ಕೃಷ್ಣ ಪಾಕಶಾಲೆ

ಪುಟಾಣಿಗಳಿಗೆ ಪ್ರಿಯವಾದ ಕಟ್ಲೆಟ್‌

ಮಕ್ಕಳಿಗೆ ತಿಂಡಿಯೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕಲು ತಿಂಡಿಯೆಂದರೆ ಇನ್ನೂ ಹೆಚ್ಚು ಖುಷಿ. ರುಚಿಯಾಗಿ  ಮತ್ತು ಬಿಸಿಯಾಗಿ ಏನಾದರು ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆ ಮಾಡಬೇಕೆನಿಸಿದರೆ ಬ್ರೆಡ್‌ ಕಟ್ಲೆಟ್‌, ಆಲೂ-ಪಾಲಕ್‌ ಕಟ್ಲೆಟ್‌, ಅವಲಕ್ಕಿ ಕಟ್ಲೆಟ್‌  ಹೀಗೆ ವಿವಿಧ ಬಗೆ ಬಗೆಯ ಕಟ್ಲೆಟ್‌ ಮಾಡಬಹುದು. ಭಕ್ತಿವೇದಾಂತ ದರ್ಶನದ ಓದುಗರಿಗೆ ಕಟ್ಲೆಟ್‌ ಮಾಡುವ ವಿಧಾನವನ್ನು ತಿಳಿಸಿದ್ದೇವೆ. ಈ ಎಲ್ಲವನ್ನೂ ತಯಾರಿಸಿ ಮನೆಯವರೊಂದಿಗೆ ಸೇವಿಸಿ.

ಆಲೂ ಪಾಲಕ್‌ ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು:

ಬೇಯಿಸಿದ ಆಲೂಗಡ್ಡೆ – 3

ಪಾಲಕ್‌ ಸೊಪ್ಪು – 2 ಕಟ್ಟು

ಕಡ್ಲೆಕಾಯಿ ಬೀಜದ ಪುಡಿ – 4 ಚಮಚ

ಕಡ್ಲೆಹಿಟ್ಟು – 4 ಚಮಚ

ಶುಂಠಿ – ಸ್ವಲ್ಪ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಗರಂ ಮಾಸಲ – ½ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಬ್ರೆಡ್‌ಕ್ರಮ್ಸ್‌ – 6 ಚಮಚ

ತುಪ್ಪ –  ಅಗತ್ಯವಿದ್ದಷ್ಟು

ಮಾಡುವ ವಿಧಾನ:

ಮೊದಲು ಪಾಲಕ್‌ ಸೊಪ್ಪನ್ನು ಬಿಡಿಸಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆದು ಚೆನ್ನಾಗಿ ಮಸೆದು ಇದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ, ಕೊತ್ತಂಬರಿ ಸೊಪ್ಪು, ಕಡ್ಲೆಕಾಯಿ ಬೀಜದ ಪುಡಿ, ಅಚ್ಚಖಾರದ ಪುಡಿ, ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಕಡ್ಲೆಹಿಟ್ಟು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ. ಇದನ್ನು ಕಟ್ಲೆಟ್‌ ಆಕಾರಕ್ಕೆ ತಟ್ಟಿ ಬ್ರೆಡ್‌ ಕ್ರಮ್ಸ್‌ ಮೇಲೆ ಉರುಳಿಸಿ ತವಾದಲ್ಲಿ ಎರಡು ಬದಿ ತುಪ್ಪ ಹಾಕಿ ಬೇಯಿಸಿದರೆ ಆಲೂ ಪಾಲಕ್‌ ಕಟ್ಲೆಟ್‌ ಸವಿಯಲು ಸಿದ್ಧ. ಇದನ್ನು ಸಾಸ್‌ ಜೊತೆ ಸವಿಯಿರಿ.

ವೆಜ್‌ ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ – 3

ಕ್ಯಾರೆಟ್‌ – 2

ಬ್ರೆಡ್‌ಕ್ರಮ್ಸ್‌ – 6 ಚಮಚ

ಮೈದಾ – 2 ಚಮಚ

ಅಕ್ಕಿಹಿಟ್ಟು – 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಹಸಿಮೆಣಸಿನಕಾಯಿ – 2

ಎಣ್ಣೆ – ಕರಿಯಲು

ಮಾಡುವ ವಿಧಾನ:

ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ. ಕ್ಯಾರೆಟ್‌ ಅನ್ನು ಸಣ್ಣದಾಗಿ ಕತ್ತರಿಸಿ ಬಟಾಣಿಯೊಂದಿಗೆ ಬೇಯಿಸಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಕ್ಯಾರೆಟ್‌, ಆಲೂಗಡ್ಡೆ, ಬಟಾಣಿ ಹಾಕಿ ನೀರು ಇಂಗುವವರೆಗೂ ಹುರಿಯಿರಿ.

ಅನಂತರ ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಒಲೆಯಿಂದ ಕೆಳಗಿಳಿಸಿ. ಒಂದು ಬಟ್ಟಲಿನಲ್ಲಿ ಮೈದಾ ಮತ್ತು ಅಕ್ಕಿ ಹಿಟ್ಟನ್ನು ಚಿಟಿಕೆ ಉಪ್ಪು ಮತ್ತು ನೀರು ಹಾಕಿ ತೆಳುವಾಗಿ ಕಲಸಿಕೊಳ್ಳಿ. ತರಕಾರಿ ಮಿಶ್ರಣವನ್ನು ಕಟ್ಲೆಟ್‌ಗಳನ್ನಾಗಿ ಮಾಡಿ ಈ ಮೈದಾ ಮಿಶ್ರಣದಲ್ಲಿ ಅದ್ದಿ ಆನಂತರ ಬ್ರೆಡ್‌ ಕ್ರಮ್ಸ್‌ನಲ್ಲಿ ಉರುಳಿಸಿ ಕಾದ ತವಾದ ಮೇಲೆ ಹಾಕಿ ಎರಡು ಕಡೆಯೂ ಎಣ್ಣೆ ಹಾಕಿ ಬೇಯಿಸಿ. ಇದನ್ನು ಪುದೀನ ಚಟ್ನಿಯೊಂದಿಗೆ ಸವಿಯಿರಿ.

ಮೊಳಕೆ ಹೆಸರು ಕಾಳು ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು:

ಮೊಳೆಕೆ ಬರಿಸಿದ ಹೆಸರು ಕಾಳು – 1 ½ ಕಪ್‌

ಹಸಿ ಬಟಾಣಿ – 1 ಚಮಚ

ಧನಿಯಾಪುಡಿ – ½  ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಕಡಲೆ ಹಿಟ್ಟು – ½ ಕಪ್‌

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಕರಿಯಲು

ಮಾಡುವ ವಿಧಾನ:

ಮೊಳಕೆ ಕಾಳು ಮತ್ತು ಬಟಾಣಿಯನ್ನು ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ. ಅನಂತರ ನೀರನ್ನು ಬಸಿದು ತರಿ-ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಧನಿಯಾಪುಡಿ, ಜೀರಿಗೆ ಪುಡಿ, ಕಡ್ಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ. ಇದನ್ನು ಗುಂಡಗೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಟೊಮೊಟೊ ಸಾಸ್‌ನೊಂದಿಗೆ ಸವಿಯಿರಿ.

ಬಾಳೆಕಾಯಿ ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು:

ಬಾಳೆಕಾಯಿ – 1

ಆಲೂಗಡ್ಡೆ – 2

ಹಸಿಬಟಾಣಿ – ½ ಕಪ್‌

ಕ್ಯಾರೆಟ್‌ ತುರಿ – ½ ಕಪ್‌

ಅಚ್ಚ ಖಾರದಪುಡಿ – 1 ½ ಚಮಚ

ಅಕ್ಕಿ ಹಿಟ್ಟು – 3 ಚಮಚ

ಕೊತ್ತಂಬರಿ ಸೊಪ್ಪು –  ಸ್ವಲ್ಪ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ –  ಕರಿಯಲು

ಮಾಡುವ ವಿಧಾನ:

ಆಲೂಗಡ್ಡೆ ಮತ್ತು ಬಾಳೆಕಾಯಿಯನ್ನು ಬೇಯಿಸಿ ಪುಡಿಮಾಡಿ. ಬಟಾಣಿಯನ್ನು ಬೇಯಿಸಿ ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿ. ಇದಕ್ಕೆ ಕ್ಯಾರೆಟ್‌ ತುರಿ, ಅಚ್ಚಖಾರದಪುಡಿ, ಅಕ್ಕಿಹಿಟ್ಟು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ. ಬೇಕಾದ ಆಕಾರಕ್ಕೆ ತಟ್ಟಿ ಕಾದ ಎಣ್ಣೆಯಲಿ ಕರಿಯಿರಿ.

ಬ್ರೆಡ್‌ ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು:

ಬ್ರೆಡ್‌ ಸ್ಲೈಸ್‌ – 6

ಆಲೂಗಡ್ಡೆ – 2

ಹಸಿ ಬಟಾಣಿ – ½ ಕಪ್‌

ಹಸಿ ಮೆಣಸಿನಕಾಯಿ – 3

ಅಚ್ಚಖಾರದ ಪುಡಿ – 1 ಚಮಚ

ಅರಿಶಿನ – 1 ಚಿಟಿಕೆ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಗರಂ ಮಸಾಲ – ½ ಚಮಚ

ಅಕ್ಕಿಹಿಟ್ಟು – 2 ಚಮಚ

ಸಣ್ಣ ರವೆ – 2 ಚಮಚ

ಸಾಸಿವೆ – ½ ಚಮಚ

ಕಡಲೆ ಬೇಳೆ – 1 ಚಮಚ

ಉದ್ದಿನ ಬೇಳೆ – 1 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಕರಿಯಲು

ಮಾಡುವ ವಿಧಾನ:

ಬಾಣಲೆಯಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ, ಅರಿಶಿನ ಹಾಕಿ ಬಾಡಿಸಿ. ಬೇಯಿಸಿದ ಆಲೂಗಡ್ಡೆ ಮತ್ತು ಬಟಾಣಿಯನ್ನು ಚೆನ್ನಾಗಿ ಮಸೆದು ಈ ಮಿಶ್ರಣಕ್ಕೆ ಸೇರಿಸಿ. ಬ್ರೆಡ್‌ ಅನ್ನು ನೀರಿನಲ್ಲಿ ಅದ್ದಿ ತತ್‌ಕ್ಷಣ ತೆಗೆದು ಆಲೂಗಡ್ಡೆಗೆ ಹಾಕಿ. ಅಚ್ಚ ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಇದನ್ನು ಕಟ್ಲೆಟ್‌ ಆಕಾರಕ್ಕೆ ತಟ್ಟಿ ಅಕ್ಕಿಹಿಟ್ಟು ಮತ್ತು ಸಣ್ಣ ರವೆಯಲ್ಲಿ ಅದ್ದಿ ಕಾದ ತವಾದ ಮೇಲೆ ಹಾಕಿ ಬೇಯಿಸಿದರೆ ಬ್ರೆಡ್‌ ಕಟ್ಲೆಟ್‌ ತಿನ್ನಲು ಸಿದ್ಧ.

ಈ ಉಪಾಯ ನಿಮಗೆ ತಿಳಿದಿರಲಿ

  1. ಮೊಸರು ಕಡೆದ ಮೇಲೆ ಅದರಿಂದ ಬೆಣ್ಣೆ ತೆಗೆಯುವ ಮೊದಲು ಕೈಗೆ ಹುಣಸೆ ಹಣ್ಣಿನ ರಸ ಹಚ್ಚಿಕೊಂಡರೆ ಬೆಣ್ಣೆ ನಿಮ್ಮ ಕೈಗೆ ಮೆತ್ತುವುದಿಲ್ಲ.
  2. ಬೇಳೆಯನ್ನು ಪ್ರೆಷರ್‌ ಕುಕ್ಕರ್‌ನಲ್ಲಿ ಬೇಯಿಸುವ ಮೊದಲು ಅದನ್ನು ಹುರಿದರೆ, ಬೇಳೆಗೆ ಹೊಸ ರುಚಿ ಬರುತ್ತದೆ.
  3. ಮೊಸರು ಸರಿಯಾಗಿ ಹೆಪ್ಪಾಗಿಲ್ಲದಿದ್ದರೆ ಆ ಪಾತ್ರೆಯನ್ನು ಬೆಚ್ಚಗಿನ ನೀರಿನಲ್ಲಿಟ್ಟು ಮುಚ್ಚಿ, 30 ನಿಮಿಷಗಳಲ್ಲಿ ಅದು ಚೆನ್ನಾಗಿ ಹೆಪ್ಪಾಗುತ್ತದೆ.
  4. ಫ್ರಿಡ್ಜ್‌ನಲ್ಲಿ ಹಳಸಿದ ವಾಸನೆ ಬರುತ್ತಿದ್ದರೆ, ಅದರ ಒಳಗೆ ಕೆಲವು ಕಡೆ ನಿಂಬೆಹಣ್ಣಿನ ಚೂರುಗಳನ್ನು ಇಟ್ಟರೆ ಕೆಲವೇ ಗಂಟೆಗಳಲ್ಲಿ ವಾಸನೆ ಮಾಯವಾಗುತ್ತದೆ.
  5. ಎಲೆ ಕೋಸು ಬೇಯಿಸುವಾಗ ಶುಂಠಿ ಹಾಕಿದರೆ ರುಚಿ ಹೆಚ್ಚುತ್ತದೆ.
ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi