ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನವೆಂಬರ್ 30, 1966 ರಲ್ಲಿ, ನ್ಯೂಯಾರ್ಕ್‌ನಲ್ಲಿ ಮಾಡಿದ ಉಪನ್ಯಾಸ
ದಾರಿದ್ರ್ಯ ನಾಶ ಭವ ಕ್ಷಯ ಪ್ರೇಮೇರ `ಫಲ’ ನಯ
ಪ್ರೇಮ ಸುಖ ಭೋಗ ಮುಖ್ಯ ಪ್ರಯೋಜನ ಹಯ
“ಭಗವಂತನನ್ನು ಪ್ರೀತಿಸುವುದರ ಗುರಿ ಐಹಿಕವಾಗಿ ಶ್ರೀಮಂತನಾಗುವುದಲ್ಲ. ಅಥವಾ ಐಹಿಕ ಬಂಧನದಿಂದ ಬಿಡುಗಡೆ ಹೊಂದುವುದಲ್ಲ. ಪ್ರಭುವಿನ ಭಕ್ತಿ ಸೇವೆಯಲ್ಲಿ ನೆಲೆಸುವುದು ಮತ್ತು ದಿವ್ಯಾನಂದವನ್ನು ಅನುಭವಿಸುವುದು ನಿಜವಾದ ಗುರಿ.”
– ಚೈತನ್ಯ ಚರಿತಾಮೃತ, ಮಧ್ಯಲೀಲಾ 20.142

ನಾವು ಕೃಷ್ಣನಿಗೆ ಭಕ್ತಿ ಸೇವೆ ಸಲ್ಲಿಸುವುದರಿಂದ ನಮ್ಮ ಸಂಕಷ್ಟದ ಲೌಕಿಕ ಬದುಕು ಸುಧಾರಿಸುತ್ತದೆ ಮತ್ತು ಐಹಿಕ ಬಂಧನದಿಂದ ಮುಕ್ತಿ ಸಿಗುತ್ತದೆ ಎಂದು ನಿರೀಕ್ಷಿಸಬಾರದು. ಆ ರೀತಿ ಯೋಚಿಸುವುದು ಒಂದು ರೀತಿಯಲ್ಲಿ ಇಂದ್ರಿಯ ತೃಪ್ತಿಯಾಗುತ್ತದೆ. ಯೋಗಿಗಳು ಮತ್ತು ಜ್ಞಾನಿಗಳು ಅಥವಾ ನಿರಾಕಾರವಾದಿ ಚಿಂತಕರು ಲೌಕಿಕ ಬಂಧನದಿಂದ ಮುಕ್ತರಾಗಲು ಪ್ರಯತ್ನಿಸುತ್ತಾರೆ. ಆದರೆ ಭಕ್ತಿ ಸೇವೆಯಲ್ಲಿ ಅಂತಹ ಆಸೆಗಳಿಲ್ಲ. ಏಕೆಂದರೆ ಭಕ್ತಿ ಸೇವೆಯು ಪರಿಶುದ್ಧ ಪ್ರೇಮ. ಪರಿಶುದ್ಧ ಭಕ್ತಿ ಸೇವೆಯಲ್ಲಿ `ಈ ರೀತಿ ನನಗೆ ಲಾಭವಾಗುತ್ತದೆ’ ಎಂಬ ನಿರೀಕ್ಷೆ ಇರುವುದಿಲ್ಲ. “ನನಗೆ ಪ್ರತಿಫಲವಾಗಿ ಏನಾದರೂ ಸಿಗದಿದ್ದರೆ ನಾನು ಕೃಷ್ಣ ಪ್ರಜ್ಞೆಯಲ್ಲಿ ಭಕ್ತಿ ಸೇವೆಯನ್ನು ಆಚರಿಸುವುದಿಲ್ಲ” ಎಂದು ಕೆಲವರು ಯೋಚಿಸುವಂತೆ ಭಕ್ತಿ ಸೇವೆಯು ಲಾಭದಾಯಕ ವ್ಯವಹಾರವಲ್ಲ.
ಶ್ರೀ ಚೈತನ್ಯರು ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುತ್ತಾರೆ,
ನ ಧನಂ ನ ಜನಂ ನ ಸುಂದರೀಂ ಕವಿತಾಂ ವಾ ಜಗದೀಶ ಕಾಮಯೇ
ಮಮ ಜನ್ಮನಿ ಜನ್ಮನೀಶ್ವರೇ ಭವತಾದ್ ಭಕ್ತಿರ್ ಅಹೈತುಕೀ ತ್ವಯಿ
“ಓ, ಜಗದೀಶ, ಸಕಲ ಜಗತ್ತಿನ ಪರಮ ಮಾಲೀಕನೆ, ನನಗೆ ಯಾವುದೇ ಸಂಪತ್ತು ಬೇಡ, ನನಗೆ ಯಾವುದೇ ಅನುಯಾಯಿಗಳು ಬೇಡ, ನನಗೆ ಸುಂದರ ಪತ್ನಿ ಬೇಡ ಎಂದು ಪ್ರಾರ್ಥಿಸುವೆ.”
“ಹಾಗಾದರೆ ನಿಮಗೇನು ಬೇಕು?”
“ನನ್ನ ಪ್ರೀತಿಯ ಪ್ರಭುವೇ, ನನ್ನನ್ನು ಬದುಕಿನ ಯಾವುದೇ ಪರಿಸ್ಥಿತಿಗಾದರೂ ಹಾಕು, ಆದರೆ, ನಾನು ನಿನ್ನನ್ನು ಎಂದೂ ಮರೆಯಬಾರದಂತಹ ಅನುಗ್ರಹ ನೀಡು. ಅಷ್ಟೇ ನನಗೆ ಬೇಕಾಗಿರುವುದು. ಮರೆಯುವಿಕೆಯಿಂದ ನಾನು ತುಂಬಾ ಸಂಕಷ್ಟ ಅನುಭವಿಸುತ್ತಿರುವೆ. ಆದುದರಿಂದ ನಿನ್ನನ್ನು ನೆನಪು ಮಾಡಿಕೊಳ್ಳುವುದು ಸಾಧ್ಯವಾದರೆ ಯಾವುದೇ ಪರಿಸ್ಥಿತಿ ಇದ್ದರೂ ಸರಿಯೇ.”
ಜನ್ಮನಿ ಜನ್ಮನಿ ಎಂದರೆ “ಜನ್ಮದನಂತರ ಜನ್ಮ.” ಶ್ರೀ ಚೈತನ್ಯರಿಗೆ ವಿಮೋಚನೆ ಅಥವಾ ಮುಕ್ತಿ ಕೂಡ ಬೇಡವಾಗಿತ್ತು. ಶ್ರೀ ಕೃಷ್ಣ ಹೇಳುತ್ತಾನೆ, ಮಾಮ್ ಉಪೇತ್ಯ ತು ಕೌಂತೇಯ ಪುನರ್ ಜನ್ಮ ನ ವಿದ್ಯತೇ, “ಕುಂತಿಯ ಪುತ್ರನಾದ ಅರ್ಜುನನೇ, ನನ್ನ ನಿವಾಸವನ್ನು (ಭಗವದ್ಧಾಮ) ಸೇರಿದವನಿಗೆ ಪುನರ್ಜನ್ಮವಿಲ್ಲ.” ಆದರೆ ಶ್ರೀ ಚೈತನ್ಯರಿಗೆ ಭಗವದ್ಧಾಮ ಸೇರುವ ಅಪೇಕ್ಷೆಯೂ ಇಲ್ಲ.

ಪ್ರಭು ಕೃಷ್ಣನ ಬೋಧನೆಯನ್ನು ದೃಢಪಡಿಸುತ್ತ ಶ್ರೀ ಚೈತನ್ಯರು ನಮಗೆ ಸರಿಯಾದ ಅರ್ಥ ಗ್ರಹಿಕೆಯನ್ನು ಮಾಡಿಸುತ್ತಾರೆ. ಭಗವದ್ಗೀತೆಯ ಆರನೆಯ ಅಧ್ಯಾಯದಲ್ಲಿ ಯೋಗದ ಬಗೆಗೆ ವಿವರಿಸುತ್ತ ಭಗವಂತ ಹೇಳುತ್ತಾನೆ, ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ, “ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದವರಿಗೆ ಬೇರೆ ಯಾವ ಆಸೆಯೂ ಇಲ್ಲ.”
ಐಹಿಕ ಲೋಕದಲ್ಲಿ ನಾವು ಏನನ್ನಾದರೂ ಗಳಿಸಬಹುದು. ಆದರೆ ಅದರಿಂದ ಇನ್ನಷ್ಟು ಗಳಿಸಬೇಕೆಂಬ ಆಸೆ ಕಡಮೆಯಾಗದು. ಲಕ್ಷಾಂತರ ಡಾಲರ್ ಗಳಿಸಬಹುದು. ಆದರೆ ಅದು ನನಗೆ ತೃಪ್ತಿ ನೀಡುವುದಿಲ್ಲ. ನನಗೆ ಇನ್ನೂ 10 ಲಕ್ಷ ಡಾಲರ್ ಬೇಕು. ಅಷ್ಟು ಹಣ ದೊರೆತ ಮೇಲೆ ಕೂಡ ತೃಪ್ತಿ ಸಿಗದು. 100 ಲಕ್ಷ ಡಾಲರ್ ಬೇಕೆನಿಸುತ್ತದೆ, ಆದರೆ ಭಕ್ತಿ ಸೇವೆಯನ್ನು ಹೊಂದಿದವರು ಅದಕ್ಕಿಂತ ಮೌಲ್ಯವಾದುದು ಜಗತ್ತಿನಲ್ಲಿ ಇಲ್ಲವೆಂದು ಯೋಚಿಸುತ್ತಾರೆ.
ಕೃಷ್ಣ ಪ್ರಜ್ಞೆಯು ಕೃಷ್ಣನಿಂದ ಭಿನ್ನವಲ್ಲ. ಆದುದರಿಂದ ಕೃಷ್ಣ ಪ್ರಜ್ಞೆಯ ವ್ಯಕ್ತಿಯು ಕೃಷ್ಣನನ್ನೇ ಹೊಂದಿರುತ್ತಾನೆ. ಕೃಷ್ಣನಿಗಿಂತ ಶ್ರೇಷ್ಠವಾದುದೇನಿದೆ? ಹೀಗಾಗಿ ಕೃಷ್ಣ ಪ್ರಜ್ಞೆಯ ವ್ಯಕ್ತಿಯು ಪೂರ್ಣವಾಗಿ ತೃಪ್ತನು. ಕೃಷ್ಣನು ಮತ್ತೂ ಹೇಳುತ್ತಾನೆ, ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ : “ಕೃಷ್ಣ ಪ್ರಜ್ಞೆಯಲ್ಲಿ ನೆಲೆಸಿರುವವನು ಅತ್ಯಂತ ತೀವ್ರವಾದ ಕಷ್ಟಗಳಲ್ಲಿಯೂ ವಿಚಲಿತನಾಗುವುದಿಲ್ಲ.”
ಪ್ರಹ್ಲಾದನ ಮಾದರಿ
ಕೃಷ್ಣ ಪ್ರಜ್ಞೆಯ ವ್ಯಕ್ತಿಯು ಎಲ್ಲ ಸನ್ನಿವೇಶಗಳಲ್ಲಿಯೂ ದೃಢ ಮನಸ್ಕನಾಗಿರುತ್ತಾನೆ. ಪ್ರಹ್ಲಾದ ಮಹಾರಾಜನು ಐದು ವರ್ಷದ ಬಾಲಕನಾಗಿದ್ದಾಗಲೇ ಶ್ರೇಷ್ಠ ಭಕ್ತನಾಗಿದ್ದ.
ಪ್ರಹ್ಲಾದನ ನಾಸ್ತಿಕ ತಂದೆ ಹೇಳಿದ, “ಓ, ಮೂರ್ಖ ಮಗನೇ, ನೀನು ದೇವರ ಹೆಸರನ್ನು ಜಪಿಸುತ್ತಿರುವೆಯಾ? ದೇವರು ಯಾರು? ನಾನೇ ದೇವರು. ನೀನು ನನ್ನ ಹೆಸರನ್ನೇಕೆ ಜಪಿಸಬಾರದು? ನೀನು ಜಪಿಸದಿದ್ದರೆ ನಾನು ನಿನ್ನನ್ನು ಬೆಂಕಿಗೆ ಹಾಕುವೆ.”
ಆದರೆ ಪ್ರಹ್ಲಾದ ದೃಢ ಮನಸ್ಕ. ಅವನೆಂದ, “ತಂದೆಯೇ, ನಾನು ಜಪಿಸುವುದನ್ನು ನಿಲ್ಲಿಸಲಾರೆ.”
“ಅವಿವೇಕಿ! ನಿನಗೆ ಸಾಧ್ಯವಿಲ್ಲವೆ? ನನ್ನ ಬಳಿ ಹೀಗೆ ಮಾತನಾಡಲು ನಿನಗೆಷ್ಟು ಧೈರ್ಯ! ದೇವತೆಗಳೂ ನನ್ನನ್ನು ಕಂಡರೆ ಹೆದರುತ್ತಾರೆ.”
“ಹಾ, ಹೌದು, ತಂದೆಯೇ. ನಿನಗೆ ಮಾತನಾಡಲು ಅವಕಾಶ ನೀಡಿದವನ ಕೃಪೆಯಿಂದಲೇ ನಾನೂ ಮಾತನಾಡುತ್ತಿರುವೆ.”
“ಓ, ನಾನು ಯಾರ ಕೃಪೆಯನ್ನೂ ಲಕ್ಷಿಸುವುದಿಲ್ಲ …”

ಪ್ರಹ್ಲಾದನ ತಂದೆ ಕೋಪದಿಂದ ಕುದಿಯುತ್ತಿದ್ದರೆ ಪ್ರಹ್ಲಾದ ಮಾತ್ರ ನಿಶ್ಚಲನಾಗಿದ್ದ. ಈ ಸ್ಥಿರತೆಯು ಭಗವಂತನ ಪರಿಶುದ್ಧ ಭಕ್ತನ ಗುಣಗಳಲ್ಲಿ ಒಂದು. ಅತ್ಯಂತ ದುಃಖ ಪರಿಸ್ಥಿತಿಯಲ್ಲಿಯೂ ಅಪಾಯವಿದ್ದಾಗಲೂ ಭಕ್ತನು ದೃಢವಾಗಿರುತ್ತಾನೆ. ಅದೇ ಯೋಗದ ಪರಿಪೂರ್ಣತೆ. ಮತ್ತು ಅಂತಹ ಸ್ಥಿರತೆಯನ್ನು ಕೃಷ್ಣ ಪ್ರಜ್ಞೆಯಿಂದ ಸುಲಭವಾಗಿ
ಸಾಧಿಸಬಹುದು. ಆದುದರಿಂದ ನಮ್ಮ ಲೌಕಿಕ ಸ್ಥಿತಿಯ ಸುಧಾರಣೆ ಅಥವಾ ಮುಕ್ತಿ ಪಡೆಯಲು ನಾವು ಆಶಿಸಬಾರದು. ಆ ರೀತಿ ಆಶಿಸಿದರೆ ನಮಗೆ ಐಹಿಕ ಆಸೆಗಳಿವೆ ಎಂದು ಅರ್ಥ. ನಾವು ಆಸೆ ರಹಿತರಾಗಬೇಕೆಂದು ಕೆಲವರು ಹೇಳುತ್ತಾರೆ. ಆದರೆ, ನಾನು ಜೀವಿಯಾಗಿರುವುದರಿಂದ ಸಂಪೂರ್ಣವಾಗಿ ಆಸೆ ಮುಕ್ತನಾಗಿ ಇರಲಾಗದು; ಕೃಷ್ಣನನ್ನು ಮರೆಯಬಾರದೆಂಬುದೇ ನನ್ನ ಆಸೆ. ಅದೊಂದೇ ಆಸೆ, ನಿಜವಾದ ಅಪೇಕ್ಷೆ. ಉಳಿದೆಲ್ಲ ಆಸೆಗಳೂ ಮೂರ್ಖತನದ್ದು. ನಾವು ಆಸೆ ಇಲ್ಲದೆ ಇರುವುದು ಸಾಧ್ಯವಿಲ್ಲ. ಆದರೆ ಆಸೆ ಯೋಗ್ಯವಾಗಿರಬೇಕು.
ನಾನು ದೇವೋತ್ತಮನ ಭಾಗ. ಆದುದರಿಂದ ಅವನ ಜೊತೆ ಕೆಲಸ ಮಾಡಬೇಕೆಂದು ನಾನು ಅಪೇಕ್ಷಿಸಿದರೆ ಅದು ಸ್ವಾಭಾವಿಕ ಆಸೆ. ಅದೇ ನಿರಪೇಕ್ಷೆ ಅಥವಾ ಆಸೆ ಇಲ್ಲದಿರುವುದು. ಲೌಕಿಕ ಪರಿಸ್ಥಿತಿಯಲ್ಲಿ, ತಿನ್ನುವ ಆಸೆ ಇರುವುದು ಸ್ವಾಭಾವಿಕ. ದೇಹ ಇರುವವರೆಗೂ ನೀವು ಆಹಾರ ಸೇವಿಸಲೇಬೇಕು. ನಿಮ್ಮ ಊಟದ ಆಸೆಯನ್ನು ಯಾರೂ ಟೀಕಿಸುವುದಿಲ್ಲ.
ಆದುದರಿಂದ ಆಸೆ ಇಲ್ಲದಿರುವುದು ಎಂದರೆ ಸ್ವಾಭಾವಿಕವಾದುದನ್ನು ಆಶಿಸು ಎಂದು ಅರ್ಥ. ಕೃಷ್ಣನನ್ನು ನೆನಪು ಮಾಡಿಕೊಳ್ಳಬೇಕೆಂಬ ಆಸೆಯು ಸ್ವಾಭಾವಿಕವಾದುದು. ನಾನು ಅವನ ಒಂದು ಭಾಗವೇ ಆಗಿರುವಾಗ ಅವನನ್ನು ಮರೆಯುವುದು ಹೇಗೆ ಸಾಧ್ಯ? ಆದರೆ ಅದು ಹೇಗೋ ನಾನು ಅವನನ್ನು ಮರೆತಿರುವೆ. ಮತ್ತು ನನ್ನ ಈ ಮರೆಯುವಿಕೆಯು ನನ್ನ ಅನೇಕ ಆಸೆಗಳಿಗೆ ಕಾರಣವಾಗಿದೆ. ಮತ್ತು ನಾನು ಕೃಷ್ಣನನ್ನು ಅಪೇಕ್ಷಿಸಿದ ಕೂಡಲೇ ಬೇರಾವ ಆಸೆಯೂ ಇರುವುದಿಲ್ಲ. ಅದೇ ಆಸೆ ಇಲ್ಲದಂತಹ ಸ್ಥಿತಿ.
ಅಖಂಡದ ಒಂದು ಭಾಗವಾಗಿ ನಾವು ಅದರೊಂದಿಗೆ ವಿನಿಮಯ ಮಾಡಿಕೊಂಡು ಅತ್ಯಂತ ಹೆಚ್ಚಿನ ಆನಂದವನ್ನು ಪಡೆಯುತ್ತೇವೆ. ನಾವು ಅಪೇಕ್ಷಿಸಬೇಕಾದ ಪರಸ್ಪರ ವಿನಿಮಯವಿದು. ಕೃಷ್ಣ ಪ್ರಜ್ಞೆಯಲ್ಲಿ ನಾವು ಲೌಕಿಕ ಲಾಭದ ಆಸೆಯನ್ನು ಹೊಂದಬೇಕೆಂದು ಯೋಚಿಸಬಾರದು.
ಶ್ರೇಷ್ಠ ಸಂಪತ್ತು
ಮುಂದಿನ ಶ್ಲೋಕದಲ್ಲಿ ಶ್ರೀ ಚೈತನ್ಯರು ಹೇಳುತ್ತಾರೆ :
ವೇದ ಶಾಸ್ತ್ರೇ ಕಹೇ ಸಂಬಂಧ, ಅಭಿಧೇಯ, ಪ್ರಯೋಜನ
ಕೃಷ್ಣ, ಕೃಷ್ಣ ಭಕ್ತಿ, ಪ್ರೇಮ ತೀನ ಮಹಾ ಧನ
“ವೈದಿಕ ಸಾಹಿತ್ಯದಲ್ಲಿ, ಕೃಷ್ಣನು ಆಕರ್ಷಣೆಯ ಕೇಂದ್ರ ಬಿಂದು. ಮತ್ತು ಅವನ ಸೇವೆಯೇ ನಮ್ಮ ಚಟುವಟಿಕೆ. ಕೃಷ್ಣ ಪ್ರೇಮದ ವೇದಿಕೆಯನ್ನು ಪಡೆಯುವುದೇ ಬದುಕಿನ ಅಂತಿಮ ಗುರಿ. ಆದುದರಿಂದ, ಕೃಷ್ಣ, ಕೃಷ್ಣ ಸೇವೆ ಮತ್ತು ಕೃಷ್ಣ ಪ್ರೇಮ ಇವು ಬದುಕಿನ ಮೂರು ಶ್ರೇಷ್ಠ ಸಂಪತ್ತುಗಳು.”

ನಾವು ಏನಾದರೂ ಲೌಕಿಕವಾದುದನ್ನು ಹೊಂದಲು ಅಪೇಕ್ಷಿಸುತ್ತೇವೆ. ಆದರೆ, ಈ ಶ್ಲೋಕವು ಹೇಳುವಂತೆ ನಾವು ಕೃಷ್ಣನನ್ನು ಹೊಂದಲು, ಕೃಷ್ಣನೊಂದಿಗೆ ಅನ್ಯೋನ್ಯತೆಯಿಂದ ಇರಲು ಮತ್ತು ಅಂತಿಮವಾಗಿ ಅವನ ಪ್ರೇವವನ್ನು ಅಪೇಕ್ಷಿಸಬೇಕು. ಐಹಿಕ ಜಗತ್ತಿನಲ್ಲಿ, ಎರಡು ಪ್ರೇಮಿಗಳ ನಡುವಿನ ಪ್ರೀತಿಯ ವಿನಿಮಯದ ಪ್ರತಿಬಿಂಬವನ್ನಷ್ಟೇ ನಾವು ನೋಡುವುದು. ಅವರಿಗೆ ಪರಸ್ಪರರನ್ನು ಬಿಟ್ಟರೆ ಬೇರೇನೂ ಬೇಡ. ಆದರೆ ಅಂತಹ ಬಾಂಧವ್ಯವು ನಿಜವಾದ ಪ್ರೇಮದ ವಿಕೃತ ರೂಪ. ಐಹಿಕ ಲೋಕದಲ್ಲಿ ಪ್ರೇಮದ ಸಾಧ್ಯತೆ ಇಲ್ಲ. ಅಲ್ಲಿ ಪ್ರೇಮ ಎನ್ನುವುದು ಕಾಮಾಸಕ್ತಿ ಅಥವಾ ಇಂದ್ರಿಯ ತೃಷ್ಣೆ. ಅದು ಪ್ರೇಮದ ಪ್ರತಿಬಿಂಬವಾಗಿರುವುದರಿಂದ ನಾವು ಪ್ರೇಮ ಎಂದು ಕರೆಯುತ್ತೇವೆ. ಕೃಷ್ಣ ಪ್ರೇಮ ನೈಜ, ಆದರೆ ಲೌಕಿಕ ಜಗತ್ತಿನಲ್ಲಿ ಪ್ರೇಮ ಮಿಥ್ಯೆ. ಕಾಮವು ಛಾಯೆ ಇದ್ದಂತೆ, ಪ್ರೇಮವು ವಾಸ್ತವಿಕ. ಛಾಯೆ ಮತ್ತು ವಾಸ್ತವಿಕತೆ ಮಧ್ಯೆ ಭಾರೀ ಅಂತರವಿದೆ.
ಭಕ್ತನು ಮುಕ್ತಿಗೆ ಕಾತರನಾಗಿರುವುದಿಲ್ಲ. ಏಕೆಂದರೆ, ಅವನು ಕೃಷ್ಣನೊಂದಿಗಿನ ತನ್ನ ನಿಕಟ ಸಂಪರ್ಕದಲ್ಲಿ ಮುಕ್ತಿ ಹೊಂದಿರುತ್ತಾನೆ. ನೀವು ಮುಕ್ತರಾಗದೆ ಕೃಷ್ಣನೊಂದಿಗೆ ಅನ್ಯೋನ್ಯತೆ ಬೆಳೆಸಿಕೊಳ್ಳುವುದು ಸಾಧ್ಯವಿಲ್ಲ. ಆದುದರಿಂದ ಮುಕ್ತಿ ಮತ್ತು ಕೃಷ್ಣನೊಂದಿಗೆ ಆಪ್ತತೆ ಒಂದೇ. ಶ್ರೀ ಕೃಷ್ಣ ಹೇಳುತ್ತಾನೆ,
ಯೇಷಾಂ ತ್ವ ಅಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಂ ।
ತೇ ದ್ವಂದ್ವ ಮೋಹ ನಿರ್ಮುಕ್ತಾ ಭಜಂತೇ ಮಾಂ ದೃಢ ವ್ರತಾಃ ॥
ಭಾಷಾಂತರವೇನು?
ಭಕ್ತ : (ಓದುವನು) “ಯಾರು ಪುಣ್ಯಕಾರ್ಯಗಳನ್ನು ಮಾಡಿದ್ದಾರೆಯೋ ಮತ್ತು ಅವರ ಪಾಪ ಕರ್ಮಗಳು ಸಂಪೂರ್ಣವಾಗಿ ನಿರ್ಮೂಲವಾಗಿವೆಯೋ ಅವರು ಭ್ರಾಂತಿಯ ದ್ವಂದ್ವಗಳಿಂದ ಮುಕ್ತರಾಗುತ್ತಾರೆ. ಅವರು ದೃಢ ಮನಸ್ಸಿನಿಂದ ನನ್ನ ಸೇವೆಯಲ್ಲಿ ನಿರತರಾಗುತ್ತಾರೆ.”
ಶ್ರೀಲ ಪ್ರಭುಪಾದ : ಹೌದು. ಆದುದರಿಂದ ಕೃಷ್ಣನನ್ನು ದೃಢ ಮನಸ್ಸಿನಿಂದ ಪೂಜಿಸುವುದು ಎಂದರೆ ಮಾಯೆಯಿಂದ ಮುಕ್ತರಾಗಿರುವುದು ಎಂದು ಅರ್ಥ. ಅದನ್ನೇ ಮುಕ್ತಿ ಎನ್ನುವುದು. `ನಾನು ಕೃಷ್ಣನನ್ನು ಏಕೆ ಪೂಜಿಸಬೇಕು’ ಎಂದು ಇನ್ನೂ ಗೊಂದಲದಲ್ಲಿಯೇ ಇದ್ದರೆ ಅವರು ಇನ್ನೂ ಭ್ರಮೆಯಲ್ಲಿಯೇ ಇದ್ದಾರೆಂದು ಅರ್ಥ. ಮತ್ತು ಅವರು ಪಾಪದ ಬದುಕಿನಿಂದ ಬಿಡುಗಡೆಯಾಗಿಲ್ಲ. ಪಾಪಗಳಿಂದ ಮುಕ್ತರಾದವರಿಗೆ ದ್ವಂದ್ವ ಇರುವುದಿಲ್ಲ. ದ್ವಂದ್ವ ಎಂದರೆ, `ನಾನು ಕೃಷ್ಣ ಪ್ರಜ್ಞೆ ಪ್ರಕ್ರಿಯೆಯಲ್ಲಿ ನೆಲೆಸಲೋ ಬೇಡವೋ’ ಎಂದು ಯೋಚಿಸುವುದೇ ಆಗಿದೆ. ಪಾಪದಿಂದ ಬಿಡುಗಡೆ ಹೊಂದಿದವರಿಗೆ `ಹೌದು, ಕೃಷ್ಣನಿಗೆ ಭಕ್ತಿ ಸೇವೆಯೇ ಅಂತಿಮ ಗುರಿ’ ಎಂಬುವುದರಲ್ಲಿ ದೃಢ ವಿಶ್ವಾಸವಿರುತ್ತದೆ.
ಕೃಷ್ಣ ಭಕ್ತಿಯಲ್ಲಿ ತೊಡಗಿರುವವರು ಈಗಾಗಲೇ ಮುಕ್ತಿ ಹೊಂದಿರುತ್ತಾರೆ. ಉದಾಹರಣೆಗೆ, ವ್ಯಕ್ತಿಯು ಹೈ ಕೋರ್ಟ್ ಪೀಠದ ಮೇಲೆ ಕುಳಿತಿದ್ದಾನೆ ಎಂದರೆ, ಅವನು ಎಲ್ಲ ವಿದ್ಯಾರ್ಹತೆಗಳನ್ನು ಹೊಂದಿದ್ದಾನೆ ಮತ್ತು ಒಳ್ಳೆಯ ವಕೀಲ ಎಂದು ಅರ್ಥಮಾಡಿಕೊಳ್ಳಬೇಕು. ಅವನು ಎಂ.ಎ. ಅಥವಾ ಕಾನೂನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದಾನೆಯೇ ಎಂದು ಕೇಳುವ ಅಗತ್ಯವಿಲ್ಲ. ಅದೇ ರೀತಿ, ಕೃಷ್ಣ ಪ್ರಜ್ಞೆಯಲ್ಲಿ ಒಬ್ಬನಿದ್ದರೆ, ಅವನು ಮುಕ್ತ ಎಂಬುವುದು ಸ್ವಯಂ ವೇದ್ಯ.
ಶ್ರೀಮದ್ ಭಾಗವತದಲ್ಲಿ ಮುಕ್ತಿಯ ಬಗೆಗೆ ವಿವರಿಸಲಾಗಿದೆ, ಮುಕ್ತಿರ್ ಹಿತ್ವಾನ್ಯಥಾ ರೂಪಂ ಸ್ವರೂಪೇಣ ವ್ಯವಸ್ಥಿತಿಃ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಬದುಕಿನ ಬಗೆಗೆ ಭಿನ್ನವಾದ ಭಾವನೆ ಅಥವಾ ಕಲ್ಪನೆ ಇದೆ. ನನಗೊಂದು, ನಿಮಗೊಂದು, ಅವನಿಗೊಂದು ಅಭಿಪ್ರಾಯಗಳಿರುತ್ತವೆ. ಮುಕ್ತಿ ಎಂದರೆ ಈ ಭಿನ್ನ ಅಭಿಪ್ರಾಯಗಳಿಂದ ಮುಕ್ತರಾಗುವುದು ಮತ್ತು ನಮ್ಮ ಸ್ವರೂಪ ಸ್ಥಿತಿಯಲ್ಲಿ ನೆಲೆಸುವುದು.

ನಮ್ಮ ಸ್ವರೂಪ ಸ್ಥಿತಿ ಏನು? ನಾವು ದೇವೋತ್ತಮ ಶ್ರೀ ಕೃಷ್ಣನ ಅವಿಭಾಜ್ಯ ಭಾಗವಾಗಿದ್ದೇವೆ. ಹಾಗಾದರೆ ನಮ್ಮ ಕರ್ತವ್ಯವೇನು? ಭಾಗದ ಕರ್ತವ್ಯವೆಂದರೆ ಅಖಂಡದ ಸೇವೆ ಮಾಡುವುದು. ನಿಮ್ಮ ಕೈ ನಿಮ್ಮ ದೇಹದ ಒಂದು ಭಾಗ ಮತ್ತು ದೇಹಕ್ಕೆ ಸೇವೆ ಸಲ್ಲಿಸುವುದು ಅದರ ಕರ್ತವ್ಯ. ಅದೇ ರೀತಿ ನೀವು ಭಗವಂತನ ಭಾಗವಾಗಿರುವುದರಿಂದ ನಿಮ್ಮ ಕರ್ತವ್ಯ ಅವನ ಸೇವೆ ಮಾಡುವುದು. ನಿಮಗೆ ಇನ್ನಾವ ಕರ್ತವ್ಯವೂ ಇಲ್ಲ. ಈ ಅಂಶವನ್ನು ಯಾರು ದೃಢ ನಂಬಿಕೆಯಿಂದ ಅರ್ಥಮಾಡಿ ಕೊಳ್ಳುವರೋ ಅವರು ಮುಕ್ತರು.
ಕೆಲವರು ಕೇಳಬಹುದು, “ಅಂತಹ ವ್ಯಕ್ತಿ ಮುಕ್ತನೆಂದು ಹೇಗೆ ಹೇಳುವಿರಿ? ಅವನು ಕಚೇರಿಗೆ ಹೋಗುತ್ತಾನೆ. ಅವನು ಸಾಮಾನ್ಯರಂತೆ ಉಡುಪು ಧರಿಸುತ್ತಾನೆ. ಅವನು ಮುಕ್ತನೆಂದರೆ ಏನು ಅರ್ಥ?”
ಮುಕ್ತಿ ಎಂದರೆ ವ್ಯಕ್ತಿಯು ಭಿನ್ನವಾಗಿ ವಸ್ತ್ರ ಧರಿಸಬೇಕು ಅಥವಾ ಅವನಿಗೆ ನಾಲ್ಕು ಕೈ ಮತ್ತು ಎಂಟು ಕಾಲುಗಳಿರಬೇಕೆಂದೇ? ಹಾಗಲ್ಲ. ಪ್ರಜ್ಞೆಯ ಪರಿವರ್ತನೆ ಅಗತ್ಯವಾಗಿರುವುದು. ಕೃಷ್ಣ ಪ್ರಜ್ಞೆ ಎಂದರೆ ಪ್ರಜ್ಞೆಯ ಪರಿವರ್ತನೆ. “ನಾನು ವಸ್ತು, ಲೌಕಿಕ ಜಗತ್ತಿನಲ್ಲಿ ನನಗೆ ಅನೇಕ ಕರ್ತವ್ಯಗಳಿವೆ” ಎಂದು ನಾವು ಯೋಚಿಸಬಹುದು. ಕೃಷ್ಣ ಪ್ರಜ್ಞೆಯಲ್ಲಿ ನೀವು ಆ ಚಿಂತನೆಯನ್ನೇ ಬದಲಿಸುತ್ತೀರಿ, “ನಾನು ಕೃಷ್ಣನಿಗೆ ಸೇರಿರುವುದು. ನಾನು ಕೃಷ್ಣನ ಭಾಗ. ಆದುದರಿಂದ ನನ್ನ ಎಲ್ಲ ಶಕ್ತಿಯನ್ನು ಕೃಷ್ಣನಿಗಾಗಿಯೇ ಬಳಸಬೇಕು.”
ಅಂತಹ ಆಲೋಚನೆಯೇ ಕೃಷ್ಣ ಪ್ರಜ್ಞೆ. ನಾನು ಈಗ ನನ್ನ ಎಲ್ಲ ಶಕ್ತಿಯನ್ನು ಲೌಕಿಕ ಬದುಕಿಗೆ ವಿನಿಯೋಗಿಸುತ್ತೇನೆ. ನಾನು ನನ್ನ ಶಕ್ತಿಯನ್ನು, ಅಂದರೆ ಅಲೌಕಿಕ ಶಕ್ತಿಯನ್ನು ಕೃಷ್ಣನ ಸೇವೆಯಲ್ಲಿ ತೊಡಗಿಸಿದಾಗ ನಾನು ಮುಕ್ತನಾದಂತೆ.
ಬಿಲ್ವಮಂಗಲರ ಕಥೆ
ಕೃಷ್ಣನ ಶ್ರೇಷ್ಠ ಭಕ್ತರಲ್ಲಿ ಒಬ್ಬರಾದ ಬಿಲ್ವಮಂಗಲ ಠಾಕುರರು ಹೇಳಿದ್ದಾರೆ, ಮುಕ್ತಿಃ ಸ್ವಯಂ ಮುಕುಲಿತಾಂಜಲಿಃ ಸೇವತೇ ಅಸ್ಮಾನ್: “ಮುಕ್ತಿ ಕೈ ಜೋಡಿಸಿ ನಿಂತು ಕೇಳುತ್ತಾಳೆ, `ನನ್ನ ಸ್ವಾಮಿ, ನಾನು ನಿಮಗೇನು ಮಾಡಲಿ?’ ಆದರೆ ಭಕ್ತನು ಅದಕ್ಕೆ ಲಕ್ಷ್ಯ ಕೊಡುವುದಿಲ್ಲ. “ನೀನು ನನಗೇನು ಮಾಡಬಲ್ಲೆ? ನನಗೆ ನಿನ್ನ ಸಹಾಯ ಬೇಕಾಗಿಲ್ಲ.”
ಬಿಲ್ವಮಂಗಲ ಠಾಕುರರು ವೃಂದಾವನದಲ್ಲಿ 700 ವರ್ಷಗಳ ಕಾಲವಿದ್ದರು. ಅವರು ಕೃಷ್ಣನ ಶ್ರೇಷ್ಠ ಭಕ್ತರಾದರು. ಅವರ ಕಥೆಯು ಬೋಧಪ್ರದ.
ತಮ್ಮ ಜೀವನದ ಆರಂಭ ಕಾಲದಲ್ಲಿ ಬಿಲ್ವಮಂಗಲ ಅವರು ನಿರಾಕಾರವಾದಿಯಾಗಿದ್ದರು. ಅವರು ದಕ್ಷಿಣ ಭಾರತದ ಒಬ್ಬ ಶ್ರೀಮಂತ ಮತ್ತು ಇಂದ್ರಿಯ ಸುಖ ಲೋಲುಪ ಬ್ರಾಹ್ಮಣರಾಗಿದ್ದರು. ಅವರಿಗೆ ವೇಶ್ಯೆಯ ಸಂಗವಿತ್ತು. ಅವರು ಅವಳಿಗೆ ಎಷ್ಟು ಅರ್ಪಿಸಿಕೊಂಡು ಬಿಟ್ಟಿದ್ದರೆಂದರೆ, ತಮ್ಮ ತಂದೆಯ ಅಂತಿಮ ಸಂಸ್ಕಾರದ ಸಂದರ್ಭದಲ್ಲಿಯೂ ಕೂಡ ಪುರೋಹಿತರ ಬಳಿ, `ಬೇಗ ಮಾಡಿ. ನಾನು ಹೋಗಬೇಕಾಗಿದೆ’ ಎಂದು ಅವಸರಪಡಿಸಿದ್ದರು. ಅನಂತರ ಅವರು ಒಳ್ಳೆಯ ಊಟವನ್ನು ಚೀಲದಲ್ಲಿ ಇಟ್ಟುಕೊಂಡು ಆ ವೇಶ್ಯೆಯ ಮನೆಗೆ ಹೊರಟರು. ಆಗ ಮಳೆಯಾಗುತ್ತಿತ್ತು. ಅವರು ಅದನ್ನೆಲ್ಲ ಲಕ್ಷಿಸಲಿಲ್ಲ. ನದಿಯನ್ನು ದಾಟಬೇಕಾಗಿತ್ತು. ದೋಣಿ ಇರಲಿಲ್ಲ. ಅಲೆಗಳ ಅಬ್ಬರವಿದ್ದರೂ ಅವರು ಈಜುತ್ತಾ ಆಚೆ ದಡ ಸೇರಿದರು. `ಜೋರು ಮಳೆಯಾಗುತ್ತಿದೆ, ಅವರು ಬರಲಿಕ್ಕಿಲ್ಲ’ ಎಂದುಕೊಂಡು ಆ ವೇಶ್ಯೆಯು ಬಾಗಿಲು ಹಾಕಿಕೊಂಡು ಮಲಗಿದಳು.

ಬಿಲ್ವಮಂಗಲರು ಅಲ್ಲಿಗೆ ಬಂದಾಗ ಅವಳ ಮನೆ ಬಾಗಿಲು ಹಾಕಿತ್ತು ಮತ್ತು ಇನ್ನೂ ಮಳೆ ಬೀಳುತ್ತಿತ್ತು. ಅವಳ ಮನೆ ಅಂಗಳದೊಳಗೆ ಹೋಗಲು ಅವರು ಗೋಡೆ ಏರುವಾಗ ಹಾವನ್ನು ಹಿಡಿದುಕೊಂಡರು. ನೋಡಿ, ಆ ವೇಶ್ಯೆಯ ಬಗೆಗೆ ಅವರಿಗೆಷ್ಟು ಒಲವು!
ಬಿಲ್ವಮಂಗಲ ಒಳಗೆ ಹೋಗಿ ಆ ವೇಶ್ಯೆಯ ಬಳಿಗೆ ಬಂದಾಗ ಅವಳಿಗೆ ಅಚ್ಚರಿ. “ಅದು ಹೇಗೆ ಬಂದೆ? ಅದೆಷ್ಟು ಧೈರ್ಯ!” ಎಂದು ಅವಳು ಉದ್ಗರಿಸಿದಳು.
ಬಿಲ್ವಮಂಗಲ ತನ್ನ ಸಾಹಸವನ್ನು ವರ್ಣಿಸಿ, “ನಾನು ಹೀಗೆ ಮಾಡಿದೆ, ನಾನು ಹೀಗೆ ಮಾಡಿದೆ” ಎಂದು ಹೇಳಿದರು.
ಚಿಂತಾಮಣಿ ಎಂಬ ಆ ವೇಶ್ಯೆ ನುಡಿದಳು, “ನನ್ನ ಪ್ರೀತಿಯ ಬಿಲ್ವಮಂಗಲ, ನಿನಗೆ ನನ್ನ ಮೇಲೆ ಎಷ್ಟು ಗಾಢ ಪ್ರೇಮವಿದೆ! ಅದೇ ಪ್ರೇಮ ಕೃಷ್ಣನ ಬಗೆಗಿದ್ದರೆ ನಿನ್ನ ಬದುಕು ಎಷ್ಟು ಭವ್ಯವಾಗಿರುತ್ತಿತ್ತು!”
“ಹಾ, ಹೌದು. ನೀನು ಹೇಳಿದ್ದು ಸರಿ.” ಅವಳ ಮಾತು ಅವರ ಮನಸ್ಸನ್ನು ನೆಟ್ಟಿತು. ಅವರು ಆ ಕೂಡಲೇ ಅಲ್ಲಿಂದ ತೆರಳಿದರು.
ಅವರು ವೃಂದಾವನದತ್ತ ಸಾಗಿದರು. ದಾರಿ ಮಧ್ಯೆ ಅವರು ಮಹಿಳೆಯೊಬ್ಬರಿಂದ ಆಕರ್ಷಿತರಾದರು. ಅವಳನ್ನೇ ಹಿಂಬಾಲಿಸಿದರು. ಅವಳು ಗೌರವಾನ್ವಿತ ಕುಟುಂಬಕ್ಕೆ ಸೇರಿದವರು. ಮನೆಗೆ ಹೋದ ಕೂಡಲೇ ತನ್ನ ಗಂಡನಿಗೆ ಹೇಳಿದರು, “ಈ ವ್ಯಕ್ತಿ ನನ್ನನ್ನು ಹಿಂಬಾಲಿಸಿ ಬರುತ್ತಿದ್ದಾರೆ. ಅವರಿಗೇನು ಬೇಕೆಂದು ಕೇಳಿ.”
ಪತಿಯು ಬಿಲ್ವಮಂಗಲರನ್ನು ಕೇಳಿದ, “ಸ್ವಾಮಿ, ನೀವು ಸಜ್ಜನರಂತೆ, ಕುಲೀನ ಕುಟುಂಬಕ್ಕೆ ಸೇರಿದವರಂತೆ ಕಾಣುತ್ತಿರುವಿರಿ. ನಿಮಗೇನು ಬೇಕು? ನೀವ್ಯಾಕೆ ನನ್ನ ಪತ್ನಿಯನ್ನು ಹಿಂಬಾಲಿಸಿದಿರಿ?”
ಬಿಲ್ವಮಂಗಲ ನುಡಿದರು, “ಅವರನ್ನು ಆಲಿಂಗಿಸಿಕೊಳ್ಳಲು ಹಿಂಬಾಲಿಸಿದೆ.”
“ಓ, ನೀವು ಅವಳನ್ನು ಆಲಿಂಗಿಸಿಕೊಳ್ಳಬೇಕೆ? ಬನ್ನಿ, ಆಲಂಗಿಸಿಕೊಳ್ಳಿ. ನಿಮಗೆ ಸ್ವಾಗತ,” ಎಂದು ಹೇಳಿದ ಪತಿಯು, ಅನಂತರ ತನ್ನ ಪತ್ನಿಗೆ ಹೇಳಿದ, “ಇವರು ಅತಿಥಿ. ಅವರು ನಿನ್ನನ್ನು ಆಲಿಂಗಿಸಿಕೊಂಡು ಚುಂಬಿಸಬೇಕಂತೆ. ಅವರನ್ನು ಆನಂದಪಡಿಸಲು ಚೆನ್ನಾಗಿ ಅಲಂಕರಿಸಿಕೊಂಡು ಬಾ.”
ಆ ಮಹಿಳೆಯು ತನ್ನ ಗಂಡನ ಆದೇಶ ಪಾಲಿಸಿದಳು.
ಬಿಲ್ವಮಂಗಲ ಕೋಣೆ ಒಳಗೆ ಹೋಗಿ ಆ ಮಹಿಳೆ ಮುಂದೆ ನಿಂತು ಹೇಳಿದರು, “ತಾಯಿ, ದಯೆಯಿಟ್ಟು ನಿಮ್ಮ ಕೂದಲಿನ ಪಿನ್ನು ಕೊಡುವಿರಾ?”
“ಹಾ, ಯಾಕೆ?”
“ನನಗೆ ಸ್ವಲ್ಪ ಕೆಲಸವಿದೆ.”
ಅನಂತರ ಅವರು ಕೂದಲ ಪಿನ್ ತೆಗೆದುಕೊಂಡು ತಮ್ಮ ಕಣ್ಣಿಗೆ ಚುಚ್ಚಿಕೊಂಡು, “ಈ ಕಣ್ಣುಗಳೇ ನನ್ನ ಶತ್ರು” ಎಂದು ಹೇಳಿಕೊಂಡರು. ಅವರು ಅಂಧರಾದರು. ಆಗ ಅವರು, “ನನಗೆ ಇನ್ನು ಯಾವ ಅಡ್ಡಿಯೂ ಇಲ್ಲ” ಎಂದು ಸಮಾಧಾನಗೊಂರು.
ಅನಂತರ ಅವರು ವೃಂದಾವನಕ್ಕೆ ಹೋದರು ಮತ್ತು ತಪಸ್ಸು ಕೈಗೊಂಡರು. ಬಾಲ ಕೃಷ್ಣ ಅವರ ಬಳಿಗೆ ಬಂದ.
“ಓ, ನನ್ನ ಪ್ರೀತಿಯ ಸ್ವಾಮಿ, ಏಕೆ ಹಸಿದಿರುವಿರಿ? ಸ್ವಲ್ಪ ಹಾಲು ತೆಗೆದುಕೊಳ್ಳಬಾರದೇಕೆ?”
“ನನ್ನ ಪ್ರೀತಿಯ ಮಗು, ನೀನ್ಯಾರು?”
“ನಾನು ಈ ಗ್ರಾಮದ ಗೋಪಾಲ ಬಾಲಕ. ನಿಮಗಿಷ್ಟವಾದರೆ, ಪ್ರತಿ ದಿನ ನಿಮಗೆ ಹಾಲು ತಂದುಕೊಡುವೆ.”
“ಹಾಗೆ ಆಗಲಿ.”
ಈ ರೀತಿ ಕೃಷ್ಣನು ಹಾಲು ಪೂರೈಸುತ್ತಿದ್ದ. ಅವರಿಬ್ಬರ ಮಧ್ಯೆ ಸ್ನೇಹ ಬೆಳೆಯಿತು.
ಬಿಲ್ವಮಂಗಲರು ಬರೆದಿದ್ದಾರೆ, “ಭಕ್ತಿ ಎಂತಹುದೆಂದರೆ, ಮುಕ್ತಿ ನನಗೇನೇನೂ ಅಲ್ಲ.”
ಅಂದರೆ, “ಕೃಷ್ಣ ಬಂದು ಹಾಲು ನೀಡತೊಡಗಿದರೆ, ಮುಕ್ತಿಯಿಂದೇನು ಪ್ರಯೋಜನ?” ಎಂದು ಅವರು ಯೋಚಿಸಿದರು.
ನೋಡಿ, ಅದು ಬಿಲ್ವಮಂಗಲ, ಶ್ರೇಷ್ಠ ಆತ್ಮ. ಅವರ ನೆನಪು ಅಮೂಲ್ಯ. ಅವರು ಕೃಷ್ಣ ಕರ್ಣಾಮೃತ ಎಂಬ ಒಳ್ಳೆಯ ಅಧಿಕೃತ ಪುಸ್ತಕ ಬರೆದಿದ್ದಾರೆ. ಶ್ರೀ ಚೈತನ್ಯರಿಗೆ ದಕ್ಷಿಣ ಭಾರತ ಯಾತ್ರೆ ಸಂದರ್ಭದಲ್ಲಿ ಈ ಪುಸ್ತಕ ದೊರೆಯಿತು. ತಮ್ಮೆಲ್ಲ ಭಕ್ತರು ಇದನ್ನು ಓದಬೇಕೆಂದು ಅವರು ಸೂಚಿಸಿದ್ದರು.
ವಂದನೆಗಳು.






Leave a Reply