ಒಂದು ನದಿಯು ನಿರಂತರವಾಗಿ ಸಮುದ್ರದ ಕಡೆಗೆ ಹರಿಯುವಂತೆ ಭಕ್ತಿಯೋಗದ ನಿಯಂತ್ರಿತ ಆಚರಣೆಯಿಂದ ನಮ್ಮ ಪ್ರೀತಿಯು ಸಹಜವಾಗಿಯೇ ಕೃಷ್ಣನ ಕಡೆಗೆ ಹರಿಯುತ್ತದೆ.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರು
ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು 1972ರ ಜೂನ್
ತಿಂಗಳಿನಲ್ಲಿ ಸ್ಯಾನ್‌ಡಿಯಾಗೊದಲ್ಲಿ ನೀಡಿದ ದೀಕ್ಷಾ ಉಪನ್ಯಾಸ.
ಶ್ರೀ ಭಗವಾನುವಾಚ
ಮಯ್ಯಾಸಕ್ತ ಮನಾಃ ಪಾರ್ಥ ಯೋಗಂ ಯುಂಜನ್‌ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ॥

ದೇವೋತ್ತಮ ಪರಮ ಪುರುಷನು ಹೇಳಿದನು: “ಓ ಪೃಥಾ ಪುತ್ರನೇ ಕೇಳು. ನನ್ನಲ್ಲಿ ಆಸಕ್ತವಾದ ಮನಸ್ಸಿನಿಂದ ನನ್ನನ್ನೊಳಗೊಂಡ ಸಂಪೂರ್ಣ ಪ್ರಜ್ಞೆಯಲ್ಲಿ ಯೋಗಾಭ್ಯಾಸವನ್ನು ಮಾಡುವುದರಿಂದ, ನೀನು ನನ್ನನ್ನು ಸಂಪೂರ್ಣವಾಗಿಯೂ, ಸಂಶಯವಿಲ್ಲದಂತೆಯೂ ತಿಳಿದುಕೊಳ್ಳಬಹುದು.” (ಗೀತಾ: 7.1)
ಕೃಷ್ಣನು ಇಲ್ಲಿ ಪ್ರಸ್ತಾವಿಸಿರುವ ಯೋಗ ಪದ್ಧತಿಯು ಬಹಳ ಸರಳವೂ ಮತ್ತು ಮಹೋನ್ನತವೂ ಆದದ್ದು. ನೀವು ಕೇವಲ ಕೃಷ್ಣನನ್ನು ಕುರಿತು, ಅವನ ರೂಪವನ್ನು ಕುರಿತು ಯೋಚಿಸುವುದರಲ್ಲಿ ನಿಮ್ಮ ಮನಸ್ಸನ್ನು ತೊಡಗಿಸಬೇಕು ಅಷ್ಟೇ. ನೀವು ಅವನನ್ನು ಕುರಿತು ಹೇಗೆ ಯೋಚಿಸಬೇಕು? ಆಸಕ್ತಿಯಿಂದ. ನೀವು ಯಾರನ್ನಾದರೂ ಪ್ರೀತಿಸಿದರೆ, ನೀವು ಸದಾ ಅವರನ್ನು ನೋಡಲು ಇಷ್ಟಪಡುತ್ತೀರಿ. ನಿಮ್ಮ ಅನುರಕ್ತಿಯು ಎಷ್ಟು ಪ್ರಬಲವಾಗಿರುತ್ತದೆಂದರೆ ಅವರನ್ನು ನೀವು ನೋಡದಿದ್ದರೆ ತಳಮಳಿಸತೊಡಗುತ್ತೀರಿ. ವಿವಿಧ ಜನರಿಗೆ ವಿವಿಧ ರೀತಿಯ ಅನುರಕ್ತಿಗಳಿರುತ್ತವೆ. ಆದರೆ ಅನುರಕ್ತಿಯು ಸದಾ ಇರುತ್ತದೆ. ಯಾರೋ ಒಬ್ಬರಿಗೆ ನಾಯಿಯಲ್ಲಿ ಅನುರಕ್ತಿ ಇರಬಹುದು, ಮತ್ತೊಬ್ಬರಿಗೆ ದೇವರಲ್ಲಿ ಅನುರಕ್ತಿ ಇರಬಹುದು. ಆದರೆ ಅನುರಕ್ತಿಯಂತೂ ಇದ್ದೇ ಇರುತ್ತದೆ.
ದೇವರಲ್ಲಿ ನಾವು ಹೇಗೆ ಅನುರಕ್ತರಾಗಿರಬೇಕು ಎಂದು ಶ್ರೀಲ ರೂಪ ಗೋಸ್ವಾಮೀ ಅವರು ಬಹಳ ಸರಳವಾಗಿ ವಿವರಿಸಿದ್ದಾರೆ. “ನನ್ನ ಪ್ರೀತಿಯ ಪ್ರಭುವೆ, ಒಬ್ಬಳು ತರುಣಿಯನ್ನು ನೋಡಿದಾಗ ಒಬ್ಬ ತರುಣನಲ್ಲಿ ಕೂಡಲೇ ಅನುರಕ್ತಿಯು ಜಾಗೃತವಾಗುವಂತೆ ಅಥವಾ ಒಬ್ಬ ತರುಣನನ್ನು ನೋಡಿದಾಗ ಒಬ್ಬಳು ತರುಣಿಯು ಆಕರ್ಷಿತಳಾಗುವಂತೆ, ನಾನು ನಿನ್ನಲ್ಲಿ ಅನುರಕ್ತನಾಗುವಂತೆ ಅನುಗ್ರಹಿಸು” ಎಂದು ಅವರು ಹೇಳುತ್ತಾರೆ. ಈ ಬಗೆಯ ಅನುರಕ್ತಿಯು ಸಹಜವಾದದ್ದು. ಇದನ್ನು ಕಲಿಯಲು ಯಾರೂ ವಿಶ್ವವಿದ್ಯಾಲಯಕ್ಕೆ ಹೋಗಬೇಕಾಗಿಲ್ಲ. ಒಬ್ಬಳು ತರುಣಿಯನ್ನು ನೋಡುತ್ತಿದ್ದಂತೆಯೇ ಒಬ್ಬ ತರುಣನು ಯೋಚಿಸುತ್ತಾನೆ: “ಓಹ್, ಇಲ್ಲೊಬ್ಬಳು ಸೊಗಸಾದ ಚೆಲುವೆ ಇದ್ದಾಳೆ.” ತರುಣಿಯು ಯೋಚಿಸುತ್ತಾಳೆ: “ಓಹ್, ಇಲ್ಲೊಬ್ಬ ಸೊಗಸಾದ ಚೆಲುವ ಇದ್ದಾನೆ.” ಅದೇ ರೀತಿಯಲ್ಲಿ ನಾವೂ ಯೋಚಿಸಬೇಕು: “ಓಹ್ ಕೃಷ್ಣ ಇಲ್ಲಿದ್ದಾನೆ. ಇಲ್ಲಿ ಕೃಷ್ಣನನ್ನು ಕುರಿತ ಸಂಗತಿಗಳಿವೆ. ಇಲ್ಲಿ ಕೃಷ್ಣನ ದೇವಾಲಯವಿದೆ.”
ಇನ್ನೊಂದು ಉದಾಹರಣೆಯೆಂದರೆ, ಒಂದು ನದಿಯ ಪ್ರವಾಹದಂತೆ ಕೃಷ್ಣನೆಡೆಗೆ ನಮ್ಮ ಅನುರಕ್ತಿಯು ಹರಿಯಬೇಕು. ಒಂದು ನದಿಯು ತನ್ನಷ್ಟಕ್ಕೆ ತಾನೆ ಸಮುದ್ರದ ಕಡೆಗೆ ಹರಿಯುತ್ತದೆ. ಯಾವುದೇ ಕೃತಕ ಪ್ರಯತ್ನವಿಲ್ಲದೆ ನದಿಯು ಸ್ವಯಂಸ್ಫೂರ್ತಿಯಿಂದ ಸಮುದ್ರದ ಕಡೆಗೆ ಹರಿಯುವಂತೆ ನಮ್ಮ ಪ್ರೀತಿಯೂ ಸ್ವಯಂಸೂರ್ತಿಯಿಂದ ಕೃಷ್ಣ ಅಥವಾ ದೇವರ ಕಡೆಗೆ ಹರಿಯಬೇಕು. ಅದೇ ಯೋಗದ ಪರಿಪೂರ್ಣತೆ.
ಯೋಗ ಎಂದರೆ “ಜೋಡಿಸುವಿಕೆ”. ಪ್ರಾರಂಭದಲ್ಲಿ ಕೃಷ್ಣನೊಡನೆ ನಮ್ಮ ಜೋಡಣೆಯನ್ನು ನಾವು ಕೃತಕವಾಗಿ ಪುನರುಜ್ಜೀವಿಸಬಹುದು. ಆದರೆ ಸಮುದ್ರದೆಡೆಗೆ ನಿರಂತರವಾಗಿ ಹರಿಯುವ ನದಿಯಂತೆ ಯಾವುದೇ ತಡೆಯಿಲ್ಲದೆ ಈ ಜೋಡಣೆಯು ಸ್ವಯಂಸ್ಫೂರ್ತಿಯಿಂದ ಬಂದರೆ ಅದು ಯೋಗದಲ್ಲಿನ ಪರಿಪೂರ್ಣತೆಯಾಗುತ್ತದೆ. ಹರಿಯುವ ನದಿಯನ್ನು ಯಾರೂ ತಡೆಯಲಾರರು. ನದಿಯು ಏಕೆ ಸಮುದ್ರಕ್ಕೆ ಹೋಗುತ್ತದೆ? ಅದು ಕೇವಲ ನೈಸರ್ಗಿಕ ಕ್ರಿಯೆ. ಅದು ಏಕೆ ಅಲ್ಲಿಗೆ ಹೋಗುತ್ತದೆ ಎನ್ನುವುದಕ್ಕೆ ಕೃತಕ ಕಾರಣವೇನೂ ಇಲ್ಲ. ಅದೇ ರೀತಿಯಲ್ಲಿ, ಯಾವುದೇ ರೀತಿಯ ವೈಯಕ್ತಿಕ ಉದ್ದೇಶವೂ ಇಲ್ಲದೆ ಕೃಷ್ಣನನ್ನು ಕುರಿತ ನಮ್ಮ ಪ್ರೀತಿಯು ಆ ರೀತಿಯಲ್ಲಿ ಹರಿದರೆ, ನಾವು ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸಿರುತ್ತೇವೆ.
ದೇವರನ್ನು ಕುರಿತ ಸ್ವಯಂಸ್ಫೂರ್ತ ಪ್ರೇಮವು ಯಾವುದೇ ಬಾಹ್ಯ ಕಾರಣವನ್ನು ಅವಲಂಬಿಸುವುದಿಲ್ಲ. ಅದರ ಏಕಮೇವ ಕಾರಣವು ಪ್ರೇಮವೇ ಆಗಿದೆ. ಆದ್ದರಿಂದ ಅದನ್ನು ಅಹೈತುಕೀ ಎಂದು ಕರೆಯುತ್ತಾರೆ. ಅಹೈತುಕೀ ಎಂದರೆ “ಯಾವುದೇ ಕಾರಣ ಅಥವಾ ಉದ್ದೇಶವಿಲ್ಲದೆ” ಎಂದು ಅರ್ಥ. ಸಾಮಾನ್ಯವಾಗಿ ಜನರು ಒಂದು ವೈಯಕ್ತಿಕ ಉದ್ದೇಶದ ಈಡೇರಿಕೆಗಾಗಿ ದೇವಾಲಯಕ್ಕೆ ಅಥವಾ ಚರ್ಚಿಗೆ ಹೋಗುತ್ತಾರೆ. ಉದಾಹರಣೆಗೆ ಕ್ರೈಸ್ತರು ಚರ್ಚಿಗೆ ಹೋಗಿ, “ದೇವರೆ, ನಮ್ಮ ದೈನಂದಿನ ಆಹಾರವನ್ನು ಅನುಗ್ರಹಿಸು” ಎಂದು ಬೇಡುತ್ತಾರೆ. ಇದರ ಉದ್ದೇಶವು ಆಹಾರದ ಬಗೆಗಿರುವ ಆಸೆ. ಆದರೆ ದೇವರನ್ನು ಕೀರ್ತಿಸುವ ವಿನಾ ಬೇರೆ ಯಾವ ಉದ್ದೇಶವೂ ಇಲ್ಲದೆ ನೀವು ಚರ್ಚಿಗೆ ಹೋದರೆ, ಅದು ನಿಜವಾದ ಪ್ರೀತಿ. “ದೇವರು ನನಗೆ ಆಹಾರವನ್ನು ಕೊಡುತ್ತಾನೆ, ಆದ್ದರಿಂದ ನಾನು ಚರ್ಚಿಗೆ ಹೋಗುವೆ” ಎಂದು ಯೋಚಿಸುವುದು ಕೂಡ ಒಳ್ಳೆಯದೇ. ಆದರೆ ಈ ಪ್ರೇರೇಪಿತ ಧರ್ಮಶ್ರದ್ಧೆಯು ನಾಶವಾಗಿ ಹೋಗಬಹುದು. ಯಾವುದೋ ಲೌಕಿಕ ಪ್ರಯೋಜನಕ್ಕಾಗಿ ನಾವು ದೇವರನ್ನು ಸಮೀಪಿಸಿದರೆ, ಅವನಲ್ಲಿರುವ ನಮ್ಮ ನಂಬಿಕೆಯು ಯಾವುದೇ ಕ್ಷಣದಲ್ಲಿ ಭಗ್ನವಾಗಬಹುದು. ಆದ್ದರಿಂದ ಅದು ನಿಜವಾದ ದೈವ ಪ್ರೀತಿಯ ವೇದಿಕೆಯಲ್ಲ. ನಿಜವಾದ ಪ್ರೀತಿಯು ಯಾವುದೇ ವೈಯಕ್ತಿಕ ಉದ್ದೇಶವಿಲ್ಲದೆ ಇರುತ್ತದೆ.
ಇಂತಹ ಪ್ರೀತಿಯು ಅಪ್ರತಿಹತವಾಗಿಯೂ ಇರುತ್ತದೆ. ಅಂದರೆ ಅದನ್ನು “ತಡೆಯಲು ಸಾಧ್ಯವಾಗುವುದಿಲ್ಲ”. ದೇವರನ್ನು ಕುರಿತ ನಿಜವಾದ ಪ್ರೀತಿಯನ್ನು ಯಾವುದೇ ಲೌಕಿಕ ಪರಿಸ್ಥಿತಿಯಿಂದ ತಡೆಯಲಾಗುವುದಿಲ್ಲ. “ನಾನು ಬಡವನಾಗಿರುವುದರಿಂದ ಬಹಳ ಕಷ್ಟಪಟ್ಟು ಕೆಲಸ ಮಾಡಬೇಕು, ಆದ್ದರಿಂದ ಈಗ ನಾನು ದೇವರನ್ನು ಪ್ರೀತಿಸಲಾಗುವುದಿಲ್ಲ” ಎಂದು ಯಾರೂ ಹೇಳಬಾರದು. ಜನರು ಅನೇಕ ವೇಳೆ ಹಾಗೆ ಮಾತನಾಡುತ್ತಾರೆ: “ನಾನು ಕಾಯುತ್ತೇನೆ. ನನ್ನ ಬ್ಯಾಂಕಿನ ಖಾತೆಯಲ್ಲಿ ಲಕ್ಷಾಂತರ ರೂಪಾಯಿಗಳು ಜಮೆಯಾದ ಮೇಲೆ ನಾನು ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುತ್ತೇನೆ. ಈಗ ನಾನು ಹಣವನ್ನು ಸಂಪಾದಿಸುತ್ತೇನೆ.” ಇದು ಭಕ್ತಿಯಲ್ಲ. ಇದು ಕೃಷ್ಣನನ್ನು ಕುರಿತ ಅನುರಕ್ತಿಯಲ್ಲ.

ಇಲ್ಲಿ ಕೃಷ್ಣನು ತನ್ನ ಆಶ್ರಯದಲ್ಲಿ (ಮದ್ ಆಶ್ರಯಃ) ಯೋಗವನ್ನು ಅಭ್ಯಾಸ ಮಾಡಬೇಕು ಎಂದು ಹೇಳುತ್ತಾನೆ. ಇದರ ಅರ್ಥವೇನೆಂದರೆ ನಾವು ಕೃಷ್ಣನ ಅಥವಾ ಅವನ ಪ್ರತಿನಿಧಿಯ ಆಶ್ರಯಕ್ಕೆ ಹೋಗಬೇಕು ಮತ್ತು ಕೃಷ್ಣನನ್ನು ಕುರಿತ ಸ್ವಯಂಸ್ಫೂರ್ತ ಪ್ರೇಮವನ್ನು ಗಳಿಸಿಕೊಡುವಂತಹ ಯೋಗವನ್ನು ಅಭ್ಯಾಸ ಮಾಡಲು ಪ್ರಯತ್ನಿಸಬೇಕು. ಈಗ ನಮಗೆ ಕೃಷ್ಣನಲ್ಲಿ ಅನುರಕ್ತಿ ಇಲ್ಲ. ಆದ್ದರಿಂದ ಆ ಅನುರಕ್ತಿಯನ್ನು ಜಾಗ್ರತಗೊಳಿಸಲು ನಾವು ಅನುಸರಿಸಬೇಕಾದ ಕೆಲವು ನಿಯಂತ್ರಕ ತತ್ತ್ವಗಳು ಇವೆ. ಉದಾಹರಣೆಗೆ ನಾವು, “ನ್ಯಾಯಬಾಹಿರವಾದ ಕಾಮ ಕೂಡದು” ಎಂದು ಹೇಳುತ್ತೇವೆ. ವೈದಿಕ ಪದ್ಧತಿಯು, ವ್ಯಕ್ತಿಯೊಬ್ಬನು ವಿವಾಹಿತನಾಗಿ ಧಾರ್ಮಿಕ ತತ್ತ್ವಗಳ ಪ್ರಕಾರ ಜೀವನ ಮಾಡಬೇಕು ಎಂದು ಹೇಳುತ್ತದೆ. ಆಗ ಪತಿ ಮತ್ತು ಪತ್ನಿಯು ಉತ್ತಮ ಸಂತಾನವನ್ನು ಪಡೆಯುವ ಮೂಲಕ ತಮ್ಮ ಕಾಮಾಭಿಲಾಷೆಯನ್ನು ತೃಪ್ತಿಪಡಿಸಿಕೊಳ್ಳಬಹುದು. ಕಾಮದ ವಿರುದ್ಧ ಯಾವುದೇ ನಿಷೇಧವಿಲ್ಲ. ಅದಕ್ಕೆ ಅವಕಾಶವಿದೆ. ಆದರೆ ನ್ಯಾಯಬಾಹಿರವಾದ ಕಾಮ ಕೂಡದು. ನ್ಯಾಯಬಾಹಿರ ಕಾಮದಲ್ಲಿ ತೊಡಗುವುದೆಂದರೆ ಕಾಮದ ಬಗೆಗೆ ನಿಮಗಿರುವ ಆಸಕ್ತಿಯನ್ನು ನೀವು ಹೆಚ್ಚಿಸಿಕೊಂಡಿದ್ದೀರಿ. ಕೃಷ್ಣನ ಬಗೆಗಿನ ಆಸಕ್ತಿಯನ್ನಲ್ಲ. ಆದ್ದರಿಂದ ಅದು ನಿಷೇಧಿತವಾದದ್ದು.
ಹಾಗೆಯೇ ಮಾಂಸಭಕ್ಷಣೆಯೂ ನಿಷಿದ್ಧ. ಮಾಂಸ ಅಥವಾ ಮೀನು ಅಥವಾ ಮೊಟ್ಟೆ – ಯಾವುದೇ ಮಾಂಸಾಹಾರ ಆಹಾರ ಪದ್ಧತಿಯೆಂದರೆ, ನಾಲಗೆಯ ವಿಷಯದಲ್ಲಿನ ಅನುರಕ್ತಿ. ಮಾಂಸವನ್ನು ತಿನ್ನದಿದ್ದರೆ ಯಾರೂ ಸಾಯುವುದಿಲ್ಲ. ಅದು ಸತ್ಯಸಂಗತಿ. ನಾವು ಕಂದಮ್ಮಗಳಾಗಿದ್ದಾಗ ತಾಯಿಯ ಎದೆ ಹಾಲು ಅಥವಾ ಹಸುವಿನ ಹಾಲಿನ ಮೇಲೆ ಅವಲಂಬಿಸಿದ್ದೆವು. ಆದ್ದರಿಂದ ಹಸು ಕೂಡ ನಮ್ಮ ತಾಯಿ. ನಾವು ತಾಯಿಯ ಎದೆಹಾಲನ್ನು ಕುಡಿಯುವಂತೆಯೇ ಗೋಮಾತೆಯ ಹಾಲನ್ನೂ ಕುಡಿಯುತ್ತೇವೆ. ನೀವು ನಿಮ್ಮ ತಾಯಿಯನ್ನು ಕೊಲ್ಲಬಾರದು. ಅದು ಒಂದು ದೊಡ್ಡ ಪಾಪ. ಆದ್ದರಿಂದ ಮಾಂಸಭಕ್ಷಣೆಯು ನಿಷಿದ್ಧ. ಆದರೆ ಜನರು ಎಷ್ಟು ಪಾಪಪೂರಿತರಾಗಿದ್ದಾರೆಂದರೆ, “ನಾನು ಚಿಕ್ಕವನಾಗಿದ್ದಾಗ ಈ ಹಸು ನನಗೆ ಆಹಾರ ಒದಗಿಸಲು ಹಾಲಿನ ರೂಪದಲ್ಲಿ ತನ್ನ ರಕ್ತವನ್ನೇ ಧಾರೆಯೆರೆದಿತ್ತು. ಆದರೆ ನಾನು ಈಗ ದೊಡ್ಡವನಾಗಿರುವುದರಿಂದ ನಾನು ಎಷ್ಟು ಕೃತಘ್ನನಾಗಿದ್ದೇನೆಂದರೆ, ಅದನ್ನು ಕೊಂದು ಅದರ ಮಾಂಸವನ್ನು ತಿನ್ನಲು ಹೊರಟಿದ್ದೇನೆ” ಎಂದು ಅವರು ಪರಿಗಣಿಸುವುದಿಲ್ಲ. ಇದು ಆಧುನಿಕ ಶಿಕ್ಷಣದ ಪ್ರಗತಿ: ಜನರು ತಮ್ಮ ತಾಯಿಯನ್ನು ಕೊಲ್ಲುವುದು ಹೇಗೆ ಎಂದು ಕಲಿತಿದ್ದಾರೆ.
ಪ್ರತಿಯೊಂದು ಧರ್ಮದಲ್ಲಿಯೂ ಕೊಲ್ಲುವುದನ್ನು ನಿಷೇಧಿಸಲಾಗಿದೆ ಅಥವಾ ಬಹುಮಟ್ಟಿಗೆ ನಿಯಂತ್ರಿಸಲಾಗಿದೆ. ಕ್ರೈಸ್ತ ಧರ್ಮದಲ್ಲಿ “ಕೊಲ್ಲಬೇಡ” ಎಂಬ ದೈವಾಜ್ಞೆ ನಿಮಗಿದೆ. ಆದರೆ ಬಹುತೇಕ ಪ್ರತಿಯೊಬ್ಬನೂ ಈ ದೈವಾಜ್ಞೆಯನ್ನು ಉಲ್ಲಂಘಿಸುತ್ತಿದ್ದಾನೆ. ಹಾಗಾದರೆ ನೀವು ಕ್ರೈಸ್ತರು ಎಂದು ಹೇಳಿಕೊಳ್ಳುವುದಕ್ಕೆ ಹಕ್ಕು ಸಾಧನೆ ಏನಿದೆ? ಪ್ರಭು ಏಸುಕ್ರಿಸ್ತನು ನೀಡಿದ ಕಟ್ಟಳೆಯನ್ನು ನೀವು ಉಲ್ಲಂಘಿಸುವ ಹಾಗಿದ್ದರೆ ನೀವು ಕ್ರೈಸ್ತರೆಂದು ಹೇಗೆ ತಾನೆ ಹೇಳಿಕೊಳ್ಳುತ್ತೀರಿ? ಅದು ನಮ್ಮ ಪ್ರಶ್ನೆ. ಒಬ್ಬ ವ್ಯಕ್ತಿಯು ಕ್ರೈಸ್ತನಲ್ಲವಾದರೂ ಕೊಲೆ ಮಾಡುವುದು ಅತ್ಯಂತ ಪಾಪಕರ ಕೃತ್ಯ ಮತ್ತು ಅದನ್ನು ಸಾಧ್ಯವಾದ ಮಟ್ಟಿಗೆ ನಿವಾರಿಸಬೇಕು.

ಜೀವನದಲ್ಲಿ ನಿಮ್ಮ ಮೊಟ್ಟ ಮೊದಲ ಕೆಲಸವೆಂದರೆ ದೇವರೆಡೆಗೆ ಸ್ವಯಂಸ್ಫೂರ್ತ ಅನುರಕ್ತಿಯನ್ನು ನೀವು ವೃದ್ಧಿಸಿಕೊಳ್ಳಬೇಕು. ಅದು ಮಾನವ ಜನ್ಮದ ಪ್ರಾಥಮಿಕ ಕಾರ್ಯ. ಏಕೆಂದರೆ ಮಾನವ ಜನ್ಮದಲ್ಲಿ ಮಾತ್ರ ನೀವು ಅದನ್ನು ಮಾಡಬಲ್ಲಿರಿ ಮತ್ತು ಕೃಷ್ಣನೊಡನೆ ನಿಮ್ಮ ಆಸಕ್ತಿಯನ್ನು ನೀವು ವೃದ್ಧಿಸಿಕೊಳ್ಳುತ್ತಿದ್ದಂತೆಯೇ ನಿಮ್ಮ ಜೀವನ ಯಶಸ್ವಿಯಾಗುತ್ತದೆ. “ಯಶಸ್ವಿ” ಎಂದರೆ ನೀವು ಇನ್ನು ಮುಂದೆ ಯಾವುದೇ ಲೌಕಿಕ ಶರೀರಗಳನ್ನು ಸ್ವೀಕರಿಸಬೇಕಾಗುವುದಿಲ್ಲ. ನಿಮಗೆ ಆಧ್ಯಾತ್ಮಿಕ ದೇಹ ಸಿಗುತ್ತದೆ. ನೀವು ಕೃಷ್ಣನೆಡೆಗೆ ಭಗವದ್ಧಾಮಕ್ಕೆ ಮರಳಿ ಹೋಗುತ್ತೀರಿ. ಆದ್ದರಿಂದ ಕೃಷ್ಣನ ಬಗೆಗೆ ನಿಮ್ಮ ಅನುರಕ್ತಿಯನ್ನು ನೀವು ವೃದ್ಧಿಸಿಕೊಂಡರೆ ಅದರಿಂದ ಆಗುವ ಪ್ರಯೋಜನವೇನೆಂದರೆ ನಿಮ್ಮ ಜೀವನದ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ನೀವು ಕಂಡುಕೊಳ್ಳುತ್ತೀರಿ.
ಕೃಷ್ಣನ ಬಗೆಗೆ ನಿಮ್ಮ ಅನುರಕ್ತಿಯನ್ನು ವೃದ್ಧಿಸಿಕೊಳ್ಳಬೇಕೆಂದರೆ, ಪ್ರಾರಂಭದಲ್ಲಿ ನೀವು ಕೆಲವು ನಿಯಂತ್ರಕ ತತ್ತ್ವಗಳನ್ನು, ಕೆಲವು ನಿರ್ಬಂಧಗಳನ್ನು ಅನುಸರಿಸಬೇಕಾಗುತ್ತದೆ. ಉದಾಹರಣೆಗೆ, ಒಬ್ಬ ವೈದ್ಯನು ಚಿಕಿತ್ಸಾ ಕ್ರಮಗಳನ್ನು ನಿಗದಿಪಡಿಸುತ್ತಾನೆ: “ಇದನ್ನು ತಿನ್ನಬೇಡಿ. ಇದನ್ನು ಮಾಡಬೇಡಿ.” “ಇದನ್ನು ಮಾಡಿ” ಎಂದೂ ಅವನು ಹೇಳುತ್ತಾನೆ. ಅದೇ ರೀತಿಯಲ್ಲಿ ಕೃಷ್ಣಪ್ರಜ್ಞೆಯಲ್ಲೂ ಅನೇಕ ವಿಧಿ ನಿಷೇಧಗಳಿವೆ. ನಾವು ವಿಧಿಗಳನ್ನು ಸ್ವೀಕರಿಸಬೇಕು, ನಿಷೇಧಗಳನ್ನು ತೊರೆಯಬೇಕು (ಆನುಕೂಲಸ್ಯ ಸಂಕಲ್ಪಃ ಪ್ರಾತಿಕೂಲ್ಯಸ್ಯ ವರ್ಜನಂ). ಕೃಷ್ಣಪ್ರಜ್ಞೆಯನ್ನು ಅನುಕೂಲಕರವಾಗಿ ಬೆಳೆಸಿಕೊಳ್ಳುವುದು ಹೀಗೆ. ಕೃಷ್ಣನೆಡೆಗೆ ನಮ್ಮ ಅನುರಕ್ತಿಯನ್ನು ಜಾಗೃತಗೊಳಿಸುವಂತಹದನ್ನು ಮಾತ್ರ ನಾವು ಅಂಗೀಕರಿಸಬೇಕು, ಬೇರೆ ಎಲ್ಲವನ್ನೂ ತಿರಸ್ಕರಿಸಬೇಕು. ಆದ್ದರಿಂದ ಕೃಷ್ಣಪ್ರಜ್ಞೆಯಲ್ಲಿ ಪ್ರಗತಿಯನ್ನು ಸಾಧಿಸಲು ನ್ಯಾಯಬಾಹಿರವಾದ ಕಾಮವು ಅನುಕೂಲಕರವಲ್ಲವೆಂದರೆ ನೀವು ಅದನ್ನು ತಿರಸ್ಕರಿಸಬೇಕು. ಆ ವಿಷಯದಲ್ಲಿ ನೀವು ವಾದಮಾಡಲಾಗದು. ಅದು ನಿಮ್ಮ ನೆರವಿಗೆ ಬರಲಾರದು. ಅದೇ ರೀತಿಯಲ್ಲಿ ನೀವು ಮಾದಕ ವಸ್ತುಗಳನ್ನು, ಮಾಂಸಭಕ್ಷಣೆಯನ್ನು ಮತ್ತು ಜೂಜಾಟವನ್ನು ತಿರಸ್ಕರಿಸಬೇಕು. ನ್ಯಾಯಬಾಹಿರಕಾಮ, ಮಾಂಸಭಕ್ಷಣೆ, ಮಾದಕ ವಸ್ತು ಸೇವನೆ ಮತ್ತು ಜೂಜಾಟ – ಇವು ಪಾಪಪೂರಿತ ಜೀವನದ ನಾಲ್ಕು ಸ್ತಂಭಗಳು. ಪಾಪಪೂರಿತವಾದ ಜೀವನದ ಸೂರನ್ನು ಈ ನಾಲ್ಕು ಸ್ತಂಭಗಳು ಎತ್ತಿಹಿಡಿದಿವೆ. ಕೃಷ್ಣಪ್ರಜ್ಞೆಯ ಪ್ರಾರಂಭದಲ್ಲಿ, ಕೃಷ್ಣಪ್ರಜ್ಞೆಯನ್ನು ನಿಜವಾಗಿಯೂ ನೀವು ಗಂಭೀರವಾಗಿ ತೆಗೆದುಕೊಳ್ಳುವಂತಿದ್ದರೆ, ಪಾಪಪೂರಿತ ಜೀವನದ ಈ ನಾಲ್ಕು ಸ್ತಂಭಗಳನ್ನು ನೀವು ವರ್ಜಿಸಬೇಕು.

ಇಂದು ಕೆಲವು ಭಕ್ತರಿಗೆ ದೀಕ್ಷೆಯನ್ನು ನೀಡಲಾಗುತ್ತಿದೆ. ಇದರ ಅರ್ಥವೇನೆಂದರೆ ಅವರು ಕೃಷ್ಣಪ್ರಜ್ಞೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಿದ್ದಾರೆ. ಆದ್ದರಿಂದ ಕೃಷ್ಣಪ್ರಜ್ಞೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಬಯಸುವವರ ಆದ್ಯ ಕರ್ತವ್ಯವೆಂದರೆ ಪಾಪಪೂರಿತ ಜೀವನದ ಈ ನಾಲ್ಕು ಸ್ತಂಭಗಳನ್ನು ಒಡೆದುಹಾಕುವುದು. ಆಗ ಪಾಪಕ್ಕೆ ಅವಕಾಶವೇ ಇರುವುದಿಲ್ಲ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಂತೆ (7.28),
ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್ ।
ತೇ ದ್ವಂದ್ವ ಮೋಹ ನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾಃ ॥
“ಯಾರು ಪಾಪಕಾರ್ಯಗಳನ್ನು ತ್ಯಜಿಸಿದ್ದಾರೋ ಮತ್ತು ಕೇವಲ ಪುಣ್ಯಕಾರ್ಯಗಳಲ್ಲಿ ಮಗ್ನರಾಗಿದ್ದಾರೋ – ಅಂತಹ ವ್ಯಕ್ತಿಯು ಭ್ರಾಂತಿಯಿಂದ ಮುಕ್ತನಾಗುತ್ತಾನೆ ಮತ್ತು ಕೃಷ್ಣಪ್ರಜ್ಞೆಯಲ್ಲಿ ದೃಢವಾದ ನಂಬಿಕೆಯನ್ನು ಗಳಿಸುತ್ತಾನೆ.”

ಪುಣ್ಯಕಾರ್ಯಗಳು ಯಾವುವು? ಮೊದಲನೆಯದು ಯಜ್ಞ. ಅಂದರೆ ಒಂದು ಯಜ್ಞವನ್ನು ಮಾಡುವುದು. ಉದಾಹರಣೆಗೆ ಇಂದು ನಾವು ಒಂದು ಅಗ್ನಿಕಾರ್ಯವನ್ನು ಮಾಡುತ್ತಿದ್ದೇವೆ. ಇನ್ನೊಂದು ಪುಣ್ಯಕಾರ್ಯವೆಂದರೆ ಕೃಷ್ಣನ ಪ್ರಚಾರವನ್ನು ಹರಡುವುದಕ್ಕೆ ದಾನವನ್ನು ಕೊಡುವುದು. ಕೃಷ್ಣಪ್ರಜ್ಞಾ ಆಂದೋಲನವು ಪ್ರಚಾರವನ್ನು ಮಾಡುತ್ತಿದೆ. ಅದಕ್ಕೆ ನಮಗೆ ಹಣಬೇಕು. ಹಣವು ಕೃಷ್ಣನ ಶಕ್ತಿ. ಎಲ್ಲರಲ್ಲಿಯೂ ಕೃಷ್ಣನ ಹಣವಿದೆ. ಆ ಹಣದಲ್ಲಿ ಸ್ವಲ್ಪ ಭಾಗವನ್ನು ಕೃಷ್ಣನ ಸಲುವಾಗಿ ಅವರು ಎಷ್ಟು ಬೇಗ ಕೊಡುತ್ತಾರೋ ಅಷ್ಟೇ ಅವರಿಗೆ ಒಳ್ಳೆಯದು. ನಿಮ್ಮ ಹಣವನ್ನು ನಾನು ನ್ಯಾಯಬಾಹಿರವಾಗಿ ಇಟ್ಟುಕೊಂಡಿದ್ದೇನೆ ಎಂದುಕೊಳ್ಳಿ. ಅದನ್ನು ನಾನು ನಿಮಗೆ ಮರಳಿ ಕೊಟ್ಟುಬಿಟ್ಟರೆ, ನಾನು ನನ್ನ ಅಪರಾಧಿಕ ಚಟುವಟಿಕೆಗಳಿಂದ ಮುಕ್ತನಾಗುತ್ತೇನೆ. ಅಥವಾ ನಾನು ನಿಮ್ಮ ಜೇಬಿನಿಂದ ಏನನ್ನಾದರೂ ಕಳ್ಳತನ ಮಾಡಿದ್ದೇನೆ ಎಂದುಕೊಳ್ಳಿ. ಆಗ ನನ್ನ ಮನಃಸಾಕ್ಷಿಯು ಚುಚ್ಚುತ್ತಿರುತ್ತದೆ: “ಓಹ್, ಈ ಕಳ್ಳತನ ಒಳ್ಳೆಯದಲ್ಲ.” ಆದ್ದರಿಂದ ಸಾಧ್ಯವಾದಷ್ಟೂ ಬೇಗ ನಿಮಗೆ ಹಿಂತಿರುಗಿಸಿಬಿಟ್ಟರೆ ಅದು ಇತ್ಯರ್ಥವಾಗುತ್ತದೆ. ಆದರೆ ಅದನ್ನು ನಾನು ನನ್ನಲ್ಲಿಯೇ ಇಟ್ಟುಕೊಂಡುಬಿಟ್ಟರೆ ನಾನು ಒಬ್ಬ ಅಪರಾಧಿಯಾಗುತ್ತೇನೆ. ನನಗೆ ಶಿಕ್ಷೆ ವಿಧಿಸಲಾಗುತ್ತದೆ. ಅದೇ ರೀತಿಯಲ್ಲಿ ಕೃಷ್ಣನ ಹಣವನ್ನು ಇಟ್ಟುಕೊಂಡು, ಅದನ್ನು ಅವನಿಗೆ ಹಿಂತಿರುಗಿಸದೆ ಇರುವವರು ಅಪರಾಧಿಗಳಾಗಿದ್ದಾರೆ. ಅಂತಹವರಿಗೆ ಶಿಕ್ಷೆಯಾಗುತ್ತದೆ.
ಅವರಿಗೆ ಹೇಗೆ ಶಿಕ್ಷೆಯಾಗುತ್ತದೆ? ಅದನ್ನು ನಾವು ನೋಡಿದ್ದೇವೆ. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯಿತು. ಇದಕ್ಕಾಗಿ ಭಾರತದಲ್ಲಿರುವ ಪ್ರತಿಯೊಬ್ಬರೂ ತಮ್ಮ ತಮ್ಮ ಶಕ್ತ್ಯನುಸಾರ ದೇಣಿಗೆಯನ್ನು ಕೊಡಬೇಕಾಗಿತ್ತು. ಎಲ್ಲ ಶ್ರೀಮಂತರೂ ಐವತ್ತು ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು. ಕೋಟ್ಯಂತರ ರೂಪಾಯಿಗಳನ್ನು ಮದ್ದಿನಪುಡಿ ತಯಾರಿಸಲು ಸಂಗ್ರಹಿಸಿ ಬಳಸಲಾಯಿತು – ಸ್ವಾಹಾ!
ಕೃಷ್ಣನ ಹಣವನ್ನು ಇಟ್ಟುಕೊಂಡು, ಅದನ್ನು ಅವನಿಗೆ ಹಿಂತಿರುಗಿಸದೆ ಇರುವವರು ಅಪರಾಧಿಗಳಾಗಿದ್ದಾರೆ. ಅಂತಹವರಿಗೆ ಶಿಕ್ಷೆಯಾಗುತ್ತದೆ. ಅವರಿಗೆ ಹೇಗೆ ಶಿಕ್ಷೆಯಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಆದ್ದರಿಂದ ಒಬ್ಬ ವ್ಯಕ್ತಿಯು ಯಜ್ಞವನ್ನು ಮಾಡಬೇಕು ಮತ್ತು ಕೃಷ್ಣನಿಗಾಗಿ ದಾನವನ್ನು ಮಾಡಬೇಕು. ಅನಂತರದ್ದು ತಪಸ್ಯ. ತಪಸ್ಯ ಎಂದರೆ ಸ್ವಯಂಪ್ರೇರಣೆಯಿಂದ ಎಲ್ಲ ಬಗೆಯ ನಿಯಂತ್ರಕ ತತ್ತ್ವಗಳನ್ನು ಅಂಗೀಕರಿಸುವುದು. ಈಗ ನಾವು ಎಲ್ಲ ಬಗೆಯ ಅರ್ಥಹೀನ ಆಚರಣೆಗಳ ವ್ಯಸನಿಗಳಾಗಿದ್ದೇವೆ. ಆದರೆ ನೀವು ಅರ್ಥಹೀನ ಚಟುವಟಿಕೆಗಳನ್ನು ಎಲ್ಲಿಯವರೆಗೆ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಕೃಷ್ಣಪ್ರಜ್ಞೆಯನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ.

ಈ ರೀತಿಯಲ್ಲಿ ನಾವು ಕೃಷ್ಣನನ್ನು ಕುರಿತ ಅನುರಕ್ತಿಯನ್ನು ವರ್ಧಿಸಿಕೊಳ್ಳಬೇಕು. ನಾವು ಕೃಷ್ಣನನ್ನು ಕುರಿತ ಅನುರಕ್ತಿಯನ್ನು ವರ್ಧಿಸಿಕೊಂಡರೆ ಯೋಗದಲ್ಲಿ ಪರಿಪೂರ್ಣತೆಯನ್ನು ತಲಪುತ್ತೇವೆ. ಕೃಷ್ಣಪ್ರಜ್ಞೆಯು ಯೋಗಪದ್ಧತಿಯಲ್ಲಿ ಅತ್ಯುನ್ನತವಾದದ್ದು. ಭಗವದ್ಗೀತೆಯಲ್ಲಿ (6.47) ಕೃಷ್ಣನು ಹೇಳುವಂತೆ, ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ… ಸ ಮೇ ಯುಕ್ತ ತಮೋ ಮತಃ “ಎಲ್ಲ ಯೋಗಿಗಳಲ್ಲಿ ಯಾರು ಸದಾ ನನ್ನನ್ನು ಕುರಿತು ಯೋಚಿಸುತ್ತಿರುತ್ತಾನೋ ಅವನೇ ಶ್ರೇಷ್ಠ.” ನೀವು ಯಾರ ಬಗೆಗಾದರೂ ಅನುರಕ್ತರಾಗಿದ್ದರೆ ಸದಾ ಅವರನ್ನೇ ಕುರಿತು ಯೋಚಿಸುತ್ತಿರಬಹುದು. ಇಲ್ಲದಿದ್ದರೆ ನೀವು ಹಾಗೆ ಮಾಡಲಾರಿರಿ. ಅದು ಅಸಾಧ್ಯ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿ ಸದಾ ಅವರ ಚಿತ್ರ ಮತ್ತು ಆಕಾರವನ್ನು ನೋಡುತ್ತಿರುತ್ತೀರಿ ಯಾವಾಗಲೂ. ವೈದಿಕ ಸಾಹಿತ್ಯವಾದ ಬ್ರಹ್ಮಸಂಹಿತೆಯಲ್ಲಿ ಹೇಳಿರುವ ಹಾಗೆ, ಪ್ರೇಮಾಂಜನಚ್ಛುರಿತ ಭಕ್ತಿವಿಲೋಚನೇನ ಸಂತಃ ಸದೈವ ಹೃದಯೇಷು ವಿಲೋಕಯಂತಿ. ದೇವರನ್ನು ನಮ್ಮ ಆಂತರ್ಯದಲ್ಲಿ ನೋಡಲು ನಾವು ನಮ್ಮ ಕಣ್ಣುಗಳನ್ನು ಪರಿಶುದ್ಧ ಮಾಡಿಕೊಳ್ಳಬೇಕು. ದೇವರ ಪ್ರೀತಿಯೆಂಬ ಮುಲಾಮನ್ನು ಪ್ರತಿನಿತ್ಯ ನಮ್ಮ ಕಣ್ಣುಗಳಿಗೆ ಹಚ್ಚಿದರೆ ಆ ಪರಿಶುದ್ಧಿ ಕಾರ್ಯ ಸಾಧ್ಯವಾಗುತ್ತದೆ. ಒಬ್ಬ ವೈದ್ಯರು ನಮ್ಮ ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಯಾವುದೋ ಒಂದು ಮುಲಾಮನ್ನು ಸೂಚಿಸಬಹುದು. ಅದೇ ರೀತಿಯಲ್ಲಿ ಪ್ರೇಮಾಂಜನ, ಅಂದರೆ ದೇವರನ್ನು ಕುರಿತ ಪ್ರೀತಿ ಎಂಬ ಮುಲಾಮನ್ನು ಹಚ್ಚುವುದರಿಂದ ನಿಮ್ಮ ದೃಷ್ಟಿಯು ಸ್ಪಷ್ಟವಾದಾಗ, ನೀವು ದೇವರನ್ನು ನೋಡುತ್ತೀರಿ.

ಆದ್ದರಿಂದ, ಕೃಷ್ಣನನ್ನು ಪ್ರೀತಿಸುವುದು ಹೇಗೆ ಎಂದು ನೀವು ಅಭ್ಯಾಸ ಮಾಡಿಕೊಳ್ಳಬೇಕು. ಮೊದಲನೆಯದಾಗಿ ನೀವು ಪ್ರಾತಃಕಾಲದಲ್ಲಿ ಬೇಗ ಏಳಬೇಕು. ನಿಮಗೆ ಅದು ಇಷ್ಟವಾಗುವುದಿಲ್ಲ. ಆದರೆ “ಕೃಷ್ಣನನ್ನು ತೃಪ್ತಿಪಡಿಸಲು ನಾನು ಬೇಗ ಏಳುತ್ತೇನೆ” ಎಂದು ಯೋಚಿಸಿ. ಇದು ಪ್ರಾರಂಭ. ಅನಂತರ, “ಹರೇಕೃಷ್ಣ ಮಹಾಮಂತ್ರವನ್ನು ಹದಿನಾರು ಸುತ್ತು ನನ್ನ ಜಪಮಾಲೆಯಲ್ಲಿ ಜಪ ಮಾಡುತ್ತೇನೆ.” ನೀವು ಸೋಮಾರಿಗಳಾಗಿರಬಹುದು. ಅದನ್ನು ಮಾಡಲು ನಿಮಗೆ ಇಷ್ಟವಿಲ್ಲದೆ ಇರಬಹುದು. ಆದರೆ ಕೃಷ್ಣನನ್ನು ಪ್ರೀತಿಸಲು ನಿಮಗೆ ಇಷ್ಟವಿದ್ದರೆ ನೀವು ಅದನ್ನು ಮಾಡಲೇಬೇಕು. ನೀವು ಅದನ್ನು ಮಾಡಲೇಬೇಕು. ಪ್ರಾರಂಭದಲ್ಲಿ ಕೃಷ್ಣನನ್ನು ಪ್ರೀತಿಸುವುದು ಹೇಗೆ ಎಂದು ನೀವು ಕಲಿಯಬೇಕಾಗುತ್ತದೆ. ಆದರೆ ನಿಜವಾಗಿಯೂ ದೇವರನ್ನು ಪ್ರೀತಿಸುವ ಸ್ಥಿತಿಗೆ ನೀವು ಬಂದರೆ “ಕಲಿಯಬೇಕಾಗುತ್ತದೆ” ಎನ್ನುವ ಪ್ರಶ್ನೆಯೇ ಇಲ್ಲ. ನೀವು ಸ್ವಯಂಸೂರ್ತಿಯಿಂದ ನಿಯಂತ್ರಕ ತತ್ತ್ವಗಳನ್ನು ಅನುಸರಿಸುತ್ತೀರಿ. ಏಕೆಂದರೆ ಅಲ್ಲಿ ಪ್ರೀತಿಯಿದೆ.
ಕೃಷ್ಣನನ್ನು ಪ್ರೀತಿಸುವುದನ್ನು ಕಲಿಯುವುದೆಂದರೆ ನಮ್ಮ ದೈನಂದಿನ ಸಾಧಾರಣ ವಿದ್ಯಮಾನಗಳಲ್ಲಿ ಪ್ರೀತಿಯನ್ನು ಬೆಳೆಸಿಕೊಳ್ಳುವ ಹಾಗೆ. ನಾನು ಒಂದು ಹುಡುಗಿಯನ್ನು ಪ್ರೀತಿಸಿದರೆ ಅವಳಿಗೆ ಒಂದು ಹೂವು ಅಥವಾ ಒಂದು ಉಡುಗೊರೆಯನ್ನು ಕೊಡುತ್ತೇನೆ. ಇದು ಪ್ರೀತಿಯ ಆರು ವಿನಿಮಯಗಳಲ್ಲಿ ಒಂದು. ನಿಮ್ಮ ಪ್ರೀತಿಪಾತ್ರರಿಗೆ ಒಂದು ಉಡುಗೊರೆಯನ್ನು ನೀವು ಕೊಡಬೇಕಾಗುತ್ತದೆ. ನೀವು ಅವನಿಂದ ಉಡುಗೊರೆಗಳನ್ನೂ ಸ್ವೀಕರಿಸಬೇಕಾಗುತ್ತದೆ (ದದಾತಿ ಪ್ರತಿಗೃಹ್ಣಾತಿ). ಅನಂತರ ಗುಹ್ಯಮ್ ಆಖ್ಯಾತಿ ಪೃಚ್ಛತಿ: ಪ್ರೀತಿಪಾತ್ರರಿಗೆ ವ್ಯಕ್ತಿಯು ತನ್ನ ಮನಸ್ಸನ್ನು ತೆರೆಯುವುದು. ಗುಹ್ಯಮ್ ಎಂದರೆ “ಬಹಳ ರಹಸ್ಯವಾದ ಸಂಗತಿಗಳು”, ಆಖ್ಯಾತಿ ಎಂದರೆ “ಬಯಲು ಮಾಡುವುದು”. ನಿಮ್ಮ ಆಂತರ್ಯದಲ್ಲಿರುವ ಯೋಚನೆಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ನೀವು ಬಯಲು ಮಾಡಬೇಕು. ಅವನು ಅವನ ಆಂತರ್ಯದಲ್ಲಿರುವ ಯೋಚನೆಗಳನ್ನು ನಿಮಗೆ ಬಯಲು ಮಾಡುತ್ತಾನೆ. ಅನಂತರ ಭುಂಕ್ತೇ ಭೋಜಯತೇ ಚೈವ – ಪ್ರೀತಿಪಾತ್ರನಿಗೆ ತಿನ್ನಲು ಏನಾದರೂ ಕೊಡುವುದು ಮತ್ತು ಅವನಿಂದ ಆಹಾರವನ್ನು ಸ್ವೀಕರಿಸುವುದು. ಪ್ರೇಮವನ್ನು ವೃದ್ಧಿಸಿಕೊಳ್ಳಲು ಇವು ಆರು ವಿಧಾನಗಳು. ಈ ವಿಧಾನಗಳಲ್ಲಿ ನೀವು ಕೃಷ್ಣನೊಡನೆ ನಡೆದುಕೊಂಡರೆ ನೀವು ಅವನ ಬಗೆಗೆ ಪ್ರೀತಿಯನ್ನು ಬೆಳೆಸಿಕೊಳ್ಳುತ್ತೀರಿ.
ಈಗ ನಾವು ಕೃಷ್ಣನಿಂದ ಅನೇಕ ವಸ್ತುಗಳನ್ನು ಸ್ವೀಕರಿಸುತ್ತಿದ್ದೇವೆ. ಕೃಷ್ಣನು ನಮಗೆ ಎಲ್ಲವನ್ನೂ ಕೊಡುತ್ತಿದ್ದಾನೆ. ನಮ್ಮ ಎಲ್ಲ ಆವಶ್ಯಕತೆಗಳನ್ನೂ ಅವನು ಒದಗಿಸುತ್ತಿದ್ದಾನೆ. (ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್). ಹೂವುಗಳು, ಹಣ್ಣುಗಳು ಮತ್ತು ಧಾನ್ಯವನ್ನು ಒಂದು ಕಾರ್ಖಾನೆಯಲ್ಲಿ ತಯಾರಿಸಲು ಸಾಧ್ಯವಿಲ್ಲ. ಕೃಷ್ಣನು ಅವುಗಳನ್ನು ನಮಗೆ ಕೊಡುತ್ತಿದ್ದಾನೆ. ಹೀಗೆ ನಾವು ಕೃಷ್ಣನ ವೆಚ್ಚದಲ್ಲಿ ಜೀವಿಸುತ್ತಿದ್ದೇವೆ. ಆದ್ದರಿಂದ ಈ ಧಾನ್ಯಗಳನ್ನು ಬೇಯಿಸಿದ ಮೇಲೆ ಕೃಷ್ಣನಿಗೆ ಅರ್ಪಿಸದೆ ಇದ್ದರೆ ಅದು ಸಭ್ಯತೆಯ ಲಕ್ಷಣವೇ?
ಕೃಷ್ಣಪ್ರಜ್ಞಾ ಆಂದೋಲನದಲ್ಲಿ ನಾವು ಅಡುಗೆ ಪದಾರ್ಥಗಳನ್ನು ಸಿದ್ಧಪಡಿಸಿ ಕೃಷ್ಣನಿಗೆ ಅರ್ಪಿಸುತ್ತೇವೆ. ಅದರಲ್ಲಿ ತಪ್ಪೇನಿದೆ? ದುಷ್ಟರು ಹೇಳುತ್ತಾರೆ: “ಈ ಕೃಷ್ಣಪ್ರಜ್ಞೆಯ ಜನರು ವಿಧರ್ಮಿಗಳು. ಏಕೆಂದರೆ ಅವರು ಯಾವುದೋ ಒಂದು ಕಲ್ಲಿಗೆ ಆಹಾರವನ್ನು ಅರ್ಪಿಸುತ್ತಿದ್ದಾರೆ.” ನೋಡಿ! ಈ ದುಷ್ಟರಿಗೆ ಬುದ್ಧಿ ಕಡಮೆ. ದೇವರು ಆಹಾರವನ್ನು ಸೇವಿಸುತ್ತಾನೆ ಎಂದು ಅವರಿಗೆ ತಿಳಿದಿಲ್ಲ. ಕೃಷ್ಣನು ಭಗವದ್ಗೀತೆಯಲ್ಲಿ
ಹೇಳುವಂತೆ (9.26),
ಪತ್ರಂ ಪುಷ್ಷಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯುಪಹೃತಮ್ ಅಶ್ನಾಮಿ ಪ್ರಯತಾತ್ಮನಃ ॥

“ನನ್ನ ಭಕ್ತನೊಬ್ಬನು ಸಸ್ಯವರ್ಗಕ್ಕೆ ಸೇರಿದ ಧಾನ್ಯ, ಹಣ್ಣುಗಳು ಮತ್ತು ನೀರು ಅಥವಾ ಹಾಲನ್ನು ಕೊಟ್ಟರೆ ನಾನು ಸೇವಿಸುತ್ತೇನೆ. ಏಕೆಂದರೆ ಅವನು ಭಕ್ತಿ ಮತ್ತು ಪ್ರೀತಿಯಿಂದ ಅವುಗಳನ್ನು ನನ್ನೆಡೆಗೆ ತಂದಿದ್ದಾನೆ.” ಭಕ್ತನು ಯೋಚಿಸುತ್ತಾನೆ, “ಕೃಷ್ಣ ನೀನು ನನಗೆ ಅನೇಕ ಸೊಗಸಾದ ಆಹಾರ ವಸ್ತುಗಳನ್ನು ಕೊಟ್ಟಿದ್ದೀಯೆ. ನಾನು ಅವುಗಳನ್ನು ಬೇಯಿಸಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿದ್ದೇನೆ. ಮೊದಲು ನೀನು ಈ ಅಡುಗೆಗಳನ್ನು ಸ್ವೀಕರಿಸು.” ಇದು ಪ್ರೀತಿ.
ನಿಮ್ಮ ತಂದೆಯು ನಿಮಗೆ ಅನೇಕ ವಸ್ತುಗಳನ್ನು ಕೊಟ್ಟಿದ್ದಾನೆ ಎಂದಿಟ್ಟುಕೊಳ್ಳಿ. ಅವನಿಂದ ಉಪಕೃತನಾದ ಭಾವನೆ ನಿಮಗಿದೆ. ಆದ್ದರಿಂದ ನೀವು ಏನಾದರೂ ಅಡುಗೆ ಮಾಡಿದಾಗ ನೀವು ಅವನಿಗೆ ಅದನ್ನು ಮೊದಲು ನೀಡುತ್ತಾ ಹೀಗೆ ಹೇಳುತ್ತೀರಿ, “ನನ್ನ ಪ್ರಿಯ ತಂದೆಯೇ, ನಾನು ಇದನ್ನು ಅಡುಗೆ ಮಾಡಿದ್ದೇನೆ. ಇದು ಬಹಳ ಸೊಗಸಾಗಿದೆ. ಆದ್ದರಿಂದ ನೀವು ಇದನ್ನು ಮೊದಲು ಭುಂಜಿಸಿ.” ಆಗ ಅವನು ಉತ್ತರಿಸುತ್ತಾನೆ, “ಓಹ್ ಇದು ಬಹಳ ಸೊಗಸಾಗಿದೆಯೇ? ಆಗಲಿ ನನಗೆ ಸ್ವಲ್ಪ ಕೊಡು.” ಅವನು ನಿಮ್ಮ ವಿಷಯದಲ್ಲಿ ಬಹಳ ಸಂತುಷ್ಟನಾಗುತ್ತಾನೆ. ದಿಟದಲ್ಲಿ ನೀವು ಏನನ್ನು ಅಡುಗೆ ಮಾಡಿದ್ದೀರೋ ಅದು ಆಗಲೇ ತಂದೆಗೆ ಸೇರಿದ ವಸ್ತುವೇ ಆಗಿದೆ. ಆದ್ದರಿಂದ ನಿಜವಾಗಿಯೂ ನೀವು ಏನನ್ನೂ ಅವನಿಗೆ ಕೊಡಲಾಗುವುದಿಲ್ಲ. ಅದೇ ರೀತಿಯಲ್ಲಿ ಕೃಷ್ಣನಿಗೆ ಅರ್ಪಿಸಲು ನಿಮ್ಮಲ್ಲಿ ನಿಜವಾಗಿ ಏನೂ ಇಲ್ಲ. ಆದರೆ ನೀವು ಸ್ವಲ್ಪ ಬುದ್ಧಿವಂತರಾದರೆ, ಈಗಾಗಲೇ ಯಾವುದು ಅವನಿಗೆ ಸೇರಿದೆಯೋ ಅದನ್ನು ಮರಳಿ ಅವನಿಗೆ ಅರ್ಪಿಸುತ್ತೀರಿ. ಈ ರೀತಿಯಲ್ಲಿ ಅವನೊಡನೆ ಪ್ರೇಮವನ್ನು ಬೆಳೆಸಿಕೊಳ್ಳುತ್ತೀರಿ. ನೀವು ಒಬ್ಬ ದುಷ್ಟನಾಗಿ ಉಳಿದರೆ, ನಿಮ್ಮ ಮಾನವ ಜನ್ಮವು ಹಾಳಾಗುತ್ತದೆ. ಆದರೆ ನೀವು ಸ್ವಲ್ಪ ಬುದ್ಧಿವಂತರಾದರೆ ನಿಮ್ಮ ಜೀವನ ಯಶಸ್ವಿಯಾಗುತ್ತದೆ.

ದೇವರು ನಮಗೆ ದೈನಂದಿನ ಆಹಾರವನ್ನು ಕೊಡುತ್ತಿದ್ದಾನೆ. ಆದ್ದರಿಂದ ಅದನ್ನು ಮೊದಲು ಅವನಿಗೆ ಏಕೆ ಅರ್ಪಿಸಬಾರದು? ಅದು ಬುದ್ಧಿವಂತಿಕೆ. “ದೇವರು ನನಗೆ ಆಹಾರವನ್ನು ಕೊಡುತ್ತಿದ್ದಾನೆ. ಆದ್ದರಿಂದ ನಾನು ಅದನ್ನು ತಿನ್ನುತ್ತೇನೆ ಅಷ್ಟೇ. ತಿನ್ನುವುದಕ್ಕಷ್ಟೇ ನಾನು ಉದ್ದಿಷ್ಟನಾದವನು” ಎಂದು ಯೋಚಿಸುವುದು ಅಯೋಗ್ಯ ವರ್ತನೆಯಾಗುತ್ತದೆ. ಆದ್ದರಿಂದ ಏಕೆ ಅರ್ಪಿಸಬಾರದು? ದೇವರ ವಿಷಯದಲ್ಲಿ ನಾವು ಕೃತಜ್ಞತಾ ಭಾವನೆಯನ್ನು ತಾಳಬೇಕು. “ದೇವರು ನನಗೆ ಈ ಆಹಾರವನ್ನು ಕೊಟ್ಟಿದ್ದಾನೆ. ಆದ್ದರಿಂದ ಮೊದಲು ಅವನಿಗೆ ಆರ್ಪಿಸೋಣ. ಅನಂತರ ನಾನು ತಿನ್ನಬಹುದು.” ಈ ಯೋಚನೆಯಲ್ಲಿ ತಪ್ಪೇನಿದೆ? ಇದರಿಂದ ಏನು ನಷ್ಟ? ದೇವರು ನಮಗೆ ತಿನ್ನಲು ಏನನ್ನೋ ಕೊಟ್ಟಿದ್ದಾನೆ, ಆದ್ದರಿಂದ ನಾವು ತಿನ್ನುವ ಮೊದಲು ಅದನ್ನು ಅವನಿಗೆ ಅರ್ಪಿಸಬೇಕು ಎನ್ನುವುದು ಕೆಳದರ್ಜೆಯ ಮಾನವರಿಗೆ ತಿಳಿದೇ ಇಲ್ಲ. ಅಲ್ಲದೆ ನೀವು ಕೃಷ್ಣನಿಗೆ ಅಂದರೆ ದೇವರಿಗೆ ಏನನ್ನಾದರೂ ಅರ್ಪಿಸಿದರೆ ಅವನು ಅದನ್ನು ಸೇವಿಸುತ್ತಾನೆ, ಆದರೆ ಅನಂತರ ಎಲ್ಲವನ್ನೂ ನಿಮಗೇ ಪ್ರಸಾದವನ್ನಾಗಿ ಬಿಡುತ್ತಾನೆ. ಅದು ದೇವರ ಶಕ್ತಿ.
ಆದ್ದರಿಂದ ಭಕ್ತಿಯೋಗ ಅಥವಾ ಕೃಷ್ಣ ಪ್ರಜ್ಞೆಯು, ಕೃಷ್ಣನೊಡನೆ ನಿಮ್ಮ ಅನುರಕ್ತಿಯನ್ನು ವೃದ್ಧಿಸುವಂತಹ ಒಂದು ಪ್ರಕ್ರಿಯೆ. “ಕ್ರೈಸ್ತರು ಕೆಟ್ಟವರು, ಹಿಂದೂಗಳು ಒಳ್ಳೆಯವರು” ಎಂದು ನಾವು ಹೇಳುವುದಿಲ್ಲ. ಇಲ್ಲ, ನಾವು ಹಾಗೆ ಹೇಳುವುದಿಲ್ಲ. “ಈ ಮಾನವ ರೂಪದ ಜನ್ಮದಲ್ಲಿ ದೇವರನ್ನು ಪ್ರೀತಿಸುವುದು ಹೇಗೆ ಎಂದು ಕಲಿತುಕೊಳ್ಳಿ. ಈವರೆಗೆ ನೀವು ನಾಯಿಯನ್ನು ಪ್ರೀತಿಸಿದ್ದೀರಿ. ಈಗ ದೇವರನ್ನು ಪ್ರೀತಿಸಲು ಪ್ರಯತ್ನಿಸಿ” ಎಂದಷ್ಟೇ ನಾವು ಹೇಳುವುದು. ಇದು ನಮ್ಮ ಪ್ರಚಾರ. ನಾವು ಯಾರನ್ನೂ ಟೀಕಿಸುವುದಿಲ್ಲ. ವ್ಯಕ್ತಿಯು ದೇವರೆಡೆಗೆ ತನ್ನ ಪ್ರೀತಿಯನ್ನು ಬೆಳೆಸಿಕೊಂಡಿದ್ದಾನೆಯೇ ಎಂದು ನೋಡಲು ನಾವು ಬಯಸುತ್ತೇವೆ ಅಷ್ಟೆ. ನೀವು ಕ್ರೈಸ್ತನಾಗಿ, ಹಿಂದೂವಾಗಿ ಅಥವಾ ಮಹಮದೀಯನಾಗಿ ಅದನ್ನು ಮಾಡಬಹುದು. ಅದನ್ನು ನಾವು ಲಕ್ಷಿಸುವುದಿಲ್ಲ. ನಿಜವಾಗಿಯೂ ನೀವು ದೇವರನ್ನು ಪ್ರೀತಿಸುತ್ತಿದ್ದೀರಾ ಎಂದು ನೋಡಲು ನಾವು ಬಯಸುತ್ತೇವೆ. ನೀವು ಪ್ರೀತಿಸುತ್ತಿಲ್ಲದಿದ್ದರೆ, ಆಗ ನಾವು “ದಯವಿಟ್ಟು ಈ ರೀತಿಯಲ್ಲಿ ದೇವರನ್ನು ಪ್ರೀತಿಸಲು ಪ್ರಯತ್ನಿಸಿ” ಎಂದು ಹೇಳುತ್ತೇವೆ. ಅದು ಯಾವ ರೀತಿ?

ಶ್ರವಣಂ ಕೀರ್ತನಮ್ ವಿಷ್ಣೋಃ – ಕೇವಲ ಕೃಷ್ಣನನ್ನು ಕುರಿತು ಶ್ರವಣ ಮಾಡುವುದು ಮತ್ತು ಕೀರ್ತಿಸುವುದು. ಅದು ಬಹಳ ಕಠಿಣವೇ? ದೇವರನ್ನು ಪ್ರೀತಿಸುವುದು ಹೇಗೆ ಎಂದು ನೀವು ಇನ್ನೂ ಕಲಿತಿಲ್ಲದಿದ್ದರೆ ಈ ವಿಧಾನವನ್ನು ಅನುಸರಿಸಿ. ಈ ದೇವಸ್ಥಾನದಲ್ಲಿ ಬೇರೆ ಏನನ್ನೂ ಮಾಡದೆ ಕೇವಲ ಕೃಷ್ಣನನ್ನು ಕುರಿತು ನೀವು ಶ್ರವಣ ಮಾಡಿದರೂ ಸಾಕು ನಿಮ್ಮ ಜೀವನವು ಪರಿಪೂರ್ಣವಾಗುತ್ತದೆ.






Leave a Reply