ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ
– ಆಧಾರ: ದೇವಹೂತಿ ಪುತ್ರ ಶ್ರೀ ಕಪಿಲನ ಬೋಧನೆ, ಸಂಗ್ರಹಾನುವಾದ: ಡಾ.ಕೆ.ವೈ.ಬಾಲರಾಜ್
ಶಿಷ್ಯನಾಗಲು ಬಯಸುವವನು ಯೋಗ್ಯ ಗುರುವನ್ನು ಹುಡುಕಿಕೊಂಡು, ಗುರುವು ಪ್ರತಿಪಾದಿಸುವ ದಿವ್ಯ ಜ್ಞಾನವನ್ನು ವಿಧೇಯತೆಯಿಂದ ಕೇಳಬೇಕು ಎಂಬುದಾಗಿ ಗೀತೆಯಲ್ಲಿ ಹೇಳಲಾಗಿದೆ. ಬೆರಳಚ್ಚು ಯಂತ್ರವೋ, ಕಂಪ್ಯೂಟರ್ ಯಂತ್ರವೋ ಕೆಟ್ಟಾಗ ಅದನ್ನು ಸರಿಪಡಿಸಲು ಅದರ ಬಗ್ಗೆ ತಿಳಿದಿರುವ ತಂತ್ರಜ್ಞನ ಬಳಿ ಹೋದಾಗ ಅವನು ಅದನ್ನು ತತ್ ಕ್ಷಣವೇ ಸರಿಪಡಿಸುತ್ತಾನೆ.

ಹಾಗಂತ ಒಬ್ಬ ಕಾರ್ಪೆಂಟರ್ ಬಳಿಯೋ ಅಥವಾ ಹಳ್ಳ ಅಗೆಯುವವನ ಬಳಿಯೋ ಹೋಗಿ ಯಂತ್ರಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಹಾಗೆಯೇ ದಿವ್ಯಜ್ಞಾನವನ್ನು ತಿಳಿಯಲು ಆಶಿಸುವವನು ಸರಿಯಾದ ಗುರುವನ್ನು ಆರಿಸಬೇಕೆಂದು ಶಾಸ್ತ್ರಗಳು ವಿಧಿಸಿವೆ. ನಿಜವಾದ ಆನಂದವನ್ನು ಹೊಂದಲು ತೀವ್ರವಾಗಿ ಬಯಸುವ ಮನುಷ್ಯನು ಸದ್ಗುರುವೊಬ್ಬನನ್ನು ಹುಡುಕಿ ದೀಕ್ಷೆಯ ಮೂಲಕ ಅವರ ಆಶ್ರಯವನ್ನು ಪಡೆಯಬೇಕು.
ಸದ್ಗುರು ವೇದಗಳನ್ನು ಶ್ರವಣ ಮಾಡಿ ಜ್ಞಾನವನ್ನು ಗಳಿಸಿರುತ್ತಾನೆ. ಶಿಷ್ಯ ಪರಂಪರೆಯ ಶ್ರವಣ ಮಾರ್ಗದಿಂದ ಬಂದಿರುತ್ತಾನೆ, ಸದಾ ಆತ ಭಗವಂತನ ಸೇವೆಯಲ್ಲಿ ಸ್ಥಿರಗೊಂಡಿರುತ್ತಾನೆ. ಅವನು ಯಾವುದೋ ಆತ್ಮಧೋರಣೆಯ ಕಾಲ್ಪನಿಕ ಜ್ಞಾನವನ್ನು ಬೋಧಿಸುವುದಿಲ್ಲ. ಅವನ ಜ್ಞಾನವು ಪರಂಪರಾಗತವಾಗಿ ಪ್ರಮಾಣೀಕೃತವಾಗಿರುತ್ತದೆ.
ವರ್ಣಾಶ್ರಮ ಧರ್ಮದಲ್ಲಿ ಒಬ್ಬ ಶೂದ್ರನು ಕೂಡ ಸಾಧನೆಯಿಂದ ಬ್ರಹ್ಮ ಎಂದರೇನು ಎಂಬುದನ್ನು ಗ್ರಹಿಸಬಲ್ಲ. ಅಂತಹವನು ಕೂಡ ಸ್ವಾಭಾವಿಕವಾಗಿ ಬ್ರಾಹ್ಮಣನಾಗಿಬಿಡುತ್ತಾನೆ. ಗಮನವಿರಿಸಿ ಶ್ರವಣ ಮಾಡುವುದು ಅವಶ್ಯಕ ಅಷ್ಟೆ. ಗುರುವನ್ನು ಮೆಚ್ಚಿಸಿದ ಹೊರತು ಯೋಗ್ಯವಾದ ಜ್ಞಾನವನ್ನು ಪಡೆಯುವುದು ಸಾಧ್ಯವಿಲ್ಲ.
ಗುರು ಭಗವಂತನ ಪ್ರತಿನಿಧಿ. ಎಲ್ಲರ ಹೃದಯದಲ್ಲೂ ನೆಲೆಸಿರುವ ಕೃಷ್ಣ ಅಂತರಂಗ ಗುರುವಾದರೆ, ಗುರುವಾದವನು ಕೃಷ್ಣನ ಬಹಿರಂಗ ಪ್ರತಿನಿಧಿಯಾಗಿರುತ್ತಾನೆ. ಶಿಷ್ಯನಾದವನು ಕೂಡ ಕಾಲಹರಣ, ವೃಥಾ ಸಂವಾದ, ಸ್ಪರ್ಧಾತ್ಮಕ ಮನೋಭಾವ, ವಿತಂಡವಾದವನ್ನು ತೋರಿಸಬಾರದು.
ಜೀವನದ ಅಂತಿಮ ಗುರಿಯ ಬಗ್ಗೆ ತಿಳಿಯಲು ಉತ್ಸುಕತೆ ಇಲ್ಲದಿದ್ದರೆ ಗುರುವಿನ ಬಳಿಗೆ ಹೋಗಲೇಬಾರದು. ಶರೀರ ಸೌಖ್ಯ, ಇಂದ್ರಿಯಭೋಗದಲ್ಲಿ ಸದಾ ಆಸಕ್ತಿ ಇರುವ ಸಾಮಾನ್ಯ ಮನುಷ್ಯನಿಗೆ ಗುರುವಿನ ಅಗತ್ಯವಿಲ್ಲ. ಹಣ ಪಡೆದು ಮಂತ್ರ, ಔಷಧಿ, ಪೂಜೆ ಮಾಡುವವನು ಗುರುವೇ ಅಲ್ಲ.
ಇನ್ನು ಪರಮ ಗುರುವಾದ ಶ್ರೀಕೃಷ್ಣನನ್ನು ನಾವು ಪೂರ್ಣವಾಗಿ ಅರಿಯಬೇಕು ಎಂದೇನಿಲ್ಲ. ಅದು ಸಾಧ್ಯವೂ ಇಲ್ಲ. ಅನಂತವಾದುದನ್ನು ತಿಳಿಯಲು ನಮಗೆ ಸಾಮರ್ಥ್ಯವಿಲ್ಲ. ನಮ್ಮ ಇತಿಮಿತಿಯ ಇಂದ್ರಿಯಗಳಿಂದ ಅನಂತನನ್ನು ನಾವು ಅರಿಯಲಾರೆವು. ಶ್ರೀಕೃಷ್ಣನೇ ಸ್ವಯಂ ತನ್ನನ್ನು ಅರ್ಥಮಾಡಿಕೊಂಡಿಲ್ಲ.

ಅವನಿಗಿರುವ ಆಕರ್ಷಣೆಯು ಅಮಿತವಾದುದು. ತಾನು ಅಷ್ಟೊಂದು ಆಕರ್ಷಣೀಯವಾಗಿರುವುದಾದರೂ ಏನೆಂದು ತಿಳಿಯಲು ಅವನು ಚೈತನ್ಯ ಮಹಾಪ್ರಭುವಾಗಿ ಅವತರಿಸಿ ಶ್ರೀಮತಿ ರಾಧಾರಾಣಿಯ ಭಾವೋನ್ಮಾದವನ್ನು ಸ್ವೀಕರಿಸಿದನು. ಕೃಷ್ಣನ ಶರೀರವು ನಮ್ಮ ಶರೀರದಂತೆ ಭೌತಿಕ ವಸ್ತುಗಳಿಂದ ಆದುದಲ್ಲ.
ಭೌತಿಕ ಪ್ರಕೃತಿಯು ಕೃಷ್ಣನಿಗೆ ಸೇರಿದ್ದು. ಅವನೇ ಅದರ ನಿಯಂತ್ರಕ. ಆದರೆ ನಾವು ಈ ಭೌತಿಕ ಪ್ರಕೃತಿಯ ನಿಯಂತ್ರಣದಲ್ಲಿರುವವರು ಅಷ್ಟೆ. ಬ್ರಹ್ಮಾಂಡಗಳ ಪ್ರತಿಯೊ೦ದು ವಸ್ತು-ವಿಷಯಗಳು ಕೃಷ್ಣನಿಂದಲೇ ಹೊರಹೊಮ್ಮುತ್ತವೆ. ಈ ಪ್ರಕೃತಿಯಲ್ಲಿ ವಿಕಾಸಹೊಂದಿದ ಮಾನವರಾದ ನಾವು ಜಡವೂ, ಮಂದವೂ ಆದ ಪ್ರಕೃತಿಯನ್ನು ಉಪಯೋಗಿಸಿಕೊಂಡು ಈ ಆಧುನಿಕ ನಾಗರಿಕತೆಯನ್ನು ನಿರ್ಮಿಸಿದ್ದೇವೆ ಅಷ್ಟೆ.
ಇದು ನಮ್ಮ ಶ್ರೇಷ್ಠತೆ. ನಾವು ಭಗವಂತನ ಶಕ್ತಿಯೂ ಹೌದು. ಪರಾಪ್ರಕೃತಿಯೂ ಹೌದು. ದಿವ್ಯಜ್ಞಾನವನ್ನು ನಾವು ಈ ರೀತಿಯಲ್ಲಿ ಸದ್ಗುರುವಿನಿಂದ ಅರಿಯುತ್ತೇವೆ.
ಈ ದಿವ್ಯಜ್ಞಾನವು ಶ್ರೀಮದ್ಭಾಗವತದಲ್ಲಿ ಅನೇಕ ಋಷಿಗಳಿಂದ ತರ್ಕಬದ್ಧವಾಗಿ ಪ್ರಣೀತವಾಗಿದೆ. ಭಾಗವತವೆಂಬುದು ವೇದಾಂತ ಸೂತ್ರಗಳ ಮೂಲ ವ್ಯಾಖ್ಯಾನವಾಗಿದೆ. ಇದನ್ನು ಬರೆದದ್ದು ವೇದಾಂತಸೂತ್ರಗಳ ಗ್ರಂಥಕರ್ತರಾದ ಸ್ವಯಂ ಶ್ರೀ ವೇದವ್ಯಾಸರೇ ವೇದ ಪದ್ಧತಿಯ ಪ್ರಕಾರ ಒಬ್ಬನು ಆಚಾರ್ಯ ಎಂದು ಅಂಗೀಕೃತವಾಗುವ ಮುಂಚೆ ವೇದಾಂತ ಸೂತ್ರಗಳನ್ನು ತಿಳಿದುಕೊಳ್ಳಬೇಕು.
ಈ ಸೂತ್ರಗಳು ಮಾಯಾವಾದ ಮತ್ತು ವೈಷ್ಣವ ಸಂಪ್ರದಾಯಗಳನ್ನು ವಿವರಿಸಿವೆ. ಒಬ್ಬ ವೇದಾಂತ ಸೂತ್ರಗಳನ್ನು ತಿಳಿಯುದ ಹೊರತು ಬ್ರಹ್ಮವನ್ನು ಗ್ರಹಿಸುವುದು ಸಾಧ್ಯವಿಲ್ಲ. ಆದುದರಿಂದ ವೇದವ್ಯಾಸರ ಶಿಷ್ಯ ಪರಂಪರೆಯಲ್ಲಿಯೇ ಬಂದಿರುವ ಗುರುವನ್ನು ನಾವು ಹುಡುಕಿಕೊಳ್ಳಬೇಕು.
ವ್ಯಾಸ, ಅರ್ಜುನ, ವಿದುರ, ಮೈತ್ರೇಯ ಇವರೆಲ್ಲರೂ ಶ್ರೀಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಅಂಗೀಕರಿಸಿದ್ದಾರೆ. ಮತ್ತು ಅವರವರ ಯೋಗ್ಯತೆಗಳಿಗೆ ಅನುಸಾರವಾಗಿ ಕೃಷ್ಣಜ್ಞಾನವನ್ನು ಹೊಂದಿದ್ದಾರೆ. ಹೀಗೆ ಯೋಗ್ಯ ಪುರುಷ ಸದ್ಗುರುವಿಗೆ ಶರಣಾಗುವುದರ ಮೂಲಕ ದಿವ್ಯಜ್ಞಾನವನ್ನು ಪಡೆಯಬೇಕು.






Leave a Reply