ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರು
ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ ಒಂದು ಉಪನ್ಯಾಸ.
ಪರಮಸತ್ಯದ ಅನ್ವೇಷಣೆಯಲ್ಲಿ ತರ್ಕ ಮತ್ತು ವಿವೇಚನೆ ಪ್ರಯೋಜನಕಾರಿ. ಆದರೆ ಅವಷ್ಟೇ ಸಾಲುವುದಿಲ್ಲ. ಪರಿಪೂರ್ಣ ಜ್ಞಾನವನ್ನು ಪಡೆಯಲು ನಾವು ಮಾನವರಿಗಿರುವ ಮೂಲಭೂತ ನಾಲ್ಕು ದೋಷಗಳನ್ನು ಮೀರಬೇಕು.
ಮಹನೀಯರೆ ಮತ್ತು ಮಹಿಳೆಯರೆ,
ಇಲ್ಲಿಗೆ ಆಗಮಿಸಿ ಈ ಮಹಾ ಆಂದೋಲನದಲ್ಲಿ ಭಾಗವಹಿಸುತ್ತಿರುವುದಕ್ಕೆ ನಿಮಗೆಲ್ಲ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು. ನಾನು ಭಗವದ್ಗೀತೆಯಲ್ಲಿ ಕೃಷ್ಣ ಮತ್ತು ಅರ್ಜುನರ ನಡುವೆ ಚರ್ಚಿತವಾದ ಸಂಗತಿಗಳನ್ನು ನಿರೂಪಿಸುವೆ.
ನಿಮ್ಮಲ್ಲಿ ಬಹುಪಾಲು ಜನರಿಗೆ ಭಗವದ್ಗೀತೆ ಗೊತ್ತಿದೆಯೆಂದು ಭಾವಿಸುತ್ತೇನೆ. ಅದು ಸುಮಾರು ಐದು ಸಾವಿರ ವರ್ಷಗಳ ಹಿಂದೆ ಕುರುಕ್ಷೇತ್ರದ ರಣರಂಗದಲ್ಲಿ ಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂವಾದ. ದೇವೋತ್ತಮ ಪರಮ ಪುರುಷನಾದ ಕೃಷ್ಣನು ಅರ್ಜುನನ ರಥದ ಸಾರಥಿಯಾಗಿದ್ದ. ಅರ್ಜುನನ ಸ್ನೇಹಿತನಾಗಿದ್ದ ಅವನು ಒಬ್ಬ ಸಾಧಾರಣ ಮನುಷ್ಯನಂತೆ ವರ್ತಿಸುತ್ತಿದ್ದ. ಅರ್ಜುನನ ಮನಸ್ಸು ಕದಡಿತ್ತು. ಏಕೆಂದರೆ ಅವನ ಜ್ಞಾತಿಗಳ ಎರಡು ಪಕ್ಷಗಳ ನಡುವೆ ಯುದ್ಧ ಏರ್ಪಾಟಾಗಿತ್ತು. ಎದುರು ಪಕ್ಷದಲ್ಲಿ ತನ್ನೆಲ್ಲ ಬಂಧುಗಳು ಮತ್ತು ಕುಟುಂಬದ ಸದಸ್ಯರನ್ನು ಕಂಡಾಗ ಅವನು ಕಾದಾಡಲು ಹಿಂಜರಿದ.

ಯುದ್ಧ ಮಾಡಬೇಕೇ ಅಥವಾ ಬೇಡವೇ ಎಂದು ಬಹುವಾಗಿ ಗೊಂದಲಕ್ಕೊಳಗಾದ ಅರ್ಜುನನು ಕೃಷ್ಣನನ್ನು ತನ್ನ ಗುರುವಾಗಿ ಸ್ವೀಕರಿಸಿದ. (ಶಿಷ್ಯಃ ತೇಽಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್) ಅರ್ಜುನ ಹೇಳಿದ: “ನನ್ನ ಪ್ರೀತಿಯ ಕೃಷ್ಣ, ಈಗಷ್ಟೇ ನಾವು ಸ್ನೇಹಿತರಂತೆ ಮಾತನಾಡುತ್ತಿದ್ದೇವೆ. ಆದರೆ ಇದು ನಾನು ನಿರ್ಧಾರ ತೆಗೆದುಕೊಳ್ಳಬೇಕಾದ ಅತ್ಯಂತ ಮುಖ್ಯವಾದ ಸಂಗತಿ. ಆದ್ದರಿಂದ ನಾನು ಈಗ ನಿನ್ನನ್ನು ಗುರುವೆಂದು ಸ್ವೀಕರಿಸುತ್ತೇನೆ. ದಯವಿಟ್ಟು ನನಗೆ ಸರಿಯಾದ ಬೋಧನೆಯನ್ನು ನೀಡು.”
ಇಡೀ ಭಗವದ್ಗೀತೆಯು ಕೇವಲ ಕೃಷ್ಣ ಮತ್ತು ಅರ್ಜುನರ ನಡುವಣ ಸಂಭಾಷಣೆ. ಅರ್ಜುನ ತೀರ್ಮಾನಿಸಿದ, “ಎದುರು ಪಕ್ಷದಲ್ಲಿರುವ ನನ್ನ ಬಂಧುಗಳೊಡನೆ ಯುದ್ಧ ಮಾಡಬೇಕೆನ್ನುವುದು ನನಗೆ ಮನವರಿಕೆ ಆಗುವವರೆಗೂ ನಾನು ಅವರೊಡನೆ ಯುದ್ಧ ಮಾಡುವುದಿಲ್ಲ.” ಆ ಸಮಯದಲ್ಲಿ ಅವನು ತನ್ನ ಬಿಲ್ಲು ಬಾಣಗಳನ್ನು ನೆಲದ ಮೇಲೆ ಹಾಕಿದ. “ನನ್ನ ಪ್ರೀತಿಯ ಕೃಷ್ಣ, ನಾನು ಯುದ್ಧ ಮಾಡುವುದಿಲ್ಲ” ಎಂದು ಹೇಳಿ ಅವನು ಮೌನವಾದ.
ಅನಂತರ ಭಗವದ್ಗೀತೆಯಲ್ಲಿ (2.10) ಹೇಳಿದಂತೆ,
ತಮ್ ಉವಾಚ ಹೃಷೀಕೇಶ ಪ್ರಹಸನ್ನಿವ ಭಾರತ ।
ಸೇನಯೋಃ ಉಭಯೋಃ ಮಧ್ಯೇ ವಿಷೀದಂತಮ್ ಇದಂ ವಚಃ ॥
ಕೃಷ್ಣನು ನಸುನಗುತ್ತಾ ಯೋಚಿಸುತ್ತಿದ್ದಾನೆ, “ಇಷ್ಟೊಂದು ಮಹಾನ್ ಎನಿಸಿರುವ ನನ್ನ ಸ್ನೇಹಿತ ಅರ್ಜುನನು ಈ ತಾತ್ಕಾಲಿಕ ಮೋಹಕ್ಕೆ ಹೇಗೆ ಒಳಗಾಗಿದ್ದಾನೆ? ಅವನ ಕರ್ತವ್ಯ ಯುದ್ಧ ಮಾಡುವುದು. ಎದುರು ಪಕ್ಷವು ಯುದ್ಧ ಮಾಡಲು ಸನ್ನದ್ಧವಾಗಿದೆ. ಆದರೆ ನನ್ನ ಸ್ನೇಹಿತ ಅರ್ಜುನನು ಯುದ್ಧಮಾಡಲು ನಿರಾಕರಿಸುತ್ತಿದ್ದಾನೆ.” ಆದ್ದರಿಂದ ಕೃಷ್ಣನಿಗೆ ಸ್ವಲ್ಪ ಮಟ್ಟಿಗೆ ಆಶ್ಚರ್ಯವೇ ಆಯಿತು. ಆದ್ದರಿಂದ ಭಗವದ್ಗೀತೆ ಹೇಳುತ್ತದೆ, ಪ್ರಹಸನ್ನಿವ: “ಅವನು ನಸುನಗುತ್ತಿದ್ದ.” ಅರ್ಜುನನಂತಹ ಮಹಾನ್ ವ್ಯಕ್ತಿಯನ್ನೂ ಕೆಲವು ಸಲ ಮಾಯೆಯು ಹೇಗೆ ಆವರಿಸಿಬಿಡುತ್ತದೆ ಎಂಬುದು ಎಷ್ಟು ಆಶ್ಚರ್ಯಕರ ಎಂದು ಯೋಚಿಸುತ್ತಾ ಕೃಷ್ಣನು ನಸುನಗುತ್ತಿದ್ದ.
ಅನಂತರ ಮುಂದಿನ ಶ್ಲೋಕವು ಹೀಗೆ ಪ್ರಾರಂಭವಾಗುತ್ತದೆ: ಶ್ರೀಭಗವಾನ್ ಉವಾಚ: “ದೇವೋತ್ತಮ ಪರಮಪುರುಷನು ಹೇಳಿದನು.” ಭಗ ಎಂದರೆ “ಐಶ್ವರ್ಯ” ವಾನ್ ಎಂದರೆ “ಹೊಂದಿರುವವನು.” ಆರು ಬಗೆಯ ಐಶ್ವರ್ಯಗಳಿವೆ. ಮೊದಲನೆಯದು ಸಂಪತ್ತು. ಒಬ್ಬನು ಬಹಳ ಶ್ರೀಮಂತನಾಗಿದ್ದರೆ ಅವನನ್ನು ಐಶ್ವರ್ಯವಂತ ಎಂದು ಕರೆಯುತ್ತಾರೆ ಅಥವಾ ಒಬ್ಬನು ಬಹಳ ಬಲಶಾಲಿಯಾಗಿದ್ದರೂ ಅವನನ್ನು ಐಶ್ವರ್ಯವಂತ ಎಂದು ಕರೆಯುತ್ತಾರೆ. ಅಥವಾ ಒಬ್ಬನು ಬಹಳ ಬುದ್ಧಿವಂತನಾಗಿದ್ದರೂ, ಸುಂದರನಾಗಿದ್ದರೂ, ಪ್ರಖ್ಯಾತನಾಗಿದ್ದರೂ ಅಥವಾ ವಿರಾಗಿಯಾಗಿದ್ದರೂ ಅವನನ್ನು ಐಶ್ವರ್ಯವಂತ ಎಂದು ಕರೆಯುತ್ತಾರೆ. ಈ ಎಲ್ಲ ಆರು ಬಗೆಯ ಐಶ್ವರ್ಯಗಳು ಸಂಪೂರ್ಣವಾಗಿ ಒಬ್ಬನ ಸುಪರ್ದಿನಲ್ಲಿದ್ದರೆ ಅವನನ್ನು ಭಗವಾನ್ ಎಂದು ಕರೆಯುತ್ತಾರೆ. ಅವನೇ ದೇವರು.

ನಮ್ಮಲ್ಲೂ ಕೂಡ ಕೆಲವು ಐಶ್ವರ್ಯಗಳಿವೆ. ನಮ್ಮಲ್ಲಿ ಕೆಲವು ಸಂಪತ್ತುಗಳಿವೆ. ಆದರೆ ಸಕಲೈಶ್ವರ್ಯಗಳೂ ತನ್ನಲ್ಲಿವೆ ಎಂದು ಯಾರೂ ಹೆಗ್ಗಳಿಕೆ ಹೇಳಿಕೊಳ್ಳಲಾಗುವುದಿಲ್ಲ. ಆದರೆ ದೇವರು ಹಾಗೆ ಹೇಳಿಕೊಳ್ಳಬಹುದು. ವೈದಿಕ ಸಾಹಿತ್ಯದಲ್ಲಿ ಪರಾಶರ ಮುನಿ ದೇವರನ್ನು ಕುರಿತು ಒಂದು ವ್ಯಾಖ್ಯೆಯನ್ನು ಕೊಟ್ಟಿದ್ದಾರೆ:
ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಃ ಶ್ರಿಯಃ ।
ಜ್ಞಾನ ವೈರಾಗ್ಯಯೋಃ ಚೈವ ಷಣ್ಣಾಂ ಭಗ ಇತೀಙ್ಗಣಾ ॥
ಯಾರು ಭಗವಾನ್, ಯಾರು ದೇವರು ಎಂದು ಯಾರಾದರೂ ಕೇಳಿದರೆ ಈ ಶ್ಲೋಕವು ಅದಕ್ಕೆ ಉತ್ತರ ಕೊಡುತ್ತದೆ: ಸಮಸ್ತ ಐಶ್ವರ್ಯವನ್ನೂ, ಸಮಸ್ತ ಶಕ್ತಿಯನ್ನೂ, ಸಮಸ್ತ ಕೀರ್ತಿಯನ್ನೂ, ಸಮಸ್ತ ಸೌಂದರ್ಯವನ್ನೂ, ಸಮಸ್ತ ಜ್ಞಾನವನ್ನೂ ಮತ್ತು ಸಮಸ್ತ ವೈರಾಗ್ಯವನ್ನೂ ಹೊಂದಿದವನೇ ದೇವರು. ಇಂದಿನ ದಿನಗಳಲ್ಲಿ ಅನೇಕ “ಭಗವಾನರು” ಮತ್ತು “ದೇವರು” ಕಂಡು ಬರುತ್ತಿರುವುದೇ ಒಂದು ರೂಢಿಯಾಗಿದೆ. ಆದರೆ ನಾವು ಯಾರನ್ನು ಭಗವಂತನೆಂದು ಅಂಗೀಕರಿಸಬೇಕು ಎಂದು ಪರೀಕ್ಷಿಸಲು ಇಲ್ಲೊಂದು ವ್ಯಾಖ್ಯೆ ಇದೆ.
ಆದ್ದರಿಂದ ಕೃಷ್ಣನು ಉಪಸ್ಥಿತನಾಗಿದ್ದಾಗ ಅವನು ದಿಟವಾಗಿಯೂ ತನ್ನ ಚಟುವಟಿಕೆಗಳ ಮೂಲಕ ತಾನು ದೇವೋತ್ತಮ ಪರಮಪುರುಷ ಎಂದು ತೋರಿಸಿದ್ದಾನೆ. ಉದಾಹರಣೆಗೆ, ಇದು ನಂಬಲಸಾಧ್ಯವಾಗಿರಬಹುದು, ಆದರೆ ಇತಿಹಾಸದಿಂದ ನಮಗೆ ತಿಳಿದುಬರುವುದೇನೆಂದರೆ ಕೃಷ್ಣನು 16,108 ಪತ್ನಿಯರನ್ನು ವಿವಾಹವಾಗಿದ್ದ. ಒಬ್ಬಳು ಪತ್ನಿಯ ಯೋಗಕ್ಷೇಮ ನೋಡಿಕೊಳ್ಳುವುದೂ ನಮಗೆ ದುಸ್ತರ. ಹೀಗಿರುವಾಗ ಅವನು 16,108 ಪತ್ನಿಯರನ್ನು ಪಾಲಿಸುತ್ತಿದ್ದ. ಪ್ರತಿಯೊಬ್ಬ ಪತ್ನಿಗೂ ಒಂದು ಭವ್ಯವಾದ ಅರಮನೆಯಿತ್ತು. ಶ್ರೀಮದ್ಭಾಗವತದಲ್ಲಿ ಕಂಡುಬರುವ ವರ್ಣನೆ ಇದು. ಅಂದರೆ ಐಶ್ವರ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ತನ್ನ ಐಶ್ವರ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ ಎಂದು ಕೃಷ್ಣ ತೋರಿಸಿದ್ದಾನೆ ಎಂದು ಅರ್ಥವಾಗುತ್ತದೆ. ಜಗತ್ತಿನ ಸಮಸ್ತ ಇತಿಹಾಸದಲ್ಲಿಯೇ ಹದಿನಾರು ಸಾವಿರಕ್ಕಿಂತ ಹೆಚ್ಚಿನ ಪತ್ನಿಯರನ್ನು ಪಾಲಿಸುತ್ತಿದ್ದ, ಅವರಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ಅರಮನೆಯನ್ನು ಕಟ್ಟಿಕೊಟ್ಟ ಇನ್ನೊಬ್ಬ ವ್ಯಕ್ತಿ ನಮಗೆ ಕಂಡುಬರುವುದಿಲ್ಲ. ಆದರೆ ವೈದಿಕ ಸಾಹಿತ್ಯದಲ್ಲಿ ಕೃಷ್ಣನನ್ನು ಹೀಗೆ ವರ್ಣಿಸಲಾಗಿದೆ.

ಆದ್ದರಿಂದ ವೈದಿಕ ಜ್ಞಾನವಿರುವ ಎಲ್ಲ ಆಚಾರ್ಯರು ಕೃಷ್ಣನನ್ನು ದೇವೋತ್ತಮ ಪರಮ ಪುರುಷ ಎಂದು ಒಪ್ಪಿಕೊಂಡಿದ್ದಾರೆ. ಪ್ರಾಚೀನ ಕಾಲದಲ್ಲಿ, ಕೃಷ್ಣನ ಕಾಲದಲ್ಲಿ, ವೇದವ್ಯಾಸ ಮತ್ತು ನಾರದರಂತಹ ಆಚಾರ್ಯರು ಕೃಷ್ಣನನ್ನು ದೇವೋತ್ತಮ ಪರಮ ಪುರುಷ ಎಂದು ಅಂಗೀಕರಿಸಿದ್ದಾರೆ. ಭಗವದ್ಗೀತೆಯ ಹತ್ತನೆಯ ಅಧ್ಯಾಯದಲ್ಲಿ (10.12), ಕೃಷ್ಣನು ಯಾರು ಎಂದು ಅರ್ಥಮಾಡಿಕೊಂಡ ಮೇಲೆ ಅರ್ಜುನನು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ: ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ । ಪುರುಷಂ ಶಾಶ್ವತಂ ದಿವ್ಯಮ್ ಅರ್ಜುನನು ಕೃಷ್ಣನನ್ನು ಸರ್ವೋಚ್ಚವಾದ ಪರಮಸತ್ಯ, ಪರಮಧಾಮ, ಪವಿತ್ರನಾದವನು, ನಿತ್ಯನು ಮತ್ತು ಆದಿಪುರುಷ ಎಂದು ಅಂಗೀಕರಿಸುತ್ತಾನೆ. ಅನಂತರ ಅರ್ಜುನ ಹೇಳುತ್ತಾನೆ, “ನಾನು ನಿನ್ನ ಸ್ನೇಹಿತನಾಗಿರುವುದರಿಂದ ನಿನ್ನನ್ನು ದೇವೋತ್ತಮ ಪರಮ ಪುರುಷ ಎಂದು ಅಂಗೀಕರಿಸಿದ್ದೇನೆಂದು ಯಾರಾದರೂ ಹೇಳಬಹುದು. ಆದರೆ ನಾನು ಆ ರೀತಿಯಲ್ಲಿ ನಿನ್ನನ್ನು ಅಂಗೀಕರಿಸಿಲ್ಲ. ಪರಾಶರ ಮುನಿ, ವ್ಯಾಸದೇವ, ಅಸಿತ, ನಾರದ ಮತ್ತು ದೇವಲ ಅಂತಹ ಮಹಾನ್ ಆಚಾರ್ಯರೆಲ್ಲ ನಿನ್ನನ್ನು ದೇವೋತ್ತಮ ಪರಮ ಪುರುಷ ಎಂದು ಒಪ್ಪಿಕೊಂಡಿದ್ದಾರೆ.” ಈ ರೀತಿಯಲ್ಲಿ ಅರ್ಜುನನು ತನ್ನ ನಿರ್ಣಯಕ್ಕೆ ಸಾಕ್ಷ್ಯಾಧಾರಗಳನ್ನು ಕೊಟ್ಟಿದ್ದಾನೆ.

ವೈದಿಕ ಸಾಹಿತ್ಯದ ಪಾಲಿಗೆ ಮತ್ತು ಆಚಾರ್ಯರ ಪಾಲಿಗೆ ಕೃಷ್ಣನೇ ದೇವೋತ್ತಮ ಪರಮ ಪುರುಷ. ಇತ್ತೀಚೆಗೆ – ಅಂದರೆ ಕಳೆದ ಎರಡು ಸಾವಿರ ವರ್ಷಗಳ ಅವಧಿಯಲ್ಲಿ – ಶಂಕರಾಚಾರ್ಯ, ಮಧ್ವಾಚಾರ್ಯ, ನಿಂಬಾರ್ಕ ಮತ್ತು ರಾಮಾನುಜಾಚಾರ್ಯ ಅಂತಹ ಎಲ್ಲ ಆಚಾರ್ಯರು ಕೃಷ್ಣನನ್ನು ದೇವೋತ್ತಮ ಪರಮ ಪುರುಷ ಎಂದು ಅಂಗೀಕರಿಸಿದ್ದಾರೆ. ಮತ್ತು ಕಳೆದ ಐನೂರು ವರ್ಷಗಳ ಅವಧಿಯಲ್ಲಿ ಚೈತನ್ಯ ಮಹಾಪ್ರಭುಗಳು ಕೂಡ ಕೃಷ್ಣನನ್ನು ದೇವೋತ್ತಮ ಪರಮ ಪುರುಷ ಎಂದು ಅಂಗೀಕರಿಸಿದ್ದಾರೆ.
ಆದ್ದರಿಂದ ಭಗವದ್ಗೀತೆಯಲ್ಲಿ ಕೃಷ್ಣನು ಮಾತನಾಡುವಾಗ, ದೇವೋತ್ತಮ ಪರಮ ಪುರುಷನು ಮಾತನಾಡುತ್ತಿದ್ದಾನೆ, ಯಾರೋ ಸಾಧಾರಣ ವ್ಯಕ್ತಿಯಲ್ಲ ಎನ್ನುವುದನ್ನು ಸೂಚಿಸುವುದಕ್ಕಾಗಿಯೇ ಶ್ರೀ ಭಗವಾನ್ ಉವಾಚ ಎಂಬ ಶಬ್ದಗಳನ್ನು ಬಳಸಲಾಗಿದೆ. ಸಂಗತಿ ಏನೆಂದರೆ ದೇವರನ್ನು ಕುರಿತ ಅರಿವನ್ನು ಅತ್ಯುನ್ನತ, ಪರಿಪೂರ್ಣ ವ್ಯಕ್ತಿಯಿಂದಲೇ ನಾವು ಪಡೆಯಬೇಕು. ನಮ್ಮಲ್ಲಿ ನಾಲ್ಕು ದೋಷಗಳು ಇರುವುದರಿಂದ ನಮ್ಮ ಅರಿವು ಅಪರಿಪೂರ್ಣವಾಗಿದೆ. ನಮಗೆ ಅಪರಿಪೂರ್ಣ ಇಂದ್ರಿಯಗಳಿವೆ, ನಾವು ತಪ್ಪುಗಳನ್ನು ಮಾಡುತ್ತೇವೆ, ನಾವು ಮಾಯೆಗೆ ವಶರಾಗುತ್ತೇವೆ, ಮತ್ತು ಮೋಸ ಮಾಡುವ ಪ್ರವೃತ್ತಿ ನಮ್ಮಲ್ಲಿದೆ. ಪ್ರತಿಯೊಬ್ಬನೂ ತಪ್ಪುಗಳನ್ನು ಮಾಡುತ್ತಾನೆ. ಹೀಗೆ ನಾವು ತಪ್ಪುಗಳನ್ನು ಮಾಡುವುದರಿಂದ ಕೆಲವು ಸಲ ಮಾಯೆಗೆ ಸಿಕ್ಕಿಕೊಳ್ಳುತ್ತೇವೆ. ಅತ್ಯಂತ ದೊಡ್ಡ ಮಾಯೆಯೆಂದರೆ, “ನಾನು ಎಂದರೆ ನನ್ನ ದೇಹ” ಎಂದು ಭಾವಿಸುವುದು. ಈ ಸಮಸ್ತ ಜಗತ್ತಿನಲ್ಲಿ ಪ್ರತಿಯೊಬ್ಬನೂ ತಾನೆಂದರೆ ತನ್ನ ದೇಹ ಎಂಬ ಅಭಿಪ್ರಾಯದಲ್ಲೇ ಇದ್ದಾನೆ. ಆದರೆ ನಾನು ನನ್ನ ದೇಹವಲ್ಲ: ನಾನೊಂದು ಚೇತನಾತ್ಮ. ಕೃಷ್ಣನು ಇದನ್ನು ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಅರ್ಜುನನಿಗೆ ವಿವರಿಸುತ್ತಾನೆ.

ಜೀವಂತ ದೇಹಕ್ಕೂ ಮೃತ ದೇಹಕ್ಕೂ ಇರುವ ವ್ಯತ್ಯಾಸವೆಂದರೆ ಚೇತನಾತ್ಮ. ಜೀವಂತ ದೇಹಕ್ಕೂ ಮೃತದೇಹಕ್ಕೂ ಇರುವ ವ್ಯತ್ಯಾಸವೆಂದರೆ, ದೇಹದಲ್ಲಿ ಜೀವಂತ ಅಸ್ತಿತ್ವವಾದ ಆತ್ಮವು ಇರದಿದ್ದಾಗ, ದೇಹವು ಕೇವಲ ಜಡವಸ್ತುವಿನ ಒಂದು ಗುಡ್ಡೆಯಾಗಿರುತ್ತದೆ. ನಾನು “ಅಪ್ಪಾ!” ಎಂದು ಕರೆದಾಗ ತಂದೆಯು ಕೂಡಲೇ, “ಏನು ಮಗೂ” ಎಂದು ಉತ್ತರಿಸುತ್ತಾನೆ. ಆದರೆ ನನ್ನ ತಂದೆಯ ದೇಹದ ಆತ್ಮವು ದೇಹದಲ್ಲಿ ಇಲ್ಲದಿರುವಾಗ, ಆ ದೇಹವು ಹಾಸಿಗೆಯ ಮೇಲೆ ಒರಗಿದ್ದರೂ, ನಾನು ನನ್ನ ತಂದೆ ಎಂದು ತಿಳಿದುಕೊಂಡಿರುವ ಆ ದೇಹವು ಉತ್ತರಿಸಲಾರದು. ಆದ್ದರಿಂದ ಕೃಷ್ಣನು ಹೇಳುತ್ತಾನೆ, “ಅರ್ಜುನ, ನಿನ್ನ ಬಂಧು ಬಾಂಧವರನ್ನು ಕೊಲ್ಲಲು ನೀನು ಹೆದರುತ್ತಿದ್ದೀಯೆ. ಆದರೆ ನೀನು ತಪ್ಪು ತಿಳಿದುಕೊಂಡಿದ್ದೀಯೆ: ಆತ್ಮವನ್ನು ಎಂದೂ ಕೊಲ್ಲಲು ಸಾಧ್ಯವಿಲ್ಲ.”
ಪ್ರತಿಯೊಬ್ಬನೂ ತನ್ನ ನಿಜವಾದ ಗುರುತಿನ ಬಗೆಗೆ ತಪ್ಪು ತಿಳಿದುಕೊಂಡಿರುವುದಕ್ಕೆ ಕಾರಣವೆಂದರೆ ಬದ್ಧ ಜೀವನದ ನಾಲ್ಕು ದೋಷಗಳು. ನಾವು ಈ ಐಹಿಕ ದೇಹದಲ್ಲಿರುವವರೆಗೂ ಕೆಲವು ನಿಬಂಧನೆಗಳಿಗೆ ಒಳಪಟ್ಟು ಜೀವಿಸಬೇಕಾಗುತ್ತದೆ. ಆದರೆ ದಿಟದಲ್ಲಿ ನಾವೆಲ್ಲ ಚೇತನಾತ್ಮರು, ದೇವರ ಅಂಶಗಳು. ಬದ್ಧ ಜೀವನದಿಂದ ನಾವು ಸ್ವತಂತ್ರರಾಗುತ್ತಿದ್ದಂತೆಯೇ ನಮ್ಮ ನಿಜವಾದ ಜೀವನ ಪ್ರಾರಂಭವಾಗುತ್ತದೆ. ಅದನ್ನು ವಿಮೋಚನೆ ಎಂದು ಕರೆಯುತ್ತಾರೆ.
ಈ ಮಾನವ ರೂಪದ ಜನ್ಮವು ವಿಮೋಚನೆಯನ್ನು ಪಡೆಯುವುದಕ್ಕೆ ಉದ್ದಿಷ್ಟವಾಗಿದೆ. ವಿಕಾಸ ಪ್ರಕ್ರಿಯೆಯ ಮೂಲಕ ಬಹಳ ದೀರ್ಘಕಾಲ ಸಾಗಿಬಂದ ಮೇಲಷ್ಟೆ ನಾವು ಈ ಮಾನವ ರೂಪದ ಜನ್ಮವನ್ನು ಗಳಿಸಿಕೊಂಡಿದ್ದೇವೆ. ಮೊದಲು ನಾವು ಜಲಚರಗಳ ಜನ್ಮವನ್ನು ಅನುಭವಿಸಿದೆವು. ಅನಂತರ ಸಸ್ಯದ ಜನ್ಮ, ಆಮೇಲೆ ವೃಕ್ಷದ ಜನ್ಮ, ಆಮೇಲೆ ಕೀಟದ ಜನ್ಮ, ಆಮೇಲೆ ಹಕ್ಕಿಯ ಜನ್ಮ, ಆಮೇಲೆ ಪ್ರಾಣಿಜನ್ಮ, ಆಮೇಲೆ ಮಾನವ ಜನ್ಮ. ಅಂತಿಮವಾಗಿ ನಾಗರಿಕತೆಯಿಂದ ಕೂಡಿದ ಮಾನವ ಜನ್ಮ. ಇದು ವಿಕಾಸದ ಪ್ರಕ್ರಿಯೆ. ಈಗ ನಾವು ನಾಗರಿಕತೆಯಿಂದ ಕೂಡಿದ ಮಾನವ ಜನ್ಮವನ್ನು ಹೊಂದಿದ್ದೇವೆ ಎನ್ನಲಾಗಿದೆ. ಆದ್ದರಿಂದ ಈ ವಿಕಾಸ ಪ್ರಕ್ರಿಯೆಯಿಂದ ಆಚೆಗೆ ಹೋಗುವ ವಿಶೇಷ ಕಾರಣಕ್ಕಾಗಿ ಈ ಮಾನವ ಜನ್ಮ ಉದ್ದಿಷ್ಟವಾಗಿದೆ ಎಂದು ನಾವು ತಿಳಿದುಕೊಳ್ಳಬೇಕು.

ವಿಕಾಸವೆಂದರೆ ಒಂದು ದೇಹದಿಂದ ಇನ್ನೊಂದಕ್ಕೆ ಆತ್ಮದ ದೇಹಾಂತರವಾಸ. ನಮಗೆ ಸಾಯಲು ಇಷ್ಟವಿಲ್ಲ, ಆದರೆ ನಾವು ಸಾವನ್ನು ಒಪ್ಪಿಕೊಳ್ಳಲೇಬೇಕು. ಇದು ನಮ್ಮ ಜೀವನದ ಬದ್ಧ ಸ್ಥಿತಿ. ನಾವು ಜನ್ಮ ತಳೆಯಲು ಬಯಸುವುದಿಲ್ಲ. ಆದರೆ ಪ್ರಕೃತಿಯ ನಿಯಮಗಳಿಂದಾಗಿ ಒಬ್ಬಳು ತಾಯಿಯ ಗರ್ಭವನ್ನು ಅನಿವಾರ್ಯವಾಗಿ ಪ್ರವೇಶಿಸಬೇಕಾಗುತ್ತದೆ. ಒಂದು ದೇಹವನ್ನು ತೊರೆದ ಮೇಲೆ ನಾವು ಇನ್ನೊಂದು ದೇಹವನ್ನು ಪ್ರವೇಶಿಸಬೇಕಾಗುತ್ತದೆ. ಆದರೆ ಎಂತಹ ದೇಹ ನಮಗೆ ಸಿಗುತ್ತದೆ ಎನ್ನುವುದು ನಿಶ್ಚಿತವಲ್ಲ. ಅದು ಮಾನವ ದೇಹವಾಗಿರಬಹುದು, ಪ್ರಾಣಿಯ ದೇಹವಾಗಿರಬಹುದು, ಅಥವಾ ಒಂದು ವೃಕ್ಷದ ದೇಹವಾಗಿರಬಹುದು, ಅಥವಾ ಮಾನವ ಜೀವಿಯ ದೇಹಕ್ಕಿಂತ ಉತ್ತಮವಾದ ಒಂದು ದೇಹವಾಗಿರಬಹುದು. ಮೂರು ವರ್ಗಗಳಿವೆ. ಒಂದು ವರ್ಗದಲ್ಲಿ ದೇವತೆಗಳು ಇರುತ್ತಾರೆ. ಅವರು ಜ್ಞಾನದಲ್ಲಿ ಉನ್ನತ ಪ್ರಗತಿಯನ್ನು ಸಾಧಿಸಿರುತ್ತಾರೆ. ಅವರು ದೈವ ಪ್ರಜ್ಞಾವಂತರು, ಕೃಷ್ಣ ಪ್ರಜ್ಞಾವಂತರು. ಎರಡನೆಯ ವರ್ಗವು ಮಾನವರದ್ದು. ಮೂರನೆಯ ವರ್ಗವು ಮಾನವರಿಗಿಂತ ಕೆಳಗಿನ ಹಂತದ ಜೀವಿಗಳದ್ದು.
ಆದ್ದರಿಂದ, ಪರಿಪೂರ್ಣ ಜ್ಞಾನವನ್ನು, ವಿಕಾಸ ಪ್ರಕ್ರಿಯೆಯಿಂದ ಆಚೆಗೆ ಹೋಗುವುದು ಹೇಗೆಂಬ ಜ್ಞಾನವನ್ನು, ನೀಡಿದವನು ಪರಿಪೂರ್ಣ ವ್ಯಕ್ತಿಯಾದ ದೇವೋತ್ತಮ ಪರಮಪುರುಷನೇ ವಿನಾ, ಆಗಲೇ ನಾನು ವಿವರಿಸಿದಂತಹ ನಾಲ್ಕು ಬಗೆಯ ದೋಷಗಳನ್ನು ಉಳ್ಳಂತಹ ಸಾಧಾರಣ ಮನುಷ್ಯನಲ್ಲ. ಆ ನಾಲ್ಕು ಬಗೆಯ ದೋಷಗಳೆಂದರೆ, ನಮ್ಮ ಇಂದ್ರಿಯಗಳು ಅಪರಿಪೂರ್ಣವಾಗಿವೆ, ನಾವು ತಪ್ಪುಗಳನ್ನು ಮಾಡುತ್ತೇವೆ, ನಾವು ಮಾಯೆಗೆ ವಶರಾಗುತ್ತೇವೆ ಮತ್ತು ನಮ್ಮಲ್ಲಿ ಮೋಸಮಾಡುವ ಪ್ರವೃತ್ತಿಯಿದೆ. ಯಾವುದೋ ಒಂದು ವಿಷಯವನ್ನು ಕುರಿತು ಕೆಲವು ಸಲ ನಮಗೆ ಬಹಳ ಸ್ಪಷ್ಟವಾದ ತಿಳಿವಳಿಕೆ ಇಲ್ಲದಿದ್ದರೂ, ನಾವೊಬ್ಬರು ಪಂಡಿತರೋ ಎಂಬಂತೆ ಅದನ್ನು ಕುರಿತು ಮಾತನಾಡುತ್ತೇವೆ. ಅದು ಮೋಸ.
ಈ ರೀತಿಯಲ್ಲಿ ನಾವು ಮೋಸ ಮಾಡಬಾರದು. ನಾವು ಜನರಿಗೆ ಜ್ಞಾನವನ್ನು ಹಂಚಬೇಕೆಂದು ಬಯಸಿದರೆ ಪರಿಪೂರ್ಣ ಜ್ಞಾನವನ್ನೇ ಕೊಡಬೇಕು. ಪರಿಪೂರ್ಣ ಜ್ಞಾನವನ್ನು ನಾವು ಹೇಗೆ ಕೊಡಬಹುದು? ಪರಿಪೂರ್ಣ ಜ್ಞಾನವು ದೇವೋತ್ತಮ ಪರಮಪುರುಷನಿಂದ ಬರುತ್ತದೆ. ಪರಿಪೂರ್ಣ ಜ್ಞಾನವನ್ನು ಸಂಪಾದಿಸುವ ಪ್ರಕ್ರಿಯೆ ಅದು. ಏವಂ ಪರಂಪರಾ ಪ್ರಾಪ್ತಮ್ ಇಮಂ ರಾಜರ್ಷಯೋ ವಿದುಃ ಪರಿಪೂರ್ಣ ಜ್ಞಾನವು ದೇವೋತ್ತಮ ಪರಮಪುರುಷನಾದ ಕೃಷ್ಣನಿಂದ ಗುರುಶಿಷ್ಯ ಪರಂಪರೆಯ ಮೂಲಕ ಬರುತ್ತದೆ. ನಾವು ಆ ಜ್ಞಾನವನ್ನು ಶಾಂತ ಮನಃಸ್ಥಿತಿಯಿಂದ ಸ್ವೀಕರಿಸಿ ಅರ್ಥಮಾಡಿಕೊಂಡರೆ, ಆಗ ನಮ್ಮ ಜ್ಞಾನವು ಪರಿಪೂರ್ಣವಾಗುತ್ತದೆ.
ಉದಾಹರಣೆಗೆ, ನಾವು ಕೃಷ್ಣಪ್ರಜ್ಞಾ ತತ್ತ್ವಜ್ಞಾನವನ್ನು ಬೋಧಿಸುತ್ತಿದ್ದೇವೆ, ಮತ್ತು ಇದು ಪರಿಪೂರ್ಣ ಜ್ಞಾನವಾಗಿದೆ. ಆದರೂ ನಾನು ಪರಿಪೂರ್ಣನಾಗಿದ್ದೇನೆಯೇ ಆಥವಾ ನನ್ನ ಶಿಷ್ಯರು ಪರಿಪೂರ್ಣರಾಗಿದ್ದಾರೆಯೇ ಎಂದು ನೀವು ಪ್ರಶ್ನಿಸಿದರೆ, “ಇಲ್ಲ, ನಾವು ಪರಿಪೂರ್ಣರಲ್ಲ” ಎಂದೇ ನಾವು ಉತ್ತರ ಕೊಡುತ್ತೇವೆ. ನಾವು ಅಪರಿಪೂರ್ಣರು ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ನಾವು ಪರಿಪೂರ್ಣ ಜ್ಞಾನವನ್ನು ಹಂಚುತ್ತಿದ್ದೇವೆ. ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಾವು ಅಪರಿಪೂರ್ಣರಾಗಿರಬಹುದು. ಆದರೆ ನಾವು ಪರಿಪೂರ್ಣ ಜ್ಞಾನವನ್ನು ಅರ್ಥ ಮಾಡಿಕೊಂಡಿರುವುದರಿಂದ, ನಾವು ಬೋಧಿಸುತ್ತಿರುವುದು ಪರಿಪೂರ್ಣವಾಗಿದೆ.
ನಾನು ನಿಮಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ. ಒಬ್ಬ ಅಂಚೆಯವನು ನಿಮಗೆ ಸಾವಿರ ರೂಪಾಯಿಗಳನ್ನು ವಿತರಣೆ ಮಾಡಿದ ಎಂದಿಟ್ಟುಕೊಳ್ಳಿ. ಅಂಚೆಯವನೇನು ಶ್ರೀಮಂತನಲ್ಲ. ತನ್ನದೇ ಹಣದಿಂದ ಅವನು ನಿಮಗೆ ಸಾವಿರ ರೂಪಾಯಿಗಳನ್ನು ಕೊಡಲಾರ. ಆದರೆ ಹಣವನ್ನು ನಿಮ್ಮ ಸ್ನೇಹಿತರೊಬ್ಬರು ಕಳುಹಿಸಿದ್ದಾರೆ. ಅಂಚೆಯವನು ಆ ಹಣವನ್ನು ಪ್ರಾಮಾಣಿಕತೆಯಿಂದ ತೆಗೆದುಕೊಂಡು ಬಂದು ನಿಮಗೆ ನೀಡುತ್ತಿದ್ದಾನೆ. ಅದು ಅಂಚೆಯವನ ಕರ್ತವ್ಯ. ಅದೇ ರೀತಿಯಲ್ಲಿ, ನಮ್ಮ ಕರ್ತವ್ಯ ಕೂಡ ಕೃಷ್ಣನಿಂದ ಪರಿಪೂರ್ಣ ಜ್ಞಾನವನ್ನು ಸ್ವೀಕರಿಸಿ ವಿತರಣೆ ಮಾಡುವುದು. ಅದು ನಮ್ಮ ಪರಿಪೂರ್ಣತೆ.

ನಾವು ವಿತರಣೆ ಮಾಡುತ್ತಿರುವ ಜ್ಞಾನವನ್ನು ನಮ್ಮದೇ ಸಂಶೋಧನೆಯಿಂದ ಸೃಷ್ಟಿ ಮಾಡಲಾಗಿಲ್ಲ. ಅಥವಾ ಯಾವುದೇ ಅನುಗಮನ ಪ್ರಕ್ರಿಯೆಯಿಂದ ಸೃಷ್ಟಿ ಮಾಡಲಾಗಿಲ್ಲ. ನಮ್ಮ ಜ್ಞಾನವನ್ನು ನಿಗಮನ ಪ್ರಕ್ರಿಯೆಯಿಂದ ಗಳಿಸಲಾಗಿದೆ: ಕೃಷ್ಣನು ಒಂದು ಸಂಗತಿಯನ್ನು ತಿಳಿಸುತ್ತಾನೆ, ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಜ್ಞಾನವನ್ನು ಗಳಿಸುವ ಈ ಪ್ರಕ್ರಿಯೆಯು ನಮ್ಮ ಕೃಷ್ಣ ಪ್ರಜ್ಞಾ ಆಂದೋಲನದ ಆಧಾರವಾಗಿದೆ. ನಾವು ಅಪರಿಪೂರ್ಣರಾಗಿರಬಹುದು, ಆದರೆ ಕೃಷ್ಣ ಪರಿಪೂರ್ಣನಾಗಿದ್ದಾನೆ. ಆದ್ದರಿಂದ ಕೃಷ್ಣ ಏನೇ ಹೇಳಿದರೂ ಅದನ್ನು ನಾವು ಅಂಗೀಕರಿಸುತ್ತೇವೆ. ಆದರೆ ಕುರುಡಾಗಿ ನಾವು ಏನನ್ನೂ ಅಂಗೀಕರಿಸಬಾರದು. ಅರ್ಥಮಾಡಿಕೊಳ್ಳಲು ನಾವು ತರ್ಕವನ್ನೂ ಮತ್ತು ವಾದವನ್ನೂ ಅನ್ವಯಿಸಬಹುದು. ಆಗ ನಮ್ಮ ಜ್ಞಾನ ಪರಿಪೂರ್ಣವಾಗುತ್ತದೆ.
ಭಗವದ್ಗೀತೆಯಲ್ಲಿ (2.11) ಅರ್ಜುನನು ಯುದ್ಧ ಮಾಡಲು ಸಿದ್ಧನಾಗಿಲ್ಲ ಎನ್ನುವುದನ್ನು ಪ್ರಭು ಕೃಷ್ಣನು ಕಂಡಾಗ, ಹೀಗೆ ಹೇಳುತ್ತಾನೆ:
ಅಶೋಚ್ಯಾನ್ ಅನ್ವಶೋಚಸ್ತಮ್ ಪ್ರಜ್ಞಾ ವಾದಾಂಶ ಚ ಭಾಷಸೇ ।
ಗತಾಸೂನ್ ಅಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ ॥
ಅರ್ಜುನನು ಕೃಷ್ಣನನ್ನು ತನ್ನ ಗುರು ಎಂದು ಒಪ್ಪಿಕೊಂಡಿದ್ದರಿಂದ ಕೃಷ್ಣನು ಬಹಳ ಮೃದುವಾಗಿ ಹೀಗೆ ಹೇಳುತ್ತಾನೆ, “ನನ್ನ ಪ್ರೀತಿಯ ಅರ್ಜುನ, ಶೋಕಕ್ಕೆ ಯೋಗ್ಯವಲ್ಲದ ವಿಷಯವನ್ನು ಕುರಿತು ನೀನು ಶೋಕಿಸುತ್ತಿದ್ದೀಯೆ.” ಅರ್ಜುನನು ಯುದ್ಧ ಮಾಡಲು ಹಿಂಜರಿಯುತ್ತಿದ್ದ, ಏಕೆಂದರೆ ಅವನು ದೈಹಿಕ ಸಂಬಂಧಗಳಲ್ಲಿ ಮಗ್ನನಾಗಿದ್ದ. ಅವನು ತನ್ನ ದೇಹವೇ ತಾನು ಎಂದು ಯೋಚಿಸುತ್ತಿದ್ದ ಮತ್ತು ಎದುರು ಪಕ್ಷದಲ್ಲಿದ್ದ ಅವನ ಬಂಧುಗಳು – ಅವನ ಸೋದರರು, ಸೋದರ ಪುತ್ರರು, ಅವನ ಅಜ್ಜ-ಕೂಡ ಅವರವರ ದೇಹಗಳು ಎಂದು ಯೋಚಿಸುತ್ತಿದ್ದ.
ಈ ದೇಹಾತ್ಮ ಬುದ್ಧಿಯು ಪ್ರಾಣಿ ಜೀವನವಾಗಿದೆ. ನಾಯಿಯು ದೈಹಿಕ ಗ್ರಹಿಕೆಯಲ್ಲಿದೆ, ಬೇರೆ ಏನನ್ನೂ ತಿಳಿಯಲಾರದು. ತಾನು ದೇಹ ಎನ್ನುವುದೊಂದೇ ಅದಕ್ಕೆ ಗೊತ್ತಿರುವುದು. ಆದರೆ ತರ್ಕ ಮತ್ತು ವಾದದ ಮೂಲಕ ಅರಿವನ್ನು ಬೆಳೆಸಿಕೊಂಡ ಮಾನವನು, “ನಾನು ಈ ದೇಹವಲ್ಲ” ಎಂದು ಅರ್ಥಮಾಡಿಕೊಳ್ಳಬಲ್ಲ. ಆದ್ದರಿಂದ ಒಂದು ಮಗುವಿನ ಬೆರಳು ತೋರಿಸಿ, “ಇದು ಏನು?” ಎಂದು ಕೇಳಿದರೆ ಮಗುವು, “ಇದು ನನ್ನ ಬೆರಳು” ಎಂದು ಉತ್ತರಿಸುತ್ತದೆ. ಮಗುವು ಎಂದೂ, “ನಾನು ಬೆರಳು” ಎಂದು ಹೇಳುವುದಿಲ್ಲ. ಅದು, “ನನ್ನ ಬೆರಳು” ಎಂದೇ ಹೇಳುತ್ತದೆ. ಹೀಗೆ ಪ್ರತಿಯೊಂದೂ ನನ್ನದು: ನನ್ನ ದೇಹ, ನನ್ನ ತಲೆ, ನನ್ನ ಕಾಲು, ಆದರೆ ಈ ನಾನು ಎಲ್ಲಿದೆ? ಅದು ನಮ್ಮ ತನಿಖೆಯ ವಿಷಯವಾಗಬೇಕು. ನನ್ನ ದೇಹದ ಪ್ರತಿಯೊಂದು ಭಾಗವೂ ನನ್ನದೇ. ಆದರೆ ನಾನು ಎಲ್ಲಿದ್ದೇನೆ? ಆ ನಾನು ಎಂಬುದು ಎಲ್ಲಿದೆ ಎಂದು ಕೇಳುವ ಹಂತಕ್ಕೆ ನಾವು ಬರುತ್ತಿದ್ದಂತೆಯೇ – ನಮ್ಮ ಮಾನವ ಬುದ್ಧಿ ಶಕ್ತಿಯು ಅಭಿವೃದ್ಧಿ ಹೊಂದಿದಂತೆ. ಇಲ್ಲದಿದ್ದರೆ, ನಾವು ಪ್ರಾಣಿ ಜೀವನದ ಹಂತದಲ್ಲಿಯೇ ಇರುತ್ತೇವೆ.

ಆದ್ದರಿಂದ ಕೃಷ್ಣನು ಅರ್ಜುನನಿಗೆ ಬೋಧಿಸುತ್ತಿದ್ದಾನೆ, “ನನ್ನ ಪ್ರೀತಿಯ ಅರ್ಜುನ, ಯಾವುದು ನಿಜವಾಗಿಯೂ ಶೋಕದ ವಿಷಯವಲ್ಲವೋ ಅದಕ್ಕೆ ನೀನು ಶೋಕಿಸುತ್ತಿದ್ದೀಯೆ.” ಮತ್ತು ಪ್ರಜ್ಞಾ ವಾದಾಂಶ ಚ ಭಾಷಸೇ: “ಅದೇ ಸಮಯದಲ್ಲಿ ನೀನು ಒಬ್ಬ ಬಹಳ ಬುದ್ಧಿವಂತನಂತೆ ಮಾತನಾಡುತ್ತಿದ್ದೀಯೆ.” ಹಿಂದಿನ ಅಧ್ಯಾಯದಲ್ಲಿ ಜೀವನದ ದೈಹಿಕ ಗ್ರಹಿಕೆಗೆ ಸಮರ್ಥನೆಯಾಗಿ ಧಾರ್ಮಿಕ ಗ್ರಂಥಗಳ ಸಾಕ್ಷ್ಯಾಧಾರಗಳನ್ನು ಕೊಡುತ್ತಾ ಅರ್ಜುನನು ಕೃಷ್ಣನ ಬಳಿ ವಾದ ಮಾಡಿದ್ದ. ಆದರೆ ಜೀವನದ ದೈಹಿಕ ಗ್ರಹಿಕೆಯಲ್ಲಿರುವವನು ಒಂದು ಕತ್ತೆ ಅಥವಾ ಒಂದು ಹಸುವಿಗಿಂತ ಉತ್ತಮನಲ್ಲ ಎಂದು ಧಾರ್ಮಿಕ ಗ್ರಂಥ ಹೇಳಿರುವುದು ಅರ್ಜುನನಿಗೆ ತಿಳಿದಿರಲಿಲ್ಲ. ಆ ಸಂಗತಿ ಅವನಿಗೆ ತಿಳಿದಿರಲಿಲ್ಲ.
ಇಂದು ಅನೇಕ ಜನ ಮಹಾನ್ ವಿದ್ವಾಂಸರು ಜೀವನದ ದೈಹಿಕ ಗ್ರಹಿಕೆಯಲ್ಲಿದ್ದಾರೆ. ನಾನು ನಿಮಗೆ ಒಂದು ದೃಷ್ಟಾಂತವನ್ನು ಕೊಡುತ್ತೇನೆ. ಒಂದು ಸಲ ನಾನು ಕೊಟೋವ್‌ಸ್ಕಿ ಎಂಬ ದೊಡ್ಡ ಪ್ರಾಧ್ಯಾಪಕರೊಡನೆ ಮಾಸ್ಕೊ ನಗರದಲ್ಲಿ ಮಾತನಾಡುತ್ತಿದ್ದೆ. ಅವರು ಹೇಳಿದರು, “ಸ್ವಾಮೀಜಿ, ಮರಣದ ಅನಂತರ ಎಲ್ಲವೂ ಮುಗಿದುಹೋದ ಹಾಗೆ.” ಅದು ಜೀವನದ ದೈಹಿಕ ಗ್ರಹಿಕೆ. ದೊಡ್ಡ ದೊಡ್ಡ ವಿದ್ವಾಂಸರು, ದೊಡ್ಡ ದೊಡ್ಡ ವೈದ್ಯರು, ತತ್ತ್ವಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ಕೂಡ ಜೀವನದ ದೈಹಿಕ ಗ್ರಹಿಕೆಯಲ್ಲಿದ್ದಾರೆ. ಆದ್ದರಿಂದ ಕೃಷ್ಣನು ಮೊಟ್ಟ ಮೊದಲನೆಯದಾಗಿ ಅರ್ಜುನನ ಜೀವನದ ದೈಹಿಕ ಗ್ರಹಿಕೆಯನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದಾನೆ.
ಆದ್ದರಿಂದ ಕೃಷ್ಣನು ಹೇಳುತ್ತಾನೆ, “ನನ್ನ ಪ್ರೀತಿಯ ಅರ್ಜುನ, ನೀನು ಬಹಳ ಬುದ್ಧಿವಂತನಂತೆ ಮಾತನಾಡುತ್ತಿದ್ದೀಯೆ, ಆದರೆ ಯಾವುದು ಶೋಕಯೋಗ್ಯವಲ್ಲವೋ ಅದನ್ನು ಕುರಿತು ನೀನು ಏಕೆ ಶೋಕಿಸುತ್ತಿದ್ದೀಯೆ?” ಅದು ಏನು? ಗತಾಸೂನ್ ಅಗತಾಸೂಂಶ್ಚ ನಾನು ಶೋಚಂತಿ ಪಂಡಿತಾಃ. ಪಂಡಿತಾಃ ಎಂದರೆ “ವಿದ್ವಾಂಸನಾದ ವ್ಯಕ್ತಿ”. `ದೇಹವು ಜೀವನದಿಂದಿರಲಿ ಅಥವಾ ಮೃತವಾಗಿರಲಿ, ಅದು ಶೋಕಿಸಲು ಯೋಗ್ಯವಾದ ವಿಷಯವಲ್ಲವಾದ್ದರಿಂದ, ಅತ್ಯಂತ ಬುದ್ಧಿವಂತನಾದ ವ್ಯಕ್ತಿಯು ದೇಹಕ್ಕಾಗಿ ಶೋಕಿಸುವುದಿಲ್ಲ ಎಂದು ಕೃಷ್ಣನು ಹೇಳುತ್ತಿದ್ದಾನೆ. ಆಧ್ಯಾತ್ಮಿಕ ಜೀವನದಲ್ಲಿ ಇದೇ ಸಾರಭೂತವಾದ ಸಂಗತಿ – ದೇಹವು ಈಗಾಗಲೇ ಸತ್ತು ಹೋಗಿದೆ, ಆದರೆ ಆತ್ಮದ ಉಪಸ್ಥಿತಿಯಿಂದ ಅದು ಓಡಾಡುತ್ತಿದೆ ಮತ್ತು ವರ್ತಿಸುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು.
ದೇಹದಲ್ಲಿ ಆತ್ಮ ಇರುವವರೆಗೂ, ಅದು ಚಲಿಸುತ್ತಿರುತ್ತದೆ. ಆದರೂ ಕೂಡ ದೇಹವು ಮೃತ ಜಡವಸ್ತುವಿನ ಒಂದು ಮೂಟೆ. ಆತ್ಮವು ಈ ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಸ್ವೀಕರಿಸಿದಾಗ, ಈ ದೇಹವು ಜಡವಸ್ತುವಿನ ಒಂದು ಮೂಟೆಯಾಗಿ ಉಳಿಯುತ್ತದೆ. ಆದ್ದರಿಂದ ಪ್ರಸ್ತುತ ಕಾಲದಲ್ಲಿ ಈ ದೇಹವು ಒಂದು ಜಡವಸ್ತುವಿನ ಮೂಟೆಯಾಗಿದ್ದು, ಮರಣಾನಂತರ, ಆತ್ಮವು ದೇಹವನ್ನು ತೊರೆದು ಹೋದನಂತರ, ದೇಹವು ಅದೇ ಜಡವಸ್ತುವಿನ ಮೂಟೆ ಆಗಿರುತ್ತದೆ. ಆದ್ದರಿಂದ ಈ ದೇಹವನ್ನು ಕುರಿತು ಶೋಕವಾಗಲಿ, ಸಂತೋಷವಾಗಲಿ ಏಕೆ? ಆಧ್ಯಾತ್ಮಿಕ ಜೀವನದಲ್ಲಿ ತಿಳಿದುಕೊಳ್ಳಬೇಕಾದ ಪ್ರಪ್ರಥಮ ಅರಿವು ಇದು.

ದಿಟದಲ್ಲಿ ನೀವು ಸ್ತಿಮಿತ ಬುದ್ಧಿಯಿಂದ ವಿಶ್ಲೇಷಣೆ ಮಾಡಿದರೆ ಈ ದೇಹವೆಂಬುದೇನು? ಇದು ಮೂಳೆಗಳು, ರಕ್ತ, ಮಾಂಸ, ಮಲ, ಮೂತ್ರ, ಉಗುರು, ಕೂದಲು ಮುಂತಾದವುಗಳ ಒಂದು ಮೊತ್ತ. ಇದರಲ್ಲಿ ಇನ್ನೇನನ್ನು ತಾನೆ ನೀವು ಕಾಣಬಲ್ಲಿರಿ? ಈ ಘಟಕಾಂಶಗಳನ್ನು – ಮೂಳೆಗಳು ಮತ್ತು ಮಾಂಸ, ಮೂತ್ರ ಮತ್ತು ಮಲ – ಜೋಡಿಸುವ ಮೂಲಕ ಅತ್ಯಂತ ವಿದ್ವಾಂಸನಾದ ಮನುಷ್ಯನನ್ನು ತಯಾರಿಸಬಹುದು ಎಂದು ನೀವು ಭಾವಿಸುತ್ತೀರಾ? ಈ ದೈಹಿಕ ಘಟಕಾಂಶಗಳೇ ನಿಜವಾಗಿಯೂ ಜೀವಂತ ಅಸ್ತಿತ್ವ ಎಂದು ನೀವು ಭಾವಿಸುವುದಾದರೆ, ಒಂದು ಮೃತದೇಹವನ್ನು ತೆಗೆದುಕೊಂಡು ಈ ಎಲ್ಲ ಘಟಕಾಂಶಗಳನ್ನೂ ಸೇರಿಸಿ ಒಬ್ಬ ಮನುಷ್ಯನನ್ನು ತಯಾರಿಸಿ ನೋಡೋಣ. ಆದರೆ ಅದು ಅಸಾಧ್ಯ. ಆದ್ದರಿಂದ ಜೀವನದ ದೈಹಿಕ ಗ್ರಹಿಕೆಯು ಕೇವಲ ಅಜ್ಞಾನ.
ಆದ್ದರಿಂದ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ, “ಶೋಕಿಸಲು ಯೋಗ್ಯವೇ ಅಲ್ಲದ ವಸ್ತುವಿಗಾಗಿ ನೀನು ಶೋಕಿಸುತ್ತಿದ್ದೀಯೆ.” ದೇಹವು ಒಂದು ಮೃತ ಜಡವಸ್ತು. ಅದು ಈ ಮನೆಯಂತೆಯೇ ಮೃತ ಜಡವಸ್ತುವಾಗಿಯೇ ಉಳಿಯುತ್ತದೆ. ನಾನು ಈ ಮನೆಯಲ್ಲಿದ್ದೇನೆ, ಆದರೆ ನಾನೇ ಈ ಮನೆ ಅಲ್ಲ. ನಾನು ಈ ಮನೆಯನ್ನು ಖಾಲಿ ಮಾಡಿದಾಗ ಇನ್ನೊಂದು ಮನೆಗೆ ಹೋಗುತ್ತೇನೆ. ಆದರೆ ಈ ಮನೆ ಉಳಿಯುತ್ತದೆ. ಅದೇ ರೀತಿಯಲ್ಲಿ ಮುಂದಿನ ಒಂದು ಶ್ಲೋಕದಲ್ಲಿ (2.13) ಪ್ರಭು ಕೃಷ್ಣನು ವಿವರಿಸುವಂತೆ –
ದೇಹಿನೋಽಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರ ಪ್ರಾಪ್ತಿಃ ಧೀರಃ ತತ್ರ ನ ಮುಹ್ಯತಿ ॥
ಈ ದೇಹದಲ್ಲಿ (ಅಸ್ಮಿನ್ ದೇಹೇ) ಆತ್ಮ ಎಂಬ ಮಾಲೀಕ ಇದ್ದಾನೆ. ಈ ಆತ್ಮವು ದೇಹದಲ್ಲಿರುವುದರಿಂದ ದೇಹವು ಬದಲಾಗುತ್ತಿರುತ್ತದೆ. ಅದು ಬಾಲ್ಯದಿಂದ ಯೌವನ ಮತ್ತು ವೃದ್ಧಾಪ್ಯಕ್ಕೆ ಬದಲಾಗುತ್ತದೆ. ಅದೇ ರೀತಿಯಲ್ಲಿ ಪ್ರಸ್ತುತ ದೇಹವು ಮೃತವಾದಾಗ ಆತ್ಮವು ಇನ್ನೊಂದು ದೇಹಕ್ಕೆ ಹೋಗುತ್ತದೆ.

ಆದರೆ ಈ ಆತ್ಮವಿಲ್ಲದೆ ದೇಹವು ಬದಲಾಗುವುದಿಲ್ಲ. ಉದಾಹರಣೆಗೆ, ಒಂದು ಮಗುವು ಹುಟ್ಟುವಾಗಲೇ ಸತ್ತುಹೋಗಿದ್ದರೆ, ಆಗ ಮುಂದೆಂದೂ ಅದರ ದೇಹವು ಬೆಳೆಯುವುದಿಲ್ಲ. ನೀವು ಯಾವುದೇ ರಾಸಾಯನಿಕ ವಸ್ತುವನ್ನು ಹಚ್ಚಿದರೂ ಅಥವಾ ಯಾವುದೇ ವಿಜ್ಞಾನವನ್ನು ಅನ್ವಯಿಸಿದರೂ ಆ ದೇಹವು ಹಾಗೆಯೇ ಉಳಿಯುತ್ತದೆ. ಆದರೆ ದೇಹದಲ್ಲಿ ಆತ್ಮ ಇರುವವರೆಗೂ ದೇಹವು ಬಾಲ್ಯದಿಂದ ಯೌವನಕ್ಕೆ ಬೆಳೆಯುತ್ತದೆ. ಈ ರೀತಿಯಲ್ಲಿ ದೇಹ ಬದಲಾವಣೆ ಹೊಂದುತ್ತದೆ.
ನಾವು ಅನೇಕ ದೇಹಗಳನ್ನು ಬದಲಾಯಿಸಿದ್ದೇವೆ – ನಮ್ಮಲ್ಲಿ ಪ್ರತಿಯೊಬ್ಬರೂ. ಒಂದು ಕಾಲದಲ್ಲಿ ನನಗೆ ಮಗುವಿನ ದೇಹವಿತ್ತು ಎಂಬುದು ನನಗೆ ನೆನಪಿದೆ. ಆದರೆ ಆ ದೇಹ ಈಗ ಅಸ್ತಿತ್ವದಲ್ಲಿಲ್ಲ. ಆದರೆ ನಾನು ಅಸ್ತಿತ್ವದಲ್ಲಿದ್ದೇನೆ. ಆದ್ದರಿಂದ ತೀರ್ಮಾನವೆಂದರೆ ಆತ್ಮರೂಪದಲ್ಲಿ ನಾನು, ನೀವು ಮತ್ತು ಪ್ರತಿಯೊಬ್ಬರೂ ಶಾಶ್ವತ. ಆದರೆ ನಮ್ಮ ದೇಹಗಳು ಬದಲಾಗುತ್ತಿವೆ, ಮತ್ತು ಈ ದೇಹವೇ ಯಾತನೆಯ ಆಕರವಾಗಿದೆ. ಈ ದೇಹದ ಕಾರಣದಿಂದ ನಾವು ಜನನ, ಮರಣ, ವೃದ್ಧಾಪ್ಯ ಮತ್ತು ವ್ಯಾಧಿಗಳನ್ನು ಅನುಭವಿಸಬೇಕು. ಈ ಐಹಿಕ ದೇಹವನ್ನು ನೀವು ಅಂಗೀಕರಿಸುತ್ತಿದ್ದಂತೆಯೇ, ಐಹಿಕ ಪ್ರಕೃತಿಯ ಈ ನಾಲ್ಕು ಯಾತನೆಗಳಿಗೆ ಈಡಾಗುತ್ತೀರಿ. ದೇಹವನ್ನು ನೀವು ಸ್ವೀಕರಿಸಿದಿರೆಂದರೆ, ಮೃತ್ಯುವನ್ನೂ ಸ್ವೀಕರಿಸಬೇಕು. ಏಕೆಂದರೆ ಹುಟ್ಟಿದುದೆಲ್ಲವೂ ಕೊನೆಯಲ್ಲಿ ಸಾಯಲೇಬೇಕು. ಜನನ, ಮರಣ ಮತ್ತು ಅವುಗಳ ಮಧ್ಯೆ ಬರುವ ವೃದ್ಧಾಪ್ಯ ಮತ್ತು ರೋಗ – ಇವು ನಾಲ್ಕು ಐಹಿಕ ಜೀವನದ ಯಾತನೆಗಳು.

ಆದ್ದರಿಂದ ಕೃಷ್ಣಪ್ರಜ್ಞಾ ವಿಜ್ಞಾನವು ಬೋಧಿಸುವುದು ಏನೆಂದರೆ ನಾವು ಚೇತನಾತ್ಮರು ಮತ್ತು ಪರಮ ಪ್ರಭುವಿನ ವಿಭಿನ್ನಾಂಶಗಳು ಮತ್ತು ಪರಮಪ್ರಭುವು ಶಾಶ್ವತನಾದುದರಿಂದ ನಾವೂ ಕೂಡ ಶಾಶ್ವತರು. ನಾವು ಕೂಡ ದೇವರಂತೆಯೇ – ಆದರೆ ಗುಣದಲ್ಲಿ ಮಾತ್ರ, ಗಾತ್ರದಲ್ಲಲ್ಲ. ನಾವು ಇಡೀ ಸಮುದ್ರಕ್ಕೆ ಹೋಲಿಸಿದರೆ ಒಂದು ಹನಿ ಸಮುದ್ರದ ನೀರಿನಂತೆ, ಗುಣದಲ್ಲಿ ಈ ಹನಿಯು ಅಪಾರ ಜಲರಾಶಿಯಂತೆಯೇ ಇರುತ್ತದೆ. ಸಮುದ್ರದ ಅಪಾರ ಜಲರಾಶಿಯು ಉಪ್ಪಾಗಿರುತ್ತದೆ, ಹನಿಯು ಕೂಡ ಉಪ್ಪಾಗಿರುತ್ತದೆ. ಅದೇ ರೀತಿಯಲ್ಲಿ ನಾವು ದೇವರ ಗುಣಗಳ “ರಾಸಾಯನಿಕ ಸಂಯೋಜನೆ”ಯನ್ನು ಹೊಂದಿರುತ್ತೇವೆ. ಆದ್ದರಿಂದ, ದೇವರು ಶಾಶ್ವತನಾದ್ದರಿಂದ ನಾವೂ ಶಾಶ್ವತವಾಗಿರಲೇಬೇಕು. ಅದನ್ನು ಭಗವದ್ಗೀತೆಯಲ್ಲಿ (2.20) ಹೇಳಲಾಗಿದೆ: ನ ಹನ್ಯತೇ ಹನ್ಯಮಾನೇ ಶರೀರೇ “ದೇಹವು ನಾಶವಾದ ಮೇಲೆ ಚೇತನಾತ್ಮವು ನಾಶವಾಗುವುದಿಲ್ಲ.”
ಆದ್ದರಿಂದ ನಮ್ಮ ನಿಜವಾದ ಸಹಜ ಸ್ವರೂಪವು ಶಾಶ್ವತ ಜೀವನ, ಆಧ್ಯಾತ್ಮಿಕ ಜೀವನ. ಹಾಗಾದರೆ ನಾವು ಈ ಬದಲಾಗುತ್ತಿರುವ ಪ್ರಕ್ರಿಯೆಯನ್ನು – ಜನನ, ಮರಣ, ವೃದ್ಧಾಪ್ಯ ಮತ್ತು ವ್ಯಾಧಿ – ಏತಕ್ಕಾಗಿ ಅಂಗೀಕರಿಸಿದ್ದೇವೆ? ಏಕೆಂದರೆ ನಾವು ಈ ಐಹಿಕ ಜನ್ಮವನ್ನು ಅಂಗೀಕರಿಸುವುದರಿಂದ. ಐಹಿಕ ಜೀವನ ಎಂದರೆ ಏನು ಆಧ್ಯಾತ್ಮಿಕ ಜೀವನ ಎಂದರೆ ಏನು ಎಂದು ನಾವು ಅರ್ಥಮಾಡಿಕೊಳ್ಳಬೇಕು. ಆಧ್ಯಾತ್ಮಿಕ ಜೀವನ ಎಂದರೆ ಸತ್-ಚಿತ್-ಆನಂದ-ವಿಗ್ರಹ. ಸತ್ ಎಂದರೆ “ಶಾಶ್ವತ” ಚಿತ್ ಎಂದರೆ “ಸಂಪೂರ್ಣ ಜ್ಞಾನ” ಮತ್ತು ಆನಂದ ಎಂದರೆ “ಸಂಪೂರ್ಣವಾದ ಪರಮಾನಂದ” ಇದು ನಮ್ಮ ಸಹಜ ಸ್ವರೂಪ. ಇದು ದೇವರ ಸಹಜ ಸ್ವರೂಪ ಮತ್ತು ಇದು ನಮ್ಮ ಸಹಜ ಸ್ವರೂಪ ಕೂಡ. ದೇವರಿಗೂ ನಮಗೂ ಇರುವ ವ್ಯತ್ಯಾಸವೆಂದರೆ, ದೇವರು ಎಂದಿಗೂ ಐಹಿಕ ದೇಹವನ್ನು ಸ್ವೀಕರಿಸುವುದಿಲ್ಲ. ಆದರೆ ನಾವು ಕೆಲವು ಸನ್ನಿವೇಶಗಳಲ್ಲಿ ಐಹಿಕ ದೇಹವನ್ನು ಅಂಗೀಕರಿಸಬೇಕಾಗುತ್ತದೆ. ಅದು ಇರಲಿ ಪರವಾಗಿಲ್ಲ. ನಾವು ಈ ಐಹಿಕ ದೇಹವನ್ನು ಅಂಗೀಕರಿಸಿದ್ದರೂ, ನಾವು ಅದರಿಂದ ಆಚೆ ಹೋಗಬಹುದು. ಹೀಗೆ ಆಚೆ ಹೋಗುವ ಪ್ರಕ್ರಿಯೆಯೇ ಕೃಷ್ಣಪ್ರಜ್ಞೆ.
ಜನನ, ಮರಣ, ವೃದ್ಧಾಪ್ಯ ಮತ್ತು ವ್ಯಾಧಿಗಳೆಂಬ ಈ ಗೋಜಲುಗಳಿಂದ ಬಿಡಿಸಿಕೊಂಡು ದೇವರಂತೆಯೇ ಆಗುವುದು ಹೇಗೆ ಎನ್ನುವುದನ್ನು ಕೃಷ್ಣಪ್ರಜ್ಞಾ ಆಂದೋಲನವು ಜನರಿಗೆ ಬೋಧಿಸುತ್ತಿದೆ. ಇದು ಅತ್ಯಂತ ವೈಜ್ಞಾನಿಕವಾದ ಆಂದೋಲನ. ಪ್ರಮಾಣಿತವಾದ ಆಂದೋಲನ. ಇದು ಪ್ರಮಾಣಿತವಾದುದಷ್ಟೇ ಅಲ್ಲ, ಭಾರತದಲ್ಲಿ ಕೋಟಿ ಕೋಟಿ ಜನರು ಇದನ್ನು ಅಂಗೀಕರಿಸಿದ್ದಾರೆ. ಅಲ್ಲದೆ ಪಾಶ್ಚಾತ್ಯ ದೇಶಗಳಲ್ಲಿಯೂ, ಇದು ಪ್ರಮಾಣಿತವಾದುದರಿಂದ ಮತ್ತು ವೈಜ್ಞಾನಿಕವಾದುದರಿಂದ, ಜನರು ಈ ಆಂದೋಲನವನ್ನು ಸ್ವೀಕರಿಸಿದ್ದಾರೆ.

ಆದ್ದರಿಂದ ನಮ್ಮ ಪ್ರಾರ್ಥನೆಯೇನೆಂದರೆ, ಈ ಆಂದೋಲನವು ಯಾವುದೋ ಒಂದು ಭಾವುಕವಾದ, ಧಾರ್ಮಿಕ ನಂಬಿಕೆಯ ಆಂದೋಲನ ಎಂದು ನೀವು ಯೋಚಿಸಬೇಡಿ. ಇದರ ಪ್ರಯೋಜನವನ್ನು ಪಡೆದುಕೊಳ್ಳಿ. ಅದೇ ನಮ್ಮ ಪ್ರಾರ್ಥನೆ. ನಮ್ಮ ಅನೇಕ ಪುಸ್ತಕಗಳನ್ನು ಓದುವ ಮೂಲಕ ನೀವು ಈ ಕೃಷ್ಣಪ್ರಜ್ಞಾ ಆಂದೋಲನವನ್ನು ಅರ್ಥಮಾಡಿಕೊಳ್ಳಬಹುದು.
ನಮ್ಮ ಪುಸ್ತಕಗಳ ಅಧ್ಯಯನದ ಜೊತೆಗೆ, ನಮ್ಮಲ್ಲೊಂದು ಪರ್ಯಾಯ ವಿಧಾನವಿದೆ. ಅದು ಬಹಳ ಸರಳ ಮತ್ತು ಸುಲಭ: ಹರೇಕೃಷ್ಣ ಮಹಾಮಂತ್ರವನ್ನು ಜಪಿಸಿ. ನೀವು ಈ ಮಂತ್ರವನ್ನು ಜಪಿಸಿದರೆ – ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ/ಹರೇರಾಮ ಹರೇರಾಮ ರಾಮರಾಮ ಹರೇಹರೇ ಎಲ್ಲವೂ ಕ್ರಮೇಣ ಸ್ಪಷ್ಟವಾಗುತ್ತದೆ. ನಾವು ಈ ಮಂತ್ರವನ್ನು ಮಾರುತ್ತಿಲ್ಲ, ನಾವು ಅದಕ್ಕಾಗಿ ಯಾವ ಬೆಲೆಯನ್ನೂ ಕೇಳುತ್ತಿಲ್ಲ. ಇದು ಎಲ್ಲರಿಗೂ ಮುಕ್ತವಾಗಿದೆ. ಅದನ್ನು ಜಪಿಸಿದರೆ ನಿಮಗೇನೂ ನಷ್ಟವಿಲ್ಲ. ಆದ್ದರಿಂದ ದಯವಿಟ್ಟು ಈ ಮಹಾಮಂತ್ರವನ್ನು ಸ್ವೀಕರಿಸಿ ಮತ್ತು ಜಪಿಸಿ.

ಈ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ/ಹರೇರಾಮ ಹರೇರಾಮ ರಾಮರಾಮ ಹರೇಹರೇ ಮಂತ್ರವನ್ನು ಸಂಕೀರ್ತನೆ ಮಾಡಲು ಪ್ರಾರಂಭಿಸಿ. ನಿಮ್ಮ ಹೃದಯದಲ್ಲಿರುವ ಎಲ್ಲ ಶಂಕೆ ಕಳವಳಗಳೂ ಕ್ರಮೇಣ ತೊಳೆದು ಪಾವನವಾಗುತ್ತದೆ. (ಚೇತೋ ದರ್ಪಣ ಮಾರ್ಜನಂ). ನಿಮ್ಮ ಹೃದಯವು ಸ್ವಚ್ಛವಾಗುತ್ತಿದ್ದಂತೆಯೇ ನೀವು ಐಹಿಕ ದೇಹವಲ್ಲ, ಬದಲಿಗೆ ಚೇತನಾತ್ಮ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ದೇಹವು ಮೇಲ್ಗಡೆಯ ಅಂಗಿ ಇದ್ದಂತೆ. ಬರೀ ನಮ್ಮ ದೇಹದ ಪಾಲನೆ ಪೋಷಣೆಗಾಗಿ ನಾವು ಕೆಲಸ ಮಾಡುತ್ತಿದ್ದಷ್ಟು ಕಾಲವೂ, ನಾವು ಕೇವಲ ನಮ್ಮ ಸಮಯವನ್ನು ವ್ಯರ್ಥಮಾಡುತ್ತಿರುತ್ತೇವೆ. ವ್ಯಕ್ತಿಯು ತನ್ನ ಅಂಗಿಯ ಕಾಳಜಿ ಮಾತ್ರ ಮಾಡಿದರೆ ಸಾಲದು. ಸಹಜವಾಗಿಯೇ ನೀವು ನಿಮ್ಮ ಅಂಗಿಯ ತಕ್ಕಷ್ಟು ಕಾಳಜಿಯನ್ನು ವಹಿಸಬೇಕು, ಆದರೆ ನೀವೇ ನಿಮ್ಮ ಅಂಗಿ ಆಗಿದ್ದೀರೆಂದು ಭಾವಿಸಬಾರದು.

ಆದ್ದರಿಂದ ಪ್ರಸ್ತುತ ನಾಗರಿಕತೆಯು “ಅಂಗಿ” ನಾಗರಿಕತೆ. ದೇಹದ ಅಂಗಿಯೊಳಗೆ ಏನಿದೆ ಎಂದು ಜನರಿಗೆ ಗೊತ್ತಿಲ್ಲ. ಅದನ್ನು ಅವರು ಮರೆತಿದ್ದಾರೆ. ಆದ್ದರಿಂದ ಈ ಕೃಷ್ಣ ಪ್ರಜ್ಞಾ ಆಂದೋಲನವು ಬಹಳ ಮುಖ್ಯವಾದದ್ದು. ಏಕೆಂದರೆ ಅದು ತಪ್ಪಿ ಹೋದ ಅಂಶವಾದ ಚೇತನಾತ್ಮವನ್ನು ನಿರೂಪಿಸುತ್ತಿದೆ. ಈ ಆಂದೋಲನವು ಎಲ್ಲರಿಗೂ ಹೇಳುತ್ತಿದೆ, “ನೀವು ಈ ದೇಹವಲ್ಲ. ನೀವು ದೇಹದೊಳಗಿರುವ ಚೇತನಾತ್ಮ. ಜನನ, ಮರಣ, ವೃದ್ಧಾಪ್ಯ ಮತ್ತು ವ್ಯಾಧಿಗಳೆಂಬ ಗೋಜಲುಗಳಿಂದ ಹೊರಗೆ ಬರಲು ಪ್ರಯತ್ನಿಸಿ, ಮತ್ತು ಪರಮ ಧಾಮಕ್ಕೆ ಮರಳಿ ಹೋಗಿ.”
ನಿಮಗೆ ವಂದನೆಗಳು.






Leave a Reply