ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ
– ಸಂಗ್ರಹಾನುವಾದ : ಡಾ.ಕೆ. ವೈ. ಬಾಲರಾಜ್, ಆಧಾರ: ಕಾವನಾರು ಕೃಷ್ಣನಲ್ಲದೆ – ಕುಂತಿದೇವಿಯ ಧರ್ಮಬೋಧನೆ ( ಅಪ್ಪಟ ಭಕ್ತಿ)
ನಮಗಿರುವ ಲೌಕಿಕ ಪ್ರೇಮಗಳು, ಆಸೆ ಆಕಾಂಕ್ಷೆಗಳನ್ನು ಪರಮಪ್ರಭುವಿನೆಡೆಗೆ ಹರಿಸಿದಾಗ ಅದು ಶುದ್ಧ ಭಕ್ತಿಸೇವೆಯಾಗುತ್ತದೆ. ನಮ್ಮಲ್ಲಿರುವ ಮಮಕಾರ, ಮಮತೆಗಳ ಕಟ್ಟುಗಳನ್ನು ಕಡಿದು ಹಾಕಬೇಕು ಎಂದ ಮಾತ್ರಕ್ಕೆ ಬೇರೊಬ್ಬರಲ್ಲಿ ವಾತ್ಸಲ್ಯ, ಮಮತೆ, ಕರುಣೆ, ಪ್ರೀತಿಯೆಂಬ ಅಂಶಗಳನ್ನು ಪೂರ್ಣವಾಗಿ ನಿರಾಕರಿಸಬೇಕೆಂದು ಅರ್ಥವಲ್ಲ ಅದು ಸಾಧ್ಯವೂ ಅಲ್ಲ.

ಒಬ್ಬ ಜೀವಿ ಅವನೇನೇ ಆಗಿರಲಿ ಇತರರಲ್ಲಿ ಪ್ರೇಮತೋರುವ ಗುಣವುಳ್ಳವನಾಗಿರಬೇಕು. ಏಕೆಂದರೆ ಬದುಕಿನ ಲಕ್ಷಣಗಳನ್ನು ನಾಶಪಡಿಸಲು ಸಾಧ್ಯವಿಲ್ಲ, ಆದರೆ ಅವುಗಳ ಗುರಿಯನ್ನು ಬದಲಿಸಬೇಕಾಗಿದೆ.
ನಮ್ಮ ಅಪೇಕ್ಷೆಗಳನ್ನು ಇಂದ್ರಿಯ ಕ್ರಿಯೆಗಳನ್ನು ಪ್ರಭುವಿನ ಸೇವೆಯತ್ತ ತಿರುಗಿಸಬೇಕು. ಯಾವುದನ್ನು ಸಾಂಸಾರಿಕ ಮೋಹವೆನ್ನುತ್ತೇವೆಯೋ ಅಂತಹವುಗಳನ್ನು ಪರಮ ಪ್ರಭುವನ್ನು ತೃಪ್ತಿಪಡಿಸಲು ಬಳಸಿದರೆ ಅದನ್ನು ಭಕ್ತಿಸೇವೆಯೆನ್ನುತ್ತೇವೆ. ಸಾಧಾರಣವಾಗಿ ನಮ್ಮ ಗಮನವು ದೈವಿಕವಲ್ಲದ್ದರತ್ತ ಹರಿಯುತ್ತದೆ ಅಥವಾ ಪ್ರಭು ಸಂಕಲ್ಪವಲ್ಲದ ಕಾರ್ಯಕ್ರಮಗಳ ಕಡೆ ಹರಿಯುತ್ತದೆ.
ಅವುಗಳನ್ನು ಪರಮ ಪ್ರಭುಸೇವೆಗೆ ಸಂಬಂಧಿಸಿದಂತೆ ಇ೦ದ್ರಿಯಗಳನ್ನು ಶುದ್ಧೀಕರಿಸಿಕೊಂಡರೆ ಅದು ಅಪ್ಪಟ ಭಕ್ತಿಯಾಗುತ್ತದೆ. ಅದೇ ನಮ್ಮ ಬದುಕಿನ ಅ೦ತಿಮ ಧ್ಯೇಯವಾಗಬೇಕು. ಅರ್ಜುನ ತನ್ನ ವೈಯಕ್ತಿಕ ಬಯಕೆಗಳನ್ನು ತೀರಿಸಿಕೊಳ್ಳಲಿಕ್ಕಾಗಿಯೇ ದೌರ್ಬಲ್ಯಕ್ಕೆ ಒಳಗಾಗಿದ್ದನು. ಯಾವಾಗ ಭಗವಂತನಿಂದ ಗೀತಾ ಸಂದೇಶವನ್ನು ಪಡೆದು ಕಾರ್ಯೋನ್ಮುಖನಾದನೋ ಆಗ ಕೀರ್ತಿವಂತನಾದ, ಪ್ರಭುವಿನ ಪರಮ ಭಕ್ತನಾದ.
ಈ ಲೋಕಸಂಬಂಧಿ ಮೋಹವು ಮಾಯೆಯಿಂದ ಉಂಟಾದ ಮಮತೆ. ಏಕೆಂದರೆ ದೈಹಿಕ ಹಾಗೂ ಮಾನಸಿಕ ಸಂಬಂಧಗಳು ಬಹಿರಂಗ ಶಕ್ತಿಯ ಪ್ರಭಾವದಿಂದ ಉಂಟಾಗಿರುತ್ತವೆ. ಆದರ ಪರಮಾತ್ಮ ಸಂಬಂಧದಿಂದ ಸ್ಥಾಪಿತವಾದ ಆತ್ಮ ಸಂಬಂಧಿ ನಂಟುಗಳಾದರೋ ಅವು ವಾಸ್ತವ ಸಂಬಂಧಗಳು.

ದೇಹಗತ ಸಂಬಂಧವು ಲೌಕಿಕ ಬಂಧನಕ್ಕೆ ಕಾರಣ. ಆತ್ಮಕ್ಕೆ ಸಂಬಂಧಿಸಿದ ನಂಟು ಮುಕ್ತಿಗೆ ಕಾರಣ. ಕತ್ತಲಲ್ಲಿ ನೋಡಿದಂತಲ್ಲ. ಆದರೆ ಹಗಲಿನಲ್ಲಿ ನೋಡುವುದೆಂದರೆ ಸೂರ್ಯನು ಸೇರಿದಂತೆ ಕತ್ತಲಿನಲ್ಲಿ ನೋಡಲಾಗದಿದ್ದ ಎಲ್ಲವನ್ನೂ ನೋಡಿದಂತೆ, ಇದು ಭಕ್ತಿಸೇವೆಯ ಮಾರ್ಗ.
ಮಾನವ ಜನ್ಮವು ಭಗವಂತನೊಂದಿಗೆ ನಮ್ಮ ಸಂಬಂಧವನ್ನು ಪುನಃ ಸ್ಥಾಪಿಸಿಕೊಳ್ಳಲು ಮತ್ತು ಆ ಸಂಬಂಧಾನುಸಾರ ವರ್ತಿಸಲೆಂಬ ಉದ್ದೇಶಕ್ಕಾಗಿಯೇ ಇದೆ. ನಮ್ಮ ಸಾಮಾನ್ಯ ಜೀವನದಲ್ಲಿ ವೈವಾಹಿಕತೆ, ಕುಟುಂಬ, ವ್ಯಾಪಾರ, ಆರ್ಥಿಕತೆ, ಹೆಂಡತಿ-ಮಕ್ಕಳು ಎಲ್ಲದರಲ್ಲಿಯೂ ಸಂಬಂಧಗಳು ಬೆಸೆದುಕೊಂಡಿರಲೇಬೇಕು.
ಹಾಗೆಯೆ ಮಾನವ ಜನ್ಮವೆಂಬುದು ಭಗವಂತನೊಂದಿಗಿನ ನಮ್ಮ ಸಂಬಂಧವನ್ನು ಪುನರ್ ಸ್ಥಾಪಿಸಿಕೊಳ್ಳುವ ಸಲುವಾಗಿಯೇ ಉದ್ದೇಶಿತವಾಗಿದೆ. ಐಹಿಕ ಜಗತ್ತಿನಲ್ಲಿರುವುದೆಂದರೆ ಈ ಸಂಬಂಧಕ್ಕೆ ಬರುವ ಮರೆವು. ಈ ಐಹಿಕ ಜಗತ್ತಿನಲ್ಲಿ ಕೃಷ್ಣ ಪ್ರಜ್ಞೆಯಿಲ್ಲ. ಏಕೆಂದರೆ ಕೃಷ್ಣಪ್ರಜ್ಞೆ ಹುಟ್ಟಿ ಕೃಷ್ಣನನ್ನೇ ಕೇಂದ್ರ ಮಾಡಿಕೊಂಡು ಕಾರ್ಯ ಪ್ರಾರಂಭವಾದೊಡನೆ, ಈ ಜಗತ್ತು ಐಹಿಕವಾಗುವುದಿಲ್ಲ.
ಅದು ಆಧ್ಯಾತ್ಮಿಕವಾಗುತ್ತದೆ. ಈ ಐಹಿಕ ಜಗತ್ತಿನಿಂದ ಹತಾಶರಾದವರು, ದಾರಿಕಾಣದವರು, ಅನೇಕ ಸಂಕಷ್ಟಗಳಿಗೆ ಒಳಗಾದವರು ಈ ಐಹಿಕ ಜಗತ್ತನ್ನು ನಿರಾಕರಿಸುತ್ತಾರೆ.ಅದು ಅವರಿಗೆ ಬೇಡವಾಗುತ್ತದೆ. ಆದರೆ ನಿಜವಾಗಿ ತಮಗೇನು ಬೇಕು ಎಂದು ತಿಳಿಯದೇ ಕೂಡ ಒದ್ದಾಡುತ್ತಾರೆ. ಅವರಿಗೆ ನಿಜವಾಗಿಯೂ ಬೇಕಾಗಿರುವುದು ಭಗವಂತನೊ೦ದಿಗಿನ ನಂಟು.

ಯಾವಾಗ ಕೃಷ್ಣನಿಂದ ಆಕರ್ಷಿತರಾಗುತ್ತಾರೋ ಆಗ ಅವರಿಗೆ ಕೌಟುಂಬಿಕ ಬಾಂಧವ್ಯಗಳಲ್ಲಿನ ಆಸಕ್ತಿ ಉಳಿಯುವುದಿಲ್ಲ. ವಾಸ್ತವವಾಗಿರುವ ಸತ್ಯ ಇದೇ. ಭಕ್ತರಾದ ನಾವು ಕೇವಲ ಕರ್ಮಫಲಗಳಿಗಾಗಲಿ, ಜ್ಞಾನಕ್ಕಾಗಿಯಾಗಲಿ ಆಸೆ, ಮೋಹ ಪಡಬಾರದು. ನಮ್ಮ ಆಸೆ ವ್ಯಾಮೋಹಗಳು ಕೃಷ್ಣನೆಡೆಗೆ ತಿರುಗಿದಾಗ ಅವು ಪರಿತ್ಯಾಗದ ಸ್ಥಿರತೆಯಾಗುತ್ತವೆ.
ಕೃಷ್ಣಪ್ರಜ್ಞೆಯೊಡನೆ ಈ ಐಹಿಕ ಜಗತ್ತಿನಲ್ಲಿದ್ದರೂ ಅದು ಆಧ್ಯಾತ್ಮಿಕ ಲೋಕವೆನಿಸುತ್ತದೆ. ಕೇವಲ ಪ್ರಾಪಂಚಿಕ ವಸ್ತುಗಳನ್ನು ತ್ಯಜಿಸುವುದರಿಂದಲೇ ವೈರಾಗ್ಯ ಉಂಟಾಗುವುದಿಲ್ಲ. ಕೃಷ್ಣನಲ್ಲಿ ಒಲವು ಬೆಳೆಸಿಕೊಂಡಾಗ ಮಾತ್ರ ಭಕ್ತನ ಜೀವನ ಪರಿಶುದ್ಧ ಭಕ್ತಿ ಸೇವೆಯ ಜೀವನವಾಗುತ್ತದೆ. ಯಾವಾಗ ನಮ್ಮ ಮನಸ್ಸನ್ನು ಕೃಷ್ಣನಲ್ಲಿ ನೆಡುತ್ತೇವೆಯೋ ಆಗ ಉಳಿದೆಲ್ಲ ನೀತಿನಿಯಮಗಳನ್ನು ಪಾಲಿಸುವ ಸಾಮರ್ಥ್ಯವು ತಾನಾಗಿಯೇ ಬರುತ್ತದೆ.
ಆದುದರಿಂದ ಪ್ರಾರಂಭದಿಂದಲೇ ಕೃಷ್ಣನ ಪಾದಕಮಲದಲ್ಲಿ ಚಿತ್ತವನ್ನು ನೆಲೆಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸಬೇಕು. ಕೃಷ್ಣನ ಕರುಣೆಯಿಂದ ಭಕ್ತಿಸೇವೆಯ ಸಾಧನೆ ಖಂಡಿತವಾಗಿಯೂ ಪೂರೈಸುತ್ತದೆ.






Leave a Reply