ಧಾರ್ಮಿಕ ವಿಧಿಗಳು ಖಾಲಿ ಲಕೋಟೆ ಆಗದಿರಲಿ

ಧಾರ್ಮಿಕ ವಿಧಿ-ವಿಧಾನಗಳನ್ನು ಕಾಟಾಚಾರವಾಗಿ ಮಾಡದೆ, ಅಂತರಾರ್ಥವನ್ನು ತಿಳಿದು ಆಚರಿಸಿದರೆ ನಮಗೆ ಒಳಿತು…

ಒಂದು ಲಕೋಟೆ ಎಂದರೆ ಏನು? ಅದು ನಮ್ಮ ಏನಾದರೂ ಮೌಲ್ಯವಾದುದನ್ನು ರಕ್ಷಿಸುತ್ತದೆ ಮತ್ತು ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಯ್ಯುತ್ತದೆ.  ಆ ಲಕೋಟೆಯೊಳಗಿರುವ ವಿಷಯವೇ  ನಿಜವಾಗಿ ಅಮೂಲ್ಯವಾದುದು. ಅದರಲ್ಲಿ ಏನೂ ಇಲ್ಲದೆ ಅದು ಖಾಲಿ ಲಕೋಟೆಯಾಗಿದ್ದರೆ  ಏನೂ ಲಭಿಸದು. ಇದಕ್ಕೂ ವೈದಿಕ ಆಚರಣೆಗೂ ಏನು ಸಂಬಂಧ ಎಂದು ಕೇಳಬಹುದು. ಲಕೋಟೆಯಲ್ಲಿ ಭಕ್ತಿಪ್ರೇಮವನ್ನು ಇಟ್ಟಿದ್ದರೆ ಅದು ಅಮೂಲ್ಯವಾದುದು. ಆದರೆ, ಅರ್ಥ ಮಾಡಿಕೊಳ್ಳದೆ ಆಚರಿಸುವ ವಿಧಿ ಅಥವಾ ಆಚರಣೆಗಳು ಖಾಲಿ ಲಕೋಟೆಯಂತೆ, ಟೊಳ್ಳು.

ಇಲ್ಲೊಂದು ಪ್ರಸಂಗವಿದೆ. ಇಂತಹವು ನಮ್ಮ ಯುವಜನರ ಮೇಲೆ ಗಾಢ ಪರಿಣಾಮ ಬೀರುತ್ತದೆ. ನಮ್ಮ ಧಾರ್ಮಿಕ ವಿಧಿವಿಧಾನಗಳ ಬಗೆಗೆ ವ್ಯತಿರಿಕ್ತ ಭಾವನೆ ಉಂಟು ಮಾಡುತ್ತವೆ.

ಯುವಕ ನಿತಿನ್‌ ಒಬ್ಬ ಎಂಜನಿಯರ್.‌ ಧಾರ್ಮಿಕ‌ ವಿಧಿಗಳ ಬಗೆಗೆ ತಾನು ಏಕೆ ಸಿನಿಕ ಅಥವಾ ಸಂದೇಹಿ ಎನ್ನುವುದನ್ನು ಅವನು ವಿವರಿಸಿದ್ದಾನೆ. “ನಾನು ಇತ್ತೀಚೆಗೆ ನನ್ನ ಸ್ನೇಹಿತನ ಮದುವೆಗೆ ಹೋಗಿದ್ದೆ.  ಪುರೋಹಿತರು ವಧು-ವರರನ್ನು ಪವಿತ್ರ ವಿಧಿಗಳನ್ನು ನೆರವೇರಿಸಲು ಕರೆದರು. ಅವರು ಅಗ್ನಿ ಮುಂದೆ ಕುಳಿತು ಪುರೋಹಿತರ ಹೇಳುತ್ತಿದ್ದಂತೆ ಮಾಡುತ್ತಿದ್ದರು. ವಿವಾಹವು ಸಂಪನ್ನವಾಗಲು ಪುರೋಹಿತರು ಗಟ್ಟಿಯಾಗಿ ಹೇಳುತ್ತಿದ್ದ ಮಂತ್ರ ಮದುವೆ  ಹಾಲ್‌ನಲ್ಲಿ ಮಾರ್ದನಿಸುತ್ತಿತ್ತು.

ದಿಢೀರನೆ ಅಲ್ಲೊಂದು ಪ್ರತಿಭಟನೆ ವ್ಯಕ್ತವಾಯಿತು. ಅತಿಥಿಗಳಲ್ಲಿ ಒಬ್ಬ ಸಂಸ್ಕೃತ ವಿದ್ವಾಂಸರಿದ್ದರು. ಅವರು ಮಂತ್ರಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಪುರೋಹಿತರ ಅಸಂವೇದನೆಯನ್ನು ಕಂಡು ಅವರಿಗೆ ಬೇಸರವಾಯಿತು. ಮದುವೆ ಸಂಪ್ರದಾಯಕ್ಕೆ ಸಂಬಂಧವಿಲ್ಲದ ಮಂತ್ರಗಳನ್ನು ಪುರೋಹಿತರು ಅನವಶ್ಯಕವಾಗಿ ಹೇಳುತ್ತಿದ್ದಾರೆ ಎನ್ನುವುದು ಅವರ ವಾದವಾಗಿತ್ತು. ಪುರೋಹಿತರು ಅಂತಿಮ ಸಂಸ್ಕಾರದ ಮಂತ್ರಗಳನ್ನೂ ಹೇಳುತ್ತಿದ್ದಾರೆಂದು ಆ ವಿದ್ವಾಂಸರು ಅಸಮಾಧಾನಗೊಂಡರು!

ಇದಕ್ಕಿಂತ ದೊಡ್ಡ ದಿಗ್ಭ್ರಮೆಯೆಂದರೆ ವಿವಾಹ ನೆರವೇರಿಸುತ್ತಿದ್ದ ಪಕ್ಷದ ಅಸಡ್ಡೆ. ವಿಷಯ ತಿಳಿಸಿದರೂ ಭಾವನಾಶೂನ್ಯ ನಡವಳಿಕೆ.  ತಪ್ಪು ಕಂಡು ಹಿಡಿದ ಅತಿಥಿಯನ್ನು ಅವರು ನಯವಾಗಿ ಸುಮ್ಮನಾಗಿರಿಸಿದರು ಮತ್ತು ವಿವಾಹ ವಿಧಿ ಮುಂದುವರಿಸಲು ಪುರೋಹಿತರಿಗೆ ಹೇಳಿದರು. ವಿಧಿಗಳ ಒಳಾರ್ಥವನ್ನು ಅರ್ಥ‌ ಮಾಡಿಕೊಳ್ಳದ, ಲಕ್ಷಿಸದ ಮದುವೆ ಸೋಗಿನ ಬಗೆಗೆ ನನಗೆ ನಿರಾಶೆಯಾಯಿತು. “

ಅವನ ಭ್ರಮನಿರಸನಕ್ಕೆ ಕಾರಣವಿದೆ. ಅವನು ಬಾಲ್ಯದಿಂದಲೂ ಧಾರ್ಮಿಕ ಅಸಹಿಷ್ಣುತೆ,  ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ, ಮತ್ತು ವಿವಿಧ ಧರ್ಮಗಳಲ್ಲಿನ ಭ್ರಷ್ಟಾಚಾರ -ಇವುಗಳನ್ನು ನೋಡಿದ್ದನು. ಪ್ರತಿ ವರ್ಷ‌ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಶ್ರದ್ಧೆಯಿಂದ ಪೂಜೆ ಮಾಡುವುದರ ಬದಲಿಗೆ, ಗಣೇಶ ವಿಗ್ರಹಕ್ಕೆ ಚಿತ್ರ ನಟ, ರಾಜಕಾರಣಿ ಅಥವಾ ಕ್ರಿಕೆಟ್‌ ಆಟಗಾರನ ವೇಷಭೂಷಣವನ್ನು ಹಾಕುವುದು, ಚಿತ್ರಗೀತೆ ಹಾಕಿ ನರ್ತಿಸುವುದು ನಡೆಯುತ್ತಿತ್ತು.

ಇವು ಆಧ್ಯಾತ್ಮಿಕ ಅನುಭವವನ್ನಂತೂ ಕೊಡುತ್ತಿರಲಿಲ್ಲ. ನಿತಿನ್‌ ಅವರಂತಹ ಯುವಜನರಿಗೆ ಇಂತಹ ಟೊಳ್ಳು ಕಾರ್ಯಕ್ರಮಗಳಿಂದ ದೂರ ಉಳಿಯುವ ಮನಸ್ಸಾಗಿದ್ದರೆ ಆಶ್ಚರ್ಯವಿಲ್ಲ.

ಹಿನ್ನೆಲೆ . .

ವಿವಿಧ ಉದ್ದೇಶಗಳಿಗಾಗಿ ನೆರವೇರಿಸಲಾಗುವ, ಧಾರ್ಮಿಕ ಪರಂಪರೆಗೆ ಅನನ್ಯವಾದ ಕೆಲವು ಆಚರಣೆಗಳೇ ವಿಧಿಗಳು.. ಹುಟ್ಟಿನಿಂದ ಸಾವಿನವರೆಗೆ ಅನೇಕ ವಿಧಿಗಳು  ಇವೆ. ಅಂತಹ  ವಿಧಿಗಳಲ್ಲದೆ,  ಧರ್ಮದಲ್ಲಿ ಇನ್ನೂ ಹೆಚ್ಚಿನದಿದೆ. ಪ್ರತಿಯೊಂದು ಜೀವಿಯಲ್ಲಿಯೂ ಸುಪ್ತವಾಗಿರುವ ಭಗವತ್‌ ಪ್ರೇಮವನ್ನು ಜಾಗೃತಗೊಳಿಸುವುದು ಧಾರ್ಮಿಕ ವ್ಯವಸ್ಥೆಯ ಗುರಿ. “ಭಗವಂತನಿಗೆ ಪ್ರೀತಿಯ ಭಕ್ತಿಸೇವೆಯನ್ನು ಸಲ್ಲಿಸುವುದೇ ಎಲ್ಲ ಮಾನವರ ಪರಮ ಉದ್ಯೋಗ. ಅಂತಹ ಭಕ್ತಿಸೇವೆಯು ಯಾವುದೇ ಪ್ರೇರಣೆ ಇಲ್ಲದ ಮತ್ತು ತಡೆ ಇಲ್ಲದೆ ಆತ್ಮಕ್ಕೆ ತೃಪ್ತಿಯಾಗುವಂತಿರಬೇಕು.” (ಭಾಗವತ 1.2.6)

ಈ ಪ್ರೇಮವು ಸಹಜ. ಆದರೆ ಅದು ಐಹಿಕ ಪ್ರಜ್ಞೆಯ ದಪ್ಪ ಪದರದಿಂದ ಮುಚ್ಚಿಹೋಗಿದೆ.  ಆದುದರಿಂದ ಕೆಲವು ಆಚರಣೆಗಳನ್ನು ನಿರೂಪಿಸಲಾಗಿದೆ.  ಇದರಿಂದ  ಅನುಯಾಯಿಗಳು ತಮ್ಮ ಐಹಿಕ ಪ್ರಜ್ಞೆಯಲ್ಲಿನ ಕಲುಷಿತ ಅಂಶವನ್ನು ಪರಿಶುದ್ಧಗೊಳಿಸಿಕೊಳ್ಳಬಹುದು .

 ಉದಾಹರಣೆಗೆ, ಭಕ್ತರು ಭಗವಂತನಿಗೆ ಆರತಿ ಸೇವೆಯನ್ನು ಸಲ್ಲಿಸುತ್ತಾರೆ. ಗಂಧದ ಕಡ್ಡಿ ಹಚ್ಚುತ್ತಾರೆ, ದೀಪ ಬೆಳಗುತ್ತಾರೆ, ಜಲ ಸಮರ್ಪಿಸುತ್ತಾರೆ.‌ ಭಗವಂತನು  ನಮಗೆ ನೀಡಿರುವುದನ್ನು ನಾವು  ಆರತಿಯ ಮೂಲಕ  ಅವನಿಗೆ ಅರ್ಪಿಸುತ್ತೇವೆ. ಇದು ನಾವು ಅವನಿಗೆ ತೋರುವ ಪ್ರೀತಿ. ಹೀಗೆ, ಆಚರಣೆಗಳ ಉದ್ದೇಶವು ಒಂದು ಲಕೋಟೆಗೆ ಸದೃಶವಾಗಿದ್ದು, ಅದು ನಮ್ಮ ಆಧ್ಯಾತ್ಮಿಕ ಆಶಯಗಳ ಪತ್ರವನ್ನು ಒಯ್ಯುತ್ತದೆ.

ಆಚರಣೆಗಳಿಲ್ಲದೆ ನಾವು ನಿರ್ವಹಿಸಿವುದು ಸಾಧ್ಯವೇ? ಖಂಡಿತ ಇಲ್ಲ! ನಮ್ಮ ಕ್ರಿಯೆಯು ಆರೋಗ್ಯಪೂರ್ಣ‌ ವಾತಾವರಣವನ್ನು ಮೂಡಿಸುತ್ತದೆ. ಇದನ್ನು ಕಲ್ಪಿಸಿಕೊಳ್ಳಿ. ಭವ್ಯವಾದ ಮಂದಿರ, ವಿಗ್ರಹಗಳಿಗೆ ಸುಂದರವಾದ ಉಡುಗೆ, ಸಂಕೀರ್ತನೆ ಮತ್ತು ನೃತ್ಯ  ಹಾಗೂ ಶುದ್ಧವಾದ ವೇಷಭೂಷಣಗಳ ಭಕ್ತರು . . .  ಇವು ಭಗವಂತನೊಂದಿಗೆ ಸಂಪರ್ಕಿಸಲು ಪ್ರೇರಣೆ ನೀಡುತ್ತವೆ.  ಅಶುದ್ಧ ಪರಿಸರವು ನಕಾರಾತ್ಮಕ ಭಾವನೆಯನ್ನು ಉಂಟು ಮಾಡುತ್ತದೆ. ಮನಶುದ್ಧಿ ಮುಖ್ಯ ಎನ್ನುವುದಾದರೂ  ಬಾಹ್ಯ ಪರಿಸರವೂ ಅದಕ್ಕೆ ಪೂರಕವಾಗಿರಬೇಕಲ್ಲವೇ?

ದೇವೋತ್ತಮ ಪರಮ ಪುರುಷನೊಂದಿಗೆ ನಮ್ಮ ಪ್ರಜ್ಞೆಯನ್ನು ಸಂಪರ್ಕಿಸುವ ಆಚರಣೆಗಳನ್ನು ನಾವು ಮರೆತರೆ ಅಥವಾ ಬರೀ ಆಚರಣೆಗಳ ಬಗೆಗೆ ವಿಚಲಿತಗೊಂಡರೆ, ಅದು  ಸರಿಯಲ್ಲ. ಧಾರ್ಮಿಕ ಶ್ರದ್ಧೆಯನ್ನು ಅನುಸರಿಸುತ್ತಿರುವವರು ಭಗವದ್ಧಾಮಕ್ಕೆ ಹಿಂದಿರುಗುವ ಉದ್ದೇಶವನ್ನೇ ಮರೆತರೆ ಅವರು ಐಹಿಕ ಲೋಕದಲ್ಲಿ ಕಳೆದುಹೋಗುತ್ತಾರೆ.

ಭಗವಂತನ ನೆನಪು

ಶ್ರೀಲ ರೂಪ ಗೋಸ್ವಾಮಿ ಅವರು ಭಕ್ತಿಸೇವೆಯ ಆಚರಣೆಗೆ ವ್ಯಾಪಕವಾದ ನಿಯಮಗಳನ್ನು ನಿರೂಪಿಸಿದ್ದಾರೆ. ಭಗವಂತನನ್ನು ನೆನಪು ಮಾಡಿಕೊಳ್ಳುವುದೇ ಆ ಎಲ್ಲ ಆಚರಣೆಗಳ ಸಾರ ಎಂದೂ ಅವರು ಹೇಳಿದ್ದಾರೆ. ಕೃಷ್ಣನನ್ನು ಸದಾ ನೆನಪು ಮಾಡಿಕೊಳ್ಳಬೇಕು, ಯಾವುದೇ ಸಮಯದಲ್ಲಿಯೂ ಮರೆಯಬಾರದು ಎನ್ನುವುದೇ ಸಾರ. ‌

ಕೃಷ್ಣನಿಗೆ ನಾವು ಕೊಡುವ ವಸ್ತುವಲ್ಲ, ಅದನ್ನು ಅರ್ಪಿಸುವ ಪ್ರೀತಿ ಮುಖ್ಯವಾಗುತ್ತದೆ. ಅವನು ನಮ್ಮ ಮನಸ್ಸಿನ ಭಾವನೆಯನ್ನು ಸ್ವೀಕರಿಸುತ್ತಾನೆ. ನಮ್ಮ ಪ್ರೀತಿಯಿಂದ ಪ್ರಸನ್ನನಾಗುತ್ತಾನೆ. ಆದುದರಿಂದ ಆಚರಣೆಯನ್ನು ಅನುಸರಿಸುವಾಗ, ನಾವು ಈ ಅರಿವನ್ನು ಅರ್ಥಮಾಡಿಕೊಂಡರೆ, ನಾವು ಕೃಷ್ಣನನ್ನು ತೃಪ್ತಿ ಪಡಿಸುವ ಗುರಿಯನ್ನು ಸಾಧಿಸುತ್ತೇವೆ.

ಒಮ್ಮೆ ಕೃಷ್ಣ ಮತ್ತು ಅವನ ಗೋಪಾಲಕ ಮಿತ್ರರಿಗೆ ತುಂಬಾ ಹಸಿವಾಯಿತು. ಸಮೀಪದಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರ ಬಳಿ ಆಹಾರ ಭಿಕ್ಷೆ ಪಡೆದು ಬರುವಂತೆ ಕೃಷ್ಣ ತನ್ನ ಮಿತ್ರರನ್ನು ಕಳುಹಿಸಿದ. ಬ್ರಾಹ್ಮಣರು ಯಜ್ಞದಲ್ಲಿ ನಿರತರಾಗಿದ್ದರು. ಅದಕ್ಕಾಗಿ ವೈವಿಧ್ಯಮಯವಾದ ನೈವೇದ್ಯವನ್ನು ಸಿದ್ಧ ಮಾಡಿ ಇಟ್ಟಿದ್ದರು. ಆದುದರಿಂದ ಆ ಬ್ರಾಹ್ಮಣರು ಗೋಪಾಲ ಬಾಲಕರನ್ನು ನಿರ್ಲಕ್ಷಿಸಿ ಯಜ್ಞದಲ್ಲಿ ತಲ್ಲೀನರಾದರು.

ಬ್ರಾಹ್ಮಣರು ಅರ್ಪಿಸುವುದನ್ನು ಸ್ವೀಕರಿಸಿ ವರವನ್ನು ನೀಡಲು ಕೃಷ್ಣನು ಇಷ್ಟಪಟ್ಟಿದ್ದನು. ಆದರೆ ಅವರು ತಮ್ಮ ಕಾರ್ಯದಲ್ಲಿ ನಿರತರಾಗಿದ್ದರು ಮತ್ತು ಹುಸಿ ಅಹಂನಲ್ಲಿ ಸಿಲುಕಿದ್ದರು. ಸತ್ಯವನ್ನು ಕಾಣಲಿಲ್ಲ.

ಗೋಪಾಲಕರಿಗೆ ನಿರಾಶೆಯಾಯಿತು. ಆದರೆ ಕೃಷ್ಣನು ಸುಮ್ಮನಾಗಲಿಲ್ಲ. ಬ್ರಾಹ್ಮಣರ ಪತ್ನಿಯರ ಬಳಿಗೆ ತನ್ನ ಮಿತ್ರರನ್ನು ಕಳುಹಿಸಿದ. ಆ ಮಹಿಳೆಯರು ಕೂಡಲೇ ಎಲ್ಲ ನೈವೇದ್ಯವನ್ನು ನೀಡಲು ಒಪ್ಪಿದರು. ಅವರು ವೇದ ಪಂಡಿತರಾಗಿರಲಿಲ್ಲ, ಸರಳ ಮನಸ್ಸಿನ ಕೃಷ್ಣಭಕ್ತೆಯರಾಗಿದ್ದರು. ಕೃಷ್ಣನನ್ನು ಪ್ರಸನ್ನಗೊಳಿಸಬೇಕೆನ್ನುವ ಕಾತರವೇ ಒಣ ಆಚರಣೆಗಳಿಗಿಂತ ಮುಖ್ಯ ಎನ್ನುವುದನ್ನು ಈ ಉದಾಹರಣೆ ಸ್ಪಷ್ಟಪಡಿಸುತ್ತದೆ.

ಆಧುನಿಕ ಯುಗಕ್ಕೆ

ಕೃಷ್ಣನೊಂದಿಗೆ ನಮ್ಮ ಬಾಂಧವ್ಯವನ್ನು ಪುನರ್‌ ಸ್ಥಾಪಿಸಿಕೊಳ್ಳಲು ಶ್ರೀ ಚೈತನ್ಯ ಮಹಾಪ್ರಭು ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುವ ಸರಳ ವಿಧಾನವನ್ನು ನಿರೂಪಿಸಿದರು. ಜಪದ ಮೊಟ್ಟ ಮೊದಲ ಪ್ರಭಾವವೆಂದರೆ ಅದು ನಮ್ಮ ಹೃದಯವನ್ನು ಐಹಿಕ ಕಲ್ಮಶದಿಂದ ಪರಿಶುದ್ಧಗೊಳಿಸುತ್ತದೆ. ಅನಂತರ ಕ್ರಮೇಣ ಕೃಷ್ಣನನ್ನು ಕುರಿತು ಪರಿಶುದ್ಧ ಪ್ರೇಮವನ್ನು ಜಾಗೃತಗೊಳಿಸುತ್ತದೆ.

ಅಸಹಾಯಕ ಮಗುವೊಂದು ತನ್ನ ತಾಯಿಯನ್ನು ಕರೆಯುವ ಮನೋಭಾವದಲ್ಲಿ ಕೃಷ್ಣನ ಪವಿತ್ರನಾಮವನ್ನು ಜಪಿಸಬೇಕೆಂದು ಶ್ರೀಲ ಪ್ರಭುಪಾದರು ಬೋಧಿಸಿದರು. ಮಗುವಿನ ಕರೆಯು ಅಂಧ ಆಚರಣೆಯಲ್ಲ. ಅಸಹಾಯಕ ವ್ಯಕ್ತಿಯು ಕೃಷ್ಣನಿಗೆ ಹೃದಯದಿಂದ ಮೊರೆ ಇಡುತ್ತಾನೆ. ಆದರೆ ಐಹಿಕವಾಗಿ ತೃಪ್ತನಾದವನು ಕೃಷ್ಣನನ್ನು ಹಾಗೆ ಪ್ರಾಮಾಣಿಕವಾಗಿ ಕರೆಯುವುದು ಕಷ್ಟ.

ಆಧ್ಯಾತ್ಮಿಕ ಶಿಕ್ಷಣ

ಭಾಗವತವು ಪ್ರಹ್ಲಾದ ಮಹಾರಾಜ, ಗಜೇಂದ್ರ ಮತ್ತು ಕುಂತಿ ದೇವಿಯವರಂತಹ ಶ್ರೇಷ್ಠ ಆತ್ಮಗಳ ಪ್ರಾರ್ಥನೆಗಳಿಂದ ತುಂಬಿದೆ. ಭಕ್ತರು ಈ ಪ್ರಾರ್ಥನೆಗಳನ್ನು ಪುನರುಚ್ಚರಿಸುತ್ತಾರೆ. ಅದನ್ನು ಅವರು ಮಾಮೂಲು ಆಚರಣೆಯಂತೆ ಮಾಡುವುದಿಲ್ಲ.

ಇಸ್ಕಾನ್‌ ಕೇಂದ್ರಗಳಲ್ಲಿ, ಭಗವಂತನಲ್ಲಿ ಪ್ರೀತಿಯನ್ನು ಬೆಳೆಸಿಕೊಳ್ಳಲು ಜ್ಞಾನ ಮತ್ತು ಆಧ್ಯಾತ್ಮಿಕ ಆಚರಣೆಯನ್ನು ಏಕಕಾಲಕ್ಕೆ ನೀಡಲಾಗುತ್ತದೆ. ಆದುದರಿಂದ ಶ್ರೀಲ ಪ್ರಭುಪಾದರು ಇಸ್ಕಾನ್‌ ಮಂದಿರಗಳನ್ನು ಆಧ್ಯಾತ್ಮಿಕ ವಿಶ್ವವಿದ್ಯಾಲಯಗಳೆಂದು ಕರೆದರು.

ಲೇಖನದ ಆರಂಭದಲ್ಲಿ ಹೇಳಿದ ನಿತಿನ್‌ ನಂತಹ ಯುವಕರು ಇಸ್ಕಾನ್‌ ಮಂದಿರಕ್ಕೆ ಭೇಟಿ ನೀಡಿದರೆ ಭಾರತೀಯ ಆಧ್ಯಾತ್ಮದ ಬಗೆಗೆ ಅವರ ಸಂದೇಹಗಳು ನಿವಾರಣೆಯಾಗಬಹುದು.  ಲಕೋಟೆಯಲ್ಲಿ ಏನಿರಬೇಕೆನ್ನುವುದೂ  ತಿಳಿಯುತ್ತದೆ.

*****

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi