ದೈವಬಾಹಿರ ನಾಗರಿಕತೆ ಶವಾಲಂಕರಣಕ್ಕಿಂತ ಉತ್ತಮವಾದುದಲ್ಲ
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಲಾಸ್‌ಏಂಜಲೀಸ್‌ನಲ್ಲಿ
1973ನೇ ಇಸವಿ ಡಿಸೆಂಬರ್ 1ರಂದು ಮಾಡಿದ ಉಪನ್ಯಾಸ.
ತದ್ವೈ ಧನುಸ್ತ ಇಷವಃ ಸ ರಥೋ ಹಯಾಸ್ತೇ
ಸೋಽಹಂ ರಥೀ ನೃಪತಯೋ ಯತ ಆನಮಂತಿ ।
ಸರ್ವಂ ಕ್ಷಣೇನ ತದಭೂದಸದೀಶರಿಕ್ತಂ
ಭಸ್ಮನ್ ಹುತಂ ಕುಹಕರಾದ್ಧಮಿವೋಪ್ತಮೂಷ್ಯಾಮ್ ॥
“ಈಗಲೂ ನನ್ನ ಬಳಿ ಅದೇ ಗಾಂಡೀವವಿದೆ, ಅವೇ ಬಾಣಗಳಿವೆ. ಅವೇ ಕುದುರೆಗಳು ಎಳೆಯುತ್ತಿರುವ ಅದೇ ರಥವಿದೆ. ರಾಜಮಹಾರಾಜರು ಗೌರವ ಸಲ್ಲಿಸುತ್ತಿದ್ದ ಆಗಿನಂತೆಯೇ ಈಗಲೂ ನಾನು ಅವುಗಳನ್ನು ಉಪಯೋಗಿಸುತ್ತಿದ್ದೇನೆ. ಆದರೆ, ನನ್ನ ಕೃಷ್ಣಪ್ರಭುವಿಲ್ಲದೆ ಅವೆಲ್ಲವೂ ಕ್ಷಣಮಾತ್ರದಲ್ಲಿ ಶೂನ್ಯಪ್ರಾಯವಾಗಿ ಬಿಟ್ಟಿವೆ. ತುಪ್ಪವನ್ನು ಬೂದಿಯಲ್ಲಿ ಹೋಮ ಮಾಡಿದ ಹಾಗೆ, ಮಂತ್ರ ದಂಡವನ್ನಾಡಿಸಿ ಸಂಗ್ರಹಿಸಿದ ಹಣದ ಹಾಗೆ, ಬಂಜರು ನೆಲದಲ್ಲಿ ಬಿತ್ತಿದ ಬೀಜದ ಹಾಗೆ ಅವು ವ್ಯರ್ಥವಾಗಿವೆ.”
(ಶ್ರೀಮದ್ ಭಾಗವತಮ್: 1.15.21)

ಭಗವಂತನ ಅಸ್ತಿತ್ವವಿಲ್ಲದೆ ಎಲ್ಲವೂ ತನ್ನ ಸಾಧುತ್ವ ಸಿಂಧುತ್ವವನ್ನು ಕಳೆದುಕೊಳ್ಳುತ್ತವೆ ಎಂಬುದು ಈ ಮುಖ್ಯ ಶ್ಲೋಕದ ತಾತ್ಪರ್ಯ. ಆದುದರಿಂದ ಈ ದೈವವಿದೂರ ನಾಗರಿಕತೆಯನ್ನು ಯಾವುದೇ ಕ್ಷಣದಲ್ಲಿಯೂ ಅಳಿಸಬಹುದು. ಯಾವುದೇ ಕ್ಷಣದಲ್ಲಿಯೂ ಯುದ್ಧ ಸಾರಿದ ಕೂಡಲೇ ಅಮೆರಿಕ, ರಷ್ಯಾ ಮೇಲೆ ಅಣುಬಾಂಬ್ ಹಾಕುತ್ತದೆ, ಮತ್ತು ರಷ್ಯಾ ಅಮೆರಿಕದ ಮೇಲೆ ಅಣುಬಾಂಬ್ ಎಸೆಯುತ್ತದೆ. ಇಬ್ಬರೂ ಸನ್ನದ್ಧರಾಗಿರುವ ಕಾರಣ ಯಾರೂ ವಿಜಯಿಯಾಗಲಾರರು. ಅಮೆರಿಕ ನಾಶಹೊಂದುತ್ತದೆ. ರಷ್ಯಾ ಅಳಿಯುತ್ತದೆ. ಪರಿಸ್ಥಿತಿ ಹೀಗಿದೆ.
ಹೀಗಾಗಿ ನೀವು ನಾಗರಿಕತೆಯ ಅಭಿವೃದ್ಧಿ ಸಾಧಿಸಬಹುದು – ವೈಜ್ಞಾನಿಕ ಸುಧಾರಣೆ, ಆರ್ಥಿಕ ಅಭಿವೃದ್ಧಿ – ಆದರೆ ಅದು ದೈವ ವರ್ಜಿತವಾಗಿದ್ದರೆ, ಯಾವುದೇ ಕ್ಷಣ ಅದನ್ನು ಅಳಿಸಬಹುದು. ರಾವಣ ಮತ್ತು ಹಿರಣ್ಯಕಶಿಪು ಇದಕ್ಕೆ ಒಳ್ಳೆಯ ನಿದರ್ಶನಗಳು. ಅವರು ನಾಸ್ತಿಕರು, ರಾಕ್ಷಸರು. ವೇದವಾಙ್ಮಯದ ಜ್ಞಾನದಲ್ಲಿ ರಾವಣ ಪಾರಂಗತ, ಭೌತಿಕವಾಗಿ ಬಲಿಷ್ಠ, ಅವನು ತನ್ನ ರಾಜಧಾನಿಯಲ್ಲಿ ಎಲ್ಲ ಸೌಧಗಳನ್ನು, ಎಲ್ಲವನ್ನು ಸ್ವರ್ಣದಲ್ಲೇ ನಿರ್ಮಿಸಿದ.
ರಾವಣ ಭೂಮಿಯನ್ನು ಕೊರೆದು ಸುರಂಗ ಮಾರ್ಗವನ್ನು ನಿರ್ಮಿಸಿದನೆಂದು ರಾಮಾಯಣದಲ್ಲಿ ಉಕ್ತವಾಗಿದೆ. ರಾವಣ ಶ್ರೀಲಂಕಾದಲ್ಲಿ ವಾಸವಾಗಿದ್ದ, ಅಲ್ಲಿಂದ ಭೂಮಿಯ ಎದುರು ಭಾಗದಲ್ಲಿ ಇರುವುದು ಬ್ರೆಜಿಲ್. ಬ್ರೆಜಿಲ್‌ನಲ್ಲಿ ಹಲವಾರು ಚಿನ್ನದ ಗಣಿಗಳಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ ರಾವಣ ಬೃಹತ್ ಪ್ರಮಾಣದ ಚಿನ್ನವನ್ನು ಬ್ರೆಜಿಲ್‌ನಿಂದ ಆಮದು ಮಾಡಿದನೆಂದು ಊಹಿಸಬಹುದು. ಆ ಚಿನ್ನವನ್ನು ಬಳಸಿ ಬೃಹತ್‌ಸೌಧ ಸಮುಚ್ಚಯವನ್ನು ನಿರ್ಮಿಸಿದ. ಆದುದರಿಂದ ತನ್ನ ಇಡೀ ರಾಜಧಾನಿಯನ್ನು ಸ್ವರ್ಣನಗರಿಯನ್ನಾಗಿ ಮಾಡುವಷ್ಟು ರಾವಣ ಬಲಿಷ್ಠನಾಗಿದ್ದ. ಇದು ಆಶ್ಚರ್ಯಕರ.
ಹಾಗೆಯೇ ನಾವು ಹಲವಾರು ಅಚ್ಚರಿಗೊಳಿಸುವಂಥವನ್ನು ಸೃಷ್ಟಿಸಬಹುದು, ಆದರೆ ನಾವು ರಾವಣನ ನಿದರ್ಶನವನ್ನು ಪರಿಭಾವಿಸಬೇಕು. ಭೌತಿಕ ಸಂಪತ್ತಿನಲ್ಲಿ ಆತ ಅತಿ ಶ್ರೀಮಂತ, ಅಪಾರ ವೇದಶಾಸ್ತ್ರ ಪ್ರಾವೀಣ್ಯ ಪಡೆದವ. ಅವನು ವಿಪ್ರಪುತ್ರ. ಆತನಲ್ಲಿ ಎಲ್ಲವೂ ಇತ್ತು. ಆತ ಭಗವಾನ್ ರಾಮನನ್ನು ಲೆಕ್ಕಿಸಲಿಲ್ಲವೆಂಬುದೇ ಅವನು ಎಸಗಿದ ಏಕೈಕ ಪ್ರಮಾದ. ಅದೇ ಅವನ ತಪ್ಪು. “ಓ! ಯಾರು ಆ ರಾಮ? ನಾನು ಅವನನ್ನು ಲೆಕ್ಕಿಸಲಾರೆ. ಸ್ವರ್ಗವನ್ನಾಳುವ ಎತ್ತರಕ್ಕೆ ಏರಲು ಯಾಗ, ಯಜ್ಞಾದಿಗಳ ಅಗತ್ಯವಿಲ್ಲ. ನಾನು ಚಂದ್ರಗ್ರಹದವರೆಗೆ ಸೋಪಾನಗಳನ್ನು ನಿರ್ಮಿಸುತ್ತೇನೆ.” ಇದು ರಾವಣನ ಆಲೋಚನೆ.
ಅಂತೆಯೇ ಭಗವಂತನನ್ನು ಧಿಕ್ಕರಿಸಿ, ಆಧುನಿಕ ನಾಗರಿಕರು ರಾವಣನಂತೆ ಎಲ್ಲ ಐಹಿಕ ವೈಭೋಗಗಳನ್ನು ಅನುಭವಿಸಲು ಯತ್ನಿಸುತ್ತಿದ್ದಾರೆ. ಆದರೆ ಅವರು ರಾವಣನಿಂದ ಪಾಠ ಕಲಿಯಬೇಕು, ಆತನ ನಾಸ್ತಿಕತೆಯೇ ಅವನಿಗೆ ಮುಳುವಾಯಿತು. ರಾಮ ಅವನನ್ನು ಸಂಹರಿಸಿದಾಗ, ಎಲ್ಲವನ್ನೂ ಕಳೆದುಕೊಂಡ.
ಈ ಶ್ಲೋಕದಲ್ಲಿ ಅರ್ಜುನ ಕೆಲ ಗೋವಳರಿಂದ ಪರಾಭವಗೊಂಡುದನ್ನು ಕಾಣುತ್ತೇವೆ. ಅರ್ಜುನ ಚಿಂತಾಕ್ರಾಂತನಾಗಿದ್ದಾನೆ. “ನಾನು ಇದೇ ಗಾಂಡೀವ ಮತ್ತು ಬಾಣಗಳಿಂದ ಕುರುಕ್ಷೇತ್ರ ಸಮರಾಂಗಣದಲ್ಲಿ ಕಾದಾಡಿದೆ. ನಾನು ವಿಜಯಿಯಾದೆ. ಏಕೆಂದರೆ ಕೃಷ್ಣ ನನ್ನ ರಥದ ಸಾರಥ್ಯ ವಹಿಸಿದ್ದ. ಅದೊಂದೇ ಕಾರಣ. ಆದರೆ ಈಗ ಕೃಷ್ಣ ನನ್ನೊಡನಿಲ್ಲ, ಹಾಗಾಗಿ ನನ್ನ ಶಸ್ತ್ರಾಸ್ತ್ರಗಳೆಲ್ಲ ವ್ಯರ್ಥ.” ನೀತಿ: ದೈವವಿಲ್ಲದೆ, ದೈವಾನುಗ್ರಹವಿಲ್ಲದೆ, ಈ ಐಹಿಕ ವೈಭೋಗಕ್ಕೆ ಬೆಲೆಯಿಲ್ಲ.

ನಿನ್ನೆ ಬೆಳಗ್ಗೆ ವಾಯುವಿಹಾರಕ್ಕೆ ಹೊರಟಾಗ, ಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಬಗ್ಗೆ ಪ್ರಸ್ತಾಪಿಸಿದ್ದೆ. ಆತ ದೊಡ್ಡ, ಬಲು ದೊಡ್ಡ ವಿಜ್ಞಾನಿ. ಆದರೆ ಅವನ ಒಡಲಿನಿಂದ ಪುಟ್ಟ ಕಿಡಿಯಂಥ ಆತ್ಮ ದೇಹತ್ಯಾಗ ಮಾಡಿದಾಗ, ಆತನ ಮಿದುಳು ಪ್ರಯೋಜನಕ್ಕೆ ಬರಲಿಲ್ಲ. ಸಾಯುವ ಮುಂಚೆ ತನ್ನ ಪುನಶ್ಚೇತನಕ್ಕಾಗಿ ಯಾವುದೇ ಸಾಧನವನ್ನಾಗಲಿ, ಔಷಧಿಯನ್ನಾಗಲಿ ಆವಿಷ್ಕರಿಸಲು ಅವನಿಂದ ಸಾಧ್ಯವಾಗಲಿಲ್ಲ. ಆತ ತನ್ನ ವಿದ್ಯಾರ್ಥಿಗಳಿಗೂ ಬೋಧಿಸಲಾಗಲಿಲ್ಲ, “ನನ್ನ ಪ್ರಿಯ ವಿದ್ಯಾರ್ಥಿಗಳೆ! ನನ್ನ ದೇಹಾವಸಾನದ ಸಮಯದಲ್ಲಿ, ಈ ಚುಚ್ಚುಮದ್ದನ್ನು ನನಗೆ ಕೊಡಿ, ಮತ್ತೆ ನನ್ನ ಯೌವನ ಪುಟಿಯುತ್ತದೆ.” ಇಲ್ಲ, ಅವನಿಂದ ಆ ಔಷಧವನ್ನು ಆವಿಷ್ಕರಿಸಲು ಸಾಧ್ಯವಾಗಲಿಲ್ಲ.
ವಿಜ್ಞಾನಿಯಾಗಿ ಐನ್‌ಸ್ಟೀನ್, ಏನಾದರೂ ಒಂದು ಆಶ್ಚರ್ಯಕರ ಪ್ರಯೋಗ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಜನನ, ವೃದ್ಧಾಪ್ಯ, ರೋಗ ಮತ್ತು ಮರಣ. ಈ ಸಮಸ್ಯೆಗಳಿಗೆ ಅವನು ಯಾವ ಪರಿಹಾರವನ್ನು ಕಂಡುಹಿಡಿಯಲಿಲ್ಲ. ನಾನು ವಿಜ್ಞಾನಿಗಳಿಗೆ ಸವಾಲು ಹಾಕುತ್ತೇನೆ. “ಸಾವು ಬರದಂಥ ಏನಾದರೊಂದು ಮಾರ್ಗವನ್ನು ಕಂಡುಹಿಡಿಯಿರಿ. ನೀವು ಎಂತೆಂಥದ್ದೋ ಒಳ್ಳೊಳ್ಳೆಯ ಔಷಧಿಗಳನ್ನು ಕಂಡು ಹಿಡಿಯುತ್ತೀರಿ. ಔಷಧ ಮಳಿಗೆಯಲ್ಲಿ ಬಗೆಬಗೆಯ ಔಷಧಗಳು ತುಂಬಿವೆ. ಆದರೆ ಅವು ಯಾವುವೂ ಮನುಷ್ಯನನ್ನು ಸಾವಿನ ದವಡೆಯಿಂದ ತಪ್ಪಿಸಲು ಅಥವಾ ರೋಗವಿಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಅದು ಸಾಧ್ಯವಿಲ್ಲ.”
ದೈವವಿದೂರವಾದ, ಭೌತಿಕ ಪ್ರಪಂಚದಲ್ಲಿ ಮುಳುಗಿರುವ ನಾಗರಿಕತೆ, ಶವಕ್ಕೆ ಅಲಂಕಾರ ಮಾಡಿದಂತೆ. ಹಾಗೆಂದು ವೇದಸಾಹಿತ್ಯದಲ್ಲಿ ಉಕ್ತವಾಗಿದೆ.
ಭಗವದ್ ಭಕ್ತಿ ಹೀನಸ್ಯ ಜಾತಿಃ ಶಾಸ್ತ್ರಂ ಜಪಸ್ತಪಃ ।
ಅಪ್ರಾಣಸ್ಸೇವ ದೇಹಸ್ಯ ಮಂಡನಂ ಲೋಕರಂಜನಮ್ ॥
“ಕೃಷ್ಣಭಕ್ತಿ ಸೇವೆಯಿಲ್ಲದೆ, ಉನ್ನತ ಕುಲದಲ್ಲಿ ನಿಮ್ಮ ಜನನ ಮಂತ್ರೋಚ್ಚಾರ, ವೇದಾಧ್ಯಯನ, ಜಪತಪಾದಿಗಳು ವ್ಯರ್ಥ, ನಿಷ್ಪ್ರಯೋಜಕ – ಶವವನ್ನು ಅಲಂಕರಿಸಿದಂತೆ.”
ಉದಾಹರಣೆಗೆ ನೀವು ಅಮೆರಿಕನ್ನರು, ಬೃಹತ್ ರಾಷ್ಟ್ರವೊಂದರ ವಾಸಿಗಳು. ನಿಮ್ಮ ಕಾರ್ಯಚಟುವಟಿಕೆಗಳೆಲ್ಲವೂ, ವಿಶ್ವದ ಇತರೆಡೆಗೆ ಹೋಲಿಸಿದರೆ ಪರಮಾದ್ಭುತ. ನಿಮ್ಮ ತಪಶ್ಚರ್ಯೆಯಿಂದ, ನೇಮನಿಷ್ಠೆಯಿಂದ ಅಮೆರಿಕವನ್ನು ಸುರಮ್ಯ ರಾಷ್ಟ್ರವನ್ನಾಗಿ ಮಾಡಿದ್ದೀರಿ. ಅದು ಯಾದೃಚ್ಛಿಕವಾಗಿ ಪ್ರಾಪ್ತವಾದುದಲ್ಲ. ಅದು ನಿಮ್ಮ ಕಠೋರ ಶ್ರಮದ ಫಲ. ಆದರೆ ನಿಮ್ಮೆಲ್ಲ ಕಾರ್ಯಚಟುವಟಿಕೆಗಳನ್ನು ಕೃಷ್ಣನತ್ತ ನಿರ್ದೇಶಿಸದೆ ಹೋದಲ್ಲಿ ನಿಮ್ಮ ಪ್ರಯತ್ನಗಳೆಲ್ಲವೂ ವಿಫಲವಾಗುತ್ತವೆ.
ಹಾಗೆಯೇ, ವೈಜ್ಞಾನಿಕ ಆವಿಷ್ಕರಣವೆಲ್ಲವೂ ಅತ್ಯಂತ ಪ್ರಸಿದ್ಧಿ ಪಡೆದವು. ಆದರೆ ಆ ಪ್ರಸಿದ್ಧಿ ಎಂತಹುದು? ಒಂದು ಕಳೇಬರದ ಅಲಂಕರಣಕ್ಕಾಗಿ ಶ್ರಮಿಸಿದ ಹುಲುಮಾನವರನ್ನು ಹೊಗಳಿದ ಹಾಗೆ. ಮೃತ ದೇಹವನ್ನು ವಸ್ತ್ರಗಳಿಂದ ಪುಷ್ಪಾಲಂಕಾರದಿಂದ ಭೂಷಣಪ್ರಾಯವಾಗಿ ಮಾಡಬಹುದು. ಆದರೆ ಇದು ಶ್ರೀಸಾಮಾನ್ಯರನ್ನು ಮುದಗೊಳಿಸಬಹುದು, ಆದರೆ ಶರೀರ ಸಾವನ್ನಪ್ಪಿದೆ. ಅದು ಯಾವುದೇ ಅಲಂಕಾರವನ್ನು ಅನುಭವಿಸುತ್ತಿಲ್ಲ. ನೀವು ನಿಮ್ಮ ಸ್ವ ಸಂತೃಪ್ತಿಗಾಗಿ – `ಓ! ಈ ದೇಹ ನಮ್ಮ ತಂದೆಯದು. ಎಷ್ಟು ಒಳ್ಳೆಯ ಅಲಂಕಾರ!’ ಎಂದು ಸಂಭ್ರಮಿಸಬಹುದು. ನೀವು ತೀಕ್ಷ್ಣವಾಗಿ ಪರೀಕ್ಷಾತ್ಮಕ ಮನೋಭಾವದಿಂದ ಆಲೋಚಿಸಿದಾಗ, ಈ ಅಲಂಕಾರದ ವಾಸ್ತವ ಪ್ರಯೋಜನವೇನು ಎನಿಸುವುದಿಲ್ಲವೆ? ಏನೇನೂ ಲಾಭವಿಲ್ಲ.
ವಾಸ್ತವವಾಗಿ, ಈ ಸಜೀವ ಶರೀರವೂ ಮೃತ ದೇಹದಂತೆಯೇ, ಅದು ನಿಜ. ಜನ್ಮತಃ ಅದು ನಿರ್ಜಿವ ದೇಹ, ಏಕೆಂದರೆ ಅದು ಭೌತತತ್ತ್ವದಿಂದ ನಿರ್ಮಿತವಾದದ್ದು. ಭೌತತತ್ತ್ವ ಎಂದಿಗೂ ಸತ್ತಂತೆಯೆ. ಪೃಥ್ವಿ, ನೀರು, ಬೆಂಕಿ, ವಾಯುವಿನಿಂದ ನಿರ್ಮಿತವಾದ ಈ ಬಾಹ್ಯ ಶರೀರ ಸತ್ತಿದ್ದರೂ ಪುಟ್ಟ ಆತ್ಮದ ಕಿಡಿ ಇರುವುದರಿಂದ ಜೀವಂತವಿರುವಂತೆ ತೋರುತ್ತದೆ. ಅದು ಭಗವದ್ಗೀತೆಯಿಂದ ನಮಗೆ ವ್ಯಕ್ತವಾಗುತ್ತದೆ: ದೇಹಿನೋಽಸ್ಮಿನ್ ಯಥಾ ದೇಹೇ. “ದೇಹದೊಳಗೊಂದು ಪುಟ್ಟ ಆತ್ಮದ ಕಿಡಿ ಇದೆ.” ಇದು ಅಧ್ಯಾತ್ಮದ ಮೂಲ ತಿಳಿವಳಿಕೆ.

ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುತ್ತಿದ್ದಾಗ, ಅರ್ಜುನ ಶರೀರದ ಬಗ್ಗೆ ಚಿಂತಿಸುತ್ತಿದ್ದ. ಶ್ರೀಕೃಷ್ಣನನ್ನು ತನ್ನ ಆಧ್ಯಾತ್ಮಿಕ ಗುರುವನ್ನಾಗಿ ಅರ್ಜುನ ಸ್ವೀಕರಿಸಿದಾಗ ಕೃಷ್ಣ ಅವನಿಗೆ ಇಂತು ಉಪದೇಶಿಸಿದ, “ನೀನೊಬ್ಬ ಪರಮ ಜ್ಞಾನಿಯಂತೆ ಮಾತನಾಡುತ್ತಿದ್ದೀಯೆ, ಆದರೆ ವಸ್ತುಶಃ ನೀನು ಆಡುತ್ತಿರುವುದೆಲ್ಲವೂ ಮೌಢ್ಯದಿಂದ ಕೂಡಿದ್ದು.”
ನಮ್ಮ ತಥಾಕಥಿತ ವಿಜ್ಞಾನಿಗಳು ಕೂಡ ಅಂತೆಯೇ. ಅವರು ಎಲ್ಲವನ್ನೂ ತಿಳಿದವರಂತೆ ಮಾತನಾಡುತ್ತಾರೆ, ನಿಜಸ್ಥಿತಿಯನ್ನು ಅವರು ಅರಿಯರು. ಆತ್ಮವೆಂದರೇನೆಂದು ಅವರು ತಿಳಿಯರು. ದೇಹವೇ ಸರ್ವಸ್ವವೆಂದು ತಿಳಿದಿದ್ದಾರೆ. ವೇದಶಾಸ್ತ್ರಾನುಸಾರ ಯಾರು ತನ್ನನ್ನು ಶಾರೀರಿಕವಾಗಿ ಗುರುತಿಸುತ್ತಾನೋ, ಆತ ಪ್ರಾಣಿಯೇ ಸರಿ. ಆತ ಎಂ.ಎ., ಬಿ.ಎ. ಅಥವಾ ಪಿಎಚ್.ಡಿ., ಇರಬಹುದು. ಆತ ಪ್ರಾಣಿಯೇ, ಏಕೆಂದರೆ ಈ ಶರೀರವು ಹೇಗೆ ಚಲಿಸುತ್ತಿದೆ ಎಂದು ಆತ ಅರಿಯನು.
ಆತ್ಮದ ಅಸ್ತಿತ್ವವನ್ನು ಒಪ್ಪದ ವಿಜ್ಞಾನಿಗಳಿಗೆ, ಸಜೀವ, ನಿರ್ಜೀವ ದೇಹಗಳಲ್ಲಿ ವ್ಯತ್ಯಾಸ ಕಾಣದು. ಆತ್ಮವು ಶರೀರದಲ್ಲಿರುವುದರಿಂದಲೇ ಶರೀರವು ಚಲಿಸುತ್ತದೆ. ಆತ್ಮವು, ದೇಹವನ್ನು ತ್ಯಜಿಸಿದ ಮೇಲೆ ದೇಹ ನಿಶ್ಚಲ. ಪೆಟ್ರೋಲ್ ಮುಗಿದ ಕಾರು ನಿಲ್ಲುವಂತೆ. ಈಗ ಪೆಟ್ರೋಲ್ ಕೊರತೆಯಿದೆ – ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರು ಚಲಿಸುವುದು ಹೇಗೆ? ಮೋಟಾರ್ ಕಾರಿನ ಜೀವನಾಡಿಯೇ ಪೆಟ್ರೋಲ್. ಅಂತೆಯೇ ಜೀವಾತ್ಮ, ಶರೀರಕ್ಕೆ ಪೆಟ್ರೋಲ್ ಇದ್ದಂತೆ. ಚೇತನದ ಅರಿವಿಲ್ಲದವ ನಾಯಿ, ಬೆಕ್ಕಿನಂತೆ. ನಾಯಿಬೆಕ್ಕುಗಳಿಗೆ ತಮ್ಮ ಚಲನದ ಪರಿಜ್ಞಾನವಿಲ್ಲ. ಹೀಗಿರುವಾಗ ಒಬ್ಬ ಮಾನವ ಜೀವಿಗೆ ತನ್ನ ದೇಹದ ಶರೀರದ ವ್ಯಾಪಾರ ಗೊತ್ತಿಲ್ಲದಿದ್ದರೆ, ಆತ ಪ್ರಾಣಿಗಿಂತ ಮೇಲಲ್ಲ.
ಆದುದರಿಂದ, ಆತ್ಮದ ಅರಿವಿಲ್ಲವಾದರೆ, ಆ ಎಲ್ಲ ಶಿಕ್ಷಣವೂ ಮೃತದೇಹಕ್ಕೆ ಅಲಂಕಾರ ಮಾಡಿದಂತೆ. ಅದರಿಂದ ಲಾಭವೇನು? ನಿಮ್ಮ ಶಾರೀರಿಕ ವ್ಯಾಪಾರವನ್ನು ನಡೆಸುವ ಚೇತನದ ಅರಿವಿಲ್ಲವಾದರೆ, ಕೇವಲ ದೇಹವನ್ನು ಮಾತ್ರ ಅಂದಗೊಳಿಸಿದರೆ, ಶ್ರೀ ಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಬಹುದಷ್ಟೆ. ಆದರೆ ಅದಕ್ಕೆ ಕಿಮ್ಮತ್ತಿಲ್ಲ.
ನಾವು ಚೇತನರು ಪರಮಾತ್ಮನ ಅವಿಭಾಜ್ಯ ಅಂಗ. ಈ ದೇಹ ಸುಂದರ, ಕಾರಣ ನಾವು ಅದರೊಳಗಿದ್ದೇವೆ. ನೀವು ದೊಡ್ಡ ವಿಜ್ಞಾನಿ, ವೇದಾಂತಿ, ಅಥವಾ ರಾಜಕಾರಣಿಯೇ ಆಗಿರಬಹುದು. ಆದರೆ ಆತ್ಮದ ವಿನಾ, ನಿಮ್ಮ ಶರೀರ ನಿಷ್ಪ್ರಯೋಜಕ, ನಿರ್ಜೀವ ಶರೀರ. ನೀವು ಅದಕ್ಕೆ ಏನೆಲ್ಲ ಪದವಿ, ಬಿರುದು ಬಾವಲಿಗಳನ್ನು ಕೊಡಬಹುದು – ಎಂ.ಎ., ಬಿ.ಎ., ಪಿಎಚ್.ಡಿ., ಆದರೆ ಅವೆಲ್ಲವೂ ವ್ಯರ್ಥ. ಒಬ್ಬ ಸತ್ತಿರುವನೆಂದು ಭಾವಿಸಿ, ಯಾರೋ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆತನಿಗೆ ಒಂದು ಪದವಿ ನೀಡಲು ಬರುತ್ತಾನೆಂದುಕೊಳ್ಳೋಣ, “ಈಗ ನೀನೊಬ್ಬ ಪಿಎಚ್.ಡಿ.,” ಆ ಪದವಿ ತಂದ ಭಾಗ್ಯವೇನು? ಅಥವಾ ಎಲ್ಲರ ಗಮನ ಸೆಳೆದ ಸುಂದರಿಯೊಬ್ಬಳು, ಸತ್ತಳೆಂದು ಭಾವಿಸೋಣ. ಆಕೆಯನ್ನು ನಿಮಗೆ ಅರ್ಪಿಸಿ – “ಈ ದೇಹವನ್ನು ಒಯ್ಯಿರಿ. ನಿಮ್ಮ ಮನಬಂದಂತೆ ಬಳಸಬಹುದು.” ನೀವು ಇಷ್ಟಪಡಲಾರಿರಿ. ಯಾಕೆ? ಅದೇ ಸುಂದರಿ ಅಲ್ಲಿ ಮಲಗಿದ್ದಾಳೆ. ನೀವೇಕೆ ಅವಳನ್ನು ಒಯ್ಯಲಾರಿರಿ? ಇಲ್ಲ, ಅದು ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ.
ಈ ಸಂದರ್ಭದಲ್ಲಿ ನಿಮಗೆ ಒಂದು ಕತೆ ಹೇಳಬೇಕು. ಒಮ್ಮೆ ಓರ್ವ ಸುಂದರಿಯನ್ನು ಒಬ್ಬ ಹಿಂಬಾಲಿಸಿದ. ಆತ ಅವಳನ್ನು ಪರಿಪರಿಯಿಂದ ಒಲಿಸಿಕೊಳ್ಳಲೆತ್ನಿಸಿದ, ಗೋಗರೆದ. ಆದರೆ ಅವಳು ಪತಿವ್ರತೆ. ಆತನ ಪ್ರಸ್ತಾವಗಳಿಗೆ ಆಕೆ ಒಪ್ಪಲಿಲ್ಲ. ಆದರೆ ಆ ಮನುಷ್ಯ ಅವಳನ್ನು ಬಿಡಲಾರ. ಒಂದು ದಿನ ಆಕೆ ಹೇಳಿದಳು – “ಆಯಿತು, ಮೂರುದಿನ ಕಳೆದು ಬಾ, ನಾ ನಿನ್ನ ಕೂಡುತ್ತೇನೆ.”
ಮರುದಿನ ಅವಳು ತೀಕ್ಷ್ಣವಾದ ವಿರೇಚಕಗಳನ್ನು ನುಂಗಿದಳು. ಎಡೆಬಿಡದೆ ವಾಂತಿ ಮತ್ತು ಮಲವಿಸರ್ಜನೆಯಾಯಿತು. ಅದೆಲ್ಲವನ್ನೂ ಒಂದು ಬಕೆಟ್‌ನಲ್ಲಿ ಸಂಗ್ರಹಿಸಿದಳು. ಮೂರನೆಯ ದಿನ ಆ ಮನುಷ್ಯ ಬಂದ. ಆಕೆಯನ್ನು ಗುರುತಿಸಲಾಗಲಿಲ್ಲ. ವಾಂತಿಬೇಧಿಯಿಂದಾಗಿ ಅವಳು ತನ್ನೆಲ್ಲ ಅಂದವನ್ನು ಕಳೆದುಕೊಂಡು ಕುರೂಪಿಯಾಗಿದ್ದಳು. ಆತ ಕೇಳಿದ, “ಆಕೆ ಎಲ್ಲಿ?”
ಆಕೆ ಹೇಳಿದಳು, “ನಾನೇ ಆ ಹೆಂಗಸು. ಗುರುತು ಸಿಗಲಿಲ್ಲವೆ?”
“ಇಲ್ಲ ಇಲ್ಲ ನೀನಲ್ಲ. ಅವಳೆಂಥ ಚೆಲುವೆ! ನೀನು ಕುರೂಪಿ.”
“ಇಲ್ಲ ಇಲ್ಲ ನಾನು ಅದೇ ಹೆಣ್ಣು.”
“ಹಾಗಿದ್ದರೆ ನೀನೇಕೆ ಇಷ್ಟು ಕುರೂಪಿ?”
“ಏಕೆಂದರೆ ನಾನು ನನ್ನ ರೂಪವನ್ನು ನನ್ನಿಂದ ಬೇರೆ ಮಾಡಿದ್ದೇನೆ.”
“ನಿನ್ನ ರೂಪವನ್ನು ಬೇರೆ ಮಾಡಿದ್ದೀಯಾ?”
“ಹೌದು, ತೋರಿಸುತ್ತೇನೆ. ಬಾ ಇಲ್ಲಿ.”
ಅನಂತರ ಅವಳು ಆ ಬಕೆಟ್‌ನಲ್ಲಿ ತುಂಬಿಟ್ಟಿದ್ದ ವಾಂತಿಭೇದಿಯನ್ನು ತೋರಿಸಿದಳು. “ಇಲ್ಲಿದೆ ನನ್ನ ಚೆಲುವು. ಮತ್ತೆ ಅದೆಲ್ಲವನ್ನು ನನ್ನೊಳಗೆ ತುಂಬು. ನಾನು ಮತ್ತೆ ಸುಂದರಿಯಾಗುತ್ತೇನೆ.”

ಇದು ಬಲು ಒಳ್ಳೆಯ ಪಾಠ. ಶಂಕರಾಚಾರ್ಯರು ಹೇಳಿದಂತೆ, ಏತತ್ ಮಾಂಸ ವಸಾದಿ ವಿಕಾರಮ್ ಅವರು ಸರ್ವಸಂಗ ಪರಿತ್ಯಾಗವನ್ನು ಬೋಧಿಸುತ್ತಿದ್ದಾರೆ: “ನೀವೇಕೆ ಈ ಸುಂದರ ಸ್ತ್ರೀಯ ಆಕರ್ಷಣೆಗೆ ಒಳಗಾಗುತ್ತೀರಿ? ಏನವಳ ಚೆಲುವು? ಅದು ಕೇವಲ ಅಮೇಧ್ಯ, ಮೂತ್ರ, ಮಾಂಸ ಮೂಳೆಯ ಗೂಡು ಅಷ್ಟೆ.” ಇದು ನೈಜ ಜ್ಞಾನ.
ಜನರು ಮಿಥ್ಯ (ಮಾಯೆಯ) ಬೆನ್ನಟ್ಟಿದ್ದಾರೆ. ಮಾಯೆ ಎಂದರೆ `ಅವಾಸ್ತವ’ ಎಂದರ್ಥ. ಈ ಆಧುನಿಕ ನಾಗರಿಕತೆ ಕೇವಲ ಮಾಯೆ. ಅದನ್ನು ಯಾವುದೇ ಕ್ಷಣದಲ್ಲಿ ನಾಶಗೊಳಿಸಬಹುದು. ಆದರೆ ಜನಕ್ಕೆ ಇದು ಗೊತ್ತಿಲ್ಲ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಮೃತ್ಯುಃ ಸರ್ವ ಹರಶ್ಚಾಹಂ “ಸಾವಿನಂತೆ ನಾನೇ ಎಲ್ಲವನ್ನು ಹಿಂತೆಗೆದುಕೊಳ್ಳುತ್ತೇನೆ.” ನೀವು ವೇದಾಂತಿಯೋ, ವಿಜ್ಞಾನಿಯೋ, ಸಿರಿವಂತನೋ ಆಗಿರಬಹುದು, ಸಾವು ಬಂದೊಡನೆ ಎಲ್ಲವನ್ನು ಕಳೆದುಕೊಳ್ಳುತ್ತೀರಿ. ಇದಕ್ಕೆ ಹಿರಣ್ಯಕಶಿಪು ಒಳ್ಳೆಯ ನಿದರ್ಶನ. ಆತ ಅತಿ ಬಲಿಷ್ಠ, ಆದರೆ ನೃಸಿಂಹದೇವರು ಪ್ರತ್ಯಕ್ಷವಾದೊಡನೆ – ಎಲ್ಲವೂ ನಾಶ. ಹಿರಣ್ಯಕಶಿಪು ಸಾಯಲೇಬೇಕಾಯಿತು.
ಕೃಷ್ಣನಿಲ್ಲದೆ, ಕೃಷ್ಣಪ್ರಜ್ಞೆಯಿಲ್ಲದೆ, ಮಿಥ್ಯೆಯ ಬೆನ್ನಟ್ಟಿ ಹೋಗುತ್ತಿರುವುದನ್ನು ಜನರು ಅರ್ಥಮಾಡಿಕೊಳ್ಳರು. ಸಾವು ಸನ್ನಿಹಿತವಾದಾಗ, ನಾವು ಗಳಿಸಿದುದೆಲ್ಲವೂ ನಿಷ್ಪ್ರಯೋಜಕವಾಗುವುದು. ಇಂದು, ನಾಳೆ ಅಥವಾ ನಾಳಿದ್ದು ಅದು ನಿಷ್ಪ್ರಯೋಜಕವೆ. ಆದರೆ ನಾವು ನೈಜವಸ್ತುವನ್ನು, ಎಂದರೆ ಚೈತನ್ಯಪೂರ್ಣವಾದ ಆತ್ಮವನ್ನೇ ಲೆಕ್ಕಿಸೆವು.
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ನ ಹನ್ಯತೇ ಹನ್ಯಮಾನೇ ಶರೀರೇ “ಆತ್ಮ ಅವಿನಾಶಿ, ಶರೀರದ ಅಂತ್ಯದ ಅನಂತರವೂ ಇರುತ್ತದೆ.” ಆದರೂ ಜನರಿಗೆ ಮೌಢ್ಯ. ಅವರೆಂಥ ಮೂರ್ಖರೆಂದರೆ, ಆತ್ಮದ ಅರಿವನ್ನು ಪಡೆಯುವ ಬಗ್ಗೆಯೂ ಅವರಿಗೆ ಅಲಕ್ಷ್ಯ. ಇದು ಮೌಢ್ಯ ತುಂಬಿದ ನಾಗರಿಕತೆ. ಆದುದರಿಂದ, ಜನರು ಹಲವಾರು ಪಾಪಕೃತ್ಯಗಳನ್ನು ಎಸಗುತ್ತಿದ್ದಾರೆ. ಬಾಯಿಚಪಲಕ್ಕಾಗಿ ಅನೇಕ ಪ್ರಾಣಿಗಳ ಹತ್ಯೆಯಲ್ಲಿ ತೊಡಗಿದ್ದಾರೆ. ಯಾಕೆ? ಹತ್ತು ಹಲವು ಬಗೆಯ ರುಚಿಕರ ಖಾದ್ಯಗಳು, ತರಕಾರಿಗಳು, ಹಣ್ಣುಗಳು, ಹಾಲು ಉತ್ಪನ್ನಗಳು – ಇರುವಾಗ, ಜನರೇಕೆ ಈ ಪಾಪಕೃತ್ಯದಲ್ಲಿ ತೊಡಗಿದ್ದಾರೆ?

ಇದಕ್ಕೆ ಉತ್ತರ ಇಷ್ಟೆ , ಜನರಿಗೆ ಪಾಪವಾವುದು, ಪುಣ್ಯವಾವುದೆಂಬುದರ ಅರಿವೇ ಇಲ್ಲ. ಅದು ಭಗವದ್ಗೀತೆಯಲ್ಲಿ ಉಕ್ತವಾಗಿದೆ: ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ. ನಮಗೆ ಕೆಲವು ವಸ್ತುಗಳನ್ನು ಮತ್ತು ಬೇರೆ ಕೆಲವು ವಸ್ತುಗಳನ್ನು ತ್ಯಜಿಸುವುದರ ಅಭ್ಯಾಸ ಇದೆ. ಆದರೆ, ರಾಕ್ಷಸರಿಗೆ ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ತಿರಸ್ಕರಿಸಬೇಕೆಂಬ ಪರಿವೇ ಇಲ್ಲ. ಕೇವಲ ಕೃಷ್ಣಭಕ್ತರಿಗೆ ಮಾತ್ರ ಇದರ ಅರಿವಿದೆ. ಉದಾಹರಣೆಗೆ, ನಾವು ನಮ್ಮ ವಿದ್ಯಾರ್ಥಿಗಳಿಗೆ ಅನೈತಿಕ ಲೈಂಗಿಕ ಸಂಪರ್ಕ ಹೊಂದಕೂಡದೆಂದು ಹಿತವಚನ ಹೇಳುತ್ತೇವೆ. ಅಂತೆಯೇ ಮದ್ಯಪಾನ, ಜೂಜು, ಮಾಂಸ ಭಕ್ಷಣವನ್ನು ತ್ಯಜಿಸಿ ಕೃಷ್ಣನಾಮ ಜಪವನ್ನು ಮಾಡಬೇಕೆಂದು ಹೇಳುತ್ತೇವೆ.
ಈ ಪಥದಲ್ಲಿ ನಾವು ಕ್ರಮಿಸಿದರೆ, ನಾವು ಜೀವನ್ಮುಕ್ತರಾಗುತ್ತೇವೆ. ಜೀವನ್ಮುಕ್ತಿ ಎಂದರೇನು? ಮುಕ್ತಿ ಎಂದರೆ ಐಹಿಕ ಬಂಧನವನ್ನು ಕಳಚುವುದು. ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ (4.9)
ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ ॥
ಅರ್ಜುನನೇ, ಯಾರು ಹೀಗೆ ನನ್ನ ಹುಟ್ಟಿನ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ಯಥಾರ್ಥವಾಗಿ ತಿಳಿದುಕೊಳ್ಳುವರೋ ಅವರು ದೇಹತ್ಯಾಗ ಮಾಡಿದನಂತರ ಮತ್ತೆ ಈ ಐಹಿಕ ಜಗತ್ತಿನಲ್ಲಿ ಹುಟ್ಟುವುದಿಲ್ಲ. ಅವರು ನನ್ನ ನಿತ್ಯನಿವಾಸಕ್ಕೆ ಬರುತ್ತಾರೆ. ಈ ಅರಿವು ಇಂದಿನ ನಾಗರಿಕತೆಯಲ್ಲಿ ಲೋಪವಾಗಿದೆ. ಹಲವಾರು ವಿಶ್ವವಿದ್ಯಾನಿಲಯಗಳಿವೆ. ಶೈಕ್ಷಣಿಕ ಸಂಸ್ಥೆಗಳು, ದೊಡ್ಡ ದೊಡ್ಡ ಪ್ರಾಧ್ಯಾಪಕರು ವಿಜ್ಞಾನಿಗಳು – ಎಲ್ಲರೂ ಠಕ್ಕರು. ಅವರು ಬಂದು ನಮ್ಮಲ್ಲಿ ವಾದಕ್ಕೆ ಕೂರಲಿ. ಶ್ರೀಮದ್ ಭಾಗವತದಲ್ಲಿ ಹೇಳಿರುವಂತೆ: ಹರಾವಭಕ್ತಸ್ಯ ಕುತೋ ಮಹದ್ಗುಣಾ. “ನಾಸ್ತಿಕನಲ್ಲಿ ಸದ್ಗುಣಗಳೆಲ್ಲಿಂದ ಬಂದಾವು?” ಇಲ್ಲಿ ಅರ್ಜುನನೇ ಒಂದು ನಿದರ್ಶನದ ಮೂರ್ತರೂಪ. “ನನ್ನಲ್ಲಿ ಅವೇ ಬಾಣಗಳು, ಅವೇ ಬಿಲ್ಲು, ಅದೇ ರಥ, ಅದೇ ಕುದುರೆಗಳು, ನಾನು ಅದೇ ಅರ್ಜುನ. ಅನೇಕ ರಾಜಮಹಾರಾಜರುಗಳಿಂದ ಗೌರವಿಸಲ್ಪಡುತ್ತಿದ್ದವನು. ಈಗ ಯಾರೂ ನನ್ನನ್ನು ಲಕ್ಷಿಸರು. ನನ್ನೆಲ್ಲ ಅರ್ಹತೆಗಳೂ ನಿಷ್ಫಲ. ಏಕೆಂದರೆ ಕೃಷ್ಣ ಈಗ ನನ್ನೊಡನಿಲ್ಲ.”
ಆದುದರಿಂದ, ನಿಮ್ಮ ಆಧುನಿಕ ನಾಗರಿಕತೆ ಪರಿಪೂರ್ಣಗೊಳ್ಳುವುದು ಕೃಷ್ಣಪ್ರಜ್ಞೆಯೊಡನೆ ಸಮ್ಮಿಲಿತವಾದಾಗ. ಇಲ್ಲವಾದಲ್ಲಿ ಎಲ್ಲವೂ ವ್ಯರ್ಥ. ಮುಂದಾಳುಗಳೆಂದು ಕರೆದುಕೊಳ್ಳುವವರ ಪ್ರಭಾವಕ್ಕೆ ಸಿಕ್ಕು ಅಡ್ಡದಾರಿ ಹಿಡಿಯದಿರಿ. ಪ್ರಹ್ಲಾದ ಮಹಾರಾಜ, ಅಂಥವರನ್ನು ಅಂಧಾ ಯಥಾಂಧೈರುಪನೀಯಮಾನಾಃ “ಕುರುಡರು ಕುರುಡರನ್ನು ಕೈ ಹಿಡಿದು ನಡೆಸುವಂತೆ” ಎಂದಿದ್ದಾರೆ. ಆಧುನಿಕ ನಾಗರಿಕತೆಯಲ್ಲಿ ಜೀವಿಸುವವರು ಎಂತಹ ಠಕ್ಕರುಗಳೆಂದರೆ, ತಮ್ಮ ಸೌಖ್ಯಕ್ಕೆ ಲೌಕಿಕ ಪ್ರಗತಿಯನ್ನು ನಿರೀಕ್ಷಿಸುತ್ತಾರೆ. ಇತ್ತೀಚೆಗೆ ಸ್ವೀಡನ್‌ನ ಒಬ್ಬರು ವೈದ್ಯರು ನನಗೆ ಹೇಳಿದ್ದು – ಸರಾಸರಿ ಅವರ ದೇಶದ ಜನರು ಜಗತ್ತಿನಲ್ಲೇ ಅತಿ ಶ್ರೀಮಂತರಾಗಿರುತ್ತಾರೆ. ಆದರೆ ಅದೇ ದೇಶದಲ್ಲಿ ಅತಿ ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ನಡೆಯುವುದು.
ಆದುದರಿಂದ ಪ್ರಾಪಂಚಿಕ ಐಸಿರಿ ನಿಮಗೆ ಒದಗಲಾರದು. ನಾವು ಕಣ್ಣಾರೆ ಕಂಡಿದ್ದೇವೆ, ಪ್ರತಿರಾಷ್ಟ್ರವೂ ಅತೃಪ್ತ ರಾಷ್ಟ್ರವೆ ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ಅಮೆರಿಕದಲ್ಲಿ ಯುವಕರೆಲ್ಲ ಹಿಪ್ಪಿಗಳಾಗಿರುವುದೇಕೆ? ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಿಪ್ಪಿಗಳಾಗುತ್ತಿದ್ದಾರೆ. ಯಾಕೆ? ಹತಾಶೆ. ಅವರು, “ಈ ಬದುಕು ಏನು? ನಾನು ಶಿಕ್ಷಿತನಾದರೂ ನನ್ನ ಭವಿಷ್ಯವೇನು? ನಮಗೆ ಭವಿಷ್ಯವಿಲ್ಲ” ಎಂದುಕೊಳ್ಳುತ್ತಾರೆ.
ಜೀವನದ ನಿಜವಾದ ಗುರಿಯನ್ನೇ ಜನ ಕಾಣರು: ನ ತೇ ವಿದುಸ್ವಾರ್ಥ ಗತಿಂ ಹಿ ವಿಷ್ಣುಂ. ಜೀವನದ ಗುರಿ ದೈವಪ್ರಜ್ಞೆ, ದೈವಸಾಕ್ಷಾತ್ಕಾರ ಎಂಬುದನ್ನು ಈ ಪೋಕರಿಗಳು ಅರಿಯರು. ನಾವು ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವುದು ಹೇಗೆ? ಎಲ್ಲವನ್ನು ಶಾಸ್ತ್ರಗಳು ತಿಳಿಸಿ ಕೊಡುತ್ತವೆ: “ದೇವರಿದ್ದಾನೆ, ಆತನ ಹೆಸರು ಕೃಷ್ಣ, ಆತನ ವಿಳಾಸ ವೈಕುಂಠ, ಆತನಿಗೆ ಬಹಳಷ್ಟು ಗೆಳೆಯರಿದ್ದಾರೆ. ಬಹಳಷ್ಟು ಪ್ರೇಮಿಗಳು.”

ಆದರೂ ಆ ಠಕ್ಕರಿಗೆ ಅರ್ಥವಾಗದು. ಭಗವಂತನ ಹೆಸರು, ವಿಳಾಸ, ಲೀಲಾವಿನೋದಗಳು, ಎಲ್ಲವನ್ನು ತಿಳಿಸಿದ್ದೇನೆ. ಎಲ್ಲರೂ ಅವನೆಡೆಗೆ ಹೋಗಲು ಆಹ್ವಾನ ನೀಡುತ್ತಿದ್ದೇವೆ. ಆದರೂ ಕೇಳರು. ಇದು ಅವರ ದುರದೃಷ್ಟ. ಕೃಷ್ಣನೇ ಸ್ವತಃ ಬರುತ್ತಿದ್ದಾನೆ, ಪ್ರಚಾರದಿಂದ ಮನವೊಲಿಸುತ್ತಿದ್ದಾನೆ, ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂವ್ರಜ “ನಿನ್ನೆಲ್ಲ ಅರ್ಥಹೀನ ನಂಬಿಕೆಗಳನ್ನು ಬಿಟ್ಟು ನನಗೆ ಶರಣಾಗು.” ಆದರೆ ಅವರು ಇನ್ನೂ ಭಗವಂತನ ಸಂಶೋಧನೆಯಲ್ಲೆ ತೊಡಗಿದ್ದಾರೆ. ಭಗವಂತ (ತನ್ನ ಅಸ್ತಿತ್ವ ಕುರಿತು) ಸ್ವತಃ ಪ್ರಚಾರದಲ್ಲಿ ತೊಡಗಿದ್ದಾನೆ. ಇವರು ಇನ್ನೂ ಸಂಶೋಧನೆಯಲ್ಲೇ ತೊಡಗಿದ್ದಾರೆ. ಯಾರೋ ಒಬ್ಬ ಹೇಳುತ್ತಾನೆ, “ದೇವರಿದ್ದಾನೆ” ಮತ್ತೊಬ್ಬ ಹೇಳುತ್ತಾನೆ, “ದೇವರು ಸತ್ತಿದ್ದಾನೆ. ಅವನು ಅಳಿದ. ಈಗ ನಾವೇ ದೇವರು.” ಹೀಗೆ ಪರಿಸ್ಥಿತಿ ಮುಂದುವರಿದಿದೆ.
ಯಾಕೆ? ಏಕೆಂದರೆ ಪ್ರತಿಯೊಬ್ಬನೂ ಇಹದಲ್ಲಿ ಸುಖವಾಗಿರಲು ಬಯಸುತ್ತಾನೆ. ಅದು ಅವರ ತಪ್ಪು. ದೆಹಲಿಯಲ್ಲೊಬ್ಬರು ಗಣ್ಯರಿಗೆ ನನ್ನ “ಇತರ ಲೋಕಗಳಿಗೆ ಸುಗಮ ಪ್ರಯಾಣ” ಎಂಬ ಗ್ರಂಥವನ್ನು ಕೊಟ್ಟೆ. ಆತ ಹೇಳಿದ, “ಓ! ಇತರ ಲೋಕಗಳಿಗೆ ಸುಗಮ ಪ್ರಯಾಣ ನೀವು ಬರೆದಿದ್ದಿರಾ?”
“ಹೌದು”
“ಹಾಗಿದ್ದರೆ ನಾನು ಹೋಗಿಬರುತ್ತೇನೆ.”
“ಅಲ್ಲ. ಈ ಪುಸ್ತಕ `ಪರಮಗ್ರಹ’ ಎಂದರೆ ಭಗವಂತನ ಸಾಮ್ರಾಜ್ಯಕ್ಕೆ ಹೋಗುವುದನ್ನು ಕಲಿಸಿಕೊಡುತ್ತೆ. ನೀವೇಕೆ ಹಿಂದಕ್ಕೆ ಬರುತ್ತೀರಿ?”
“ಅಲ್ಲ ಅಲ್ಲ, ಹಾಗಿದ್ದರೆ ನಾನು ಹೋಗಲಾರೆ.” ಆ ಠಕ್ಕ ಕೃಷ್ಣನ ಗ್ರಹಕ್ಕೆ ಹೋಗಬೇಕಂತೆ, ಮತ್ತೆ ಹಿಂತಿರುಗಿ ಬರಲೂ ಬೇಕಂತೆ.
`ಚಂದ್ರಗ್ರಹ’ ಎಂದು ಕರೆಯುವ ಗ್ರಹಕ್ಕೆ ವಿಜ್ಞಾನಿಗಳು ಮನುಷ್ಯರನ್ನು ಕಳುಹಿಸುತ್ತಿದ್ದಾರೆ ಮತ್ತೆ ವಾಪಸ್ಸು ಕರೆಯಿಸಿಕೊಳ್ಳುತ್ತಿದ್ದಾರೆ. ರಷ್ಯಾದಿಂದ ಉಪಗ್ರಹಕ್ಕೇರಿದ ಮೊದಲ ಗಗನಯಾತ್ರಿ ಮೇಲಕ್ಕೆ ಹೋಗುತ್ತಿದ್ದಂತೆ, ಕೆಳಗೆ ನೋಡಿ – “ನನ್ನ ಮಾಸ್ಕೊ ಎಲ್ಲಿ?” ಎಂದು ಹುಡುಕುತ್ತಿದ್ದ. ನೋಡಿದಿರಾ? ಇದು ಅವನ ಬುದ್ಧಿವಂತಿಕೆ – ಲೌಕಿಕದಲ್ಲೆ ಮಗ್ನನಾಗಿದ್ದ. ಗಿಡುಗ ಮತ್ತೊಂದು ನಿದರ್ಶನ. ಗಿಡುಗಗಳಿಗೆ ದೃಷ್ಟಿ ಚುರುಕು. ಭೂಮಿಯಿಂದ ಮೇಲೆ ಅತಿ ಎತ್ತರದಿಂದ ಒಂದು ಎಲುಬಿನ ಗೂಡನ್ನು ಕಾಣಬಲ್ಲವು. ಅವಕ್ಕೆ ಒಳ್ಳೆಯ ದೃಷ್ಟಿಯಿದ್ದರೂ, ಒಂದು ಎಲುಬಿನ ಗೂಡಿಗಾಗಿ ತಡಕಾಡುತ್ತವೆ. ಅದು ಅವುಗಳ ಗುಣ. ಅಂತೆಯೇ ವಿಜ್ಞಾನಿಗಳು, ವೇದಾಂತಿಗಳೆಂದು ಕರೆದುಕೊಳ್ಳುವವರು ಬಹಳ ಮುಂದುವರಿದಿದ್ದಾರೆ. ಆದರೆ ಅವರ ಕೆಲಸವೇನೆಂದರೆ ಈ ಭೂಮಿಯ ಮೇಲೆ ಸುಖವಾಗಿರುವುದು ಹೇಗೆ ಎಂದು ಯೋಚಿಸುವುದು. ಅವರ ಬುದ್ಧಿ ವಿಶಾಲವಲ್ಲ. ಅವರ ಬುದ್ಧಿಗೆ ವಿಕಲತೆಯುಂಟಾಗಿದೆ.
ಜನಕ್ಕೆ ಈ ಜಗತ್ತಿನಲ್ಲಿ ಇರುವುದೆಲ್ಲವನ್ನು ಅನುಭವಿಸುವ ಹಪಾಹಪಿ. ಆದರೆ ಅವರು ಕೇವಲ ಕಳೇಬರವನ್ನು ಅಲಂಕರಿಸುತ್ತಿದ್ದಾರೆ. `ಇದು ನನ್ನ ಮನೆ, ನನ್ನ ಮಹಲು, ನನ್ನ ದೇಶ, ಇದು ನನ್ನ ಗಗನಚುಂಬಿ ಕಟ್ಟಡ’ ಮತ್ತೆ ಒಂದು ದಿನ `ಮೃತ್ಯುಃ ಸರ್ವಹರಃ’, ಕೃಷ್ಣ , ಮೃತ್ಯುರೂಪದಲ್ಲಿ ಬಂದು ಎಲ್ಲವನ್ನು ಕಿತ್ತುಕೊಳ್ಳುತ್ತಾನೆ. ಹಿರಣ್ಯಕಶಿಪು ಇದಕ್ಕೊಂದು ಒಳ್ಳೆಯ ನಿದರ್ಶನ. ಅವನು ತನ್ನ ಮಗ ಪ್ರಹ್ಲಾದನಿಗೆ ಸವಾಲೆಸೆದ, “ನಿನ್ನ ದೇವರೆಲ್ಲಿ?” ಆ ಕಾರಣ, ಭಗವಂತ ನೃಸಿಂಹ ದೇವರ ರೂಪದಲ್ಲಿ ಬಂದು ಸಂಹರಿಸಿದನು. “ಓ! ದೇವರು ಇಲ್ಲಿದ್ದಾನೆ!”
ದೇವರು ಎಲ್ಲರಿಗೂ ಪ್ರತ್ಯಕ್ಷವಾಗುತ್ತಾನೆ. ನಾಸ್ತಿಕರು ಭಗವಂತನನ್ನು ಸಾವಿನಲ್ಲಿ ಕಾಣುತ್ತಾರೆ. ಕಂಡು ಸಾಯುತ್ತಾರೆ. ಭಗವಂತ ಅವರ ಎಲ್ಲ ಆಸ್ತಿಯನ್ನು ಹಿಂತೆಗೆದುಕೊಳ್ಳುತ್ತಾನೆ. ಅವರ ಎಲ್ಲ ವೈಜ್ಞಾನಿಕ ಅರಿವನ್ನು ಅವರ ಬ್ಯಾಂಕ್ ಠೇವಣಿ-ಉಳಿತಾಯ ಎಲ್ಲವನ್ನು. ಆಗ ಹಿರಣ್ಯಕಶಿಪುವಿನಂತೆ, ಅವರಿಗೂ ದೇವರೆಂದರೇನೆಂಬುದು ಅರಿವಾಗುತ್ತೆ.

ಆದರೆ ಆ ಕ್ಷಣ ಸನ್ನಿಹಿತವಾಗುವ ಮುನ್ನವೆ ನೀವು ದೇವರನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲವೇಕೆ? `ಹರೇಕೃಷ್ಣ!’ ನಾಮ ಸಂಕೀರ್ತನೆ ಮಾಡಿ ರಾಧಾಕೃಷ್ಣರ ಪ್ರಸಾದ ಸ್ವೀಕರಿಸಿ, ಸುಖವಾಗಿರಿ. ಅದು ನಿಜವಾದ ಬುದ್ಧಿವಂತಿಕೆ. ಚೈತನ್ಯ ಚರಿತಾಮೃತದಲ್ಲಿ ಹೇಳಿರುವಂತೆ, ಯಾರೊಬ್ಬ ವ್ಯಕ್ತಿ ಅತಿಶಯವಾದ ಬುದ್ಧಿ ಇಲ್ಲವಾದಲ್ಲಿ, ಆತ ಕೃಷ್ಣಪ್ರಜ್ಞೆಯಲ್ಲಿ ತೊಡಗುವುದು ಸಾಧ್ಯವಿಲ್ಲ. ಕೊನೆಯ ದರ್ಜೆಯ ಮೂರ್ಖರು, ಪುಂಡರಿಗೆ ಅದು ನಿಲುಕಲಾರದು. ಕೃಷ್ಣನ ಕೃಪೆಯಿಂದ ನಿಮಗೆ ಅತ್ಯುನ್ನತ ಶ್ರೇಣಿಯ ವಿವೇಕವಿದೆ. ಕೃಷ್ಣಪ್ರಜ್ಞೆಯಲ್ಲಿ ತೊಡಗಿದ್ದೀರಿ. ಇದರಲ್ಲೆ ಮುಂದುವರೆಯಲು ಪ್ರಯತ್ನಿಸಿ. ಬಿಡಬೇಡಿ, ಮೂಢರಾಗಬೇಡಿ. ಮುಂದುವರೆಸಿ. ಆಗ ನೀವು ಸಂತೋಷದಿಂದ ಬಾಳುವಿರಿ, ನಿಮ್ಮೆಲ್ಲ ಸಮಸ್ಯೆಗಳೂ ಸುಧಾರಿಸುತ್ತವೆ.
ಧನ್ಯವಾದಗಳು.






Leave a Reply