ಬೇರೆ ಬೇರೆ ಯೋಗ ಪದ್ಧತಿಗಳಿವೆ. ಆದರೆ ಎಲ್ಲದರ ಗುರಿ ಒಂದೇ ಪರಮಸತ್ವವನ್ನು ಕುರಿತು ಆತ್ಮ ಸಾಕ್ಷಾತ್ಕಾರ ಮತ್ತು ಕೃಷ್ಣನೊಂದಿಗಿನ ನಮ್ಮ ಸಂಬಂಧದ ಪುನರ್ ಸ್ಥಾಪನೆಯಾಗಬೇಕು. ನಾವು ಐಹಿಕ ಶಕ್ತಿಯ ಸಂಯೋಗದಿಂದ ಈ ಸಂಬಂಧವನ್ನು ಮರೆತಿದ್ದೇವೆ.

ಯೋಗದ ಪ್ರಾರಂಭದಲ್ಲಿ ನಮಗೆ ನಾವೇ ಕೃಷ್ಣ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಕೆಲಸದ ಸಾಧನೆಯಿಲ್ಲದೆ ನಾವು ಪರಮಾತ್ಮನ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವಾಗುತ್ತದೆ. ಪ್ರಾರಂಭಿಕನಾದವನು ಬರೀ ಧ್ಯಾನದಲ್ಲಿ ಕುಳಿತುಕೊಂಡರೆ ಅವನ ಮನಸ್ಸು ಅಲೆದಾಡುತ್ತದೆ.
ಇದು ಕಲಿಯುಗ, ಕಲಹದ ಯುಗ, ಈ ಯುಗದಲ್ಲಿ ಧ್ಯಾನಯೋಗಕ್ಕೆ ಅಂತಹ ಶಿಫಾರಸೇನೂ ಮಾಡಲ್ಪಟ್ಟಿಲ್ಲ. ಹಿಂದಿನ ಯುಗಗಳಲ್ಲಿ ಜನರು ಬಹಳ ಗುಣವಂತರೂ, ಧಾರ್ಮಿಕವಂತರಾಗಿದ್ದರಿಂದ ಧ್ಯಾನಯೋಗವೆಂಬುದು ಅಲ್ಲಿ ಸೂಚಿಸಲ್ಪಟ್ಟಿತ್ತು. ಈ ಹಿಂದಿನ ಯುಗಗಳು ಕಳೆದು ಈಗ ಕಲಿಯುಗ ನಡೆಯುತ್ತಿದೆ.
ಈ ಕಲಿಯುಗದಲ್ಲಿ ಜನರು ಬಹಳ ಕಡಮೆ ಗುಣವಂತರು, ಧಾರ್ಮಿಕರು ಆಗಿದ್ದಾರೆ. ಇದರ ಅರ್ಥ ಯಾರೂ ಧ್ಯಾನ ಮಾಡಬಾರದೆಂದಲ್ಲ. ಪೂರ್ಣ ನಿಶ್ಚಲ ಸ್ಥಿತಿಯಲ್ಲಿ ಕುಳಿತುಕೊಂಡು ಪರಮ ಸತ್ಯದಲ್ಲಿ ಮನಸ್ಸನ್ನು ಏಕೀಕರಿಸುವುದರಿಂದ ಅವರು ಧ್ಯಾನದಲ್ಲಿ ಸಫಲತೆಯನ್ನು ಪಡೆಯುತ್ತಾರೆ. ಆದರೆ ಈಗಿನ ಕಾಲದಲ್ಲಿ ಬಹಳಷ್ಟು ಜನರಿಗೆ ಇದು ಸಾಧ್ಯವಿಲ್ಲ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಎಲ್ಲಿಯೂ, ನಾನು ಕೆಲಸ ಮಾಡುವಾಗ ನೀನು ಆಲಸಿಯಾಗಿ ಕುಳಿತುಕೋ ಎಂದು ಅರ್ಜುನನಿಗೆ ಬೋಧಿಸಲಿಲ್ಲ. ಅರ್ಜುನನು ಕೃಷ್ಣನ ಆಪ್ತ ಗೆಳೆಯನಾಗಿದ್ದನು. ಆದ್ದರಿಂದ ನಾವು ಕೂಡ ಕೃಷ್ಣನಿಗಾಗಿ ಕೆಲಸ ಮಾಡಿ, ಅವನ ಮೇಲೆ ಮನಸ್ಸನ್ನು ಕೇಂದ್ರೀಕರಿಸಿಕೊಂಡರೆ ನಾವು ಕೂಡ ಅವನ ಗೆಳೆಯರಾಗಬಹುದು.
ನಾವು ನಮ್ಮ ಲಾಭಕ್ಕಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ ಸದಾ ಕೃಷ್ಣನಿಗಾಗಿ ಕೆಲಸ ಮಾಡಬೇಕು. ನಾವು ದಿನದ 24 ಘಂಟೆಯೂ ಕೃಷ್ಣನಿಗಾಗಿ ಕೆಲಸ ಮಾಡಲು ಯೋಚಿಸುತ್ತಿರಬೇಕು. ಕೃಷ್ಣನ ಮೇಲೆ ನಾವು ನಮ್ಮ ಮನಸ್ಸು ಕೇಂದ್ರೀಕರಿಸಿಕೊಂಡರೆ ಮೌನರಾಗುತ್ತೇವೆ. ಈ ರೀತಿಯಾಗಿ ಸ್ತಬ್ದವಾಗಿ, ನಿಶ್ಚಲವಾಗಿ, ಮೌನವಾಗಿ ಕೃಷ್ಣನ ಬಗ್ಗೆ ಧ್ಯಾನ ಮಾಡಿದಾಗ ನಮ್ಮ ಮನಸ್ಸು ಕೃಷ್ಣನೊಂದಿಗೆ ಬೆಸೆಯುತ್ತದೆ.
ಕೆಲಸಕ್ಕೆ ಒಂದು ಉದ್ದೇಶ ಬೇಕು – ನಾವು ಸದಾ ಇಂದ್ರಿಯ ತೃಪ್ತಿಗಾಗಿಯೋ ಅಥವಾ ಕೃಷ್ಣನಿಗಾಗಿಯೋ ಕೆಲಸವನ್ನು ಮಾಡುತ್ತಿರುತ್ತೇವೆ. ಯೋಗಾಭ್ಯಾಸವೆಂದರೆ ವೈಯಕ್ತಿಕ ಇಚ್ಛೆಯಿಲ್ಲದೆ ನಿಷ್ಕಾಮನಾಗಿ ಕೆಲಸ ಮಾಡುವುದು. ಅಂದರೆ ಬರೀ ಕೃಷ್ಣನ ಉದ್ದೇಶಕ್ಕಾಗಿ ಕೆಲಸವನ್ನು ಮಾಡುವುದು.
ಹಾಗಾದರೆ ಇದರ ಧ್ಯೇಯ ಅಥವಾ ಉದ್ದೇಶವೇನು? ಅಂದರೆ ಜನರಿಗೆ ಕೃಷ್ಣ ಪ್ರಜ್ಞೆ ಅಥವಾ ದೇವ ಪ್ರಜ್ಞೆಯ ಬಗ್ಗೆ ಹೇಳುವುದು. ಚೈತನ್ಯ ಮಹಾಪ್ರಭುಗಳು ತಮ್ಮ ಶಿಷ್ಯರಿಗೆ ಈ ರೀತಿ ಹೇಳಿದ್ದಾರೆ. “ನಾನು ನಿಮಗೆ ಕಲಿಸಿದ ವೇದ ವಚನಗಳನ್ನು ಬೋಧಿಸಿ, ನೀವು ಯಾರನ್ನು ಭೇಟಿಯಾದರೂ ಅವರಿಗೆ ಭಗವದ್ಗೀತೆಯ ಸಂದೇಶವನ್ನು ತಿಳಿಸಿಕೊಡಿ. ನಾವು ಜಗತ್ತಿಗೆ ಗೀತಾಸಂದೇಶವನ್ನು ತಿಳಿಸಬೇಕು.” ಯಾರು ಈ ಕೆಲಸವನ್ನು ಮಾಡುತ್ತಾರೋ ಅವರು ನಿಜವಾದ ಯೋಗದ ಹಂತದಲ್ಲಿ ಇರುತ್ತಾರೆ.
ಮಾನವನಿಗೆ ಆಧ್ಯಾತ್ಮಿಕ ಜಗತ್ತಿನ ಬಗ್ಗೆ ಉನ್ನತಿ ಗಳಿಸಿಕೊಳ್ಳಲು ಅಥವಾ ಐಹಿಕ ಜಗತ್ತಿನಲ್ಲಿ ಅವನತಿಯಿಂದ ಜಾರಿಕೊಳ್ಳುವಂತಹ ಆಯ್ಕೆ ಇದೆ. ನಮ್ಮ ಸುಖ-ದುಃಖಗಳಿಗೆ ನಾವೇ ಕಾರಣಕರ್ತರಾಗಿದ್ದೇವೆ. ನನ್ನನ್ನು ನಾನು ಉನ್ನತಿ ಪಡಿಸಿಕೊಂಡರೆ ನನಗೆ ನಾನೇ ಸ್ನೇಹಿತನಾಗುತ್ತೇನೆ.
ನನಗೆ ನಾನೇ ಅವನತಿಯಿಂದ ನರಕದಲ್ಲಿ ಹಾಕಿಕೊಂಡರೆ ನಾನೇ ಕೆಟ್ಟಶತ್ರುವಾಗಿರುತ್ತೇನೆ. ಬೇರೆಯವರು ಬೋಧಿಸುವುದನ್ನು ಅನುಕರಿಸುವುದೋ, ಬೇಡವೋ ಎಂಬ ಆಯ್ಕೆ ನನಗೆ ಬಿಟ್ಟದ್ದು. ಸ್ವರ್ಗ ಅಥವಾ ನರಕ ಪಡೆಯುವುದು ನಮ್ಮ ಆಯ್ಕೆಯಿಂದಲೇ ಆಗಿರುತ್ತದೆ. ಒಂದು ವೇಳೆ ನಾನು ಕಾರನ್ನು ಚಲಿಸುತ್ತ ತಪ್ಪು ದಾರಿಗೆ ನಡೆದರೆ ಅಪಾಯದ ದುರಂತ ನನಗೆ ಕಟ್ಟಿಟ್ಟದ್ದು. ಅದು ನನ್ನ ತಪ್ಪು ಆಯ್ಕೆಯಿಂದಲೇ ಆಗಿರುತ್ತದೆ.
ಮಾಯೆಯ ಮೋಡಿ ಬಹಳ ಬಲವಾಗಿದೆ. ಅರ್ಜುನನು ಕೂಡ ಶ್ರೀಕೃಷ್ಣನ ಬೋಧನೆಯನ್ನು ಅಲಕ್ಷ್ಯ ಮಾಡಿದ. ಕೃಷ್ಣನೊಬ್ಬನೇ ತನಗೆ ಜ್ಞಾನೋದಯ ಮಾಡಿ ಸರಿಯಾದ ಮಾರ್ಗದರ್ಶನವನ್ನು ಕೊಡುತ್ತಾನೆ ಎಂದು ತಿಳಿದಿದ್ದರೂ ಅವನು ಅವನ ಬೋಧನೆಯನ್ನು ಉಪೇಕ್ಷೆ ಮಾಡಿದ.

ಕೃಷ್ಣ ತನ್ನ ಬೋಧನೆಯನ್ನು ಅನುಸರಿಸಲಿ ಎಂದು ಯಾರಿಗೂ ಒತ್ತಾಯ ಮಾಡುವುದಿಲ್ಲ. ಸಂತೋಷದ ಹಾದಿ ಯಾವುದೆಂದು ನಮ್ಮ ಮುಂದೆ ಇಡುತ್ತಾನೆಯೇ ಹೊರತು ಅದನ್ನು ಆಚರಿಸಲು ನಮಗೆ ಒತ್ತಾಯ ಪಡಿಸುವುದಿಲ್ಲ. ಆಯ್ಕೆ ನಮ್ಮದಾಗಿದೆ.
ಯಾವಾಗ ನನ್ನ ಮನಸ್ಸನ್ನು ನಿಯಂತ್ರಿಸುತ್ತೇನೋ ಆವಾಗ ಅದು ನನ್ನ ಸ್ನೇಹಿತನಾಗುತ್ತದೆ. ಇದು ಕೂಡ ಹೇಳಲ್ಪಟ್ಟಿದೆ ಏನೆಂದರೆ ನಾವು ಬೆಳಗ್ಗೆ ಎದ್ದ ನಂತರ, ರಾತ್ರಿ ಮಲಗಲು ಹೋಗುವ ಮುಂಚೆ ನಮ್ಮ ಮನಸ್ಸನ್ನು ಚಪ್ಪಲಿಯಿಂದ ಸಾವಿರ ಸಲ ಹೊಡೆದುಕೊಳ್ಳಬೇಕು.
ಏಕೆಂದರೆ ನಮ್ಮ ಮನಸ್ಸು “ನೀನೇಕೆ ‘ಹರೇ ಕೃಷ್ಣ ನಾಮ ಜಪವನ್ನು ಮಾಡುತ್ತಿದ್ದೀಯಾ?” ”ನೀನೇಕೆ ಎಲ್ಎಸ್ಡಿ ತೆಗೆದುಕೊಳ್ಳಬಾರದು?” ಎಂದು ಕೇಳಿದರೆ ನಾವು ಅದೇ ಚಪ್ಪಲಿಯಿಂದ ಹೊಡೆದುಕೊಳ್ಳಬೇಕು. ಸದಾ ಕೃಷ್ಣನ ನಾಮಸ್ಮರಣೆಯಲ್ಲಿ ಇಂತಹ ಕೆಲಸದ ಆವಶ್ಯಕತೆಯಿಲ್ಲ.
ನಮ್ಮ ಮನಸ್ಸೇ ನಮಗೆ ಒಳ್ಳೆಯ ಸ್ನೇಹಿತನಾಗಿರುತ್ತಾರೆ. ನಮ್ಮ ಬಳಿ ಏನೇನು ಇದೆಯೋ ಅವೆಲ್ಲವನ್ನು ಶ್ರೀಕೃಷ್ಣನಿಗಾಗಿ ಉಪಯೋಗಿಸಬೇಕು. ನಾವು ನಮ್ಮ ನಾಲಗೆಯನ್ನು ಕೃಷ್ಣನ ಬಗ್ಗೆ ಮಾತನಾಡಲು ಮತ್ತು ಕೃಷ್ಣನಿಗೆ ಅರ್ಪಿಸಿದ ಆಹಾರವನ್ನು ಸ್ವೀಕರಿಸಲು ಉಪಯೋಗಿಸಬೇಕು.
ಕಣ್ಣುಗಳನ್ನು ಕೃಷ್ಣನ ಸುಂದರ ರೂಪ, ಚಿತ್ರಗಳನ್ನು ನೋಡಲು ಉಪಯೋಗಿಸಿಕೊಳ್ಳಬೇಕು. ಕಾಲುಗಳು ಕೃಷ್ಣ ಮಂದಿರದ ಕಡೆ ಹೋಗಲು ಉಪಯೋಗಿಸಿದರೆ ಕೈಗಳನ್ನು ಪೊರಕೆ ಹಿಡಿದು ಕೃಷ್ಣ ದೇವಾಲಯವನ್ನು ಸ್ವಚ್ಛಗೊಳಿಸಲು ಉಪಯೋಗಿಸಬೇಕು.
ಮೂಗನು ಕೃಷ್ಣನಿಗೆ ಅರ್ಪಿಸಿದ ಹೂಗಳ ಪರಿಮಳವನ್ನು ಆಸ್ವಾದಿಸಲು ಉಪಯೋಗಿಸಿದರೆ ಮುಖ್ಯವಾಗಿ ನಮ್ಮ ಜನನೇಂದ್ರಿಯಗಳನ್ನು ಕೃಷ್ಣಪ್ರಜ್ಞೆಯನ್ನು ಬೆಳೆಸುವಂತಹ ಮಕ್ಕಳನ್ನು ಹುಟ್ಟಿಸಲು ಉಪಯೋಗಿಸಿಕೊಳ್ಳಬೇಕು.
ನಾವು ಇವುಗಳನ್ನೆಲ್ಲ ಅನುಸರಿಸಲು ಸಾಧ್ಯವಾಗದಿದ್ದರೆ ಕೇವಲ ‘ಹರೇಕೃಷ್ಣ’, ‘ಹರೇಕೃಷ್ಣ’ ಜಪಿಸುತ್ತಾ ನಾವು ನಮ್ಮ ಐಹಿಕ ಸಂಬಂಧಗಳನ್ನು ಕಡಿದುಕೊಂಡು ನಮ್ಮ ಮನಸ್ಸನ್ನು ಕೃಷ್ಣಪ್ರಜ್ಞೆಯಲ್ಲಿ ತೊಡಗಿಸಿಕೊಳ್ಳಬೇಕು. ಇದು ನಿರಾಕಾರದ ಮೇಲಾಗಲಿ ಅಥವಾ ಶೂನ್ಯದ ಮೇಲಾಗಲಿ ಧ್ಯಾನಿಸಲು ಸೂಚಿಸಲ್ಪಟ್ಟಿಲ್ಲ. ಕೇವಲ ನಮ್ಮ ಮನಸ್ಸನ್ನು ಕೃಷ್ಣನ ಮೇಲೆ ಕೇಂದ್ರೀಕರಿಸಬೇಕು.
ಮನಸ್ಸು ಅವಿಶ್ರಾಂತವಾಗಿರುವುದರಿಂದ ನಾವು ಭಗವಂತನ ನಾಮ ಜಪವನ್ನು ಮಾಡಬೇಕು. ನಾಮಸ್ಮರಣೆಯ ಮಂತ್ರದ ಶಬ್ದ ಕಂಪನ ಸ್ವತಃ ಭಗವಂತನಿಗಿಂತ ಭಿನ್ನವಲ್ಲ. ಐಹಿಕ ಜಗತ್ತಿನಲ್ಲಿ ಒಬ್ಬ ಮನುಷ್ಯನ ಹೆಸರು ಮನುಷ್ಯನಂತೆ ಇರುವದಿಲ್ಲ ಮಿ|| ಜೋನ್ಸ್ ನನಗೆ ಬೇಕೆಂದು ಒಂದು ರೂಮಿನಲ್ಲಿ ಕುಳಿತು ಜಪ ಮಾಡಿದರೆ ಜೋನ್ಸ್ ನಮ್ಮ ಮುಂದೆ ಪ್ರತ್ಯಕ್ಷನಾಗುವುದಿಲ್ಲ.
ಕೃಷ್ಣನು ಮಿ) ಜೋನ್ಸ್ ತರಹದ ಐಹಿಕ ಮನುಷ್ಯನಲ್ಲ. ಕೃಷ್ಣನ ಹೆಸರು ಮತ್ತು ಕೃಷ್ಣ ಎರಡೂ ಒಂದೇ ಆಗಿದೆ. ಯಾವ ಭಕ್ತನು ಸದಾ ತನ್ನ ನಾಮ ಜಪವನ್ನು ಮಾಡುತ್ತಾನೋ ಅವನ ಜೊತೆ ಕೃಷ್ಣನು ಇರುತ್ತಾನೆ. ಯಾವ ನಾಲಗೆ ‘ಹರೇ ಕೃಷ್ಣ ‘ಹರೇ ರಾಮ’ ಎಂದು ಜಪಿಸುತ್ತದೆಯೋ ಅದರ ಮೇಲೆ ಕೃಷ್ಣನು ಕುಣಿದಾಡುತ್ತಾನೆ.
ಏನೋ ಯೋಚಿಸುತ್ತಾ, ಅನ್ಯಮನಸ್ಕರಾಗಿ ಹರೇಕೃಷ್ಣ ಎಂದು ಜಪಿಸುತ್ತಿದ್ದರೆ ಅದರಿಂದ ಏನೂ ಒಳ್ಳೆಯದಾಗುವುದಿಲ್ಲ. ನಮ್ಮ ಅನಿಯಂತ್ರಿತ ಮನಸ್ಸನ್ನು ನಾಮ ಜಪವೊಂದೇ ನಿಯಂತ್ರಣಕ್ಕೆ ತರುತ್ತದೆ. ಯೋಗ ಪದ್ಧತಿಯು ಮನಸ್ಸನ್ನು ನಿಯಂತ್ರಣಕ್ಕೆ ತರುವ ಒಂದು ಪ್ರಕ್ರಿಯೆ.
ಅದು ಮನಸ್ಸನ್ನು ಅಲೆದಾಡಿಸುವ ಕ್ರಿಯೆಯಲ್ಲ. ನಮ್ಮ ಮನಸ್ಸನ್ನು ಸದಾ ಕೃಷ್ಣನ ಮೇಲೆ ಕೇಂದ್ರೀಕರಿಸುತ್ತಿದ್ದರೆ ಅದು ನಮ್ಮ ನಿಯಂತ್ರಣದಲ್ಲಿರುತ್ತದೆ. ಎಲ್ಲೋ ದೂರವಾಗಿ ಏಕಾಂತ ಸ್ಥಳದಲ್ಲಿ ಕುಳಿತು ಕಷ್ಟಪಟ್ಟುಕೊಂಡು ಧ್ಯಾನ ಮಾಡುವ ಅವಶ್ಯಕತೆಯಿಲ್ಲ. ಈ ಯುಗದಲ್ಲಿ ಅನಾವಶ್ಯಕವಷ್ಟೇ ಅಲ್ಲ ಅಸಾಧ್ಯವೂ ಕೂಡ.

ಆದರೆ ಜಪವು ಸರಳವಾದ್ದರಿಂದ ಅದನ್ನು ಯಾವಾಗ, ಎಲ್ಲಿಬೇಕಾದರೂ ಮಾಡಬಹುದು. ಸ್ತ್ರೀಯರು, ಮಕ್ಕಳು, ಪಂಡಿತರು, ಕರಿಯಜನ, ಬಿಳಿಯಜನ ಯಾರೇ ಆಗಲಿ ಎಲ್ಲರೂ ಈ ನಾಮ ಜಪವನ್ನು ಮಾಡಬಹುದು. ಆದುದರಿಂದ ಸುಮ್ಮನೆ ಕೃಷ್ಣನಲ್ಲಿ ಏಕಾಗ್ರತೆ ಮಾಡಿ, ಕೃಷ್ಣನ ಬಗ್ಗೆ ಕಿವಿಯಿಂದ ಕೇಳಿ, ಅವನ ನಾಮಜಪವನ್ನು ನಾಲಗೆಯಿಂದ ಮಾಡಿ.
ನಾವು ಬ್ರಹ್ಮನ್ ಆಗಿದ್ದೇವೆ. ಆದರೆ ನಾವು ಪರಮ ಬ್ರಹ್ಮನಲ್ಲ. ನಾವು ಪರಮನಷ್ಟೇ ಉತ್ತಮವಾಗಲು ಸಾಧ್ಯವಿದೆಯೇ ಹೊರತು ನಾವೇ ಪರಮ ಬ್ರಹ್ಮನಾಗಲು ಸಾಧ್ಯವಿಲ್ಲ. ಅದು ಕೂಡ ನಮ್ಮ ಸಾಮರ್ಥ್ಯದ ಮೇಲೆ ನಿಂತಿದೆ. ನಾವು ಬ್ರಹ್ಮನ್ ಆಗಿದ್ದರೂ ಅವರಿಸಲ್ಪಟ್ಟಿದ್ದೇವೆ.
ಆದರೆ ಮುಸುಕನ್ನು ತೆಗೆದು ಹಾಕಬೇಕು. ಅಂದರೆ ನಾವು ಈಗಾಗಲೇ ಬ್ರಹ್ಮನಾಗಿದ್ದೇವೆ. ಹೊಸದಾಗಿ ಪ್ರಯತ್ನಿಸಬೇಕಾದ್ದೇನೂ ಇಲ್ಲ. ನಮ್ಮನ್ನು ಅವರಿಸಿಕೊಂಡಿರುವ ಈ ಮಾಯೆಯ ಮುಸುಕನ್ನು ಹರಿದು ಹೊರಬರಬೇಕಾಗಿದೆ. ಪರಮ ಪ್ರಭು ತಾನೇ ಮಾಯೆಯಲ್ಲಿ ಸಿಕ್ಕಿಕೊಂಡಿಲ್ಲ.
ಮೋಡ ಇಡೀ ಆಕಾಶವನ್ನು ಆವರಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ನಮಗೆ ಇಡೀ ಆಕಾಶವನ್ನು ಆವರಿಸಿದಂತೆ ಕಂಡು ಬಂದರೂ ಅದು ಇಡೀ ಆಕಾಶದ ಒಂದು ವಿಭಿನ್ನಾಂಶ ಅಷ್ಟೆ. ಅದೇ ರೀತಿಯಾಗಿ ಪರಮ ಪ್ರಭುವನ್ನು ಇಡೀ ಮಾಯೆಯೆಂಬ ಮೋಡ ಆವರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಾವು ಈ ಐಹಿಕ ಬಂಧನದಿಂದ ಬಿಡುಗಡೆಯನ್ನು ಪಡೆದಾಗ ನಮ್ಮ ನಿಜವಾದ ಗುರುತನ್ನು ಅನ್ವೇಷಿಸುತ್ತೇವೆ.
ಜೀವಿಗಳು ಐಹಿಕ ಸ್ಥಿತಿಯಲ್ಲಿದ್ದಾರೆ. ಅವರು ಈ ಐಹಿಕ ಲೋಕದಲ್ಲಿಯೇ ಉಳಿದುಕೊಳ್ಳಬಹುದು ಇಲ್ಲವೇ ತಮ್ಮ ನಿಜವಾದ ಗುರುತನ್ನು ಸಾಕ್ಷಾತ್ಕಾರ ಪಡಿಸಿಕೊಂಡು ಆಧ್ಯಾತ್ಮಿಕ ಜಗತ್ತಿಗಾದರೂ ಹೋಗಬಹುದು. ಜನರು ಈ ಐಹಿಕ ಜಗತ್ತಿನಲ್ಲಿ ತಾವು ಸುಖವಾಗಿರಬಹುದು ಎಂದು ಯೋಚಿಸುತ್ತಾರೆ.
ಆದರೂ ಅವರು ತಮ್ಮ ದಿನನಿತ್ಯದ ಬದುಕಿನಲ್ಲಿ ಕಷ್ಟಪಡುತ್ತಲೇ ಇದ್ದಾರೆ. ಹೋರಾಡುತ್ತಲೇ ಇದ್ದಾರೆ. ತಮ್ಮ ವಿಚಲಿತವಾದ ಮನಸ್ಸಿನಿಂದ ಮಾರ್ಗಬಿಟ್ಟು ಹೋರಾಡಲು ಹೊರಟಿದ್ದಾರೆ. ಯೋಗ ಪದ್ಧತಿಯು ಮನುಷ್ಯನನ್ನು ಪರಿಶುದ್ಧ ಮಾಡಲು ಇದೆ. ಧ್ಯಾನ ತುಂಬ ಕಷ್ಟಕರವಾದುದು.
ಕೃಷ್ಣನ ಭಕ್ತನಾಗಿ ಸದಾ ಅವನ ಸೇವೆಯಲ್ಲಿ ತೊಡಗುವುದು ನಿಜವಾಗಿಯೂ ಸರಳಮಾರ್ಗವಾಗಿದೆ. ಯಾರು ಈ ಭಕ್ತಿಯೋಗವನ್ನು ಆಚರಿಸುತ್ತಾರೋ ಅವರು ಈ ಐಹಿಕ ಕಲುಷಗಳಿಂದ ಮುಕ್ತರಾಗುತ್ತಾರೆ ಮತ್ತು ಅವರು ಹೀಗೆ ತಿಳಿದುಕೊಳ್ಳುತ್ತಾರೆ.
“ನಾನು ಜಡನಲ್ಲ ನಾನು ಬ್ರಹ್ಮನಾಗಿದ್ದೇನೆ.” ಎಂದು ಈ ದಿವ್ಯವಾದ ಸಾಕ್ಷಾತ್ಕಾರವನ್ನು ಪಡೆದಾಗ ಅವನು ಉನ್ನತವಾದ ಸುಖವನ್ನು ಅನುಭವಿಸುತ್ತಾನೆ. ಅವನು ಸಂತೋಷದಿಂದ ಇದ್ದರೂ ಬೇರೆಯವರು ಅವನನ್ನು ದರಿದ್ರ, ಬಡವ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಅವನಿಗೊಬ್ಬನಿಗೆ ಮಾತ್ರ ತಿಳಿದಿರುತ್ತದೆ.
ಈ ಜಗತ್ತಿನಲ್ಲಿ ನಾನೇ ಅತ್ಯಂತ ಸುಖ, ಸಂತೋಷದ ಮನುಷ್ಯನೆಂದು. ಈ ಸಾಕ್ಷಾತ್ಕಾರದಲ್ಲಿ ಐಹಿಕ ಸಂಪತ್ತಿನ ಐಹಿಕ ಪಾತ್ರವೇನೂ ಇಲ್ಲ. ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯ ಸಂತೋಷದಿಂದ ಬಡತನ ಸ್ವೀಕಾರ ಮಾಡಬಹುದು. ಯಾರು ಕೃಷ್ಣಪ್ರಜ್ಞೆಯಲ್ಲಿ ಇಲ್ಲವೋ ಅವರು ಅತ್ಯಂತ ಶ್ರೀಮಂತರಾಗಿದ್ದರೂ ಒಳಗೊಳಗೇ ಬಹಳ ದುಃಖವನ್ನು ಪಡುತ್ತಿರುತ್ತಾರೆ.
ಯಾರು ಕೃಷ್ಣ ಪ್ರಜ್ಞೆಯಲ್ಲಿ ಇರುತ್ತಾನೋ ಅವರು ಮಾತ್ರ ಯಾವಾಗಲೂ ಸಂತೋಷವಾಗಿರುತ್ತಾನೆ. ಬಡತನ ಅಂದರೆ ಅವನಿಗೇನೂ ಅನ್ನಿಸುವುದಿಲ್ಲ. ಈ ಜೀವನ ಎಷ್ಟು ಆನಂದದಾಯಕವಾದ ಸ್ಥಿತಿಯಾಗಿದೆಯೆಂದರೆ ಯಾವುದೇ ಸಂದರ್ಭ, ಸ್ಥಿತಿಯಾದರೂ ಅದು ಸಂತೋಷದ ಸ್ಥಿತಿಯಾಗಿರುತ್ತದೆ. ಈ ಸಂತೋಷ ಎಷ್ಟೊಂದು ಶ್ರೇಷ್ಠವಾಗಿದೆಯೆಂದರೆ ಇದನ್ನು ಬಿಟ್ಟು ಹೆಚ್ಚಿಗೆ ಬೇರೇನೂ ಕೇಳಲು ಸಾಧ್ಯವಿಲ್ಲ.
ಆಧ್ಯಾತ್ಮಿಕ ಸುಖ ಶಾಶ್ವತವಾದರೆ ಐಹಿಕ ಸುಖ ಅಶಾಶ್ವತವಾಗಿದೆ. ಈ ಕಾರಣದಿಂದ ಯಾರಿಗೆ ನಿಜವಾದ ಆಧ್ಯಾತ್ಮಿಕ ಸುಖ ಬೇಕೋ ಅವರು ಹೆಚ್ಚಿಗೆ ಏನೂ ತಿನ್ನಬಾರದು ಮತ್ತು ಅನಿಯಂತ್ರಿತವಾದ ಕಾಮದಲ್ಲಿ ತೊಡಗಬಾರದು. ಯಾವ ಜೀವ ಈ ಆಧ್ಯಾತ್ಮಿಕ ಸುಖವನ್ನು ಪಡೆಯುತ್ತಾನೋ ಆಗ ಅವನಿಗೆ ಐಹಿಕ ಸುಖದ ಆವಶ್ಯಕತೆಯೇನೂ ಇರುವುದಿಲ್ಲ.
ಐಹಿಕ ಜೀವನವೇ ರೋಗಗ್ರಸ್ತ ಜೀವನ. ಐಹಿಕ ಸಂತೋಷವನ್ನು ಬಯಸುವುದು ಎಂದರೆ ದೀರ್ಘಾವಧಿಯ ಕಾಯಿಲೆಯನ್ನು ಬಯಸಿದಂತೆ. ಅಂದರೆ ಇದರ ಅರ್ಥ ನಾವು ಒಳ್ಳೆಯ ಆರೋಗ್ಯಕ್ಕಿಂತ ಹೆಚ್ಚಾಗಿ ರೋಗದಲ್ಲಿಯೇ ಹೆಚ್ಚಿನ ಸಂತೋಷ ಪಡುತ್ತೇವೆ ಎಂದಾಗುತ್ತದೆ.

ಆಧ್ಯಾತ್ಮಿಕ ಜೀವನವು ಜ್ಞಾನಪೂರ್ಣ ಮತ್ತು ಆನಂದಪೂರ್ಣವಾಗಿದೆ. ಇದು ಸಾವು. ಅಜ್ಞಾನದ ಆಚೆ ಇದೆ. ಆಧ್ಯಾತ್ಮಿಕ ಮನುಷ್ಯ ಪರಮಪ್ರಭುವನ್ನು ಎಲ್ಲ ಕಡೆಗಳಲ್ಲಿಯೂ, ಎಲ್ಲ ಜೀವಿಗಳಲ್ಲೂ ಕಾಣುತ್ತಾನೆ. ಏಕೆಂದರೆ ಅವನು ಕೃಷ್ಣನನ್ನು ಪ್ರೀತಿಸುತ್ತಾನೆ. ಅವನನ್ನು ಎಲ್ಲ ಕಡೆಗಳಲ್ಲಿಯೂ ಕಾಣುತ್ತಾನೆ.
ಪ್ರತಿಯೊಂದು ಜೀವಿಯೂ ಕೃಷ್ಣನಲ್ಲಿ ನೆಲೆಗೊಂಡಿದೆ ಹಾಗೆಯೇ ಕೃಷ್ಣನೂ ಕೂಡ ಸರ್ವ ಜೀವಿಗಳಲ್ಲೂ ನೆಲೆಗೊಂಡಿದ್ದಾನೆ. ಆಧ್ಯಾತ್ಮಿಕ ನೆಲೆಯಲ್ಲಿರುವವರು ಇವನು ಗಂಡು, ಇವಳು ಹೆಣ್ಣು, ಇವು ಪ್ರಾಣಿಗಳು, ಇವರು ಮೂಢರು ಎಂಬ ವ್ಯತ್ಯಾಸವನ್ನು ಕಾಣುವುದಿಲ್ಲ.
ಎಲ್ಲರಲ್ಲಿಯೂ ಆ ಪರಮಪ್ರಭು ಕೃಷ್ಣನನ್ನೇ ಕಾಣುತ್ತಾನೆ. ಕೃಷ್ಣ ಪ್ರಜ್ಞೆ ಇರುವ ಮನುಷ್ಯನು ಯಾವಾಗಲೂ ಮುಸುಕಿನ ಆವರಣದಲ್ಲಿ ಓಡಾಡುವುದಿಲ್ಲ. ಒಬ್ಬ ನಿಪುಣನ ಸ್ಪರ್ಶದಿಂದ ಅವನು ತನ್ನ ಕಲಸವನ್ನು ಮಾಡುತ್ತಾನೆ. ಯಾವಾಗ ಒಬ್ಬನು ಕೃಷ್ಣ ಪ್ರಜ್ಞೆಯಲ್ಲಿ ಪ್ರವೇಶಿಸುತ್ತಾನೋ ಆಗ ಅವನು ಕವಿಯಾಗಿ ಭಗವಂತನ ಮಂತ್ರಗಳನ್ನು ಬರೆದು ಉಚ್ಚರಿಸುತ್ತಾನೆ.
ಇಲ್ಲಿ ನಿಜವಾಗಿಯೂ ಕಲಿಯುತ್ತಿರುವ ಮನುಷ್ಯ ತನ್ನ ಹೆಂಡತಿಯನ್ನು ಬಿಟ್ಟು ಎಲ್ಲ ಸ್ತ್ರೀಯರನ್ನು ತಾಯಂದಿರಂತೆ ಕಾಣುತ್ತಾನೆ ಮತ್ತು ಅದರಂತೆ ನಡೆದುಕೊಳ್ಳುತ್ತಾನೆ. ಅವನು ಬೇರೆ ಜನರ ಸ್ವತ್ತನ್ನು ಕಸವೆಂದು ಭಾವಿಸುತ್ತಾನೆ. ಬೇರೆ ಎಲ್ಲ ಜೀವಿಗಳ ಬಗ್ಗೆ ಅವನಿಗೆ ಅನಿಯಮಿತವಾದ ದಯೆ ಇರುತ್ತದೆ.
ಕೃಷ್ಣನು ಹೇಳುತ್ತಾನೆ -“ಯಾರು ನನ್ನನ್ನು ಎಲ್ಲೆಲ್ಲಿಯೂ ಕಾಣುತ್ತಾನೆಯೋ ಮತ್ತು ನನ್ನಲ್ಲಿ ಎಲ್ಲವನ್ನೂ ಕಾಣುತ್ತಾನೋ ಅವನು ನನ್ನನ್ನು ಯಾವಾಗಲೂ ಕಳೆದುಕೊಳ್ಳುವುದಿಲ್ಲ. ನಾನು ಅವನನ್ನು ಯಾವಾಗಲೂ ಕಳೆದುಕೊಳ್ಳುವುದಿಲ್ಲ” (ಗೀತಾ-6.30) ಕೃಷ್ಣ ಪ್ರಜ್ಞೆಯಲ್ಲಿರುವ ಮನುಷ್ಯ ಪ್ರತಿಯೊಂದು ವಸ್ತುವನ್ನು ಕೃಷ್ಣನಿಗೆ ಸಂಬಂಧಿಸಿದಂತೆಯೇ ಕಾಣುತ್ತಾನೆ.
ನಾವು ಒಂದು ಟೇಪ್ ರೆಕಾರ್ಡ್ರನ್ನು ಇಂದ್ರಿಯ ಸುಖಕ್ಕಾಗಿ ಬಳಿಸಿದಾಗ ಅದು ಐಹಿಕ ವಸ್ತುವಾಗುತ್ತದೆ. ಅದನ್ನೇ ಕೃಷ್ಣನ ಒಂದು ಪ್ರವಚನವನ್ನು ರೆಕಾರ್ಡ್ ಮಾಡಿಕೊಂಡು ಆಲಿಸಿದಾಗ ಅದು ಆಧ್ಯಾತ್ಮಿಕವಾಗುತ್ತದೆ. ಇಲ್ಲಿ ಪ್ರತಿಯೊಂದನ್ನು ಕೃಷ್ಣನಿಗೆ ಸಂಬಂಧಿಸಿದಂತೆ ಕಾಣುವುದು ಮತ್ತು ಅವನಿಗಾಗಿ ಉಪಯೋಗಿಸಿಕೊಳ್ಳುವುದೇ ಮುಖ್ಯವಾಗಿದೆ. ನಾವು ಕೃಷ್ಣನ ಉದ್ದೇಶಗಳಿಗಾಗಿಯೇ ನಮ್ಮ ಹಣವನ್ನು ಉಪಯೋಗಿಸಿದರೆ ಆ ಐಹಿಕ ಸಂಪತ್ತು ಆಧ್ಯಾತ್ಮಿಕ ಸಂಪತ್ತಾಗುತ್ತದೆ.
ಕೃಷ್ಣನು ಹೇಳುವಂತೆ ಯೋಗಿಯಾದವನು ತನ್ನೊಂದಿಗೆ ಪುನರ್ ಸಂಬಂಧವನ್ನು ಸ್ಥಾಪಿಸುತ್ತಾನೆ. “ನಾನು ಅವನ ಕಣ್ಮುಂದಿನಿಂದ ಮರೆಯಾಗುವುದಿಲ್ಲ.” ಯೋಗದ ಪರಿಪೂರ್ಣತೆ ಎಂದರೆ ಎಲ್ಲದರಲ್ಲಿಯೂ ಕೃಷ್ಣನನ್ನು ಕಾಣುವುದು. ಆಧ್ಯಾತ್ಮಿಕ ಮನುಷ್ಯ ಶ್ರೀಕೃಷ್ಣನನ್ನು ಎಲ್ಲ ಕಡೆಗಳಲ್ಲಿಯೂ ಕಂಡರೂ ಕೃಷ್ಣನ ಮೂಲರೂಪವನ್ನು ದೇವಾಲಯಗಳಲ್ಲಿ ಕಂಡು ಪೂಜಿಸುತ್ತಾನೆ.
ಕೃಷ್ಣ, ಎಲ್ಲ ಕಡೆಗಳಲ್ಲಿಯೂ ಇರಬೇಕಾದರೆ ದೇವಾಲಯಕ್ಕೆ ಹೋಗಿ ಅವನನ್ನು ಏಕೆ ಪೂಜಿಸಬೇಕೆಂದು ಅವನು ಯೋಚಿಸುವುದಿಲ್ಲ. ಕೃಷ್ಣ ಎಲ್ಲ ಕಡೆಗಳಲ್ಲಿಯೂ ಇದ್ದಾನೆ ಹಾಗೆಯೇ ಅವನು ದೇವಾಲಯದಲ್ಲಿಯೂ ಇದ್ದಾನೆ. ಇವನು ಬಹಳ ಕರುಣಾಮಯಿ. ಇವನು ನಮಗೆ ಎಲ್ಲ ಕಡೆಗಳಲ್ಲಿಯೂ ತೋರಿಸಿಕೊಳ್ಳಲು ಬಯಸುತ್ತಾನೆ ಹಾಗೆಯೇ ದೇವಾಲಯಗಳಲ್ಲಿಯೂ ನಮ್ಮಿಂದ ಪೂಜೆ ಮಾಡಿಸಿಕೊಳ್ಳಲು ಕೂಡ ಬಯಸುತ್ತಾನೆ.
ನಿಜವಾದ ಯೋಗಿಯು ಕೃಷ್ಣನನ್ನು ಎಲ್ಲೆಲ್ಲಿಯೂ ನೋಡಿದರೂ ಅವನು ಅವನನ್ನು ದೇವಾಲಯದಲ್ಲಿಯೇ ಪೂಜಿಸುತ್ತಾನೆ. ತನ್ನ ಸಂತೋಷವನ್ನು ಎಲ್ಲರಿಗೂ ಹಂಚಿ ಸಂತೋಷಪಡುತ್ತಾನೆ. ಇದೇ ನಿಜವಾದ ಸಾಮಾಜಿಕ ಆಧ್ಯಾತ್ಮಿಕತೆಯ ಅರ್ಥ. ಇದು ಬಹಳಷ್ಟು ಜನರಿಗೆ ಬಹಳ ಲಾಭವನ್ನು ಕೊಡುತ್ತದೆ. ಸ್ವತಃ ಕೃಷ್ಣನೇ ಹೇಳಿದ್ದಾನೆ – ಬೇರೆಯವರಿಗೆ ಯಾರು ಸಹಾಯ ಮಾಡುತ್ತಾರೋ ಅವರು ನನಗೆ ಹತ್ತಿರವಾಗಿದ್ದಾರೆ.”
ಒಬ್ಬ ಮನುಷ್ಯ ಭಗವಂತನ ಸಾಮ್ರಾಜ್ಯವನ್ನು ಪ್ರವೇಶಿಸುವಾಗ ನಾನು ಈ ಐಹಿಕ ಜಗತ್ತಿನಲ್ಲಿ ಅದೆಷ್ಟು ಅಸಂತೋಷವಾಗಿದ್ದೆ ಅಂತ ಅಂದುಕೊಳ್ಳುತ್ತಾನೆ. ಪುನಃ ಅವನು ಹಿಂತಿರುಗಿ ಹೋಗಲು ಬಯಸುವುದಿಲ್ಲ. ಕೃಷ್ಣನ ಬಳಿಗೆ ಹೋಗುವುದೆಂದರೆ ನಾವೇ ಕೃಷ್ಣರಾಗುತ್ತೇವೆ ಎಂದರ್ಥವಲ್ಲ.
ಮಗನು ತನ್ನ ತಂದೆಯ ಮನೆಗೆ ಬಂದಾಗ ಅವನು ತಂದೆಯೇ ಆಗುವುದಿಲ್ಲ. ನಾವು ಕೃಷ್ಣನ ತಂದೆಯೂ ಆಗಬಹುದು ಆದರೂ ಕೃಷ್ಣನಿಗೆ ಸಮಾನರಾಗಲು ಸಾಧ್ಯವಿಲ್ಲ. ಸದಾ ನಾವು ಅವನಿಗೆ ಅಧೀನರಾಗಿಯೇ ಇರುತ್ತೇವೆ.






Leave a Reply