ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಶಿಷ್ಯರ ನಡುವೆ
1975ರ ಮಾರ್ಚ್ ತಿಂಗಳಲ್ಲಿ ಅಟ್ಲಾಂಟದಲ್ಲಿ ನಡೆದ ಸಂವಾದ.
ಶಿಷ್ಯ: ಆಧುನಿಕ ವಿಜ್ಞಾನಿಗಳು ಪ್ರಯೋಗಶಾಲೆಯಲ್ಲಿ ಜೀವಿಸೃಷ್ಟಿಗಾಗಿ ಬಹಳಷ್ಟೆ ಶ್ರಮವಹಿಸಿ ಪ್ರಯೋಗಶೀಲರಾಗಿದ್ದಾರೆ.

ಶ್ರೀಲ ಪ್ರಭುಪಾದ: ಅರ್ಥಮಾಡಿಕೋ. ಭಗವಂತನು ಹೇಗೆ ಆದಿಯಿಂದ ಅಸ್ತಿತ್ವದಲ್ಲಿದ್ದಾನೋ, ಅಂತೆಯೇ ಆತನ ಅವಿಭಾಜ್ಯ ಅಂಗಗಳಾದ ಜೀವಿಗಳೂ ಮೊದಲಿನಿಂದಲೆ ಅಸ್ತಿತ್ವದಲ್ಲಿವೆ. ಶಾಶ್ವತವಾಗಿವೆ. ನೀವು “ಸೃಷ್ಟಿಸುವ” ಪ್ರಶ್ನೆಯೇ ಇಲ್ಲ. ಅದು ಅವಿವೇಕ. ಜೀವಿಗಳು ಶಾಶ್ವತವಾಗಿ ನೆಲೆಸಿವೆ. ಅವು ಸೃಷ್ಟಿಯಾಗಿಲ್ಲ. ಅವು ನಾಲ್ಕು ರೂಪಗಳಲ್ಲಿ ಈ ಐಹಿಕ ಪ್ರಪಂಚದಲ್ಲಿ ನೆಲೆಗೊಂಡಿವೆ. ಕೆಲವು ಬೀಜಾವಾಪನದಿಂದ; ಕೆಲವು ಬೀಜಸಂಸ್ಕರಣದಿಂದ, ಕೆಲವು ಅಂಡಗಳಿಂದ, ಮತ್ತೆ ಕೆಲವು ಭ್ರೂಣಗಳಿಂದ ಜೀವಿಗಳು ಈಗಾಗಲೆ ಅಸ್ತಿತ್ವದಲ್ಲಿವೆ. ಆದುದರಿಂದ ಸೃಷ್ಟಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಜೀವಶಾಸ್ತ್ರ.
ಜೀವಿಗಳು ಈಗಾಗಲೇ ಕೋಟ್ಯನುಕೋಟಿ ಇವೆ. ಆದರೆ ಲೌಕಿಕ ವಿಜ್ಞಾನಿಗಳು ಬೃಹತ್ ಸಮ್ಮೇಳನವನ್ನು ನಡೆಸುತ್ತಿದ್ದಾರೆ; ಜೀವಸೃಷ್ಟಿ ಪ್ರಯೋಗದಲ್ಲಿ ತೊಡಗಿದ್ದಾರೆ. ಇದು ಮಕ್ಕಳಾಟ. ಕಾಲವ್ಯಯಗೊಳಿಸುತ್ತಿದ್ದಾರೆ. ಜನರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾರೆ. ಪ್ರತಿಯೊಬ್ಬರ ಹಣವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಆದುದರಿಂದ ಅವರು ಅಯೋಗ್ಯರು. ಅವರು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಏನನ್ನು ಸೃಷ್ಟಿಸುತ್ತಾರೆ? ಪ್ರತಿಯೊಂದೂ ಆಗಲೇ ಇದೆ. ಆದರೆ ಅವರಿಗೆ ತಮ್ಮ ಎಲ್ಲ ಉನ್ನತ ಶಿಕ್ಷಣದಿಂದಲೂ ಇದು ಗೊತ್ತಿಲ್ಲ. ಆದುದರಿಂದ ಅವರನ್ನು “ಮೂಢರು, ಅಯೋಗ್ಯರು” ಎಂದು ಭಗವದ್ಗೀತೆ ಬಣ್ಣಿಸುತ್ತದೆ.
ನೀವು ಈ ಮೂಢರಿಗೆ ತಿಳಿಸಿ – “ಪ್ರಿಯರೆ! ನೀವು ಸೃಷ್ಟಿಸಲಾರಿರಿ. ಯಾವುದೂ ಕೂಡ ಸೃಷ್ಟಿಸಲಾಗದು. ಜೀವರಾಶಿಗಳು ಎಲ್ಲಿಂದ ಬರುತ್ತವೆ ಎಂಬುದನ್ನು ಸಂಶೋಧಿಸಿ.
ಅವುಗಳ ಮೂಲವೇನು. ಪ್ರಕೃತಿಯ ಹಿಂದೆ ಯಾರ ಮೆದುಳು ಇದೆ. ಹುಡುಕಿ. ಅದು ಸತ್ಯಜ್ಞಾನ. ಈ ಜ್ಞಾನಪ್ರಾಪ್ತಿಗಾಗಿ ನೀವು ಶ್ರಮಪಟ್ಟರೆ, ಪ್ರತಿಯೊಂದು ಜೀವರಾಶಿಯ ಹಿಂದಣ ಶಕ್ತಿ ಯಾವುದು ಎಂದು ಹುಡುಕಿದರೆ ಒಂದಲ್ಲೊಂದು ದಿನ, ವಾಸುದೇವಃ ಸರ್ವಂ ಇತಿ ಸಮಹಾತ್ಮ ಸುದುರ್ಲಭಃ “ಪ್ರತಿಯೊಂದು ಜೀವರಾಶಿಯ ಮೂಲವೂ ದೇವರೆ ಎಂಬುದು ಅರ್ಥವಾದಲ್ಲಿ ನಿಮ್ಮ ಜ್ಞಾನ ಸಂಪೂರ್ಣ.”

ಈ ಸುಂದರ ಹೂವನ್ನು ನೋಡಿ – ಅದು ತಂತಾನೆ ಬಂದಿತೆಂದು ತಿಳಿದಿರಾ? ಯಾವುದೇ ಬುದ್ಧಿಮೂಲದ ನಿರ್ದೇಶನವಿಲ್ಲದೆ? ಇದು ಅವಿವೇಕದ ತತ್ತ್ವ. ಈ ವಿಜ್ಞಾನಿಗಳು ಶಬ್ದಾಡಂಬರಕ್ಕೆ ಮೊರೆ ಹೋಗುತ್ತಾರೆ. ಆದರೆ ಎಷ್ಟರಮಟ್ಟಿಗೆ ಈ ಸೃಷ್ಟಿಗೆ ವಿವರಣೆ ಕೊಡಬಲ್ಲರು? ಅದು ಅವರಿಗೆ ಗೊತ್ತು. ಯಾವುದೋ ಸಂಕೀರ್ಣಭಾಷೆಯನ್ನು ಬಳಸಿ, ಇನ್ನೊಬ್ಬರಿಗೆ ಅರ್ಥವಾಗುವಂತೆ ವಿವರಿಸಿದ ಹೊರತು, ಅದು ಯಾರಿಗೂ ಅರ್ಥವಾಗದು. ಎಲ್ಲವೂ ಪ್ರಕೃತಿಯಿಂದ ತಂತಾನೆ ನಡೆಯುತ್ತದೆ ಎನ್ನುತ್ತಾರೆ. ಅದು ನಿಜವಲ್ಲ.
ಪ್ರಕೃತಿ ಒಂದು ಸಾಧನ. ಆಶ್ಚರ್ಯಕರ ಕಂಪ್ಯೂಟರ್‌ನಂತೆ. ಆದರೂ ಅದಕ್ಕೂ ಒಬ್ಬ ನಿರ್ವಾಹಕ ಬೇಕು. ಈ ಅಯೋಗ್ಯರಿಗೆ ಸಾಮಾನ್ಯ ತಿಳಿವಳಿಕೆ ಸಹ ಇಲ್ಲ. ಚಾಲಕನಿಲ್ಲದೆ ಕಾರ್ಯನಿರ್ವಹಿಸುವ ಯಾವ ಯಂತ್ರವಿದೆ. ಅವರ ಅನುಭವದಲ್ಲಿ ಇಂತಹ ಒಂದು ಯಂತ್ರವನ್ನು ಅವರು ಬಲ್ಲರೆ? ಪ್ರಕೃತಿಯೇ ಸ್ವಯಂಚಾಲಿತ ಕಾರ್ಯಸಾಧನೆಯೆಂದು ಅವರು ಹೇಗೆ ತಾನೆ ಹೇಳಬಲ್ಲರು? ಪ್ರಕೃತಿ ಒಂದು ಆಶ್ಚರ್ಯಕರ ಯಂತ್ರ. ಆದರೆ ಯಂತ್ರ ಚಾಲಕ ದೇವರು – ಕೃಷ್ಣ. ಅದು ಸತ್ಯಜ್ಞಾನ. ಯಂತ್ರ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ ಎಂದರೆ ಚಾಲಕನಿಲ್ಲವೆಂದು ಅರ್ಥವೆ? ಉದಾಹರಣೆಗೆ: ಹಾರ್ಮೋನಿಯಂ ಕೂಡ ಒಂದು ಯಂತ್ರ – ಒಬ್ಬ ಪರಿಣತ ಸಂಗೀತಗಾರ, ಅದರಲ್ಲಿ ಮನಮೋಹಕ ಸ್ವರಗಳನ್ನು ನುಡಿಸುವುದರಿಂದಲೆ, ಕರ್ಣಾನಂದಕರ ಸ್ವರಗಳು ಕೇಳಿಬರುವುದು. “ಓ ! ಎಷ್ಟು ಚೆನ್ನ!” ಆದರೆ ಹಾರ್ಮೋನಿಯಂ ತಾನೇ ಸ್ವರಗಳನ್ನು ನುಡಿಸಬಲ್ಲದೆ? ಅವರಿಗೆ ಅಷ್ಟೂ ಸಾಮಾನ್ಯ ತಿಳವಳಿಕೆ ಇಲ್ಲ. ಆದರೂ ತಮ್ಮನ್ನು ವಿಜ್ಞಾನಿಗಳೆಂದು ಕರೆದುಕೊಳ್ಳುತ್ತಾರೆ. ಅದು ನಮ್ಮ ವಿಷಾದ. ಈ ಮಂದಿಗೆ ಸಾಮಾನ್ಯ ತಿಳವಳಿಕೆ ಇಲ್ಲ. ಆದರೂ ಅವರು ವಿಜ್ಞಾನಿಗಳೆಂದೇ ಬೀಗುತ್ತಾರೆ.
ಶಿಷ್ಯ: ಕೆಲವು ಮೂಲಭೂತ ಅಮೈನೋ ಆಮ್ಲಗಳನ್ನು ರಾಸಾಯನಿಕ ಶಾಸ್ತ್ರಗಳ ಮುಖೇನ ಸಂಸ್ಕರಿಸಬಹುದೆಂದು ಅವರು ತಿಳಿದಿರುವ ಕಾರಣ.
ಶ್ರೀಲ ಪ್ರಭುಪಾದ: ಇದು ವೃತ್ತಿ ಕೌಶಲ. ಅದು ಜ್ಞಾನವಲ್ಲ. ಉದಾಹರಣೆಗೆ ನೀವು ಒಂದು ಗುಲಾಬಿ ಹೂವನ್ನು ಚಿತ್ರಿಸುತ್ತೀರಿ. ನೀವು ವರ್ಣಚಿತ್ರಕಾರ. ಜ್ಞಾನಿಯಲ್ಲ. `ಜ್ಞಾನಿ’ ಎಂದರೆ ಪದಾರ್ಥಗಳ ಸಂಯೋಜನೆ, ವಿಭಜನೆ, ಸಂಸ್ಕರಣೆ – ಒಟ್ಟಿನಲ್ಲಿ ಹೇಗೆ ಸೃಷ್ಟಿಯಾಗುತ್ತದೆ ಎಂಬುದನ್ನು ತಿಳಿದವ. ಒಬ್ಬ ವರ್ಣಚಿತ್ರಕಾರ ತಾನು ನೋಡಿದುದನ್ನು ಅನುಕರಿಸುತ್ತಾನೆ. ಹಾಗಾಗಿ ಕಲೆ ಮತ್ತು ವಿಜ್ಞಾನ ಇವೆರಡು ಬೇರೆ ಬೇರೆ.
ಶಿಷ್ಯ: ಹಾಗಿದ್ದರೆ, ಅವರು ಸೃಷ್ಟಿಸಿದ ಸಂಸ್ಕರಿತ ಪದಾರ್ಥಗಳೆಲ್ಲವೂ ಕಲೆಯೆ?
ಶ್ರೀಲ ಪ್ರಭುಪಾದ: ಹೌದು! ಉದಾಹರಣೆಗೆ, ಒಬ್ಬ ಒಳ್ಳೆಯ ಬಾಣಸಿಗ, ದಿನಿಸು ಮತ್ತು ಪದಾರ್ಥಗಳನ್ನು ಮಿಶ್ರಗೊಳಿಸಿ ಒಳ್ಳೆಯ ರುಚಿಕರ ಅಡುಗೆಯನ್ನು ತಯಾರಿಸುತ್ತಾನೆ. ಹಾಗೆಯೇ ಒಬ್ಬ ರಸಾಯನ ಶಾಸ್ತ್ರಜ್ಞನನ್ನು ಒಬ್ಬ ಒಳ್ಳೆಯ ಬಾಣಸಿಗ ಎನ್ನಬಹುದು. ರಸಾಯನ ಶಾಸ್ತ್ರ ಎಂದರೆ ರಾಸಾಯನಿಕ ಪದಾರ್ಥಗಳ ಸಂಯೋಗ. ಅಲ್ಲಿ ತೈಲ ಇದೆ. ಕ್ಷಾರವಿದೆ. ಸಂಯೋಜನೆಯಲ್ಲಿ ವೃತ್ತಿಪರಿಣತಿ ತೋರಿದರೆ, ಸಾಬೂನು ಬರುತ್ತದೆ. ಬಹು ಉಪಯೋಗಿ.
ಶಿಷ್ಯ: ಆದರೆ, ಜೀವಸೃಷ್ಟಿ ಸಾಧ್ಯ, ಮನುಷ್ಯನನ್ನು ಸೃಷ್ಟಿಸಬಹುದು ಎಂಬ ಬಗ್ಗೆ ವಿಜ್ಞಾನಿಗಳಿಗೆ ಮನವರಿಕೆಯಾಗಿದೆ.
ಶ್ರೀಲ ಪ್ರಭುಪಾದ: ಅದು ಸಮಸ್ಯೆಯಲ್ಲ, ನಿಮ್ಮ ಜೀವಸೃಷ್ಟಿಯಿಲ್ಲದೆ ಪ್ರಪಂಚವೆಲ್ಲವೂ ನರಕ ಸೇರುವುದಿಲ್ಲ. ಜೀವ ಈಗಾಗಲೆ ಇದೆ. ಉದಾಹರಣೆಗೆ ಈಗಾಗಲೆ ಹಲವಾರು ಮೋಟರ್ ಕಾರುಗಳಿವೆ, ಜೊತೆಗೆ ಮತ್ತೊಂದು ಮೋಟರ್ ಕಾರನ್ನು ತಯಾರಿಸಿದರೆ ಅದರಿಂದ ನನಗೆ ದೊರೆತ ಅಗ್ಗಳಿಕೆಯೇನು? ಈಗಾಗಲೆ ಅನೇಕೆ ಕಾರುಗಳಿವೆ! ಮೋಟರ್ ಕಾರುಗಳೆ ಇಲ್ಲದ ಕಾಲದಲ್ಲಿ ಮೋಟರ್ ಕಾರನ್ನು ಕಂಡುಹಿಡಿದ ಮೊದಲ ವಿಜ್ಞಾನಿಗೆ ಒಂದಿಷ್ಟು ಅಗ್ಗಳಿಕೆ ಇದ್ದಿತೋ ಏನೋ! “ಹೌದು, ನೀವು ಚೆಂದಗಾಣುವುದನ್ನು ಏನನ್ನೋ ತಯಾರಿಸಿದ್ದೀರಿ.”

ಕುದುರೆ ಇಲ್ಲದ ಗಾಡಿ, ಜನರಿಗೆ ಅದರಿಂದ ಪ್ರಯೋಜನವುಂಟು – ಒಂದು ಅನುಕೂಲ ಉಂಟು. ಆದರೆ ಕೋಟ್ಯನುಕೋಟಿ ಮೋಟರ್‌ಕಾರುಗಳು, ಬರೆ ಅಪಘಾತಗಳನ್ನು ಮಾಡುತ್ತಿದ್ದು, ಮತ್ತೆ ನಾನು ಇನ್ನೊಂದು ಕಾರ್ ತಯಾರಿಸಿದರೆ, ನನಗೆ ಬಂದ ಅಗ್ಗಳಿಕೆ ಏನು?
ಶಿಷ್ಯ: ಶೂನ್ಯ.
ಶ್ರೀಲ ಪ್ರಭುಪಾದ: ಶೂನ್ಯ. ಈ ಶೂನ್ಯವನ್ನು ಸಾಧಿಸಲು ಅವರು ದೊಡ್ಡ ಸಭೆ ನಡೆಸುತ್ತಾರೆ ಮತ್ತು ಎಷ್ಟೊಂದು ಜನ ಬಂದು ಹಣ ಖರ್ಚು ಮಾಡುತ್ತಾರೆ.
ಶಿಷ್ಯ: ಅವರು ಒಂದೊಳ್ಳೆಯ, ಉತ್ತಮವಾದ ಮನುಷ್ಯ ಜೀವಿಯ ಸೃಷ್ಟಿ ಮಾಡಲು ಬಯಸುತ್ತಾರೇನೋ! ಪ್ರಾಯಃ ಜೀವನವನ್ನೆ ಸುಧಾರಿಸುವ ಯತ್ನ ಇರಬಹುದು.
ಶ್ರೀಲ ಪ್ರಭುಪಾದ: ಹೌದು, ಅದೇ ನಮ್ಮ ಪ್ರಸ್ತಾವ ಕೂಡ. ನಾವು ವಿಜ್ಞಾನಿಗಳಿಗೆ ಹೇಳುತ್ತೇವೆ – “ಕಾಲವ್ಯಯ ಮಾಡಬೇಡಿ. ನಿಮ್ಮ ಬದುಕನ್ನ ಉತ್ತಮಪಡಿಸಿಕೊಳ್ಳಿ. ನೀವು ನಿಮ್ಮ ಆಧ್ಯಾತ್ಮಿಕ ಅಂಕಿತವನ್ನು ಅರ್ಥಮಾಡಿಕೊಳ್ಳಿ; ಆಗ ನೀವು ಜೀವನದಲ್ಲಿ ಸುಖಿ. ಈ ಸಂಶೋಧನೆ ನಡೆಯಬೇಕು. ಇದು ಅರಿವಿನ ಮೊದಲ ಸೋಪಾನ. ಒಂದು ಸರಳವಾದ ತಿಳಿವಳಿಕೆಯನ್ನು ಪಡೆಯದಿದ್ದಲ್ಲಿ ಆತ ಕತ್ತೆಯೇ ಸರಿ. ಚಾಲಕ-ಆತ್ಮ – ಅದು ಈ ದೇಹವನ್ನು ಚಲಿಸುವಂತೆ ಮಾಡುತ್ತದೆ. ಚಾಲಕನಿಗೆ ಶಿಕ್ಷಣ ಕೊಟ್ಟರೆ, ಆತ ಆತ್ಮಸಾಕ್ಷಾತ್ಕಾರದತ್ತ ದೇಹವೆಂಬ ರಥವನ್ನು ಓಡಿಸಬಲ್ಲ. ಹಾಗಾಗಿ, ಆತ ಮನೆಗೆ ಹಿಂದಿರುಗಬಲ್ಲ ಪರಂಧಾಮಕ್ಕೆ. ಆಗಲೆ ಆತನು ಪರಿಪೂರ್ಣ.
ಆದುದರಿಂದ ನಾವು ಚಾಲಕನಿಗೆ ಶಿಕ್ಷಣ ನೀಡುತ್ತಿದ್ದೇವೆ. ನಾವು ಇನ್ನೊಂದು ತಗಡು ಕಾರನ್ನು ಸೃಷ್ಟಿಸುತ್ತಿಲ್ಲ. ಇದು ಕೃಷ್ಣಪ್ರಜ್ಞೆ.






Leave a Reply