ಶ್ರೀ ರಾಧಾ ಮದನಮೋಹನ

ಮಕ್ಕಳೇ ವೃಂದಾವನದ ಬಗೆಗೆ ಗೊತ್ತಲ್ಲಾ? ನಿಮ್ಮ ಪ್ರೀತಿಯ ಕೃಷ್ಣನು ತನ್ನ ಮಿತ್ರರೊಂದಿಗೆ ಆಡಿದ ಸ್ಥಳ ಅದು. ಅಲ್ಲಿ ಶ್ರೀ ಮದನ ಮೋಹನ ಎಂಬ ಸುಂದರ ಮಂದಿರವಿದೆ. ಈ ಮಂದಿರದ ಕತೆ ಸ್ವಾರಸ್ಯವಾಗಿದೆ.

ನೂರಾರು ವರ್ಷಗಳ ಹಿಂದೆ ಮಥುರಾದಲ್ಲಿ ಒಬ್ಬ ಬ್ರಾಹ್ಮಣನಿದ್ದ. ಒಂದು ದಿನ ಶ್ರೇಷ್ಠ ಸಂತರಾದ ಅದ್ವೈತ ಆಚಾರ್ಯರು ಬಂಗಾಳಕ್ಕೆ ಹೋಗುವ ಮುನ್ನ ಶ್ರೀ ಮದನ ಮೋಹನ ಮೂರ್ತಿಯನ್ನು ಆ ಬ್ರಾಹ್ಮಣನಿಗೆ ನೀಡಿ “ಭಗವಂತನನ್ನು ಚೆನ್ನಾಗಿ ನೋಡಿಕೋ, ಪೋಷಿಸು,” ಎಂದರು. ಅದಕ್ಕೆ ಆ ಬ್ರಾಹ್ಮಣನು, “ಪ್ರಭು, ಚಿಂತಿಸಬೇಡಿ. ಅವನು ನಮ್ಮ ಕುಟುಂಬದ ಭಾಗ. ಚೆನ್ನಾಗಿ ನೋಡಿಕೊಳ್ಳುತ್ತೇವೆ” ಎಂದು ಆಶ್ವಾಸನೆ ನೀಡಿದನು.

ಒಂದು ದಿನ ಶ್ರೀ ಚೈತನ್ಯ ಮಹಾಪ್ರಭುಗಳ ಸಹವರ್ತಿ ಶ್ರೀ ಸನಾತನ ಗೋಸ್ವಾಮಿ ಅವರು ಬ್ರಾಹ್ಮಣನ ಮನೆಗೆ ಬಂದರು. ಅಲ್ಲಿನ ದೃಶ್ಯ ನೋಡಿ ಅವರಿಗೆ ಗಾಬರಿಯಾಯಿತು. ಅಲ್ಲೇನಿತ್ತು? ಆ ಬ್ರಾಹ್ಮಣನ ಮಕ್ಕಳು ಶ್ರೀ ಮದನ ಮೋಹನ ಮೂರ್ತಿಯೊಂದಿಗೆ ಆಟವಾಡುತ್ತಿದ್ದರು!  ದೇವರ ವಿಗ್ರಹವನ್ನು ನೋಡಿಕೊಳ್ಳುವ ವಿಧಿ ವಿಧಾನವನ್ನು ಅವರು ಬ್ರಾಹ್ಮಣನಿಗೆ ಹೇಳಿಕೊಟ್ಟರು. “ಅವನು ದೇವೋತ್ತಮ ಪರಮ ಪುರುಷನೆಂದು ನಿನಗೆ ತಿಳಿಯದೆ? ಅವನೊಂದಿಗೆ ಮಕ್ಕಳು ಆಡಲು ಅವಕಾಶ ನೀಡಬಾರದು” ಎಂದು ಅವರು ಹೇಳಿದಾಗ, ಬ್ರಾಹ್ಮಣನು, “ನನಗೆ ಖಂಡಿತ ತಿಳಿದಿರಲಿಲ್ಲ, ಕ್ಷಮಿಸಿ” ಎಂದ. ಅನಂತರ “ದೇವರ ವಿಗ್ರಹದ ಜೊತೆ ಹಾಗೆಲ್ಲ ಆಟವಾಡಬೇಡಿ” ಎಂದು ಅವನು ತನ್ನ ಮಕ್ಕಳಿಗೆ ತಾಕೀತು ಮಾಡಿದ.

ಮದನ ಮೋಹನನಿಗೆ ಇದು ಇಷ್ಟವಾಗಲಿಲ್ಲ. ಅವನು ಸನಾತನ ಗೋಸ್ವಾಮಿಯವರ ಕನಸಿನಲ್ಲಿ ಕಾಣಿಸಿಕೊಂಡ. “ಆ ಬ್ರಾಹ್ಮಣನ ಮಕ್ಕಳ ಜೊತೆ ಆಡುವುದು ನನಗೆ ತುಂಬ ಪ್ರಿಯವಾಗಿತ್ತು. ನೀನು ನೀತಿ ನಿಯಮಗಳನ್ನು ಹಾಕಿರುವೆ. ನನಗೆ ಅದು ಸರಿಹೊಂದುತ್ತಿಲ್ಲ…” ಭಗವಂತನಿಗೆ ನೋವುಂಟುಮಾಡಿದ್ದಕ್ಕಾಗಿ ಸನಾತನ ಗೋಸ್ವಾಮಿ ಅವರು ದುಃಖಿತರಾದರು. “ಪ್ರಭು, ನನ್ನ ಅಪರಾಧವನ್ನು ಮನ್ನಿಸು” ಎಂದು ಬೇಡಿಕೊಂಡರು. ಇತ್ತ ಮದನ ಮೋಹನನು ಆ ಬ್ರಾಹ್ಮಣನ ಕನಸಿನಲ್ಲಿಯೂ ಕಾಣಿಸಿಕೊಂಡು , “ನಿನಗೆ ತುಂಬ ಮಕ್ಕಳಿದ್ದಾರೆ, ನೀನು ಅವರ ಪೋಷಣೆ ಮಾಡು. ಸನಾತನ ಗೋಸ್ವಾಮಿ ಇಲ್ಲಿಗೆ ಬಂದಾಗ ನನ್ನನ್ನು ಅವರೊಂದಿಗೆ ಒಯ್ಯುವಂತೆ ಹೇಳು” ಎಂದನು.

ಮರು ದಿನ ಸನಾತನ ಗೋಸ್ವಾಮಿ ಬಂದಾಗ ಬ್ರಾಹ್ಮಣನು ಭಗವಂತ ಕನಸಿನಲ್ಲಿ ಬಂದು ಹೇಳಿದ್ದನ್ನು ವಿವರಿಸಿದನು. ಮನೆ ಒಳಗಿನಿಂದ ಮದನ ಮೋಹನ ವಿಗ್ರಹವನ್ನು ತಂದು ಗೋಸ್ವಾಮಿ ಅವರಿಗೆ ನೀಡಲು ಮುಂದಾದ. ಆದರೆ ಗೋಸ್ವಾಮಿ ನಿರಾಕರಿಸಿದರು. “ನಾನು ಧ್ಯಾನಾಸಕ್ತ. ದೇವರಿಗೆ ನಾನೇನು ಅರ್ಪಿಸಬಲ್ಲೆ? ನಾನು ಒಣ ಚಪಾತಿಯಿಂದ ಬದುಕಿರುವೆ.” ಅದೇ ದಿನ ರಾತ್ರಿ ಗೋಸ್ವಾಮಿಯವರ ಕನಸಿನಲ್ಲಿ ಬಂದ ಮದನ ಮೋಹನನು “ನಿನ್ನೊಡನೆ ನನ್ನನ್ನು ಕರೆದುಕೊಂಡು ಬಾ” ಎಂದನು. ಅದರಂತೆ ಗೋಸ್ವಾಮಿಯವರು ಮದನ ಮೋಹನ ವಿಗ್ರಹವನ್ನು ತಂದು ತಮ್ಮ ಕುಟೀರದ ಬಳಿ ಮರದ ಕೆಳಗೆ ಇಟ್ಟರು. ಅವರು ಸದಾ ಭಗವಂತನ ಜಪ ಅಥವಾ ಪುಸ್ತಕ ರಚನೆಯಲ್ಲಿ ತೊಡಗಿರುತ್ತಿದ್ದರು. ಒಂದು ದಿನ ಎಂದಿನಂತೆ ಮದನ ಮೋಹನನಿಗೆ ಒಣ ಚಪಾತಿ ಅರ್ಪಿಸಿ ಪುಸ್ತಕ ಬರೆಯಲು ಕುಳಿತರು. ಆಗ ಭಗವಂತ ಕೇಳಿದ, “ಸನಾತನ, ಇದು ಒಣ ಚಪಾತಿ. ಸ್ವಲ್ಪ ಉಪ್ಪು ಹಾಕುವೆಯಾ?”  “ಪ್ರಭು, ಕ್ಷಮಿಸು. ನಾನು ಕೊಡಲಾರೆ! ಇಂದು ಉಪ್ಪು, ನಾಳೆ ಸಿಹಿ ಬೇಕೆಂದು ಕೇಳುವೆ. ಹಾಗೆ ಕೊಡಲಾಗದು. ನಾನು ವಯಸ್ಸಾದವ, ನನಗೆ ತುಂಬ ಬರೆಯುವ ಕೆಲಸವಿದೆ. ದಯೆಯಿಟ್ಟು ಈ ಚಪಾತಿಯನ್ನೇ ಸ್ವೀಕರಿಸು.” ಶ್ರೀ ಸನಾತನರು ಭಗವಂತನ ಶ್ರೇಷ್ಠ ಭಕ್ತರಾಗಿದ್ದರು. ಆದುದರಿಂದ ಹಾಗೆ ಹೇಳುವುದು ಸಾಧ್ಯವಿತ್ತು. ಭಗವಂತನು ನಗುತ್ತ ಆ ಒಣ ಚಪಾತಿಯನ್ನು ಸೇವಿಸಿದ.

ರಾಮದಾಸ ಕಪೂರ್‌ ಒಬ್ಬ ಶ್ರೀಮಂತ ವ್ಯಾಪಾರಿ. ಅವನು ಉಪ್ಪಿನ ಚೀಲಗಳನ್ನು ದೋಣಿಯಲ್ಲಿ ತುಂಬಿಕೊಂಡು ಆಗ್ರಾ ಕಡೆಗೆ ಹೋಗುತ್ತಿದ್ದ. ಅವನ ದೋಣಿಯು ಸನಾತನ ಗೋಸ್ವಾಮಿಯವರ ಕುಟೀರದ ಬಳಿ, ನದಿ ದಂಡೆಯ ಮರಳಿನಲ್ಲಿ ಸಿಕ್ಕಿಹಾಕಿಕೊಂಡಿತು. ಅವನು ಚಿಂತಿತನಾದ. ಆಗ ಗೋಪಾಲ ಬಾಲಕನೊಬ್ಬ ನದಿ ದಂಡೆಯಲ್ಲಿ ಕಾಣಿಸಿಕೊಂಡು, “ಚಿಂತಿಸಬೇಡ. ಈ ಗಿರಿಯ ಮೇಲೆ ಒಬ್ಬ ಸಂತನಿದ್ದಾನೆ. ಅವನು ನಿನಗೆ ಸಹಾಯ ಮಾಡುತ್ತಾನೆ” ಎಂದು ಹೇಳಿ ಮಾಯವಾದ. ವ್ಯಾಪಾರಿಗೆ ಅಚ್ಚರಿ. ಅವನು ಬೆಟ್ಟದ ಮೇಲೆ ಹೋಗಿ ಸನಾತನ ಗೋಸ್ವಾಮಿ ಅವರ ಬಳಿ ತನ್ನ ಕಷ್ಟ ಹೇಳಿಕೊಂಡ. “ನೀನು ಮದನ ಮೋಹನನನ್ನು ಪ್ರಾರ್ಥಿಸು. ಅವನು ನಿನಗೆ ಸಹಾಯ ಮಾಡುತ್ತಾನೆ” ಎಂದು ಅವರು ತಿಳಿಸಿದರು. ಅದರಂತೆ ಅವನು ಪ್ರಾರ್ಥನೆ ಸಲ್ಲಿಸಿದ. ಇದ್ದಕ್ಕಿದಂತೆ ಬಿರುಗಾಳಿ ಎದ್ದಿತು. ನದಿಯಲ್ಲಿ ನೀರಿನ ಮಟ್ಟ ಏರಿತು. ದೋಣಿ ಹೊರಬಂದಿತು. ಆ ವ್ಯಾಪಾರಿಗೆ ಸಂತೋಷವಾಯಿತು,  ಆಗ್ರಾದಿಂದ ಹಿಂತಿರುಗುವಾಗ ಮತ್ತೆ ಬರುವೆ ಎಂದು ಹೇಳಿ ಅವನು ಅಲ್ಲಿಂದ ಹೊರಟ. ಆಗ್ರಾದಲ್ಲಿ ತನ್ನ ಸಾಮಾನನ್ನು ಒಳ್ಳೆಯ ಬೆಲೆಗೆ ಮಾರಿ ಹೆಚ್ಚಿನ ಲಾಭ ಗಳಿಸಿದ. ವಾಪಸು ಬರುವಾಗ ಅವನು ಸನಾತನ ಗೋಸ್ವಾಮಿ ಅವರನ್ನು ಭೇಟಿ ಮಾಡಿದ. ಅಪಾರ ಸಂಪತ್ತನ್ನು ಅವರಿಗೆ ಅರ್ಪಿಸಲು ಮುಂದಾದ. ಆದರೆ ಅವರು, “ನನಗೆ ಇದರ ಅಗತ್ಯವಿಲ್ಲ. ಇದರಿಂದ ಮದನ ಮೋಹನನಿಗೆ ಸುಂದರ ಮಂದಿರ ನಿರ್ಮಿಸು” ಎಂದರು. ಅದರಂತೆ ವ್ಯಾಪಾರಿಯು ಆಕರ್ಷಕ ಮಂದಿರ ನಿರ್ಮಿಸಿ ಮದನ ಮೋಹನನನ್ನು ಅಲ್ಲಿ ಸ್ಥಾಪಿಸಿದ.

ಪುರಿಯ ರಾಜ ಪ್ರತಾಪರುದ್ರನಿಗೆ ಈ ಮಂದಿರದ ವಿಷಯ ತಿಳಿಯಿತು. ಅವನು ಲಲಿತಾ ಮತ್ತು ಶ್ರೀಮತಿ ರಾಧಾ ವಿಗ್ರಹಗಳನ್ನು ವೃಂದಾವನಕ್ಕೆ ಕಳುಹಿಸಿದ. ಆ ವಿಗ್ರಹಗಳನ್ನು ತನ್ನ ಎರಡು ಬದಿಯಲ್ಲಿ ಇರಿಸುವಂತೆ ಶ್ರೀ ಮದನ ಮೋಹನನು ಮಂದಿರದ ಪೂಜಾರಿಗೆ ತಿಳಿಸಿದ.

ಭಾರತದ ಮೇಲೆ ಮೊಗಲರ ದಾಳಿಯನ್ನು ನೀವು ಚರಿತ್ರೆಯಲ್ಲಿ ಓದಿರುವಿರಿ. ಆ ಸಂದರ್ಭದಲ್ಲಿ ಶ್ರೀ ಮದನ ಮೋಹನ ವಿಗ್ರಹವನ್ನು ರಕ್ಷಿಸುವುದು ಅಗತ್ಯವಾಗಿತ್ತು. ಆದುದರಿಂದ ಗ್ರಾಮದ ಜನರು ವಿಗ್ರಹವನ್ನು ಜೈಪುರ ಮತ್ತು ಅಲ್ಲಿಂದ ಕರೌಲಿಗೆ ಒಯ್ದರು. ಇಂದಿಗೂ ಅಲ್ಲಿ ಅವನಿಗೆ ಪೂಜೆ ಸಲ್ಲಿಸಲಾಗುತ್ತಿದೆ.

ಮೊಗಲರ ದಾಳಿಯಿಂದ ಮಥುರಾ ಮತ್ತು ವೃಂದಾವನದಲ್ಲಿ ಅನೇಕ ದೇವಸ್ಥಾನಗಳು ನಾಶವಾದವು. ಅವುಗಳಲ್ಲಿ ಮದನ ಮೋಹನ ಮಂದಿರವೂ ಒಂದು. ವಿಗ್ರಹಗಳನ್ನು ಮೊದಲೇ ರಕ್ಷಿಸಿದ್ದರಿಂದ ಅವುಗಳಿಗೆ ಅಪಾಯ ಉಂಟಾಗಲಿಲ್ಲ. ವೃಂದಾವನಕ್ಕೆ ಹೋದಾಗ ಶ್ರೀ ಮದನ ಮೋಹನ ಮಂದಿರ ದರ್ಶನವನ್ನು ಮಾಡಿಸಲು ನಿಮ್ಮ ಪೋಷಕರಿಗೆ ತಿಳಿಸಲು ಮರೆಯಬೇಡಿ.

ಈ ಲೇಖನ ಶೇರ್ ಮಾಡಿ