ಸಾಕ್ಷಿ ಗೋಪಾಲ ದೇವಾಲಯ

ಚಿತ್ರಲೇಖನ: ಡಾ॥ ಬಿ.ಆರ್‌. ಸುಹಾಸ್‌

ಸಾಕ್ಷಿ ಗೋಪಾಲ ದೇವಾಲಯ, ನಮ್ಮ ದೇಶದ ಪ್ರಮುಖ ಕೃಷ್ಣ ದೇವಾಲಯಗಳೊಂದಾಗಿದ್ದು, ಪುರಿಗೆ 19 ಕಿ.ಮೀ. ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ ಎಂಟರಲ್ಲಿನ ಒಂದು ಹಳ್ಳಿಯಲ್ಲಿದೆ. ಈ ದೇವಾಲಯದ ರಾಧಾಕೃಷ್ಣ ವಿಗ್ರಹಗಳು ಬಹಳ ಸುಂದರವಾಗಿವೆ. ಮುಖ್ಯ ದೇಗುಲದ ಸನಿಹವೇ ಒಂದು ಶ್ರೀರಾಮ ದೇಗುಲವೂ ಇದೆ. ದೇವಾಲಯದ ಸನಿಹ, ಚಂದನ ಸರೋವರವೆಂಬ ಸರೋವರವಿದ್ದು, ಯಾತ್ರಿಕರು ದರ್ಶನಕ್ಕೆ ಮೊದಲು ಇಲ್ಲಿ ಸ್ನಾನ ಮಾಡುತ್ತಾರೆ. ದೇವಾಲಯದ ಎರಡೂ ಬದಿಗಳಲ್ಲಿ ರಾಧಾಕುಂಡ ಮತ್ತು ಶ್ಯಾಮಕುಂಡ ಎಂಬ ಎರಡು ಕಲ್ಯಾಣಿಗಳೂ ಇವೆ.

ಈ ದೇವಾಲಯದ ಹಿಂದೆ ಸ್ವಾರಸ್ಯವಾದ ಒಂದು ಕಥೆಯಿದೆ. ಈ ಕಥೆ ತಿಳಿಯುವ ಹೊರತು, ಈ ದೇವಾಲಯವನ್ನು ಸಂದರ್ಶಿಸುವ ಪ್ರಾಮುಖ್ಯ ಅರಿವಾಗುವುದಿಲ್ಲ. ಈ ಕಥೆಯನ್ನು ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆಯಾದ ಚೈತನ್ಯ ಚರಿತಾಮೃತದಲ್ಲಿ ಸೊಗಸಾಗಿ ವರ್ಣಿಸಲಾಗಿದೆ.

ದಕ್ಷಿಣ ಭಾರತದ ವಿದ್ಯಾನಗರದಲ್ಲಿ ಇಬ್ಬರು ಬ್ರಾಹ್ಮಣರು ವಾಸಿಸುತ್ತಿದ್ದರು. ಅವರಲ್ಲಿ ಒಬ್ಬನು ವೃದ್ಧನೂ ಇನ್ನೊಬ್ಬನು ಯುವಕನೂ ಆಗಿದ್ದರು. ಇಬ್ಬರೂ ಒಮ್ಮೆ ಜೊತೆಗೂಡಿ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಲು ಹೊರಟರು. ದಾರಿಯುದ್ದಕ್ಕೂ ಯುವಕನು ವೃದ್ಧನ ಸೇವೆ ಮಾಡಿದನು. ಅವರು ಗಯಾ, ಕಾಶಿ, ಪ್ರಯಾಗ, ಮಥುರಾಗಳನ್ನು ಸಂದರ್ಶಿಸಿ ಕೊನೆಗೆ ವೃಂದಾವನಕ್ಕೆ ಬಂದರು. ವೃಂದಾವನದ ಹನ್ನೆರಡು ವನಗಳನ್ನು ಸಂದರ್ಶಿಸಿದ ಬಳಿಕ, ಅವರು ವೃಂದಾವನ ನಗರಿಯಲ್ಲಿದ್ದ ಗೋಪಾಲ ಮಂದಿರಕ್ಕೆ ಬಂದರು. ಅಲ್ಲಿ ಯುವಕನ ಸೇವೆಯಿಂದ ಸಂಪ್ರೀತನಾದ ವೃದ್ಧನು ಅವನಿಗೆ ಊರಿಗೆ ಹಿಂದಿರುಗಿದ ಬಳಿಕ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವೆನೆಂದು ಹೇಳಿದನು. ಆದರೆ ಯುವಕನು ತಾನು ಬಡವನೆಂದೂ ಆ ವೃದ್ಧನು ಶ್ರೀಮಂತನೆಂದೂ ಈ ಮದುವೆ ನಡೆಯುವುದು ಸಾಧ್ಯವಿಲ್ಲವೆಂದೂ ವಾದಿಸಿದನು. ಅಲ್ಲದೇ ಆ ವೃದ್ಧನು ಒಪ್ಪಿದರೂ ಅವನ ಮನೆಮಂದಿ ಇದಕ್ಕೊಪ್ಪುವುದಿಲ್ಲವೆಂದೂ ವಾದಿಸಿದನು. ಆದರೆ ವೃದ್ಧನು, ತನ್ನ ಮಗಳು ತನ್ನ ಸ್ವತ್ತಾದ್ದರಿಂದ ಅವಳನ್ನು ಯಾರಿಗಾದರೂ ಕೊಡುವ ಅಧಿಕಾರ ತನ್ನದೆಂದೂ ತಾನು ಯುವಕನಿಗೆ ಅವಳನ್ನು ಕೊಟ್ಟೇ ಕೊಡುವೆನೆಂದೂ ಹೇಳಿದನು.

ಅದಕ್ಕೆ ಯುವಕನು, ಇದು ನಿಜವಾದರೆ, ಈ ಮಾತನ್ನು ಆ ದೇವಾಲಯದ ಗೋಪಾಲನ ಮುಂದೆ ಹೇಳಿ ಅವನನ್ನೇ ಸಾಕ್ಷಿಯಾಗಿರಿಸಬೇಕೆಂದನು. ಸರಿಯೆಂದು ಒಪ್ಪಿದ ವೃದ್ಧನು ಶ್ರೀ ಗೋಪಾಲ ವಿಗ್ರಹದ ಮುಂದೆಯೇ ಯುವಕನಿಗೆ ಮಾತುಕೊಟ್ಟನು. ಅನಂತರ ಅವರಿಬ್ಬರೂ ತಮ್ಮ ಊರಿಗೆ ಹಿಂದಿರುಗಿದರು.

ಊರಿನಲ್ಲಿ ಅವನು ಈ ವಿಷಯವನ್ನು ಮನೆಯಲ್ಲಿ ಪ್ರಸ್ತಾವ ಮಾಡಲು ಮನೆಯವರಾರೂ ಒಪ್ಪಲಿಲ್ಲ. ತಮ್ಮನ್ನು ಧಿಕ್ಕರಿಸಿ ಮುಂದುವರಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವೆವೆಂದೂ ಹೆದರಿಸಿದರು! ಆದರೆ ಆ ಬ್ರಾಹ್ಮಣನು ತಾನು ಮಾತುಕೊಟ್ಟಿರುವೆನೆಂದು ಪರಿತಪಿಸಿದಾಗ, ಅವನ ಹಿರಿಯ ಮಗನು, ಅವನಿಗೆ ತಾನೇನು ಹೇಳಿದೆನೋ ನೆನಪಿಲ್ಲವೆಂದು ಹೇಳಲು ಹೇಳಿದನು. ಇದರಿಂದ ನೊಂದ ಆ ಬ್ರಾಹ್ಮಣನು ತನ್ನ ಮಾತನ್ನೂ ಬಾಂಧವರನ್ನೂ ಉಳಿಸುವಂತೆ ಶ್ರೀಕೃಷ್ಣನನ್ನೇ ಬೇಡಿಕೊಂಡನು. ಅನಂತರ ಯುವ ಬ್ರಾಹ್ಮಣನು ಹೆಣ್ಣು ಕೇಳಿಕೊಂಡು ಇವನ ಬಳಿ ಬಂದನು. ಆದರೆ ಇವನು ಏನೂ ಮಾತಾಡಲಿಲ್ಲ. ಯುವಕನು ಮತ್ತೆ ಮತ್ತೆ ಕೇಳಲು, ವೃದ್ಧನ ಮಗ ಅವನನ್ನು ಹೊಡೆಯಲು ಹೊರಟನು.

ಯುವಕನು ಹೊರಟು ಹೋಗಿ, ಮರುದಿನ, ಗ್ರಾಮದ ಜನರನ್ನು ಸೇರಿಸಿಕೊಂಡು ಬಂದನು. ಅವರೆಲ್ಲರೂ ವೃದ್ಧ ಬ್ರಾಹ್ಮಣನನ್ನು ವಿಚಾರಿಸಲು, ಅವನು ತಾನೇನು ಹೇಳಿದೆನೋ ತನಗೆ ನೆನಪಿಲ್ಲವೆಂದನು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಅವನ ಮಗ ಒಂದು ಕಥೆ ಕಟ್ಟಿದನು, “ತೀರ್ಥಯಾತ್ರೆ ಮಾಡುತ್ತಿದ್ದಾಗ ನನ್ನ ತಂದೆ ತಮ್ಮ ಬಳಿ ಬಹಳ ಹಣವಿರಿಸಿಕೊಂಡಿದ್ದರು. ಅವರ ಬಳಿ, ಈ ಯುವಕನೊಬ್ಬನೇ ಇದ್ದುದರಿಂದ, ಆ ಹಣವನ್ನು ನೋಡಿದ್ದ ಇವನು, ಅದನ್ನು ಕದಿಯಲೆಂದು ಅವರಿಗೆ ತಿನ್ನಲು ದತ್ತೂರದ ಹಣ್ಣನ್ನು ಕೊಟ್ಟನು! ಅದನ್ನು ತಿಂದು ನನ್ನ ತಂದೆ ಚಿತ್ತಭ್ರಮೆಗೊಳಗಾದಾಗ ಇವನು ಅವರ ಹಣವನ್ನು ಕದ್ದುಬಿಟ್ಟನು! ಅವರಿಗೆ ಜ್ಞಾನ ಮರುಕಳಿಸಿದಾಗ, ಇವನು ಆ ಹಣವನ್ನು ಯಾರೋ ಕಳ್ಳನು ಕದ್ದನೆಂದು ಸುಳ್ಳು ಹೇಳಿದನು. ಈಗ ನನ್ನ ತಂದೆ ಮಗಳನ್ನು ಕೊಡುವೆನೆಂದಿದ್ದರು ಎಂದು ಸುಳ್ಳು ಹೇಳುತ್ತಿದ್ದಾನೆ. ಇಂಥ ಬಡ ಬ್ರಾಹ್ಮಣನಿಗೆ ನನ್ನ ತಂಗಿಯನ್ನು ಕೊಡುವುದು ಯೋಗ್ಯವೇ ಎಂದು ನೀವೇ ನಿರ್ಧರಿಸಿ!”

ಅವನು ಹೀಗೆ ಹೇಳಲು ಜನರಿಗೆ ಯುವಕನ ಬಗ್ಗೆ ಸ್ವಲ್ಪ ಅನುಮಾನವಾಯಿತು. ಹುಡುಗಿಗಾಗಿ ಅವನು ದಾರಿ ತಪ್ಪಿರಬಹುದೆಂದು ಅವರು ಭಾವಿಸಿದರು. ಆಗ ಯುವಕನು, ವೃದ್ಧನು ಹೇಗೆ ತನ್ನ ಸೇವೆಯನ್ನು ಮೆಚ್ಚಿ ಮಾತುಕೊಟ್ಟಿದ್ದನೆಂದೂ ತಾನೇ ಅದು ನಡೆಯದೆಂದಾಗ, ಗೋಪಾಲವಿಗ್ರಹವನ್ನೇ ಸಾಕ್ಷಿಯಾಗಿಟ್ಟುಕೊಂಡು ಮಾತು ಕೊಟ್ಟಿದ್ದನೆಂದೂ ಹೇಳಿದನು. ಆಗ ವೃದ್ಧ ಬ್ರಾಹ್ಮಣನ ಮಗನು ಮಾತನಾಡಿ, ಆ ಗೋಪಾಲನೇ ಸಾಕ್ಷಿ ಹೇಳಿದರೆ ತಾನು ತನ್ನ ತಂಗಿಯನ್ನು ಕೊಡುವೆನೆಂದನು. ಶ್ರೀಕೃಷ್ಣನು ಬಹಳ ಕರುಣಾಶಾಲಿಯಾದುದರಿಂದ ಅವನು ಬಂದೇ ಬರುತ್ತಾನೆಂದು ವೃದ್ಧನು ಭಾವಿಸಿದನು. ಆದರೆ ಅವನ ಮಗನು, ಒಂದು ವಿಗ್ರಹವು ಬರಲು ಸಾಧ್ಯವೇ ಇಲ್ಲವೆಂದು ಭಾವಿಸಿ ಇದು ಒಳ್ಳೆಯ ತೀರ್ಮಾನವೆಂದನು. ಆಗ ಯುವಕನು ಪುನಃ ವೃದ್ಧನು ಮಾತಿಗೆ ತಪ್ಪಬಹುದೆಂದು ಇದನ್ನು ಬರೆಯಿಸಿ ದಾಖಲು ಮಾಡಿಸಿದನು.

ವೃಂದಾವನಕ್ಕೆ ಹೋಗಿ ಶ್ರೀಗೋಪಾಲನಿಗೆ ಪ್ರಾರ್ಥನೆ ಸಲ್ಲಿಸಿ ನಡೆದುದೆಲ್ಲವನ್ನೂ ನಿವೇದಿಸಿಕೊಂಡನು, ಹಾಗೂ ಸಾಕ್ಷಿಯಾಗಿ ಬರುವಂತೆ ಬೇಡಿಕೊಂಡನು. ಅವನ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನು, “ನೀನು ಹಿಂದಿರುಗಿ ಹೋಗಿ ಎಲ್ಲರನ್ನೂ ಸೇರಿಸು. ಅನಂತರ ನನ್ನನ್ನು ಸ್ಮರಿಸಿದ ಕೂಡಲೇ ನಾನು ಪ್ರತ್ಯಕ್ಷನಾಗಿ ಸಾಕ್ಷಿ ಹೇಳುತ್ತೇನೆ!” ಎಂದನು. ಆದರೆ ಯುವಕನು ಒಪ್ಪದೇ ತನ್ನೊಂದಿಗೇ ಬರುವಂತೆ ಬೇಡಿಕೊಂಡನು.

ಅದಕ್ಕೆ ಶ್ರೀಕೃಷ್ಣನು, “ವಿಗ್ರಹವು ನಡೆದು ಬರುವುದು ಎಲ್ಲಾದರೂ ಸಾಧ್ಯವೇ? ಎನ್ನಲು, ಯುವಕನು, “ವಿಗ್ರಹವು ನನ್ನೊಂದಿಗೆ ಮಾತನಾಡುತ್ತಿರುವಾಗ ನಡೆದು ಬರಲಾರದೇಕೆ? ಪ್ರಭು! ನೀನು ಬರಿಯ ವಿಗ್ರಹವಲ್ಲ! ನೀನೇ ನಂದಮಹಾರಾಜನ ಮಗ, ಶ್ರೀಕೃಷ್ಣ! ಆ ವೃದ್ಧ ಬ್ರಾಹ್ಮಣನ ಮಾತನ್ನುಳಿಸಲು ಹಿಂದೆಂದೂ ಮಾಡಿರದ ಈ ಅದ್ಭುತಕಾರ್ಯ ಮಾಡು!” ಎಂದು ಬೇಡಿಕೊಂಡನು. ಅದಕ್ಕೆ ಶ್ರೀಕೃಷ್ಣನು, “ಆಗಲಿ! ನಾನು ನಿನ್ನ ಹಿಂದೆ ನಡೆದು ಬರುತ್ತೇನೆ! ಆದರೆ ನೀನು ಹಿಂದೆ ತಿರುಗಿ ನನ್ನನ್ನು ನೋಡಬಾರದು. ಹಾಗೆ ನೀನು ನೋಡಿದರೆ ನಾನು ಕೂಡಲೇ ಅಲ್ಲೇ ನಿಂತುಬಿಡುತ್ತೇನೆ! ನನ್ನ ಕಾಲ್ಗೆಜ್ಜೆಗಳ ಶಬ್ದದಿಂದ ನಾನು ಬರುತ್ತಿರುವೆನೆಂದು ನೀನು ತಿಳಿಯಬಹುದು,” ಎಂದನು. ಯುವಕನು ಒಪ್ಪಿ ನಡೆಯುತ್ತಾ ಹೋದನು. ಶ್ರೀಕೃಷ್ಣನೂ ಅವನನ್ನು ಹಿಂಬಾಲಿಸತೊಡಗಿದನು. ಶ್ರೀಕೃಷ್ಣನ ಗೆಜ್ಜೆಶಬ್ದ ಕೇಳಿಬರುತ್ತಿದ್ದುದರಿಂದ ಅವನು ಬರುತ್ತಿದ್ದಾನೆಂಬ ಧೈರ್ಯದಲ್ಲಿ ಬ್ರಾಹ್ಮಣನು ಮುಂದೆ ಮುಂದೆ ಹೋದನು. ಆದರೆ ಅವರು ಗೋದಾವರೀ ನದಿಯಲ್ಲಿ ಇಳಿದು ನದಿ ದಾಟಿದಾಗ ಕಾಲು ಒದ್ದೆಯಾಗಲು, ಅನಂತರ ಮಣ್ಣಿನಲ್ಲಿ ಕಾಲಿಟ್ಟು ಬರುವಾಗ ಶ್ರೀಕೃಷ್ಣನ ಗೆಜ್ಜೆ ಶಬ್ದ ಕೇಳಲಿಲ್ಲ! ಗಾಬರಿಯಾದ ಬ್ರಾಹ್ಮಣನು ಹಿಂದೆ ತಿರುಗಿ ನೋಡಲು, ಶ್ರೀಕೃಷ್ಣನು ಅಲ್ಲೇ ನಿಂತುಬಿಟ್ಟ!

ಅಷ್ಟುಹೊತ್ತಿಗೆ ಅವರು ವಿದ್ಯಾನಗರದ ಹೊರವಲಯಕ್ಕೆ ಬಂದಿದ್ದರು. ಬ್ರಾಹ್ಮಣನು ಊರಿನೊಳಗೆ ಹೋಗಿ ಗೋಪಾಲನ ಶ್ರೀವಿಗ್ರಹವು ಸಾಕ್ಷಿ ಹೇಳಲು ಬಂದಿದೆಯೆಂದು ಜನರಿಗೆ ಹೇಳುತ್ತಾ ಎಲ್ಲರನ್ನೂ ಕರೆದೊಯ್ದನು. ಎಲ್ಲರೂ ಶ್ರೀವಿಗ್ರಹವನ್ನು ನೋಡಿ ಸ್ತಂಭೀಭೂತರಾದರು! ವೃದ್ಧ ಬ್ರಾಹ್ಮಣನು ಶ್ರೀವಿಗ್ರಹಕ್ಕೆ ದಂಡವತ್ಪ್ರಣಾಮ ಮಾಡಿದನು! ಆಗ ಶ್ರೀಗೋಪಾಲನು ಎಲ್ಲರ ಮುಂದೆಯೂ ವೃದ್ಧ ಬ್ರಾಹ್ಮಣನು ಕೊಟ್ಟ ಮಾತಿನ ವಿಷಯದಲ್ಲಿ ಸಾಕ್ಷಿ ಹೇಳಿದನು! ಎಲ್ಲರೂ ಭಗವಂತನಿಗೆ ಭಕ್ತಿಯಿಂದ ಪ್ರಣಾಮ ಮಾಡಿದರು.

ಅನಂತರ, ವೃದ್ಧನು ತಾನು ಮಾತು ಕೊಟ್ಟಂತೆ ತನ್ನ ಮಗಳನ್ನು ಯುವಕನಿಗೆ ಕೊಟ್ಟು ಮದುವೆ ಮಾಡಿದನು. ಹೀಗೆ ಮದುವೆಯಾದ ಬಳಿಕ, ಗೋಪಾಲನು ತನ್ನ ಭಕ್ತರಿಬ್ಬರಿಗೂ ಒಂದು ವರವನ್ನು ಬೇಡಲು ಹೇಳಿದನು. ಆಗ ಅವರಿಬ್ಬರೂ ಭಗವಂತನಿಗೆ, ಈ ವಿಷಯ ಲೋಕಕ್ಕೆಲ್ಲಾ ತಿಳಿಯಲು ಇಲ್ಲಿಯೇ ನೆಲೆಸಿರುವಂತೆ ಬೇಡಿಕೊಂಡರು. ಅಂತೆಯೇ ಭಗವಂತನು ಅಲ್ಲಿಯೇ ನೆಲೆಸಿದನು.

ಈ ವಿಷಯ ಎಲ್ಲೆಲ್ಲೂ ಹರಡಿ ಜನರು ಎಲ್ಲೆಡೆಯಿಂದಲೂ ಭಗವಂತನನ್ನು ನೋಡಲು ಬರತೊಡಗಿದರು. ಸಾಕ್ಷಿ ಗೋಪಾಲನೆಂದು ಪ್ರಸಿದ್ಧನಾಗಿದ್ದ ಭಗವಂತನಿಗಾಗಿ ರಾಜನು ಒಂದು ದೇವಾಲಯವನ್ನು ನಿರ್ಮಿಸಿದ. ಭಗವಂತನು ಹಾಗೆ ವಿದ್ಯಾನಗರಿಯಲ್ಲಿ ಬಹುಕಾಲ ನೆಲೆಸಿರಲು, ಒಮ್ಮೆ ಒರಿಸ್ಸಾದ ರಾಜನಾದ ಪುರುಷೋತ್ತಮನು ವಿದ್ಯಾನಗರದ ರಾಜನನ್ನು ಯುದ್ಧದಲ್ಲಿ ಸೋಲಿಸಿ ಅವನ ಮಾಣಿಕ್ಯ ಸಿಂಹಾಸನವನ್ನು ವಶಪಡಿಸಿಕೊಂಡ. ಭಗವಂತನ ಭಕ್ತನಾಗಿದ್ದ ಅವನು ಭಗವಂತನನ್ನು ತನ್ನ ರಾಜ್ಯಕ್ಕೆ ಬರುವಂತೆ ಬೇಡಲು ಭಗವಂತನು ಒಪ್ಪಿದ. ಆಗ ಅವನು ಭಗವಂತನ ಶ್ರೀವಿಗ್ರಹವನ್ನು ಕಟಕ್‌ಗೆ ತಂದು ಪ್ರತಿಷ್ಠಾಪಿಸಿದ. ಆಗ ಈ ವಿಗ್ರಹವನ್ನು ನೋಡಿದ ಅವನ ರಾಣಿ, ಭಕ್ತಿಪರವಶತೆಯಿಂದ ಅನೇಕ ಆಭರಣಗಳನ್ನು ಅರ್ಪಿಸಿದಳು. ಶ್ರೀ ವಿಗ್ರಹದ ನಾಸಿಕದಲ್ಲಿ ಒಂದು ರಂಧ್ರವಿದ್ದಿದ್ದರೆ ತನ್ನಲ್ಲಿದ್ದ ಒಂದು ಅಮೂಲ್ಯವಾದ ಮುತ್ತಿನ ಮೂಗುತಿಯನ್ನೂ ಅರ್ಪಿಸಬಹುದಿತ್ತಲ್ಲ ಎಂದು ಅವಳು ಪರಿತಪಿಸಿದಳು. ಆಗ ಭಗವಂತ ಅವಳ ಕನಸಿನಲ್ಲಿ ಬಂದು ತನ್ನ ಬಾಲ್ಯದಲ್ಲಿ ತನ್ನ ತಾಯಿಯು ತನ್ನ ಮೂಗಿನಲ್ಲಿ ಒಂದು ರಂಧ್ರ ಮಾಡಿ ಮೂಗುತಿ ಹಾಕಿದ್ದಳೆಂದೂ ಅದು ಈಗಲೂ ಇದೆಯೆಂದೂ ಹೇಳಲು ಅವಳು ತನ್ನ ಪತಿಯೊಂದಿಗೆ ಸಂತೋಷದಿಂದ ಬಂದು ಶ್ರೀವಿಗ್ರಹಕ್ಕೆ ಮೂಗುತಿ ತೊಡಿಸಿದಳು.

ಇಲ್ಲಿ ರಾಧೆಯ ವಿಗ್ರಹ ಹೇಗೆ ಬಂತೆಂಬುದಕ್ಕೆ ಒಂದು ಕಥೆ ಹೇಳುತ್ತಾರೆ. ಅದರಂತೆ, ಸಾಕ್ಷಾತ್‌ ರಾಧೆಯೇ ಗೋಪಾಲ ದೇವಾಲಯದ ಅರ್ಚಕರಾದ ವಿಲಾಸ್ವರ ಮೋಹಪಾತ್ರರ ಪುತ್ರಿಯಾಗಿ ಲಕ್ಷ್ಮಿ ಎಂಬ ಹೆಸರಿನಲ್ಲಿ ಜನಿಸಿದಳು. ಅವಳು ಯೌವನಕ್ಕೆ ಕಾಲಿಟ್ಟಾಗ ವಿಚಿತ್ರ ಘಟನೆಗಳಾಗತೊಡಗಿದವು. ಕೆಲವೊಮ್ಮೆ ಗೋಪಾಲಸ್ವಾಮಿಯ ಹಾರ, ರಾತ್ರಿಯಲ್ಲಿ ಲಕ್ಷ್ಮಿಯ ಹಾಸಿಗೆಯ ಮೇಲೆ ಕಂಡುಬರುತ್ತಿತ್ತು! ಕೆಲವೊಮ್ಮ ಲಕ್ಷ್ಮಿಯ ವಸ್ತ್ರ, ಗೋಪಾಲಸ್ವಾಮಿಯ ಮುಚ್ಚಿದ ಕೋಣೆಯಲ್ಲಿ, ಬೆಳಗ್ಗೆ ಅದನ್ನು ತೆರೆದಾಗ ಕಂಡುಬರುತ್ತಿತ್ತು! ಈ ವಿಷಯ, ಒಬ್ಬರಿಂದೊಬ್ಬರಿಗೆ ಹರಡುತ್ತಾ ಕೊನೆಗೆ ರಾಜನಿಗೂ ತಲಪಿತು. ಆಗ ಪಂಡಿತರೊಡನೆ ಸಮಾಲೋಚನೆ ನಡೆಸಿ, ಗೋಪಾಲಸ್ವಾಮಿಯ ಪಕ್ಕದಲ್ಲಿ ರಾಧಾದೇವಿಯ ವಿಗ್ರಹವನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಲಾಯಿತು. ಅಂತೆಯೇ ಮಾಡಲಾಯಿತು ಕೂಡ. ಆದರೆ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಿರುವಾಗ, ಲಕ್ಷ್ಮಿಯು ಕೊನೆಯುಸಿರೆಳೆದು ಮೃತಳಾದಳು! ಆಗ ನೋಡಿದರೆ, ಆ ವಿಗ್ರಹ ಲಕ್ಷ್ಮಿಯನ್ನೇ ಹೋಲುತ್ತಿತ್ತು! ಇದರಿಂದ ಎಲ್ಲರಿಗೂ ಅತ್ಯಾಶ್ಚರ್ಯವಾಯಿತು! ಹೀಗೆ ರಾಧಾಕೃಷ್ಣರ ವಿಗ್ರಹಗಳನ್ನು ದರ್ಶಿಸಿದ್ದಕ್ಕಾಗಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಒಂಬತ್ತನೆಯ ದಿನದಂದು ಹಬ್ಬ ಆಚರಿಸುತ್ತಾರೆ.

ಹೀಗೆ ವಿಗ್ರಹವೇ ಸಾಕ್ಷಿ ಹೇಳಿದ ಅಪೂರ್ವ ಕಥೆ ಹೊಂದಿರುವ ಸಾಕ್ಷಿಗೋಪಾಲ ದೇವಾಲಯ, ಭಾರತದಲ್ಲೇ ಒಂದು ವಿಶಿಷ್ಟ ದೇವಾಲಯವಾಗಿದೆ.

ಈ ಲೇಖನ ಶೇರ್ ಮಾಡಿ