಗಳಲ್ಲಿ ನೆಲೆಸಿರುವನು.
1. ಅಹೋಬಿಲಮ್ (ಸಿಂಗವೇಲ್ ಕುನ್ರಮ್)

ಅಹೋಬಿಲ ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲೊಂದು. ಇದೊಂದು ಸುಪ್ರಸಿದ್ಧ ನರಸಿಂಹ ಕ್ಷೇತ್ರ. ಆಂಧ್ರಪ್ರದೇಶದ ನಂದ್ಯಾಲದ ಬಳಿ ಆಹೋಬಿಲ ಪ್ರಾಂತ್ಯವಿದೆ. ತಿರುಮಂಗೈ ಆಳ್ವಾರರು ತಮ್ಮ ಹತ್ತು ಪಾಶುರಗಳಲ್ಲಿ ಅಹೋಬಿಲವನ್ನು ಸುತ್ತಿಸಿದ್ದಾರೆ. ಪುರಾಣಗಳಲ್ಲಿ ಕರ್ನೂಲಿನಿಂದ ಚಿತ್ತೂರಿನವರೆಗೆ ಚಾಚಿಕೊಂಡಿರುವ ನಲ್ಲಾಮಲೈ ಪರ್ವತ ಶ್ರೇಣಿಯನ್ನು ಅದಿಶೇಷನೆಂದೂ, ಅದರ ಬಾಲ-ಶ್ರೀಶೈಲ, ಮಧ್ಯಭಾಗ ಅಹೋಬಿಲ ಮತ್ತು ತಲೆ-ತಿರುಮಲವೆಂದೂ ವರ್ಣಿಸಲಾಗಿದೆ.
ಅಹೋಬಿಲ ಕ್ಷೇತ್ರವು ಐತಿಹಾಸಿಕ ಪ್ರಸಿದ್ಧಿಯನ್ನು ಕೂಡ ಪಡೆದಿದೆ. ದಕ್ಷಿಣದ ಪ್ರಸಿದ್ಧ ಅರಸರಾದ ಚಾಲುಕ್ಯ ಕುಲದ ವಿಕ್ರಮಕೇತು, ಪ್ರತಾಪರುದ್ರ ಮತ್ತು ಕೃಷ್ಣದೇವರಾಯರು ಈ ದೇವಾಲಯಗಳ ಅಭಿವೃದ್ಧಿಗಾಗಿ ಧನ ಸಹಾಯ ನೀಡಿದ ವಿವರಗಳಿವೆ. ಅವರೆಲ್ಲರೂ ಅಹೋಬಿಲ ನರಸಿಂಹದೇವನ ಭಕ್ತರಾಗಿದ್ದರು.
ಅಹೋಬಿಲ ಕ್ಷೇತ್ರ ಪ್ರಮುಖ ಪೌರಾಣಿಕ ಕ್ಷೇತ್ರವೂ ಆಗಿದೆ. ದೈತ್ಯರಾಜ ಹಿರಣ್ಯಕಶಿಪು ಪ್ರಹ್ಲಾದನಿಗೆ ಭಗವಂತನ ಸರ್ವವ್ಯಾಪ್ತಿತ್ವವನ್ನು ಸಾಬೀತು ಪಡಿಸುವ೦ತೆ ಸವಾಲೆಸೆದನು. ಅದರಂತೆ ಮಹಾ ವಿಷ್ಣುವು ನರಸಿಂಹಾವತಾರಿಯಾಗಿ ಕಂಬವನ್ನು ಸೀಳಿಕೊಂಡು ಪ್ರಕಟವಾದನು. ಈ ಘಟನೆ ನಡೆದದ್ದು ಅಹೋಬಿಲ ಕ್ಷೇತ್ರದಲ್ಲಿ ಎಂದು ಪ್ರತೀತಿಯಿದೆ.
ಶ್ರೀರಾಮನು ಸೀತಾನ್ವೇಷಣೆಯಲ್ಲಿ ತೊಡಗಿದ್ದಾಗ ಇಲ್ಲಿನ ಲಕ್ಷ್ಮೀನರಸಿಂಹರಿಗೆ ಪೂಜೆ ಸಲ್ಲಿಸಿದ್ದನು. ಪಕ್ಷಿರಾಜನಾದ ಗರುಡನು ಮಹಾವಿಷ್ಣುವಿನ ನರಸಿಂಹ ರೂಪವನ್ನು ಕಾಣುವ ಅಪೇಕ್ಷೆಯಿಂದ ಅಹೋಬಿಲಕ್ಕೆ ಬಂದು ಪೂಜೆ ಸಲ್ಲಿಸಿದ್ದನು.
ಮಹಾಲಕ್ಷ್ಮಿಯು ಬೇಡರ ಕುಲದಲ್ಲಿ “ಚೆಂಚುಲಕ್ಷ್ಮಿ”ಯೆಂಬ ಹೆಸರಿನಿಂದ ಅವತರಿಸಿಬಂದಳೆಂದೂ, ನರಸಿಂಹದೇವ ಆಕೆಯನ್ನು ವಿವಾಹವಾದನೆಂದೂ ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ.
ಮೂಲದೇವರು : ಶ್ರೀ ನರಸಿಂಹ
ಅಮ್ಮನವರು : ಲಕ್ಷ್ಮೀನಾಚ್ಚಿಯಾರ್
ವಿಮಾನ : ಕರುಗೈ ವಿಮಾನ
ತೀರ್ಥ : ಪಾಪನಾಶಿನಿ, ಭಾರ್ಗವ ತೀರ್ಥ
ಭಂಗಿ : ಪೂರ್ವಾಭಿಮುಖವಾಗಿ ಕುಳಿತ ಭಂಗಿ
ಆವಿರ್ಭಾವ : ಪ್ರಹ್ಲಾದನಿಗೆ ಪ್ರತ್ಯಕ್ಷ
ವೈಶಿಷ್ಟ್ಯ: ಅಹೋಬಿಲ’ ಒಂದು ಪ್ರಸಿದ್ಧವಾದ ನರಸಿಂಹ ಕ್ಷೇತ್ರ, ಇಲ್ಲಿ ಒಂಬತ್ತು ನರಸಿಂಹ ಸನ್ನಿಧಿಗಳಿದ್ದು, “ನವನಾರಸಿಂಹ ಕ್ಷೇತ್ರ” ಎಂದು ಖ್ಯಾತಿ ಪಡೆದಿದೆ. ನವ ಸನ್ನಿಧಿಗಳು ಹೀಗಿವೆ –

1. ಲಕ್ಷ್ಮಿಮಾಲೋಲ ನರಸಿಂಹ – ಬೆಟ್ಟದ ಕೆಳಗೆ – ಇಲ್ಲಿ ಎಲ್ಲ ಉತ್ಸವ – ಪೂಜೆಗಳು ವಿಜೃಂಭಣೆಯಿಂದ ನಡೆಯುತ್ತವೆ. ಇದು ಪ್ರಧಾನ ಸನ್ನಿಧಿ
2. ಯೋಗಾನರಸಿಂಹ – ಮೇಲ್ ಅಹೋಬಿಲಕ್ಕೆ ಹೋಗುವ ದಾರಿಯಲ್ಲಿ
3. ಚಿತ್ರನಾಭ ನರಸಿಂಹ – ಮೇಲ್ ಅಹೋಬಿಲಕ್ಕೆ ಹೋಗುವ ದಾರಿಯಲ್ಲಿ
4. ಉಗ್ರ ನರಸಿಂಹ – ಬೆಟ್ಟದ ಮೇಲೆ
5. ವರಾಹ ನರಸಿಂಹ – ಬೆಟ್ಟದ ಮೇಲೆ
6. ಪರ್ಮುಲಿಡಿ ನರಸಿಂಹ – ಶ್ವೇತಾದ್ರಿ ಬೆಟ್ಟದಲ್ಲಿ
7. ಪ್ರಹ್ಲಾದ ನರಸಿಂಹ – ಕಂಡಾದ್ರಿ ಬೆಟ್ಟದ ಮೇಲೆ
8. ಭಾರ್ಗವ ನರಸಿಂಹ – ಭಾರ್ಗವ ತೀರ್ಥದ ಬಳಿ
9. ಸಾರಂಗಿ ನರಸಿಂಹ – ಭಾರ್ಗವ ತೀರ್ಥದ ಬಳಿ
ನೆಲೆ : ಆಂಧ್ರಪದೇಶದ ‘ಕಡಪ’ ಎಂಬಲ್ಲಿಂದ ಬಸ್ ಸೌಕರ್ಯ ಇದೆ. ಕರ್ನೂಲ್ನಿಂದಲೂ ಪ್ರಯಾಣ ಸುಲಭ, ಅಹೋಬಿಲ ಮಠದಲ್ಲಿ ಮತ್ತು ಛತ್ರಗಳಲ್ಲಿ ವಸತಿ ಸೌಕರ್ಯ ಲಭ್ಯ.
2. ಆಳ್ವಾರ್ ತಿರುನಗರಿ – (ತಿರುಕ್ಕುರುಕೂರ್)
ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಸುಪ್ರಸಿದ್ಧ ನವ ತಿರುಪತಿಗಳಲ್ಲಿ ತಿರುಕ್ಕುರುಕೂರ್ ಒಂದು. ನಮ್ಮಾಳ್ವಾರರು ಇಲ್ಲಿ ಜನ್ಮ ತಳೆದಿದ್ದರಿಂದ ಈ ಕ್ಷೇತ್ರವನ್ನು ಆಳ್ವಾರ್ ತಿರುನಗರಿ ಎಂದೂ ಕರೆಯಲಾಗುತ್ತದೆ. ಅವರು ಈ ಜಿಲ್ಲೆಯ ಒಂಬತ್ತು ದೇಗುಲಗಳಾದ ತಿರುವೈಕುಂಠಮ್, ವರಗುಣ ಮಂಗೈ, ಪುಲಿಂಕುಡಿ, ತೊಲೈವಿಲ್ಲಿ ಮಂಗಳಮ್, ತಿರುಕ್ಕುಳಂಡೈ, ತಿರುಕ್ಕೊಲೂರ್, ತಿರುಪ್ಪೆರೈ ಮತ್ತು ತಿರುಕ್ಕುರುಗೂರುಗಳೆಲ್ಲದರ ಮೇಲೆ ಮಂಗಳಾಶಾಸನಗಳನ್ನು ರಚಿಸಿ ಹಾಡಿರುವರು.
ಆಳ್ವಾರ್ ತಿರುನಗರಿಯಲ್ಲಿ “ಆರೈಯರ್ ಸೇವೆ” ಎಂಬ ವಿಶಿಷ್ಟ ಸೇವೆಯನ್ನು ನಡೆಸಲಾಗುತ್ತದೆ. ಶ್ರೀರಂಗ ಮತ್ತು ಶ್ರೀವಿಲ್ಲಿ ಪುತ್ತೂರುಗಳಲ್ಲಿನಂತೆ ಇಲ್ಲಿ ಕೂಡ ಪಾಶುರಗಳನ್ನು (ದಿವ್ಯಪ್ರಬಂಧಗಳು) ಭಾವಾಭಿವ್ಯಕ್ತಿ, ಸಂಗೀತ ಮತ್ತು ತಾಳ ಸಂಯೋಜನೆಯ ಮೂಲಕ ಹಾಡಲಾಗುತ್ತದೆ.
ಸ್ಥಳ ಪುರಾಣ : ಇಂದ್ರನು ಆಳ್ವಾರ್ ತಿರುನಗರಿಯಲ್ಲಿ ಶಾಪ ವಿಮೋಚನೆ ಪಡೆದುಕೊಂಡನೆಂದು ಪ್ರತೀತಿಯಿದೆ. ಇಲ್ಲೊಂದು ಹುಣಸೆ ಮರವಿದ್ದು, ಅದು ಲಕ್ಷ್ಮಣನ ಅವತಾರವೆಂದು ಹೇಳಲಾಗುತ್ತದೆ. ನಮ್ಮಾಳ್ವಾರರು ಬಹುಕಾಲ ಧ್ಯಾನಸ್ಥರಾಗಿ ಕುಳಿತು ಸಮಾಧಿ ಹೊಂದಿದ್ದು ಈ ಮರದ ಕೆಳಗೇ. ಇದು ಇಲ್ಲಿನ ‘ಸ್ಥಳವೃಕ್ಷ’ವೆಂಬ ಖ್ಯಾತಿ ಪಡೆದಿದೆ.

ಶ್ರೀ ನಮ್ಮಾಳ್ವಾರರ ಸನ್ನಿಧಿಯ ಮೇಲಿರುವ ಈ ಹುಣಸೇಮರವು ಎಂದೂ ಹಣ್ಣು ಬಿಟ್ಟಿದ್ದಿಲ್ಲ. ಅಲ್ಲದೆ ಇತರ ಹುಣಸೆಮರಗಳಂತೆ ರಾತ್ರಿ ಹೊತ್ತು ಎಲೆ ಮುದುರಿಕೊಳ್ಳುವುದಿಲ್ಲ! ಇದು ಕೂಡ ಈ ದಿವ್ಯ ಕ್ಷೇತ್ರದ ವೈಶಿಷ್ಟ್ಯಗಳಲ್ಲೊಂದು.
ಅಗಸ್ತ್ಯರಿಗೆ ಶಿವನು ಪ್ರತ್ಯಕ್ಷನಾಗಿ ಈ ಸ್ಥಳದಲ್ಲೊಬ್ಬ ಸಂತನು (ನಮ್ಮಾಳ್ವಾರ್) ಜನಿಸುವನೆಂದು ವರ ನೀಡಿದ್ದೂ ಇದೇ ಕ್ಷೇತ್ರದಲ್ಲಿ.
ಮೂಲದೇವರು : ಶ್ರೀ ಆದಿನಾಥನ್, ಆದಿಷ್ಟಿರಾನ್
ಅಮ್ಮನವರು : ಆದಿನಾಥನ್ ತಾಯಾರ್ ( ಕುರುಕೂರದಲ್ಲಿ ತಾಯಾರ್ )
ವಿಮಾನ : ಗೋವಿಂದ ವಿಮಾನ
ತೀರ್ಥ : ತಾಮ್ರಪರ್ಣಿ ನದಿ
ಭಂಗಿ : ಪೂರ್ವಾಭಿಮುಖವಾಗಿ ನಿಂತ ಭಂಗಿ
ಆವಿರ್ಭಾವ : ಶ್ರೀ ನಮ್ಮಾಳ್ವಾರ್ ಹಾಗೂ ಬ್ರಹ್ಮದೇವರಿಗೆ ಪ್ರತ್ಯಕ್ಷ
ವೈಶಿಷ್ಟ್ಯ: ತಿರುಕ್ಕುರುಕೂರ್ ಕ್ಷೇತ್ರವು ಶ್ರೀ ನಮ್ಮಾಳ್ವಾರರ ಜನ್ಮಸ್ಥಳ. ಇದು ಶ್ರೀ ವೈಷ್ಣವರಿಗೆ ಅತ್ಯಂತ ಮಹತ್ವದ ಸ್ಥಳವೂ ಆಗಿದೆ. ಶ್ರೀ ನಮ್ಮಾಳ್ವಾರರು ಬಹುಕಾಲ ಕುಳಿತು ಸಮಾಧಿಸ್ಥರಾದ ಹುಣಸೇಹಣ್ಣಿನ ಮರವು ಈಗಲೂ ಇದ್ದು, ಬೃಹತ್ ವೃಕ್ಷವಾಗಿ ಬೆಳೆದಿದೆ. ಇದರ ಕೆಳಗೇ ನಮ್ಮಾಳ್ವಾರರ ಸನ್ನಿಧಿ ಇದೆ.
ಶ್ರೀ ನಮ್ಮಾಳ್ವಾರರ ಆರ್ಚಾವಿಗ್ರಹವನ್ನು ಪ್ರತಿಷ್ಠಾಪಿಸಿದವರು ಶ್ರೀ ಮಧುರಕವಿ ಆಳ್ವಾರರು. ಮೂಲದೇವರಿಗೆ ನಡೆಯುವ ರೀತಿಯಲ್ಲಿಯೇ ಇದಕ್ಕೂ ಉತ್ಸವ – ಪೂಜೆಗಳು ನಡೆಯುತ್ತವೆ. ಪುರಾತನ ದೇವಾಲಯವಾಗಿದ್ದು, ಶಿಲ್ಪಕಲೆಯಿಂದ ಕೂಡಿದೆ. ಒಂದಾನೊಂದು ಕಲ್ಲಿನಲ್ಲಿ ಎಲ್ಲ ಬಗೆಯ ವಾದ್ಯಶಬ್ದಗಳನ್ನು ಹೊರಡಿಸಬಹುದು. ಇದನ್ನು “ಮೊಗವೀಣೆ” ಎನ್ನುವರು.
ನೆಲೆ: ಕುರುಕೂರು ತಿರುನಲ್ವೇಲಿ ಮತ್ತು ತಿರುಚ್ಚೆಂದೂರ್ ನಡುವಿನ ದಿವ್ಯಕ್ಷೇತ್ರ. ರೈಲು ನಿಲ್ದಾಣವಿದೆಯಲ್ಲದೆ, ತಿರುನಲ್ವೇಲಿಯಿಂದ ಬಸ್ ಸೌಕರ್ಯವೂ ಇದೆ. ಸಾಧಾರಣ ಊರಾದರೂ ವಸತಿ ಸೌಲಭ್ಯಕ್ಕೆ ಕೊರತೆ ಇಲ್ಲ.
3. ತಿರುಪ್ಪೆರೈ
ಮೂಲದೇವರು : ನಿಗರಿಲ್ ಮುಗಿಲ್ ವಣ್ಣನ್
ಅಮ್ಮನವರು : ಕುಶ್ಯೇಕ್ಕುಡುವಲ್ಲಿ ನಾಚ್ಚಿಯಾರ್
ವಿಮಾನ : ಭದ್ರವಿಮಾನ
ಭಂಗಿ : ಪೂರ್ವಾಭಿಮುಖವಾಗಿ ಕುಳಿತ ಭಂಗಿ
ನೆಲೆ : ಆಳ್ವಾರ್ ತಿರುನಗರಿಯಿಂದ 6ಕಿ. ಮೀ. ದೂರದಲ್ಲಿದೆ. ತಿರುಚ್ಚೆಂದೂರಿಗೆ ಹೋಗುವ ಬಸ್ಸುಗಳು ಈ ಮೂಲಕ ಹಾದು ಹೋಗುತ್ತವೆ. ವಸತಿ ಸೌಕರ್ಯ ಸಾಧಾರಣವಾಗಿದೆ.
4. ಶ್ರೀ ವೈಕುಂಠಮ್
ಮೂಲದೇವರು : ಶ್ರೀ ವೈಕುಂಠನಾಥ (ಕಳ್ಳಪ್ಪಿರಾನ್)
ಅಮ್ಮನವರು : ವೈಕುಂಠವಲ್ಲಿ ತಾಯಾರ್
ವಿಮಾನ : ಚಂದ್ರ ವಿಮಾನ
ತೀರ್ಥ : ತಾಮ್ರಪರ್ಣಿ
ಭಂಗಿ: ನಿಂತಿರುವ ಭಂಗಿ
ಆವಿರ್ಭಾವ : ಇಂದ್ರ ಮತ್ತು ಪೃಥು ಚಕ್ರವರ್ತಿಗೆ ಪ್ರತ್ಯಕ್ಷ
ವೈಶಿಷ್ಟ್ಯ : ನಿತ್ಯವೂ ಮೂಲದೇವರಿಗೆ ಕ್ಷೀರಾಭಿಷೇಕ
ನೆಲೆ : ತಿರುನಲ್ವೇಲಿ ಮತ್ತು ತಿರುಚ್ಚೆಂದೂರ್ ನಡುವೆ ಇರುವ ದೊಡ್ಡ ಊರು ಇದಾಗಿದೆ. ರೈಲು ನಿಲ್ದಾಣವಿದೆ. ಜೊತೆಗೆ ಬಸ್ ಅನುಕೂಲವೂ ಚೆನ್ನಾಗಿದೆ.
5. ವರಗುಣಮಂಗೈ (ನತ್ತಂ)
ಮೂಲದೇವರು : ವಿಜಯಾಸನರ್
ಅಮ್ಮನವರು : ವರಗುಣವಲ್ಲಿ ತಾಯಾರ್
ಭಂಗಿ : ಪೂರ್ವಾಭಿಮುಖವಾಗಿ ಕುಳಿತ ಭಂಗಿ
ವೈಶಿಷ್ಟ್ಯ : ವರದ ಹಸ್ತ ಮೂರುತಿ, ಆದಿಶೇಷನ ಹೆಡೆ ಛತ್ರಿಯಂತೆ ಮೇಲೆ ಇದೆ
ನೆಲೆ : ಶ್ರೀ ವೈಕುಂಠದಿಂದ 2 ಕಿ.ಮೀ. ದೂರದಲ್ಲಿದೆ. ಅಲ್ಲಿಂದ ಆಟೋದಲ್ಲಿ ಹೋಗಿಬರುವುದು ಅನುಕೂಲಕರ
6. ತಿರುತೊಲೆ ವಿಲ್ಲಿ ಮಂಗಲಂ (ರಟ್ಟೈ ತಿರುಪತಿ)
ಮೂಲದೇವರು : ದೇವಪ್ಪಿರಾನ್, ಅರವಿಂದ ಲೋಚನನ್
ಅಮ್ಮನವರು : ಕರುಂತಡಂಕಣ್ಣಿ ನಾಚ್ಚಿಯಾರ್
ವಿಮಾನ : ಕುಮುದ ವಿಮಾನ
ತೀರ್ಥ : ತಾಮ್ರಪರ್ಣಿ ನದಿ
ಭಂಗಿ : ಪೂರ್ವಾಭಿಮುಖವಾಗಿ ನಿಂತ ಭಂಗಿ (ಶ್ರೀನಿವಾಸ), ಕುಳಿತ ಭಂಗಿ (ಅರವಿಂದ ಲೋಚನ)
ನೆಲೆ : ಆಳ್ವಾರ್ ತಿರುನಗರಿಯಿಂದ 4 ಕಿ.ಮೀ. ದೂರದಲ್ಲಿದೆ. ತಾಮ್ರಪರ್ಣಿ ದಡದಲ್ಲಿ ಶ್ರೀ ಶ್ರೀನಿವಾಸ ದೇವಾಲಯ ಮತ್ತು ಶೆಂದಾಮರೈ ಕಣ್ಣನ್ (ಪುಂಡರೀಕಾಕ್ಷ) ಇವೆರಡನ್ನೂ ಒಟ್ಟಾಗಿ ಒಂದೇ ದಿವ್ಯದೇಶವೆಂದು ಪರಿಗಣಿಸಲಾಗಿದೆ. ಈ ಕ್ಷೇತ್ರದಲ್ಲಿ ಯಾವ ಅನುಕೂಲತೆಗಳೂ ಇಲ್ಲ.
7. ತಿರುಪ್ಪುಲಿ೦ಕುಡಿ
ಮೂಲದೇವರು : ಕಾಯ್ಶಿನ ವೆಂದನ್
ಅಮ್ಮನವರು : ಮಲರ್ ಮಹಳ್ ನಾಚ್ಚಿಯಾರ್ (ಪುಲಿಗುಂಡಿವಲ್ಲಿ)
ವಿಮಾನ : ವೇದಸಾರ ವಿಮಾನ
ಭಂಗಿ : ಪೂರ್ವಾಭಿಮುಖ ಭುಜಂಗ ಶಯನ
ನೆಲೆ : ಶ್ರೀ ವೈಕುಂಠ ಕ್ಷೇತ್ರದಿಂದ 4 ಕಿ.ಮೀ. ದೂರದಲ್ಲಿದೆ. ಕ್ಷೇತ್ರದಲ್ಲಿ ವಸತಿ ಇತ್ಯಾದಿ ಸೌಕರ್ಯಗಳಿರುವುದಿಲ್ಲ.
8. ತಿರುಕ್ಕೊಲೂರ್
ಮೂಲದೇವರು : ನಿಕ್ಷೇಪವಿತ್ತನ್ (ವೈತ್ತಮಾನಿಧಿ)
ಅಮ್ಮನವರು : ಕೊಲೂರ್ವಲ್ಲಿ
ವಿಮಾನ : ಶ್ರೀಕರ ವಿಮಾನ
ತೀರ್ಥ : ತಾಮ್ರ ಪರ್ಣಿ
ಭಂಗಿ: ಶಯನ ಭಂಗಿ
ಆವಿರ್ಭಾವ: ಕುಬೇರ ಹಾಗೂ ಮಧುರ ಕವಿ ಆಳ್ವಾರರಿಗೆ ಪ್ರತ್ಯಕ್ಷ. ಇದು ಶ್ರೀ ಮಧುರಕವಿ ಅಳ್ವಾರರ ಅವತಾರ ಸ್ಥಳ.
ನೆಲೆ : ಆಳ್ವಾರ್ ತಿರುನಗರಿಯಿಂದ 4 ಕಿ.ಮೀ. ದೂರದಲ್ಲಿದೆ. ಬಹಳ ಸಣ್ಣ ಊರಾಗಿದ್ದು ಯಾವ ಹೆಚ್ಚಿನ ಸೌಕರ್ಯಗಳಿಲ್ಲ. ಬಸ್ಗಳೂ ವಿರಳ.
9. ಪೆರುಕುಳಂ (ತಿರುಕ್ಕುಳಂದೈ)
ಮೂಲದೇವರು : ಮಾಯಾಕ್ಕೂತ್ತನ್
ಅಮ್ಮನವರು : ಕುಳಂದೈವಲ್ಲಿ ನಾಚ್ಚಿಯಾರ್
ವಿಮಾನ : ಆನಂದ ನಿಲಯ ವಿಮಾನ
ತೀರ್ಥ : ಪೆರುಂಕುಳ ತೀರ್ಥ
ಭಂಗಿ : ಪೂರ್ವಾಭಿಮುಖವಾಗಿ ನಿಂತಿರುವ ಭಂಗಿ
ನೆಲೆ : ಶ್ರೀ ವೈಕುಂಠದಿಂದ 12 ಕಿ.ಮೀ. ದೂರದಲ್ಲಿದೆ. ಸಾಧಾರಣ ಊರಾಗಿದ್ದು, ಬಸ್ ವಸತಿ ಸೌಕರ್ಯಗಳಿವೆ.
10. ತಿರುಸಿರಿವರ ಮಂಗೈ (ತೋತಾದ್ರಿ)
ಮೂಲದೇವರು : ವಾನಮಾಮಲೈ ಪೆರುಮಾಳ್ (ತೋತಾದ್ರಿ ಪೆರುಮಾಳ್ ದೇವನಾಯಕನ್ )
ಅಮ್ಮನವರು : ಸಿರಿವರ ಮಂಗೈ ನಾಚ್ಚಿಯಾರ್ ಅಥವಾ ತೋತಾದ್ರಿ ಅಮ್ಮಾಳ್
ವಿಮಾನ : ಪದ್ಮಾಕಾರ ವಿಮಾನ
ಭಂಗಿ : ಪೂರ್ವಾಭಿಮುಖವಾಗಿ ನಿಂತಿರುವ ಭಂಗಿ
ವೈಶಿಷ್ಟ್ಯ : ಇದು ಎಂಟು ಸ್ವಯಂಭೂ ಸ್ಥಳಗಳಲ್ಲಿ ಒಂದಾಗಿದೆ.
ಈ ಕ್ಷೇತ್ರದಲ್ಲಿ ಒಂದು ಎಣ್ಣೆ ಬಾವಿ ಇದ್ದು, ಇದರ ಎಣ್ಣೆಯು ಅನೇಕ ವ್ಯಾಧಿಗಳನ್ನು ಗುಣಪಡಿಸುವುದೆಂಬ ನಂಬಿಕೆಯಿದೆ.
ನೆಲೆ: ತಿರುನಲ್ವೇಲಿ ಮತ್ತು ನಾಗರ ಕೋಯಿಲ್ ನಡುವೆ ತಿರುಸಿರಿವರ ಮಂಗೈ ಕ್ಷೇತ್ರವಿದೆ. ಬಸ್ ಸಂಚಾರ ಹೇರಳವಾಗಿದ್ದು, ಎಲ್ಲ ಅನುಕೂಲತೆಗಳೂ ಇವೆ. (ಮುಂದುವರಿಯುವುದು)






Leave a Reply