ಮಕ್ಕಳೇ, ಇದೊಂದು ಇಲಿಯ ಕಥೆ. ಯಾವ ರೂಪ ತಳೆದರೂ ಅದಕ್ಕೆ ಸಮಾಧಾನವಿಲ್ಲ. ಹೋಗಲಿ, ಸಹಾಯ ಮಾಡಿದವರಿಗೆ ಕೃತಜ್ಞರಾಗಿರಬೇಕಲ್ಲವೇ? ಅದೂ ಇಲ್ಲ, ಕುತೂಹಲವಾಗಿದೆಯೇ? ಮುಂದೆ ಓದಿ…
ಅದು ದಟ್ಟ ಅಡವಿ. ಅಲ್ಲೊಬ್ಬ ಋಷಿ. ಅವನು ಪ್ರತಿ ದಿನ ಮರದ ಕೆಳಗೆ ಕೂತು ಧ್ಯಾನದಲ್ಲಿ ಮಗ್ನನಾಗಿರುತ್ತಿದ್ದ. ಒಂದು ದಿನ “ಕಾಪಾಡಿ! ಕಾಪಾಡಿ!” ಎಂಬ ಗಾಬರಿಯ ದ್ವನಿ ಕೇಳಿ ಋಷಿ ಕಣ್ತೆರೆದ. ಅಲ್ಲೊಂದು ಇಲಿ ಭಯಭೀತವಾಗಿ ನಡುಗುತ್ತಿದೆ. “ಬೆಕ್ಕು ನನ್ನನ್ನು ಅಟ್ಟಿಸಿಕೊಂಡು ಬರುತ್ತಿದೆ. ನನ್ನನ್ನು ಕಾಪಾಡಿ” ಎಂದು ಅದು ಬೇಡಿತು.
ಯೋಗಿ ಅನೇಕ ವರ್ಷಗಳಿಂದ ತಪಸ್ಸು ಮಾಡುತ್ತಿದ್ದ. ಅವನಿಗೆ ಇದರಿಂದ ವಿಶೇಷ ಶಕ್ತಿ ಲಭಿಸಿತ್ತು. ಅವನು ಯಾರನ್ನಾದರೂ ಮಂತ್ರ ಶಕ್ತಿಯಿಂದ ಬದಲಿಸಿಬಿಡುತ್ತಿದ್ದ. ಅವನಿಗೆ ಇಲಿಯ ಸ್ಥಿತಿ ನೋಡಿ ಅಯ್ಯೋ ಎನಿಸಿತು. ಅವನು ಅದರತ್ತ ತನ್ನ ಕೈ ಚಾಚಿ, ಮಂತ್ರ ಪಠಿಸಿ, “ಹೋಗು, ಬೆಕ್ಕಾಗು!” ಎಂದ. ಪುಟ್ಟ ಇಲಿ ದೊಡ್ಡ ಬೆಕ್ಕಾಯಿತು! ಇದರಿಂದ ಖುಷಿಯಾದ ಅದು ಕಾಡಿನೊಳಗೆ ಓಡಿತು.

ಕೆಲವು ದಿನಗಳು ಕಳೆದವು. ಋಷಿಯು ಎಂದಿನಂತೆ ಅಂದೂ ಕೂಡ ಧ್ಯಾನದಲ್ಲಿದ್ದ. ಆಗ ಬಂದಿತು, ಆ ಬೆಕ್ಕು. ಅದು ಹೆದರುತ್ತ ಅಡಗಿಕೊಳ್ಳಲು ಜಾಗ ಹುಡುಕುತ್ತಾ ಮುನಿಯ ಬಳಿಗೆ ಬಂದಿತು. ಯೋಗಿಯ ಧ್ಯಾನ ಭಗ್ನವಾಯಿತು. ಬೆಕ್ಕನ್ನು ನೋಡಿ ಅವನೆಂದ, “ನಾನು ಬೆಕ್ಕನ್ನಾಗಿ ಮಾಡಿದ ಇಲಿ ನೀನೇ ಅಲ್ಲವೇ? ಈಗೇಕೆ ಬಂದೇ? ಏನು ಬೇಕು?”
ಬೆಕ್ಕು ಹೇಳಿತು, “ಕ್ಷಮಿಸಿ, ಕ್ರೂರ ನಾಯಿ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದೆ. ಏನಾದರೂ ಮಾಡಿ, ರಕ್ಷಿಸಿ!” ಯೋಗಿ ಯೋಚಿಸಿದ, “ನಾನೇನು ಮಾಡಬಲ್ಲೆ? ಹೂಂ, ನಿನ್ನನ್ನೂ ಭಯಂಕರ ನಾಯಿಯನ್ನಾಗಿ ಮಾಡುವೆ” ಎಂದು ತನ್ನ ಮಂತ್ರ ಶಕ್ತಿ ಪ್ರಯೋಗಿಸಿದ. ಬೆಕ್ಕು ದೊಡ್ಡ ನಾಯಿಯಾಗಿ ಕಾಡಿನೊಳಗೆ ಹೋಯಿತು. ಬೆಕ್ಕಿಗೆ ಸಹಾಯ ಮಾಡಿದ ಸಮಾಧಾನ ಯೋಗಿಗಾಯಿತು.
ಸ್ವಲ್ಪ ದಿನ ಕಳೆಯಿತು. ಯೋಗಿ ಧ್ಯಾನದಲ್ಲಿದ್ದ. ಆಗ ಪುನಃ ಅಲ್ಲಿಗೆ ಬಂದಿತು, ನಾಯಿಯಾಗಿದ್ದ ಬೆಕ್ಕು. “ಇನ್ನೇನು?” ಎಂದು ಯೋಗಿ ಅಸಹನೆಯಿಂದ ಕೇಳಿದ. ಇಲಿಯಿಂದ ಬೆಕ್ಕು, ಬೆಕ್ಕಿನಿಂದ ನಾಯಿಯಾಗಿದ್ದ ಅದು ಹೇಳಿತು, “ಕರುಣೆ ತೋರಿ. ಅರಣ್ಯದಲ್ಲಿರುವ ಹುಲಿಯು ನನ್ನ ಮೇಲೆ ಕಣ್ಣು ಹಾಕಿದೆ. ಸದಾ ನನ್ನ ಹಿಂದೆ ಓಡಿಬರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಓಡಿ, ಓಡಿ ಸುಸ್ತಾಗಿಬಿಟ್ಟಿರುವೆ.”
ಋಷಿಯು ಕರುಣಾಮೂರ್ತಿ. ಪುನಃ ತನ್ನ ಮಂತ್ರ ಶಕ್ತಿಯಿಂದ, “ಹುಲಿಯಾಗು!” ಎಂದು ಹೇಳಿದ. ಇಲಿಯಿಂದ ಬೆಕ್ಕಾಗಿ, ಅನಂತರ ನಾಯಿಯಾಗಿದ್ದ ಅದು ಈಗ ಭಯಂಕರ ಹುಲಿಯಾಯಿತು. ಅದಕ್ಕೆ ಸಮಾಧಾನವಾದಂತೆ ಕಾಣಲಿಲ್ಲ. ಅದು ಅಲ್ಲೇ ಕುಳಿತಿತ್ತು. “ಈಗ ನೀನು ಅತ್ಯಂತ ಪ್ರಬಲ ಪ್ರಾಣಿಯಾಗಿರುವೆ. ನಿನಗೆ ತೃಪ್ತಿಯಾಗಿರಬೇಕು. ಈಗ ಇನ್ನೇನು ಬೇಕು?” ಎಂದು ಯೋಗಿ ಕೇಳಿದ.
ಹುಲಿಯು ತನ್ನ ಹೊಸ ದೇಹವನ್ನು ನೋಡುತ್ತಾ ಆನಂದಿಸುತ್ತಿತ್ತು. ಪಟ್ಟೆಯ ಚರ್ಮವನ್ನು ನಾಲಗೆಯಲ್ಲಿ ನೆಕ್ಕುತ್ತಾ ಅರಚಿತು, “ಈಗ ನಿನ್ನನ್ನು ತಿನ್ನಬೇಕೆನಿಸಿದೆ!” ಹಾಗೆಂದು ಹೇಳುತ್ತಾ ಅದು ಯೋಗಿಯ ಮೇಲೆ ಎರಗಲು ಸನ್ನದ್ಧವಾಯಿತು. ಆದರೆ ಯೋಗಿ ಅದಕ್ಕಿಂತ ಚುರುಕಾಗಿದ್ದ. “ನೀನೊಬ್ಬ ಕೃತಜ್ಞಹೀನ. ಒಳ್ಳೆಯದಕ್ಕೆ ನೀನು ಅರ್ಹನಲ್ಲ. ಹೋಗು, ಪುನರ್ ಮೂಷಿಕೋ ಭವ! ನೀನು ಪುನಃ ಇಲಿಯಾಗು!” ಎಂದ.

ಇಲಿಯು ಬೆಕ್ಕಾಯಿತು. ಬೆಕ್ಕು ನಾಯಿಯಾಯಿತು. ನಾಯಿ ಹುಲಿಯಾಯಿತು. ಈಗ ಪುನಃ ಇಲಿಯಾಗಿ ಪೆಚ್ಚು ಮೊರೆಹಾಕಿಕೊಂಡು ಅಲ್ಲಿಂದ ಓಡಿ ಹೋಯಿತು.
ಇದರ ನೀತಿ ಇಷ್ಟೇ : ಮಾನವರಾಗಿ ನಾವು ಭಗವಂತನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದನ್ನು ಮರೆತು ಪ್ರಾಣಿಗಳ ಹಾಗೆ ಜೀವನ ನಡೆಸಿದರೆ, ಮತ್ತೆ ಪ್ರಾಣಿ ಜನ್ಮ ಪಡೆಯಬೇಕಾಗುತ್ತದೆ.






Leave a Reply