ಆಂಗ್ಲ ಮೂಲ : ದ್ವಾರಕಾಧೀಶ ದೇವಿ ದಾಸಿ
ನಮ್ಮ ಪ್ರಿಯಕರ ಅಥವಾ ಪ್ರಿಯತಮೆಯ ಸಾವಿನ ಅನಂತರವೂ ನಾವು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ. ಆದರೆ ನಮ್ಮ ಹಿಂದಿನ ಜನ್ಮದ ಪ್ರಿಯಕರ ಅಥವಾ ಪ್ರಿಯತಮೆಯ ವಿಚಾರವೇನು? ಈ ಮೂಲಭೂತ ನಶ್ವರ ಪ್ರೇಮದ ಆಚೆಗೆ ನಿಜವಾದ, ಆಧ್ಯಾತ್ಮಿಕ ಪ್ರೇಮವಿದೆ.

ನಾನು ನನ್ನ ಜೀವನದ ಪ್ರಮುಖ ಘಟ್ಟ ಅಥವಾ ತಿರುವನ್ನು ತಲಪುತ್ತಿದ್ದೇನೆ ಎಂದು ನಾನು ಗರ್ಭಿಣಿಯಾಗಿದ್ದಾಗಲೇ ಮುನ್ನರಿತಿದ್ದೆ. “ಇದನ್ನು ನನಗೆ ಮಾಡಲಾಗುವುದಿಲ್ಲ, ಅದನ್ನು ನನಗೆ ಮಾಡಲಾಗುವುದಿಲ್ಲ” ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತ ನಾನು ಆ ದಿನಗಳನ್ನು ಕಳೆದೆ. ತಾಯಂದಿರು ಮಗು, ತಳ್ಳುವ ಗಾಡಿ ಮತ್ತು ಡಯಾಪರ್‌ಗಳ ಭಾರದಿಂದ ಪ್ರಯಾಸಪಡುವುದನ್ನು ನಾನು ಗಮನಿಸಿದ್ದೆ. “ನಾನೂ ಅದೇ, ಹಾಗೇ” ಎಂದು ಭಯದಿಂದ ಕಂಪಿಸಿದೆ. ಆದರೆ ಅದು ಹೇಗೋ ನಾನು ನನ್ನ ಬದುಕಿನ ಕ್ರಮದ ಗತಿಯು ನಾಟಕೀಯವಾಗಿ ಬದಲಾಗುವುದೆಂದು ನಿರೀಕ್ಷಿಸಲಿಲ್ಲ. ಹೆಚ್ಚುವರಿ ಹೊರೆಯನ್ನು ಬಿಟ್ಟರೆ ನಾನು ಬದಲಾಗುವುದಿಲ್ಲ ಎಂದು ಭಾವಿಸಿದ್ದೆ.
ಓ, ನಾನೆಷ್ಟು ತಪ್ಪಾಗಿ ಭಾವಿಸಿದ್ದೆ. ಮಾತೃತ್ವವನ್ನು ಕುರಿತ ನನ್ನ ಹಿಂದಿನ ಕಲ್ಪನೆಗಳು ಎಷ್ಟು ಪೊಳ್ಳು, ಆಳವಿಲ್ಲದ್ದು ಎಂದು ನಾನು ನನ್ನ ಮಗಳು ಹುಟ್ಟಿದ ದಿನದಿಂದಲೇ ಅರಿತುಕೊಂಡೆ. ನಿಜ, ಸಾಕಷ್ಟು ಕೆಲಸಗಳು, ಮತ್ತು ಡಯಾಪರ್ ಬದಲಾವಣೆ ಎಲ್ಲವೂ ಇದ್ದವು. ಆದರೆ ನಾನು ಆ ಪುಟ್ಟ ಬಾಲೆಯ ಸೆಳೆತಕ್ಕೆ ಒಳಗಾಗುತ್ತಿದ್ದಂತೆ ಆ ಬದಲಾವಣೆಗಳು ಕುಗ್ಗಿಹೋದವು. ತೂಗುವ, ಎತ್ತಿಕೊಂಡು ಹೆಜ್ಜೆ ಹಾಕುವ ಮತ್ತು ಲಾಲನೆ ಮಾಡುವ ಆ ಮೊದಲ ದಿನಗಳ ಆಯಾಸವು ಪ್ರೇಮ, ಒಲವಿನ ಒಂದು ದೊಡ್ಡ ಅಲೆಯೊಂದಿಗೆ ಹರಿದು ಹೋದಂತೆ ಕಂಡಿತು. ಕೆಲಸಗಳು ಎಷ್ಟು ದಣಿವಿನಿದಾದರೂ ನನ್ನ ಮಗಳ ಮೇಲಿನ ಪ್ರೇಮದಿಂದ ಅವು ತುಂಬ ಹಿತವಾಗಿ ಕಂಡವು, ಹಿತಾನುಭವ ನೀಡಿದವು.

ತಾಯಿಯಾಗುವ ಮುನ್ನ ಮಾತೃಪ್ರೇಮದ ಬಗೆಗೆ ನನಗಿದ್ದ ಅಲ್ಪ ಅರಿವನ್ನು ಸ್ವಲ್ಪ ಕೊರಗಿನಿಂದಲೇ ಅರ್ಥಮಾಡಿಕೊಂಡ ಮೇಲೆ ನನಗೆ ಅನುಭವ ಇಲ್ಲದ ಅನೇಕ ಪ್ರೇಮಗಳಿವೆ ಎಂದು ಗ್ರಹಿಸಿಕೊಳ್ಳುವುದೂ ಸಾಧ್ಯವಾಯಿತು. ಉದಾಹರಣೆಗೆ, ತನ್ನ ದೇಶಕ್ಕಾಗಿ ಪ್ರಾಣ ಒಪ್ಪಿಸುವ ವ್ಯಕ್ತಿಗೆ ಪ್ರೇರಣೆಯಾಗುವ ತೀವ್ರ ದೇಶಪ್ರೇಮದ ಬಗೆಗೆ ನಾನು ಹೇಳಬಹುದು. ಅಥವಾ ಜನರು ಏಕೆ ವಯೋಲಿನ್ ನುಡಿಸುತ್ತ ಗಂಟೆಗಟ್ಟಲೆ ಸಮಯ ಕಳೆಯುವರೆಂದು ನನಗೆ ಅರ್ಥವಾಗುವುದಿಲ್ಲ. ನನ್ನ ಸ್ಥಾನದಿಂದ ನನಗೆ ಅಂತಹ ಭಾವನೆಗಳ ಅಂತರಂಗವನ್ನು ಹೊಕ್ಕುವುದು ಸಾಧ್ಯವಿಲ್ಲ.
ರಾಷ್ಟ್ರ ಅಥವಾ ಸಂಗೀತ ಅಥವಾ ಮಗುವಿಗಾಗಿನ ಪ್ರೀತಿಯ ಈ ಉದಾಹರಣೆಗಳು ಈ ಲೋಕದಲ್ಲಿ ಜೀವಂತವಾಗಿವೆ. ಆದರೆ ಪ್ರೀತಿಸುವವರು ತಾವು ಪ್ರೀತಿಸುವ ವಸ್ತುಗಳಿಂದ ಆನಂದವನ್ನು ಪಡೆಯುವ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುವುದರಿಂದ ಅವು ಪರಿಪೂರ್ಣ ಪ್ರೇಮವಲ್ಲ. ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ, ಏಕೆಂದರೆ… ಅವಳು ನನ್ನ ಮಗಳು. ಇದು ನಮ್ಮ ದೈಹಿಕ ಬಾಂಧವ್ಯದ ಆಕಸ್ಮಿಕ ಘಟನೆ. ದೇಹದ ಮೇಲೆ ಅವಲಂಬಿತವಾಗಿರುವ ಲೌಕಿಕ ಪ್ರೇಮದಲ್ಲಿ ಪರಿಸ್ಥಿತಿಗಳಿಂದ ವ್ಯವಸ್ಥೆಯಾದ ಆಪ್ತತೆಯು ಹೊರಟು ಹೋದರೆ, ಅಂತಿಮವಾಗಿ ಭಾವನೆಗಳು ಅದೃಶ್ಯವಾಗಿ ಬಿಡುತ್ತವೆ.
ಒಬ್ಬ ವ್ಯಕ್ತಿಯು ಮತ್ತೊಬ್ಬರನ್ನು ಜೀವಮಾನ ಪ್ರೀತಿಸಬಹುದು ಮತ್ತು ಸಾವಿಗೆ ಕೂಡ ಆ ಬಾಂಧವ್ಯವನ್ನು ಬೇಪರ್ಡಿಸುವುದು ಸಾಧ್ಯವಿಲ್ಲ. ಆದುದರಿಂದ ಇದನ್ನು ನೀವು ತಾತ್ಕಾಲಿಕ, ಲೌಕಿಕ ಪ್ರೇಮ ಎಂದು ಹೇಗೆ ಕರೆಯುವಿರಿ? ಎಂದು ಯಾರಾದರೂ ವಾದಿಸಬಹುದು.
ಶಾಶ್ವತ ಆಧ್ಯಾತ್ಮಿಕ ಆತ್ಮದ ಬಗೆಗೆ ಮಾತನಾಡುವಾಗ ನಾವು ಅನೇಕ ಅನೇಕ ಜೀವಿತಾವಧಿಗಳಿವೆ ಎನ್ನುವುದನ್ನೂ ಪರಿಗಣಿಸಬೇಕು. ನಮ್ಮ ಪ್ರಿಯಕರ ಅಥವಾ ಪ್ರಿಯತಮೆಯ ಸಾವಿನ ಅನಂತರವೂ ನಾವು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ. ಆದರೆ ನಮ್ಮ ಹಿಂದಿನ ಜನ್ಮದ ಪ್ರಿಯಕರ ಅಥವಾ ಪ್ರಿಯತಮೆಯ ವಿಚಾರವೇನು? ಅಥವಾ ನೂರು ವರ್ಷಗಳ ಹಿಂದಿನವರು? ಆ ದೂರದ ಬಾಂಧವ್ಯಗಳನ್ನು ಯಾರು ಸ್ಮರಿಸುವುದು ಸಾಧ್ಯ? ಆಧ್ಯಾತ್ಮಿಕ ಆತ್ಮವನ್ನು ನಿರ್ದಿಷ್ಟ ಪ್ರಚೋದನೆಗಳೊಂದಿಗೆ ಅಸಂಖ್ಯ ದೇಹಗಳೊಳಗೆ ಮುನ್ನೂಕಲಾಗುತ್ತದೆ. ಆದರೂ ಕೊನೆಗೆ ಎಲ್ಲವೂ ಮರೆತುಹೋಗುತ್ತದೆ. ಅದು ಲೌಕಿಕ ಪ್ರೇಮದ ಲಕ್ಷಣ.
ಆನಂದಗಳ ಮೂಲ
ಈ ಮೂಲಭೂತ ನಶ್ವರ ಪ್ರೇಮದ ಆಚೆಗೆ ನಿಜವಾದ, ಆಧ್ಯಾತ್ಮಿಕ ಪ್ರೇಮವಿದೆ. ಪ್ರತಿಯೊಂದು ಆಧ್ಯಾತ್ಮಿಕ ಆತ್ಮವೂ ದೇವೋತ್ತಮ ಪರಮ ಪುರುಷನಿಗಾಗಿ ಅನುಭವಿಸುವ ಸ್ವಾಭಾವಿಕ ಪ್ರೇಮವಿದು. ಎಲ್ಲ ಆನಂದಗಳ ಮೂಲನಾದ ಭಗವಂತನೊಂದಿಗೆ ಗಾಢವಾದ, ಶಾಶ್ವತವಾದ ಪ್ರೇಮವನ್ನು ವಿನಿಮಯಮಾಡಿಕೊಳ್ಳುವ ಶಕ್ತಿ ಎಲ್ಲ ಜೀವಿಗಳಿಗೆ ಇದ್ದರೂ ಈ ಲೋಕದಲ್ಲಿ ಅಂತಹ ಪ್ರೇಮವನ್ನು ಕಾಣುವುದು ವಿರಳ. ಆದರೂ ಭಗವಂತನಿಗಾಗಿಯೇ ತಮ್ಮೆಲ್ಲ ಪ್ರೀತಿಯನ್ನು ಮುಡುಪಾಗಿಟ್ಟಿರುವ ಪರಿಶುದ್ಧ ಹೃದಯದ ಆತ್ಮಗಳೊಂದಿಗೆ ಪ್ರಭುವು ಹೇಗೆ ಆಪ್ತವಾಗಿ ವ್ಯವಹರಿಸುತ್ತಾನೆ ಎನ್ನುವುದನ್ನು ಧರ್ಮಗ್ರಂಥಗಳು ವಿವರಿಸಿವೆ.
ಪಾಂಡವ ಸೋದರರು ಒಂದು ಒಳ್ಳೆಯ ಉದಾಹರಣೆ. ಶ್ರೀ ಕೃಷ್ಣನ ಸೋದರ ಸಂಬಂಧಿಯಾಗಿ ಅವರ ಲೀಲೆಗಳ ಕಥೆಯನ್ನು ಮಹಾಭಾರತದಲ್ಲಿ ಅದ್ಭುತವಾಗಿ ಹೇಳಲಾಗಿದೆ. ಭಗವಂತನೊಂದಿಗೆ ಪಾಂಡವರ ವಿಶೇಷ ಬಾಂಧವ್ಯವನ್ನು ಶ್ರೀಲ ಪ್ರಭುಪಾದರು ವಿವರಿಸಿದ್ದಾರೆ,

“ಶ್ರೀಕೃಷ್ಣನು ಪಾಂಡವರಂತಹ ನಿಷ್ಕಲ್ಮಷ ಭಕ್ತರಿಗೆ ಸರ್ವಸ್ವವೂ ಆಗಿದ್ದಾನೆ. ಶ್ರೀಕೃಷ್ಣ ಅವರಿಗೆ ಪರಮ ದೇವೋತ್ತಮ, ಗುರು, ಪೂಜಾರ್ಹ ದೇವರು, ಮಾರ್ಗದರ್ಶಿ, ಸಾರಥಿ, ಸಖ, ಸೇವಕ, ದೂತ ಮತ್ತು ಅವರು ಭಾವಿಸಿ ಸ್ವೀಕರಿಸಬಹುದಾದಂತಹ ಎಲ್ಲವೂ ಆಗಿದ್ದನು. ಶ್ರೀಕೃಷ್ಣನೂ ಸಹ ಪಾಂಡವರ ಭಾವನೆಗನುಸಾರವಾಗಿ ಪ್ರತಿಸ್ಪಂದಿಸಿದನು… ಪಾಂಡವರು ಕೃಷ್ಣನ ಇಚ್ಛೆಗೆ ಅದೆಷ್ಟು ವಿನಮ್ರರಾಗಿದ್ದರೆಂದರೆ ತಮ್ಮೆಲ್ಲ ಶಕ್ತಿಯನ್ನು ಬೇಕಾದರೂ ಆತನ ಸೇವೆಗೆ ತ್ಯಾಗ ಮಾಡಲು ಅವರು ಸಿದ್ಧರಿದ್ದರು. ಅಂತಹ ನಿಷ್ಕಲ್ಮಷ ದೃಢ ನಿರ್ಧಾರದಿಂದಾಗಿಯೇ ತಾವು ಬಯಸಿದ ಯಾವುದೇ ರೂಪದಲ್ಲಾದರೂ ಅವರು ಕೃಷ್ಣನ ಅನುಗ್ರಹವನ್ನು ಪಡೆಯಬಲ್ಲವರಾಗಿದ್ದರು.”
ಅಂತಹ ಸರ್ವೋನ್ನತ ಪ್ರೇಮವು ನಮ್ಮದೇ ಆಧ್ಯಾತ್ಮಿಕ ಪರಂಪರೆಯಾದರೂ, ವಿರುದ್ಧ ಭಾವನೆಗಳ ಎಲ್ಲ ಪ್ರೀತಿಯ ವಸ್ತುಗಳಿಂದ ಹೃದಯವು ಶುದ್ಧವಾದಾಗ ಮಾತ್ರ ಅದನ್ನು ಪೂರ್ಣವಾಗಿ ಮರಳಿ ಪಡೆಯುವುದು ಸಾಧ್ಯ. ಲೌಕಿಕ ಲೋಕದಲ್ಲಿ ಸಿಗುವ ಸಣ್ಣಪುಟ್ಟ ಆನಂದಗಳಿಗೆ ಹಂಬಲಿಸುತ್ತಿದ್ದರೆ, ನಾವು ಭಗವಂತನನ್ನು ಅವನ ಆಧ್ಯಾತ್ಮಿಕ ಲೀಲೆಗಳೊಂದಿಗೆ ಯಾವ ಅಡಚಣೆಯೂ ಇಲ್ಲದಂತೆ ಹೇಗೆ ಸೇರಿಕೊಳ್ಳುವುದು?

ಅಲ್ಲದೆ, ನಿಜವಾಗಿಯೂ ಭಗವಂತನ ವೈಭವವನ್ನು ಕೊಂಡಾಡಲು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವನ ಸೇವೆಗೆ ಬದ್ಧರಾಗದಿದ್ದರೆ ಕೇವಲ ತಮ್ಮ ಪ್ರೀತಿಯನ್ನು ಪ್ರಕಟಿಸುವುದು ಒಂದು ಹುಸಿ ಘೋಷಣೆಯಾಗುತ್ತದೆ. ಭಗವಂತನಿಗೆ ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಬಹುದು, ಆದರೆ ಯಾವಾಗಲೂ ಅದು ಅವನ ಇಚ್ಛಾನುಸಾರ ಎನ್ನುವುದನ್ನು ಪಾಂಡವರ ಉದಾಹರಣೆಯು ಸೂಚಿಸುತ್ತದೆ.
ಧರ್ಮಗ್ರಂಥಗಳು ಶುದ್ಧ ಭಕ್ತರ ಪ್ರೇಮವನ್ನು ನಮಗೆ ತೋರಿಸುತ್ತವೆ. ಇದರಿಂದ ನಾವು ಅವರನ್ನು ಗೌರವದಿಂದ ಆರಾಧಿಸಬಹುದು. ಹುಸಿ ಅನುಕರಣೆ ಮಾಡಲು ಪ್ರಯತ್ನಿಸುವವರನ್ನಲ್ಲ. ಭಗವಂತನನ್ನು ಕುರಿತ ಶುದ್ಧ ಪ್ರೇಮದ ಮಾಧುರ್ಯವನ್ನು ಅನುಭವಿಸುವುದು ಸಾಧ್ಯವಾಗದಿರಬಹುದು. ಆದರೂ ಆ ಶುದ್ಧ ಪ್ರೇಮವನ್ನು ಕುರಿತು ವಿಧೇಯತೆಯಿಂದ ಕೇಳುವ ಮೂಲಕ ನಾವು ನಿಜವಾದ ಆಧ್ಯಾತ್ಮಿಕ ಫಲವನ್ನು ಪಡೆಯಬಹುದು. ಶ್ರೀಲ ಪ್ರಭುಪಾದರು ಬರೆಯುತ್ತಾರೆ, “ಶುದ್ಧ ಭಕ್ತರೊಂದಿಗೆ ಭಗವಂತನ ನಡವಳಿಕೆಯನ್ನು ಮೆಚ್ಚುವುದರಿಂದಲೇ ಮುಕ್ತಿಯನ್ನು ಪಡೆಯಬಹುದು.”
ಈಗ ನಾನು ನನ್ನ ಪುಟ್ಟ ಮಗಳ ಚಟುವಟಿಕೆಗಳಿಂದ ಪರವಶಳಾಗಿದ್ದೇನೆ. ಅವಳ ಅಗತ್ಯ ಮತ್ತು ಅಪೇಕ್ಷೆಗಳ ಬಗೆಗೆ ಸದಾ ಚಿಂತಿಸುತ್ತೇನೆ. ಮಗುವಿಗಾಗಿನ ಈ ಮಾತೃ ಪ್ರೇಮವು ಲೌಕಿಕ ಲೋಕದಲ್ಲಿ ಶುದ್ಧ ಪ್ರೇಮಕ್ಕೆ ಅತ್ಯಂತ ಸಮೀಪವಾದುದು ಎಂದು ಶ್ರೀಲ ಪ್ರಭುಪಾದರು ಉಲ್ಲೇಖಿಸಿದ್ದಾರೆ. ಈ ಲೋಕದ ಇತರ ವಿಧವಾದ ಪ್ರೇಮಗಳಿಗೆ ಹೋಲಿಸಿದರೆ ಮಾತೃ ಪ್ರೇಮವು ನಿಸ್ವಾರ್ಥ, ಬೇಷರತ್ತು. ಆದರೂ ಇದೂ ಕೂಡ ಆಧ್ಯಾತ್ಮಿಕ ಆತ್ಮದ ನಿಜವಾದ ಪ್ರೇಮವಲ್ಲ. ನೋವು ಮತ್ತು ಸಾವಿನಿಂದ ನನ್ನನ್ನು ಮುಕ್ತಗೊಳಿಸುವ ಪ್ರೇಮವಲ್ಲ. ಆ ಅನಂತ ಮತ್ತು ಶಾಶ್ವತವಾದ ಶುದ್ಧ, ಆಧ್ಯಾತ್ಮಿಕ ಪ್ರೀತಿಯು, ಪಾಪರಹಿತ ಸೇವೆಯಿಂದ ಅರ್ಹರಾಗುವವರ ಮೇಲೆ ಭಗವಂತನು ತೋರುವ ಅನುಗ್ರಹವಾಗಿದೆ. ಆ ಪ್ರೇಮದ ಅನುಭವಕ್ಕಾಗಿ ನಾನು ಪ್ರಾರ್ಥಿಸುವೆ.