ಇಂದ್ರಿಯಗಳ ಸೇವಕ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಡಾ. ಚತುರ್‌ಭಾಯ್‌ ಪಟೇಲ್‌ ಅವರ ನಡುವೆ ಮುಂಬಯಿಯಲ್ಲಿ ಮಾರ್ಚ್‌ 23, 1974ರಂದು ನಡೆದ ಸಂವಾದ.

ಡಾ. ಪಟೇಲ್‌ : ಅದೊಂದು ಬೆಳಗ್ಗೆ ಆ ಯುವತಿಯು “ನಾನು ವೈದ್ಯೆ ಮತ್ತು ಜನರ ಸೇವೆ ಮಾಡುತ್ತಿರುವೆ” ಎಂದಾಗ ನೀವು “ನೀನು ಒಂದು ಸಾಧನ” ಎಂದು ಹೇಳಿದಿರಿ.

ಶ್ರೀಲ ಪ್ರಭುಪಾದ : ಹೌದು. ಅವರು ಸೇವೆ ಸಲ್ಲಿಸುತ್ತಿಲ್ಲ. “ಎಲ್ಲರೂ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಸಹಜವಾಗಿ ಹೇಳುತ್ತಾರೆ – ಹಣಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರೂ ಸೇವೆ ನೀಡುತ್ತಿದ್ದಾರೆ. ಆದರೆ ಅವರಿಗೆ ಹಣ ನೀಡದಿದ್ದರೆ ಸೇವೆ ಇಲ್ಲ. ಅದು ಸೇವೆಯಲ್ಲ. ಲೌಕಿಕ ಲೋಕದಲ್ಲಿ ಪ್ರತಿಯೊಬ್ಬರೂ ಯಾರಿಗಾದರೂ ಸೇವೆ ಸಲ್ಲಿಸುತ್ತಿರುತ್ತಾರೆ. ಏಕೆಂದರೆ, ಸ್ವಾಭಾವಿಕವಾಗಿ ಅವನೊಬ್ಬ ಸೇವಕ.

ಡಾ. ಪಟೇಲ್‌ : ಅವನು ಎಲ್ಲರಿಗೂ ಸೇವೆ ಸಲ್ಲಿಸುತ್ತಿದ್ದಾನೆ.

ಶ್ರೀಲ ಪ್ರಭುಪಾದ : ಇಲ್ಲ, ಇಲ್ಲ. ಇಂಗ್ಲಿಷ್‌ ಗಾದೆ ಹೇಳುವಂತೆ, “ಎಲ್ಲರ ಸೇವಕ ಯಾರ ಸೇವಕನೂ ಅಲ್ಲ.” ಏನಾದರಾಗಲಿ, ಸೇವೆಯು ಅಗತ್ಯ. ಸೇವೆ ಸಲ್ಲಿಸದೆ ನೀವು ಬದುಕಿರಲಾಗದು. ಅದು ಸಾಧ್ಯವಿಲ್ಲ. ನಾವು ಪ್ರತಿಯೊಬ್ಬರೂ ಯಾರ ಸೇವೆಯನ್ನಾದರೂ ಮಾಡುತ್ತಿರುತ್ತೇವೆ. ಆದರೆ ಈ ಲೌಕಿಕ ಸೇವೆಯ ಫಲವು ಒಪ್ಪತಕ್ಕದಲ್ಲ. ನಾನು ಈ ಉದಾಹರಣೆಯನ್ನು ಈ ಮೊದಲೇ ನೀಡಿದ್ದೇನೆ. ಮಹಾತ್ಮ ಗಾಂಧೀಜಿ ಎಷ್ಟೊಂದು ಸೇವೆ ಸಲ್ಲಿಸಿದರು. ಆದರೆ ಫಲಿತಾಂಶವೆಂದರೆ ಅವರು ಹತ್ಯೆಗೀಡಾದರು. ಅವರನ್ನು ಕೊಲ್ಲಲಾಯಿತು. ಅವರನ್ನು ಕೊಂದ ವ್ಯಕ್ತಿಯು, “ಓ, ಈ ವೃದ್ಧನು ನಮಗೆ ಎಷ್ಟೊಂದು ಸೇವೆ ಸಲ್ಲಿಸಿದ್ದಾರೆ. ಅವರೊಂದಿಗೆ ಸಹಮತವಿಲ್ಲದಿದ್ದರೂ ಅವರನ್ನು ನಾನು ಹೇಗೆ ಕೊಲ್ಲಲಿ?” ಎಂದು ಯೋಚಿಸಲಿಲ್ಲ. ಆದರೆ ಜನರು ಎಷ್ಟು ಕೃತಘ್ನರು, ಅಲ್ಲವೇ? ನೀವು ಏನೇ ಸೇವೆ ನೀಡಿದರೂ ಅವರಿಗೆ ತೃಪ್ತಿ ಇಲ್ಲ.

ಡಾ. ಪಟೇಲ್‌ : ಗಾಂಧೀಜಿಯವರ ಸೇವೆ – ಅವರು ತಮ್ಮ ನಿಯೋಜಿತ ಕರ್ತವ್ಯವನ್ನು ಮಾಡುತ್ತಿದ್ದರು.

ಶ್ರೀಲ ಪ್ರಭುಪಾದ : ವಾಸ್ತವವಾಗಿ ಅಲ್ಲ. ಆದರೆ, ಮೊದಲು ನಾವು ಸೇವೆಯ ಅರ್ಥವನ್ನು ನಿರೂಪಿಸೋಣ. ಸೇವೆ ಎಂದರೆ ಏನು? ಸೇವೆ ಎಂದರೆ ಸೇವಕ ಮತ್ತು ಮಾಲೀಕ ಇರಬೇಕು. ಮತ್ತು ಸೇವೆಯು ಸೇವಕ ಮತ್ತು ಮಾಲೀಕನ ನಡುವಿನ ವ್ಯವಹಾರ. ಆದರೆ ಎಷ್ಟೊಂದು ಅನಧಿಕೃತ ಮಾಲೀಕರನ್ನು ಸೃಷ್ಟಿಸಿದ್ದೇವೆ. ಪತ್ನಿ, ಕುಟುಂಬ, ದೇಶ, ಶಾಸಕಾಂಗ, ಈ ಮಾಲೀಕ ಆ ಮಾಲೀಕ – ನೋಡಿದಿರಾ? ಮತ್ತು ನಾವು ಸೇವೆ ನೀಡುತ್ತಿದ್ದೇವೆ. “ಓ, ಇದು ನನ್ನ ಕರ್ತವ್ಯ. ನಾನು ಸೇವೆ ನೀಡುತ್ತಿದ್ದೇನೆ.” ಆದರೆ ಈ ಮಾಲೀಕರನ್ನು “ನಿಮಗೆ ತೃಪ್ತಿಯಾಯಿತೆ” ಎಂದು ಕೇಳಿ. “ನೀನೇನು ಮಾಡಿರುವೆ?” ಎಂದೇ ಅವರು ಹೇಳುತ್ತಾರೆ.

ಡಾ. ಪಟೇಲ್‌ : ಮಾಲೀಕನಿಗೆ ತೃಪ್ತಿಯಾಗುವುದಿಲ್ಲ.

ಶ್ರೀಲ ಪ್ರಭುಪಾದ : ಇಲ್ಲ. ಈ ಸ್ವಯಂ ರೂಪಿತ ಮಾಲೀಕರಿಗೆ ಎಂದಿಗೂ ತೃಪ್ತಿಯಾಗುವುದಿಲ್ಲ. ವಾಸ್ತವವಾಗಿ, ಅವರಿಗೆ ಸೇವೆ ಸಲ್ಲಿಸುತ್ತ ನಾವು ನಮ್ಮದೇ ಇಂದ್ರಿಯಗಳಿಗೆ ಸೇವೆ ಸಲ್ಲಿಸಿ ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ನಾನು ನನ್ನ ಹೆಂಡತಿಗೆ ಸೇವೆ ಸಲ್ಲಿಸುವೆ, ಏಕೆಂದರೆ ಅವಳು ನನ್ನ ಇಂದ್ರಿಯಗಳನ್ನು ತೃಪ್ತಿಪಡಿಸುವಳೆಂದು ನಾನು ಭಾವಿಸುವೆ. ಆದುದರಿಂದ ನಾನು ನನ್ನ ಪತ್ನಿಗೆ ಸೇವೆ ನೀಡುತ್ತಿಲ್ಲ – ನಾನು ನನ್ನ ಇಂದ್ರಿಯಗಳಿಗೆ ಸೇವೆ ನೀಡುತ್ತಿರುವೆ. ಅಂತಿಮವಾಗಿ, ನಾವು ನಮ್ಮ ಇಂದ್ರಿಯಗಳ ಸೇವಕರು. ನಾವು ಯಾರ ಸೇವಕರೂ ಅಲ್ಲ. ಇದು ನಮ್ಮ ಲೌಕಿಕ ಸ್ಥಿತಿ. ಹೌದು, ಅಂತಿಮವಾಗಿ, ನಾವು ನಮ್ಮ ಇಂದ್ರಿಯಗಳ ಸೇವಕರು.

ಸಹಜ ಸ್ಥಿತಿಯಲ್ಲಿ ನಾನೊಬ್ಬ ಸೇವಕ. ಆದರೆ ಲೌಕಿಕ ಗುಣಗಳಿಂದ ನಿಯಂತ್ರಿಸಲ್ಪಟ್ಟಿರುವುದರಿಂದ ಪ್ರಸ್ತುತದಲ್ಲಿ ನಾನು ನನ್ನ ಇಂದ್ರಿಯಗಳಿಗೆ ಸೇವೆ ಸಲ್ಲಿಸುತ್ತಿರುವೆ. ಆದರೆ ನನ್ನ ಇಂದ್ರಿಯಗಳು ಸ್ವತಂತ್ರವಲ್ಲ. ಅವು ಸಂಪೂರ್ಣವಾಗಿ ಅವಲಂಬಿತ. ಉದಾಹರಣೆಗೆ, ನಾನು ಈಗ ನನ್ನ ಕೈಗಳನ್ನು ಚಲಿಸುತ್ತಿರುವೆ. ಆದರೆ ನನ್ನ ಕೈಗಳ ನಿಜವಾದ ಮಾಲೀಕನಾದ ಕೃಷ್ಣನು ಅದನ್ನು ಅಶಕ್ತಗೊಳಿಸಿದರೆ, ಅಲ್ಲಾಡಿಸುವುದು ಇಲ್ಲ. ಅಥವಾ ನನ್ನ ಕೈಗಳ ಚಲನೆ ಸಾಮರ್ಥ್ಯವನ್ನು ಪುನರುಜ್ಜೀವಗೊಳಿಸುವುದೂ ಸಾಧ್ಯವಿಲ್ಲ. ಆದುದರಿಂದ ನಾನು ನನ್ನ ಕೈಗಳ ಮತ್ತು ಕಾಲುಗಳ ಮಾಲೀಕ ಎಂದು ಹೇಳಿಕೊಂಡರೂ ವಾಸ್ತವವಾಗಿ ನಾನು ಮಾಲೀಕನಲ್ಲ. ಮಾಲೀಕನೇ ಬೇರೇ.

ಕೃಷ್ಣನ ಇತರ ಹೆಸರುಗಳಲ್ಲಿ ಹೃಷೀಕೇಶವೂ ಒಂದು. ಅಂದರೆ “ಎಲ್ಲ ಇಂದ್ರಿಯಗಳ ಸೃಷ್ಟಿಕರ್ತ ಮತ್ತು ಮಾಲೀಕ.” ಆದುದರಿಂದ ನಾವು ನಮ್ಮ ಸೇವೆಯನ್ನು ಶ್ರೀ ಕೃಷ್ಣನಿಗೆ ವರ್ಗಾಯಿಸಬೇಕು. ಹೃಷೀಕೇನ ಹೃಷೀಕೇಶ ಸೇವನಂ ಭಕ್ತೀರ್‌ ಉಚ್ಯತೇ : ನಮ್ಮ ಇಂದ್ರಿಯಗಳಿಗೆ ಸೇವೆ ಸಲ್ಲಿಸಲು ನಾವು ಅನೇಕ ರೀತಿಯಲ್ಲಿ ಪ್ರಯತ್ನಿಸಿದ್ದೇವೆ. ಆದರೆ ನಾವು ನಮ್ಮ ಇಂದ್ರಿಯಗಳನ್ನು ಇಂದ್ರಿಯಗಳ ಮಾಲೀಕನ ಸೇವೆಗೆ ತೊಡಗಿಸಿದಾಗ ನಮಗೆ ಭಕ್ತಿಯ ಆಧ್ಯಾತ್ಮಿಕ ತೃಪ್ತಿ ಲಭಿಸುತ್ತದೆ. ಕೃಷ್ಣನಿಗೆ ಸಲ್ಲಿಸುವ ಭಕ್ತಿಸೇವೆಯೂ ಸೇವೆಯೇ. ಆದರೆ ಇದು ಜಡ ಇಂದ್ರಿಯಗಳಿಗೆ ಸೇವೆಯಲ್ಲ, ಇದು ಇಂದ್ರಿಯಗಳ ಜೀವಂತ ಮಾಲೀಕನಿಗೆ ಸಲ್ಲಿಸುವ ಸೇವೆ. ಇದು ನಿಜವಾದ ತೃಪ್ತಿ. ಆದುದರಿಂದ ಸಹಜವಾಗಿ ನಾನೊಬ್ಬ ಸೇವಕ. ನಾನು ಮಾಲೀಕನಾಗುವುದು ಸಾಧ್ಯವಿಲ್ಲ. ನನ್ನ ಸ್ಥಾನ ಏನೆಂದರೆ ನಾನು ಸೇವೆ ಸಲ್ಲಿಸಬೇಕು. ಇಂದ್ರಿಯಗಳ ಮಾಲೀಕನಿಗೆ ನಾನು ಸೇವೆ ಸಲ್ಲಿಸದಿದ್ದರೆ ನಾನು ಇಂದ್ರಿಯಗಳಿಗೆ ಸೇವೆ ನೀಡಬೇಕು ಮತ್ತು ಅತೃಪ್ತನಾಗಿರಬೇಕು.

ಡಾ. ಪಟೇಲ್‌ : ಪ್ರತಿಯೊಬ್ಬನಿಗೂ ಪತ್ನಿ, ಕುಟುಂಬ, ದೇಶ ಮತ್ತು ಸರಕಾರಗಳನ್ನು ಕುರಿತಂತೆ ನಿರ್ದಿಷ್ಟ ಕರ್ತವ್ಯಗಳಿವೆ ಎಂಬ ವಾಸ್ತವಾಂಶವು ಉಳಿಯುತ್ತದೆ.

ಶ್ರೀಲ ಪ್ರಭುಪಾದ : ಹೌದು.

ಡಾ. ಪಟೇಲ್‌ : ನಮಗೆ ಭಿನ್ನವಾದ ದೇಹ ಮತ್ತು ಇಂದ್ರಿಯಗಳೂ ಇರುವಾಗ ನಮಗೆ ಭಿನ್ನವಾದ ಕರ್ತವ್ಯಗಳೂ ಇರುತ್ತವೆ. ಒಬ್ಬನು ಪೂಜಾರಿಯಾಗಿ ಮತ್ತೊಬ್ಬನು ಆಡಳಿತಗಾರ ಅಥವಾ ಸೈನ್ಯಾಧಿಕಾರಿ, ಇನ್ನೂ ಒಬ್ಬ ರೈತ ಅಥವಾ ವರ್ತಕ ಹಾಗೂ ಮತ್ತೊಬ್ಬ ಕಾರ್ಮಿಕ ಅಥವಾ ಕುಶಲಕರ್ಮಿಯಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ವ್ಯಕ್ತಿಯು ತನ್ನ ಕರ್ತವ್ಯವನ್ನು ನಿರ್ವಹಿಸಿದರೆ, ಇದು ಭಗವಂತನಿಗೆ ಸಲ್ಲಿಸುವ ಭಕ್ತಿಸೇವೆಯಂತೆಯೇ.

ಶ್ರೀಲ ಪ್ರಭುಪಾದ : ಇಲ್ಲ ಇಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದಿರುವುದು ಸಾಲದು. ನೀವು ಅದಕ್ಕಿಂತ ಹೆಚ್ಚಿನದನ್ನು ಮಾಡಬೇಕು. ನೀವು ಕೃಷ್ಣನಿಗೆ ಫಲವನ್ನು ನೀಡಬೇಕು. ನಿಮ್ಮ ನಿಯೋಜಿತ ಕರ್ತವ್ಯಗಳ ಫಲವನ್ನು ಕೃಷ್ಣನಿಗೆ ಸಲ್ಲಿಸಿ. ನೀವು ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು, ನೀವೇ ಎಲ್ಲವನ್ನೂ ತೆಗೆದುಕೊಂಡು ಬಿಡಬೇಡಿ ಅಥವಾ ನಿಮ್ಮ ಕುಟುಂಬಕ್ಕಾಗಿ ಖರ್ಚು ಮಾಡಿಬಿಡಬೇಡಿ. ಈ ಫಲವನ್ನು ಕೃಷ್ಣನಿಗೆ ಕೊಡಿ. ಅದೇ ನಿಜವಾದ ಸೇವೆ.

ನೀವು ವೈದ್ಯರಾಗಿ ಸೇವೆಸಲ್ಲಿಸುತ್ತಿರುವಂತೆ. ನಿಮ್ಮ ಗಳಿಕೆಯನ್ನು ಕೃಷ್ಣನಿಗೆ ಕೊಡಿ. ಆಗ ನೀವು ಪರಿಪೂರ್ಣರಾಗುವಿರಿ. ನಮ್ಮ ಕೆಲಸದಿಂದ ಕೃಷ್ಣನಿಗೆ ತೃಪ್ತಿಯಾಯಿತೆ ಎಂಬುದನ್ನಷ್ಟೇ ನಾವು ನೋಡಬೇಕಾಗಿದೆ. ಕೃಷ್ಣ ಹೇಳುತ್ತಾನೆ, ಯತ್‌ ಕರೋಷಿ : “ನೀವೇನು ಮಾಡುತ್ತಿರುವಿರಿ ಎಂಬುದರ ಬಗೆಗೆ ಚಿಂತಿಸಬೇಡಿ.” ತತ್‌ ಕುರುಷ್ವ ಮದ್‌ ಅರ್ಪಣಂ : “ಅದನ್ನು ನನಗೆ ಕೊಡಿ.” (ಶ್ರೀಲ ಪ್ರಭುಪಾದರು ನಗುತ್ತಾರೆ.) ಮತ್ತು ಜನರು ಹೇಳುತ್ತಾರೆ, “ಇಲ್ಲ ,ಇಲ್ಲ, ಇಲ್ಲ ಸ್ವಾಮಿ. ನಾನು ನಿನ್ನ ಸೇವೆ ಸಲ್ಲಿಸುತ್ತಿರುವೆ. ಆದರೆ ಹಣವು ನನ್ನ ಜೇಬಿನಲ್ಲಿರುತ್ತದೆ.”

ಡಾ. ಪಟೇಲ್‌ : ಎಲ್ಲವೂ ಕೃಷ್ಣನದೇ. ಏನನ್ನಾದರೂ ನೀವು ಹೇಗೆ ಕೊಡುವಿರಿ? ಒಂದು ಎಲೆಯನ್ನು?

ಶ್ರೀಲ ಪ್ರಭುಪಾದ : ಹೌದು, ಹೌದು. ಈ ಯುವಕ ಯುವತಿಯರು ನೀಡುತ್ತಿರುವಂತೆ. ಅವರು ತಮ್ಮ ಇಡೀ ಜೀವನವನ್ನೇ ನೀಡುತ್ತಿದ್ದಾರೆ. ಅವರು ನನ್ನ ಬಳಿ ಹಣ ಕೇಳುವುದಿಲ್ಲ : “ನನ್ನ ಪ್ರೀತಿಯ ಸ್ವಾಮಿ, ನನಗೆ ಸ್ವಲ್ಪ ಹಣ ಕೊಡಿ. ನಾನು ಸಿನಿಮಾಕ್ಕೆ ಹೋಗುವೆ.” ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಎಲ್ಲವನ್ನೂ ಕೊಟ್ಟಿದ್ದಾರೆ. ಇದು ಸೇವೆ. ಅವರು ಬಡವರಲ್ಲ. ಅವರು ಗಳಿಸುತ್ತಿದ್ದಾರೆ, ಆದರೆ ಎಲ್ಲವೂ ಕೃಷ್ಣನಿಗಾಗಿ.

ನೀವು ನಿಮ್ಮ ವರಮಾನವನ್ನು ಭಾಗಶಃ ಹಂಚಿ – “ಸ್ವಲ್ಪ ಕೃಷ್ಣನಿಗೆ, ಸ್ವಲ್ಪ ನನ್ನ ಇಂದ್ರಿಯ ತೃಪ್ತಿಗೆ.” ಆಗ ಕೃಷ್ಣ ಹೇಳುತ್ತಾನೆ, ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮಿ ಅಹಂ : “ಯಾರು ನನಗೆ ಹೇಗೆ ಶರಣಾಗತರಾಗುತ್ತಾರೋ ಹಾಗೆ ನಾನು ಅವರಿಗೆ ಅನುಗ್ರಹಿಸುತ್ತೇನೆ.” ನೀವು ನೂರಕ್ಕೆ ನೂರರಷ್ಟು ನಿಮ್ಮ ಶಕ್ತಿಯನ್ನು ಕೃಷ್ಣನಿಗಾಗಿ ಖರ್ಚುಮಾಡಿದರೆ, ಕೃಷ್ಣನು ನಿಮಗೆ ನೂರಕ್ಕೆ ನೂರು ಇರುತ್ತಾನೆ. ನೀವು ಕೃಷ್ಣನಿಗಾಗಿ ಶೇಕಡ 1ರಷ್ಟು ಖರ್ಚು ಮಾಡಿದರೆ, ಅವನು ನಿಮಗೆ ಶೇಕಡ ಒಂದರಷ್ಟು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ.

ಈ ಯುವಕ ಯುವತಿಯರು ತಮ್ಮದೆಲ್ಲವನ್ನೂ ಕೃಷ್ಣನಿಗೆ ಸಮರ್ಪಿಸಿರುವುದರಿಂದ ನಮ್ಮ ಆಂದೋಲನವು ವಿಶ್ವಾದ್ಯಂತ ಎಷ್ಟೊಂದು ಪ್ರಗತಿ ಸಾಧಿಸಿದೆ. ಆದುದರಿಂದಲೇ ಅದು ಅಷ್ಟು ಕ್ಷಿಪ್ರವಾಗಿ ಮುನ್ನಡೆದಿದೆ. ಅವರು ಏನನ್ನೂ ವೈಯಕ್ತಿಕವಾಗಿ ಯೋಚಿಸುವುದಿಲ್ಲ. ಕೃಷ್ಣನಿಗೆ ಹೇಗೆ ಸೇವೆ ಸಲ್ಲಿದುವುದೆಂಬುದನ್ನಷ್ಟೇ ಅವರು ಯೋಚಿಸುತ್ತಾರೆ. ಸಂಸಿದ್ಧಿರ್‌ ಹರಿ ತೋಷಣಂ : ದೇವೋತ್ತಮ ಪರಮ ಪುರುಷನನ್ನು ಆನಂದಪಡಿಸುವುದೇ ಅತ್ಯುನ್ನತ ಪರಿಪೂರ್ಣತೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi