ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಕೆಲವು ಶಿಷ್ಯರ ನಡುವೆ ಪಶ್ಚಿಮ ವರ್ಜೀನಿಯಾದ ನವ ವೃಂದಾವನದಲ್ಲಿ ಜೂನ್ 24, 1976ರಂದು ನಡೆದ ಸಂವಾದ.
ಶಿಷ್ಯ : ಶ್ರೀಲ ಪ್ರಭುಪಾದರೇ, “ಟ್ರ್ಯಾಕ್ಟರ್ ಎಲ್ಲ ತೊಂದರೆಗಳಿಗೆ ಕಾರಣ. ಅದು ಯುವಕರ ಕೃಷಿ ಕಾರ್ಯವನ್ನು ಕಿತ್ತುಕೊಂಡಿತು. ಅದು ಅವರು ನಗರಕ್ಕೆ ಹೋಗುವಂತೆ ಮಾಡಿತು ಮತ್ತು ಅವರು ಲೌಕಿಕ ವಿಷಯಗಳಲ್ಲಿ ಬಂದಿಯಾಗುವಂತೆ ಮಾಡಿತು” ಎಂದು ನೀವು ಒಮ್ಮೆ ಹೇಳಿದ್ದಿರಿ. “ಜನರು ಹಳ್ಳಿಗಳನ್ನು ಮತ್ತು ಸಾತ್ತ್ವಿಕವಾದ ಸರಳ ಜೀವನವನ್ನು ಹಾಗೂ ದೈವ ಪ್ರಜ್ಞೆಯನ್ನು ಬಿಡಬೇಕಾಯಿತು. ಆದುದರಿಂದ ಅವರು ನಗರಕ್ಕೆ ಅನಿವಾರ್ಯವಾಗಿ ಹೋಗಬೇಕಾಯಿತು ಮತ್ತು ಆತಂಕದ ಜೀವನ, ಭಾವೋದ್ರೇಕದಲ್ಲಿ ಸಿಕ್ಕಿಕೊಳ್ಳಬೇಕಾಯಿತು” ಎಂದು ನೀವು ಹೇಳಿದಿರಿ.
ಶ್ರೀಲ ಪ್ರಭುಪಾದ : ಹೌದು. ನಗರದಲ್ಲಿ ಜನರು ಸಹಜವಾಗಿ ಭಾವೋದ್ರೇಕಕ್ಕೆ ಒಳಗಾಗುತ್ತಾರೆ. ಅನಗತ್ಯ ಇಂದ್ರಿಯ ತೃಷ್ಣೆ ಮತ್ತು ಹೆಣಗಾಟದಿಂದ ಸತತ ಆತಂಕ. ನಮ್ಮ ಮನಸ್ಸು ಮತ್ತು ಇಂದ್ರಿಯಗಳನ್ನು ಉದ್ರೇಕಿಸಲು ನಗರದಲ್ಲಿ ನಾವು ವಿವಿಧ ಕೃತಕ ವಸ್ತುಗಳಿಂದ ಸುತ್ತುವರಿಯಲ್ಪಟ್ಟಿರುತ್ತೇವೆ. ಸೌಲಭ್ಯಗಳಿದ್ದರೆ ನಾವು ಸಹಜವಾಗಿ ಕಾಮಾತುರರಾಗುತ್ತೇವೆ. ನಾವು ಈ ಭಾವೋದ್ರೇಕದ ರೀತಿಯನ್ನು ಸ್ವೀಕರಿಸುತ್ತೇವೆ ಮತ್ತು ಆತಂಕದಿಂದ ಕೂಡಿದವರಾಗುತ್ತೇವೆ.

ಶಿಷ್ಯ : ಗ್ರಾಮ ಪ್ರದೇಶವು ಹೆಚ್ಚು ಪ್ರಶಾಂತವಾಗಿದೆ ಮತ್ತು ಆಧ್ಯಾತ್ಮಿಕ ಜೀವನದ ಬಗೆಗೆ ಯೋಚಿಸುವುದು ಸುಲಭ.
ಶ್ರೀಲ ಪ್ರಭುಪಾದ : ಹೌದು. ಅಲ್ಲಿ ಕಡಮೆ ರೋಗಗಳಿವೆ. ಎಲ್ಲವೂ ಮಿದುಳಿಗೆ ಕಡಮೆ ದಣಿವು ನೀಡುವಂತಹವು. ಹಳ್ಳಿಗಳಲ್ಲಿ ಈ ಲೌಕಿಕ ಲೋಕದ ತೀವ್ರ ಯಾತನೆಗಳು ಕಡಮೆ. ಆದುದರಿಂದ ನೀವು ನಿಮ್ಮ ಬದುಕನ್ನು ನಿಜವಾದ ಲಾಭಕ್ಕಾಗಿ ರೂಪಿಸಿಕೊಳ್ಳಬಹುದು. ಆಧ್ಯಾತ್ಮಿಕ ಲಾಭ. ದೇವರನ್ನು ಅರಿತುಕೊಳ್ಳಿ. ಕೃಷ್ಣ ಪ್ರಜ್ಞಾವಂತರಾಗಿ. ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯ ಸಮೀಪದಲ್ಲಿ ದೇವಸ್ಥಾನವಿದ್ದರೆ, ನಿಮ್ಮದು ಅತ್ಯಂತ ಸುಖಸಂತೋಷದ ಬದುಕಾಗುತ್ತದೆ. ನೀವು ನಿಮ್ಮ ಆಹಾರಕ್ಕಾಗಿ ಸ್ವಲ್ಪ ಮಾತ್ರ ದುಡಿಯಬೇಕು. ಬಿತ್ತನೆಗೆ ಒಂದೂವರೆ ತಿಂಗಳು ಮತ್ತು ಕೊಯ್ಲಿಗೆ ಒಂದೂವರೆ ತಿಂಗಳು ದುಡಿದರೆ ಸಾಕು. ನಿಮ್ಮ ಉಳಿದ ಸಮಯದಲ್ಲಿ ನೀವು ಸಾಂಸ್ಕೃತಿಕವಾಗಿ ಸಮೃದ್ಧರಾಗುವಿರಿ. ನೀವು ಭಗವಂತನ ಸಾಕ್ಷಾತ್ಕಾರಕ್ಕಾಗಿ ಮತ್ತು ಕೃಷ್ಣ ಪ್ರಜ್ಞಾವಂತರಾಗಲು ನಿಮ್ಮ ಎಲ್ಲ ಪ್ರತಿಭೆ ಮತ್ತು ಶಕ್ತಿಯನ್ನು ತೊಡಗಿಸಬಹುದು. ಅದು ಆದರ್ಶನೀಯ ಬದುಕು.
ಈ ಹೂವಿನ ಮೇಲೆ ಸೂಕ್ಷ್ಮವಾದ ಎಲೆಗಳ ರಚನೆಯನ್ನು ನೋಡಿ. ಇಂತಹ ಸಣ್ಣ, ನಾಜೂಕಿನ ಎಲೆಗಳ ರಚನೆಯನ್ನು ಈ ಲೋಕದ ಬೇರೆ ಯಾವುದೇ ಉತ್ಪಾದನಾ ವಿಧಾನಕ್ಕೆ ಮಾಡುವುದು ಸಾಧ್ಯವಿಲ್ಲ. ಎಂತಹ ಅದ್ಭುತ ಬಣ್ಣ! ನೀವು ಒಂದೇ ಒಂದು ಹೂವಿನ ಅಧ್ಯಯನ ಮಾಡಿ ಸಾಕು, ನೀವು ದೈವಪ್ರಜ್ಞಾವಂತರಾಗುತ್ತೀರಿ.
ನಾವು `ಪ್ರಕೃತಿ’ ಎಂದು ಕರೆಯುವ ಯಂತ್ರ ವ್ಯವಸ್ಥೆಯಿದೆ. ನಾವು ನಮ್ಮ ಸುತ್ತಮುತ್ತ ನೋಡುವ ಪ್ರತಿಯೊಂದೂ ಅದರಿಂದಲೇ ಬರುತ್ತಿದೆ. ಈ ಯಾಂತ್ರಿಕ ಕೌಶಲ ಅದು ಹೇಗೆ ಅಷ್ಟೊಂದು ಪರಿಪೂರ್ಣ? ಈ ಯಾಂತ್ರಿಕ ಕೌಶಲವನ್ನು ರೂಪಿಸಿದವರು ಯಾರು?
ಶಿಷ್ಯ : ಒಮ್ಮೆ ನೀವು ಲಂಡನ್ನಿನಲ್ಲಿ ಹೇಳಿದಿರಿ, “ಹೂವುಗಳನ್ನು ಚಿತ್ರಿಸಲಾಗಿದೆ ಎನ್ನುವುದು ಜನರಿಗೆ ಗೊತ್ತಿಲ್ಲ. ಕೃಷ್ಣನು ಅವುಗಳನ್ನು ಚಿಂತನೆಯಿಂದ ಚಿತ್ರಿಸುತ್ತಿದ್ದಾನೆ.”
ಶ್ರೀಲ ಪ್ರಭುಪಾದ : ಹೌದು. ಕಲಾವಿದನ ಸ್ಪರ್ಶವಿಲ್ಲದೆ ಹೂವು ತನಗೆ ತಾನೇ ಇಷ್ಟು ಸುಂದರವಾಗಿಬಿಟ್ಟಿದೆ ಎಂದು ಬಹಳ ಜನರು ಯೋಚಿಸುತ್ತಾರೆ. ಇದು ಮೂರ್ಖತನ. `ಪ್ರಕೃತಿಯು ಇದನ್ನು ಮಾಡಿದೆ.’ ಯಾರ ಪ್ರಕೃತಿ? ಎಲ್ಲವೂ ಕೃಷ್ಣನ ಸಹಜ ಯಾಂತ್ರಿಕ ಕೌಶಲದಿಂದ ಆಗುತ್ತಿದೆ. ಪರಾಸ್ಯ ಶಕ್ತಿರ್ ವಿವಿಧೈವ ಶ್ರೂಯತೇ : ಭಗವಂತನು ತನ್ನ ಅಸಂಖ್ಯ, ಅಚಿಂತ್ಯ ಶಕ್ತಿಗಳಿಂದ ಎಲ್ಲವನ್ನೂ ಸಂಯೋಜಿಸುತ್ತಿದ್ದಾನೆ.

ಅದಿರಲಿ, ಈ ಸಹಜ ಬದುಕಿನ ರೀತಿಯನ್ನು, ವಿಸ್ತಾರವಾದ ಬಹಿರಂಗ ಪ್ರದೇಶದಲ್ಲಿನ ಬದುಕನ್ನು ಪ್ರೀತಿಸಲು ಕಲಿಯಿರಿ. ನಿಮ್ಮದೇ ಧವಸ ಧಾನ್ಯಗಳನ್ನು ಬೆಳೆಯಿರಿ. ನಿಮಗೆ ಬೇಕಾದ ಹಾಲನ್ನು ಉತ್ಪಾದಿಸಿಕೊಳ್ಳಿ. ಸಮಯವನ್ನು ಉಳಿಸಿ. ಹರೇ ಕೃಷ್ಣ ಮಂತ್ರವನ್ನು ಜಪಿಸಿ. ಭಗವಂತನ ಪವಿತ್ರ ನಾಮಗಳನ್ನು ಕೊಂಡಾಡಿ. ಜನ್ಮದ ಕೊನೆಯಲ್ಲಿ, ಶಾಶ್ವತವಾಗಿ ಇರಲು ಆಧ್ಯಾತ್ಮಿಕ ಲೋಕಕ್ಕೆ ಹಿಂದಿರುಗಿ. ಸರಳ ಬದುಕು, ಉನ್ನತ ಚಿಂತನೆ – ಅದೇ ಆದರ್ಶ ಜೀವನ.
ಆಧುನಿಕ, ಕೃತಕ `ಬದುಕಿನ ಅಗತ್ಯಗಳು’ ನಿಮ್ಮ `ಸೌಲಭ್ಯ’ಗಳನ್ನು ಹೆಚ್ಚಿಸುವಂತೆ ಕಾಣಿಸುತ್ತವೆ. ಆದರೆ ನೀವು ಬದುಕಿನ ನಿಜವಾದ ಗುರಿಯನ್ನು ಮರೆತರೆ, ಅದು ಆತ್ಮಘಾತಕ. ನಾವು ಈ ಆತ್ಮಘಾತಕ ನೀತಿಯನ್ನು ತಡೆಯಲು ಇಚ್ಛಿಸುತ್ತೇವೆ. ತಂತ್ರಜ್ಞಾನದ ಆಧುನಿಕ ಪ್ರಗತಿಯನ್ನು ನಿಲ್ಲಿಸಲು ನಾವು ನೇರವಾಗಿ ಪ್ರಯತ್ನಿಸುವುದಿಲ್ಲ. `ತಂತ್ರಜ್ಞಾನ ಪ್ರಗತಿ’ ಎಂಬುವುದು ಆತ್ಮಘಾತಕ.
ಆದರೆ ಜನರು ಈ `ಪ್ರಗತಿ’ಗೆ ತುಂಬ ಅಂಟಿಕೊಂಡಿದ್ದಾರೆ. ಆದುದರಿಂದ ಶ್ರೀ ಚೈತನ್ಯ ಮಹಾಪ್ರಭು 500 ವರ್ಷಗಳ ಹಿಂದೆ ಆವಿರ್ಭವಿಸಿದಾಗ, ಅವರು ಸರಳ ಸೂತ್ರವನ್ನು ನೀಡಿದರು : ಹರೇ ಕೃಷ್ಣ ಎಂದು ಜಪಿಸಿ. ನಿಮ್ಮ ತಾಂತ್ರಿಕ ಕಾರ್ಖಾನೆಗಳಲ್ಲಿಯೂ ಕೂಡ ನೀವು ಜಪಿಸಬಹುದು. ನೀವು ನಿಮ್ಮ ಯಂತ್ರಗಳನ್ನು ನೂಕುತ್ತ ಎಳೆಯುತ್ತಲೇ `ಹರೇ ಕೃಷ್ಣ, ಹರೇ ಕೃಷ್ಣ’ ಎಂದು ಜಪಿಸಿ. ನೀವು ಭಗವಂತನಿಗೆ ಅರ್ಪಿಸಿಕೊಳ್ಳಬಹುದು. ಅದರಲ್ಲಿ ತಪ್ಪೇನಿದೆ?
ಶಿಷ್ಯ : ವ್ಯಕ್ತಿಯು ಭಗವಂತನ ನಾಮವನ್ನು ಜಪಿಸಲು ಆರಂಭಿಸಿದ ಕೂಡಲೇ ತಂತ್ರಜ್ಞಾನದ ಆತಂಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುವನು ಎಂದು ನಾಯಕರಿಗೆ ಗೊತ್ತು.
ಶ್ರೀಲ ಪ್ರಭುಪಾದ : ಅದು ಸಹಜ.
ಶಿಷ್ಯ : ಆದುದರಿಂದ ನೀವು ವಿನಾಶದ ಬೀಜವನ್ನು ಬಿತ್ತುತ್ತಿರುವಿರಿ ಎನ್ನುವುದು ನಾಯಕರಿಗೆ ಗೊತ್ತು.
ಶ್ರೀಲ ಪ್ರಭುಪಾದ : ಎಲ್ಲಿದೆ `ವಿನಾಶ’? ಬದಲಿಗೆ ಇದು ರಚನೆ, ಸಂಯೋಜನೆ : ದೇವರಿಗೆ ನಿಮ್ಮನ್ನು ಅರ್ಪಿಸಿಕೊಳ್ಳಿ ಮತ್ತು ಶಾಶ್ವತವಾಗಿ ಬದುಕಿ. ಇದು ಸರಿಯಾದ ಮಾರ್ಗ. ಅದನ್ನು ಅನುಸರಿಸಿ. ನೀವು ಸದಾ ಬದುಕಿರುವಿರಿ.

ನಮ್ಮ ವಿಧಾನದಿಂದ, ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ. ನಿಮ್ಮ ಈಗಿನ ಭೌತಿಕ ದೇಹವನ್ನು ಬಿಟ್ಟಮೇಲೆ ನಿಮಗೆ ಇನ್ನು ಲೌಕಿಕ ದೇಹಗಳು ದೊರೆಯುವುದಿಲ್ಲ. ನೀವು ನಿಮ್ಮ ಆಧ್ಯಾತ್ಮಿಕ ದೇಹವನ್ನು ಪುನಃ ಪಡೆದುಕೊಳ್ಳುವಿರಿ ಮತ್ತು ಆಧ್ಯಾತ್ಮಿಕ ಲೋಕಕ್ಕೆ ಹಿಂದಿರುಗುವಿರಿ. ಈ ಆಧ್ಯಾತ್ಮಿಕ ಸಾಕ್ಷಾತ್ಕಾರವಿಲ್ಲದೆ, ತಥಾ ದೇಹಾಂತರ ಪ್ರಾಪ್ತಿಃ ನೀವು ನಿಮ್ಮ ಈಗಿನ ಭೌತಿಕ ದೇಹವನ್ನು ಬಿಟ್ಟಾಗ, ನೀವು ಮತ್ತೊಂದು ಲೌಕಿಕ ದೇಹವನ್ನು ಸ್ವೀಕರಿಸಬೇಕು.
ಆದುದರಿಂದ ಬದುಕಿನ ಎರಡು ವಿಧಾನಗಳನ್ನು ಪರಿಗಣಿಸಿ. ಯಾವುದು ಉತ್ತಮ? ಹೆಚ್ಚು ಭೌತಿಕ ದೇಹಗಳನ್ನು ಸ್ವೀಕರಿಸುವ `ಪ್ರಗತಿದಾಯಕ’ ವಿಧಾನ, ಅಥವಾ ಇನ್ನು ಲೌಕಿಕ ದೇಹಗಳನ್ನು ಸ್ವೀಕರಿಸುವುದಿಲ್ಲ ಎಂಬ ನಮ್ಮ `ಹಳೆಯ’ ವಿಧಾನ. ಯಾವುದು ಉತ್ತಮ?
ನೀವು ಲೌಕಿಕ ದೇಹವನ್ನು ಪಡೆದ ಕೂಡಲೇ ನೋವು ಅನುಭವಿಸಬೇಕು : ಜನ್ಮ, ವೃದ್ಧಾಪ್ಯ, ರೋಗ ಮತ್ತು ಸಾವು. ಲೌಕಿಕ ದೇಹ ಎಂದರೆ ನೋವು. ಆದುದರಿಂದ, ನಾವು ಈಗಿನ ದೇಹವನ್ನು ತೊರೆದಾಗ ನಾವು ನೋವು ಅನುಭವಿಸುವುದಿಲ್ಲ ಎಂದು ಸಿದ್ಧತೆ ಮಾಡಿಕೊಂಡರೆ ಅದು ಬುದ್ಧಿವಂತಿಕೆ. ಆದರೆ ಇನ್ನಷ್ಟು ನೋವು ಅನುಭವಿಸಲು ಇನ್ನೊಂದು ದೇಹವನ್ನು ಸ್ವೀಕರಿಸಲು ನಾವು ಸಿದ್ಧತೆ ಮಾಡಿಕೊಂಡರೆ ಅದು ಬುದ್ಧಿವಂತಿಕೆಯೇ? ನೀವು ಭಗವಂತನನ್ನು ಅರ್ಥಮಾಡಿಕೊಳ್ಳದಿದ್ದರೆ, ಕೃಷ್ಣನನ್ನು ಅರ್ಥ ಮಾಡಿಕೊಳ್ಳದಿದ್ದರೆ ನೀವು ಲೌಕಿಕ ಲೋಕದಲ್ಲಿಯೇ ಇರಬೇಕು ಮತ್ತು ಇನ್ನೊಂದು ದೇಹವನ್ನು ಸ್ವೀಕರಿಸಬೇಕು. ಇದಕ್ಕೆ ಪರ್ಯಾಯವಿಲ್ಲ.
ಈಗ ನಮ್ಮ ವಿಧಾನ. ಮೊದಲು ನಾವು ಅರ್ಥಮಾಡಿಕೊಳ್ಳುತ್ತೇವೆ, ನ ಹನ್ಯತೇ ಹನ್ಯಮಾನೇ ಶರೀರೇ : ದೇಹವು ಕೊನೆ ಮುಟ್ಟಿದಾಗ, ಆತ್ಮವು ಬದುಕುತ್ತಲೇ ಇರುತ್ತದೆ. ದುರದೃಷ್ಟವಶಾತ್, ಅನೇಕ ಜನರು ಎಷ್ಟು ಮಂದ ಬುದ್ಧಿಯವರೆಂದರೆ ಅವರಿಗೆ ಈ ಸರಳ ಸತ್ಯವೂ ಅರ್ಥವಾಗುವುದಿಲ್ಲ. ಮಗುವಿನ ದೇಹವು ಬಾಲ್ಯದ ದೇಹವನ್ನು ಪಡೆದುಕೊಳ್ಳುವುದನ್ನು, ಅನಂತರ ಹದಿಹರೆಯದ ದೇಹ, ಅದರ ಅನಂತರ ಪ್ರೌಢ ದೇಹ ಮತ್ತು ಅದಾದ ಮೇಲೆ ವೃದ್ಧನ ದೇಹವನ್ನು ಪಡೆದುಕೊಳ್ಳುವುದನ್ನು ಜನರು ತಮ್ಮ ನಿತ್ಯ ಜೀವನದಲ್ಲಿ ನೋಡುತ್ತಾರೆ. ಆತ್ಮವು ಒಂದರಿಂದ ಮತ್ತೊಂದಕ್ಕೆ ದೇಹಾಂತರಗೊಳ್ಳುವುದನ್ನು ಜನರು ತಮ್ಮ ಕಣ್ಣುಗಳಿಂದಲೇ ನೋಡುತ್ತಾರೆ.

ಆದಾಗ್ಯೂ, ಸಾವಿನ ಸಮಯದಲ್ಲಿ ವೃದ್ಧ ದೇಹವು ಕೊನೆಗೊಂಡಾಗ, ಆತ್ಮವು ಮತ್ತೊಂದು ದೇಹಕ್ಕೆ ಹೋಗುತ್ತದೆ. ಅದು ಲೌಕಿಕ ಅಥವಾ ಆಧ್ಯಾತ್ಮಿಕ ದೇಹವಿರಬಹುದು. ಆದರೆ ಮಂದಬುದ್ಧಿಯ ಜನರಿಗೆ ಅದು ಅರ್ಥವಾಗುವುದಿಲ್ಲ. ಅವರೆಷ್ಟು ಮಂದಬುದ್ಧಿಯವರೆಂದರೆ, ದೇಹ ಮತ್ತು ಆತ್ಮದ ನಡುವಣ ಸರಳ ವ್ಯತ್ಯಾಸವನ್ನು ಅವರು ಕಂಡುಕೊಳ್ಳಲಾರರು. ಈ ಸರಳ ಸತ್ಯವನ್ನು ಅವರಿಗೆ ಬೋಧಿಸಲು 500 ವರ್ಷಗಳು ಬೇಕು – ಅವರ ಶಿಕ್ಷಣ ಅಷ್ಟು ಮುಂದುವರಿದಿದೆ.
(ಮುಂದುವರಿಯುವುದು)