ಕೃಷ್ಣ ಪಾಕಶಾಲೆ

ಸೂಪ್‌

ತರಕಾರಿ ಸೂಪ್‌

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ – 2

ಕ್ಯಾರೆಟ್‌ – 2

ಟೊಮೊಟೊ – 3

ಹಸಿಬಟಾಣಿ ಕಾಳು – ½ ಬಟ್ಟಲು

ಕೊತ್ತಂಬರಿ ಸೊಪ್ಪು – ½ ಬಟ್ಟಲು

ಚಕ್ಕೆ – ಚಿಕ್ಕ ಚೂರು

ಲವಂಗ – 2

ಬೆಣ್ಣೆ – 2 ಟೇಬಲ್‌ ಚಮಚ

ತುಪ್ಪ – 2 ಟೇಬಲ್‌ ಚಮಚ

ಕಾಳು ಮೆಣಸಿನ ಪುಡಿ – 4 ಚಿಟಿಕೆ

ಉಪ್ಪು – ರುಚಿಗೆ ತಕ್ಕಷ್ಟು

ಸಕ್ಕರೆ – ½ ಚಮಚ

ಮಾಡುವ ವಿಧಾನ:

ಎಲ್ಲಾ ತರಕಾರಿಗಳನ್ನುಶುಚಿಮಾಡಿ ಸಣ್ಣಗೆ ಹಚ್ಚಿಟ್ಟುಕೊಳ್ಳಿ. ಬಟಾಣಿಕಾಳನ್ನು ಆರಿಸಿಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ಹೆಚ್ಚಿಟ್ಟುಕೊಳ್ಳಿ. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಕಾಯಿಸಿ ಚಕ್ಕೆ, ಲವಂಗದ ಒಗ್ಗರಣೆ ಹಾಕಿ. ಇದಕ್ಕೆ ಆಲೂಗಡ್ಡೆ, ಕ್ಯಾರೆಟ್‌ ಹಾಕಿ 2-3 ನಿಮಿಷ ಹುರಿಯಿರಿ. ನಂತರ ಬಟಾಣಿಕಾಳು ಹಾಕಿ 2-3 ನಿಮಿಷ ಹುರಿಯಿರಿ. ನಂತರ ಬಟಾಣಿಕಾಳು ಹಾಕಿ 2-3 ನಿಮಿಷ ಹುರಿಯಿರಿ.

ಎಲ್ಲಾ ಪದಾರ್ಥಗಳು ಬೇಯುವುದಕ್ಕೆ ಮೊದಲು ಸಕ್ಕರೆ ಹಾಗು ಉಪ್ಪನ್ನು (ತರಕಾರಿಗೆ ಬೇಕಾದಷ್ಟು) ಹಾಕಿ ಬೇಯಿಸಿರಿ. ಸಕ್ಕರೆ ಹಾಕುವುದರಿಂದ ತರಕಾರಿಗಳ ಬಣ್ಣ ಬೆಂದನಂತರವೂ ಚೆನ್ನಾಗಿ ಹಾಗೇ ಉಳಿಯುವುದು. ಎಲ್ಲಾ ಸ್ವಲ್ಪ ಬಾಡಿದ ನಂತರ ಟೊಮೊಟೊ ಹಾಕಿ 2 ನಿಮಿಷ ಹುರಿಯಿರಿ. ಅರ್ಧ ಬಟ್ಟಲು ನೀರು ಬೆರೆಸಿ 2-3 ನಿಮಿಷ ಬೇಯಿಸಿ. ತರಕಾರಿ ರಸ ಬಿಟ್ಟುಕೊಳ್ಳುತ್ತಿದೆ ಎನ್ನುವಾಗ ತರಕಾರಿಯ ಎರಡು ಪ್ರಮಾಣದಷ್ಟು ನೀರು ಹಾಕಿ ಕುದಿಸಿ.

ತರಿಕಾರಿಗಳೆಲ್ಲಾ ಬೆಂದ ನಂತರ ರಸವನ್ನು ಬಸಿದುಕೊಳ್ಳಿ. ಕಾರ್ನ್‌ಪ್ಲೋರ್‌ ಅನ್ನು ಗಂಟುಬಾರದಂತೆ ಸ್ವಲ್ಪ ನೀರಿನಲ್ಲಿ ಕಲಸಿ ರಸಕ್ಕೆ ಬೆರೆಸಿ ಒಲೆಯ ಮೇಲಿಟ್ಟು ಕೈಯಾಡಿಸಿ. ಬಿಸಿದಿಟ್ಟ ತರಕಾರಿಗಳನ್ನು ಚೆನ್ನಾಗಿ ಒಂದು ಬಟ್ಟಲಿನಲ್ಲಿ ನಾದಿ ಅದಕ್ಕೆ ಬೆರೆಸಬಹುದು. ಇಲ್ಲದಿದ್ದಲ್ಲಿ ಬೇರೆ ಅಡುಗೆಗೆ ಉಪಯೋಗಿಸಬಹುದು. ಸೂಪ್‌ ಚೆನ್ನಾಗಿ ಒಂದು ಕುದಿ ಬಂದ ಕೂಡಲೇ ರುಚಿಗೆ ತಕ್ಕ ಉಪ್ಪು, ಕಾಳು ಮೆಣಸಿನ ಪುಡಿ ಬೆರೆಸಿ ಗಂಜಿ ಹದಕ್ಕೆ ಬಂದ ನಂತರ ಇಳಿಸಿ. ಬಿಸಿಯಿರುವಾಗಲೇ ಮೇಲೆ ಕೊತ್ತಂಬರಿ ಸೊಪ್ಪು ಬೆರೆಸಿ ನಂತರ ಸೇವಿಸಿ.

ಟೊಮೊಟೊ ಸೂಪ್‌

ಬೇಕಾಗುವ ಸಾಮಗ್ರಿಗಳು:

ಟೊಮೊಟೊ ಹಣ್ಣು – ¼ ಕೆಜಿ

ಬೆಣ್ಣೆ – 2 ಟೇಬಲ್‌ ಚಮಚ

ಹಾಲಿನ ಕೆನೆ – 3-4 ಚಮಚದಷ್ಟು

ಕಾಳು ಮೆಣಸಿನ ಪುಡಿ – 4 ಚಿಟಿಕೆ

ಮೈದಾ ಹಿಟ್ಟು – 2 ಟೇಬಲ್‌ ಚಮಚ

ಹಾಲು – ¼ ಲೀಟರ್‌

ರುಚಿಗೆ ತಕ್ಕಷ್ಟು ಉಪ್ಪು

ಒಣ ಮೆಣಸಿನಕಾಯಿ ಪುಡಿ – 2 ಚಿಟಿಕೆ

ಮಾಡುವ ವಿಧಾನ:

ಟೊಮೊಟೊ ಶುಚಿಗೊಳಿಸಿ ದಪ್ಪ ಹೋಳು ಮಾಡಿ ದಪ್ಪತಳದ ಪಾತ್ರೆಯಲ್ಲಿ ಹಾಕಿ ಅದು ಮುಳುಗುವವರೆಗೂ ನೀರು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಒಣ ಮೆಣಸಿನಕಾಯಿ ಪುಡಿ ಹಾಕಿ ಮುಚ್ಚಳ ಮುಚ್ಚಿ ಕುದಿಸಿ. ಎಲ್ಲ ಪದಾರ್ಥಗಳು ಬೆರೆತು ಸರಿಯಾಗಿ ಕುದಿಬಂದ ನಂತರ, ಚಿಕ್ಕರಂಧ್ರದ ಜಾಲರಿಯಲ್ಲಿ ಹಾಕಿ ಸೋಸಿ ರಸವನ್ನು ತೆಗೆದಿಟ್ಟುಕೊಳ್ಳಿ.

ವೈಟ್‌ ಸಾಸ್‌

ಒಂದು ದಪ್ಪ ತಳದ ಚಿಕ್ಕ ಬಾಣಲೆಯಲ್ಲಿ ಬೆಣ್ಣೆ ಹಾಕಿ. ಅದು ಬಿಸಿಯಾದಾಗ ಮೈದಹಿಟ್ಟು ಹಾಕಿ ಹದವಾದ ಕಂದುಬಣ್ಣಕ್ಕೆ ಬಂದು ಪರಿಮಳ ಬರುವವರೆಗೂ ಹುರಿಯಿರಿ. ಅದಕ್ಕೆ ಹಾಲು ಬೆರೆಸಿ ಮುದ್ದೆಯಾಗದ ರೀತಿ ನೋಡಿಕೊಳ್ಳಿ. ಒಂದು ಕುದಿ ಬಂದ ನಂತರ ಸೋಸಿಟ್ಟುಕೊಳ್ಳಿ. ಟೊಮೊಟೊ ರಸದೊಂದಿಗೆ ವೈಟ್ ಸಾಸ್‌ ಬೆರೆಸಿ ಅಗತ್ಯವಿರುವಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು. ಈಗ ಸೂಪ್‌ ಸಿದ್ಧ.

ಆಲೂಗಡ್ಡೆ ಸೂಪ್‌

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ – ½ ಕೆ.ಜಿ

ಅಕ್ಕಿ ಹಿಟ್ಟು ಅಥವಾ ಕಾರ್ನ್‌ಪ್ಲೋರ್‌ – 1 ಟೇಬಲ್‌ ಚಮಚ

ಹಾಲಿನಕೆನೆ – 2-3 ಟೇಬಲ್‌ ಚಮಚ

ಹಾಲು – ½ ಬಟ್ಟಲು

ಬೆಣ್ಣೆ – 2 ಟೇಬಲ್‌ ಚಮಚ

ಕಾಳು ಮೆಣಸಿನ ಪುಡಿ – 4 ಚಿಟಿಕೆ

ಉಪ್ಪು – ರುಚಿಗೆ ತಕ್ಕಷ್ಟು

ಹುರಿದ ಜೀರಿಗೆ ಪುಡಿ – ½ ಚಮಚ

ಮಾಡುವ ವಿಧಾನ:

ಆಲೂಗಡ್ಡೆಯ ಸಿಪ್ಪೆ ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಅದು ಮುಳುಗುವವರೆಗೂ ನೀರು ಸೇರಿಸಿ ಬೇಯಿಸಿ. ಕೆಳಗಿಳಿಸಿದ ಆಲೂಗಡ್ಡೆಯನ್ನು ನೀರಿನಿಂದ ತೆಗೆದು ಪುಡಿಮಾಡಿ ಅದೇ ನೀರಿಗೆ ಹಾಕಿ. 1 ಬಟ್ಟಲು ನೀರಿಗೆ ಅಕ್ಕಿಹಿಟ್ಟು ಅಥವಾ ಕಾರ್ನ್‌ಪ್ಲೋರ್‌ನ್ನು ಹಾಕಿ. ಗಂಟಿಲ್ಲದಂತೆ ಕಲೆಸಿ ಮತ್ತೊಂದು ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಕುದಿಸಿ.

ಇದಕ್ಕೆ ಆಲೂಗಡ್ಡೆ ರಸವನ್ನು ಬೆರೆಸಿ ಒಟ್ಟಿಗೆ ಶೋಧಿಸಿ. ಮತ್ತೆ ಒಂದು ಕುದಿ ಬರುವವರೆಗೂ ಸಣ್ಣ ಉರಿಯಲ್ಲಿ ಕುದಿಸಿ. ನಂತರ ಪಾತ್ರೆಯನ್ನು ಕೆಳಗಿಳಿಸಿ ರಸಕ್ಕೆ ಕಾಳು ಮೆಣಸಿನ ಪುಡಿ, ಹುರಿದ ಜೀರಿಗೆ ಪುಡಿ ಮತ್ತು ಬೆಣ್ಣೆ ಬೆರೆಸಿ ಜೊತೆಗೆ ಹಾಲಿನ ಕೆನೆ ಸಹಿತ ಊಟಕ್ಕೆ ಮೊದಲು ಸೇವಿಸಿ.

ಹೂ ಕೋಸು ಸೂಪ್‌

ಬೇಕಾಗುವ ಸಾಮಗ್ರಿಗಳು:

ಹೂಕೋಸು (ಕಾಲಿಫ್ಲವರ್‌) – 1 ಮಧ್ಯಮ ಗಾತ್ರದ್ದು

ಕ್ಯಾರೆಟ್‌ – 100 ಗ್ರಾಂ

ಆಲೂಗಡ್ಡೆ – 100 ಗ್ರಾಂ

ಹಾಲು – 1 ಬಟ್ಟಲು

ಬೆಣ್ಣೆ – 1 ಚಿಕ್ಕ ಚಮಚ

ಅವಲಕ್ಕಿ – 2 ಚಿಕ್ಕ ಚಮಚ

ಕಾಳು ಮೆಣಸಿನ ಪುಡಿ – 1-2 ಚಿಟಿಕೆ

ಮೆಣಸಿನ ಪುಡಿ – 1-2 ಚಿಟಿಕೆ

ಸಕ್ಕರೆ – ½ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಅರಿಶಿನ ಪುಡಿ – 2 ಚಿಟಿಕೆ

ಖಾದ್ಯ ತೈಲ ಅಥವಾ ತುಪ್ಪ – 2 ಸೌಟು

ಮಾಡುವ ವಿಧಾನ:

ಹೂಕೋಸನ್ನು ಚಿಕ್ಕ ಚಿಕ್ಕ ತುಂಡು ಮಾಡಿ ಅರಿಶಿನ ಬೆರೆಸಿದ ಬಿಸಿನೀರಿಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ 5-6 ನಿಮಿಷ ಬಿಡಿ. ಆಲೂಗಡ್ಡೆ ಹಾಗೂ ಕ್ಯಾರೆಟ್‌ ಸಿಪ್ಪೆ ತೆಗೆದು ತೊಳೆದು ಹೋಳು ಮಾಡಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ನೀರು ಸೋಸಿದ ಎಲ್ಲಾ ತರಕಾರಿಗಳೆಲ್ಲವೂ ಮುಳುಗುವಷ್ಟು ನೀರು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ½ ಚಮಚ ಸಕ್ಕರೆ ಬೆರೆಸಿ ಬೇಯಿಸಿ. ರಸ ಬಿಸಿದಿಟ್ಟುಕೊಳ್ಳಿ.

ಈಗ ತರಕಾರಿಗಳನ್ನು ನಾದಿ ಅದೇ ರಸಕ್ಕೆ ಮತ್ತೆ ಸೇರಿಸಿ ಹಾಲಿನೊಂದಿಗೆ ಕುದಿಸಿ. ಇದಕ್ಕೆ ಬೆಣ್ಣೆ, ಉಪ್ಪು, ಕಾಳು ಮೆಣಸಿನ ಪುಡಿ, ಮೆಣಸಿನ ಕಾಯಿಪುಡಿ ಸೇರಿಸಿ.

ಕರಿದ ಅವಲಕ್ಕಿ:

ಖಾದ್ಯ ತೈಲ ಅಥವಾ ತುಪ್ಪವನ್ನು ಒಂದು ಸಣ್ಣ ಬಾಣಲೆಯಲ್ಲಿ ಕಾಯಿಸಿ ಅದರಲ್ಲಿ ಆರಿಸಿದ ಗಟ್ಟಿ ಅವಲಕ್ಕಿಯನ್ನು ಸ್ವಲ್ಪ ಉಪ್ಪು ಹಾಕಿ ಕರಿದಿಟ್ಟುಕೊಳ್ಳಿ. ಹೂಕೋಸ್‌ ಸೂಪ್‌ನೊಂದಿಗೆ ಮೇಲೆ ಕರಿದ ಅವಲಕ್ಕಿಯನ್ನು ಹಾಕಿ ಸ್ವೀಕರಿಸಿ.

ಸೌತೇಕಾಯಿ ಸೂಪ್‌

ಬೇಕಾಗುವ ಸಾಮಗ್ರಿಗಳು:

ದೊಡ್ಡ ಎಳೆ ಸೌತೇಕಾಯಿ – 1

ಬೆಣ್ಣೆ – 2 ಚಿಕ್ಕ ಚಮಚ

ಅಕ್ಕಿ ಹಿಟ್ಟು – 2 ಚಿಕ್ಕ ಚಮಚ

ಕೆನೆ ಅಥವಾ ಹಾಲು – 8-10 ಚಿಕ್ಕ ಚಮಚ

ಉಪ್ಪು –  ರುಚಿಗೆ ತಕ್ಕಷ್ಟು

ಕಾಳು ಮೆಣಸಿನ ಪುಡಿ – ½ ಚಮಚ

ಹುರಿದ ಜೀರಿಗೆ ಪುಡಿ – ½ ಚಮಚ

ಮಾಡುವ ವಿಧಾನ:

ಸೌತೇಕಾಯಿಯ ಕಹಿ ಮತ್ತು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಸ್ವಲ್ಪ ನೀರು, ಬೆಣ್ಣೆ, ಉಪ್ಪು ಬೆರೆಸಿ ಬೇಯಿಸಿ. ನಂತರ ಒಂದು ಬಟ್ಟಲಿನಲ್ಲಿ ಅಕ್ಕಿಹಿಟ್ಟು ಮತ್ತು ನೀರು ಸೇರಿಸಿ ಗಂಟಿಲ್ಲದ ದ್ರಾವಣ ಮಾಡಿಕೊಳ್ಳಿ. ಇದಕ್ಕೆ 2 ಲೋಟ ನೀರು ಸೇರಿಸಿ ಸೌತೇಕಾಯಿ ರಸಕ್ಕೆ ಬೆರೆಸಿ 5-10 ನಿಮಿಸ ಕುದಿಸಿ. ರಸವನ್ನು ಕೆಳಗಿಳಿಸಿ ಶೋಧಿಸಿ ತಣ್ಣಗಾದ ನಂತರ ಹಾಲು ಅಥವಾ ಕೆನೆಯೊಂದಿಗೆ ಅಗತ್ಯವಿರುವಷ್ಟು ಉಪ್ಪು, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ ಸೇರಿಸಿ. ಸೌತೇಕಾಯಿ ಸೂಪ್‌ ಸಿದ್ಧ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi