ಕೃಷ್ಣನ ದರ್ಶನಕ್ಕೆ ಸಿದ್ಧತೆ

“ನದಿಗಳು ಅವನ ಅದ್ಭುತ ಶರೀರದ ನಾಡಿಗಳಾಗಿವೆ, ವೃಕ್ಷಗಳು ಅವನ ದೇಹದ ರೋಮಗಳಾಗಿವೆ ಮತ್ತು ಸರ್ವಶಕ್ತ ವಾಯುವು ಅವನ ಉಸಿರಾಟವಾಗಿದೆ. ಗತಿಸುತ್ತಿರುವ ಯುಗಗಳು ಅವನ ಚಲನವಾಗಿವೆ. ಮತ್ತು ಅವನ ಕಾರ್ಯಗಳು ಮೂರು ಪ್ರಕೃತಿ ಗುಣಗಳ ಪ್ರತಿಕ್ರಿಯೆಗಳಾಗಿವೆ.”

(ಶ್ರೀಮದ್‌ ಭಾಗವತ, 2.1.33)

ಇಲ್ಲಿ ಶುಕದೇವ ಗೋಸ್ವಾಮಿ ಅವರು ದೇವೋತ್ತಮನ ವಿರಾಟ್‌ ರೂಪ, ವಿಶ್ವ ರೂಪವನ್ನು ವರ್ಣಿಸುತ್ತಿದ್ದಾರೆ. ಇದು ದೈವ ಸಾಕ್ಷಾತ್ಕಾರಕ್ಕೆ ಮೊದಲ ಹೆಜ್ಜೆ. ಎಲ್ಲರೂ ಲೌಕಿಕ ಶಕ್ತಿಯನ್ನು ಗ್ರಹಿಸುತ್ತಾರೆ, ಆದರೆ ಭೌತಿಕ ಪ್ರಕೃತಿಯು ಸ್ವತಂತ್ರವಾದುದಲ್ಲ. ಭೌತಿಕ ಪ್ರಕೃತಿಯು ಭಗವಂತನ ಶಕ್ತಿಗಳಲ್ಲಿ ಒಂದು ಮತ್ತು ಇದು ಸಂಪೂರ್ಣವಾಗಿ ಅವನ ನಿಯಂತ್ರಣಲ್ಲಿದೆ. ಪರಮ ಪ್ರಭುವು ತಾನೇ ಏನನ್ನೂ ಮಾಡಬೇಕಿಲ್ಲವಾದರೂ ಅವನು ತನ್ನ ಅಪಾರ ಶಕ್ತಿಯಿಂದ ಎಲ್ಲವೂ ನಡೆಯುವಂತೆ ನಿರ್ದೇಶನ ನೀಡುತ್ತಿದ್ದಾನೆ. ಈ ಸೃಷ್ಟಿಯಲ್ಲಿ ಎಲ್ಲವೂ ಅವನ ನಿರ್ದೇಶನದಂತೆ ನಡೆಯುತ್ತದೆ.

ದೇವೋತ್ತಮ ಪರಮ ಪುರುಷನು ನಿರ್ಜೀವ ಶಿಲೆಯಲ್ಲ ಎಂದು ಶ್ರೀಲ ಪ್ರಭುಪಾದರು ತಮ್ಮ ಭಾವಾರ್ಥವನ್ನು ಆರಂಭಿಸುತ್ತಾರೆ. ಜನರು ಭಗವಂತನ ಆಧ್ಯಾತ್ಮಿಕ ರೂಪವನ್ನು ನೇರವಾಗಿ ಗ್ರಹಿಸಲಾರರು ಮತ್ತು ಶಿಲೆಯಿಂದ ಮಾಡಿದ ಯಾವುದಾದರೂ ರೂಪವನ್ನು ಭಕ್ತರು ಪೂಜಿಸುವುದನ್ನು ನೋಡಿ, `ಇದನ್ನೇ ಏನು ನೀವು ದೇವರು ಎನ್ನುವುದು? ಈ ಸತ್ತ ಶಿಲೆಯನ್ನು?’ ಎಂದು ನಿರ್ಧರಿಸಿಬಿಡುತ್ತಾರೆ. ನಿಜ, ನಾಸ್ತಿಕರಿಗೆ ದೇವರು ಮೃತ ಶಿಲೆಯಂತೆ, ಆದರೆ ಭಕ್ತರಿಗೆ ಅವನು ಪೂಜಿಸಲ್ಪಡುವ ದೇವೋತ್ತಮ. ಉತ್ತರ ಭಾರತದಲ್ಲಿ ಆಕ್ರಮಣಕಾರರು ದಾಳಿ ಮಾಡಿದ ದೇವಸ್ಥಾನಗಳಿವೆ. ಅವರು ದೇವರ ವಿಗ್ರಹದ ಮೇಲಿನ ಅಮೂಲ್ಯ ಆಭರಣಗಳಿಂದ ಆಕರ್ಷಿತರಾಗಿ ದಾಳಿ ನಡೆಸಿ ಅವುಗಳನ್ನು ಒಯ್ಯುವಾಗ, ಕೆಲವು ವೇಳೆ ಮೂರ್ತಿಗಳನ್ನು ಭಂಗ ಮಾಡಿದ್ದಾರೆ ಅಥವಾ ಕದ್ದೊಯ್ದಿದ್ದಾರೆ.

ಮೂರ್ತಿ ರೂಪದಲ್ಲಿ ದೇವರಿದ್ದಾನೆ ಮತ್ತು ಅವನು ಸರ್ವಶಕ್ತ ಎಂದಾದರೆ ಆಕ್ರಮಣಕಾರರು ಈ ರೀತಿ ಧ್ವಂಸ ಮಾಡಲು ಅವನು ಹೇಗೆ ಅವಕಾಶ ನೀಡಿದ ಎಂಬ ಗೊಂದಲ ಕೆಲವರಲ್ಲಿ ಉಂಟಾಗುತ್ತದೆ. ಇದಕ್ಕೇನು ಉತ್ತರ? ದೇವರನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಸುಲಭವಾಗಿ ತಪ್ಪು ದಾರಿಗಿಳಿಯಬಹುದು. ಬ್ರಿಟಿಷ್‌ ಆಳ್ವಿಕೆ ಸಮಯದಲ್ಲಿ ಸಮಾಜ ಸುಧಾರಕನೊಬ್ಬ ಇದ್ದ. ಅವನು ದೇವರಿದ್ದಾನೆ, ಆದರೆ ಅವನನ್ನು ಮಂದಿರಗಳಲ್ಲಿ ಪೂಜಿಸುವ ರೂಪದಲ್ಲಿ ಅಲ್ಲ ಎಂದು ಸಾರುವ ಆಂದೋಲನವನ್ನು ಆರಂಭಿಸಿದ. ಅವನು ಮೂರ್ತಿಯನ್ನು ದೇವರ ರೂಪವೆಂದು ಒಪ್ಪಿಕೊಳ್ಳಲಿಲ್ಲ. ಅವನ ತರ್ಕವೇನು? ಆ ರೂಪದಲ್ಲಿ ದೇವರು ಇದ್ದರೆ, ಅವನು ತನ್ನನ್ನು ತಾನು ಏಕೆ ರಕ್ಷಿಸಿಕೊಳ್ಳಲಿಲ್ಲ? ವೈಷ್ಣವರಾಗಿ ನಾವು ಈ ತರ್ಕವನ್ನು ಹೇಗೆ ಖಂಡಿಸುವುದು? ಅವನು ಏಕಕಾಲಕ್ಕೆ ಶಿಲೆ ಮತ್ತು ಶಿಲೆಯಲ್ಲ. ಭಕ್ತರಿಗೆ ಅವನು ಮೃತ ಶಿಲೆಯಲ್ಲ, ಅವನು ಪೂಜೆ ಸ್ವೀಕರಿಸುವ ದೇವೋತ್ತಮ. ಅದೇ ಭಗವಂತನ ಅಪಾರವಾದ, ಊಹಿಸಲಸಾಧ್ಯವಾದ ಶಕ್ತಿ.

ಕಾಟಾಚಾರ ಬೇಡ

ಮೂರ್ತಿ ಪೂಜೆ ಮಾಡುವಾಗ ನೀವು ಸರಿಯಾದ ಪ್ರಜ್ಞೆ ಇಲ್ಲದೆ, ಇದು ಮೂರ್ತಿ, ದೇವರಲ್ಲ, ಒಳ್ಳೆಯ ಹಾರವೇಕೆ, ಒಣಗಿದ ಹೂವು ಹಾಕಿದರೇನು ಎಂಬ ಧೋರಣೆಯಿಂದ ಇದ್ದರೆ ನೀವು ಎಂದಿಗೂ ಆಧ್ಯಾತ್ಮಿಕ ಪ್ರಗತಿ ಸಾಧಿಸಲಾರಿರಿ ಎಂದು ಶ್ರೀಲ ಪ್ರಭುಪಾದರು ಹೇಳಿದ್ದಾರೆ. ನಿಮಗೆ ಭಗವಂತನಲ್ಲಿ ನಂಬಿಕೆ ಇದ್ದು ಅವನು ಈ ರೀತಿ ಆವಿರ್ಭವಿಸಿದ್ದಾನೆ, ನಾನು ನನ್ನ ಭಕ್ತಿಯನ್ನು ಎಚ್ಚರಗೊಳಿಸಬೇಕು ಎಂದು ನೀವೆಂದುಕೊಂಡರೆ ಭಕ್ತಿ ಸೇವೆಯ ನಿಮ್ಮ ಪ್ರತಿಯೊಂದು ಹೆಜ್ಜೆಯೂ ಕೃಷ್ಣಪ್ರಜ್ಞೆಯಲ್ಲಿ ನಿಮ್ಮನ್ನು ಪ್ರಗತಿಯತ್ತ ಒಯ್ಯುತ್ತದೆ. ಎಲ್ಲ ಐಹಿಕ ಕಶ್ಮಲಗಳಿಂದ ಪೂರ್ಣವಾಗಿ ಶುದ್ಧಗೊಂಡ ಅನಂತರ ನೀವು ಸಾಕ್ಷಾತ್‌ ಕೃಷ್ಣನನ್ನು ಕಾಣುವಿರಿ.

ಚೈತನ್ಯ ಚರಿತಾಮೃತದಲ್ಲಿ `ಸ್ಥಾವರ ಜಂಗಮ ದೇಖೇ, ನ ದೇಖೇ ತಾರ ಮೂರ್ತಿ’ ಎಂದು ವಿವರಿಸಲಾಗಿದೆ – ಪರಿಪೂರ್ಣ ದೃಷ್ಟಿ ಉಳ್ಳ ಭಕ್ತನು ಜಗತ್ತಿನ ಯಾವ ವಸ್ತು ನೋಡಿದರೂ ಅದರಲ್ಲಿ ಕೃಷ್ಣನನ್ನು ಕಾಣುತ್ತಾನೆ. ಅವನು ಭಗವಂತನನ್ನು ಅವನ ವೈಭವ ಅಥವಾ ಅವನ ಸೃಷ್ಟಿಯಿಂದ ಬೇರ್ಪಡಿಸುವುದಿಲ್ಲ.

ಕೃಷ್ಣನಿಗೆ ಲೌಕಿಕ ಸ್ವರೂಪವಿಲ್ಲದಿದ್ದರೂ ಕೃಷ್ಣನ ಐಹಿಕ ಶಕ್ತಿಯ ಲೌಕಿಕ ರೂಪವು ಅವನ ಮತ್ತೊಂದು ರೂಪ ಎಂದು ಅರ್ಥ ಮಾಡಿಕೊಳ್ಳುವುದೇ ಭಗವಂತನ ಸಾಕ್ಷಾತ್ಕಾರದಲ್ಲಿ ಮೊದಲ ಹೆಜ್ಜೆ ಎಂದು ಶುಕದೇವ ಗೋಸ್ವಾಮಿ ಅವರು ವಿವರಿಸಿದ್ದಾರೆ. ಅವನ ಜ್ಞಾನದಂತೆ ಎಲ್ಲವೂ ನಡೆಯುತ್ತದೆ. ನೀವು ಏನೇ ಮಾಡಬೇಕೆಂದರೂ ನಿಮ್ಮ ಬುದ್ಧಿಯನ್ನು ಉಪಯೋಗಿಸುತ್ತೀರಿ. ಕೃಷ್ಣ ನಿಮಗೆ ಆ ಬುದ್ಧಿ ನೀಡಿದ್ದಾನೆ. ಈ ರೀತಿ ಭಗವಂತನು ನಮ್ಮ ಜೀವನದ ಪ್ರತಿ ಕ್ಷಣದಲ್ಲಿಯೂ ಕ್ರಿಯಾಶೀಲನಾಗಿದ್ದಾನೆ.

ಆದುದರಿಂದ ಪ್ರಭುಪಾದರು ಹೇಳುತ್ತಾರೆ, ಬುದ್ಧಿವಂತಿಕೆಯಿಂದ ಅವನ ವ್ಯಕ್ತಿ ರೂಪವನ್ನು ಗ್ರಹಿಸುವವರಿಗಿಂತ ಪರಮಸತ್ಯದ ನಿರಾಕಾರ ಕಲ್ಪನೆಯತ್ತ ಹೆಚ್ಚು ಒಲಿದವರು, ಹೆಚ್ಚು ತೊಂದರೆ ಪಡುತ್ತಾರೆ. ಬುದ್ಧಿ ಎಂದರೆ ಅಲ್ಲೊಬ್ಬ ವ್ಯಕ್ತಿ ಇರಬೇಕು, ಹೀಗಾಗಿ ಕೃಷ್ಣನು ಪರಮಪುರುಷ. ನಾವು ಅವನನ್ನು ನೋಡಲಾಗದಿರಬಹುದು, ಆದರೆ ನಮ್ಮ ಬುದ್ಧಿ ಉಪಯೋಗಿಸಿ ಅರ್ಥಮಾಡಿಕೊಳ್ಳಬಹುದು. ಅವನನ್ನು ನೋಡಬೇಕೆಂದರೆ ನೀವು ಸಿದ್ಧತೆ ಮಾಡಿಕೊಳ್ಳಬೇಕು. ಹೀಗಾಗಿ ಆ ಸಿದ್ಧತೆ ಎಂದರೆ ನೀವು ಇಡೀ ಜಗತ್ತಿನ ರೂಪದಲ್ಲಿ ಅವನ ಲೌಕಿಕ ಶಕ್ತಿಯ ಸ್ವರೂಪವನ್ನು ಮೊದಲು ನೋಡುವಿರಿ.

ಕಾಲಾನುಕ್ರಮೇಣ…

ಸಮಯವು ಕ್ರಮಿಸುತ್ತಿದ್ದಂತೆಯೇ ಅನೇಕ ಬದಲಾವಣೆಗಳೂ ಆಗುತ್ತವೆ. ನಮ್ಮ ಶರೀರಕ್ಕೆ ವಯಸ್ಸಾಗುತ್ತದೆ ಮತ್ತು ಒಂದು ದಿನ ಅಳಿದು ಹೋಗುತ್ತದೆ. ಎಲ್ಲವನ್ನೂ ಮುನ್ನಡೆಸುವ ವಿರಾಟ್‌ ಪುರುಷನ ಚಲನೆಯಿಂದ ಕ್ರಿಯಾಶೀಲನಾಗುವ ಕಾಲನಿಂದ ಇದು ಸಾಧ್ಯವಾಗಿದೆ. ಮೂರು ಗುಣಗಳ ಪರಸ್ಪರ ಕ್ರಿಯೆಯು ಎಲ್ಲ ಬದ್ಧಾತ್ಮಗಳ ಮೇಲೆ ಪರಿಣಾಮ ಬೀರುತ್ತದೆ.

ಈ ರೀತಿ, ಹೆಚ್ಚು ಕಡಮೆ ನಮ್ಮ ಶರೀರದಂತೆ ಇರುವ ವಿರಾಟ್‌ ರೂಪವನ್ನು ಭಗವಂತ ಹೊಂದಿದ್ದಾನೆ. ಅದೇ ಇಡೀ ವಿಶ್ವವಾಗಿದೆ. ಇವೆಲ್ಲ ಭಗವಂತನ ಮಹತ್ತ್ವವನ್ನು ಮೆಚ್ಚುವ ಅಂಶಗಳಾಗಿವೆ. ಆದರೆ ಕೆಲವರು ಆರಂಭದಲ್ಲಿಯಂತೂ ಮೆಚ್ಚುವುದಿಲ್ಲ. ಅವರಿಗಾಗಿ ಇಲ್ಲಿ ವಿವರ ನೀಡಲಾಗಿದೆ. ವಿರಾಟ್‌ ರೂಪ ಕುರಿತ ಧ್ಯಾನದಿಂದ ದೇವೋತ್ತಮ ಪರಮ ಪುರುಷನ ಶ್ರೇಷ್ಠತೆಯನ್ನು ಈ ಆರಂಭಿಕರು ಮೆಚ್ಚುತ್ತಾರೆ. ಭಕ್ತರಾಗಿ ನಾವು ವಿರಾಟ್‌ ರೂಪ ಕುರಿತು ಧ್ಯಾನಿಸುವುದಿಲ್ಲ. ಏಕೆಂದರೆ ನಾವು ಭಗವಂತನ ಮೂರ್ತಿಯ ಅಲೌಕಿಕ ರೂಪ ಅಥವಾ ಹರೇ ಕೃಷ್ಣದ ಅಲೌಕಿಕ ತರಂಗದ ಧ್ಯಾನವನ್ನು ಸುಲಭವಾಗಿ ಮಾಡಬಲ್ಲೆವು.

ಭಕ್ತನೊಬ್ಬನು ಭಗವಂತನ ಉಪಸ್ಥಿತಿಯನ್ನು ಗ್ರಹಿಸುವ ಅನೇಕ ವಿಧಾನಗಳನ್ನು ಅರ್ಥಮಾಡಿಕೊಳ್ಳುವಂತೆ ಅಂತಹ ಮೆಚ್ಚುಗೆಯಿಂದ ಅವನ ಕೃಷ್ಣ-ಭಕ್ತಿಯು ಎಚ್ಚರಗೊಳ್ಳುತ್ತದೆ ಮತ್ತು ಅಂತಹ ಮೆಚ್ಚುಗೆ ಸರಿಯಾಗಿ ನೆಲೆಯೂರಿದ ಮೇಲೆ ನಾಸ್ತಿಕರ ಯಾವುದೇ ವಾದವೂ ಅವನನ್ನು ಆಧ್ಯಾತ್ಮಿಕ ಪಥದಿಂದ ಬೇರ್ಪಡಿಸುವುದಿಲ್ಲ. ನೀವು ಎಲ್ಲವನ್ನೂ ಕೃಷ್ಣನ ಸಂಪರ್ಕದೊಂದಿಗೆ ನೋಡಿ. ನೀವು ವಿಶ್ವ ವ್ಯವಸ್ಥೆಯ ಅಧ್ಯಯನ ಮಾಡಿದರೆ ಇದು ವಿವರಣೆ. ಇದು ವಾಶ್ತವಾಂಶ, ಇಲ್ಲಿ ಯಾವುದೆ ಕಲ್ಪನೆ ಇಲ್ಲ.

ದೇವೋತ್ತಮನನ್ನು ಪೂಜಿಸಲು ಸರಿಯಾದ ಗ್ರಹಿಕೆ ಅಗತ್ಯ. ಭಗವಂತನು ಸದಾ ಅವನ ಆಧ್ಯಾತ್ಮಿಕ ರೂಪದಲ್ಲಿರುತ್ತಾನೆ. ಕೆಲವು ನಾಸ್ತಿಕರ ಸಿದ್ಧಾಂತ ಅಥವಾ ತತ್ತ್ವಗಳಿಂದ ತಪ್ಪುದಾರಿಯಲ್ಲಿ ಸಾಗದೆ ಜಗತ್ತಿನಲ್ಲಿ ನಡೆಯುತ್ತಿರುವುದರ ಬಗೆಗೆ ಪೂರ್ಣವಾಗಿ ಅರ್ಥವಾಗುತ್ತದೆ. ಭಕ್ತ ಮಾತ್ರ ಈ ಜಗತ್ತಿನಲ್ಲಿ ಭಗವಂತನ ಉಪಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲ. ಪ್ರಸ್ತುತ ಕಾಲದಲ್ಲಿ ಅವನ ಆಧ್ಯಾತ್ಮಿಕ ರೂಪವನ್ನು ನಾವು ನೋಡಲಾರೆವು. ಆದರೆ, ಅವನ ಬುದ್ಧಿ ಹೇಗೆ ಕ್ರಿಯಾಶೀಲವಾಗಿದೆ, ಪ್ರತಿಯೊಂದೂ ಅವನ ನಿರ್ದೇಶನದಂತೆ ಹೇಗೆ ನಡೆಯುವುದು ಇವನ್ನೆಲ್ಲ ಒಬ್ಬ ಭಕ್ತ ಅರಿತುಕೊಳ್ಳಬಲ್ಲ. ಅದೇ ಶುಕದೇವ ಗೋಸ್ವಾಮಿ ಅವರು ವಿವರಿಸಿರುವ ವಿರಾಟ್‌ ಪುರುಷನನ್ನು ಕುರಿತು ಅಧ್ಯಯನ ಮಾಡುವುದರ ಮಹತ್ತ್ವ.

ಈ ಲೇಖನ ಶೇರ್ ಮಾಡಿ