ಪರೋಟ, ಪೂರಿ, ರೊಟ್ಟಿಗಳು

ಪರಾಠವು ಪರಾಟ್‌ ಮತ್ತು ಅಟ್ಟ ಎಂಬ ಶಬ್ದಗಳ ಸಂಯೋಜನೆ. ಅಕ್ಷರಶಃ ಅದರ ಅರ್ಥ ಬೇಯಿಸಿದ ಹಿಟ್ಟಿನ ಪದರುಗಳು. ಪಂಜಾಬ್‌ ಪ್ರದೇಶದಲ್ಲಿ ಅದನ್ನು ಪರೋಟೆ ಎಂದು ಕರೆಯುತ್ತಾರೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿಯೂ ತಮ್ಮದೇ ಆದ ಪರಾಠದ ವೈವಿಧ್ಯಗಳಿವೆ. ಇವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಕೇರಳ ಪೊರೊಟ್ಟ. ಅದನ್ನು ಬಹುತೇಕ ಗೋಧಿಹಿಟ್ಟಿನ ಬದಲು ಮೈದಾಹಿಟ್ಟಿನಲ್ಲಿ ಮಾಡುತ್ತಾರೆ.

ಪರಾಠವನ್ನು (ಅದರಲ್ಲೂ ವಿಶೇಷವಾಗಿ ಹೂರಣ ತುಂಬಿದ್ದು) ಮೇಲೆ ಒಂದು ಪದರು ಬೆಣ್ಣೆಯನ್ನು ಹಚ್ಚಿ, ಚಟ್ನಿ, ಉಪ್ಪಿನಕಾಯಿ, ಮೊಸರು ಅಥವಾ ಗೊಜ್ಜುಗಳೊಡನೆ ತಿನ್ನಬಹುದು. ಪರಾಠವು ವೃತ್ತಾಕಾರವಾಗಿ, ಸಪ್ತಭುಜಾಕಾರವಾಗಿ, ಚೌಕವಾಗಿ ಅಥವಾ ತ್ರಿಭುಜಾಕಾರವಾಗಿ ಇರಬಹುದು.

ಇಲ್ಲಿ ವಿವರಿಸಿರುವ ಪರೋಟ, ಪೂರಿ, ರೊಟ್ಟಿಗಳು ಈ ಎಲ್ಲವನ್ನು ಶ್ರದ್ಧೆಯಿಂದ ತಯಾರು ಮಾಡಿ, ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಪದರ ಪದರ ಪರೋಟ

ಬೇಕಾಗುವ ಪದಾರ್ಥಗಳು :

ಗೋಧಿಹಿಟ್ಟು – 2 ಲೋಟ

ಮೈದಾ – 2 ಚಮಚ

ಅಚ್ಚಮೆಣಸಿನಕಾಯಿ ಪುಡಿ – 1 ಚಮಚ

ತೆಂಗಿನತುರಿ – 2 ಚಮಚ

ಜೀರಿಗೆ – 1/2 ಚಮಚ

ಓಮ – 1/2 ಚಮಚ

ತುಪ್ಪ – 2 ಚಮಚ

ಎಣ್ಣೆ – 1/2 ಲೋಟ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಗೋಧಿಹಿಟ್ಟಿಗೆ ಉಪ್ಪು, ಅಚ್ಚಮೆಣಸಿನಕಾಯಿಪುಡಿ, ಜೀರಿಗೆ, ಓಮ ಸೇರಿಸಿ ನೀರು ಚಿಮುಕಿಸುತ್ತಾ ಮೃದುವಾದ ಚಪಾತಿ ಹಿಟ್ಟು ಕಲೆಸಿಡಿ. ಈ ಹಿಟ್ಟನ್ನು ಒಂದು ಗಂಟೆಕಾಲ ನೆನೆಯಲು ಬಿಡಿ. ಅನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಚಪಾತಿ ಲಟ್ಟಿಸಿ, ಇದರ ಎರಡೂ ಬದಿಗೆ ತುಪ್ಪ ಸವರಿಕೊಂಡು ಒಂದು ಕಡೆಗೆ ಮೈದಾ ಉದುರಿಸಿ ಅದರ ಮೇಲೆ ತೆಂಗಿನತುರಿ ಹರಡಿ ಮಡಿಚಿ ಮತ್ತೆ ಲಟ್ಟಿಸಿ. ಕಾದ ಕಾವಲಿಯ ಮೇಲೆ ಇದನ್ನು ಹಾಕಿ ಎಣ್ಣೆ ಹಾಕುತ್ತಾ ಎರಡೂ ಕಡೆ ಬೇಯಿಸಿ. ಪದರ ಪದರವಾದ ಸ್ವಾದಿಷ್ಟ ಪರೋಟ ಸಿದ್ಧ.

ಪುದೀನಾ ಪರೋಟ

ಬೇಕಾಗುವ ಪದಾರ್ಥಗಳು :

ಗೋಧಿಹಿಟ್ಟು – 2 ಲೋಟ

ಪುದೀನಾ – 1 ಕಟ್ಟು

ಹಸಿಮೆಣಸಿನಕಾಯಿ, ಶುಂಠಿ ಪೇಸ್ಟ್‌ – 2 ಚಮಚ

ತುಪ್ಪ – 2 ಚಮಚ

ಎಣ್ಣೆ – 1/2 ಲೋಟ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಪುದೀನಾ ಎಲೆಗಳನ್ನು ಸಣ್ಣದಾಗಿ ಹೆಚ್ಚಿಡಿ. ಒಂದು ಬೇಸನ್ನಿಗೆ ಮುಕ್ಕಾಲು ಭಾಗ ಗೋಧಿಹಿಟ್ಟು, ಹೆಚ್ಚಿದ ಪುದೀನಾ, ಶುಂಠಿ, ಮೆಣಸಿನಕಾಯಿ ಪೇಸ್ಟ್‌ ಉಪ್ಪು ಸೇರಿಸಿ ಅಗತ್ಯಕ್ಕೆ ತಕ್ಕಂತೆ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಡಿ. ಇದಕ್ಕೆ ತುಪ್ಪ ಸೇರಿಸಿ ನಾದಿಕೊಂಡು ಒಂದು ಗಂಟೆ ಕಾಲ ನೆನೆಯಲು ಇಡಿ. ಸಣ್ಣ ಉಂಡೆ ಮಾಡಿ ಲಟ್ಟಿಸಿಕೊಂಡು ಬಿಸಿಕಾವಲಿಗೆ ಹಾಕಿ ಎರಡು ಕಡೆ ಎಣ್ಣೆ ಹಾಕುತ್ತಾ ಪರೋಟ ತಯಾರಿಸಿ. ಅನಂತರ ಇದರ ಮೇಲೆ ಹೆಚ್ಚಿದ ಪುದಿನಾ ಉದುರಿಸಿ, ಸಲಾಡ್‌ ಜೊತೆ ಸವಿಯಲು ಕೊಡಿ.

ಮಿಶ್ರ ತರಕಾರಿ ರೋಟ್ಲಾ

ಬೇಕಾಗುವ ಪದಾರ್ಥಗಳು :

ಮೈದಾ – 2 ಲೋಟ

ಕ್ಯಾರೆಟ್‌ – 2

ಆಲೂಗಡ್ಡೆ -1

ಕುಂಬಳಕಾಯಿ – 100 ಗ್ರಾಂ

ಶುಂಠಿ – 1 ತುಂಡು

ಹಸಿಮೆಣಸಿನಕಾಯಿ – 5

ಹಸಿ ತೆಂಗಿನತುರಿ – 1/4 ಗಿಟುಕು

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಗರಂ ಮಸಾಲ – 3/4 ಚಮಚ

ಧನಿಯಾಪುಡಿ – 1 ಚಮಚ

ಅಚ್ಚಮೆಣಸಿನಕಾಯಿ ಪುಡಿ – 1 ಚಮಚ

ನಿಂಬೆಹಣ್ಣು – 1

ಎಣ್ಣೆ – 3/4 ಲೋಟ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಕ್ಯಾರೆಟ್‌, ಆಲೂಗಡ್ಡೆ, ಕುಂಬಳಕಾಯಿಯ ಸಿಪ್ಪೆ ತೆಗೆದು ಹೆಚ್ಚಿಕೊಂಡು ಬೇಯಿಸಬೇಕು. ಆರಿದ ಅನಂತರ ಇದನ್ನು ಚೆನ್ನಾಗಿ ಮಸೆದುಕೊಳ್ಳಿ, ಒಂದು ಬೇಸನ್ನಿಗೆ ಮೈದಾ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಸೇರಿಸಿ ಕಲೆಸಿಕೊಳ್ಳಿ.

ಮೆಣಸಿನಕಾಯಿ, ಕೊತ್ತಂಬರಿಸೊಪ್ಪು ಹೆಚ್ಚಿಕೊಂಡು ತೆಂಗಿನಕಾಯಿಯನ್ನು ತುರಿದು ಮಸೆದ ತರಕಾರಿಯೊಂದಿಗೆ ಸೇರಿಸಿ. ಅನಂತರ ಇದಕ್ಕೆ ಉಪ್ಪು, ಧನಿಯ, ಅಚ್ಚಮೆಣಸಿನಕಾಯಿಪುಡಿ, ಗರಂಮಸಾಲ, ನಿಂಬೆರಸ ಹಿಂಡಿಕೊಂಡು ಚೆನ್ನಾಗಿ ಬೆರೆಸಿಕೊಳ್ಳಿ.

ಮೈದಾಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಎರಡು ತೆಳು ಚಪಾತಿ ಲಟ್ಟಿಸಿ, ಒಂದು ಹಿಟ್ಟಿನ ಪದರದ ಮೇಲೆ ನಾಲ್ಕು ಚಮಚ ಮಸೆದ ಪದಾರ್ಥ ಹರಡಿ. ಅದರ ಮೇಲೆ ಇನ್ನೊಂದು ಹಿಟ್ಟಿನ ಪದರ ಹೊದಿಸಿ ಮೇಲೆ ಸ್ವಲ್ಪ ಮೈದಾ ಉದುರಿಸಿ ಮತ್ತೆ ಲಟ್ಟಿಸಿ ಒಂದು ರೋಟ್ಲಾ ಮಾಡಿಕೊಳ್ಳಿ. ಕಾವಲಿಯ ಮೇಲೆ ಈ ರೋಟ್ಲಾ ಹಾಕಿ ಎರಡು ಬದಿಗೂ ಎಣ್ಣೆ ಸವರಿ ಹದವಾಗಿ ಬೇಯಿಸಬೇಕು. ಬಿಸಿ ಇರುವಾಗಲೆ ಈ ರೋಟ್ಲಾವನ್ನು ಬೆಣ್ಣೆಯೊಂದಿಗೆ ಸವಿಯಿರಿ.

ಮೆಕ್ಕೆ ರೊಟ್ಟಿ

ಬೇಕಾಗುವ ಪದಾರ್ಥಗಳು :

ಮೆಕ್ಕೆಜೋಳದ ಹಿಟ್ಟು – 2 ಲೋಟ

ಅಚ್ಚಮೆಣಸಿನಕಾಯಿ ಪುಡಿ – 1 ಚಮಚ

ಉಗುರು ಬೆಚ್ಚನೆಯ ನೀರು – 1 ಲೋಟ

ಎಣ್ಣೆ – 3/4 ಲೋಟ

ಉಪ್ಪು – ರುಚಿಗೆ ತಕ್ಕಷ್ಟು

ಮೆಕ್ಕೆಜೋಳದ ಹಿಟ್ಟಿಗೆ ಉಪ್ಪು, ಖಾರ, ಉಗುರುಬೆಚ್ಚಗಿನ ನೀರು ಬೆರೆಸಿ ಚಪಾತಿ ಹಿಟ್ಟಿನಂತೆ ಕಲೆಸಿಡಿ. ನೆನೆಯಲು ಬಿಡುವ ಅಗತ್ಯವಿಲ್ಲ. ತತ್‌ಕ್ಷಣ ಉಂಡೆಕಟ್ಟಿ ಲಟ್ಟಿಸಿ. ಒದ್ದೆ ಕೈಯಿಂದ ರೊಟ್ಟಿಯ ಅಂಚನ್ನು ಹಿಡಿದು ತೆಗೆದು ಕಾದ ಕಾವಲಿಗೆ ಹಾಕಿ ಎರಡು ಕಡೆ ಎಣ್ಣೆ ಹಾಕಿ ಬೇಯಿಸಿ. ಇದನ್ನು ಬಿಸಿ ಇರುವಾಗಲೇ ಪಾಲಕ್‌ಸೊಪ್ಪಿನ ಗ್ರೇವಿ ಅಥವಾ ಬೆಣ್ಣೆ -ಬೆಲ್ಲದ ಮಿಶ್ರಣದೊಂದಿಗೆ ಸವಿಯಲು ಕೊಡಿ.

ಈ ಲೇಖನ ಶೇರ್ ಮಾಡಿ