ಅದೇಕೋ ರಾಗಿಯ ಬಗ್ಗೆ ಜನರಿಗೆ ಅಸಡ್ಡೆ. ರಾಗಿ ಆರೋಗ್ಯವರ್ಧಕ ಎಂದು ಗೊತ್ತಿದ್ದರೂ, ಅಕ್ಕಿಗೆ ಇರುವಷ್ಟು ಗೌರವ ರಾಗಿಗಿಲ್ಲ. ರಾಗಿ ಬಡವರ ಧಾನ್ಯ ಎಂದೇ ಕರೆಸಿಕೊಂಡಿದ್ದು ರಾಗಿಯ ಮಹತ್ತ್ವ ಜನರಿಗೆ ತಿಳಿದಿಲ್ಲ. ದಣಿವರಿಯದೆ ದುಡಿಯುವ ಗ್ರಾಮೀಣ ಪ್ರದೇಶದವರಿಗೆ ರಾಗಿ ದೈನಂದಿನ ಆಹಾರವಾದರೆ, ಪಟ್ಟಣವಾಸಿ ಮಧುಮೇಹಿಗಳಿಗೆ ಮತ್ತು ಕ್ಯಾಲ್ಸಿಯಂ ಕೊರತೆಯಿಂದ ಬಳಲುವವರಿಗೆ ರಾಗಿ ಊಟವೊಂದೇ ಅಲ್ಲದೆ ಔಷಧೋಪಚಾರವೂ ಆಗುತ್ತದೆ.
ಅದೇನೆ ಇರಲಿ, ರಾಗಿ ಒಂದು ಪೌಷ್ಟಿಕ ಆಹಾರ, ರಾಗಿಯಿಂದ ಮಾಡುವ ದೋಸೆ ತುಂಬಾ ರುಚಿ, ಹಾಗೆಯೇ ರಾಗಿಯ ಹುರಿಟ್ಟು ಕೂಡ ಮತ್ತೂ ಸಮೃದ್ಧ. ರಾಗಿ ತಂದೀರಾ… ಭಿಕ್ಷೆಗೆ ರಾಗಿ ತಂದೀರಾ…. ಎಂದು ದಾಸರು ಹಾಡಿದ್ದಾರೆ. ರಾಗಿಯ ಹಿಟ್ಟು ಸತ್ತ್ವಶಾಲಿ ಖಾದ್ಯ. ಹಿಟ್ಟಂ ತಿಂದಂ… ಬೆಟ್ಟಂ ಕಿತ್ತಿಟ್ಟಂ… ಎಂಬ ಗಾದೆಯೂ ಇದೆ.
ರಾಗಿಯಿಂದ ಮಾಡುವ ಬಗೆ ಬಗೆಯ ಅಡಿಗೆಗಳನ್ನು ನೀಡಿದ್ದೇವೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರು ಮಾಡಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ರಾಗಿ ಹುರಿಟ್ಟು
ಬೇಕಾಗುವ ಪದಾರ್ಥಗಳು :
ರಾಗಿ – 1 ಕೆ.ಜಿ.
ಹಾಲು – 3 ಚಮಚ
ತುಪ್ಪ – 2 ಚಮಚ
ಬೆಲ್ಲ – ರುಚಿಗೆ ತಕ್ಕಷ್ಟು
ಹಸಿ ತೆಂಗಿನಕಾಯಿ -1/4 ಗಿಟುಕು
ಮಾಡುವ ವಿಧಾನ : ರಾಗಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಒಂದು ಬಿಳಿಯ ಬಟ್ಟೆಯಲ್ಲಿ ನೀರನ್ನು ಬಸಿದು ಆಮೇಲೆ ಒಣಗಿಸಬೇಕು. ರಾಗಿ ಒಣಗಿದ ಮೇಲೆ ಒಲೆಯ ಮೇಲೆ ಬಾಣಲೆ ಇಟ್ಟು, ಒಂದು ಹಿಡಿಯಷ್ಟು ರಾಗಿಯನ್ನು ಹಾಕಿ ಹುರಿಯಿರಿ. ಈ ರೀತಿ ಹುರಿದಾಗ ರಾಗಿ ಅರಳಾಗುತ್ತದೆ. ಈ ರಾಗಿ ಅರಳನ್ನು ಮಿಕ್ಸರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.
ಈ ರೀತಿ ಮಾಡಿಕೊಂಡ ಹುರಿಟ್ಟನ್ನು ಒಂದು ಲೋಟದಷ್ಟು ತೆಗೆದುಕೊಳ್ಳಿ. ಈ ಹಿಟ್ಟಿಗೆ ಸಣ್ಣಗೆ ಕುಟ್ಟಿ ಪುಡಿ ಮಾಡಿದ ಬೆಲ್ಲ, 3 ಚಮಚದಷ್ಟು ಹಾಲು, 2 ಚಮಚ ತುಪ್ಪ, ತುರಿದ ಹಸಿ ತೆಂಗಿನಕಾಯಿ ಹಾಕಿ ಕಲೆಸಿದರೆ ರಾಗಿ ಹುರಿಟ್ಟು ಸವಿಯಲು ಸಿದ್ಧ.
ರಾಗಿ ಇಡ್ಲಿ
ಬೇಕಾಗುವ ಪದಾರ್ಥಗಳು :
ರಾಗಿ – 1 1/2 ಲೋಟ
ಉದ್ದಿನಬೇಳೆ – 3/4 ಲೋಟ
ಮೆಂತ್ಯ – 1 ಚಮಚ
ಅಡಿಗೆ ಸೋಡ – 1/4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಬೆಳಗ್ಗೆ ರಾಗಿ, ಉದ್ದಿನಬೇಳೆ ಮತ್ತು ಮೆಂತ್ಯವನ್ನು ಬೇರೆ ಬೇರೆಯಾಗಿ ನೆನೆಸಿಡಿ. ಸಾಯಂಕಾಲ ರಾಗಿ, ಉದ್ದಿನಬೇಳೆ ಮತ್ತು ಮೆಂತ್ಯವನ್ನು ಮಿಕ್ಸರ್‌ನಲ್ಲಿ ನುಣ್ಣಗೆ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ ಮುಚ್ಚಿಡಿ. ಮಾರನೇ ದಿನ ಬೆಳಗ್ಗೆ ರುಬ್ಬಿದ ಹಿಟ್ಟಿಗೆ ಉಪ್ಪು ಮತ್ತು ಅಡಿಗೆ ಸೋಡಾವನ್ನು ಹಾಕಿ ಚೆನ್ನಾಗಿ ಕಲೆಸಿ. ಅನಂತರ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ ಇಡ್ಲಿ ಹಿಟ್ಟನ್ನು ಹಾಕಿ, ಇಡ್ಲಿ ಪಾತ್ರೆಯಲ್ಲಿ (ಕುಕ್ಕರಿನಲ್ಲಿ) ಬೇಯಿಸಿದರೆ ಬಿಸಿಬಿಸಿಯಾದ ರಾಗಿ ಇಡ್ಲಿ ತಯಾರು. ಇದನ್ನು ಚಟ್ನಿಯೊಂದಿಗೆ ಸವಿಯಿರಿ.
ರಾಗಿ ದೋಸೆ
ಬೇಕಾಗುವ ಪದಾರ್ಥಗಳು :
ರಾಗಿ – 1 ಲೋಟ
ಉದ್ದಿನಬೇಳೆ – 1/4 ಲೋಟ
ಗೋಧಿ – 1/4 ಲೋಟ
ಹೆಸರುಬೇಳೆ – 1/4 ಲೋಟ
ಕಡಲೆಬೇಳೆ – 1 ಚಮಚ
ಮೆಂತ್ಯ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ರಾಗಿ ಮತ್ತು ಬೇಳೆಗಳನ್ನು ದೋಸೆ ಮಾಡುವ ಹಿಂದಿನ ರಾತ್ರಿ ನೆನೆಸಿಡಿ. ಮಾರನೇ ದಿನ ಬೆಳಗ್ಗೆ ಇದನ್ನೆಲ್ಲಾ ಮಿಕ್ಸರ್‌ನಲ್ಲಿ ಹಾಕಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ ಇಡಿ. 30 ನಿಮಿಷಗಳ ಅನಂತರ ಇದಕ್ಕೆ ಉಪ್ಪು ಹಾಕಿ ಕಲೆಸಿ. ಈ ಹಿಟ್ಟನ್ನು ದೋಸೆ ಕಾವಲಿಯ ಮೇಲೆ ಹಾಕಿ ಬೇಯಿಸಿದರೆ, ಬಿಸಿಯಾದ ರಾಗಿ ದೋಸೆ ತಯಾರು.
ರಾಗಿ ಹಲ್ವ
ತತ್ ಕ್ಷಣ ಸಿಹಿ ಅಡುಗೆ ಮಾಡಬೇಕೆ, ಈ ಹಲ್ವ ಮಾಡಿ.
ಬೇಕಾಗುವ ಪದಾರ್ಥಗಳು:
ರಾಗಿಹಿಟ್ಟು – 1/2 ಲೋಟ
ಸಕ್ಕರೆ – 1 ಲೋಟ
ಏಲಕ್ಕಿ – 2
ತುಪ್ಪ – 8 ಚಮಚ
ಗೋಡಂಬಿ – 15
ಮಾಡುವ ವಿಧಾನ : ಮೊದಲು ರಾಗಿ ಹಿಟ್ಟನ್ನು ನೀರಿನೊಂದಿಗೆ ಕಲೆಸಿ 10 ನಿಮಿಷ ಇಡಿ. ಅನಂತರ ದಪ್ಪ ತಳದ ಬಾಣಲೆಯಲ್ಲಿ ಕಲೆಸಿದ ಹಿಟ್ಟನ್ನು ಹಾಕಿ ಬೇಯಿಸಿ. ಇದಕ್ಕೆ ಸಕ್ಕರೆಯನ್ನು ಹಾಕಿ ಕಲಕುತ್ತಿರಿ. ತಳ ಅಂಟದಂತೆ ನೋಡಿಕೊಳ್ಳಿ. ಆಮೇಲೆ ಕುಟ್ಟಿ ಪುಡಿ ಮಾಡಿದ ಏಲಕ್ಕಿ ಮತ್ತು ತುಪ್ಪವನ್ನು ಹಾಕಿ ಹಲ್ವ ಹದಕ್ಕೆ ಬೇಯಿಸಿ. ಕೊನೆಯದಾಗಿ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ ತಿರುವಿದರೆ ರುಚಿಯಾದ ರಾಗಿ ಹಲ್ವ ಸಿದ್ಧ.
ರಾಗಿ ರೊಟ್ಟಿ
ಬೇಕಾಗುವ ಪದಾರ್ಥಗಳು:
ರಾಗಿ ಹಿಟ್ಟು – 1/2 ಕೆಜಿ
ಮಜ್ಜಿಗೆ – 2 ಲೋಟ
ಹಸಿಮೆಣಸಿನಕಾಯಿ – 10
ತೆಂಗಿನ ಕಾಯಿತುರಿ – 1/2 ಲೋಟ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ
ಮಾಡುವ ವಿಧಾನ : ರಾಗಿ ಹಿಟ್ಟಿಗೆ ಜರಡಿ ಆಡಿಸುವುದು ಉತ್ತಮ. ಅನಂತರ ಹಿಟ್ಟಿಗೆ ಸ್ವಲ್ಪ ನೀರು, ಮಜ್ಜಿಗೆ, ಉಪ್ಪು ಬೆರೆಸಿ ಕಲಸಿ 30 ನಿಮಿಷ ಹಾಗೇ ಇಡಿ. ಹಿಟ್ಟು ನೆನೆದುಕೊಂಡು ಮೃದು ಮಧುರವಾಗುತ್ತದೆ. ಆಮೇಲೆ, ತೆಂಗಿನಕಾಯಿ ತುರಿ, ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಹಿಟ್ಟಿಗೆ ಬೆರೆಸಿ. ಹಿಟ್ಟನ್ನು ಸಣ್ಣಸಣ್ಣ ಮುದ್ದೆಯಾಕಾರದ ಉಂಡೆಗಳನ್ನಾಗಿ ಮಾಡಿ. ಉಂಡೆಯ ಮೇಲೆ ಎರಡು ಚಮಚ ಎಣ್ಣೆ ಹಾಕಿ ಕೈಯಲ್ಲಿ ಚೆಂಡಿನ ರೀತಿ ಆಡಿಸಿ. ಹಿಟ್ಟಿನ ಉಂಡೆಯನ್ನು ಬಾಣಲೆ ಅಥವಾ ನಾನ್ ಸ್ಟಿಕ್ ಪ್ಯಾನ್‌ನಲ್ಲಿಟ್ಟು ತಟ್ಟಿಕೊಳ್ಳಿರಿ. ಜೋಡಿಸಿದ ನಾಕು ಬೆರಳ ಬೆನ್ನಿನಿಂದ ಹಿಟ್ಟು ತೆಳ್ಳಗೆ ತಟ್ಟಬೇಕು. ಈಗ ಬಾಣಲೆಯನ್ನು ಒಲೆಯ ಮೇಲಿಟ್ಟು ಬೇಯಿಸಿ. ಒಂದು ಚಮಚ ಎಣ್ಣೆ ಅಥವಾ ತುಪ್ಪವನ್ನು ರೊಟ್ಟಿಯ ಮೇಲೆ ಸಮನಾಗಿ ಹನಿಸಿರಿ. ಬಾಣಲೆಯ ಮೇಲೆ ಮುಚ್ಚಳ ಮುಚ್ಚಿಡಿ. ಹೀಗೆ 6 ರೊಟ್ಟಿಗಳನ್ನು ತಯಾರಿಸಬಹುದು. ಉಪ್ಪು, ಖಾರ, ತೆಂಗು, ಹದವಾಗಿ ಬೆರೆತಿದ್ದರೆ ನೆಂಚಿಕೆ ಪದಾರ್ಥಗಳ ಹಂಗಿರುವುದಿಲ್ಲ. ಒಂದು ಕಪ್ ಕೆನೆ ಮೊಸರಿನ ಜತೆ ಸೇವಿಸಿದರಂತೂ ತುಂಬಾನೇ ಚೆನ್ನಾಗಿರುತ್ತೆ.
ರಾಗಿ ಮುದ್ದೆ
ಬೇಕಾಗುವ ಪದಾರ್ಥಗಳು :
ರಾಗಿ ಹಿಟ್ಟು – 1 ಲೋಟ
ನೀರು – 2 ಲೋಟ
ಉಪ್ಪು – ರುಚಿಗೆ ತಕ್ಕಷ್ಟು
ಬೇಯಿಸುವ ವಿಧಾನ : ಮೊದಲು 2 ಲೋಟ ನೀರನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಕುದಿಯಲು ಇಡಿ. ಒಂದು ಚಿಕ್ಕ ಬಟ್ಟಲಿನಲ್ಲಿ 2 ಚಮಚದಷ್ಟು ರಾಗಿ ಹಿಟ್ಟನ್ನು ನೀರಿನಲ್ಲಿ ಕಲೆಸಿ ಕುದಿಯುವ ನೀರಿಗೆ ಹಾಕಿ.
ಈಗ ಕುದಿಯುವ ನೀರಿಗೆ ಒಂದು ಲೋಟ ರಾಗಿ ಹಿಟ್ಟನ್ನು ಹಾಕಿ ಉರಿಯನ್ನು ಸಣ್ಣ ಮಾಡಿ. ಹೀಗೆ 8 ರಿಂದ 10 ನಿಮಿಷ ಬೇಯಲು ಬಿಡಿ. ನೀರು ಉಕ್ಕಿದರೆ ಉರಿಯನ್ನು ಮತ್ತಷ್ಟು ಕಡಮೆ ಮಾಡಿ. 10 ನಿಮಿಷ ಆದ ಅನಂತರ ಹಿಟ್ಟಿನ ಪಾತ್ರೆಯನ್ನು ಕೆಳಗಿಳಿಸಿ ಹಿಟ್ಟು ಕೋಲಿನಿಂದ ಚೆನ್ನಾಗಿ ಕಲೆಸಿ. ಮುದ್ದೆಗಳಲ್ಲಿ ಗಂಟುಗಳಿಲ್ಲದಂತೆ ಹಿಟ್ಟು ಕೋಲನ್ನು ಚೆನ್ನಾಗಿ ತಿರುವುತ್ತಾ ನಿಮ್ಮ ಭುಜ ಬಲವನ್ನು ತೋರಿಸಿ.
ಮುದ್ದೆ ಮಾಡುವ ವಿಧಾನ: ಒಂದು ದೊಡ್ಡ ಚಮಚವನ್ನು ಒದ್ದೆ ಮಾಡಿಕೊಂಡು ಹಿಟ್ಟನ್ನು ಸಮನಾದ ಪ್ಲೇಟಿಗೆ ಹಾಕಿಕೊಳ್ಳಿ. ಪ್ಲೇಟ್ ಸಹ ಒದ್ದೆಯಾಗಿರಬೇಕು. ಈಗ ಕೈಯನ್ನು ಒದ್ದೆ ಮಾಡಿಕೊಂಡು ಗುಂಡಗೆ ಮುದ್ದೆಯನ್ನು ಮಾಡಿಕೊಳ್ಳಿ. ಮುದ್ದೆಯ ಮಧ್ಯದಲ್ಲಿ ಸಣ್ಣ ಹಳ್ಳ ಮಾಡಿ ಒಂದು ಚಮಚ ತುಪ್ಪ ಹಾಕಿದರೆ ಬಿಸಿಯಾದ ಮುದ್ದೆ ತಯಾರು. ಇದನ್ನು ಸೊಪ್ಪಿನ ಸಾರಿನೊಂದಿಗೆ ಸವಿಯಿರಿ.