– ಡಾ|| ಬಿ.ಆರ್.ಸುಹಾಸ್ ಆಧಾರ: ಭಾಗವತ ಸ್ಕಂಧ 5, ಅಧ್ಯಾಯ 2
ಮಂದರಾಚಲದ ಆ ಸುಂದರ ಕಣಿವೆ ಬಹಳ ರಮಣೀಯತೆಯಿಂದ ಕೂಡಿತ್ತು.

ಸುಂದರ ತರುಣಿಯರು ತಮ್ಮ ಪ್ರೇಮಿಗಳನ್ನು ಆಲಿಂಗಿಸುವ ಪರಿಯಲ್ಲಿ ತರುಗಳನ್ನು ಬಳಸಿದ್ದ ಬಳುಕು ಬಳ್ಳಿಗಳು, ಅಂದದ ಹೆಣ್ಣಿನ ಮೋಹಕ ನಗೆಯನ್ನು ಹೋಲುವಂತೆ ಆರಳಿದ್ದ ಬಣ್ಣ ಬಣ್ಣದ ರಮ್ಯ ಪುಷ್ಪಗಳು, ಅವುಗಳಿಗೆ ಅಕ್ಕರೆಯಿಂದ ಮುತ್ತಿಡುತ್ತಾ ಝೇಂಕರಿಸುತ್ತಿದ್ದ ಭ್ರಮರಗಳು, ಆ ಝೇಂಕಾರಕ್ಕೆ ತಮ್ಮ ಮಧುರ ಮಂಜುಳ ನಿನಾದವನ್ನು ಜೊತೆಗೂಡಿಸುತ್ತಾ ಜುಳು ಜುಳು ಹರಿಯುತ್ತಿದ್ದ ಮನೋಹರ ಸರೋವರಗಳು, ಈ ವಾದ್ಯ ಸಂಗೀತಕ್ಕೆ ಅನುಪಮ ಗಾಯನವನ್ನೊದಗಿಸುತ್ತಿದ್ದ ಗಿಳಿಗೊರವಂಕ ಕೋಗಿಲೆಗಳು, ಆ ಪ್ರದೇಶವನ್ನು ಸ್ವರ್ಗಸಮಾನವಾಗಿಸಿದ್ದವು! ಆಗಸದಲ್ಲಿ ದಟ್ಟ ಮೇಘಗಳು ತುಂಬಿಕೊಂಡಾಗ, ಅವು ಗಿರಿಯ ಮೇಲೆ ಇಳಿದಂತೆ, ನವಯೌವನದಿಂದ ತುಂಬಿದ್ದ ಬಾಲೆಯೊಬ್ಬಳು ತನ್ನ ಬಿಳಿಯ ಬೆನ್ನಿನ ಮೇಲೆ ಕಡುಗಪ್ಪು ಕೇಶರಾಶಿಯನ್ನು ಹರಡಿದಂತೆ ಕಂಡು ರಸಿಕರಿಗೆ ಶೃಂಗಾರ ರಸದೌತಣ ನೀಡಿದಂತಾಗುತ್ತಿತ್ತು!
ರಮ್ಯ ಮನೋಹರವಾದ ಆ ಮಂದರಾಚಲ, ಸುರವನಿತೆಯರ, ಅಪ್ಸರೆಯರ ಕ್ರೀಡಾ ಸ್ಥಳವಾಗಿತ್ತು! ರತಿ ಮನ್ಮಥರ ನರ್ತನ ಭೂಮಿಯಂತಿತ್ತು!
ಆಗಾಗ ಅಲ್ಲಿಗೆ ದೇವತಾಸ್ತ್ರೀಯರೂ ಅಪ್ಸರೆಯರೂ ಗಂಧರ್ವ ಕಿನ್ನರರೂ ಬಂದು ಪ್ರಕೃತಿಯ ರಮ್ಯತೆಯನ್ನು ಸವಿಯುತ್ತಿದ್ದರು; ಅಂದದ ಸುಮಗಳ ಸುಗಂಧವನ್ನು ಹೊತ್ತು ಬೀಸುತ್ತಿದ್ದ ತಂಗಾಳಿಯ ತಂಪನ್ನು ಅನುಭವಿಸುತ್ತಾ ಆನಂದದಿಂದ ವಿಹರಿಸುತ್ತಿದ್ದರು! ಅರಳಿದ ಕೆಂದಾವರೆಗಳಿಂದ ಅಲಂಕರಿಸಲ್ಪಟ್ಟಿದ್ದ ಶೀತಲ ಜಲದ ರಮ್ಯ ಸರೋವರಗಳಲ್ಲಿ ಮತ್ತೆ ಮತ್ತೆ ಜಲಕೇಳಿಯಾಡಿ ಮುದಗೊಳ್ಳುತ್ತಿದ್ದರು!
ಇಂಥ ಸುಂದರ ಸ್ಥಳದಲ್ಲಿ ಈಗ ರಾಜನೋರ್ವನು, ಸೃಷ್ಟಿಕರ್ತನಾದ ಬ್ರಹ್ಮದೇವನನ್ನು ಅರ್ಚಿಸುತ್ತಾ ಅವನನ್ನು ಕುರಿತು ತಪಸನ್ನಾಚರಿಸುತ್ತಿದ್ದನು.
ಅವನು ಮನುಪುತ್ರ ಪ್ರಿಯವ್ರತನ ಹಿರಿಯ ಮಗನಾದ ಅಗ್ನಿಧ್ರನಾಗಿದ್ದನು. ಮಹಾಭಾಗವತನಾದ ಪ್ರಿಯವ್ರತರಾಜನು ಭೂಮಂಡಲವನ್ನು ತನ್ನ ಪುತ್ರರಿಗೆ ಹಂಚಿ ತಪಶ್ಚರ್ಯೆಗಾಗಿ ಅರಣ್ಯಕ್ಕೆ ಹೊರಟುಹೋದ ಬಳಿಕ, ಅಗ್ನಿಧ್ರನು ಜಂಬೂದ್ವೀಪವನ್ನು ಆಳತೊಡಗಿದನು.
ತನ್ನ ತಂದೆಯಂತೆಯೇ ಒಬ್ಬ ದಕ್ಷರಾಜನಾದ ಅವನು, ತನ್ನ ಪ್ರಜೆಗಳನ್ನು ಬಹಳ ಪ್ರೀತಿಯಿಂದ ತನ್ನ ಮಕ್ಕಳೆಂಬಂತೆ ಪಾಲಿಸುತ್ತಿದ್ದನು. ಅವನು ನಿತ್ಯವೂ ಧಾರ್ಮಿಕ ವಿಧಿಗಳನ್ನು ಯಥಾವತ್ತಾಗಿ ಪರಿಪಾಲಿಸುತ್ತಿದ್ದುದರಿಂದ ಅವನ ರಾಜ್ಯವು ಸುಭಿಕ್ಷವಾಗಿತ್ತು.
ಹೀಗಿರಲು, ಒಮ್ಮೆ ಅವನಿಗೆ ಪಿತೃಲೋಕ ನಿವಾಸಿಯಾಗಬೇಕೆಂಬ ಆಸೆಯುಂಟಾಯಿತು. ಪಿತೃಗಳು ಸುಖವನ್ನನುಭವಿಸುವ ಆ ಪುಣ್ಯಲೋಕಕ್ಕೆ ಹೋಗಬೇಕೆಂದರೆ, ವ್ಯಕ್ತಿಯ ಮರಣದ ಬಳಿಕ, ನಿಯಮಿತವಾಗಿ ಪಿಂಡಪ್ರದಾನ ಮಾಡುವ ಉತ್ತಮ ಪುತ್ರನಿರಬೇಕು. ಅಂಥ ಉತ್ತಮ ಪುತ್ರನು ಹುಟ್ಟಲು ಸರ್ವಲಕ್ಷಣ ಸಂಪನ್ನೆಯಾದ ಪತ್ನಿಯಿರಬೇಕಲ್ಲವೇ? ಅಂಥ ಕನ್ಯಾರ್ಥಿಯಾಗಿ ಅಗ್ನಿಧ್ರನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಲು ಮಂದರಾಚಲಕ್ಕೆ ಹೋದನು.
ಮಹಾರಾಜ ಪ್ರಿಯವ್ರತನು ಶ್ರೀಹರಿಯ ಪರಮಭಕ್ತನಾಗಿದ್ದನು. ಅಂಥ ಭಕ್ತನ ಮಗನಾಗಿ ಅಗ್ನಿಧ್ರನು ಶಾಶ್ವತವಾದ ವೈಕುಂಠಲೋಕವನ್ನು ಬಯಸದೆ, ಅಶಾಶ್ವತವಾದ ಪಿತೃಲೋಕವನ್ನು ಬಯಸುತ್ತಿದ್ದನು. ಪಿತೃಲೋಕವನ್ನು ಪಡೆಯಲು ಬಹಳವಾದ ಪುಣ್ಯವಿಶೇಷವಿರಬೇಕಾದರೂ ಪುಣ್ಯವು ಕ್ಷೀಣಿಸಿದಾಗ, ಪುನಃ ಮರ್ತ್ಯಲೋಕಕ್ಕೆ ಬರಲೇಬೇಕು ವೈಕುಂಠವಾದರೋ, ಪುಣ್ಯಪಾಪಗಳೆರಡೂ ಇರದೆ, ಆಶಾರಹಿತರಾದ ಭಗವದ್ ಭಕ್ತರಿಗೆ ದೊರೆಯುವ ಭಗವದ್ದಾನ.
ಅಲ್ಲಿಗೆ ಹೋದರೆ, ಪುನಃ ಹಿಂದಿರುಗುವಂತಿಲ್ಲ. ಆದರೆ ಅಗೀಧ್ರನಿಗೆ ಭೌತಿಕ ಸುಖಗಳ ಮೇಲಿನ ಆಸೆಯು ಹೆಚ್ಚಾಗಿತ್ತು. ಅಂತಹ ಸುಖಗಳು ಉನ್ನತ ಮಟ್ಟದಲ್ಲಿ ದೊರೆಯುವ ಪಿತೃಲೋಕವು ಅವನಿಗೆ ಬೇಕಾಗಿತ್ತು. ಏಕೆಂದರೆ ಅಗ್ನೀಧ್ರನು ಹುಟ್ಟುವ ಸಮಯದಲ್ಲಿ ಪ್ರಿಯವ್ರತ ಮಹಾರಾಜನು ಭೌತಿಕ ಸುಖಾನುಭವದ ತುತ್ತತುದಿಯಲ್ಲಿದ್ದನು!
ಯಮನಿಯಮಗಳಿಂದ ಅಗ್ನಿಧ್ರನು ತಪಸ್ಸು ಮಾಡುತ್ತಿದ್ದನು. ಅರ್ಧ ತೆರೆದ ಕಮಲದಳಗಳಂತಹ ತನ್ನ ಕಂಗಳ ದೃಷ್ಟಿಯನ್ನು ನಾಸಿಕಾಗ್ರದಲ್ಲಿ ಕೇಂದ್ರೀಕರಿಸಿ ಇಂದ್ರಿಯಗಳನ್ನು ನಿಗ್ರಹಿಸುತ್ತಾ ಏಕಾಗ್ರಚಿತ್ತದಿಂದ ಅವನು ಕಠಿಣ ತಪಸ್ಸಿನಲ್ಲಿ ತೊಡಗಿದ್ದನು.
ಅಗ್ನಿಧ್ರನು ತಪಸ್ಸು ಮಾಡುತ್ತಿದ್ದ ಸ್ಥಳದ ಸಮೀಪವೇ ಅತ್ಯಂತ ರಮಣೀಯವಾದ ಒಂದು ಉಪವನವಿತ್ತು. ಹಸಿರು ಸೀರೆ ಧರಿಸಿ ಪುಷ್ಪಾಭರಣಗಳಿಂದ ಮೆರೆಯುವ ನವ ಯುವತಿಯಂತೆ ಕಾಣುತ್ತಿತ್ತು ಆ ಸುಂದರ ಉಪವನ!
ಲತೆಗಳಿಂದ ಆಲಿಂಗಿತವಾಗಿದ್ದ ತರುಗಳಲ್ಲಿ ವಿಹಂಗಮಗಳು ಜೊತೆಜೊತೆಯಾಗಿ ಹಾಡುತ್ತಾ ಕ್ರೀಡಿಸುತ್ತಿದ್ದರೆ, ಕಮಲಪುಷ್ಪಗಳ ಸೊಬಗಿನ ನಗೆಯಿಂದ ಕೂಡಿದ್ದ ನಿರ್ಮಲ ಜಲದ ರಮ್ಯ ತಟಾಕಗಳಲ್ಲಿ ಹಂಸಕಾರಂಡಕ ಜೋಡಿಗಳು ಆನಂದದಿಂದ ವಿಹರಿಸುತ್ತಾ ಶೃಂಗಾರಭಾವವನ್ನು ಉದ್ದೀಪನಗೊಳಿಸುತ್ತಿದ್ದವು!
ಆ ಸುಂದರ ಉಪವನದಿಂದ ಒಂದು ಮಧುರವಾದ ಗೀತೆ ಕೇಳಿ ಬರಲು, ಅಗ್ನಿಧ್ರನ ಮನಸ್ಸು ಧ್ಯಾನದಿಂದ ಪರಾಙ್ಮುಖವಾಯಿತು! ಹೆಣ್ಣಿನ ಮಧುರವಾದ ಆ ಧ್ವನಿಗೆ! ಅಮೃತದಂತೆ ಮಾಧುರ್ಯವುಳ್ಳ ಧ್ವನಿ! ಆ ಧ್ವನಿಗೆ, ಗೆಜ್ಜೆಗಳ ಕಿಣಿಕಿಣಿ ನಾದ, ಸಂಗೀತವೊದಗಿಸಿತ್ತು!
ಅಗ್ನಿಧ್ರನು ನಿಧಾನವಾಗಿ ತನ್ನ ತಾವರೆ ಕಂಗಳನ್ನು ತೆರೆದು ನೋಡಿದ. ಅನುಪಮ ರೂಪ, ಲಾವಣ್ಯಗಳಿಂದ ಕೂಡಿದ್ದ ಅಂದದ ಅಪ್ಸರೆಯೊಬ್ಬಳು ಪ್ರಕೃತಿಯ ಸೊಬಗನ್ನಾಸ್ವಾದಿಸುತ್ತಾ ತನ್ನಷ್ಟಕ್ಕೆ ತಾನು ಉಲ್ಲಾಸದಿಂದ ಹಾಡಿಕೊಳ್ಳುತ್ತಾ ಆ ಉಪವನದಲ್ಲಿ ಅತ್ತಿಂದಿತ್ತ ಸುಳಿದಾಡುತ್ತಿದ್ದಳು!
ವನಕ್ಕೆ ಬಂದ ವಸಂತದಂತೆ ಯೌವನ ಅವಳ ತನುವಿನಲ್ಲಿ ಮನೆಮಾಡಿತ್ತು! ತನ್ನ ಅಂಗಾಂಗಗಳ ಚೆಲುವಿನಿಂದಲೂ, ಹಾವಭಾವವಿಲಾಸಗಳಿಂದಲೂ ಅವಳು ದೇವ, ದಾನವ, ಮಾನವ, ಗಂಧರ್ವರೆಲ್ಲರನ್ನೂ ಆಕರ್ಷಿಸಬಲ್ಲವಳಾಗಿದ್ದಳು!
ಅವಳು ಪೂರ್ವಚಿತ್ತಿ; ಸ್ವರ್ಗದ ಪ್ರಮುಖ ಅಪ್ಸರೆಯರಲ್ಲಿ ಒಬ್ಬಳು. ಅಗ್ನೀಧ್ರನ ಬಯಕೆಯನ್ನು ಅರಿತ ಬ್ರಹ್ಮದೇವನು ಅವನನ್ನು ಸೇವಿಸಲೆಂದು ಅವಳನ್ನು ಕಳಿಸಿದ್ದನು.
ಪೂರ್ವಚಿತ್ತಿಯು ವೈಯಾರದಿಂದ ಬಳುಬಳುಕಿ ನಡೆಯುತ್ತಾ, ದುಂಬಿಯಂತೆ ಆ ಉಪವನದಲ್ಲಿನ ಒಂದೊಂದು ಹೂವನ್ನೂ ಆಘ್ರಾಣಿಸತೊಡಗಿದಳು! ಅವಳು ಹಾಡುತ್ತಿದ್ದಂತೆ, ಸುಧೆ ಸೂಸಿದಂತಾಗಿ, ಅವಳ ನಿಶ್ವಾಸದಲ್ಲಿ ತುಂಬಿದ್ದ ಪರಿಮಳವನ್ನು ಆಸ್ವಾದಿಸುತ್ತಾ ಮದೋನ್ಮತ್ತಗೊಂಡು ಅವಳ ಕಂಗಳನ್ನು ಕಮಲಗಳೆಂದು ಭ್ರಮಿಸಿದ ಭ್ರಮರಗಳು ಅವಳ ಮುದ್ದು ಮುಖದ ಸುತ್ತಲೂ ಪರಿಭ್ರಮಿಸತೊಡಗಿದವು!

ಆ ಭ್ರಮರಗಳ ಬಾಧೆಯಿಂದ ಬೆದರುತ್ತಿದ್ದ ಆ ಬಾಲೆಯು ಅವನ್ನು ಓಡಿಸಲು ಕೈಯೆತ್ತಿದಾಗ, ಅವುಗಳಿಂದ ತಪ್ಪಿಸಿಕೊಳ್ಳಲು ಬೇಗ ಬೇಗನೇ ಹೆಜ್ಜೆ ಹಾಕಿದಾಗ, ಅವಳ ತುಂಬಿದ ಕುಚಕಲಶಗಳೂ, ಮೇಘಮಾಲೆಯಂಥ ಕೇಶರಾಶಿಯೂ, ನಿತಂಬಗಳನ್ನು ಸುತ್ತುವರಿದಿದ್ದ ಹೊನ್ನಿನ ಒಡ್ಯಾಣವೂ ಅಲುಗಾಡುತ್ತಾ ಅವಳ ಅಂದವನ್ನು ಹೆಚ್ಚಿಸುತ್ತಿದ್ದವು! ಆ ತರಳೆಯು ಸುಳಿದಾಡಿದಂತೆಲ್ಲಾ ಪುಷ್ಪಬಾಣನಾದ ಮದನನ ಸುಖಾಗಮನಕ್ಕೆ ಹೂಹಾದಿಯನ್ನು ನಿರ್ಮಿಸಿದಂತಾಗುತ್ತಿತ್ತು!
ಇಂಥ ಅಪೂರ್ವ ಸುಂದರಿಯನ್ನು ಕಂಡ ಅಗ್ನಿಧ್ರನು ಬೆಕ್ಕಸಬೆರಗಾದನು! ಅವಳ ಸೌಂದರ್ಯವೆ೦ಬ ಕಡಲಿನಲ್ಲಿ ಮುಳುಗಿ ಧ್ಯಾನ ಮಾಡಲಾರದಾದನು! ಕೆಲಕಾಲ, ಅವಳನ್ನೇ ದಿಟ್ಟಿಸಿ ನೋಡುತ್ತಾ ಜಡನಂತಾಗಿ ಮೌನವಾಗಿ ಕುಳಿತುಬಿಟ್ಟನು! ಅವನ ಮನಸ್ಸು ಸ೦ಪೂರ್ಣವಾಗಿ ಮನ್ಮಥನ ವಶವಾಗಿಹೋಯಿತು!
ಅಗ್ನೀಧ್ರನು ವಾಕ್ಚತುರನಾಗಿದ್ದನು; ಹೆಣ್ಣನು ಒಲಿಸಿಕೊಳ್ಳುವ ಕಲೆಯಲ್ಲಿ ನಿಷ್ಣಾತನಾಗಿದ್ದನು. ಪೂರ್ವಚಿತ್ತಿಯಲ್ಲಿ ಅವನು ಮೋಹಗೊಂಡ, ಅವಳನ್ನು ಪಡೆಯಲೋಸುಗ ಅವಳನ್ನು ಒಬ್ಬ ಪುರುಷ ಮುನಿಯೆಂಬಂತೆ ಮಾತನಾಡಿಸುತ್ತಾ ಅವಳನ್ನು ಅನ್ಯಮಾರ್ಗದಿಂದ ಹೊಗಳತೊಡಗಿದನು!
ಮುನಿವರ್ಯ!” ಅಗ್ನಿಧ್ರನು ತಾನು ಪೂರ್ವಚಿತ್ತಿಯನ್ನು ಒಬ್ಬ ಋಷಿಯೆಂದು ಭಾವಿಸಿರುವಂತೆ, ಹೆಣ್ಣನ್ನೇ ನೋಡಿರದ ಮುಗ್ಧನೆಂಬಂತೆ ಅವಳನ್ನು ಕರೆದ.
ಪೂರ್ವಚಿತ್ತಿಯು ಮೊದಲು ಅವನ ಕಡೆ ನೋಡದಿದ್ದರೂ, ಅವನು ಮತ್ತೆ ಮತ್ತೆ ಅವಳನ್ನೇ ನೋಡುತ್ತಾ ಹಾಗೆ ಕರೆಯಲು, ಅವನು ತನ್ನನ್ನೇ ಕರೆಯುತ್ತಿರುವನೆಂದು ಅರ್ಥೈಸಿಕೊಂಡು ಅವನ ಕಡೆ ನೋಡಿದಳು.
“ಎಲೈ ಮುನಿವರ್ಯ!” ಅಗ್ನೀಧ್ರನು ಹೇಳಿದನು, “ಯಾರು ನೀನು? ಈ ಮಂದರಾಚಲಕ್ಕೆ ಏಕೆ ಬಂದೆ? ಇಷ್ಟೊಂದು ರೂಪವಂತನಾಗಿರುವ ನೀನು ದೇವದೇವ ನಾದ ಆ ಭಗವಂತನ ಮಾಯೆಯಲ್ಲವಷ್ಟೇ?”
ಈ ಮಾತಿಗೆ ಪೂರ್ವಚಿತ್ತಿಯು ಹುಸಿಕೋಪ ತೋರಿ ತನ್ನ ಹುಬ್ಬೇರಿಸಿದಳು!
ಹೆಣ್ಣನ್ನು ಅಬಲೆಯೆನ್ನುವರು. ಆದರೆ ತನ್ನ ಭ್ರೂಲತಾವಿಲಾಸದಿಂದಲೇ ಯೋಗಿಗಳ ಮನವನ್ನೂ ಮಣಿಸುವ ಹೆಣ್ಣು ಸಬಲೆಯೇ ಅಲ್ಲವೇ?! ಈಗ ಅಗೀಧ್ರನೂ ಅದರಿಂದ ಸೋತು ಕೇಳಿದ, “ಶಿಂಜಿನಿಯಿಲ್ಲದ ಈ ಎರಡು ಬಿಲ್ಲುಗಳನ್ನೇಕೆ ನೀನು ತಂದಿರುವೆ? ನಿನಗಾಗಿಯೋ ಇಲ್ಲವೆ ನಿನ್ನ ಸ್ನೇಹಿತನಿಗಾಗಿಯೋ? ಬಹುಶಃ ಈ ವನದ ಮೃಗಗಳನ್ನು ಬೇಟೆಯಾಡಲು ನೀನು ಅವನ್ನು ತಂದಿರಬೇಕು!”
ಈ ಮಾತಿಗೆ ಪೂರ್ವಚಿತ್ತಿಯು ಮುಗುಳ್ಳಕ್ಕು ತನ್ನ ಕಡೆಗಣ್ಣ ಕುಡಿನೋಟವನ್ನು ಅವನಡ ಬೀರಿದಳು!
ಅವಳ ಆ ನೋಟವನ್ನು ಅಗ್ನಿಧ್ರ ವರ್ಣಿಸಿದ, “ಮಿತ್ರ ನೀನು ಎಂಥ ಬಲಯುತವಾದ ಬಾಣಗಳನ್ನು ಹೊಂದಿರುವ ಕಮಲದಳಗಳಂತಹ ಪುಕ್ಕಗಳನ್ನು ಹೊಂದಿರುವ ಈ ನಿನ್ನ ಎರಡು ಬಾಣಗಳು, ಪುಂಖವಿರದಿದ್ದರೂ ಬಹಳ ಸುಂದರವಾಗಿವೆ! ತೀಕ್ಷ್ಣವಾದ ತುದಿಗಳನ್ನು ಪಡೆದಿದ್ದರೂ ಬಹಳ ಶಾಂತವಾಗಿ ಕಾಣುವ ಇವು, ಯಾರಿಗಾದರೋ ಹೊಡೆಯುವುದೇ ತಿಳಿಯುವುದಿಲ್ಲ!
ನೀನು ಇವನ್ನು ಯಾರಿಗೋ ಹೊಡೆಯಲೆಂದು ಈ ವನದಲ್ಲಿ ಸಂಚರಿಸುತ್ತಿರುವೆ. ಆದರೆ ಯಾರಿಗೆಂದು ನನಗೆ ತಿಳಿಯದಲ್ಲ?! ನಾನು ಅಲ್ಪಬುದ್ಧಿಯುಳ್ಳವನು! ಅಯ್ಯೋ! ಯಾರಿಂದಲೂ ಸಮಗಟ್ಟಲಾಗದ ನಿನ್ನ ಪರಾಕ್ರಮಕ್ಕೆ ಎದುರಾಗಿ ನಾನು ಹೋರಾಡಲಾರೆ! ನಿನ್ನ ಬಲಪರಾಕ್ರಮಗಳು ನನ್ನ ಒಳತಿಗಾಗಿಯೇ ಇರಲಿ!”
ಪೂರ್ವಚಿತ್ತಿಯನ್ನು ಸುತ್ತುವರಿದಿದ್ದದುಂಬಿಗಳನ್ನು ಕಂಡು ಅಗ್ನಿಧ್ರನು ಹೇಳಿದನು, “ಮಿತ್ರ, ನಿನ್ನನ್ನು ಸುತ್ತುವರಿದಿರುವ ಈ ದುಂಬಿಗಳು ನಿನ್ನ ಶಿಷ್ಯರಂತಿದ್ದಾರೆ! ಅವರು ನಿರಂತರವಾಗಿ ಸಾಮವೇದ ಮತ್ತು ಉಪನಿಷತ್ತುಗಳ ಮಂತ್ರಗಳನ್ನು ಪಠಿಸುತ್ತಿರುವಂತಿದೆ! ಮಹಾನ್ ಋಷಿಗಳು ವೇದದ ವಿವಿಧ ಶಾಖೆಗಳನ್ನು ಅಭ್ಯಸಿಸುವಂತೆ, ಈ ದುಂಬಿಗಳು ನಿನ್ನ ಶಿರದಿಂದ ಬೀಳುತ್ತಿರುವ ಸುಂದರ ಸುಮಗಳ ಸುವಾಸನೆಯನ್ನು ಅಸ್ವಾದಿಸುತ್ತಿವೆ!”
ಪೂರ್ವಚಿತ್ತಿಯು ನಡೆದಾಡಿದಂತೆ, ಚಿಗುರೆಲೆಗಳಂಥ ಅವಳ ಮೃದುಪಾದಗಳನ್ನು ಅಲಂಕರಿಸಿದ್ದ ಕಿರುಗೆಜ್ಜೆಗಳು ಘಲು ಘಲುವೆಂದು ಮಧುರನಾದವುಂಟುಮಾಡುತ್ತಿದ್ದವು. ಅದನ್ನು ಗಮನಿಸಿ ಅಗ್ನೀಧ್ರನು ಹೇಳಿದನು, “ಎಲೈ ಬ್ರಾಹ್ಮಣನೇ! ನಿನ್ನ ಗೆಜ್ಜೆಗಳೆಂಬ ಚರಣಪಂಜರಗಳಲ್ಲಿ ತಿತ್ತಿರಿ ಪಕ್ಷಿಗಳು ಮನೆ ಮಾಡಿದಂತಿದೆ!
ಅವುಗಳ ರೂಪವು ಕಾಣದಿದ್ದರೂ ಅವು ಚಿಲಿಪಿಲಿಗುಟ್ಟುವುದು ಕೇಳುತ್ತಿದೆ! ಆಹಾ! ದುಂಡುದುಂಡಾದ ನಿನ್ನ ತುಂಬುನಿತಂಬಗಳು ಎಷ್ಟು ಸೊಗಸಾಗಿವೆ! ಕದಂಬ ಪುಷ್ಪಗಳ ಹೊನ್ನಿನ ಬಣ್ಣವನ್ನು ಅವು ಹೊಂದಿವೆ! ಆಹಾ! ಬಳ್ಳಿಯಂತೆ ಬಳುಕುವ ಈ ನಿನ್ನ ತೆಳ್ಳನೆಯ ನಡುವನ್ನು ಅಲಂಕರಿಸಿರುವ ಆ ಸುಂದರ ಒಡ್ಯಾಣವು ಪ್ರಜ್ವಲಿಸುವ ದೀಪಗಳಿಂದ ಮಾಡಿದಂತಿದೆ!
ಪ್ರಕೃತಿಯ ಸಾರಸೊಬಗನ್ನು ಸವಿಯಲು ಆತುರದಿಂದ ಬಂದಿರುವ ನೀನು ನಿನ್ನ ವಲ್ಕಲವನ್ನೇ ಧರಿಸಲು ಮರೆತಂತಿದೆ! ಎಲ್ಲಿನಿನ್ನ ವಲ್ಕಲ?!”
ಅಗ್ನಿಧ್ರನ ಹೊಗಳಿಕೆಯಿ೦ದ ನಾಚಿದ ಪೂರ್ವಚಿತ್ತಿಯು ಅವನ ಮುಖವನ್ನು ನೋಡಲು ಹಿಂಜರಿತ್ತಾ ಒಮ್ಮೆ ನೆಲವನ್ನೂ ಒಮ್ಮೆ ಪುಷ್ಪಲತೆಗಳನ್ನೂ ನೋಡುತ್ತಾ ನಿಂತಳು. ತಂಗಾಳಿಯು ಮಂದ ಮಂದವಾಗಿ ಬೀಸುತ್ತಾ ಅವಳ ಸೀರೆಯ ಸೆರಗನ್ನು ಮತ್ತೆ ಮತ್ತೆ ಹಾರಿಸುತ್ತಿರಲು, ಅವಳ ತುಂಬಿದ ಕುಚಕುಂಭಗಳನ್ನು ನೋಡಿ ಹುಚ್ಚನಂತಾದ ಅಗ್ನೀಧ್ರನು ಹೇಳತೊಡಗಿದನು, “ಎಲೈ ಬ್ರಾಹ್ಮಣೋತ್ತಮನೇ, ನಿನ್ನ ವಕ್ಷಸ್ಥಳದಲ್ಲಿ ಅದೇನು ಎರಡು ಆಕರ್ಷಕ ಶೃಂಗಗಳನ್ನು ಹೊತ್ತಿರುವೆ?!
ಆಶ್ಚರ್ಯವೆಂದರೆ, ನಿನ್ನ ನಡುವು ಬಹಳ ಸಣ್ಣಕ್ಕಿದ್ದರೂ ಬಹು ಕಷ್ಟದಿಂದ ಆ ಶೃಂಗಗಳನ್ನು ಹೊತ್ತಿದೆ! ಆ ಶೃಂಗಗಳಲ್ಲಿ ಏನು ತುಂಬಿಕೊಂಡಿರುವೆ? ಅವುಗಳ ಮೇಲೆ ಅದೇನೋ ಕೆ೦ಪು ಪುಡಿಯನ್ನು ಲೇಪಿಸಿಕೊಂಡಿರುವೆ! ಅರುಣೋದಯದ ವರ್ಣ ಹೊಂದಿರುವ ಆ ಕೆಂಪು ಅಂಗರಾಗದ ಪರಿಮಳ ನನ್ನ ಆಶ್ರಮವನ್ನೆಲ್ಲಾ ವ್ಯಾಪಿಸುತ್ತಿದೆ! ಆ ಅಂಗಾಂಗವು ನಿನಗೆಲ್ಲಿ ದೊರೆಯಿತು ಹೇಳುವೆಯಾ?!”

ಅಗ್ನೀಧ್ರನು ಅವಳನ್ನು ಇನ್ನೂ ಹೊಗಳಿದನು, “ಓ ಮಿತ್ರನೇ, ದಯವಿಟ್ಟು ನೀನು ವಾಸಿಸುವ ಸ್ಥಳವನ್ನು ತೋರಿಸುವೆಯಾ? ನನ್ನಂತಹವರ ಮನಸ್ಸನ್ನೂ ಕಂಗಳನ್ನೂ ಅವಿಶ್ರಾಂತಗೊಳಿಸುವ ಇಂಥ ತುಂಬಿದೆದೆಯ ಅನೇಕ ಜನರು ಅಲ್ಲಿರಬೇಕು! ಇಂಥ ಸುಂದರ ನಗುವನ್ನೂ ಮಧುರ ಧ್ವನಿಯನ್ನೂ ಪಡೆದಿರುವ ನಿನ್ನನ್ನು ನೋಡಿದರೆ, ಅಲ್ಲಿನ ಜನರ ಅಧರಗಳಲ್ಲಿ ಸುಧೆಯೇ ತುಂಬಿರಬೇಕೆನಿಸುತ್ತದೆ! ಅದಿರಲಿ, ನೀನು ಏನನ್ನು ತಿನ್ನುವೆ?
ನೀನು ವೀಳ್ಯವನ್ನು ಜಗಿಯುತ್ತಿರುವುದರಿಂದ ಒಳ್ಳೆಯ ಪರಿಮಳ ಹರಡುತ್ತಿದೆ! ಬಹುಶಃ ನೀನು ವಿಷ್ಣು ಪ್ರಸಾದವನ್ನೇ ಸೇವಿಸುವೆಯೇನೋ! ನೀನು ಶ್ರೀಹರಿಯ ಅಂಶವೂ ಇರಬಹುದು! ಆಹಾ! ನಿನ್ನ ಮುಖ, ಅಪ್ಯಾಯಮಾನವಾದ ಸರೋವರದಷ್ಟೇ ಸುಂದರವಾಗಿದೆ!
ನಿನ್ನ ಮಕರ ಕುಂಡಲಗಳು ವಿಷ್ಣುವಿನ ಕುಂಡಲಗಳಂತೆಯೇ ಸೊಗಸಾಗಿವೆ! ನಿನ್ನ ಕಂಗಳಾದರೋ ಚಂಚಲ ಮೀನುಗಳಂತೆ ಮುದ್ದಾಗಿವೆ! ನಿನ್ನ ಬಿಳಿಯ ದಂತ ಪಂಕ್ತಿಗಳು ಹಂಸಗಳ ಸಾಲಿನಂತಿವೆ! ನಿನ್ನ ಬೆನ್ನಿನ ಮೇಲೆ ಹರಡಿರುವ ಗುಂಗುರು ಕೇಶರಾಶಿ, ನಿನ್ನ ಮುಖ ಸರೋವರವನ್ನು ಮುತ್ತಿಡುತ್ತಿರುವ ದುಂಬಿಗಳ ಗುಂಪುಗಳಂತಿದೆ!”
ಅಗ್ನಿಧ್ರನ ಹೊಗಳಿಕೆಯ ಹಾಡನ್ನು ಕೇಳಿ ಪೂರ್ವಚಿತ್ತಿಯು ನಾಚಿ ನೀರಾದಳು! ಅವನ ಮುಂದೆ ನಿಲ್ಲಲಾಗದೆ, ತನ್ನ ಚಿಗುರೆಲೆ ಕೈಗಳಿಂದ ತನ್ನ ಮುಖಪುಷ್ಪವನ್ನಾವರಿಸಿಕೊಂಡು ನಸುನಗುತ್ತಾ ಓಡಿ ಹೋಗಿ ಅನತಿ ದೂರದಲ್ಲೇ ತನ್ನ ಪಾಡಿಗೆ ತಾನು ಚೆಂಡಾಡತೊಡಗಿದಳು!
“ಅಯ್ಯೋ ಮಿತ್ರ!” ಅಗ್ನಿಧ್ರ ಕೂಗಿ ಹೇಳಿದ, “ನನ್ನ ಮನಸ್ಸು ಈಗಾಗಲೇ ಚಂಚಲವಾಗಿದೆ! ಈಗ ನಿನ್ನ ಈ ಚೆಂಡಾಟದಿಂದ, ಪುಟಿಯುವ ಆ ಚೆಂಡಿನಂತೆಯೇ ನನ್ನ ಕಂಗಳೂ ಚಂಚಲವಾಗಿವೆ! ನಿನ್ನ ಕೇಶರಾಶಿಯು ಬಿಚ್ಚಿಹೋಗಿ ಎಲ್ಲೆಡೆ ಹರಡುತ್ತಿದೆಯಲ್ಲಾ ಅದನ್ನು ಸರಿಪಡಿಸಿಕೊಳ್ಳುವುದಿಲ್ಲವೇ? ಲಂಪಟನಾದ ಈ ತಂಗಾಳಿಯು ನಿನ್ನ ವಸ್ತ್ರವನ್ನೇ ಅಪಹರಿಸುತ್ತಿದ್ದಾನೆ! ನಿನಗೆ ಗಮನವೇ ಇಲ್ಲವೇ?….
“ಓ ತಪೋಧನನೇ, ತಪಸ್ವಿಗಳ ತಪೋಭಂಗ ಮಾಡುವ ಇಂಥ ಅಪೂರ್ವ ಸೌಂದರ್ಯವನ್ನು ಎಲ್ಲಿ ಸಂಪಾದಿಸಿದೆ? ಇಂಥ ಸೌಂದರ್ಯವನ್ನು ಗಳಿಸಲು ಎಂತಹ ತಪಸ್ಸನ್ನಾಚರಿಸಿದೆ? ಮಿತ್ರ, ನೀನು ದಯವಿಟ್ಟು ನನ್ನೊ೦ದಿಗೆ ಕುಳಿತು ತಪಸ್ಸು ಮಾಡು! ಬಹುಶಃ, ನನ್ನ ತಪಶ್ಚರ್ಯೆಯನ್ನು ಮೆಚ್ಚಿ ಆ ಬ್ರಹ್ಮದೇವನು ನಿನ್ನನ್ನು ಕಳಿಸಿರಬೇಕು! ಬ್ರಾಹ್ಮಣರಿಂದ ಪೂಜಿತನಾದ ಆ ಬ್ರಹ್ಮನೇ ನನ್ನಲ್ಲಿ ಕರುಣೆ ತೋರಿ ನಿನ್ನನ್ನು ಕಳುಹಿಸಿದ್ದಾನೆ!
ಇದು ಖಂಡಿತ! ಇನ್ನು ನಾನು ನಿನ್ನನ್ನು ಬಿಡಲಾರೆ! ನನ್ನ ಕಂಗಳು, ಮನಸ್ಸು ನಿನ್ನಲ್ಲೇ ಸೇರಿ ಹೋಗಿವೆ! ಅವನ್ನು ಹಿ೦ದೆಗೆಯಲಾಗುತ್ತಿಲ್ಲ! ನಾನು ನಿನ್ನ ಹಿಂಬಾಲಕನಾಗುತ್ತೇನೆ! ನೀನು ನನ್ನನ್ನು ನಿನ್ನ ಮನಬಂದೆಡೆಗೆ ಕರೆದೊಯ್ಯಬಹುದು! ನಿನ್ನ ಶಿಷ್ಯರೂ ಹಿಂಬಾಲಿಸಲಿ!”
ದೇವತೆಗಳಂತೆ ಬುದ್ಧಿಶಾಲಿಯಾದ ಅಗ್ನೀಧ್ರನು, ರತಿಚಾತುರ್ಯದಿಂದ ಕೂಡಿದ ಇ೦ಥ ಶೃಂಗಾರವರ್ಣನೆಯಿಂದ ಪೂರ್ವಚಿತ್ತಿಯ ಮನಸ್ಸನ್ನು ತಣಿಸಿಬಿಟ್ಟನು! ಸ್ತ್ರೀಯರನ್ನು ಹೀಗೆ ಹೊಗಳಿ ತನ್ನೆಡೆಗೆ ಒಲಿಸಿಕೊಳ್ಳುವುದರಲ್ಲಿ ಅವನು ನಿಷ್ಣಾತನಾಗಿದ್ದನು.
ಅವನ ರೂಪ, ಯೌವನ, ಗುಣ, ವಾಕ್ಚಾತುರ್ಯಗಳಿಂದ ಪೂರ್ವಚಿತ್ತಿಯು ಆಕರ್ಷಿತಳಾಗಿ, ನಿಧಾನವಾಗಿ ಹಂಸದಂತೆ ಅವನೆಡೆಗೆ ನಡೆದು ಬಂದಳು; ಮೆಲ್ಲನೆ ಮುಗುಳ್ನಗುತ್ತಾ, ಕೆಳಮುಖಳಾಗಿ ನಾಚಿಕೆಯನ್ನು ವ್ಯಕ್ತಪಡಿಸುತ್ತಾ, ಉಂಗುಷ್ಠದುಗುರಿನಿಂದ ನೆಲದಲ್ಲಿ ಚಿತ್ತಾರ ಬಿಡಿಸುತ್ತಾ ನಿಧಾನವಾಗಿ ನುಡಿದಳು, “ನಾನು ದೇವಲೋಕದ ಅಪ್ಸರೆ…. ಪೂರ್ವಚಿತ್ತಿ. ರಾಜಾ, ನಿನ್ನನ್ನು ಸೇವಿಸಲೆಂದು ಬ್ರಹ್ಮದೇವನೇ ನನ್ನನ್ನು ಕಳಿಸಿದ್ದಾನೆ. ನನಗೂ… ನಿನ್ನಲ್ಲಿ ಮೋಹವುಂಟಾಗಿದೆ.”
ಸಂತೋಷಗೊಂಡ ಅಗ್ನೀಧ್ರನು ತನ್ನ ನೀಳ ತೋಳುಗಳಿಂದ ಪೂರ್ವಚಿತ್ತಿಯನ್ನು ಆಲಿಂಗಿಸಿ ಚುಂಬಿಸಿದನು. ಪೂರ್ವಚಿತ್ತಿಯು ಅವನ ಪ್ರೇಮದಲ್ಲಿ ಕರಗಿಹೋದಳು!
ಅಗ್ನೀಧ್ರನು ಪೂರ್ವಚಿತ್ತಿಯನ್ನು ತನ್ನ ರಾಜ್ಯಕ್ಕೆ ಕರೆದೊಯ್ದು ಅವಳನ್ನು ವರಿಸಿದರು. ಅವರಿಬ್ಬರೂ ಸಾವಿರಾರು ವರ್ಷಗಳ ಕಾಲ ಭೂಲೋಕದ ಮತ್ತು ಸ್ವರ್ಗೀಯ ಸುಖಗಳನ್ನು ಅನುಭವಿಸಿದರು!
ವರ್ಷಕ್ಕೆ ಒಂದರಂತೆ, ಪೂರ್ವಚಿತ್ತಿಯು ಅಗ್ನೀಧ್ರನಿಗೆ, ನಾಭಿ, ಕಿಂಪುರುಷ, ಹರಿವರ್ಷ, ಇಳಾವೃತ, ರಮ್ಯಕ, ಹಿರಣ್ಮಯ, ಕುರು, ಭದ್ರಾಶ್ವ ಮತ್ತು ಕೇತುಮಾಲ ಎಂಬ ಒಂಬತ್ತು ಪುತ್ರರನ್ನು ಹೆತ್ತುಕೊಟ್ಟಳು!
ತಾಯಿಯ ಅನುಪಮ ಪ್ರೀತಿಯ ಆರೈಕೆಯಿಂದ ಆ ಒಂಬತ್ತು ಮಕ್ಕಳೂ ದೃಢಕಾಯರಾಗಿ ಸುಂದರವಾಗಿ ಬೆಳೆದರು. ಅಗೀಧ್ರನು ಜಂಬೂದ್ವೀಪವನ್ನು ಒಂಬತ್ತು ಭಾಗಗಳನ್ನಾಗಿ ವಿಂಗಡಿಸಿ ಒಬ್ಬೊಬ್ಬರಿಗೂ ಒಂದೊಂದು ಭಾಗವನ್ನು ಆಳಲೆಂದು ಕೊಟ್ಟನು. ಆ ಒಂಬತ್ತು ಭಾಗಗಳೂ ಅವರ ಹೆಸರುಗಳಿಂದಲೇ ಕರೆಯಲ್ಪಟ್ಟುವು (ಇಳಾವೃತವರ್ಷ, ಕೇತುಮಾಲವರ್ಷ, ಈ ರೀತಿ).
ಮಕ್ಕಳೆಲ್ಲರೂ ಈ ರೀತಿ ಬೆಳೆದು ರಾಜರಾಗಲು, ಪೂರ್ವಚಿತ್ತಿಯು ಗೃಹವನ್ನು ತ್ಯಜಿಸಿ ದೇವಲೋಕಕ್ಕೆ ಹಿಂದಿರುಗಿ ಬ್ರಹ್ಮದೇವನ ಸೇವೆಯಲ್ಲಿ ನಿರತಳಾದಳು. ದೇವಲೋಕದ ಅಪ್ಸರೆ ಎಷ್ಟು ಕಾಲ ತಾನೇ ಭೂಲೋಕದಲ್ಲಿರಲು ಸಾಧ್ಯ?
ಆಗೀಧ್ರನು ಪೂರ್ವಚಿತ್ತಿಯೊಂದಿಗೆ ಎಷ್ಟೇ ಸುಖಭೋಗಗಳನ್ನನುಭವಿಸಿದ್ದರೂ ಅವನಿಗೆ ತೃಪ್ತಿಯುಂಟಾಗಿರಲಿಲ್ಲ. ಅವಳ ವಿರಹವನ್ನು ತಾಳಲಾರದೆ ಸದಾ ಅವಳನ್ನೇ ಸ್ಮರಿಸುತ್ತಿದ್ದ ವೈದಿಕ ವಿಧಿಗಳನ್ನು ಅವನು ಅವಳ ಸಮಾಗಮದ ಬಯಕೆಯಿಂದ ಆಚರಿಸುತ್ತಾ, ಮರಣದ ಬಳಿಕ, ಪಿತೃ ದೇವತೆಗಳು ಸುಖವನ್ನನುಭವಿಸುವ ಅವಳ ಲೋಕವನ್ನೇ, ಅಂದರೆ ಪಿತೃಲೋಕವನ್ನು ಪಡೆದ.
ಹೀಗೆ ಅವನು ಪೂರ್ವಚಿತ್ತಿಯೊಂದಿಗೆ ಪುನರ್ಮಿಲನ ಹೊಂದಿದನಲ್ಲದೆ, ಪಿತೃಲೋಕವನ್ನು ಹೊಂದಬೇಕೆಂಬ ನನ್ನ ಬಯಕೆಯನ್ನು ಪೂರೈಸಿಕೊಂಡ.
ಅಗ್ನೀಧ್ರನು ದಿವ್ಯಲೋಕವನ್ನೈದಿದ ಬಳಿಕ, ಅವನ ಒಂಬತ್ತು ಮಕ್ಕಳು, ಮೇರುವಿನ ಒಂಬತ್ತು ಕನ್ಯೆಯರಾದ ಮೇರುದೇವಿ, ಪ್ರತಿರೂಪೆ, ಉಗ್ರದಂಷ್ಟ್ರಿ, ಲತೆ, ರಮ್ಯಾ, ಶ್ಯಾಮಾ, ನಾರೀ, ಭದ್ರೆ ಮತ್ತು ದೇವವೀತಿ ಎಂಬುವವರನ್ನು ವರಿಸಿ ಸುಖಸಂತೋಷಗಳಿಂದ ಬಾಳತೊಡಗಿದರು.






Leave a Reply