ಪ್ರಭುಪಾದರು ಹೇಳಿದ ಸಣ್ಣಕಥೆಗಳು

ಕೈಲಾಗದವನು “ಬೇರೆಯವರ” ಮೈ ಪರಚಿದನು

ಕೆಲವರು ಸ್ವಯಂ ತಾವೇ ಏನನ್ನೂ ಮಾಡಲಾರರು. ಬೇರೆ ಯಾರೋ ಏನನ್ನಾದರೂ ಒಳಿತನ್ನು ಮಾಡಿದರೆ ಇವರು ಮತ್ಸರ ತೋರಿಸುತ್ತಾರೆ. ಇಂತಹದು ಮೂರನೆಯ ದರ್ಜೆ ಮನುಷ್ಯನ ನಡವಳಿಕೆ ಎಂದು ಪ್ರಭುಪಾದರು ಒಮ್ಮೆ ಹೇಳಿದರು.

ತಮ್ಮ ಮಾತಿಗೆ ಸಾದೃಶ್ಯ ನೀಡಲು ತಾವು ತಮ್ಮ ಗುರುಗಳ ಬಾಯಿಂದ ಕೇಳಿದ್ದ ಒಂದು ಕಥೆಯನ್ನು ಪ್ರಭುಪಾದರು ಹೇಳಿದರು: ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನುದ್ದೇಶಿಸಿ, “ಅಯ್ಯಾ, ನಮ್ಮಿಬ್ಬರಿಗೂ ಚೆನ್ನಾಗಿ ತಿಳಿದಿರುವ ಒಬ್ಬನು ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನ ಪದವಿ ಅಲಂಕರಿಸಿದ್ದಾನೆ” ಎಂದನು. ಈ ಮಾತನ್ನು ಕೇಳಿದ ಆ ಎರಡನೆಯ ವ್ಯಕ್ತಿಯು – “ಇರಲಾರದು, ಸಾಧ್ಯವಿಲ್ಲ. ಆ ನಮ್ಮ ಇವನು ನ್ಯಾಯಾಧೀಶನಾಗಿರುವುದು ಅಸಂಭವ ಎಂದ.

ಮಾತು ಪ್ರಾರಂಭಿಸಿದ್ದ ಮೊದಲ ವ್ಯಕ್ತಿ ಹೇಳಿದ: “ಖಂಡಿತ ಹೌದು. ನಮ್ಮ ಗೆಳೆಯ ಈಗ ನ್ಯಾಯಾಧೀಶನಾಗಿದ್ದಾನೆ. ನ್ಯಾಯಾಧೀಶನ ಪೀಠದಲ್ಲಿ ಆತ ಕುಳಿತಿದ್ದುದನ್ನು ನಾನೇ ನೋಡಿದ್ದೇನೆ.”

ಎರಡನೆಯ ವ್ಯಕ್ತಿ “ಇರಬಹುದು. ಆತ ನ್ಯಾಯಾಧಿಪತಿ ಆಗಿದ್ದಾನು. ಆದರೆ ಅವನಿಗೆ ಸಂಬಳ ಸಾರಿಗೆ ಬರುತ್ತಿರುವುದಂತೂ ಸಾ‍ಧ್ಯವಿಲ್ಲ” ಎಂದು ತನ್ನನ್ನು ಸಮರ್ಥಿಸಿಕೊಂಡ.

ಈ ಬಗೆಯ ಕುತ್ಸಿತಿ ತುಂಬಿದ ಜನರು ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುತ್ತಾರೆ. ತಪ್ಪಿಲ್ಲದ ಕಡೆಯೂ ತಪ್ಪು ತಯಾರಿಸಬಲ್ಲ ಚತುರರು ಈ ಜನ. ಅವರ ಕಸುಬೇ ಅದು ಎಂದು ಪ್ರಭುಪಾದರು ಹೇಳಿದರು. ತಮ್ಮ ಗುರು ಮಹಾರಾಜರಾದ ಭಕ್ತಿ ಸಿದ್ಧಾಂತ ಸರಸ್ವತಿ ಠಾಕೂರರ ಬಗೆಗೆ ಮತ್ಸರಿಸುತ್ತಿದ್ದ ಬಹು ಜನ ಇದ್ದರೆಂದೂ, ಆದರೂ ತಮ್ಮ ಗುರುವರ್ಯರು ಯಾವುದನ್ನಾಗಲಿ ಲೆಕ್ಕಿಸಲಿಲ್ಲವೆಂದೂ ಪ್ರಭುಪಾದರು ನುಡಿದರು.

ಬದಲಾಗಬೇಡಿ

“ಕೈಗಳನ್ನು ಕಾಲುಗಳಂತೆ ಬಳಸಿ ನೀನು ನಡೆಯಬಲ್ಲೆಯಾದರೆ ಹಾಗೇ ಮಾಡು. ಆದರೆ ನೀನು ಏನೇ ಮಾಡಿದರೂ ಅದನ್ನು ಬದಲಾಯಿಸುತ್ತಿರು” ಎಂಬುದಾಗಿ ಬಂಗಾಳಿ ಭಾಷೆಯಲ್ಲಿ ಒಂದು ಗಾದೆಯುಂಟು. ಹುಚ್ಚು ಹುಚ್ಚಾಗಿ ಬದಲಾವಣೆ ಮಾಡುವುದನ್ನು ತಾವು ಒಪ್ಪುವುದಿಲ್ಲವೆಂಬುದನ್ನು ಸಾದೃಶ್ಯಕ್ಕೆ ತಂದುಕೊಡಲು ಪ್ರಭುಪಾದರು ಈ ಗಾದೆಯನ್ನು ಹೇಳಿದರು.

ತಾವು ಜಗತ್ತನ್ನು ಬಿಟ್ಟು ನಿಷ್ಕ್ರಮಿಸಿದನಂತರ ತಮ್ಮ ಗ್ರಂಥಗಳಲ್ಲಿ ಅಥವಾ ಮೂರ್ತಿಪೂಜೆಯ ವಿವರಗಳಲ್ಲಿ ತಮ್ಮ ಅನುಯಾಯಿಗಳು ಮನಸ್ಸಿಗೆ ಬಂದಂತೆ ನಡೆದು, ಅನಧಿಕೃತ ಬದಲಾವಣೆಗಳನ್ನು ಮಾಡಿಯಾರೆಂಬ ವಿಚಾರದಲ್ಲಿ ಪ್ರಭುಪಾದರಿಗೆ ವಿಶೇಷ ಕಳವಳವಿತ್ತು. ಹಾಗೆ ಮಾಡಬಾರದೆಂಬ ಉದ್ದೇಶದಿಂದ ಮೇಲಿನ ಕಥೆಯನ್ನು ಹೇಳಿದರು.

ಕೃಷ್ಣನಿಗಾಗಿ ಮನಸಿಟ್ಟು ಮಾಡಿ

ತಾಜ್‌ ಮಹಲ್‌ನ ನಿರ್ಮಾಣ ಕಾರ್ಯದಲ್ಲಿ ನುರಿತ ಗಾರೆಕೆಲಸದವನೊಬ್ಬನ ಕಾರ್ಯಕುಶಲತೆಯ ಬಗೆಗೆ ಒಂದು ಕಥೆಯುಂಟು. ತಾಜ್‌ಮಹಲನ್ನು ನಿರ್ಮಿಸಲಾಗುತ್ತಿದ್ದ ಕಾಲದಲ್ಲಿ ಆ ಕಾರ್ಯದ ಉನ್ನತ ಮೇಲ್ವಿಚಾರಕನೊಬ್ಬನು ಕಟ್ಟಡದ ಪ್ರಗತಿಯನ್ನು ಪರೀಕ್ಷಿಸುತ್ತಿದ್ದ. ಒಬ್ಬ ಗಾರೆ ಕೆಲಸದವನು ಗಾರೆ ಕಲೆಸುತ್ತಾ ಅಥವಾ ಮಾಡಿದ್ದನ್ನೇ ಮಾಡುತ್ತಾ ಮೂರು ದಿನ ಒಂದೇ ಸ್ಥಳದಲ್ಲಿದ್ದುದು ಮೇಲ್ವಿಚಾರಕನ ಕಣ್ಣಿಗೆ ಬಿತ್ತು.

ಮಾರನೆಯ ದಿನ ಮೇಲ್ವಿಚಾರಕನಿಗೆ ಕೋಪ ಬಂದು ಅವನು, “ಎಲಾ, ಮೂರು ದಿನದಿಂದ ಒಂದೇ ಸಮ ಕಲೆಸಿದ ಗಾರೆಯನ್ನೇ ಕಲೆಸುತ್ತಿದ್ದೀಯಲ್ಲೊ ಕೆಲಸಗಳ್ಳ! ನೀನೊಬ್ಬ ಸೋಮಾರಿ!” ಎಂದು ಬೈದ. ಗಾರೆ ಕಲೆಸುತ್ತಿದ್ದವನಿಗೂ ಸಿಟ್ಟು ಬಂತು. ಅವನು ಒಂದು ಹಿಡಿ ಗಾರೆ ತೆಗೆದು ಮೇಲ್ವಿಚಾರಕನ ಕಡೆ ಎಸೆದ.

ಹಾಗೆ ಅವನೆರಚಿದ ಗಾರೆ ಮೇಲ್ವಿಚಾರಕನಿಗೆ ಮೆತ್ತಿಕೊಳ್ಳವುದು ತಪ್ಪಿ ಗೊಡಗೆ ಬಿತ್ತು. ಗಾರೆ ಕೆಲಸದವನ್ನು ಕಲೆಸಿದ್ದ ಗಾರೆ ಎಷ್ಟು ಹದವಾಗಿಯೂ ಜಿಗುಟಾಗಿಯೂ ಇತ್ತೆಂದರೆ ಗಾರೆಯನ್ನು ಆ ಗೋಡೆಯಿಂದ ಬಿಡಿಸಲಾಗಲಿಲ್ಲ! ಈ ಹೊತ್ತಿಗೂ ಅದು ಹಾಗೆಯೇ ಇದೆಯಂತೆ.

ಕೃಷ್ಣನಿಗೆ ಮಾಡುವ ಸೇವೆಯ ಮಾತು ಬಂದಾಗ ಪ್ರತಿಯೊಂದನ್ನು ಮನಸ್ಸಿಟ್ಟು ಮಾಡಬೇಕೆಂಬದನ್ನು ಒತ್ತಿ ಹೇಳಲು ಹಾಗೆಯೇ ಕಾರ್ಯಕುಶಲತೆಯ ಮಹತ್ವವನ್ನು ಭಕ್ತರಿಗೆ ಮನವರಿಕೆ ಮಾಡಿಕೊಡಲು ಪ್ರಭುಪಾದರು ಈ ಕಥೆಯನ್ನು ಹೇಳಿದರು.

ನನ್ನ ಕೈಬರಹ ಅಷ್ಟು ಚೆನ್ನಾಗಿಲ್ಲ

ಪ್ರಭುಪಾದರ ಶಿಷ್ಯನೂ ಕಾರ್ಯದರ್ಶಿಯೂ ಆಗಿದ್ದವರಲೊಬ್ಬನಿಗೆ ಅಷ್ಟೋ ಇಷ್ಟೋ ಹಿಂದಿ ಬರುತ್ತಿತ್ತು. ಪ್ರಭುಪಾದರು ಹೇಳಿ ಬರಸಿದ ಪತ್ರವನ್ನು ಆ ಶಿಷ್ಯ ಹಿಂದಿಯಲ್ಲೇ ಬರೆದ. ಆದರೂ ಆ ಭಕ್ತನು, “ನನ್ನ ಹಸ್ತಾಕ್ಷರ ಅಷ್ಟೇನೂ ಚೆನ್ನಾಗಿಲ್ಲ” ಎಂದು ಕ್ಷಮೆ ಯಾಚಿಸಿದ.

“ಅದೇನೂ ಅಷ್ಟು ಮುಖ್ಯವಲ್ಲ, ಬಿಡಿ. ಹಿಂದಿ ಭಾಷೆಯನ್ನು ಯಾರೂ ಚೆನ್ನಾಗಿ ಬರೆಯಲಾರರು” ಎಂದು ನುಡಿದ ಪ್ರಭುಪಾದರು ನಗೆಹನಿಯೊಂದನ್ನು ಹೇಳಿದರು:

ಯಾರೋ ಒಬ್ಬರು ತಮ್ಮ ಮಿತ್ರರಿಗೆ ಹಿಂದಿಯಲ್ಲಿ ಕಾಗದ ಬರೆದರು. ಈ ಪತ್ರವನ್ನು ಸ್ವೀಕರಿಸಿದಾತನು, “ಮುಂದಿನ ಸಲ ನೀವು ನನಗೆ ಹಿಂದಿಯಲ್ಲಿ ಕಾಗದ ಬರೆದಾಗ, ನಿಮ್ಮಲ್ಲಿಗೆ ಬರಲಿಕ್ಕಾಗುವಷ್ಟು ರೈಲು ಚಾರ್ಜನ್ನು ದಯಮಾಡಿ ಕಳುಹಿಸಿಕೊಡಿ” ಎಂದು ಉತ್ತರ ಬರೆದ.

ಮೊದಲು ಪತ್ರ ಬರೆದಾತ, “ರೈಲು ಜಾರ್ಜು ಕಳುಹಿಸಬೇಕು ಅಂತ ಬರೆದಿದ್ದೀಯಲ್ಲಾ, ಯಾಕೆ?” ಎಂದು ಇನ್ನೊಂದು ಪತ್ರ ಬರೆದ.

“ನೀನು ಬರೆದ ಕಾಗದವನ್ನು ನಿನ್ನಿಂದಲೇ ಓದಿಸಲಿಕ್ಕೆ ನಾನು ನಿನ್ನ ಬಳಿಗೆ ಬರಬೇಕಾಗುತ್ತದಲ್ಲ, ಅದಕ್ಕಾಗಿ “ಜಾರ್ಜು ಕಳಿಹಿಸು” ಅಂತ ಬರೆದಿದ್ದೆ ಎಂದು ಮಿತ್ರ ಉತ್ತರ ಬರೆದ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi