ವತ್ಸಾಸುರ-ಬಕಾಸುರ ರಾಕ್ಷಸರ ವಧೆ

ಜೋಡಿ ಅರ್ಜುನ ಮರಗಳು ಕೆಳಗುರುಳಿದ ಘಟನೆ ಆದಮೇಲೆ, ನಂದ ಮಹಾರಾಜನ ಮುಖ್ಯತ್ವದಲ್ಲಿ ಎಲ್ಲ ಗೋಪಾಲಕರೂ ಒಂದು ಕಡೆ ಸೇರಿದರು. ಮಹಾವನದಲ್ಲಿ ರಾಕ್ಷಸರ ಹಾವಳಿಯನ್ನು ಹೇಗೆ ನಿಲ್ಲಿಸುವುದು ಎನ್ನುವುದರ ಬಗ್ಗೆ ಅವರೆಲ್ಲರೂ ತಮ್ಮ ತಮ್ಮಲ್ಲೆ ಚರ್ಚಿಸಿದರು. ಆ ಸ್ಥಳವನ್ನು ಬಿಟ್ಟು ಎಲ್ಲರೂ ವೃಂದಾವನಕ್ಕೆ ಹೊರಟುಹೋಗುವುದು ಎಂದು ಅವರೆಲ್ಲ ನಿರ್ಧರಿಸಿದರು.

ಈ ರೀತಿಯಾಗಿ, ವೃಂದಾವನವನ್ನು ತಲಪಿದಮೇಲೆ, ಅಲ್ಲಿ ಎಲ್ಲರೂ ಶಾಶ್ವತವಾಗಿ, ತುಂಬ ಶಾಂತವಾಗಿ, ಸಂತೋಷವಾಗಿ ವಾಸಮಾಡುತ್ತಿರುವುದನ್ನು ನೋಡಿದರು. ಅಲ್ಲಿ ವೃಂದಾವನವನ್ನು ಸುತ್ತುವರಿದಂತೆ ಎಲ್ಲ ಗಾಡಿಗಳನ್ನೂ ಅರ್ಧಸುತ್ತಾಕಾರದಲ್ಲಿ ನಿಲ್ಲಿಸಿದರು ಮತ್ತು ಈ ರೀತಿಯಾಗಿ ಒಂದು ತಾತ್ಕಾಲಿಕ ವಾಸದ ಜಾಗವನ್ನು ನಿರ್ಮಿಸಿಕೊಂಡರು.

ಬಹಳ ಬೇಗ ಪುಟ್ಟಕರುಗಳನ್ನು ನೋಡಿಕೊಳ್ಳುವಷ್ಟು ಮಟ್ಟಿಗೆ ಕೃಷ್ಣ ಮತ್ತು ಬಲರಾಮರು ಬೆಳೆದಿದ್ದರು. ತಮ್ಮ ಚಿಕ್ಕವಯಸ್ಸಿನಿಂದ ಗೋಪಾಲಕರ ಮಕ್ಕಳಿಗೆ ಹಸುಕರುಗಳನ್ನು ನೋಡಿಕೊಳ್ಳುವುದರಲ್ಲಿ ತರಬೇತು ಕೊಡುತ್ತಾರೆ, ಮತ್ತು ಈ ಮಕ್ಕಳ ಜವಾಬ್ದಾರಿ ಕರುಗಳನ್ನು ನೋಡಿಕೊಳ್ಳು ವುದಾಗಿರುತ್ತದೆ.

ಹೀಗೆ, ಉಳಿದೆಲ್ಲ ಗೋಪಾಲಕ ಬಾಲಕರೊಂದಿಗೆ, ಕೃಷ್ಣ ಮತ್ತು ಬಲರಾಮ ಇಬ್ಬರೂ ಗೋವುಗಳನ್ನು ಮೇಯಿಸುವ ಜಾಗಕ್ಕೆ ಹೋಗಿ ಕರುಗಳನ್ನು ಮೇಯಿಸುವ ಜವಾಬ್ದಾರಿಯನ್ನು ತೆಗೆದುಕೊಂಡರು, ಅಲ್ಲಿ ತಮ್ಮ ಸ್ನೇಹಿತರೊಂದಿಗೆ ಆಟವಾಡಿಕೊಂಡಿದ್ದರು.

ಒಂದು ಸಲ, ಕೃಷ್ಣ ಮತ್ತು ಬಲರಾಮ ಇಬ್ಬರೂ ಯಮುನಾ ನದಿಯ ದಡದಮೇಲೆ ಆಟವಾಡಿಕೊಂಡಿದ್ದಾಗ, ವತ್ಸಾಸುರ ಎನ್ನುವ ಹೆಸರಿನ ಒಬ್ಬ ರಾಕ್ಷಸ, ಒಂದು ಕರುವಿನ ರೂಪವನ್ನು ತಾಳಿ ಈ ಇಬ್ಬರು ಸೋದರರನ್ನು ಸಾಯಿಸಲು ಹತ್ತಿರ ಬಂದ. ಕರುವಿನ ರೂಪ ತಾಳಿದ್ದರಿಂದ ಆ ರಾಕ್ಷಸ ಉಳಿದೆಲ್ಲ ಕರುಗಳೊಂದಿಗೆ ಹಾಯಾಗಿ ಬೆರೆತುಕೊಂಡಿರಬಹುದಾಗಿತ್ತು.

ಕೃಷ್ಣ ಇದನ್ನು ಸರಿಯಾಗಿ ಗಮನಿಸಿದ ಮತ್ತು ಅವನು ಕೂಡಲೇ ಬಲರಾಮನಿಗೆ ಇಲ್ಲೊಬ್ಬ ರಾಕ್ಷಸ ಬಂದಿರುವ ವಿಷಯವನ್ನು ತಿಳಿಸಿದ. ಇಬ್ಬರು ಸೋದರರೂ ನಿಧಾನವಾಗಿ ಆ ರಾಕ್ಷಸನ ಹತ್ತಿರಬಂದು, ಕರುವಿನ ರೂಪದಲ್ಲಿದ್ದ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡರು. ಹಿಂದಿನ ಕಾಲುಗಳು ಮತ್ತು ಬಾಲವನ್ನು ಹಿಡಿದೆತ್ತಿ ಅವನನ್ನು ಜೋರಾಗಿ ಸುತ್ತಿ ದೂರದ ಒಂದು ಮರದಮೇಲೆ ಬಲವಾಗಿ ಎಸೆದರು.

ಆ ರಾಕ್ಷಸ ಪ್ರಾಣಕಳೆದುಕೊಂಡು ಮರದ ಮೇಲಿನಿಂದ ನೆಲದಮೇಲೆ ಬಿದ್ದ ರಾಕ್ಷಸ ಹೀಗೆ ನೆಲದಮೇಲೆ ಉರುಳಿ ಬಿದ್ದಿದ್ದಾಗ, ಕೃಷ್ಣನ ಜೊತೆಗಾರರೆಲ್ಲ ಅವನನ್ನು ಮೆಚ್ಚಿಕೊಂಡು ಚೆನ್ನಾಗಿ ಮಾಡಿದೆ, ಚೆನ್ನಾಗಿ ಮಾಡಿದೆ” ಎಂದು ಹೊಗಳಿದರು. ಆಗಲೇ ಆಕಾಶದಿಂದ ಉಪದೇವತೆಗಳು ತುಂಬ ತೃಪ್ತಿಯಿಂದ ಹೂಮಳೆ ಸುರಿಸಿದರು.

ಇನ್ನೊಂದು ದಿವಸ, ಎಲ್ಲ ಗೋಪಾಲಕ ಹುಡುಗರೂ ತಮ್ಮ ತಮ್ಮ ಕರುಗಳಿಗೆ ನೀರು ಕುಡಿಸಲು ಯಮುನಾ ನದಿಯ ದಡಕ್ಕೆ ಹೋದರು. ಕರುಗಳೆಲ್ಲ ಯಮುನಾ ನದಿಯ ನೀರನ್ನು ಕುಡಿಯುತ್ತಿದ್ದಾಗ, ಈ ಹುಡುಗರೂ ನೀರು ಕುಡಿದರು. ನೀರು ಕುಡಿದಮೇಲೆ, ಅವರೆಲ್ಲ ನದಿ ದಡದ ಮೇಲೆ ಕುಳಿತಿದ್ದಾಗ, ಅವರಿಗೊಂದು ಅತಿದೊಡ್ಡ ಮೃಗ, ನೋಡಲು ಬಕಪಕ್ಷಿಯ ಹಾಗೆ, ಆದರೆ ಬೆಟ್ಟದಷ್ಟು ದೊಡ್ಡದಾಗಿದ್ದನ್ನು ನೋಡಿದರು.

ಅದನ್ನು ನೋಡಿ ಅವರಿಗೆಲ್ಲ ತುಂಬ ಹೆದರಿಕೆಯಾಯಿತು. ಈ ಮೃಗದ ಹೆಸರು ಬಕಾಸುರ, ಇದೂ ಸಹ ಕಂಸನ ಸ್ನೇಹಿತ. ಬಕಾಸುರ ಎಲ್ಲರ ಮುಂದೆಯೂ ಇದ್ದಕ್ಕಿದ್ದಹಾಗೆಯೇ ಕಾಣಿಸಿಕೊಂಡು, ಕೂಡಲೇ ಕೃಷ್ಣನನ್ನು ತನ್ನ ಚೂಪಾದ ಕೊಕ್ಕಿನಿಂದ ಕುಕ್ಕುತ್ತ, ಬೇಗ ಕೃಷ್ಣನನ್ನೇ ಹಿಡಿದು ನುಂಗಿಬಿಟ್ಟ.

ಹೀಗೆ ಕೃಷ್ಣನನ್ನು ಬಕಾಸುರ ಹಿಡಿದು ನುಂಗಿಬಿಟ್ಟದ್ದನ್ನು ಕೃಷ್ಣನ ಸ್ನೇಹಿತರು ಮತ್ತು ಬಲರಾಮ ನೋಡಿ ಸತ್ತುಹೋಗಿರುವವರ ಹಾಗೆ ಉಸಿರಾಡದೆ ನಿಂತುಬಿಟ್ಟರು. ಆದರೆ ಬಕಾಸುರ ಎನ್ನುವ ಆ ರಾಕ್ಷಸ ಕೃಷ್ಣನನ್ನು ನುಂಗುತ್ತಿರುವಾಗ, ಅವನಿಗೆ ಒಳಗೆ ಉರಿಯುತ್ತಿರುವಂತೆ ಅನ್ನಿಸಿತು, ಗಂಟಲಿನಲ್ಲಿ ಇರಿಯುವಂತೆ ಅನ್ನಿಸಿತು.

ಇದಕ್ಕೆ ಕಾರಣ ಕೃಷ್ಣನ ಪ್ರಜ್ವಲಿಸುವ ಪ್ರಭೆ. ಆ ರಾಕ್ಷಸ ಕೂಡಲೇ ಕೃಷ್ಣನನ್ನು ಹೊರಗೆ ಹಾಕಿಬಿಟ್ಟು ತನ್ನ ಕೊಕ್ಕಿನಿಂದ ಅವನನ್ನು ಕುಕ್ಕಿ ಕೊಲ್ಲಲು ಪ್ರಯತ್ನಿಸಿತು. ಆದರೆ, ಕೃಷ್ಣ ಆ ಬೆಟ್ಟದಾಕಾರದ ಪಕ್ಷಿಯ ಕೊಕ್ಕಿನ ಎರಡು ಭಾಗಗಳನ್ನು ಹಿಡಿದು ಗಟ್ಟಿಯಾಗಿ ಅಗಲಿಸಿ, ತನ್ನ ಗೋಪಾಲಕ ಮಿತ್ರರೆಲ್ಲರೂ ನೋಡುತ್ತಿರುವಂತೆಯೇ, ಒಂದು ಚಿಕ್ಕ ಮಗು ಹುಲ್ಲನ್ನು ಹರಿದು ಎರಡು ಭಾಗ ಮಾಡುವಹಾಗೆ, ಅದರ ಬಾಯನ್ನು ಎರಡು ಹೋಳು ಮಾಡಿಬಿಟ್ಟ.

ಆಕಾಶದಿಂದ, ದೇವಾನುದೇವತೆಗಳು ತಮ್ಮ ಸಂತೋಷ ವ್ಯಕ್ತಪಡಿಸುವ ಹಾಗೆ ಹೂಮಳೆಗರೆದರು. ಈ ರೀತಿಯಾಗಿ, ಇಡೀ ಸೃಷ್ಟಿಯ ಪಾಲಕರಾದ, ಕೃಷ್ಣ ಮತ್ತು ಬಲರಾಮರು, ಪ್ರತಿದಿವಸ ಕರುಗಳನ್ನು ಪಾಲಿಸುತ್ತ, ಬೆಳಗಿನಿಂದ ಪ್ರಾರಂಭಿಸಿ ಮೈದಾನಗಳಲ್ಲಿ ಓಡಾಡುತ್ತ, ವೃಂದಾವನದ ಗೋಪಬಾಲಕರಾಗಿ ತಮ್ಮ ಬಾಲ್ಯದ ಲೀಲೆಗಳನ್ನಾಡುತ್ತ ಸಂತೋಷಪಡುತ್ತಿದ್ದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi