ಪಕ್ಷಿಗಳಿಗಾಗಿ ಇಂದ್ರಿಯ ತೃಪ್ತಿ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಕೆಲವು ಭಕ್ತರ ನಡುವೆ
1974ರ ಮೇ ತಿಂಗಳಿನಲ್ಲಿ ರೋಂನಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ಅದಾಂತಾ ಗೋಬಿರ್‌ ವಿಷತಾಂ ತಮಿಶ್ರಂ ಪುನಃ ಪುನಸ್‌ ಚರ್ವಿತ ಚರ್ವಣಾನಾಂ : ಪುನಃ ಪುನಃ ಮೆಲ್ಲುವುದನ್ನೇ ಮೆಲ್ಲುವುದು. ಜನ್ಮದಿಂದ ಜನ್ಮಕ್ಕೆ ಜನರು ತಮ್ಮ ಇಂದ್ರಿಯ ಆನಂದದ ಪ್ರಯತ್ನದಲ್ಲಿಯೇ ಇದ್ದಾರೆ. ಜನ್ಮದಿಂದ ಜನ್ಮಕ್ಕೆ ಪುನಃ ಪುನಃ ಅದೇ. ಮನುಷ್ಯರಾಗಲಿ, ನಾಯಿಯಾಗಲಿ ಅದೇ ಉಣ್ಣುವುದು, ಮಲಗುವುದು, ಲೈಂಗಿಕ ಪ್ರಕ್ರಿಯೆ ಮತ್ತು ರಕ್ಷಣೆ. ಪುನರ್‌ ಪುನಸ್‌ ಚರ್ವಿತ ಚರ್ವಣಾನಾಂ : ಪುನಃ ಪುನಃ ಜಗಿದದ್ದನ್ನೇ ಜಗಿಯುವುದು. ನೀವು ದೇವತೆಯಾಗಬಹುದು ಅಥವಾ ನಾಯಿಯಾಗಬಹುದು, ಲೌಕಿಕ ಲೋಕದಲ್ಲಿ ಪ್ರತಿಯೊಬ್ಬರಿಗೂ ಈ ನಾಲ್ಕಕ್ಕೆ ಅನುಕೂಲಗಳನ್ನು ಕಲ್ಪಿಸಲಾಗಿದೆ : ಉಣ್ಣುವುದು, ಮಲಗುವುದು, ಲೈಂಗಿಕ ಕ್ರಿಯೆ ಮತ್ತು ರಕ್ಷಿಸಿಕೊಳ್ಳುವುದು.

ವಾಸ್ತವವಾಗಿ ಏನಾದರೂ ಅಪಾಯ ಬಂದರೆ ನಾವು, ಮಾನವರು ಅದಕ್ಕೆ ಗುರಿಯಾಗಬಹುದು, ಪಕ್ಷಿಗಳು ತತ್‌ಕ್ಷಣ ಹಾರಿ ಹೋಗುತ್ತವೆ. ಆದುದರಿಂದ ರಕ್ಷಣೆ ವಿಷಯದಲ್ಲಿ ಪಕ್ಷಿಗಳಿಗೆ ನಮಗಿಂತ ಉತ್ತಮ ಸೌಕರ್ಯಗಳಿವೆ. ಹೌದಲ್ಲವೇ? ಒಂದು ಕಾರು ನಮಗೆ ನೇರವಾಗಿ ಬಂದಿತೆಂದುಕೊಳ್ಳಿ. ನಾವು ಅಪಘಾತಕ್ಕೆ ಈಡಾಗುತ್ತೇವೆ. ನಾವು ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತೇವೆ. ಆದರೆ ಸಣ್ಣ ಪಕ್ಷಿಯೊಂದು “ಬಿಡು, ನಾನು ಹೋಗುತ್ತಿದ್ದೇನೆ” ಎನ್ನುತ್ತದೆ. ಅದಕ್ಕೆ ಅದು ಸಾಧ್ಯ. ಅಲ್ಲವೇ? ಅದರ ರಕ್ಷಣಾ ವ್ಯವಸ್ಥೆ ನಮಗಿಂತ ಉತ್ತಮವಾಗಿವೆ.

ಅದೇ ರೀತಿ ಲೈಂಗಿಕ ಕ್ರಿಯೆ ಬೇಕೆನಿಸಿದರೆ ನಾವು ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸಂಗಾತಿ, ಸೂಕ್ತ ಸಮಯ ಮತ್ತು ಸ್ಥಳವನ್ನು ಹುಡುಕಿಕೊಳ್ಳಬೇಕು. ಆದರೆ ಹೆಣ್ಣು ಪಕ್ಷಿಯು ಸದಾ ಗಂಡು ಪಕ್ಷಿಯ ಸುತ್ತಮುತ್ತಲೇ ಇರುತ್ತದೆ ಮತ್ತು ಯಾವ ಸಮಯದಲ್ಲಾದರೂ ಲಭ್ಯವಿರುತ್ತದೆ. ಗುಬ್ಬಚ್ಚಿ ಅಥವಾ ಪಾರಿವಾಳಗಳನ್ನು ನೋಡಿರುವಿರಾ? ಅವು ಲೈಂಗಿಕ ಕ್ರಿಯೆಗೆ ಸದಾ ಸಿದ್ಧವಾಗಿರುತ್ತವೆ. ಹಕ್ಕಿಗಳು ಆಹಾರಕ್ಕೆ ಏನು ಮಾಡುತ್ತವೆ? “ಅಲ್ಲಿ ಹಣ್ಣು ಇದೆ” ಎಂದು ಹಕ್ಕಿಯು ಹಾರಿ ಕಿತ್ತುಕೊಂಡು ತಿನ್ನುತ್ತದೆ. ಅವುಗಳಿಗೆ ಮಲಗುವುದೂ ಕೂಡ ತುಂಬ ಸುಲಭ.

ಆದುದರಿಂದ ಈ ಸೌಲಭ್ಯಗಳು ನಿಮ್ಮ ಗಗನಚುಂಬಿ ಕಟ್ಟಡಗಳಲ್ಲಿ ಮಾತ್ರ ಲಭ್ಯ ಎಂದು ಭಾವಿಸಬೇಡಿ. ಅವು ಹಕ್ಕಿ ಮತ್ತು ಮೃಗಗಳಿಗೆ ಲಭ್ಯ. ಗಗನಚುಂಬಿ ಕಟ್ಟಡದಲ್ಲಿ ಮನೆ ಇದ್ದರೆ ಮಾತ್ರ ನಿಮಗೆ ತಿನ್ನುವ, ಮಲಗುವ, ರಕ್ಷಿಸಿಕೊಳ್ಳುವ ಮತ್ತು ಲೈಂಗಿಕ ಕ್ರಿಯೆ ಸೌಲಭ್ಯಗಳು ಸಿಗುತ್ತವೆ ಎಂಬುದೇನೂ ಅಲ್ಲ. ಯಾವುದೇ ಲೌಕಿಕ ದೇಹ, ಯಾವುದೇ ಜೀವ ಜಾತಿಯಲ್ಲಿ ಆ ಸೌಲಭ್ಯಗಳು ಇರುತ್ತವೆ : ವಿಷಯ ಖಲು ಸರ್ವತಃ ಸ್ಯಾತ್‌. ವಿಷಯ ಎಂದರೆ ಇಂದ್ರಿಯ ಸುಖಕ್ಕೆ ಅನುಕೂಲಗಳು. ನಮ್ಮ ವಿಧಾನ ಏನೆಂದರೆ, ವಿಷಯ ಚಾಡಿಯಾ ಸೇ ರಸೇ ಮಜಿಯಾ. ಈ ಅತೃಪ್ತಿಕರ ಲೌಕಿಕ ಆನಂದವನ್ನು ಬಿಟ್ಟು ಬಿಡಬೇಕು ಮತ್ತು ಆಧ್ಯಾತ್ಮಿಕ ಆನಂದವನ್ನು ಸವಿಯಬೇಕು. ಇದು ಭಿನ್ನ ವೇದಿಕೆಯಲ್ಲಿ ಅನುಭವಿಸುವ ಅನಂದ.

ಆದರೆ ಇಂದು ಜನರು ದೈಹಿಕ ಜೀವನ ಕಲ್ಪನೆಯಿಂದ ಎಷ್ಟು ಮರುಳಾಗಿದ್ದಾರೆ ಎಂದರೆ ಈ ಲೌಕಿಕ ಆನಂದ ಒಂದೇ ತಮ್ಮ ಸುಖವೆಂದು ಭಾವಿಸುತ್ತಾರೆ.

ಆದುದರಿಂದ ಧರ್ಮ ಗ್ರಂಥಗಳು ಹೇಳುತ್ತವೆ : “ಈ ತಾತ್ಕಾಲಿಕ, ಕೀಳು ಮಟ್ಟದ ಆನಂದವು ಲೌಕಿಕ ಜೀವನದ ಮನುಷ್ಯ, ಪಕ್ಷಿ ಅಥವಾ ಮೃಗದಂತಹ ಯಾವುದೇ ರೂಪದಲ್ಲಿ ಲಭ್ಯ. ಎಲ್ಲ ಜೀವಜಾತಿಗಳಲ್ಲಿಯೂ ಮತ್ತೆ ಮತ್ತೆ ಅದೇ ಅತೃಪ್ತಿಕರ ಸುಖದ ಹಿಂದೆ ನೀವು ಏಕೆ ಹೋಗುತ್ತಿರುವಿರಿ? ಪುನಃ ಪುನಸ್‌ ಚರ್ವಿತ ಚರ್ವಣಾನಾಂ – ಈ ಎಲ್ಲ ವಿಧವಾದ ರೂಪದಲ್ಲಿ ನೀವು ಪದೇ ಪದೇ ಅದೇ ಮೂರ್ಖ, ಅತೃಪ್ತವಾದುದನ್ನೇ ಮಾಡುತ್ತಿರುವಿರಿ.”

ಆದರೆ ಮತಿರ್‌ ನ ಕೃಷ್ಣೇ ಪರತೋ ಸ್ವತೋ ವಾ : ಲೌಕಿಕ ಇಂದ್ರಿಯ ಸುಖದಿಂದ ಮರುಳಾದವರು ತಮ್ಮದೇ ಪ್ರಯತ್ನ ಅಥವಾ ಆಧ್ಯಾತ್ಮಿಕ ಗುರುವಿನ ಬೋಧನೆಯಿಂದಲೂ ಕೂಡ ಕೃಷ್ಣ ಪ್ರಜ್ಞಾವಂತರಾಗುವುದು ಸಾಧ್ಯವಿಲ್ಲ. ಮತ್ತು ಮಿತೋ ಅಭಿಪದ್ಯೇತ : ಈ ಮೂರ್ಖ ಜನರು “ಬದುಕಿನ ಸಮಸ್ಯೆಗಳೇನು?” ಎಂಬುದರ ಚರ್ಚೆಗೆ ಅನೇಕ ಸಭೆ ಸಮಾವೇಶಗಳನ್ನು ನಡೆಸಬಹುದು. ಆದರೂ ಅವರಿಗೆ ಕೃಷ್ಣ ಪ್ರಜ್ಞಾ ವಿಧಾನದಲ್ಲಿ ತೊಡಗುವುದು ಸಾಧ್ಯವಿಲ್ಲ.

ಏಕೆ? ಗೃಹ ವ್ರತಾನಾಂ : “ಈ ಲೌಕಿಕ ಲೋಕದಲ್ಲಿ ನಾವು ಸಂತೋಷದಿಂದ ಇರುವೆವು” ಎಂಬ ದೃಢ ಸಂಕಲ್ಪ ಅವರಲ್ಲಿ ಇರುವವರೆಗೂ ಅವರು ಕೃಷ್ಣ ಪ್ರಜ್ಞೆಯಲ್ಲಿ ತೊಡಗುವುದು ಸಾಧ್ಯವಿಲ್ಲ. ಗೃಹ ಎಂದರೆ `ಮನೆ’ ಮತ್ತು `ದೇಹ’ ಎಂದು ಅರ್ಥ. ಈ ಲೌಕಿಕ ದೇಹದೊಳಗೇ ಸುಖವಾಗಿರಲು ಪ್ರಯತ್ನಿಸುತ್ತಿರುವವರು ಕೃಷ್ಣ ಪ್ರಜ್ಞೆಯಲ್ಲಿ ತೊಡಗುವುದು ಸಾಧ್ಯವಿಲ್ಲ. ಏಕೆಂದರೆ ಅದಾಂತಾ ಗೋಭಿಃ – ಅವರ ಇಂದ್ರಿಯಗಳು ಅಷ್ಟು ಅನಿಯಂತ್ರಿತವಾಗಿವೆ. ಆದುದರಿಂದ ಈ ಜನರು ಜಗಿದಿದ್ದನ್ನೇ ಜಗಿಯುವ ಪರೀಕ್ಷೆಗೆ ಪದೇ ಪದೇ ಒಳಗಾಗಬೇಕಾಗುತ್ತದೆ. ಮತ್ತೆ ಮತ್ತೆ ಅದೇ ಇಂದ್ರಿಯ ಸುಖ : ತಿನ್ನುವುದು, ಮಲಗುವುದು, ಸಂಗ ಮತ್ತು ರಕ್ಷಣೆ.

ಭಕ್ತ : ಆದುದರಿಂದ ಇಹ ಲೋಕದಲ್ಲಿ ಸಂತೋಷದಿಂದ ಇರುವುದು ಸಾಧ್ಯವಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಕೆಲಸವಲ್ಲವೆ?

ಶ್ರೀಲ ಪ್ರಭುಪಾದ : ಹೌದು. ಅವರಿಗೆ ಈಗಾಗಲೇ ನಂಬಿಕೆ ಮೂಡುವ ಅನುಭವವಾಗಿದೆ, ಪ್ರತಿ ದಿನ ಅವರು ಅನೇಕ ಪಕ್ಷಗಳನ್ನು ರಚಿಸುವರು, ಎಷ್ಟೊಂದು ತಯಾರಿಸುವರು ಮತ್ತು ಯೋಜನೆಗಳನ್ನು ರೂಪಿಸುವರು. ಅದೂ ಇದೂ. ಆದರೂ ಅವರೇನೂ ಸುಖವಾಗಿಲ್ಲ. ಆದರೂ ಅವರೆಂತಹ ಮೂರ್ಖರೆಂದರೆ, ಪದೇ ಪದೇ ಭಗ್ನಗೊಂಡರೂ ಅಥವಾ ಅಡ್ಡಿಗೆ ಒಳಗಾದರೂ ಅವರು ಇನ್ನೂ ತಾವು ಜಗಿದಿದ್ದನ್ನೇ ಜಗಿಯುತ್ತಿದ್ದಾರೆ. ಪುನಃ ಅದನ್ನೇ, ಬೇರೆ ರೀತಿಯಲ್ಲಿ ಅಷ್ಟೆ.

ಸಮುದಾಯ ಸ್ವಾಮ್ಯವಾದಿ ಮತ್ತು ಬಂಡವಾಳಶಾಹಿಗಳ ನಡುವಿನ ವ್ಯತ್ಯಾಸವೇನು? ಉಭಯ ಗುಂಪುಗಳೂ ತಮ್ಮದೇ ಇಂದ್ರಿಯ ಸುಖಕ್ಕಾಗಿ ಉತ್ತಮ ವ್ಯವಸ್ಥೆ ಮಾಡುವುದು ಹೇಗೆಂದು ನೋಡುತ್ತಿವೆ. ಎರಡೂ ಗುಂಪುಗಳು ಜಗಳವಾಡುತ್ತಿವೆ, ಆದರೆ ಪ್ರತಿಯೊಬ್ಬರ ಗುರಿಯು ಗೃಹ ವ್ರತಾನಾಂ : “ನಾವು ಈ ಲೌಕಿಕ ಲೋಕದೊಳಗೇ ಉಳಿಯೋಣ ಮತ್ತು ಅಲ್ಲಿಯೇ ಸುಖವಾಗಿರೋಣ.”

ಭಕ್ತ : ಅಭಿಪ್ರಾಯವೇನೆಂದರೆ, ನಮಗೆ ಸಾಕಷ್ಟು ಆಹಾರ ಮತ್ತು ಲೈಂಗಿಕ ತೃಪ್ತಿ ದೊರೆತರೆ, ನಾವು ಸುಖವಾಗಿರಬಹುದು.

ಶ್ರೀಲ ಪ್ರಭುಪಾದ : ಅಷ್ಟೇ. ಅನಂತರ ಜನರು ನಿರ್ವೀರ್ಯರಾಗುತ್ತಾರೆ. ಅವರು ವೈದ್ಯರಲ್ಲಿ ಬೇಡುತ್ತಾರೆ, “ನನಗೆ ಲೈಂಗಿಕ ಔಷಧಿ ನೀಡಿ.” ನೋಡಿದಿರಾ? ಪುನಃ ಪುನಸ್‌ ಚರ್ವಿತ ಚರ್ವಣಾನಾಂ. ಅದೇ ಹಳೆಯದನ್ನೇ ಜಗಿಯುವುದು. ಅವರು ಮನೆಯಲ್ಲಿ ಲೈಂಗಿಕ ಕ್ರಿಯೆಯಿಂದ ಬೇಸರಗೊಂಡಾಗ, “ನಾವು ವೇಶ್ಯೆಯ ಬಳಿಗೆ ಹೋಗೋಣ. ನಾವು ಬೆತ್ತಲೆ ನೃತ್ಯಕ್ಕೆ ಹೋಗೋಣ.” ಎನ್ನುತ್ತಾರೆ. ಅವರ ಬಳಿ ಬೇರೆ ಯೋಚನೆಗಳೇ ಇಲ್ಲ. ಆದುದರಿಂದ ಇಂತಹ ವರ್ಗದ ವ್ಯಕ್ತಿಗಳು ಕೃಷ್ಣ ಪ್ರಜ್ಞೆಯಲ್ಲಿ ತೊಡಗುವುದು ಸಾಧ್ಯವಿಲ್ಲ. ಮೊದಲನೆಯದಾಗಿ ಈ ಜ್ಞಾನ ಅಥವಾ ಅರಿವು ಇರಬೇಕು : “ನಾನು ಈ ಲೌಕಿಕ ಲೋಕಕ್ಕೆ ಸೇರಿದವನಲ್ಲ. ನಾನು ಆಧ್ಯಾತ್ಮಿಕ ಆತ್ಮ. ನನ್ನ ಸುಖವು ಆಧ್ಯಾತ್ಮಿಕ ಲೋಕದಲ್ಲಿದೆ.” ಆಗ ಅವನು ನಿಜವಾದ ಮಾನವ ಜೀವಿ ಮತ್ತು ಅವನು ಆಧ್ಯಾತ್ಮಿಕ ಪ್ರಗತಿ ಮಾಡಬಲ್ಲ. ಆದುದರಿಂದ ಮುಂದಿನ ಪ್ರಶ್ನೆ. “ಆಧ್ಯಾತ್ಮಿಕ ಆತ್ಮ ಅಥವಾ ಕೃಷ್ಣ ಪ್ರಜ್ಞೆಯಲ್ಲಿ ಆಸಕ್ತಿ ಹೊಂದುವುದು ಹೇಗೆ?” ಇದು ಪ್ರಶ್ನೆ. ಪ್ರಾಣಿಗಳು, ಪ್ರಾಣಿಗಳಂತಹ ಮನುಷ್ಯರು ಆಸಕ್ತಿ ಹೊಂದುವುದು ಸಾಧ್ಯವಿಲ್ಲ.

ನೈಷಾಂ ಮತಿಸ್‌ ತಾವದ್‌ ಉರುಕ್ರಮಾಂಘ್ರಿಂ
ಸ್ಪೃಶತಿ ಅನರ್ಥಾಪಗಮೋ ಯದ್‌ ಅರ್ಥಃ
ಮಹೀಯಸಾಂ ಪಾದ ರಜೋ ಅಭಿಷೇಕಂ
ನಿಷ್ಕಿಂಚನಾನಾಂ ನ ವೃಣೀತ ಯಾವತ್‌

ಶ್ರೀಮದ್‌ ಭಾಗವತ ಹೇಳುತ್ತದೆ, (7.5.32), “ಭೌತಿಕ ಕಾಲುಷ್ಯದಿಂದ ಸಂಪೂರ್ಣವಾಗಿ ಮುಕ್ತನಾದ ವೈಷ್ಣವನ ಪಾದಾರವಿಂದದ ಧೂಳಿಯನ್ನು ತಮ್ಮ ಶರೀರಗಳ ಮೇಲೆ ಉಜ್ಜಿಕೊಳ್ಳದಿದ್ದರೆ, ಭೌತಿಕ ಜೀವನದಲ್ಲಿ ಅತ್ಯಾಸಕ್ತರಾದ ಜನರು, ಅಸಾಮಾನ್ಯ ಕ್ರಿಯೆಗಳಿಂದ ಮಹಿಮಾನ್ವಿತನಾದ ಭಗವಂತನ ಪವಿತ್ರ ಪಾದಪದ್ಮಗಳಲ್ಲಿ ಅನುರಕ್ತರಾಗಲಾರರು. ಕೃಷ್ಣಪ್ರಜ್ಞೆಯುಳ್ಳವನಾಗಿ ಭಗವಂತನ ಪಾದಪದ್ಮಗಳಲ್ಲಿ ಆಶ್ರಯವನ್ನು ಪಡೆಯುವುದರಿಂದ ಮಾತ್ರ ಮಾನವನು ಭೌತಿಕ ಕಾಲುಷ್ಯದ ಸೋಂಕಿನಿಂದ ಬಿಡುಗಡೆಯನ್ನು ಪಡೆಯಲು ಸಾಧ್ಯ.”

ಅಂತಹ ಶ್ರೇಷ್ಠ ಭಕ್ತನ ಪಾದ ಕಮಲ ಅಥವಾ ಅಂತಹ ಚರಣ ಕಮಲದ ಧೂಳನ್ನಾದರೂ ನಿಮ್ಮ ಶಿರದಿಂದ ಸ್ಪರ್ಶಿಸುವ ಅವಕಾಶ ನಿಮಗೆ ದೊರೆತರೆ, ನಿಮ್ಮ ಆಧ್ಯಾತ್ಮಿಕ ಪ್ರಗತಿ ಸಾಧ್ಯ. ಇಲ್ಲವಾದರೆ ಸಾಧ್ಯವಿಲ್ಲ. ಶ್ರೇಷ್ಠ ಭಕ್ತನ ಪಾದ ಧೂಳಿಯು ನಿಮಗೆ ಸಹಾಯ ಮಾಡಬಲ್ಲದು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ