ಸರಳ ಬದುಕು ಉನ್ನತ ಚಿಂತನೆ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಭಕ್ತರ ನಡುವೆ ನವ ವೃಂದಾವನದಲ್ಲಿ, 1976 ಜೂನ್‌ನಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ: ಪಾಶ್ಚಿಮಾತ್ಯ ನಾಗರಿಕತೆಯು ಜುಗುಪ್ಸೆ ಉಂಟು ಮಾಡುತ್ತದೆ. ಅದು ಬದುಕಿನ ಅಗತ್ಯಗಳನ್ನು ಕೃತಕವಾಗಿ ಹೆಚ್ಚಿಸುತ್ತದೆ. ಉದಾಹರಣೆಗೆ ವಿದ್ಯುತ್‌ ದೀಪವನ್ನೇ ತೆಗೆದುಕೊಳ್ಳಿ. ವಿದ್ಯುತ್‌ ದೀಪ ಬೆಳಗಲು ಜನರೇಟರ್‌ ಬೇಕು, ಜನರೇಟರ್‌ ಓಡಿಸಲು ಪೆಟ್ರೋಲಿಯಂ ಬೇಕು.  ಪೆಟ್ರೋಲಿಯಂ ಪೂರೈಕೆ ಸ್ಥಗಿತಗೊಂಡರೆ ಎಲ್ಲವೂ ಸ್ತಬ್ಧ. ಆದರೆ  ಪೆಟ್ರೋಲಿಯಂಗಾಗಿ ನೀವು ಕಷ್ಟದಿಂದಲೇ ಶೋಧಿಸಬೇಕು. ಭೂಮಿಯಲ್ಲಿ, ಕೆಲವು ಬಾರಿ ಸಮುದ್ರದ ಮಧ್ಯದಲ್ಲಿ ಆಳವಾಗಿ ಬಾವಿ ತೋಡಬೇಕು. ಇದು ಉಗ್ರ-ಕರ್ಮ, ಘೋರ.

ಇದನ್ನೇ ಬೇರೆ ವಿಧಾನದಲ್ಲಿ ಮಾಡಲಾಗದೆ? ಹರಳು ಬೀಜ ಬೆಳೆಯುವುದು, ಅದರಿಂದ ಎಣ್ಣೆ ತೆಗೆಯುವುದು, ಎಣ್ಣೆಯನ್ನು ಬತ್ತಿಯೊಂದಿಗೆ ಕುಡಿಕೆಗೆ ಹಾಕುವುದು. ವಿದ್ಯುತ್‌ನಿಂದಾಗಿ ದೀಪ ವ್ಯವಸ್ಥೆ ಭಾರಿ ಸುಧಾರಣೆಗೊಂಡಿದೆ ಎಂದು ಒಪ್ಪುತ್ತೇನೆ. ಆದರೆ ಹರಳೆಣ್ಣೆ ಬುಡ್ಡಿ ದೀಪದಿಂದ ವಿದ್ಯುತ್‌ ದೀಪದವರೆಗಿನ ಸುಧಾರಣೆಗೆ ನೀವು ತುಂಬ ಶ್ರಮಿಸಬೇಕು. ನೀವು ಸಮುದ್ರದ ಮಧ್ಯ ಭಾಗಕ್ಕೆ ಹೋಗಬೇಕು, ಎಣ್ಣೆ ಬಾವಿ ಕೊರೆಯಬೇಕು, ಅನಂತರ ಪೆಟ್ರೋಲಿಯಂ ಉತ್ಪನ್ನ ಹೊರತೆಗೆಯಬೇಕು. ಇದರಿಂದ ನಿಮ್ಮ ಬದುಕಿನ ನಿಜವಾದ ಗುರಿ ತಪ್ಪಿಹೋಗುತ್ತದೆ. ನೀವು ಸತತವಾಗಿ ಸಾಯುತ್ತ, ಬದುಕಿನ ವಿವಿಧ ಜಾತಿ-ವರ್ಗಗಳಲ್ಲಿ ಹುಟ್ಟುತ್ತ ಅನಿಶ್ಚಿತ ಪರಿಸ್ಥಿತಿಯಲ್ಲಿ ಇದ್ದೀರ. ಈ ಹುಟ್ಟು ಸಾವಿನ ವೃತ್ತದಿಂದ ಹೇಗೆ ಹೊರಬರುವುದು? ಇದೇ ನಿಮ್ಮ ಸಮಸ್ಯೆ. ಮಾನವ ಜೀವನ ಇರುವುದು ಈ ಸಮಸ್ಯೆಯನ್ನು ಬಿಡಿಸಲಿಕ್ಕೆ.  ನಿಮಗೆ ಆತ್ಮಸಾಕ್ಷಾತ್ಕರಕ್ಕಾಗಿ ಬೆಳೆದ ಬುದ್ಧಿವಂತಿಕೆ ಇದೆ. ಆದರೆ ನಿಮ್ಮ ಬುದ್ಧಿಯನ್ನು ಆತ್ಮಸಾಕ್ಷಾತ್ಕಾರಕ್ಕಾಗಿ ಬಳಸದೆ ಹರಳೆಣ್ಣೆ ದೀಪದಿಂದ ವಿದ್ಯುತ್‌ ದೀಪಕ್ಕೆ ಸುಧಾರಿಸಲು ಉಪಯೋಗಿಸುತ್ತಿದ್ದೀರಿ. ಅಷ್ಟೇ.

ಭಕ್ತ: ನಿಮ್ಮ ಸಲಹೆ ಪ್ರಾಯೋಗಿಕವಲ್ಲದ್ದು ಎಂದು ಜನರು ಹೇಳಬಹುದು.  ಅಲ್ಲದೆ, ವಿದ್ಯುಚ್ಛಕ್ತಿಯು ಬೆಳಕನ್ನು ನೀಡುವುದಲ್ಲದೆ ಇತರ ಅನೇಕ ಕಾರ್ಯಗಳನ್ನೂ ಮಾಡುತ್ತದೆ. ನಮ್ಮ ಬಹುತೇಕ ಆಧುನಿಕ ಸೌಲಭ್ಯಗಳು ಹೆಚ್ಚೂ ಕಮ್ಮಿ ವಿದ್ಯುತ್‌ ಮೇಲೆ ಅವಲಂಬಿತ.

ಶ್ರೀಲ ಪ್ರಭುಪಾದ: ಈ ಜನ್ಮದಲ್ಲಿ ನೀವು ಐಷಾರಾಮದಿಂದ ಇರಬಹುದು. ಆದರೆ ಮುಂದಿನ ಜನ್ಮದಲ್ಲಿ ನೀವು ನಾಯಿಯಾಗಬಹುದು.

ಭಕ್ತ: ಜನರು ಅದನ್ನು ನಂಬುವುದಿಲ್ಲ.

ಶ್ರೀಲ ಪ್ರಭುಪಾದ: ಅವರು ಒಪ್ಪುತ್ತಾರೋ ಬಿಡುತ್ತಾರೋ, ಅದಂತೂ ವಾಸ್ತವ. ಉದಾಹರಣೆಗೆ, ಒಬ್ಬ ಹುಡುಗನಿಗೆ ತಾನು ಯುವಕನಾಗಿ ಬೆಳೆಯುವುದು ಗೊತ್ತಿರುವುದಿಲ್ಲ. ಆದರೆ ಅವನ ತಂದೆ ತಾಯಿಗೆ ತಿಳಿದಿರುತ್ತದೆ. ಆ ಹುಡುಗನು, `ನಾನು ಯುವಕನಾಗುವುದಿಲ್ಲ’ ಎಂದರೆ ಅದು ಬಾಲಿಶ. ಅವನ ತಂದೆ ತಾಯಿಗೆ ಅವನು ಯುವಕನಾಗುತ್ತಾನೆಂದು ಗೊತ್ತಿರುವುದರಿಂದ ಅವರು ಮಗನಿಗೆ ಅರಿವು ಉಂಟುಮಾಡಬೇಕು. ಇದು ಪೋಷಕರ ಕರ್ತವ್ಯ. ಹಾಗೆಯೇ ನಾವು (ಆತ್ಮ) ಪುನರ್‌ ಜನ್ಮದ ಬಗೆಗೆ ಮಾತನಾಡಿದರೆ, ಮೂರ್ಖರು `ನನಗೆ ನಂಬಿಕೆ ಇಲ್ಲ’ ಎಂದು ಹೇಳಬಹುದು. ಆದರೇನು, ಅದು ವಾಸ್ತವ ಅಲ್ಲವೇ?  ಪುನರ್‌ ಜನ್ಮ ಎನ್ನುವುದು ವಾಸ್ತವ ಅಲ್ಲ ಎಂದು ಮೂರ್ಖರು, ಹುಚ್ಚರಾದವರು ಹೇಳಬಹುದು. ಆದರೆ ವಾಸ್ತವಾಂಶ ಎಂದರೆ, ಈ ಜನ್ಮದಲ್ಲಿ ಅವರ ಬದುಕಿನ ಗುಣಮಟ್ಟದ ಆಧಾರದ ಮೇಲೆ ಅವರು ಮತ್ತೊಂದು ದೇಹವನ್ನು ಸ್ವೀಕರಿಸಬೇಕು. (ಕಾರಣಮ್‌ ಗುಣ ಸಂಗೋಸ್ಯ ಸದ್‌ ಅಸದ್‌ ಯೋನಿ ಜನ್ಮಸು.)

ಭಕ್ತ: ಯಾರಾದರೂ ಹೀಗೆ ಹೇಳಿದರೆ `ಅಯ್ಯೋ, ಈ ಹರಳು ಬೀಜ ಬೆಳೆಯುವುದೆಲ್ಲ ಕಷ್ಟದ್ದು. ಕೃಷಿಯೇ ತುಂಬ ಕಷ್ಟವಾದದ್ದು. ಇಷ್ಟೆಲ್ಲ ಪಡಿಪಾಟಲಿಗಿಂತ ಸುಮ್ಮನೆ ಯಾವುದಾದರೂ ಕಾರ್ಖಾನೆಗೆ ಹೋಗಿ 8 ತಾಸು ಕೆಲಸ ಮಾಡಿ ಬಂದರೆ ಹಣವೂ ಸಿಗುತ್ತದೆ, ಸಂತೋಷವಾಗಿಯೂ ಇರಬಹುದು.’

ಶ್ರೀಲ ಪ್ರಭುಪಾದ: ನೀವು ಸುಖ ಪಡಬಹುದು, ಖುಷಿಯಿಂದ ಇರಬಹುದು. ಆದರೆ ಹಾಗೆ ಸಂತೋಷಪಡುತ್ತ ನೀವು ನಿಮ್ಮ ಬದುಕಿನ ನಿಜವಾದ ಧ್ಯೇಯವನ್ನು ಮರೆತುಬಿಡುತ್ತೀರಿ.  ಅದು ಬುದ್ಧಿವಂತಿಕೆಯ ಲಕ್ಷಣವೇ? ನಿಮಗೆ ದೇಹ ಕೊಟ್ಟಿರುವುದು ಏಕೆ? ನಿಮ್ಮ ಮುಂದಿನ ಬದುಕನ್ನು ಉತ್ತಮ ಪಡಿಸಿಕೊಳ್ಳಲೆಂದು. ಒಂದು ವೇಳೆ ನೀವು ಮುಂದಿನ ಜನ್ಮದಲ್ಲಿ ನಾಯಿಯಾದರೆ, ಅದು ಯಶಸ್ಸೆ? ನೀವು ಕೃಷ್ಣ ಪ್ರಜ್ಞೆಯ ವಿಜ್ಞಾನವನ್ನು ಅರಿಯಬೇಕು. ಆಗ, ನೀವು ನಾಯಿಯಾಗುವ ಬದಲು ದೇವರಂತಾಗುವಿರಿ.

ಭಕ್ತ: ಇಂದಿನ ಸಂಕಷ್ಟಗಳಿಗೆ ಟ್ರ್ಯಾಕ್ಟರ್‌ ಕಾರಣ ಎಂದು ನೀವು ಒಮ್ಮೆ ಲಂಡನ್ನಿನ ಜಾನ್‌ ಲೆನನ್‌ ಎಸ್ಟೇಟ್‌ನಲ್ಲಿ ಹೇಳಿದ್ದಿರಿ. ಇದು ಯುವಜನರ ಕೆಲಸವನ್ನು ಕಬಳಿಸುತ್ತದೆ, ಅವರು ಅನಿವಾರ್ಯವಾಗಿ ಉದ್ಯೋಗ ಹುಡುಕುತ್ತ ಪಟ್ಟಣಗಳಿಗೆ ಹೋಗಬೇಕಾಗುತ್ತದೆ. ಅಲ್ಲಿ ಅವರು ಇಂದ್ರಿಯ ತೃಪ್ತಿಯಲ್ಲಿ ಸಿಲುಕುತ್ತಾರೆ ಎಂದು ನೀವು ಅಭಿಪ್ರಾಯ ವ್ಯಕ್ತಪಡಿಸಿದ್ದಿರಿ. ಹಳ್ಳಿಗಳಲ್ಲಿ ಬದುಕು ಸರಳ ಮತ್ತು ಹೆಚ್ಚು ಶಾಂತಿಯುತ ಎಂಬುದನ್ನು ನಾನು ಗಮನಿಸಿದ್ದೇನೆ. ಹೀಗಾಗಿ ಅಲ್ಲಿ ಆಧ್ಯಾತ್ಮಿಕ ಜೀವನದ ಬಗೆಗೆ ಯೋಚಿಸುವುದು ಸುಲಭ.

ಶ್ರೀಲ ಪ್ರಭುಪಾದ: ಹೌದು, ಹಳ್ಳಿಯಲ್ಲಿ ಹೆಚ್ಚು ಗೊಂದಲವಿಲ್ಲ, ಮಿದುಳಿಗೂ ಹೆಚ್ಚಿನ ತ್ರಾಸ ಕೊಡುವುದಿಲ್ಲ. ನಿಮ್ಮ ಆಹಾರಕ್ಕಾಗಿ ಒಂದಷ್ಟು ದುಡಿಯಿರಿ. ಉಳಿದ ವೇಳೆಯನ್ನು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಸಿರಿ. ಇದು ಆದರ್ಶ ಜೀವನ.

(ಶ್ರೀಲ ಪ್ರಭುಪಾದರು ಹೂವೊಂದನ್ನು ಹಿಡಿಯುತ್ತಾರೆ) ಈ ಹೂವಿನ ಅತ್ಯಂತ ಸೂಕ್ಷ್ಮವಾದ ನಾರು, ಎಳೆಯನ್ನು ನೋಡಿ. ಯಾರಾದರೂ ಇಂತಹ ಸೂಕ್ಷ್ಮವಾದುದನ್ನು ಯಾವುದೇ ಕಾರ್ಖಾನೆಯಲ್ಲಿ ಉತ್ಪಾದಿಸಬಲ್ಲರೇ? ಎಂತಹ ಅದ್ಭುತ ಬಣ್ಣ! ನೀವು ಒಂದೇ ಒಂದು ಹೂವಿನ ಬಗೆಗೆ ಅಧ್ಯಯನ ಮಾಡಿದರೂ ಸಾಕು, ನೀವು ಭಗವಂತನ ಪ್ರಜ್ಞೆ ಹೊಂದುವಿರಿ. ನೀವೇ ಕರೆಯುವ ಯಂತ್ರವೊಂದಿದೆ. ಅದೇ `ಪ್ರಕೃತಿ’. ಈ ಯಂತ್ರದಿಂದಲೇ ಎಲ್ಲವೂ ಬರುತ್ತಿರುವುದು. ಆದರೆ ಯಾರು ಈ ಯಂತ್ರವನ್ನು ನಿರ್ಮಿಸಿದ್ದು?

ಭಕ್ತ: ಕೃಷ್ಣನು ಆಲೋಚಿಸಿಯೇ ಹೂವುಗಳಿಗೆ ಬಣ್ಣ ಹಾಕಿರುವುದು ಜನರಿಗೆ ಗೊತ್ತಿಲ್ಲ ಎಂದು ನೀವು ಲಂಡನ್ನಿನಲ್ಲಿ ಹೇಳಿದ್ದು ಉಂಟು.

ಶ್ರೀಲ ಪ್ರಭುಪಾದ: ಹೌದು. ಕಲಾವಿದನ ಕೈಚಳಕವಿಲ್ಲದೆ ಹೂವು ಅಷ್ಟು ಸುಂದರವಾಗಿರುವುದು ಸಾಧ್ಯವೇ? ಅದು ಮೂರ್ಖತನ. ಪ್ರಕೃತಿ ಎಂದರೆ ಏನು? ಅದು ಕೃಷ್ಣನ ಯಂತ್ರ. ಪ್ರತಿಯೊಂದನ್ನೂ ಕೃಷ್ಣನ ಯಂತ್ರದಿಂದಲೇ  ಮಾಡಿರುವುದು.

ಆದುದರಿಂದ, ನವ ವೃಂದಾವನದಲ್ಲಿ ನಿಮ್ಮ ಜೀವನ ವಿಧಾನವನ್ನು ಸುಧಾರಿಸಿಕೊಳ್ಳಿ. ಮುಕ್ತ ಜಾಗದಲ್ಲಿ ಜೀವಿಸಿ, ನಿಮ್ಮ ಆಹಾರ ಪದಾರ್ಥವನ್ನು ಬೆಳೆದುಕೊಳ್ಳಿ, ನಿಮಗೆ ಅಗತ್ಯವಾದ ಹಾಲನ್ನು ನೀವೇ ಉತ್ಪಾದಿಸಿಕೊಳ್ಳಿ, ಸಮಯ ಉಳಿಸಿ, ಹರೇ ಕೃಷ್ಣ ಮಂತ್ರ ಪಠಿಸಿ. ಸರಳ ಜೀವನ ಉನ್ನತ ಚಿಂತನೆ, ಆದರ್ಶ ಬದುಕು ನಿಮ್ಮದಾಗಲಿ. ಆದರೆ ನೀವು ಏನಾದರೂ ನಿಮ್ಮ ಬದುಕಿನ ಕೃತಕ ಅಗತ್ಯಗಳನ್ನು, ಅದೇ ನೀವು ಕರೆಯುವ ಸೌಲಭ್ಯಗಳು, ಹೆಚ್ಚಿಸಿಕೊಂಡರೆ ಮತ್ತು ಕೃಷ್ಣ ಪ್ರಜ್ಞೆಯ ಕಾರ್ಯ ನಿಷ್ಠೆಯನ್ನು ಮರೆತರೆ, ಅದು ನಿಜಕ್ಕೂ ಆತ್ಮಹತ್ಯೆಯೇ. ಈ ಆತ್ಯಹತ್ಯಾ ನೀತಿಯನ್ನು ಸ್ಥಗಿತಗೊಳಿಸಬೇಕಾಗಿದೆ. ಜನರು ಆಧುನಿಕ ತಂತ್ರಜ್ಞಾನ ಬಳಕೆ ನಿಲ್ಲಿಸಬೇಕೆಂದು ನಾವು ಹೇಳುವುದಿಲ್ಲ. ಶ್ರೀ ಚೈತನ್ಯ ಮಹಾಪ್ರಭುಗಳು ನೀಡಿರುವ ಅತ್ಯಂತ ಸರಳವಾದ ಸೂತ್ರವನ್ನು ನಿಮ್ಮ ಮುಂದಿಡಲು ಇಚ್ಛಿಸುತ್ತೇವೆ, ಅದೇ ಹರೇ ಕೃಷ್ಣ ಪಠಿಸಿ. ನಿಮ್ಮ ತಂತ್ರಜ್ಞಾನ ಕಾರ್ಖಾನೆಯಲ್ಲಿಯೂ ಈ ಮಂತ್ರವನ್ನು ಪಠಿಸಬಹುದು. ಕಷ್ಟವೆಲ್ಲಿದೆ? ನಿಮ್ಮ ಯಂತ್ರದಲ್ಲಿನ ಬಟನ್‌ ಒತ್ತುತ್ತಲೇ ನೀವು ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಮಂತ್ರ ಪಠಿಸಬಹುದು.

ಭಕ್ತ: ಜನರು ಆ ರೀತಿ ಪಠಣ ಶುರು ಮಾಡಿದರೆ, ಅವರು ಕ್ರಮೇಣ ತಂತ್ರಜ್ಞಾನವನ್ನು ಬಿಟ್ಟುಬಿಡುತ್ತಾರೆ?

ಶ್ರೀಲ ಪ್ರಭುಪಾದ: ಹಾಂ … ಖಂಡಿತ

ಭಕ್ತ: ಅಂದರೆ ನೀವು ವಿನಾಶದ ಬೀಜ ಬಿತ್ತುತ್ತಿರುವಿರಿ?

ಶ್ರೀಲ ಪ್ರಭುಪಾದ: ಇಲ್ಲ, ನಾಶ ಅಲ್ಲ, ಬದಲಿಗೆ ನಿರ್ಮಾಣ, ರಚನಾತ್ಮಕ ಕಾರ್ಯ. ಪುನರಪಿ ಜನನಂ ಪುನರಪಿ ಮರಣಂ ಮತ್ತು ಪದೇ ಪದೆ ದೇಹ ಬದಲಾಗುವುದಿದೆಯಲ್ಲ, ಅದೇ ವಿನಾಶಕಾರಿ. ಆದರೆ ನಮ್ಮ ವಿಧಾನದಿಂದ ನೀವು ಸದಾ ಜೀವಿಸಿರುವಿರಿ – ತ್ಯಕ್ತ್ವಾ ದೇಹಂ ಪುನರ್‌ ಜನ್ಮ ನೈತಿ  – ನಿಮಗೆ ಇನ್ನೊಂದು ಲೌಕಿಕ ದೇಹ ದೊರೆಯದು. ಆದರೆ, ಕೃಷ್ಣ ಪ್ರಜ್ಞೆ ಇಲ್ಲದ್ದಾಗ, ತಥಾ ದೇಹಾಂತರ ಪ್ರಾಪ್ತಿಃ – ನೀವು ಬೇರೆ ದೇಹವನ್ನು ಒಪ್ಪಿಕೊಳ್ಳಬೇಕು. ಇದರ ಅರ್ಥ ಇನ್ನಷ್ಟು ಸಂಕಷ್ಟ. ಈಗ ನೀವೇ ಹೇಳಿ, ಯಾವುದು ಉತ್ತಮ? ಒಂದಾದರೊಂದಂತೆ ಲೌಕಿಕ ದೇಹಗಳನ್ನು ಸ್ವೀಕರಿಸುತ್ತಾ ಹೋಗುವುದೋ ಅಥವಾ ಒಪ್ಪಿಕೊಳ್ಳದಿರುವುದೋ? ಈ ದೇಹದೊಂದಿಗೆ ನಮ್ಮ ಸಂಕಟಗಳನ್ನು ಪರಿಸಮಾಪ್ತಿಗೊಳಿಸಿಕೊಂಡರೆ, ಅದು ಬುದ್ಧಿವಂತಿಕೆ. ಇನ್ನಷ್ಟು ಸಂಕಷ್ಟ ಅನುಭವಿಸಲು ಮತ್ತೊಂದು ದೇಹವನ್ನು ಸೃಷ್ಟಿಸಿಕೊಂಡರೆ ಅದು ಮೂರ್ಖತನ. ಆದರೆ ನೀವು ಕೃಷ್ಣನನ್ನು ಅರ್ಥ ಮಾಡಿಕೊಳ್ಳುವವರೆಗೆ ಬೇರೆ ದೇಹವನ್ನು ಸ್ವೀಕರಿಸಲೇ ಬೇಕು. ಅನ್ಯ ಮಾರ್ಗವಿಲ್ಲ. ಅಂದರೆ ಶ್ರೀ ಕೃಷ್ಣನಿಗೆ ಶರಣಾಗಿ. ಬುದ್ಧಿವಂತಿಕೆ ಪ್ರದರ್ಶಿಸಿ.

ಈ ಲೇಖನ ಶೇರ್ ಮಾಡಿ