ಕೋಟಿಗಟ್ಟಲೆ ಯೋಧರು ಹತರಾದ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಹದಿನೆಂಟು ದಿನಗಳಲ್ಲಿ ವಿಜಯ ಸಾಧಿಸಿದರು. ಪ್ರಭುಗಳ ಪ್ರಭುವಾದ ಶ್ರೀಕೃಷ್ಣನು ಪಾಂಡವರ ಕಡೆ ಇದ್ದುದರಿಂದ ಇದು ಸಾಧ್ಯವಾಯಿತು. ಧರ್ಮ ಪ್ರಭುತ್ವವನ್ನು ಪುನರ್ ಸ್ಥಾಪಿಸುವ ಪ್ರಭುವಿನ ಧ್ಯೇಯವು ಕಾರ್ಯಗತವಾಯಿತು.
ಹಾಗಾಗಿ ಪ್ರಭುವು ತನ್ನ ಮುಂದಿನ ಪ್ರಯಾಣಕ್ಕೆ ಸಿದ್ಧನಾಗತೊಡಗಿದ. ಪ್ರಭುವು ದ್ವಾರಕೆಗೆ ಹೊರಡಲು ರಥದಲ್ಲಿ ಕುಳಿತೊಡನೆಯೇ ಉತ್ತರೆಯು ಭಯದಿಂದ ತನ್ನೆಡೆಗೆ ಧಾವಿಸಿ ಬರುತ್ತಿದ್ದುದನ್ನು ಕಂಡನು. ಉತ್ತರೆಯು ನುಡಿದಳು: “ಹೇ ಪ್ರಭುಗಳ ಪ್ರಭುವೆ, ನನ್ನನ್ನು ಕಾಪಾಡು, ಬೆಂಕಿಯನ್ನು ಉಗುಳುತ್ತಿರುವ ಬಾಣವೊಂದು ನನ್ನೆಡೆಗೆ ವೇಗದಿಂದ ಧಾವಿಸಿ ಬರುತ್ತಿದೆ.
ಹೇ ಪ್ರಭು, ನೀನು ಇಚ್ಚಿಸಿದೆಯಾದರೆ ಆ ಬಾಣವು ನನ್ನನ್ನು ಬೇಕಾದರೆ ಸುಟ್ಟುಬಿಡಲಿ. ಆದರೆ ಅದು ನನ್ನ ಗರ್ಭದಲ್ಲಿರುವ ಭ್ರೂಣವನ್ನು ಸುಡದಂತೆ ನೋಡಿಕೋ. ದಯೆಯಿಟ್ಟು ನನಗೆ ಇಷ್ಟು ಉಪಕಾರ ಮಾಡು, ಪ್ರಭುವೆ.
ದ್ರೋಣಾಚಾರ್ಯರ ಮಗನಾದ ಅಶ್ವತ್ಥಾಮನು ಪಾಂಡವರ ಕೊನೆಯ ವಂಶದ ಕುಡಿಯನ್ನು ನಾಶಪಡಿಸಲು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದನೆಂಬುದು ಭಗವಾನ್ ಶ್ರೀಕೃಷ್ಣನಿಗೆ ಕೂಡಲೇ ಅರ್ಥವಾಗಿ ಹೋಯಿತು. ಕಣ್ಣುಕುಕ್ಕುವಂತೆ ಹೊಳೆಯುತ್ತಿದ್ದ ಬ್ರಹ್ಮಾಸ್ತ್ರವು ತಮ್ಮೆಡೆ ಬರುತ್ತಿದ್ದುದನ್ನು ಕಂಡ ಪಾಂಡವರು ಕ್ರಮವಾಗಿ ತಮ್ಮ ತಮ್ಮ ಆಯುಧಗಳನ್ನು ಕೈಗೆತ್ತಿಕೊಂಡರು.
ಪಾಂಡವರನ್ನು ರಕ್ಷಿಸಲು ಶ್ರೀ ಕೃಷ್ಣನು ಕೂಡಲೇ ತನ್ನ ಸುದರ್ಶನ ಚಕ್ರವನ್ನು ಕೈಗೆತ್ತಿಕೊಂಡನು. ಪ್ರಭುವು ಪರಮಾತ್ಮನಾಗಿ ಪ್ರತಿಯೊಬ್ಬರ ಹೃದಯದಲ್ಲೂ ವಾಸಮಾಡುತ್ತಾನೆ. ಎಂದೇ ಕುರುವಂಶದ ಸಂತತಿಯನ್ನು ರಕ್ಷಿಸಲು ಕೃಷ್ಣನು ತನ್ನ ವೈಯಕ್ತಿಕ ಶಕ್ತಿಯಿಂದ ಉತ್ತರೆಯ ಗರ್ಭವನ್ನು ಮುಚ್ಚಿದನು. ಅಶ್ವತ್ಥಾಮನು ಪ್ರಯೋಗಿಸಿದ ಬ್ರಹ್ಮಾಸ್ತ್ರವು ತಡೆಯಲು ಆಗದಂತಿತ್ತಾದರೂ ಕೃಷ್ಣನ ಶಕ್ತಿಯು ಎದುರಾದಾಗ ಅದು ಶೂನ್ಯವಾಯಿತು ಹಾಗೂ ಹಿಮ್ಮೆಟ್ಟಿತು.
ಹೀಗೆ ಬ್ರಹ್ಮಾಸ್ತ್ರದ ವಿಕಿರಣದಿಂದ ಕಾಪಾಡಲ್ಪಟ್ಟ ಸುಶೀಲೆಯಾದ ಪ್ರಭುಭಕ್ತೆ ಕುಂತಿಯು ನುಡಿದಳು: “ಪ್ರಿಯ ಕೃಷ್ಣ ಪರಮ ಶ್ರೇಷ್ಠ ಒಡೆಯನಾದ ನೀನು ಈ ಹಿಂದೆ ನಮಗೊದಗಿದ ಅನೇಕ ವಿಪತ್ತುಗಳಿಂದ ಕಾಪಾಡಿದ್ದೀಯೆ. ಈಗ ಅಶ್ವತ್ಥಾಮನ ಅಸ್ತ್ರದಿಂದ ನಮ್ಮನ್ನು ರಕ್ಷಿಸಿದೆ. ಆ ವಿಪತ್ತುಗಳು ನಮಗೆ ಮತ್ತೆ ಮತ್ತೆ ಒದಗಿಬರಲೆಂಬುದೇ ನನ್ನಾಸೆ.

ಏಕೆಂದರೆ ಆಗ ನಾವು ನಿನ್ನನ್ನು ಮತ್ತೆ ಮತ್ತೆ ನೋಡುತ್ತಿರಬಹುದು. ಹೇ ನನ್ನ ಪ್ರಭುವೆ, ನಾವು ಸಂಪೂರ್ಣವಾಗಿ ನಿನ್ನ ಅನುಗ್ರಹವನ್ನೇ ನೆಚ್ಚಿಕೊಂಡಿರುವೆವು. ನಮ್ಮನ್ನು ರಕ್ಷಿಸಬಲ್ಲವರು ಬೇರೆ ಯಾರೂ ಇಲ್ಲ. ಹೀಗಿದ್ದೂ ನೀನು ಇಂದು ನಮ್ಮನ್ನು ಬಿಟ್ಟುಹೋಗುತ್ತಿದ್ದೀಯೇನು? ಹೇ ಗದಾಧರ, ನಮ್ಮ ರಾಜ್ಯವು ಇಂದು ನಿನ್ನ ಹೆಜ್ಜೆಗುರುತುಗಳಿಂದ ಅಲಂಕರಿಸಲ್ಪಡುತ್ತಿದೆ. ಎಂದೇ ಈ ಹೊತ್ತು ಅದು ತುಂಬ ಸುಂದರವಾಗಿ ಕಾಣುತ್ತಿದೆ.
ಆದರೆ ನೀನು ಹೊರಟು ಹೋದ ಮೇಲೆ ರಾಜ್ಯವು ಕಂಗೊಳಿಸುವುದಿಲ್ಲ. ನಿನ್ನ ದೃಷ್ಟಿ ಈ ಎಲ್ಲ ನಗರ ಗ್ರಾಮಗಳ ಮೇಲೆ ಬಿದ್ದಿದೆಯಾದ ಕಾರಣ ಅವು ಎಲ್ಲ ರೀತಿಗಳಲ್ಲೂ ಹುಲುಸಾಗಿ ಬೆಳೆದಿವೆ. ನೀನು ಸರ್ವಶಕ್ತನಾದ ಪ್ರಭು. ನಾನು ನಿನಗೆ ನನ್ನ ಗೌರವಪೂರ್ವಕ ನಮಸ್ಕಾರಗಳನ್ನು ಸಮರ್ಪಿಸುತ್ತೇನೆ.”
ತನ್ನನ್ನು ಸ್ತುತಿಸಿ ಹಾಡಲು ಅತ್ಯುತ್ತಮ ಶಬ್ದಗಳನ್ನು ಬಳಸಿದ್ದ ಕುಂತೀದೇವಿಯ ಪ್ರಾರ್ಥನಾ ವಾಕ್ಯಗಳನ್ನು ಕೇಳಿ ಪ್ರಭುವು ಮುಗುಳಕ್ಕನು. ಆ ಮುಗುಳ್ಳಗೆಯು ಅವನ ನಿಗೂಢ ಶಕ್ತಿಯಷ್ಟೇ ಮಾಂತ್ರಿಕ ಶಕ್ತಿಯುಳ್ಳದ್ದಾಗಿತ್ತು. ಶ್ರೀಮತಿ ಕುಂತೀದೇವಿಯ ಪ್ರಾರ್ಥನೆಗಳನ್ನು ಹೀಗೆ ಅಂಗೀಕರಿಸಿದವನಾದ ಪ್ರಭುವು ತಾನು ಹೊರಟುನಿಂತಿದ್ದ ವಿಷಯವನ್ನು ಇತರ ಸ್ತ್ರೀಯರಿಗೆ ತಿಳಿಸಲು ಹಸ್ತಿನಾಪುರದ ಅರಮನೆಯನ್ನು ಪ್ರವೇಶಿಸಿದನು.
ಇನ್ನೇನು ಪ್ರಭುವು ಹೊರಡಬೇಕು ಎನ್ನುವಷ್ಟರಲ್ಲಿ ಅವನನ್ನು ರಾಜ ಯಧಿಷ್ಠರನು ತಡೆದು ನಿಲ್ಲಿಸಿ ಪ್ರೀತಿಯಿಂದ ಮಧುರ ವಚನಗಳನ್ನಾಡಿದನು.
ಧರ್ಮನ ಪುತ್ರನಾದ ರಾಜಾ ಯುಧಿಷ್ಠರನು ತನ್ನ ಮಿತ್ರರು ಯುದ್ಧದಲ್ಲಿ ಮಡಿದಿದ್ದುದರಿಂದ ಶೋಕದಲ್ಲಿ ಮುಳುಗಿಹೋಗಿದ್ದನು; ತೀರ ಪ್ರಾಪಂಚಿಕನಂತೆ ದುಃಖ ತಪ್ತನಾಗಿದ್ದನು. ಕುರುಕ್ಷೇತ್ರದ ರಣರಂಗದಲ್ಲಿ ಬಹುಮಂದಿಯು ಹತರಾಗಿದ್ದುದರಿಂದ ಕಂಗೆಟ್ಟಿದ್ದ ರಾಜಾ ಯಧಿಷ್ಠರನು ಯುದ್ಧಭೂಮಿಗೆ ಹೋದನು.

ಅಲ್ಲಿ ಇನ್ನೇನು ಈಗಲೋ ಆಗಲೋ ಪ್ರಾಣ ತ್ಯಜಿಸಲಿದ್ದ ಸ್ಥಿತಿಯಲ್ಲಿ ಭೀಷ್ಮದೇವನು ಶರಶೆಯ್ಯೆಯಮೇಲೆ ಮಲಗಿದ್ದನು. ತನ್ನ ಜೊತೆಯಲ್ಲಿದ್ದ ಋಷಿಗಳ ಸಮ್ಮುಖದಲ್ಲಿ ಮಹಾರಾಜ ಯುಧಿಷ್ಠರನು ವಿವಿಧ ಧಾರ್ಮಿಕ ಕಾರ್ಯಗಳ ಮೂಲತತ್ವಗಳನ್ನು ಕುರಿತಂತೆ ಭೀಷ್ಮದೇವನನ್ನು ಪ್ರಶ್ನಿಸಿದನು. ಭೀಷ್ಮದೇವನು ವೃತ್ತಿಧರ್ಮಗಳ ಬಗೆಗೆ ವರ್ಣಿಸಿ ಹೇಳುತ್ತಿದ್ದಾಗ ಸೂರ್ಯನ ಚಲನೆಯ ದಿಕ್ಕು ಉತ್ತರಾರ್ಧದ ಗೋಳದ ಕಡೆಗೆ ಹೊರಳಿತು.
ಸ್ವಇಚ್ಛೆಯಿಂದ ಮರಣ ಹೊಂದುವ ಯೋಗಿಗಳು ಈ ಸಂಧಿ ಕಾಲವನ್ನು ಅಪೇಕ್ಷಿಸುತ್ತಾರೆ. ತರುವಾಯ ಭೀಷ್ಮದೇವನು ಮಾತನಾಡುವುದನ್ನು ನಿಲ್ಲಿಸಿದನು. ಎಲ್ಲ ಬಂಧನಗಳಿಂದ ಮುಕ್ತನಾಗಿ ತನ್ನ ಮನಸ್ಸನ್ನು ಎಲ್ಲೆಡೆಗಳಿಂದಲೂ ಹಿಂದಕ್ಕೆ ತಂದುಕೊಂಡನು. ಬಳಿಕ ತನ್ನ ತೆರೆದ ಕಣ್ಣುಗಳನ್ನು ತನ್ನ ಎದುರಿನಲ್ಲಿ ನಿಂತಿದ್ದ ಮೂಲ ದೇವೋತ್ತಮ ಪುರುಷನಾದ ಶ್ರೀ ಕೃಷ್ಣನಲ್ಲಿ ನೆಟ್ಟನು.
ಹೀಗೆ ಭೀಷ್ಮದೇವನು ಮನಸ್ಸು ಮಾತು, ದೃಷ್ಟಿ ಹಾಗೂ ಕಾರ್ಯಗಳು – ಈ ಎಲ್ಲ ವಿವರಗಳಲ್ಲೂ ಪರಮಾತ್ಮನಾದ ಶ್ರೀಕೃಷ್ಣನಲ್ಲಿ ಐಕ್ಯವಾದನು. ಅವನು ಮೌನಿಯಾದನು ಉಸಿರಾಡುವುದು ನಿಂತಿತು.
ತನ್ನ ಬಂಧುಗಳಿಗೆ ಸಮಾಧಾನ ಹೇಳಲು ಹಾಗೂ ತನ್ನ ತಂಗಿ ಸುಭದ್ರೆಯನ್ನು ಸಂತೋಷಪಡಿಸಲು ಶ್ರೀಹರಿ ಭಗವಾನ್ ಕೃಷ್ಣನು ಕೆಲವು ತಿಂಗಳ ಕಾಲ ಹಸ್ತಿನಾಪುರದಲ್ಲಿ ನಿಂತನು. ಬಳಿಕ ತನ್ನ ಪ್ರಿಯ ಸಂಗಾತಿಗಳೊಡನೆ ದ್ವಾರಕೆಗೆ ಹೊರಟನು. ಅಲ್ಲಿಂದ ಮುಂದೆ, ನಭೋಮಂಡಲದಲ್ಲಿ ಸರ್ವ ಶುಭ ಸೂಚನೆಗಳೂ ಕ್ರಮೇಣ ಕಾಣಿಸಿಕೊಂಡಾಗ ಮಹಾರಾಜ ಪರೀಕ್ಷಿತನು ಜನಿಸಿದನು.
ಪರೀಕ್ಷಿತ್ ಮಹಾರಾಜನ ಜನನದಿಂದಾಗಿ ಬಹು ಸಂತೋಷಗೊಂಡ ಯುಧಿಷ್ಠರ ಮಹಾರಾಜನು ಶಿಶುಜನನಕ್ಕೆ ಸಂಬಂಧಿಸಿದ ಶುದ್ಧೀಕರಣ ಕ್ರಿಯೆಗಳೆಲ್ಲವನ್ನೂ ಮಾಡಿಸಿದನು. ಧೌಮ್ಯ ಹಾಗೂ ಕೃಪ ಮುಂತಾದ ವಿದ್ವಾಂಸ ಬ್ರಾಹ್ಮಣರು ಮಂಗಳಕರವಾದ ಮಂತ್ರಗಳನ್ನು ಪಠಿಸಿದರು. ರಾಜನು ನೀಡಿದ ದಾನವಸ್ತುಗಳಿಂದ ಸುಪ್ರೀತರಾದ ವಿದ್ವಾಂಸ ಬ್ರಾಹ್ಮಣರು ನವಜಾತ ಶಿಶುವು ದೇವೋತ್ತಮ ಪುರುಷನಿಂದ ರಕ್ಷಿತನಾದವನು ಎಂದು ಜಗತ್ತಿನಲ್ಲಿ ಖ್ಯಾತನಾಗುತ್ತಾನೆ ಎಂದು ಭವಿಷ್ಯ ನುಡಿದರು.
ಜ್ಯೋತಿಷ್ಯಶಾಸ್ತ್ರವನ್ನರಿತಿದ್ದ ನಿಪುಣರು ಹಾಗೂ ಶಿಶುಜನರ ಸಂದರ್ಭದಲ್ಲಿ ಮಾಡಬೇಕಾದ ಶಾಸ್ತ್ರವಿಧಿಗಳನ್ನು ಬಲ್ಲವರು ಶಿಶುವಿನ ಭವಿಷ್ಯದ ಬಗೆಗೆ ಯುಧಿಷ್ಠರ ಮಹಾರಾಜನಿಗೆ ತಿಳುವಳಿಕೆ ಕೊಟ್ಟರು. ತರುವಾಯ ಉದಾರವಾದ ಸಂಭಾವನೆ ಪಡೆದು ಆ ಶಾಸ್ತ್ರನಿಪುಣರೆಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.






Leave a Reply