ಶ್ರೀ ಲಕ್ಷ್ಮೀ ಜನಾರ್ದನ ಸ್ವಾಮಿ ಗುಡಿ, ಕಾಪು

ಉಡುಪಿ ಜಿಲ್ಲೆಯಲ್ಲಿರುವ ಕಾಪು, ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇದು ಉಡುಪಿ ಮತ್ತು ಮಂಗಳೂರಿನ ಮಧ್ಯೆಯಿದ್ದು, ಉಡುಪಿಯಿಂದ 18 ಕಿ.ಮೀ. ದೂರ, ಮಂಗಳೂರಿನಿಂದ 45 ಕಿ.ಮೀ. ದೂರದಲ್ಲಿದೆ, ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಬಳಿಯಿದೆ. ಲೈಟ್‌ಹೌಸ್‌ ಇರುವ ಸುಂದರ ಸಮುದ್ರತೀರಕ್ಕೂ ಮಾರೀದೇವಿಯ ಗುಡಿಗಳು ಹಾಗೂ ಆರಾಧನೆಗೂ ಹೆಸರಾಗಿರುವ ಕಾಪುವಿನಲ್ಲಿ ಸಾವಿರಾರು ವರ್ಷಗಳ ಹಿಂದಿನ ಚಾರಿತ್ರಿಕ ದಾಖಲೆಗಳು ಸಿಗುತ್ತವೆ. ಇಲ್ಲಿ ನೋಡಲೇಬೇಕಾದ ಇನ್ನೊಂದು ಪ್ರಮುಖ ದೇವಾಲಯವೆಂದರೆ ಶ್ರೀ ಲಕ್ಷ್ಮೀಜನಾರ್ದನಸ್ವಾಮಿ ದೇವಾಲಯ. ಇದನ್ನು ಮಹತೋಭಾರ ದೇವಾಲಯವೆಂದು ಕರೆಯುತ್ತಾರೆ. 13-14ನೇ ಶತಮಾನದ ಅನಂತರ ತೌಳವ ಇತಿಹಾಸದಲ್ಲಿ ಪ್ರಬಲ ತುಂಡರಸನಾಗಿ ಕಂಡುಬರುವ ತಿರುಮಲರಸ ಮರ್ದ ಹೆಗಡೆ ಮನೆತನ ಅಧಿಕಾರಕ್ಕೆ ಬಂದಿತು. ಮರ್ದ ಹೆಗಡೆಯ ಅಧಿಕಾರ ವ್ಯಾಪ್ತಿಗೆ ಒಂದಕ್ಕಿಂತ ಹೆಚ್ಚು ಗ್ರಾಮಗಳು ವಿಸ್ತರಿಸಿ ಕಾಪುವು ಸೀಮೆ ಎಂದು ಕರೆಯಲ್ಪಟ್ಟು, ಮುಂದೆ, ಸಾವಿರ ಸೀಮೆ ಎಂದು ಕರೆಯಲ್ಪಟ್ಟಿತು. ಪ್ರತಿ ಗ್ರಾಮಕ್ಕೂ ಒಂದೊಂದು ದೇವಾಲಯವಿರುತ್ತಾ, ಸೀಮೆಯ ಕೇಂದ್ರದಲ್ಲಿ ಬಹುಸಂಖ್ಯೆಯ ಭಕ್ತರ ಆರಾಧ್ಯದೇವರ ದೇವಾಲಯವಿದ್ದರೆ, ಅಂಥ ದೇವಾಲಯವನ್ನು ಮಹತೋಭಾರ ದೇವಾಲಯವೆಂದು ಕರೆಯುತ್ತಿದ್ದರು. ಕಾಪುವಿನ ಲಕ್ಷ್ಮೀ ಜನಾರ್ದನಸ್ವಾಮಿ ದೇವಾಲಯವೂ ಅಂಥ ಒಂದು ಮಹತೋಭಾರ ದೇವಾಲಯ.

ಕೇರಳೀಯ ಶೈಲಿಯಲ್ಲಿರುವ ಈ ಸುಂದರ ದೇವಾಲಯದ ಮುಂಭಾಗದಲ್ಲಿ ಒಂದು ಸುಂದರ ಸರೋವರವಿದೆ. ಸುತ್ತಲೂ ಪೌಳಿ, ಪ್ರದಕ್ಷಿಣಾಪಥಗಳಿದ್ದು, ಪೌಳಿಯ ದಕ್ಷಿಣದಲ್ಲಿ ವೀರಾಂಜನೇಯ ಎಂಬ ವಿಜಯನಗರ ಕಾಲದ ಹನುಮಂತನ ವಿಗ್ರಹವೂ, ನೈಋತ್ಯಮೂಲೆಯಲ್ಲಿ ಮಹಾಗಣಪತಿಯ ವಿಗ್ರಹವೂ ಇವೆ. ಅಂತೆಯೇ, ಹೊರಸುತ್ತಿನಲ್ಲಿ ನಾಗದೇವರು, ರಕ್ತೇಶ್ವರಿ, ಕಲ್ಕುಡದೈವ, ಮೊದಲಾದ ಪರಿವಾರದೈವಗಳೂ ಇವೆ. ಸುಂದರವಾದ ಒಂದು ತೀರ್ಥಮಂಟಪವಿದ್ದು, ಅದರ ಕಂಬಗಳಲ್ಲಿ ಕಾಳಿಂಗಮರ್ದನ, ನಾಗಬಂಧ, ಮಲ್ಲಯುದ್ಧ, ಮೊದಲಾದ ಸೊಗಸಾದ ಶಿಲ್ಪಗಳಿವೆ. ಗರ್ಭಗುಡಿಯಲ್ಲಿ, ಶಂಖ ಚಕ್ರ ಗದಾ ಪದ್ಮಧಾರಿಯಾದ ಜನಾರ್ದನಸ್ವಾಮಿಯ ವಿಗ್ರಹವಿದೆ. ಲಕ್ಷ್ಮೀಜನಾರ್ದನ ಎಂದು ಕರೆಯಲಾಗುವ ಈ ವಿಗ್ರಹದಲ್ಲಿ ವಿಷ್ಣುವಿನ ಚತುರ್ವಿಂಶತಿ ರೂಪಗಳಲ್ಲೊಂದಾದ ಜನಾರ್ದನರೂಪದ ಲಕ್ಷಣಗಳಿದ್ದು, ಇದು 13ನೇ ಶತಮಾನದ ಕಾಲದ್ದೆಂದು ಹೇಳಲಾಗಿದೆ. ಕಾಪು, ಕಾಡು, ಕಾವು, ಕಾನು ಇವೆಲ್ಲ ಸಮಾನಾರ್ಥಕ ಪದಗಳಾಗಿದ್ದು ಹಿಂದೆ ಈ ಪ್ರದೇಶದಲ್ಲಿ ಕಾಡಿದ್ದು, ಆ ಕಾರಣದಿಂದ ಕಾಪು ಎಂಬ ಹೆಸರು ಬಂದಿರಬೇಕು.

ಸ್ಥಳಪುರಾಣ ಮತ್ತು ಐತಿಹ್ಯ

ಇಲ್ಲಿನ ಸ್ಥಳಪುರಾಣದಂತೆ, ಜನಾರ್ದನಸ್ವಾಮಿಯ ವಿಗ್ರಹವನ್ನು ಭಾರ್ಗವ ಮಹರ್ಷಿಗಳು ಪ್ರತಿಷ್ಠಾಪಿಸಿ ಪೂಜಿಸಿದರು ಎನ್ನಲಾಗಿದೆ, ಹಾಗೂ ದಾಖಲೆಗಳ ಪ್ರಕಾರ ಈ ದೇವಾಲಯವನ್ನು ಮರ್ದ ಹೆಗಡೆಯು ನಿರ್ಮಿಸಿದ ಎನ್ನಲಾಗಿದೆ. ಅದರಂತೆ, ಭಾರ್ಗವ ಋಷಿಗಳು ಪಿಲಾರಕಾನ ಎಂಬ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದರು. ಒಮ್ಮೆ ಅವರು ಸಮುದ್ರ ಸ್ನಾನಕ್ಕೆಂದು ಈ ದಾರಿಯಲ್ಲಿ ಬಂದರು. ಆಗ ಸಮುದ್ರದ ಸಮೀಪದ ಕೆರೆಯೊಂದರಲ್ಲಿ ಮೊದಲು ಸ್ನಾನ ಮಾಡಿ ಆ ಕೆರೆಯಲ್ಲಿ ಕಮಲೋತ್ಪತ್ತಿ ಆಗುವಂತೆ ವರ ನೀಡಿ ಅನಂತರ ಸಮುದ್ರಸ್ನಾನ ಮಾಡಿದರು. ಹಾಗೆ ಸಮುದ್ರಸ್ನಾನ ಮುಗಿಸಿ ಬರುತ್ತಿದ್ದಾಗ, ಇಲ್ಲಿನ ಬ್ರಾಹ್ಮಣರು ಇಲ್ಲೊಂದು ದೇವತಾಸಾನ್ನಿಧ್ಯ ಬೇಕೆಂದು ಬೇಡಿಕೊಂಡಾಗ, ಅವರು ಜನಾರ್ದನಸ್ವಾಮಿಯ ವಿಗ್ರಹವನ್ನು ಸ್ಥಾಪಿಸಿದರು. ಹೀಗೆ ಇದೊಂದು ಪುಣ್ಯಕ್ಷೇತ್ರವಾಯಿತು. ಮುಂದೆ, ಈ ಕಾಪು ಸೀಮೆ, ಮರ್ದ ಹೆಗಡೆಯ ಅಧಿಕಾರಕ್ಕೆ ಬಂದಾಗ, ಅದರ ವ್ಯಾಪ್ತಿಯಲ್ಲಿದ್ದ ಮಜೂರು ಎಂಬ ಗ್ರಾಮದಲ್ಲಿನ ವಿಷ್ಣುಮೂರ್ತಿ ದೇವಾಲಯದ ವಾರ್ಷಿಕ ಆಯನೋತ್ಸವಕ್ಕೆ ಪ್ರತಿಬಾರಿಯಂತೆ ಒಮ್ಮೆ ಅವನು ಹೊರಟ. ಆದರೆ ಅವನು ಹೋಗುವುದು ತಡವಾಗಿ, ಅವನಿಲ್ಲದೆಯೇ ಉತ್ಸವ ನಡೆದುಹೋಯಿತು! ಇದರಿಂದ ಅವಮಾನವಾದಂತಾಗಿ ಬೇಸರಗೊಂಡ ಅರಸ, ತಾನೇ ಒಂದು ದೇವಾಲಯವನ್ನು ನಿರ್ಮಿಸುವವರೆಗೂ ತನ್ನ ಬೀಡಿಗೆ ಹೋಗುವುದಿಲ್ಲವೆಂದು ಸಂಕಲ್ಪಿಸಿ ತಾಳೇಗರಿಯ ಚಪ್ಪರವೊಂದನ್ನು ನಿರ್ಮಿಸಿಕೊಂಡು ಅದರಲ್ಲಿ ವಾಸಿಸತೊಡಗಿದ. ಲಕ್ಷ್ಮಿಯ ದೇವಾಲಯವನ್ನು ನಿರ್ಮಿಸಲು ಅವನು ಸಂಕಲ್ಪಿಸಿ ಅದರಂತೆ ಸೋಮೇಶ್ವರದಿಂದ ಶಿಲ್ಪಿಗಳನ್ನು ಕರೆಸಿಕೊಂಡು ದೇವಾಲಯವನ್ನು ನಿರ್ಮಿಸತೊಡಗಿದ. ದೇವ ಪ್ರತಿಷ್ಠೆಯ ದಿನ ಹತ್ತಿರವಾದಂತೆ, ಅವನಿಗೆ ಒಂದು ಕನಸು ಬಿತ್ತು. ಅದರಲ್ಲಿ ಅಲ್ಲಿಯೇ ಮೊಸಳೆಗುಂಡಿ ಎಂಬ ಪ್ರದೇಶದಲ್ಲಿ ಭಾರ್ಗವಮುನಿಗಳು ಪೂಜಿಸಿದ ಜನಾರ್ದನ ವಿಗ್ರಹವಿದೆಯೆಂದೂ ಅದನ್ನೇ ಈ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದೂ ಸೂಚನೆಯಾಯಿತು. ಅದರಂತೆ ಅವನು ಜನಾರ್ದನ ವಿಗ್ರಹವನ್ನು ಹುಡುಕಿಸಿ ತನ್ನ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದ. ಆದರೆ ಲಕ್ಷ್ಮಿಯನ್ನು ಸ್ಥಾಪಿಸಬೇಕೆಂದಿದ್ದ ತನ್ನ ಮೊದಲಿನ ಸಂಕಲ್ಪವನ್ನು ಸ್ಮರಿಸಿ ಈ ವಿಗ್ರಹವನ್ನು ಲಕ್ಷ್ಮೀಜನಾರ್ದನಸ್ವಾಮಿಯೆಂದು ಪ್ರಸಿದ್ಧಗೊಳಿಸಿದ. ಹೀಗೆ ಮರ್ದ ಹೆಗಡೆ ಅರಸನಿಂದ ಕಾಪುವಿನಲ್ಲಿ ಲಕ್ಷ್ಮೀಜನಾರ್ದನಸ್ವಾಮಿ ದೇವಾಲಯ ನಿರ್ಮಾಣವಾಯಿತು.

ದೈವಗಳ ಸಂಬಂಧ

ದಕ್ಷಿಣ ಕನ್ನಡ ಅಥವಾ ತುಳುನಾಡು ಭೂತಾರಾಧನೆಗೆ ಪ್ರಸಿದ್ಧ. ಈ ಪ್ರದೇಶಕ್ಕೇ ಸೇರಿರುವ ಕಾಪುವಿನಲ್ಲೂ ಈ ವಿಶಿಷ್ಟ ಜಾನಪದೀಯ ಆಚರಣೆ ನಡೆಯುತ್ತದೆ. ಭೂತಗಳನ್ನೇ ದೈವಗಳು ಎಂದು ಕರೆಯುತ್ತಾರೆ (ಭೂತ ಅಥವಾ ದೈವಗಳು ಶಿವಗಣಗಳು). ಇಲ್ಲಿನ, ಶ್ರೀಗುರು ಬ್ರಹ್ಮ ಮುಗ್ಗೆರ್ಕಳ ಪಿಲಿಚಂಡಿ ದೇವಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ಪಿಲಿಕೋಲ ಎಂಬ ಕೋಲ ನಡೆಯುತ್ತದೆ. ಆಗ ಒಬ್ಬರ್ಯ, ನಂದಿಗೋಣ, ಕೊಡಮಂದಾಯ, ಪಿಲಿಚಂಡಿ, ಗುಳಿಗ, ಮೊದಲಾದ ಹಲವಾರು ದೈವಗಳಿಗೆ ಪೂಜೆ ನಡೆಯುತ್ತದೆ. ಇಲ್ಲಿನ ಜನಪ್ರಿಯ ಕಥೆಯ ಪ್ರಕಾರ, ಈ ಎಲ್ಲ ದೈವಗಳೂ ಸಮುದ್ರಸ್ನಾನಕ್ಕೆಂದು ಇಲ್ಲಿಗೆ ಬಂದು ಜನಾರ್ದನಸ್ವಾಮಿಯನ್ನು ಭೇಟಿಯಾಗಿ ಕಾಪು ಸೀಮೆಯಲ್ಲಿ ನೆಲೆಸಿದವು.

ಹೀಗೆ, ಕಾಪು ಶ್ರೀ ಲಕ್ಷ್ಮೀಜನಾರ್ದನಸ್ವಾಮಿ ದೇವಾಲಯ ನೋಡಲೇಬೇಕಾದ ಒಂದು ಸುಂದರ ಸ್ವಾರಸ್ಯಕರ ದೇವಾಲಯವಾಗಿದೆ.

(ಆಧಾರ: ಕಾಪುಕ್ಷೇತ್ರ ಪರಿಚಯ – ಕೆ.ಎಲ್‌. ಕುಂಡಂತಾಯ)

ಈ ಲೇಖನ ಶೇರ್ ಮಾಡಿ