“ದೇವೋತ್ತಮ ಪರಮ ಪುರುಷನ ವಿಕ್ರಮ ಮತ್ತು ಅದ್ಭುತ ಕಾರ್ಯಗಳ ಸಂದೇಶಗಳನ್ನು ಕೇಳದವನ ಕಿವಿಗಳು ಹಾವಿನ ಹುತ್ತದ ಬಿಲಗಳಿದ್ದ ಹಾಗೆ. ಭಗವಂತನನ್ನು ಕುರಿತ ಸ್ತೋತ್ರಗಳನ್ನು ಹಾಡದವನ, ಸಂಕೀರ್ತನ ಮಾಡದವನ ನಾಲಗೆ ಕಪ್ಪೆಯ ನಾಲಗೆಯಂತೆ ಎಂದು ತಿಳಿಯಬೇಕು.”
– (ಶ್ರೀಮದ್ ಭಾಗವತ 2.3.20)

ದೇವೋತ್ತಮ ಪರಮ ಪುರುಷನ ವೈಭವಗಳನ್ನು ಕೇಳಲು ನೈಮಿಷಾರಣ್ಯದಲ್ಲಿ ಸೇರಿದ್ದ ಋಷಿಗಳ ಸಭೆಯ ನಾಯಕತ್ವ ವಹಿಸಿದ್ದ ಶೌನಕ ಮುನಿಗಳು ಭಗವಂತನ ಅದ್ಭುತ ಲೀಲೆಗಳನ್ನು ಕುರಿತು ಇನ್ನೂ ಕೇಳಲು ಕಾತರದಿಂದಿರುವುದಾಗಿ ಹೇಳಿದರು. ದೇವೋತ್ತಮನ ವಿಕ್ರಮ ಮತ್ತು ಅದ್ಭುತ ಲೀಲೆಗಳ ಸಂದೇಶಗಳನ್ನು ಕೇಳದವರ ಕಿವಿಗಳು ಹಾವಿನ ಹುತ್ತದ ಬಿಲಗಳಿದ್ದ ಹಾಗೆ ಎಂದು ಪರಿಗಣಿಸಿರುವುದೇ ಅದಕ್ಕೆ ಸಮರ್ಥನೆ. ಮಾನವ ಜೀವ ರೂಪವು ವಿಶೇಷವಾಗಿ ಕೃಷ್ಣ ಪ್ರಜ್ಞೆಯನ್ನು ಆನುಸರಿಸಲೆಂದೇ ಇರುವುದು. ಕೃಷ್ಣನ ಮತ್ತೊಂದು ಹೆಸರು ಉರುಕ್ರಮ, ಅಂದರೆ ಅದ್ಭುತ ಲೀಲೆಗಳನ್ನು ಮಾಡುವವ ಎಂದು ಅರ್ಥ.
ಭಗವಂತನು ಈ ಜಗತ್ತಿನಲ್ಲಿ ಅವತಾರವೆತ್ತಿದಾಗ ತೋರಿದ ಲೀಲೆಗಳನ್ನು ಗಮನವಿಟ್ಟು ಅಧ್ಯಯನ ಮಾಡಿದರೆ ಅವೆಷ್ಟು ಅದ್ಭುತ ಎಂಬುವುದು ಅರಿವಾಗುತ್ತದೆ. ಶ್ರೀ ಕೃಷ್ಣನು ಪ್ರದರ್ಶಿಸುತ್ತಿರುವ ಲೀಲೆಗಳನ್ನು ಯಾವುದೇ ಮಾನವ, ದೇವತೆ ಅಥವಾ ತಪಸ್ವಿಯಿಂದ ಮಾಡಲಾಗದು. ಪರಂಪರೆಯಾಗಿ ನಡೆದುಕೊಂಡು ಬಂದಿರುವಂತೆ ಭಗವಂತನ ಅಲೌಕಿಕ ಸ್ಥಾನವನ್ನು ಅರಿತುಕೊಂಡಿರುವ ಭಕ್ತನಿಂದ ಅವನ ಲೀಲೆಗಳನ್ನು ಕೇಳಬೇಕು.

ಶ್ರೀ ಕೃಷ್ಣನು ಈ ಜಗತ್ತಿನಲ್ಲಿ ಆವಿರ್ಭವಿಸುವಾಗ ಅವನು ತನ್ನ ರೂಪವನ್ನು ಬದಲಿಸಿಕೊಳ್ಳುವುದಿಲ್ಲ. ಅವನು ತನ್ನ ಆಂತರಿಕ ಶಕ್ತಿಯಿಂದ ಅವತರಿಸುತ್ತಾನೆ. ಅದನ್ನು ನಾವು ಅರ್ಥಮಾಡಿಕೊಳ್ಳಲಾರೆವು. ಏಕೆಂದರೆ ನಮ್ಮ ಪ್ರಜ್ಞೆಯು ಇಂದ್ರಿಯ ಆನಂದದಲ್ಲಿ ಮಿಲನವಾಗಿದೆ ಮತ್ತು ನಮ್ಮ ಬುದ್ಧಿಯು ಮಾಯೆಯಿಂದ ಗೊಂದಲಮಯವಾಗಿದೆ. ಉದಾಹರಣೆಗೆ, ಭಗವಂತನು ಶ್ರೀ ನರಸಿಂಹನಂತಹ ಅಸಾಧಾರಣ ರೂಪದಲ್ಲಿ ಪ್ರತ್ಯಕ್ಷನಾದರೂ ಹಿರಣ್ಯಕಶಿಪುವಿಗೆ ಅವನನ್ನು ಗುರುತಿಸಲಾಗಲಿಲ್ಲ. ದೇವೋತ್ತಮನು ಅಧೋಕ್ಷಜ, ಅಂದರೆ ಅವನು ನಮ್ಮ ಇಂದ್ರಿಯ ಗ್ರಹಿಕೆಗೆ ಮೀರಿದವನು. ಅಧೋಕ್ಷಜ, ಅವಾನ್ ಮಾನಸ ಗೋಚರಃ – ಸಾಮಾನ್ಯವಾದ ಲೌಕಿಕ ವಿಷಯಗಳನ್ನು ವರ್ಣಿಸುವ ನಮ್ಮ ಮನಸ್ಸು ಅಥವಾ ಮಾತಿನಿಂದ ಅವನನ್ನು ಗ್ರಹಿಸಲಾಗದು. ದೇವೋತ್ತಮನನ್ನು ಗುರುತಿಸುವ ಮಾರ್ಗವಿದೆ. ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ –
ಭಕ್ತ್ಯಾ ಮಾಂ ಅಭಿಜಾನಾತಿ ।
ಯಾವಾನ್ ಯಶ್ ಚಾಸ್ಮಿ ತತ್ತ್ವಃ ॥
ನಿಜವಾಗಿಯೂ ನಿಮಗೆ ಕೃಷ್ಣನನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅದು ಭಕ್ತಿ ಮಾರ್ಗದಿಂದ ಮಾತ್ರ. ನಾರದ ಪಂಚರಾತ್ರಾದಲ್ಲಿ ಹೀಗೆ ಹೇಳಲಾಗಿದೆ –
ಸರ್ವೋಪಾಧಿ ವಿನಿರ್ಮುಕ್ತಂ ।
ತತ್ ಪರತ್ವೇನ ನಿರ್ಮಲಂ ॥
ನಮ್ಮ ಇಂದ್ರಿಯ ಹಾಗೂ ಮನಸ್ಸನ್ನು ಶುದ್ಧೀಕರಿಸಿಕೊಳ್ಳುವ ಮೂಲಕ ನಾವು ಎಲ್ಲ ಲೌಕಿಕ ಸ್ಥಾನಗಳಿಂದ ಮುಕ್ತರಾಗುತ್ತೇವೆ. ದೇಹದ ಎಲ್ಲ ಭಾಗಗಳಿಂದ ಭಗವಂತನಿಗೆ ನಾವು ಸೇವೆ ಸಲ್ಲಿಸುತ್ತೇವೆ ಎಂದು ಪ್ರಭುಪಾದರು ವಿವರಿಸುತ್ತಾರೆ. ಅಶುದ್ಧವಾಗಿರುವವರೆಗೂ ಇಂದ್ರಿಯಗಳು ಐಹಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಸ್ವಾಭಾವಿಕ. ಲೌಕಿಕ ಚಟುವಟಿಕೆಗಳನ್ನು ಸ್ತಬ್ಧಗೊಳಿಸುವುದು ಇಂದ್ರಿಯಗಳ ಶುದ್ಧೀಕರಣವಲ್ಲ. ಏಕೆಂದರೆ ಸದಾ ಚಟುವಟಿಕೆಯಿಂದ ಇರುವುದು ಆತ್ಮದ ಲಕ್ಷಣ.
ಶುದ್ಧೀಕರಣ
ಆದುದರಿಂದ ಪ್ರಭುಪಾದರು ಹೇಳುತ್ತಾರೆ, ಭಕ್ತಿ ಸೇವೆಯು ಆಧ್ಯಾತ್ಮಿಕ ಆತ್ಮದ ಅಲೌಕಿಕ ಕ್ರಿಯಾಶಕ್ತಿ. ನಾವೆಲ್ಲರೂ ಆಧ್ಯಾತ್ಮಿಕ ಆತ್ಮಗಳೆಂದು ನಮಗೆ ಭಗವದ್ಗೀತೆಯಿಂದ ತಿಳಿದುಬರುತ್ತದೆ. ಆದರೆ, ಐಹಿಕ ಆಸೆಗಳಿಂದ ಆತ್ಮವು ಮಲಿನಗೊಂಡರೆ ಅದೇ ಅಲೌಕಿಕ ಕ್ರಿಯಾಶಕ್ತಿಯನ್ನು ಇಂದ್ರಿಯ ಆನಂದದ ಮೂಲಕ ವ್ಯಕ್ತಪಡಿಸಲಾಗುವುದು. ಅದೇ ನಮ್ಮ ಲೌಕಿಕ ಬಂಧನಕ್ಕೆ ಕಾರಣ. ಆದುದರಿಂದ ನಾವು ನಮ್ಮ ಇಂದ್ರಿಯಗಳನ್ನು ಶುದ್ಧಗೊಳಿಸಬೇಕು. ಇಂದ್ರಿಯಗಳನ್ನು ಸ್ವ ಸಂತೋಷಕ್ಕಾಗಿ ಇಂದ್ರಿಯ ವಸ್ತುಗಳ ಜೊತೆ ಸಂಪರ್ಕಿಸಿದರೆ ಆನಂದದಿಂದ ಇರಬಹುದೆಂಬ ಭ್ರಮೆ ಇದೆ. ಅದು ಏಕೆಂದರೆ ಬದುಕಿನ ಅಂತಿಮ ಧ್ಯೇಯ ವಿಷ್ಣು ಎಂಬುವುದು ಜನರಿಗೆ ತಿಳಿಯದು. ಇದನ್ನು ಅರ್ಥ ಮಾಡಿಕೊಳ್ಳಲು ನೀವು ನಿಮ್ಮ ಇಂದ್ರಿಯಗಳನ್ನು ಕೃಷ್ಣನ ಭಕ್ತಿ ಸೇವೆಯಲ್ಲಿ ತೊಡಗಿಸಬೇಕು.
ಅತಃ ಶ್ರೀ ಕೃಷ್ಣ ನಾಮಾದಿ ।
ನ ಭವೇದ್ ಗ್ರಾಹ್ಯಂ ಇಂದ್ರಿಯೈಃ ॥
ಕೃಷ್ಣನನ್ನು ಗ್ರಾಹ್ಯಂ ಇಂದ್ರಿಯೈಃ, ಈ ಲೌಕಿಕ ಇಂದ್ರಿಯಗಳಿಂದ ಗ್ರಹಿಸಲಾಗದು – ಅವು ಕೃಷ್ಣನನ್ನು ಅರಿಯಲು ಅಸಮರ್ಥ. ಆದರೆ ನೀವು ನಾಲಗೆಯಿಂದ ಭಕ್ತಿ ಸೇವೆ ಆರಂಭಿಸಿದರೆ – ಸೇವೋನ್ಮುಖೇ ಹಿ ಜಿಹ್ವಾದೌ – ಆಗ ಕೃಷ್ಣನು ನಿಮ್ಮ ಇಂದ್ರಿಯಗಳನ್ನು ಶುದ್ಧಗೊಳಿಸುತ್ತಾನೆ ಮತ್ತು ತನ್ನನ್ನು ನಿಮಗೆ ಪ್ರಕಟಗೊಳಿಸುತ್ತಾನೆ – ಸ್ವಯಂ ಏವ ಸ್ಫುರತಿ ಅದಃ. ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ನಮ್ಮ ಇಂದ್ರಿಯಗಳನ್ನು ಶುದ್ಧಪಡಿಸಲು ಪರಿಣಾಮಕಾರಿಯಾದ ಭಕ್ತಿ ಸೇವೆಯಲ್ಲಿ ತನ್ನ ಶಿಷ್ಯರನ್ನು ತೊಡಗಿಸಲು ಆಧ್ಯಾತ್ಮಿಕ ಗುರುಗಳೇ ಅತ್ಯಂತ ಸೂಕ್ತರಾದವರು ಎಂದು ವಿಶ್ವನಾಥ ಚಕ್ರವರ್ತಿ ಠಾಕುರರು ವಿವರಿಸಿದ್ದಾರೆ. ಆಧ್ಯಾತ್ಮಿಕ ಗ್ರಹಿಕೆಯು ಗುರುವಿನಿಂದ ಶಿಷ್ಯನಿಗೆ ಸಾಗುವ ವಿದ್ಯುಚ್ಛಕ್ತಿ ತರಹ ಅಲ್ಲ. ಪ್ರಭುಪಾದರು ಹೇಳುತ್ತಾರೆ, ಪ್ರತಿಯೊಂದೂ ಪ್ರಜ್ಞಾಪೂರ್ವಕವಾಗಿ ಮತ್ತು ತಾರ್ಕಿಕವಾಗಿ ಇರುತ್ತದೆ . ಸ್ವೀಕರಿಸುವವರು ವಿಧೇಯರಾಗಿರಬೇಕು ಮತ್ತು ಪ್ರಜ್ಞಾಪೂರ್ವಕವಾಗಿ ಹಾಗೂ ತಾರ್ಕಿಕವಾಗಿ ಕೇಳಿದಾಗ ಮಾತ್ರ ಗುರು, ಶಿಷ್ಯರ ನಡುವೆ ಅಭಿಪ್ರಾಯ ವಿನಿಮಯ ಸಾಧ್ಯ. ಅರ್ಜುನನು ಕೃಷ್ಣನ ಬಳಿ ಕೇಳುವಂತೆ. ಕುರುಕ್ಷೇತ್ರ ಸಮರ ಭೂಮಿಯಲ್ಲಿ ಅರ್ಜುನನು ದಿಗ್ಭ್ರಮೆಗೊಂಡು ಶ್ರೀ ಕೃಷ್ಣನಿಗೆ ಶರಣಾಗುತ್ತಾನೆ – ಶಿಷ್ಯಸ್ತೇ ಅಹಂ ಶಾದೀ ಮಾಂ – ನೀನು ಬೋಧಿಸು – ತ್ವಾಂ ಪ್ರಪನ್ನಂ – ನಾನು ನಿನಗೆ ಶರಣಾಗುವೆ. ಈಗ ನಾನು ನಿನ್ನ ಶಿಷ್ಯ. “ಈ ಯೋಗ ವಿಜ್ಞಾನವನ್ನು ವಿವಸ್ವಾನನಿಗೆ ನಾನು ಬೋಧಿಸಿದೆ – ನೂರಾರು ವರ್ಷಗಳ ಹಿಂದೆ ಇಮಂ ವಿವಸ್ವತೇ ಯೋಗಂ ಪೆ್ರೂೕಕ್ತವಾನ್ ಅಹಂ.” ಇದಕ್ಕೆ ಅರ್ಜುನ ಅತಿ ಸೂಕ್ತವಾದ ಪ್ರಶ್ನೆ ಕೇಳುತ್ತಾನೆ, “ಜನ್ಮದಿಂದ ನಿನಗಿಂತ ಹಿರಿಯನಾದ ಸೂರ್ಯದೇವ ವಿವಸ್ವಾನನಿಗೆ ಈ ಹಿಂದೆ ನೀನು ಬೋಧಿಸಿದೆ ಎಂಬುದನ್ನು ನಾನು ಹೇಗೆ ಅರ್ಥಮಾಡಿಕೊಳ್ಳಲಿ?”

ಪ್ರಭುಪಾದರು ಹೇಳುವಂತೆ ಗುರು, ಶಿಷ್ಯರ ನಡುವೆ ಇಂತಹ ಅಭಿಪ್ರಾಯ ವಿನಿಮಯ ಯಾವಾಗ ಸಾಧ್ಯ? ಸ್ವೀಕರಿಸುವವರು ವಿಧೇಯ ಹಾಗೂ ಪ್ರಾಮಾಣಿಕರಾಗಿದ್ದಾಗ ಮಾತ್ರ. ಅದೇ ಅಧ್ಯಾಯದಲ್ಲಿ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ, ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ – ನೀನು ಆಧ್ಯಾತ್ಮಿಕ ಗುರುವಿಗೆ ಶರಣಾಗು ಮತ್ತು ವಿಧೇಯನಾಗಿ ಪ್ರಶ್ನಿಸು. ಆಧ್ಯಾತ್ಮಿಕ ಜೀವನದಲ್ಲಿ ಅಂಧಾನುಕರಣೆ ಮತ್ತು ಅಸಂಬದ್ಧ ಪ್ರಶ್ನೆ ಕೇಳುವುದು ಖಂಡನೀಯ ಎಂದು ಪ್ರಭುಪಾದರು ಹೇಳುತ್ತಾರೆ. ಅಲೌಕಿಕ ಸಂದೇಶವನ್ನು ಸರಿಯಾಗಿ ಸ್ವೀಕರಿಸಲು ನಾವು ನಮ್ಮ ಮನಸ್ಸನ್ನು ಸಿದ್ಧಗೊಳಿಸಬೇಕು.
ಗುರುವಿನ ಜೊತೆ
ನಮ್ಮನ್ನು ಕುರಿತ ತಪ್ಪು ಗ್ರಹಿಕೆಯೊಂದರ ಕಾರಣ ನಾವು ಕೃಷ್ಣನೊಂದಿಗಿನ ನಮ್ಮ ಬಾಂಧವ್ಯದ ಬಗೆಗೆ ಅಜ್ಞಾನಿಗಳಾಗಿದ್ದೇವೆ, ನಮ್ಮ ತಪ್ಪು ಅಹಂಕಾರದ ಕಾರಣ ಈ ಎಲ್ಲ ಜ್ಞಾನಕ್ಕೂ ಮುಸುಕು ಹಾಕಲಾಗಿದೆ. ಕೃಷ್ಣನಿಂದ ಸ್ವತಂತ್ರ ಎಂದು ಭಾವಿಸುವ ನಮ್ಮ ಗ್ರಹಿಕೆಯು ಅಹಂಕಾರದ್ದು. ನಾವು ನಿಜವಾದ ಆಧ್ಯಾತ್ಮಿಕ ಗುರುವಿನ ಬಳಿ ಹೋದಾಗ ಈ ತಪ್ಪು ಗ್ರಹಿಕೆಯನ್ನು ನಿವಾರಿಸಿಕೊಳ್ಳಬಹುದು. ಎಲ್ಲಿ ನಂಬಿಕೆ ಇಡಬೇಕು ಅಥವಾ ಶರಣಾಗಬೇಕು ಎಂಬುದರ ವ್ಯತ್ಯಾಸ ಅರಿತುಕೊಳ್ಳಲು ಮಾನವನಿಗೆ ಬುದ್ಧಿ ನೀಡಲಾಗಿದೆ. ಆಧ್ಯಾತ್ಮಿಕ ಗುರುವಿಗೆ ಸೇವಕನಂತೆ ಸೇವೆ ಸಲ್ಲಿಸಬೇಕು. ಆದರೆ ಇದೆಲ್ಲ ನಾವು ನಮ್ಮ ವಿವೇಚನೆಯನ್ನು ಬಳಸಿಕೊಂಡ ಮೇಲೆ. ಉದ್ದೇಶದ ಬಗೆಗೆ ಪ್ರಾಮಾಣಿಕವಾಗಿದ್ದರೆ ಮಾತ್ರ ಈ ವಿವೇಚನೆ ಸಾಧ್ಯ.
ಉದ್ದೇಶದ ಪ್ರಾಮಾಣಿಕತೆ ಎಂದರೆ `ನಾನು ಯಾರು?’ ಎಂಬುವುದನ್ನು ಅರಿತುಕೊಳ್ಳುವ ಕಾತರತೆ. ಅಂದರೆ ಸ್ವಯಂ ಬಗೆಗೆ ನಿಜವನ್ನು ಅರಿಯುವುದು. ಮಾನವ ರೂಪ ದೊರೆತ ಕೂಡಲೇ ಬ್ರಹ್ಮ ಜಿಜ್ಞಾಸೆ ಇರುತ್ತದೆ. ಬುದ್ಧಿಯು ಎಷ್ಟು ಬೆಳವಣಿಗೆ ಸಾಧಿಸಿದೆ ಎಂದರೆ, ಈ ಬ್ರಹ್ಮನ್ ಅಥವಾ ಸತ್ಯ ಏನೆಂಬುದನ್ನು ಕುರಿತು ಯಾರೂ ಪ್ರಶ್ನಿಸಬಹುದು. ಆಹಾರ ಎಲ್ಲಿದೆ, ಇಂದ್ರಿಯ ತೃಪ್ತಿಗೆ ಸ್ಥಳವೆಲ್ಲಿದೆ ಎಂಬ ಪ್ರಶ್ನೆಗಳಿಗೂ ಆಚೆಗೆ ಬದುಕಿನ ವಿವಿಧ ರೂಪಗಳಲ್ಲಿ ಇತರ ಅನೇಕ ಪ್ರಶ್ನೆಗಳಿರುತ್ತವೆ. ಅಂತಹ ಬ್ರಹ್ಮ ಜಿಜ್ಞಾಸೆಯು ಆಧ್ಯಾತ್ಮಿಕ ಗುರುವಿನ ಶೋಧನೆಗೆ ಒಯ್ಯುತ್ತದೆ. ಈ ವಿಷಯದಲ್ಲಿ ಪರಮಾತ್ಮನ ನೆರವು ಸಿಗುತ್ತದೆ. ಪರಮಾತ್ಮನು ಅತಿ ಶ್ರೇಷ್ಠ ಶುಭ ಚಿಂತಕನಂತೆ ಪ್ರತಿಯೊಬ್ಬ ಜೀವಿಯ ಹೃದಯದಲ್ಲಿಯೂ ಆಸೀನನಾಗಿರುತ್ತಾನೆ – ಸುಹೃದಂ ಸರ್ವ-ಭೂತಾನಾಂ. ಕೃಷ್ಣನು ಪರಮಾತ್ಮನಾಗಿ ಆಸೀನನಾಗಿದ್ದು, ಪ್ರಾಮಾಣಿಕರಾದವರನ್ನು ಯೋಗ್ಯ ಆಧ್ಯಾತ್ಮಿಕ ಗುರುವಿನತ್ತ ಸಾಗಲು ಮಾರ್ಗದರ್ಶನ ನೀಡುತ್ತಾನೆ. ಯೋಗ್ಯ ಗುರುವನ್ನು ದಿಢೀರನೆ ಕಂಡುಕೊಳ್ಳಲಾಗುವುದಿಲ್ಲ. ಅಂತಹ ಪ್ರಾಮಾಣಿಕ ವ್ಯಕ್ತಿಗಳನ್ನು ಕೃಷ್ಣನು ಯೋಗ್ಯ ಆಧ್ಯಾತ್ಮಿಕ ಗುರುಗಳತ್ತ ಕಳುಹಿಸುತ್ತಾನೆ ಮತ್ತು ಅವರು ಅವನನ್ನು ಸ್ವೀಕರಿಸಿ ಪರಮ ಸತ್ಯವನ್ನು ತಾರ್ಕಿಕವಾಗಿ ವಿವರಿಸುತ್ತಾರೆ. ಅಂತಹ ಸಂದೇಶಗಳು ಆಧ್ಯಾತ್ಮಿಕ ಶಕ್ತಿಯಿಂದ ಕೂಡಿರುತ್ತವೆ, ಏಕೆಂದರೆ ಆಧ್ಯಾತ್ಮಿಕ ಗುರುವು ಆಧ್ಯಾತ್ಮಿಕ ವೇದಿಕೆಯ ಮೇಲೆ ಇರುತ್ತಾನೆ.
ಶಬ್ದಗಳು ಸಾಮಾನ್ಯ ಪದಗಳಾಗಿ ಕಾಣಬಹುದು. ಆದರೆ ಅವುಗಳು ಪೂರ್ಣವಾಗಿ ಆಧ್ಯಾತ್ಮಿಕ ಶಕ್ತಿಯಿಂದ ಕೂಡಿರುತ್ತವೆ. ಪರಿಶುದ್ಧ ಭಕ್ತರ ಜೊತೆ ಇರುವ ಭಗವಂತನನ್ನು ಕುರಿತ ವರ್ಣನೆಯನ್ನು ಕೇಳಿದಾಗ ಅಂತಹ ಪದಗಳು ಅಪಾರವಾದ ಶಕ್ತಿ ಹೊಂದಿರುತ್ತವೆ. ವಾಸ್ತವವಾಗಿ ಅವು ನಿಮ್ಮ ಆತ್ಮವನ್ನು ಮುಟ್ಟುತ್ತವೆ ಮತ್ತು ಲೌಕಿಕ ಮೌಢ್ಯದಿಂದ ಆತ್ಮವನ್ನು ಬಡಿದೆಬ್ಬಿಸುತ್ತವೆ. ಅಂತಹ ಕೇಳುವಿಕೆಯಿಂದ ನಿಮಗೆ ಜ್ಞಾನೋದಯವಾಗುತ್ತದೆ. ಅಂದರೆ ಎಲ್ಲವೂ ಸ್ಪಷ್ಟವಾಗುತ್ತದೆ.

ಯೋಗ್ಯ ಆಧ್ಯಾತ್ಮಿಕ ಗುರುವನ್ನು ಶೋಧಿಸಿ. ಅವರಿಗೆ ಶರಣಾಗಿ ಮತ್ತು ಅವರಿಗೆ ಸೇವೆ ಸಲ್ಲಿಸಿದ ಮೇಲೆ ವ್ಯಕ್ತಿಯು ತನ್ನ ಇಂದ್ರಿಯಗಳನ್ನು ಸರಿಯಾದ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅನಂತರ ಆ ಗುರುವಿನ ಮಾರ್ಗದರ್ಶನದಲ್ಲಿ ದೇವೋತ್ತಮನನ್ನು ಕುರಿತ ವರ್ಣನೆಯನ್ನು ಕೇಳುತ್ತ ಭಕ್ತಿ ಸೇವೆ ಕೈಗೊಂಡರೆ ಅದು ಆ ವ್ಯಕ್ತಿಯ ನಾಲಗೆಯ ಮೇಲೆ ಪ್ರತಿಧ್ವನಿಸುತ್ತದೆ. ಅವನು ಅದನ್ನು ಹೇಳತೊಡಗಿದರೆ ಆ ಸಂದೇಶವು ಸಂಕಷ್ಟದಲ್ಲಿರುವ ಆತ್ಮಗಳಿಗೆ ಸಾಂತ್ವನ ನೀಡಬಲ್ಲದು. ಆಗ ಎಲ್ಲವೂ ಪರಿಪೂರ್ಣ.