ಬಹು ಉಪಯೋಗಿ ಮೂಲಂಗಿ

ನೀವು ಇಷ್ಟಪಡುವ ತರಕಾರಿಗಳಲ್ಲಿ ಮೂಲಂಗಿಗೆ ಉನ್ನತ ಸ್ಥಾನ ನೀಡದಿರಬಹುದು. ಆದರೆ, ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭದ ವಿಷಯದಲ್ಲಿ ಮೂಲಂಗಿ ಎಲ್ಲ ತರಕಾರಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ನೀವು ಮೂಲಂಗಿಯನ್ನು ಹಸಿಯಾಗಿ ತಿನ್ನಿ ಅಥವಾ ತರಕಾರಿಯಿಂದ ಮಾಡಿದ ನಿಮ್ಮ ಆರೋಗ್ಯ ಪೂರ್ಣ ತಿನಿಸಿನ ಜೊತೆಗೆ ಸೇರಿಸಿ. ಹೇಗಾದರೂ ಸರಿ, ಪೌಷ್ಟಿಕಾಂಶ ಭರಿತ ಮೂಲಂಗಿಯು ನಿಮಗೆ ಅಸಂಖ್ಯ ಆರೋಗ್ಯ ಲಾಭವನ್ನು ನೀಡುತ್ತದೆ. ಆರೋಗ್ಯ ಭಾಗ್ಯದಲ್ಲಿ ಅಗ್ರಸ್ಥಾನ ಪಡೆದಿರುವ ಮೂಲಂಗಿಯ ಕೆಲವು ಲಾಭಗಳನ್ನು ನೋಡಿ, ನೀವು ಖಂಡಿತ ಚಕಿತರಾಗುವಿರಿ.

ಮೂಲಂಗಿಯಿಂದ ಮಾಡುವ ತಿನಿಸುಗಳನ್ನು ತಿಳಿಸಿದ್ದೇವೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಮೂಲಿ ಮೂಂಗ್‌ ದಾಲ್‌

ಬಿಳಿ ಮೂಲಂಗಿಯನ್ನು ರಾಜಸ್ಥಾನಿ ಅಡುಗೆಯಲ್ಲಿ  ಹೆಚ್ಚಾಗಿ ಬಳಸುತ್ತಾರೆ. ದೇಶದ ಇತರ ಭಾಗಗಳಲ್ಲಿ ಇದು ಪಚಡಿಗೆ ಬಳಸುವ ತರಕಾರಿಯಾಗಿದೆ. ಹೆಸರು ಬೇಳೆಯೊಂದಿಗೆ ಸೇರಿದಾಗ ಮೂಲಂಗಿಯು ತೀಕ್ಷ್ಣವಾದ ವಾಸನೆಯನ್ನು ನೀಡುತ್ತದೆ. ರಾಜಸ್ಥಾನದ ಇತರ ಸಾಂಪ್ರದಾಯಿಕ ತಿನಿಸುಗಳಂತೆ ಈ ದಾಲ್‌ಗೆ ಕೂಡ ತುಪ್ಪವನ್ನು ಸೇರಿಸುತ್ತಾರೆ. ದಾಲ್‌ಗೆ ಇನ್ನಷ್ಟು ರುಚಿ ನೀಡಲು ಕೆಲವರು ಅದಕ್ಕೆ ಮೂಲಂಗಿಯ ಎಳೆ ಎಲೆಗಳನ್ನು ಹಾಕುತ್ತಾರೆ. ನೀವೂ ಹಾಗೇ ಮಾಡಬಹುದು!

ಬೇಕಾಗುವ ಪದಾರ್ಥಗಳು

ಹೆಸರು ಬೇಳೆ – 1 ಕಪ್‌

ಸಣ್ಣಗೆ ಕತ್ತರಿಸಿದ ಮೂಲಂಗಿ – 1 ಕಪ್‌

ಜೀರಿಗೆ – 1/2 ಚಮಚ

ಅರಿಶಿನ – ಸ್ವಲ್ಪ

ವಾಂಗಿಭಾತ್‌ ಎಲೆ – 1

ಲವಂಗ – 2

ಹಸಿ ಮೆಣಸಿನಕಾಯಿ – 2

ತುರಿದ ಶುಂಠಿ – 1/2 ಚಮಚ

ಇಂಗು – 1 ಚಿಟಿಕೆ

ಕೆಂಪು ಮೆಣಸಿನಕಾಯಿ ಪುಡಿ – 1 ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ತುಪ್ಪ – 3 ಚಮಚ

ಉಪ್ಪು – ರುಚಿಗೆ

ಮಾಡುವ ವಿಧಾನ : ಬೇಳೆ, ಸಣ್ಣಗೆ ಕತ್ತರಿಸಿದ ಮೂಲಂಗಿ, ಅರಿಶಿನ, ಉಪ್ಪು ಮತ್ತು 3 ಕಪ್‌ ನೀರನ್ನು ಪ್ರಶರ್‌ ಕುಕ್ಕರಿನಲ್ಲಿ ಹಾಕಿ ಬೇಯಿಸಿ. ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ, ವಾಂಗಿಭಾತ್‌ ಎಲೆ, ಲವಂಗ, ಹಸಿ ಮೆಣಸಿನಕಾಯಿ, ಶುಂಠಿ, ಇಂಗು ಹಾಕಿ ಬಾಡಿಸಿ. ಅನಂತರ ಇದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಬೇಯಿಸಿದ ಬೇಳೆಯನ್ನು ಹಾಕಿ ಹತ್ತು ನಿಮಿಷ ಚೆನ್ನಾಗಿ ಕುದಿಸಿ. ಕೊನೆಯದಾಗಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಯಾದ ಮೂಲಿ ಮೂಂಗ್‌ ದಾಲ್‌ ಸವಿಯಲು ಸಿದ್ಧ. ಇದು ಬಿಸಿ ಅನ್ನ ಅಥವಾ ಚಪಾತಿ ಜೊತೆ ತಿನ್ನಲು ರುಚಿಯಾಗಿರುತ್ತದೆ.

ಮೂಲಿ ಪರೋಟ

ಬೇಕಾಗುವ ಪದಾರ್ಥಗಳು

ತುರಿದ ಮೂಲಂಗಿ – 1 ಕಪ್‌

ಗೋಧಿ ಹಿಟ್ಟು – 2 ಕಪ್‌

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಉಪ್ಪು – ರುಚಿಗೆ

ಎಣ್ಣೆ – 1/2  ಕಪ್‌

ಮಾಡುವ ವಿಧಾನ : ಮೊದಲು ಗೋಧಿ ಹಿಟ್ಟಿಗೆ ತುರಿದ ಮೂಲಂಗಿ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಅಗತ್ಯವಿದ್ದಷ್ಟು ನೀರನ್ನು ಸೇರಿಸಿ ಚಪಾತಿ ಹಿಟ್ಟಿನಂತೆ ಕಲೆಸಿಕೊಳ್ಳಿ. ಅನಂತರ ಇದನ್ನು ಚಪಾತಿಯಂತೆ ಲಟ್ಟಿಸಿ. ತವಾವನ್ನು ಒಲೆಯ ಮೇಲೆ ಇಟ್ಟು ಪರೋಟವನ್ನು ಹಾಕಿ ಮೇಲೆ ಎಣ್ಣೆ ಸವರಿ ಎರಡು ಕಡೆಯು ಕೆಂಪನೆ ಬೇಯಿಸಿ. ಸಾಮಾನ್ಯವಾಗಿ ಮೂಲಿ ಪರೋಟದ ಜೊತೆಗೆ ತಿನ್ನಲು ಗಟ್ಟಿ ಮೊಸರು ಮತ್ತು ಚಟ್ನಿಪುಡಿ ತುಂಬ ರುಚಿಯಾಗಿ ಇರುವುದು. ಇಷ್ಟ ಇರುವವರು ಇದಕ್ಕೆ ಜೀರಿಗೆ ಮತ್ತು ಅರಿಶಿನವನ್ನೂ ಸಹ ಸೇರಿಸಬಹುದು.

ಮೂಲಂಗಿಯಿಂದ ಆಗುವ ಉಪಯೋಗಗಳು

1.  ರಕ್ತದ ಒತ್ತಡ ನಿಯಂತ್ರಣ

ಮೂಲಂಗಿಯಲ್ಲಿ ಪೊಟ್ಯಾಸಿಯಂ ಸಂಪದ್ಭರಿತವಾಗಿದೆ. ಇದು ದೇಹದಲ್ಲಿನ ಸೋಡಿಯಂ-ಪೊಟ್ಯಾಸಿಯಂ ಸಮತೋಲನವನ್ನು ಕಾಪಾಡುತ್ತದೆ. ಇದರಿಂದ ರಕ್ತದ ಒತ್ತಡ ಹತೋಟಿಯಲ್ಲಿ ಇರುತ್ತದೆ.

2.  ಕೆಮ್ಮು, ಶೀತಕ್ಕೆ ರಾಮಬಾಣ 

ಸದಾ ಕೆಮ್ಮು, ಶೀತವಿದ್ದರೆ, ಮೂಲಂಗಿ ನಿಮಗೆ ವರದಾನ. ನಿಮ್ಮ ಆಹಾರದಲ್ಲಿ ಮೂಲಂಗಿಯನ್ನು ಸೇರಿಸಿಕೊಂಡು ನೋಡಿ, ಕೆಮ್ಮು, ಶೀತ ಮಾಯ! ಇದರ ಜೊತೆಗೆ ಮೂಲಂಗಿಯು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

3.  ಕಾಮಾಲೆಯಿಂದ ಚೇತರಿಕೆ 

ದೇಹದಿಂದ ವಿಷ ವಸ್ತುಗಳನ್ನು ಹೊರಹಾಕಲು ಮೂಲಂಗಿ ಒಂದು ಪ್ರಬಲ ಅಸ್ತ್ರ. ಇದು ನಿಮ್ಮ ಜಠರ ಮತ್ತು ಉದರವನ್ನು ಉತ್ತಮ ಸ್ಥಿತಿಯಲ್ಲಿಡಲು ನೆರವಾಗುತ್ತದೆ.

4. ಮಲಬದ್ಧತೆ ವಿರುದ್ಧ ಹೋರಾಟ  

ಅಧಿಕ ಪ್ರಮಾಣದಲ್ಲಿ ನಾರಿನ ಅಂಶ ಇರುವುದರಿಂದ ಮೂಲಂಗಿ ದೊಡ್ಡ ಕರುಳಿನಲ್ಲಿ ಸಿಕ್ಕಿಕೊಳ್ಳುವ ಆಹಾರ ಪದಾರ್ಥವನ್ನು ಹೊರದೂಡುತ್ತದೆ. ಇಷ್ಟೇ ಅಲ್ಲದೆ, ಜೀರ್ಣಕ್ರಿಯೆಗೆ ಅಗತ್ಯವಾದ ರಸಗಳನ್ನು ಸ್ರವಿಸಲು ನೆರವಾಗುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಪಿತ್ತರಸ ಒಸರುವಿಕೆಗೂ ನೆರವಾಗುತ್ತದೆ.

5.  ಆಸ್ತಮಾ ರೋಗಿಗಳಿಗೆ ಅನುಕೂಲ

ದೇಹದ ಅಂಗಾಂಗಗಳಲ್ಲಿ ರಕ್ತ ಕಟ್ಟಿಕೊಂಡು ತೊಂದರೆಗೆ ಒಳಪಡುವುದು ಉಂಟು. ಅದರ ನಿರೋಧ ಗುಣಗಳು ಮೂಲಂಗಿಯಲ್ಲಿದೆ. ಇದು ಮುಖ್ಯವಾಗಿ ಆಸ್ತಮಾ ರೋಗಿಗಳಿಗೆ ಹೆಚ್ಚು ಲಾಭಕಾರಿ. ಉಸಿರಾಟದ ವ್ಯವಸ್ಥೆಯ ಅಲರ್ಜಿಗಳ ವಿರುದ್ಧ ಇದು ಹೋರಾಡುತ್ತದೆ. ಮತ್ತು ಸೋಂಕುಗಳಿಂದ ಶ್ವಾಸೋಚ್ಛಾಸವನ್ನು ರಕ್ಷಿಸುತ್ತದೆ.

ಈ ಲೇಖನ ಶೇರ್ ಮಾಡಿ