ರಂಗನಾಥ ಸ್ವಾಮಿ ದೇವಸ್ಥಾನ, ಕಲ್ಕುಂಟೆ

ಬೆಂಗಳೂರಿನ ಕೆ.ಆರ್‌. ಪುರಂನಿಂದ ವೈಟ್‌ಫೀಲ್ಡ್‌ನತ್ತ ಸಾಗುವ ರಸ್ತೆಯಲ್ಲಿ ನೇರವಾಗಿ ಸಾಗಿ, ಚಿಕ್ಕ ತಿರುಪತಿ ರಸ್ತೆಯನ್ನು ತಲಪುತ್ತೀರಿ. ಹೀಗೆ 6 ಕಿ. ಮೀ. ಗಳವರೆಗೆ ಕ್ರಮಿಸಿದಾಗ ಕಲ್ಕುಂಟೆ ಮತ್ತು ಚಿಕ್ಕ ತಿರುಪತಿಗಳ ಹೆಸರುಳ್ಳ ಫಲಕವೊಂದು ದೊರೆಯುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ ಮತ್ತೆ 6 ಕಿ.ಮೀ. ಗಳಷ್ಟು ದೂರ ಕ್ರಮಿಸಿದರೆ ಕಲ್ಕುಂಟೆ ಗ್ರಾಮವನ್ನು ತಲಪುವಿರಿ.

ಅರ್ಚಕರ ಪ್ರಕಾರ, ಕಲ್ಕುಂಟೆಯಲ್ಲಿರುವ ಶ್ರೀ ರಂಗನಾಥನ ದೇವಸ್ಥಾನಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವೇ ಇದೆಯಂತೆ. ಅರ್ಚಕರ ಪೂರ್ವಜರಿಗೆ ಶ್ರೀರಂಗನಾಥನ ಮೂರ್ತಿಯು ಸಿಕ್ಕು 300 ವರ್ಷಗಳು ಕಳೆದಿವೆಯಂತೆ. ಕಲ್ಕುಂಟೆಯ ಶ್ರೀರಂಗನಾಥನು ಅದಕ್ಕೂ ಮುಂಚೆ 300 ವರ್ಷಗಳವರೆಗೆ ಅಪಾರ ವೈಭವದಿಂದ ಪೂಜಿಸಲ್ಪಟ್ಟಿದ್ದನು. ಆ ಕಾಲದಲ್ಲಿ ದೇವರಿಗೆ ಇನ್ನೂರು ಕಿಲೋದಷ್ಟು ಆಹಾರವನ್ನು ನೈವೇದ್ಯವಾಗಿ ನೀಡಲಾಗುತ್ತಿತ್ತಂತೆ. ಅನಂತರ ನಿಗೂಢ ರೀತಿಯಲ್ಲಿ ದೇವರು ಕೆರೆಯಲ್ಲಿ ಬಂದು ನೆಲೆಸಿದನು. ಅಲ್ಲೇ ಸ್ವಾಮಿಯ ಮೇಲೆ ಒಂದು ಹುತ್ತ ಬೆಳೆದುಕೊಂಡಿತಂತೆ. ಹೀಗೊಮ್ಮೆ ಹಸು ಆ ಹುತ್ತಕ್ಕೆ ಹಾಲೆರೆಯುವುದನ್ನು ಗ್ರಾಮಸ್ಥರು ಗಮನಿಸಿದರಂತೆ. ಅಲ್ಲದೇ ಅಂದಿನ ಅರ್ಚಕರಾದ ಶ್ರೀ ಶ್ರೀನಿವಾಸ್‌ ಭಟ್ಟರ್‌ ಅವರ ಕನಸಲ್ಲಿ ಸ್ವಾಮಿ ಬಂದು ತನ್ನನ್ನು ಕೋಲಾರದ ಕೆರೆಯೊಂದರಲ್ಲಿನ ಹುತ್ತದಿಂದ ತೆಗೆದು, ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವಂತೆ ಹೇಳಿದನಂತೆ. ಅನಂತರ ಭಟ್ಟರ್‌ ಅವರು ಸ್ವಾಮಿಯನ್ನು ದೇವಸ್ಥಾನದಲ್ಲಿ ತಂದು ಪ್ರತಿಷ್ಠಾಪಿಸಿದರು. ಇಲ್ಲಿನ ವಿಶೇಷವೆಂದರೆ, ರಂಗನಾಥನು ಅನಂತಶಯನ ಭಂಗಿಯಲ್ಲಿದ್ದು, ಈಶಾನ್ಯದತ್ತ ಮುಖ ಮಾಡಿದ್ದಾನೆ. ಅವನ ಪದತಲದಲ್ಲಿ ಭೂ-ಶ್ರೀದೇವಿಯರಿದ್ದು, ನಾಭಿಕಮಲದಲ್ಲಿ ಬ್ರಹ್ಮನಿದ್ದಾನೆ. ಸಾಮಾನ್ಯವಾಗಿ ದೇವಸ್ಥಾನದ ಹೊರಗಡೆ ದೇವರ ಎದುರಿಗೆ ಗರುಡದೇವನು ನಿಂತಿರುತ್ತಾನೆ. ಆದರೆ ಇಲ್ಲಿ ಗರುಡದೇವನು ಸ್ವಾಮಿಯ ಜೊತೆಗೇ ಇರುವುದು ಒಂದು ವಿಶೇಷ.

ಇಲ್ಲಿನ ರಂಗನಾಥ ಸ್ವಾಮಿಯ ಉತ್ಸವ ಮೂರ್ತಿಯ ಬಗ್ಗೆಯೂ ಒಂದು ಸ್ವಾರಸ್ಯಕರವಾದ ಪ್ರತೀತಿಯುಂಟು. ಕಲ್ಕುಂಟೆಯಲ್ಲಿರುವ ಉತ್ಸವ ಮೂರ್ತಿಯು ಈ ಮುಂಚೆ ಮೈಸೂರು ಮಹಾರಾಜರ ಹತ್ತಿರ ಇತ್ತಂತೆ. ಸುತ್ತಮುತ್ತಲಿನ ಗ್ರಾಮಸ್ಥರು ಅದನ್ನು ತಮಗೆ ನೀಡುವಂತೆ ಕೇಳಿದಾಗ, ರಾಜಮನೆತನದವರು ನಿರಾಕರಿಸಿದರಂತೆ. ಹೀಗಾಗಿ ಗ್ರಾಮಸ್ಥರೆಲ್ಲರೂ ನಿರಾಶೆಗೊಂಡು ಹಿಂದಿರುಗಿದರು. ಆದರೆ ಕೆಲವು ದಿನಗಳ ಅನಂತರ ರಂಗನಾಥನ ಮೂರ್ತಿಯು ಕಳುವಾಯಿತಂತೆ. ಕಳವು ಮಾಡಿದವರು ಮೂರ್ತಿಯನ್ನು ಗ್ರಾಮದಲ್ಲಿ ಒಂದು ಕಲ್ಲುಬಂಡೆ ಪಕ್ಕದಲ್ಲಿರುವ ಕುಂಟೆಯಲ್ಲಿ ಇಟ್ಟರಂತೆ. ಹೀಗೆ ಮೂರ್ತಿಯ ಪೀಠವು ಒಡೆದುಹೋಯಿತು. ಆ ಕುಂಟೆಯ ಪಕ್ಕಕ್ಕೇ ಹಾದುಹೋಗುತ್ತಿದ್ದ ಗ್ರಾಮಸ್ಥರಿಗೆ ಏನೋ ಹೊಳೆಯುತ್ತಿರುವಂತೆ ಕಂಡು ಬಂದಾಗ, ಅವರು ಹತ್ತಿರ ಹೋಗಿ ನೋಡಲು ಶ್ರೀರಂಗನಾಥನ ವಿಗ್ರಹ ಸಿಕ್ಕಿತಂತೆ. ವಿಗ್ರಹದ ಪೀಠವು ಭಿನ್ನವಾಗಿದ್ದರಿಂದ ಪೂಜೆ ಸಲ್ಲಿಸಲು ಸಾಧ್ಯವಿಲ್ಲವೆಂದು ಕೆಲವರೆಂದರೆ, ಇನ್ನುಳಿದವರು ಹಾಗೆಯೇ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ತಪ್ಪಲ್ಲವೆಂದರಂತೆ. ಅನಂತರ ಶ್ರೀರಂಗನಾಥನ ವಿಗ್ರಹವನ್ನು ಉತ್ಸವಮೂರ್ತಿಯಾಗಿ ಪ್ರತಿಷ್ಠಾಪಿಸಲಾಯಿತು. ಹೀಗೆ `ಕಳು’ವಾದ ಶ್ರೀರಂಗನಾಥನು `ಕುಂಟೆ’ (ಕೆರೆ) ಯಲ್ಲಿ ಸಿಕ್ಕಿದ್ದರಿಂದ, ಗ್ರಾಮಕ್ಕೆ “ಕಳ್ಳಕುಂಟೆ”ಯೆಂದು ಹೆಸರು ಬಂದಿತಂತೆ. ಬರಬರುತ್ತ ಅದೇ ಕಲ್ಕುಂಟೆಯಾಯಿತು.

ಕಲ್ಕುಂಟೆ ಶ್ರೀರಂಗನಾಥನ ವಾರ್ಷಿಕ ಬ್ರಹ್ಮರಥೋತ್ಸವವು ಮಾಘ ಮಾಸದಲ್ಲಿ ಪುಬ್ಬ ನಕ್ಷತ್ರದಂದು ನೆರವೇರುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi