ಶಂಕರಾಚಾರ್ಯರು ಮಾಯಾವಾದ ಏಕೆ ಬೋಧಿಸಿದರು?

– ಗಾಯತ್ರಿ ದೇವಿ

ಕಲಿಯುಗದಲ್ಲಿ, ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಪ್ರಭು ಶಿವನು ಶಂಕರಾಚಾರ್ಯರಾಗಿ ಅವತರಿಸಿದನು ಮತ್ತು ಈ ಲೋಕದಾದ್ಯಂತ ಮಾಯಾವಾದಿ ಸಿದ್ಧಾಂತವನ್ನು ಬೋಧಿಸಿದನು. ಇದು ದೇವೋತ್ತಮನ ಆಕಾರ, ಗುಣ ಮತ್ತು ಲಕ್ಷಣಗಳೆಲ್ಲ ಮಾಯೆ (ಭ್ರಮೆ) ಎಂದು ಹೇಳುತ್ತದೆ; ಅಂತಿಮವಾಗಿ, ಪರಮ ಸತ್ಯನು ನಿರಾಕಾರ ಮತ್ತು ಅವ್ಯಕ್ತ, ಎಲ್ಲ ರೀತಿಯಲ್ಲಿಯೂ ಜೀವಿ ಮತ್ತು ಭಗವಂತ ಒಂದೇ ಎನ್ನುತ್ತದೆ. ಇದು ಮಾಯಾವಾದ ಸಿದ್ಧಾಂತ.

ಇದರಿಂದ ಪ್ರಶ್ನೆಯೊಂದು ಮೂಡಿ ಬರುತ್ತದೆ, “ಕೃಷ್ಣನ ಆಕಾರವು ಮಾಯೆ ಎಂದು ಹೇಳುವ ಈ ಸಿದ್ಧಾಂತವನ್ನು ಶಂಕರರು ಏಕೆ ಬೋಧಿಸಿದರು? ಪ್ರಭು ಶಿವನು ಶ್ರೀ ಕೃಷ್ಣನ ಭಕ್ತನಾಗಿದ್ದರೆ, ಯಾವುದೇ ಭಕ್ತನು ತನ್ನ ಪೂಜಾರ್ಹ ಪ್ರಭುವನ್ನು ದೂಷಿಸುವನೇ?” ಅದಕ್ಕೆ ಇಲ್ಲಿ ಉತ್ತರವಿದೆ.

ಕಲಿಯುಗದಲ್ಲಿ ತಾನು ಬ್ರಾಹ್ಮಣನ ರೂಪವನ್ನು ಪಡೆದು, ವೇದವನ್ನು ಹುಸಿ ಧರ್ಮಗ್ರಂಥಗಳ ಮೂಲಕ, ನಾಸ್ತಿಕವಾದದ ರೀತಿಯಲ್ಲಿ , ಬೌದ್ಧ ಧರ್ಮದ ತತ್ತ್ವದಂತೆ, ವಿವರಿಸುವುದಾಗಿ ಶಿವನು ಪಾರ್ವತಿಗೆ ಹೇಳುತ್ತಾನೆ. (ಪದ್ಮ ಪುರಾಣ, ಉತ್ತರ ಖಂಡ 25.7). ಅಂದರೆ ಪರಮ ಪ್ರಭುವಿನ ಆದೇಶದಂತೆ ಶಿವನು (ಶಂಕರರು) ಹಾಗೆ ಮಾಡಿದನೆಂದು ಅರ್ಥವಾಗುತ್ತದೆ. ಆದರೆ ಭಗವಂತನ ಅಂತಹ ಸೂಚನೆಗೆ ಕಾರಣವಿರಬೇಕಲ್ಲವೆ? ವೇದಗಳಿಗೆ ಬಂದಿದ್ದ ಕುತ್ತನ್ನು ಸರಿಪಡಿಸುವುದೇ ಶಂಕರಾಚಾರ್ಯರ ಆಗಮನಕ್ಕೆ ಕಾರಣ. ಏನಾಗಿತ್ತು ವೇದಗಳಿಗೆ?

ಜನರು ವೇದವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಅವ್ಯಾಹತವಾಗಿ ಪ್ರಾಣಿವಧೆಯಾಗುತ್ತಿತ್ತು. ವೇದದಲ್ಲಿಯೇ ಪಶು ಬಲಿ ಇದೆಯಲ್ಲಾ ಎಂದು ಜನರು ಸಮರ್ಥಿಸಿಕೊಳ್ಳುತ್ತಿದ್ದರು. ಇಂತಹ ಪರಿಸ್ಥಿತಿ ಇದ್ದಾಗ ಪ್ರಭು ಬುದ್ಧನ ಅವತಾರವಾಯಿತು. ಅಪಾರವಾಗಿದ್ದ ಪ್ರಾಣಿವಧೆಯನ್ನು ಕಂಡು ಅವನು ದುಃಖಿತನಾದನು. ಅದರ ಪರಿಣಾಮವಾಗಿ ಬುದ್ಧನು ಅಹಿಂಸಾ ಧರ್ಮವನ್ನು ಬೋಧಿಸಿದನು. ಎಲ್ಲ ಜೀವಿಗಳ ಮೇಲೆ ಕರುಣೆ ತೋರಬೇಕೆಂದನು.

ಅದು ಸರಿಯೇ. ಆದರೆ ಅದಕ್ಕೆ ಸನಾತನ ಧರ್ಮವು ಭಾರಿ ಬೆಲೆ ತೆರಬೇಕಾಯಿತು. ಏಕೆಂದರೆ ಬೌದ್ಧ ಧರ್ಮವು ವೇದವನ್ನು ತಿರಸ್ಕರಿಸಿತು. ಬುದ್ಧನ ಉದ್ದೇಶ ಒಳ್ಳೆಯದಿರಬಹುದು. ಆದರೆ ಅದಕ್ಕಾಗಿ ವೇದವನ್ನು ತಿರಸ್ಕರಿಸಬೇಕಾಯಿತು. ವೇದದಲ್ಲಿ ಭಗವಂತನನ್ನು ಕುರಿತ ಜ್ಞಾನವಿದೆ. ವೇದವನ್ನು ತಿರಸ್ಕರಿಸಿದರೆ ದೇವೋತ್ತಮನ ನಡೆ, ನುಡಿಗಳನ್ನು ತಿರಸ್ಕರಿಸಿದಂತೆ. ಅದು ನಾಸ್ತಿಕವಾದ. ಬೌದ್ಧ ಧರ್ಮದಲ್ಲಿ ನಾಸ್ತಿಕವಾದ ಕಾಣಿಸಿಕೊಂಡಿತು.

ಇದಕ್ಕೆ ಪೂರಕವಾಗಿ ಮತ್ತೊಂದು ಪರಿಸ್ಥಿತಿ ಉಂಟಾಯಿತು, ಚಕ್ರವರ್ತಿ ಅಶೋಕನ ಮೂಲಕ! ಬೌದ್ಧ ಧರ್ಮದ ಅನುಯಾಯಿಯಾಗಿದ್ದ ಅಶೋಕನು ದೇಶಾದ್ಯಂತ ಅದನ್ನು ಹರಡಿದ. ದೇವರ ಅಸ್ತಿತ್ವನ್ನೇ ಪ್ರಶ್ನಿಸುವ ಜನರು ಹೆಚ್ಚಾದರು. ಇದು ನಿಜವಾಗಿಯೂ ತುರ್ತು ಪರಿಸ್ಥಿತಿ. ಇದನ್ನು ಸರಿಪಡಿಸಬೇಕಾಗಿತ್ತು.

ಆಗ ಶ್ರೀ ಶಂಕರರು ಬಂದರು. ವೇದವನ್ನು ಪುನಃ ಈ ಪುಣ್ಯ ಭೂಮಿಗೆ ತರುವುದು ಅವರ ಧ್ಯೇಯವಾಗಿತ್ತು. ಅವರು ವೇದವನ್ನು ತಂದರು. ಜನರಿಗೆ ಅದರ ಮಹತ್ವವನ್ನೂ ಮನವರಿಕೆ ಮಾಡಿಕೊಟ್ಟರು. ಆದರೆ ಅದರ ಮೂಲಕ ಜನರಿಗೆ ನಾಸ್ತಿಕವಾದವನ್ನೂ ಬೋಧಿಸಿದರು! ಭೌದ್ಧ ಧರ್ಮವು ದೇವರಿಲ್ಲ ಎನ್ನುತ್ತದೆ. ಆದರೆ ಶಂಕರರು, “ದೇವರಿದ್ದಾನೆ, ಆದರೆ ನಿರಾಕಾರ, ಅವ್ಯಕ್ತ”, ಎಂದರು! ಅಂದರೆ ಮಾಯಾವಾದವನ್ನು ಉಪದೇಶಿಸಿದರು.

ಮಾಯಾವಾದವೆಂದರೆ ಎಲ್ಲವೂ ಅವ್ಯಕ್ತ, ಮಾಯೆ. ಈ ಲೋಕಕ್ಕೆ ಬರುವಾಗ ಆ ಮಾಯೆಯು ಆಕಾರ ಪಡದುಕೊಳ್ಳುತ್ತದೆ. ಅದು ಎಲ್ಲರಿಗೂ ಅನ್ವಯ, ಭಗವಂತನಿಗೂ. ಅಂದರೆ ಪ್ರಭುವಿನ ಶರೀರ ಕೂಡ ಮಾಯೆಯಿಂದ ಮಾಡಲ್ಪಟ್ಟಿದ್ದು! ದೇವರು ನಿರಾಕಾರ, ಇಲ್ಲಿಗೆ ಬಂದಾಗ ಮಾಯೆಯಿಂದ ಆವೃತನಾಗುತ್ತಾನೆ.

ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು, ಅನಂತರ ಶ್ರೀ ಚೈತನ್ಯ ಮಹಾಪ್ರಭು ತಮ್ಮ ತಮ್ಮ ತತ್ತ್ವಗಳ ಮೂಲಕ ಮಾಯಾವಾದ ಸಿದ್ಧಾಂತವನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾದರು. ಶ್ರೀ ರಾಮಾನುಜಾಚಾರ್ಯರು ತಮ್ಮ ತತ್ತ್ವಜ್ಞಾನವನ್ನು ವಿಶಿಷ್ಟಾದ್ವೈತ ವಾದವೆಂದು ಪ್ರಸ್ತುತ ಪಡಿಸಿದರು. ವಿಷ್ಣುವಿನಲ್ಲಿ ಗಾಢವಾದ ಭಕ್ತಿಯೇ ಮೋಕ್ಷಕ್ಕೆ ದಾರಿ ಎಂದು ಅವರು ಪ್ರತಿಪಾದಿಸಿದರು. ಶ್ರೀ ಮಧ್ವಾಚಾರ್ಯರು ತಮ್ಮ ತತ್ತ್ವವಾದವೆಂಬ ತತ್ತ್ವಜ್ಞಾನವನ್ನು ಪ್ರಸ್ತುತಪಡಿಸಿದರು. ಜಗತ್ತು ಮಾಯೆಯಲ್ಲ. ಅದು ಪರಮಾತ್ಮನಷ್ಟೇ ವಾಸ್ತವ ಎಂದು ಅವರು ಪ್ರತಿಪಾದಿಸಿದರು. ಮಾಯಾವಾದ ಸಿದ್ಧಾಂತವು ಭಕ್ತಿಪಥಕ್ಕೆ ಕಂಟಕ, ವಿನಾಶಕಾರಿ, ಅದನ್ನು ಕೇಳಿದರೂ ಸಾಕು ಸರ್ವನಾಶ ಎಂದು ಶ್ರೀ ಚೈತನ್ಯರು ಸಾರಿದ್ದರು. ಅವರ ಸಿದ್ಧಾಂತವನ್ನು ಅಚಿಂತ್ಯ ಭೇದಾಭೇದ ತತ್ತ್ವವೆಂದು ಕರೆಯಲಾಗುತ್ತದೆ.

ಈ ಲೇಖನ ಶೇರ್ ಮಾಡಿ