ಎಲ್ಲ ಶಕ್ತಿಯ ಮೂಲ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರು
ಮಾರ್ಚ್‌ 30, 1971ರಲ್ಲಿ ಮುಂಬಯಿಯಲ್ಲಿ ಮಾಡಿದ ಉಪನ್ಯಾಸ

ಭೂಮಿರಾಪೋಽನಲೋ ವಾಯುಃ ಖಂ ಮನೋ ಬುದ್ಧಿರೇವ ಚ |

ಅಹಙ್ಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ॥

ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಮ್‌ |

ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್‌॥

    ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ – ಈ ಎಂಟು ನನ್ನ ಪ್ರತ್ಯೇಕಗೊಂಡ ಭೌತಿಕ ಶಕ್ತಿಗಳಾಗಿವೆ.

    ಮಹಾಬಾಹುವಾದ ಅರ್ಜುನನೇ, ಇವಲ್ಲದೆ ನನ್ನ ಇನ್ನೂ ಶ್ರೇಷ್ಠವಾದ ಮತ್ತೊಂದು ಶಕ್ತಿ ಇದೆ. ಅದು ಈ ಭೌತಿಕ ಮತ್ತು ಕೆಳಮಟ್ಟದ ಪ್ರಕೃತಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಜೀವಿಗಳಿಂದ ಆದದ್ದು.

– ಭಗವದ್ಗೀತೆ  7.4-5

    ಇಲ್ಲಿ ಕೃಷ್ಣನು ಹೇಗೆ ತಾನೇ ಎಲ್ಲವೂ ಎಂಬುವುದನ್ನು ವಿವರಿಸುತ್ತಿದ್ದಾನೆ. ಲೌಕಿಕ ವಿಜ್ಞಾನಿಗಳು ಐಹಿಕ ಶಕ್ತಿಯ ಪ್ರಧಾನ ರೂಪಗಳಾದ ಭೂಮಿ, ನೀರು, ಅಗ್ನಿ, ಗಾಳಿ ಮತ್ತು ಆಕಾಶವನ್ನು ಕುರಿತು ಅಧ್ಯಯನ ಮಾಡುತ್ತಾರೆ. ಮನೋ ವಿಜ್ಞಾನಿಗಳು ಮತ್ತು ತತ್ತ್ವಜ್ಞಾನಿಗಳು ಮೂರು ಸೂಕ್ಷ್ಮ ವಿಷಯಗಳಾದ ಬುದ್ಧಿಶಕ್ತಿ, ಮನಸ್ಸಿನ ವಿವಿಧ ಹಂತಗಳು ಮತ್ತು ಅಹಂಕಾರದ ಬಗೆಗೆ ಅಧ್ಯಯನ ಮಾಡುತ್ತಾರೆ. ಶ್ರೀ ಕೃಷ್ಣನು ಹೇಳುತ್ತಾನೆ, “ಈ ಎಂಟು ನನ್ನ ಪ್ರತ್ಯೇಕಗೊಂಡ ಐಹಿಕ ಶಕ್ತಿಗಳಾಗಿವೆ.”

    ಈ `ಪ್ರತ್ಯೇಕ ಶಕ್ತಿ’ಯನ್ನು ನಾವು ಈ ರೀತಿ ಅರ್ಥಮಾಡಿಕೊಳ್ಳ- ಬಹುದು. ನಾನು ಮಾತನಾಡುತ್ತಿರುವೆ, ಈ ಟೇಪ್‌ ರೆಕಾರ್ಡರ್‌ ನನ್ನ ಧ್ವನಿಯನ್ನು ಮುದ್ರಿಸಿಕೊಳ್ಳುತ್ತಿದೆ. ಅನಂತರ ಟೇಪ್‌ ರೆಕಾರ್ಡರ್‌ ಅನ್ನು ಕಾರ್ಯಗತಗೊಳಿಸಿದಾಗ, ನಾನು ಮತ್ತೆ ಮಾತಾಡುತ್ತಿರುವೆನೇನೋ ಎಂದು ನೀವು ಭಾವಿಸುವಿರಿ. ನಾನು ಈಗ ಮಾತನಾಡುತ್ತಿರುವುದಕ್ಕೂ ಮುದ್ರಿತ ಮಾತಿಗೂ ವ್ಯತ್ಯಾಸವಿದೆ. ಆ ಮಾತು ಪ್ರತ್ಯೇಕ ಶಕ್ತಿ.

    ಲೌಕಿಕ ಜಗತ್ತು ಕೃಷ್ಣನ ಪ್ರತ್ಯೇಕ ಜಗತ್ತಾದರೂ ಅದು ಅವನ ನಿರ್ದೇಶನದಂತೆ ಕೆಲಸ ಮಾಡುತ್ತದೆ. ಅದು ಸ್ವತಂತ್ರವಲ್ಲ. ದೇವರಿಲ್ಲ ಮತ್ತು ಭೌತವಸ್ತುಗಳು ಕ್ರಿಯೆ ಪ್ರತಿಕ್ರಿಯೆಗಳಿಂದ ಮಾತ್ರ ಕೆಲಸ ಮಾಡುತ್ತವೆ ಎಂದು ಲೌಕಿಕ ವಿಜ್ಞಾನಿಗಳು ಚಿಂತಿಸುತ್ತಾರೆ. ಆದರೆ ಅದು ವಾಸ್ತವ ಅಲ್ಲ. ಭೌತವಸ್ತು ಭಗವಂತನ ಆದೇಶದ ಮೇಲೆ ಅವಲಂಬಿತ. ಭಗವದ್ಗೀತೆಯ 9ನೆಯ ಅಧ್ಯಾಯದಲ್ಲಿ ಕೃಷ್ಣನು ಇದನ್ನೇ ಹೇಳಿದ್ದಾನೆ – ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಂ : “ಲೌಕಿಕ ಶಕ್ತಿಯು ನನ್ನ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತದೆ.” ಲೌಕಿಕ ಶಕ್ತಿಯು ಸ್ವತಂತ್ರವಾಗಿ ನಿರ್ವಹಿಸುತ್ತದೆ ಎಂಬ ಅಭಿಪ್ರಾಯವು ಸರಿಯಾದ ಅರ್ಥಗ್ರಹಿಕೆಯಲ್ಲ. ನೋಡಿ, ಈ ವಿದ್ಯುತ್‌ ಪಂಖ ಓಡುತ್ತಿದೆ. ಆದರೆ ಅದು ಸ್ವತಂತ್ರವಾಗಿ ಓಡುತ್ತಿಲ್ಲ. ಪಂಖವು ಓಡಲು ನಮಗೆ ವಿದ್ಯುತ್‌ ಬೇಕು, ವಿದ್ಯುತ್‌ ಕೇಂದ್ರ ಅಗತ್ಯ ಮತ್ತು ವಿದ್ಯುತ್‌ ಕೇಂದ್ರದಲ್ಲಿ ನಿರ್ವಾಹಕ ಬೇಕು. ಆದುದರಿಂದ ಅಂತ್ಯದಲ್ಲಿ, ಅಲ್ಲೊಂದು ಜೀವ ಶಕ್ತಿ ಇದೆ, ಅದುವೇ ಎಂಜಿನಿಯರ್‌.

    ವಸ್ತುಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಸಾಧ್ಯವಿಲ್ಲ. ವಸ್ತುಗಳು ಸ್ವತಂತ್ರವಾಗಿ ನಿರ್ವಹಿಸುತ್ತಿರುವ ಬಗೆಗೆ ನಮ್ಮ ಬಳಿ ಅನುಭವವಿಲ್ಲ. ವಸ್ತುಗಳು ಕಾರ್ಯ ನಿರ್ವಹಿಸುವುದನ್ನು ನೋಡಿದಾಗ, ಅದರ ಹಿಂದೆ ಆಧ್ಯಾತ್ಮಿಕ ಅಸ್ತಿತ್ವ ಇರುವುದರಿಂದ ಅದು ಕೆಲಸ ಮಾಡುತ್ತಿದೆ ಎಂಬುವುದನ್ನು ನಾವು ಅರಿಯಬೇಕು.

    ಐಹಿಕ ಶಕ್ತಿಗಳು ತನ್ನಿಂದ ಬರುತ್ತದೆ ಎಂದು ಕೃಷ್ಣನು ಹೇಳುತ್ತಾನೆ. ಆದರೆ ಒಬ್ಬ ವ್ಯಕ್ತಿಯಿಂದ ಈ ಎಲ್ಲಾ ಲೌಕಿಕ ರೂಪಗಳು ಉತ್ಪಾದನೆಯಾಗುವುದು ನಮಗೆ ಅರ್ಥವಾಗುವುದಿಲ್ಲ.  ಬೃಹತ್ತಾದ ಆಕಾಶ, ವೈವಿಧ್ಯಮಯವಾದ ಶಕ್ತಿಗಳೊಂದಿಗೆ ಅಸಂಖ್ಯ ಗ್ರಹಗಳು, ಇವೆಲ್ಲವನ್ನೂ ಒಬ್ಬ ವ್ಯಕ್ತಿ ಉತ್ಪಾದಿಸುವುದು ಹೇಗೆ ಸಾಧ್ಯ? ಆದುದರಿಂದ ಅಲ್ಪ ಜ್ಞಾನಿಗಳು ಪರಮ ಸತ್ಯವು ನಿರಾಕಾರವೆಂದು ಯೋಚಿಸುತ್ತಾರೆ. ಆದರೆ, ವಾಸ್ತವವಾಗಿ ಅವನು ಅಲೌಕಿಕ ಪುರುಷ.

    ಹೇಗೆ ಸಣ್ಣ ಆಧ್ಯಾತ್ಮಿಕ ಕಿಡಿಯಿಂದ ನಮ್ಮ ದೇಹದ ಬೆಳವಣಿಗೆ- ಯಾಗುತ್ತದೆಯೋ ಅದೇ ರೀತಿ ಪರಮ ಆತ್ಮನಾದ ಕೃಷ್ಣನಿಂದ ಈ ವಿಶ್ವವು ವಿಕಾಸಹೊಂದುತ್ತದೆ. ಆ ಆಧ್ಯಾತ್ಮಿಕ ಕಿಡಿಯ ಬಗೆಗೆ ವೈದಿಕ ಸಾಹಿತ್ಯದಲ್ಲಿ ವಿವರಿಸಲಾಗಿದೆ :

    ಬಾಲಾಗ್ರ ಶತ ಭಾಗಸ್ಯ ಶತಧಾ ಕಲ್ಪಿತಸ್ಯ ಚ |

    ಭಾಗೋ ಜೀವಃ ಸ ವಿಜ್ಞೇಯಃ ಸ ಅಚಿಂತ್ಯಾಯ ಕಲ್ಪತೇ ॥

    ಕೂದಲಿನ ತುದಿಯನ್ನು ಒಂದು ನೂರು ಭಾಗ ಮಾಡಿ ಮತ್ತು ಅವುಗಳಲ್ಲಿ ಒಂದು ಭಾಗವನ್ನು ತೆಗೆದುಕೊಂಡು  ಅದನ್ನು ಪುನಃ ಒಂದು ನೂರು ಭಾಗಗಳಾಗಿ ಮಾಡಿದರೆ – ಕೂದಲಿನ ಹತ್ತು ಸಾವಿರದ ಒಂದನೇ ಭಾಗವು ಆಧ್ಯಾತ್ಮಿಕ ಆತ್ಮದ ಅಳತೆಯದಾಗಿರುತ್ತದೆ. ಮತ್ತು ಈ ಆಧ್ಯಾತ್ಮಿಕ ಆತ್ಮದ  ಆಧಾರದ ಮೇಲೆ ದೇಹದ ಬೆಳವಣಿಗೆಯಾಗುತ್ತದೆ.

    ಆಧ್ಯಾತ್ಮಿಕ ಕಿಡಿಯು ತಂದೆಯ ವೀರ್ಯದಲ್ಲಿ ಆಶ್ರಯ ಪಡೆದುಕೊಳ್ಳುತ್ತದೆ ಮತ್ತು ಅವನು ಆ ವೀರ್ಯವನ್ನು ತಾಯಿಯ ಗರ್ಭ ಕೋಶಕ್ಕೆ ತುಂಬುತ್ತಾನೆ ಎಂದು ವೈದಿಕ ಸಾಹಿತ್ಯದಿಂದ ನಾವು ಅರಿಯುತ್ತೇವೆ. ಅನಂತರ, ಪರಿಸ್ಥಿತಿಯು ಆಶಾದಾಯಕವಾಗಿದ್ದರೆ, ದೇಹವು ಬೆಳೆಯಲಾರಂಭಿಸುತ್ತದೆ. ಮೊದಲು ಅದು ಬಟಾಣಿ ಕಾಳಿನ ಗಾತ್ರದಲ್ಲಿರುತ್ತದೆ. ಅನಂತರ ವಿವಿಧ ರಂಧ್ರಗಳು ರೂಪುಗೊಳ್ಳುತ್ತವೆ. ಅವು ಕಣ್ಣುಗಳು, ಕಿವಿಗಳು, ಬಾಯಿ, ಮೂಗು, ಜನನೇಂದ್ರಿಯಗಳು ಮತ್ತು ಗುದ ನಾಳವಾಗಿ – ದೇಹದ 9 ರಂಧ್ರಗಳಾಗಿ ಬೆಳವಣಿಗೆ ಹೊಂದುತ್ತವೆ.

    ಆದುದರಿಂದ ಸಣ್ಣ ಆಧ್ಯಾತ್ಮಿಕ ಕಿಡಿಯು ದೇಹವಾಗಿ ಬೆಳೆಯುತ್ತದೆ ಎನ್ನುವುದನ್ನು ಯಾರಾದರೂ ಅರ್ಥಮಾಡಿಕೊಳ್ಳಬಹುದು. ಅದೇ ರೀತಿ ಇಡೀ ವಿಶ್ವವು ಕೃಷ್ಣನ ಆಧ್ಯಾತ್ಮಿಕ ದೇಹದಿಂದ ಬೆಳವಣಿಗೆ ಹೊಂದುತ್ತದೆ.

    ವಸ್ತುಗಳ ಸಂಯೋಜನೆಯು ಜೀವ ಲಕ್ಷಣಗಳನ್ನು ಉತ್ಪಾದಿಸುತ್ತದೆ ಎಂದು ಬೌದ್ಧ ಧರ್ಮ ಹೇಳುತ್ತದೆ. ಆದರೆ ಆತ್ಮವು ವಸ್ತುಗಳನ್ನು ಉತ್ಪಾದಿಸುತ್ತದೆ ಎಂದು ನಾವು ಭಗವದ್ಗೀತೆ ಮತ್ತು ಇತರ ವೈದಿಕ
ಸಾಹಿತ್ಯಗಳಿಂದ ಅರ್ಥ ಮಾಡಿಕೊಂಡಿದ್ದೇವೆ.

    ಬುದ್ಧನ ಸಿದ್ಧಾಂತದ ಪ್ರಕಾರ, ದೇಹವು ವಸ್ತುಗಳ ಸಂಯೋಜನೆ ಮತ್ತು ಆ ವಸ್ತುವನ್ನು ಕಳಚಿಬಿಟ್ಟರೆ ನಮಗೆ ನೋವು-ನಲಿವು ಇರುವುದಿಲ್ಲ. ಅದು ಶೂನ್ಯವಾದಿಗಳ ಸಿದ್ಧಾಂತ. ಆದರೆ ನಾವು ಶೂನ್ಯವಾದಿಗಳೂ ಅಲ್ಲ, ಅಂತಿಮವಾಗಿ ಎಲ್ಲವೂ ನಿರಾಕಾರವೆಂದು ಯೋಚಿಸುವ ನಿರ್ವಿಶೇಷವಾದಿಗಳೂ ಅಲ್ಲ. ನಾವು ಸವಿಶೇಷ ವಾದಿಗಳು – ನಾವು ಆಧ್ಯಾತ್ಮಿಕ ಆತ್ಮಕ್ಕೆ ರೂಪವಿದೆ ಎಂಬುವುದನ್ನು ಒಪ್ಪುವವರು.

    ಒಬ್ಬ ವ್ಯಕ್ತಿಯು ಹಳೇ ಉಡುಪನ್ನು ಬಿಟ್ಟು ಹೊಸ ಉಡುಪನ್ನು ಸ್ವೀಕರಿಸುವಂತೆ ನಾವು ದೇಹಗಳನ್ನು ಬದಲಿಸುತ್ತಿರುತ್ತೇವೆ. ಏಕೆಂದರೆ ನಮ್ಮ ಆಧ್ಯಾತ್ಮಿಕ ದೇಹಕ್ಕೆ ರೂಪ ಅಥವಾ ಆಕಾರವಿದೆ – ಕೈಗಳು, ಕಾಲುಗಳು ಇತ್ಯಾದಿ. ಆದುದರಿಂದ ನಾವು ಆಕಾರವಿರುವ ಐಹಿಕ ದೇಹವನ್ನು ಬೆಳೆಸುತ್ತೇವೆ. ಅದನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ನಿಮಗೆ ಕೈ ಕಾಲುಗಳಿರುವುದರಿಂದ  ನಿಮ್ಮ ಕೋಟ್‌ ಮತ್ತು ಶರ್ಟ್‌ಗಳಿಗೆ ಕೈ ಕಾಲುಗಳಿರುವಂತೆ ಉಡುಪೆಂದು ಪರಿಗಣಿಸಿರುವ ಲೌಕಿಕ ದೇಹವು ಆಧ್ಯಾತ್ಮಿಕ ಆಕಾರದ ದೇಹದ ಮೇಲೆ ಬೆಳೆದಿದೆ. ಈ ಅರ್ಥ ಗ್ರಹಿಕೆಯನ್ನು ಸವಿಶೇಷವಾದ ಎಂದು ಕರೆಯುತ್ತಾರೆ.

    ಈ ಶ್ಲೋಕದಲ್ಲಿ ಉಲ್ಲೇಖಿಸಿರುವ ಎಂಟು ಐಹಿಕ ಪದಾರ್ಥಗಳು ಭಗವಂತನ ಬಾಹ್ಯ ರೂಪದಲ್ಲಿ ಸೇರಿವೆ. ಆ ಎಂಟರಲ್ಲಿ ಮೂರು ಸೂಕ್ಷ್ಮ ರೂಪಗಳು : ಮನಸ್ಸು, ಬುದ್ಧಿ ಮತ್ತು ಅಹಂಕಾರ. ಅವು ಸೂಕ್ಷ್ಮವಾಗಿದ್ದರೂ ಅವು ಆಧ್ಯಾತ್ಮಿಕವಲ್ಲ, ಅವು ಐಹಿಕ. ಮನಸ್ಸು ವಸ್ತುವಿನ ಸೂಕ್ಷ್ಮ ರೂಪವಾಗಿರುವುದರಿಂದ, ಮಾನಸಿಕ ಊಹಾಪೋಹಗಳು ಆಧ್ಯಾತ್ಮಿಕವೆಂದು ಭಾವಿಸುವುದು ಸರಿಯಲ್ಲ.

    ರಾತ್ರಿ ವೇಳೆ ನಮ್ಮ ಸೂಕ್ಷ್ಮ ದೇಹವು ಕಾರ್ಯ ನಿರತವಾಗಿರುತ್ತದೆ ಮತ್ತು ನಮಗೆ ಪ್ರತ್ಯೇಕ ದೇಹವಿದೆ, ಮನೆಯಿಂದ ಎಲ್ಲೋ ಹೋಗಿದ್ದೇವೆ ಎಂದು ಯೋಚಿಸುತ್ತೇವೆ. ನಾವು ಲೌಕಿಕ ದೇಹವನ್ನು ಮರೆತುಬಿಡುತ್ತೇವೆ. ಅದೇ ರೀತಿ, ಮರಣದ ಸಮಯದಲ್ಲಿ ಯಾವ ಭಾವದ ಬಗೆಗೆ ಚಿಂತಿಸುತ್ತೇವೆಯೋ ಅದರಂತೆ ನಮ್ಮ ಮನಸ್ಸು ಮತ್ತು ಬುದ್ಧಿಯು ನಮ್ಮ ಮರಣದ ಅನಂತರ ನಮ್ಮನ್ನು ಮತ್ತೊಂದು ದೇಹಕ್ಕೆ ಕರೆದೊಯ್ಯುತ್ತದೆ. ಮತ್ತು ನಾವು ನಮಗಿರುವ ದೇಹವನ್ನು ಮರೆತುಬಿಡುತ್ತೇವೆ.

    ಅಹಂಕಾರದಲ್ಲಿ `ನಾನು ಭೌತಿಕ ಪ್ರಕೃತಿಯ ಉತ್ಪಾದನೆ’ ಎಂದು ಯೋಚಿಸುವುದು ಸೇರಿದೆ. ವಾಸ್ತವವಾಗಿ ನಾವು ಬ್ರಹ್ಮನ್‌, ಆತ್ಮ – ಅಹಂ ಬ್ರಹ್ಮಾಸ್ಮಿ. ಅದೆಲ್ಲಕ್ಕಿಂತ, ಇಲ್ಲಿ ಉಲ್ಲೇಖಿಸಿರುವ ಲೌಕಿಕ ವಸ್ತುಗಳಿಗಿಂತ ಉನ್ನತವಾದದ್ದು ಆಧ್ಯಾತ್ಮಿಕ ಆತ್ಮದ ವೇದಿಕೆ. ಆಧ್ಯಾತ್ಮಿಕ ಆತ್ಮವು ಪರಮ ಆತ್ಮ ಕೃಷ್ಣನ ಭಾಗ ಮತ್ತು ಕೃಷ್ಣನು ಲೌಕಿಕ ಮತ್ತು ಆಧ್ಯಾತ್ಮಿಕವಾದ ಎಲ್ಲದಕ್ಕೂ ಮೂಲ – ಜನ್ಮಾದಿ ಅಸ್ಯ ಯತಃ.

    ಕೃಷ್ಣನಿಗೆ ಅನೇಕ ರೀತಿಯ ಅಗಾಧ ಶಕ್ತಿಗಳಿವೆ. ಪರಾಸ್ಯ ಶಕ್ತಿರ್‌ ವಿವಿಧೈವ ಶ್ರೂಯತೇ – ಅವುಗಳಲ್ಲಿ ಐಹಿಕ ಶಕ್ತಿಯೂ ಒಂದು. ಅದನ್ನು ಬಾಹ್ಯಶಕ್ತಿ ಎಂದು ಕರೆಯುತ್ತಾರೆ. ಹೇಗೆ ನನ್ನ ಅಥವಾ ನಿಮ್ಮ ದೇಹವು ನಮ್ಮ ಬಾಹ್ಯ ಶಕ್ತಿಯೋ ಅದೇ ರೀತಿ ಇಡೀ ಬ್ರಹ್ಮಾಂಡವು ಕೃಷ್ಣನ ಬಾಹ್ಯಶಕ್ತಿಯ ಅಭಿವ್ಯಕ್ತಿ.

    ಲೌಕಿಕ ಶಕ್ತಿ ಅಥವಾ ಅಂಶಗಳನ್ನು ಪಟ್ಟಿ ಮಾಡಿದ ಮೇಲೆ, ಕೃಷ್ಣನು ಹೇಳುತ್ತಾನೆ, `ಲೌಕಿಕ ಶಕ್ತಿಗಳು ಕೆಳ ಮಟ್ಟದ್ದು.’ ಅಪರಾ ಎಂದರೆ `ಕೀಳು ಮಟ್ಟ.’ ಹೇಗೆ ನಾವು ಜಗತ್ತಿನ ವಿಷಯ ಅಥವಾ ವಸ್ತುಗಳನ್ನು ಹೋಲಿಸಿ ಒಂದು ಶ್ರೇಷ್ಠ ಮತ್ತೊಂದು ಕೆಳ ಮಟ್ಟದ್ದು ಎಂದು ಹೇಳುವಂತೆ, ಇಲ್ಲಿ ಕೃಷ್ಣನು ವಿಶ್ಲೇಷಿಸಿಕೊಳ್ಳುತ್ತಾನೆ. ತನ್ನ ಎಂಟು ಐಹಿಕ ಶಕ್ತಿಗಳು ಕೆಳ ಮಟ್ಟದ್ದು ಎಂದು ಕೃಷ್ಣ ಹೇಳುತ್ತಾನೆ. ಆದರೆ ಮತ್ತೊಂದು ಶಕ್ತಿ ಇದೆ, ಅದು ಶ್ರೇಷ್ಠವಾದುದು ಎಂದೂ ಅವನು ಹೇಳಿದ್ದಾನೆ. ಆ ಶ್ರೇಷ್ಠ ಶಕ್ತಿ ಯಾವುದೆಂದರೆ ಜೀವ ಭೂತ – ಜೀವಿಗಳು. ನಾವು ಕೃಷ್ಣನ ಶಕ್ತಿ.  ನಾವು ಪರಾತ್ಪರ ಅಥವಾ ಪರಮಾತ್ಮನ ನಿರಾಕಾರ ಅಂಶವಾದ ಬ್ರಹ್ಮನ್‌ಗೆ ಸಮಾನರು ಎಂದು ಮಾಯಾವಾದಿ ತತ್ತ್ವಜ್ಞಾನ ಹೇಳಿಕೊಳ್ಳುತ್ತದೆ. ಆದರೆ ನಾವು ಜೀವಿಗಳು, ಸುಮ್ಮನೆ ಶಕ್ತಿ ಮತ್ತು ಭಗವಂತನು ಅಖಂಡ ಶಕ್ತಿಶಾಲಿ ಎಂದು ಭಗವದ್ಗೀತೆ ಹೇಳುತ್ತದೆ.

    ಶಕ್ತಿ ಮತ್ತು ಶಕ್ತಿಶಾಲಿಗೆ ವ್ಯತ್ಯಾಸಗಳಿವೆ. ಬೆಂಕಿಯನ್ನೇ ಉದಾಹರಣೆಗೆ ತೆಗೆದುಕೊಳ್ಳಿ. ಬೆಂಕಿಯು ಶಕ್ತಿಯ ಮೂಲ. ಮತ್ತು ದೀಪ ಹಾಗೂ ಶಾಖವು ಬೆಂಕಿಯ ಶಕ್ತಿಗಳು. ಸೂರ್ಯ ಮತ್ತು  ಸೂರ್ಯನ ಬೆಳಕು ಗಮನಿಸಿ. ಬೆಳಕು ಸೂರ್ಯನ ಶಕ್ತಿ. ನಿಮ್ಮ ಕೋಣೆ ಒಳಗೆ ಸೂರ್ಯನ ಬೆಳಕು ಬಂತೆಂದರೆ ಸೂರ್ಯನೇ ಒಳಗೆ ಬಂದಿದ್ದಾನೆಂದು ನೀವು ಭಾವಿಸಿದರೆ, ಅದು ತಪ್ಪು.

    ಶಕ್ತಿ ಮತ್ತು ಶಕ್ತಿಶಾಲಿ ಎರಡೂ ಒಂದೇ ವೇಳೆಗೆ ಒಂದೇ ಮತ್ತು ಭಿನ್ನ. ಅದೇ ಶ್ರೀ ಚೈತನ್ಯರ ಸಿದ್ಧಾಂತ : ಅಚಿಂತ್ಯ ಭೇದಾಭೇದ. ಭಗವಂತ ಮತ್ತು ಜೀವಿಗಳು ಒಂದೇ ಎಂದು ಅನೇಕ ತತ್ತ್ವಜ್ಞಾನಿಗಳು ಹೇಳುತ್ತಾರೆ. “ಮತ್ತು ಜೀವಿಯು ಇದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾಗುತ್ತಾನೆ, ಏಕೆಂದರೆ ಅವನು ಮಾಯೆಯಲ್ಲಿ ಸಿಲುಕಿರುತ್ತಾನೆ.” ಹೌದು, ಜೀವಿಯು ಮಾಯೆಯಿಂದ ಮುಚ್ಚಲ್ಪಟ್ಟಿರುತ್ತಾನೆ. ಆದರೆ ಭಗವಂತನನ್ನು ಮಾಯೆ ಮುಚ್ಚಲಾಗದು. ನಮ್ಮ ದೃಷ್ಟಿಯಿಂದ ಮೋಡವು ಸೂರ್ಯನನ್ನು ಮುಚ್ಚಿರುತ್ತದೆ. ಆದರೆ ಮೋಡವು ಎಂದೆಂದಿಗೂ ಸೂರ್ಯನನ್ನು ಮರೆಮಾಡಲಾಗದು. ಆದುದರಿಂದ ಜೀವಿಯು ಭಗವಂತನಂತೆ ಎಂಬುವುದು ಹೇಗೆ ಸಾಧ್ಯ?

    ವಿಷ್ಣು ಶಕ್ತಿಃ ಪರಾ ಪ್ರೋಕ್ತಾ ಕ್ಷೇತ್ರಜ್ಞಾಖ್ಯಾ ತಥಾ ಪರಾ |

    ಅವಿದ್ಯಾ ಕರ್ಮ ಸಂಜ್ಞಾನ್ಯಾ ತೃತೀಯಾ ಶಕ್ತಿರ್‌ ಇಶ್ಯತೇ ॥

    ಕೃಷ್ಣನ ಎಲ್ಲಾ ವೈವಿಧ್ಯಮಯ ಶಕ್ತಿಗಳೂ ಆಧ್ಯಾತ್ಮಿಕ. ಕೃಷ್ಣನು ಸಂಪೂರ್ಣ ಆಧ್ಯಾತ್ಮಿಕನಾದರೆ, ಅವನ ಶಕ್ತಿಗಳೂ ಆಧ್ಯಾತ್ಮಿಕವಾಗಿರಲೇಬೇಕು. ಆದುದರಿಂದ, ವಿಷ್ಣು ಪುರಾಣ ಹೇಳುತ್ತದೆ, ವಿಷ್ಣು ಶಕ್ತಿಃ ಪರಾ ಪೆ್ರೂೕಕ್ತಾ – `ಮೂಲತಃ ಎಲ್ಲಾ ದೇವರ ಶಕ್ತಿಗಳೂ ಆಧ್ಯಾತ್ಮಿಕ.’ ಪರಾ ಎಂದರೆ ಅಧ್ಯಾತ್ಮ.

    ಕ್ಷೇತ್ರಜ್ಞಾಖ್ಯಾ ತಥಾ ಪರಾ – ಕ್ಷೇತ್ರಜ್ಞಾ ಶಕ್ತಿ ಅಥವಾ ಜೀವ ಶಕ್ತಿ, ಅಂದರೆ ಜೀವಿ ಕೂಡ ಪರಾ ಶಕ್ತಿ, ಆಧ್ಯಾತ್ಮಿಕ. ಅವಿದ್ಯಾ ಕರ್ಮ ಸಂಜ್ಞಾನ್ಯಾ ತೃತೀಯ ಶಕ್ತಿರ್‌ ಇಶ್ಯತೇ –  “ಆದರೆ ಮತ್ತೊಂದು ಶಕ್ತಿ ಇದೆ, ಅದು ಅವಿದ್ಯಾ, ಅಂದರೆ ಅಜ್ಞಾನ. ಮೂಲತಃ ಆಧ್ಯಾತ್ಮಿಕವಾದರೂ ಈ ಶಕ್ತಿಯು ಅಜ್ಞಾನದಂತೆ ವರ್ತಿಸುತ್ತಿದೆ.”

    ಬ್ರಹ್ಮನ್‌, ದೇವರು ಮಾಯೆಯಿಂದ ಮುಚ್ಚಲ್ಪಪಟ್ಟಿದ್ದಾನೆ ಎಂದು ಯೋಚಿಸುವುದೇ ಒಂದು ರೀತಿಯ ಅವಿದ್ಯಾ. `ಶ್ರೇಷ್ಠ’ ಎಂಬ ಅರ್ಥ ಉಳ್ಳ ಬ್ರಹ್ಮನ್‌ ಅನ್ನು ಹೇಗೆ ಮಾಯೆಯಿಂದ ಮುಚ್ಚುವುದು ಸಾಧ್ಯ? ಹಾಗಾಗಿಬಿಟ್ಟರೆ, ಬ್ರಹ್ಮನ್‌ ಅಲ್ಲ,  ಮಾಯೆಯೇ ಶ್ರೇಷ್ಠವಾಗಿಬಿಡುತ್ತದೆ.

    ಮಾಯೆಯು ಬ್ರಹ್ಮನ್‌ ಅನ್ನು ಮುಚ್ಚಿದರೆ, ಆಗ ಮಾಯೆಯು ಬ್ರಹ್ಮನ್‌ಗಿಂತ ಶ್ರೇಷ್ಠವಾಗುತ್ತದೆ. ಮತ್ತು ಅದು ಸಾಧ್ಯವಿಲ್ಲ. ಮಾಯೆಯು ಒಂದು ಶಕ್ತಿ ಅಥವಾ ಬ್ರಹ್ಮನ್‌ನ ಒಂದು ಉತ್ಪನ್ನ. ಮೋಡವು ಸೂರ್ಯನ ಉತ್ಪನ್ನದಂತೆ. ಸೂರ್ಯನ ಶಾಖದಿಂದ ಸಮುದ್ರದ ನೀರು ಆವಿಯಾಗಿ ಮೋಡವಾಗುತ್ತದೆ. ಆದುದರಿಂದ, ಮೋಡವು ಸೂರ್ಯಶಕ್ತಿಯ ಪರಿವರ್ತಿತ ರೂಪ. ಅದೇ ರೀತಿ, ಮಾಯಾ ಶಕ್ತಿಯು ಕೃಷ್ಣನ ಒಂದು ಶಕ್ತಿ.

    ಆದುದರಿಂದ, ಕೃಷ್ಣನು ಮಾಯೆಯನ್ನು ನಿಯಂತ್ರಿಸುತ್ತಾನೆ. ಮಾಯೆಯು ಎಂದಿಗೂ ಕೃಷ್ಣನನ್ನು ನಿಯಂತ್ರಿಸುವುದಿಲ್ಲ. ಮಾಯೆಯು ಕೃಷ್ಣನನ್ನು ನಿಯಂತ್ರಿಸುತ್ತದೆ ಎಂಬ ಅಭಿಪ್ರಾಯವೇ ಒಳ್ಳೆಯ ತತ್ತ್ವ ಅಲ್ಲ. ಜ್ಞಾನದ ಅಭಾವವೇ ಇಂತಹ ಆಲೋಚನೆಗಳಿಗೆ ಕಾರಣ. ಕೃಷ್ಣನನ್ನು ಯಾರೂ ಎಂದಿಗೂ ಮುಚ್ಚಲಾರರು.

    ವೇದಗಳನ್ನು ಸಂಯೋಜಿಸಿದ ವ್ಯಾಸದೇವರು ಭಕ್ತಿಯೋಗ ಧ್ಯಾನದಿಂದ ಕೃಷ್ಣನನ್ನು ಮತ್ತು ಮಾಯೆಯನ್ನು ನೋಡಿದಾಗ, ಮಾಯೆಯು ಮುಂದೆ ಅಲ್ಲ, ನೆರಳಿನಂತೆ ಹಿಂಬದಿಯಲ್ಲಿ ಇದ್ದದ್ದು ಕಂಡಿತು. ಮಾಯೆಯು ಕೃಷ್ಣನನ್ನು ಮುಚ್ಚುವುದು ಸಾಧ್ಯವಿಲ್ಲ. ಅದು ತಪ್ಪು ಸಿದ್ಧಾಂತ. ಮಾಯೆಯು ವ್ಯಕ್ತಿಯ ಆತ್ಮವನ್ನು ಮುಚ್ಚಬಹುದು.

    ವ್ಯಕ್ತಿಯ ಆತ್ಮವು ಮಾಯೆಯ ಹಿಡಿತದಿಂದಾಗಿ ಕುಸಿಯುವ ಪ್ರವೃತ್ತಿ ಹೊಂದಿರುವ ಕಾರಣ ಆತ್ಮವನ್ನು ತಟಸ್ಥ ಶಕ್ತಿ ಎಂದು ಕರೆಯುತ್ತಾರೆ. ಆತ್ಮದ ಸ್ಥಿತಿಯು ಸಮುದ್ರದ ದಂಡೆಯಂತೆ. ಅದು ಕೆಲ ಸಮಯ ಒಣಗಿರುತ್ತದೆ ಮತ್ತು ಕೆಲ ಸಮಯ ನೀರಿನಿಂದ ಆವೃತವಾಗಿರುತ್ತದೆ. ನಾವು ಮಾಯೆಯ ಹಿಡಿತದಲ್ಲಿದ್ದಾಗ ಅದನ್ನು ಜೀವ-ಭೂತ ಹಂತವೆಂದು ಮತ್ತು ಮಾಯೆಯ ಹಿಡಿತದಲ್ಲಿ ಇಲ್ಲದಿದ್ದಾಗ ಅದನ್ನು ಬ್ರಹ್ಮ-ಭೂತ ಹಂತ ಎಂದೂ ಕರೆಯುತ್ತಾರೆ. ನಾವು ಕೃಷ್ಣ ಪ್ರಜ್ಞೆಯಲ್ಲಿದ್ದಾಗ, ಆಗ ನಾವು ಬ್ರಹ್ಮ ಭೂತದಲ್ಲಿದ್ದೇವೆ ಎಂದೂ ಕೃಷ್ಣ ಪ್ರಜ್ಞೆಯಲ್ಲಿ ಇಲ್ಲದಿದ್ದಾಗ (ಲೌಕಿಕ ಪ್ರಜ್ಞೆಯಲ್ಲಿ ಇದ್ದಾಗ) ಅದು ಮಾಯೆ ಎಂದೂ ಅರ್ಥ. ಮಾಯೆಯ ಬಾಹುಗಳ ಹಿಡಿತದಿಂದ ಮುಕ್ತರಾದ ಕೂಡಲೇ ನಾವು ಪ್ರಸನ್ನಾತ್ಮಾ, ಆನಂದಭರಿತರಾಗುತ್ತೇವೆ. ಅದು ಹೇಗೆಂದರೆ ಒಬ್ಬ ವ್ಯಕ್ತಿ ಸಾಂಕ್ರಾಮಿಕ ರೋಗದಿಂದ ಮುಕ್ತನಾದಾಗ ಹೇಗೆ ಹಿಗ್ಗುವನೋ ಹಾಗೆ.

    ಇಲ್ಲಿ ಅರ್ಜುನನನ್ನು `ಮಹಾ ಬಾಹೋ,’ ಅಂದರೆ `ಶ್ರೇಷ್ಠ ಹೋರಾಟಗಾರ’ ಎಂದು ಸಂಬೋಸಲಾಗಿದೆ. ಶ್ರೇಷ್ಠ ಯೋಧನಾಗಿ ಅರ್ಜುನನು ಈ ವಿಷಯಗಳನ್ನು ಅರ್ಥಮಾಡಿಕೊಳ್ಳಬಲ್ಲ ಎಂದು ಕೃಷ್ಣನು ಹೇಳುತ್ತಿದ್ದಾನೆ. ಯಾರು ಶ್ರೇಷ್ಠ ಹೋರಾಟಗಾರ? ಯೋಧ? ಕೃಷ್ಣನ ಆದೇಶದಂತೆ ನಡೆಯುವವನು.

    ಕೃಷ್ಣ ಪ್ರಜ್ಞೆಯನ್ನು ಬೋಸುವವರೂ ಕೂಡ ಮಹಾಬಾಹುಗಳೇ. ಅವರು ಕೃಷ್ಣ ಪ್ರಜ್ಞೆಯಲ್ಲಿ ಇಲ್ಲದವರ ಜೊತೆ `ಹೋರಾಟ’ ಮಾಡುತ್ತಾರೆ. ಈ ರೀತಿಯ ಹೋರಾಟದ ಮೂಲಕ ಅವರು ಕೃಷ್ಣ ಪ್ರಜ್ಞೆ ಆಂದೋಲನವನ್ನು ಮುನ್ನಡೆಸುತ್ತಾರೆ. ಆದರೆ ಈ ಹೋರಾಟವು ಭಿನ್ನವಾದುದು. ಇಂತಹ ಹೋರಾಟವನ್ನು ಶ್ರೀ ಚೈತನ್ಯ ಮಹಾಪ್ರಭುಗಳು ಬೋಸಿದರು. ೃಷ್ಣ ವರ್ಣಂ ತ್ವಿಶಾ ಅಕೃಷ್ಣಂ ಸಾಂಗೋಪಾಂಗಾಸ್ತ್ರ ಪಾರ್ಶದಂ. ಅಸ್ತ್ರ ಎಂದರೆ `ಆಯುಧಗಳು.’ ಶ್ರೀ ಚೈತನ್ಯ ಮಹಾಪ್ರಭುಗಳು ಮಾಯೆಯ ಜೊತೆ ಮೆಷಿನ್‌ ಗನ್‌ನಿಂದ ಅಲ್ಲ, ತಮ್ಮ ನಿಕಟ ಸಹವರ್ತಿಗಳ ಮೂಲಕ ಹೋರಾಟ ನಡೆಸಿದರು – ಶ್ರೀ ಕೃಷ್ಣ ಚೈತನ್ಯ, ಪ್ರಭು ನಿತ್ಯಾನಂದ,  ಶ್ರೀ ಅದ್ವೈತ, ಗದಾಧರ, ಶ್ರೀವಾಸಾದಿ ಗೌರ ಭಕ್ತ ವೃಂದ. ಅವರ ಹೋರಾಟದ ಆಯುಧಗಳೆಂದರೆ, ಶ್ರೀ ಅದ್ವೈತ ಪ್ರಭು, ಶ್ರೀ ನಿತ್ಯಾನಂದ ಪ್ರಭು ಮತ್ತು ಇತರ ಅನೇಕ ಭಕ್ತರು.

    ಆದುದರಿಂದ, ಶ್ರೀ ಚೈತನ್ಯರ ಆಂದೋಲನವೂ ಹೋರಾಟವೇ. ಆದರೆ ಭಿನ್ನವಾದ ರೀತಿಯಲ್ಲಿ. ಉದಾಹರಣೆಗೆ, ಶ್ರೀ ಚೈತನ್ಯರು ತಮ್ಮ ಯೋಧರಲ್ಲಿ ಒಬ್ಬರಾದ ನಿತ್ಯಾನಂದ ಪ್ರಭುಗಳನ್ನು ಪಾಪಿಷ್ಠ ಸೋದರರಾದ ಜಗಾಯ್‌ ಮತ್ತು ಮಾಧಾಯ್‌ರನ್ನು ಮುಕ್ತಗೊಳಿಸಲು ಕಳುಹಿಸಿದರು. ಪಾಪಿಗಳ ವಿಮೋಚನೆ ಪ್ರಯತ್ನ ಕೂಡ ಹೋರಾಟವೇ. ಕೃಷ್ಣ ಪ್ರಜ್ಞೆ ಆಂದೋಲನದ ಬೋಧಕರು, ಎಲ್ಲ ಭಕ್ತರೂ ಮಹಾ ಬಾಹುಗಳೇ. ಅವರು ಕೃಷ್ಣನ ಆಯುಧಗಳಿಂದ ಶಸ್ತ್ರಸಜ್ಜಿತರು. ಅವರನ್ನು ಸೋಲಿಸಲಾಗದು. ಅವರು ಮಾಯೆ ಅಥವಾ ಭ್ರಾಂತಿಯೊಂದಿಗೆ ಹೋರಾಟ ನಡೆಸುತ್ತಲೇ ಇರುವರು.

    ಏನು ಭ್ರಾಂತಿ, ಕಲ್ಪನೆ? ಲೌಕಿಕ ಸೌಲಭ್ಯಗಳಿಂದ ತಾನು ಸಂತೋಷದಿಂದಿರುವೆನೆಂಬ ಭ್ರಾಂತಿಯಲ್ಲಿ ಜೀವಿಯು ಇರುತ್ತಾನೆ. ಅದು ಸಾಧ್ಯವಿಲ್ಲ. ಆದುದರಿಂದ ಕೃಷ್ಣ ಪ್ರಜ್ಞೆ ಆಂದೋಲನವು ಮಾಯೆ ವಿರುದ್ಧ ಸಮರ ಸಾರಿದಂತೆ. ಈ ಹೋರಾಟ ಹೇಗೆ? ಹರೇ ಕೃಷ್ಣ , ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ/ ಹರೇ ರಾಮ , ಹರೇ ರಾಮ, ರಾಮ ರಾಮ, ಹರೇ ಹರೇ ಮಹಾಮಂತ್ರವನ್ನು ಜಪಿಸುತ್ತ ಹೋರಾಟ ನಡೆಯುವುದು. ಅಲೌಕಿಕ ತರಂಗಗಳು ಇಡೀ ವಾತಾವರಣವನ್ನು ನಿರ್ಮಲಗೊಳಿಸುತ್ತವೆ. ಕೃಷ್ಣ ಪ್ರಜ್ಞೆಯ ಯೋಧರರು ವಿಜಯೋತ್ಸವದಿಂದ ಹೊರ ಬಂದ ಮೇಲೆ ಇಡೀ ಜಗತ್ತು ಶಾಂತಿಯಿಂದ ಇರುತ್ತದೆ.

    ಆದುದರಿಂದ ಜೀವಿಗಳು ಕೃಷ್ಣನ ಶಕ್ತಿಯ ಒಂದು ಭಾಗ. ಈ ಶ್ಲೋಕದಲ್ಲಿ ಹೇಳಿರುವಂತೆ, ಜೀವಿಗಳು ಪ್ರಕೃತಿಯೇ ವಿನಾ ಪುರುಷರಲ್ಲ. ಪುರುಷ ಎಂದರೆ `ಸುಖಿಸುವವನು’ ಮತ್ತು ಪ್ರಕೃತಿ ಎಂದರೆ `ಸುಖಿಸಲ್ಪಟ್ಟವಳು.’ ಪುರುಷ ಮತ್ತು ಪ್ರಕೃತಿಗೆ ಒಂದು ಸಹಜ ಉದಾಹರಣೆಯೆಂದರೆ, ಗಂಡಸು ಮತ್ತು ಮಹಿಳೆ. ಪುರುಷನು `ಸುಖಿಸುವವ’ ಎಂದು ಅರ್ಥೈಸಿದರೆ ಮಹಿಳೆಯನ್ನು `ಸುಖಿಸಲ್ಪಟ್ಟವಳು’ ಎಂದು ಅರ್ಥೈಸಲಾಗುತ್ತದೆ. ಅದೇ ರೀತಿ, ಪ್ರಕೃತಿಯಾದ ಜೀವಿಯು ಸುಖಿಸುವವನಲ್ಲ. ಪ್ರಕೃತಿಯು ಸುಖಿಸಲ್ಪಟ್ಟದ್ದು. ಅದು ನಮ್ಮ ಸಹಜ ಸ್ಥಿತಿ. ನಾವು ಕೃತಕವಾಗಿ ಸುಖಿಸುವವರಾದರೆ, ನಾವು ಎಂದೂ ಸಂತೋಷದಿಂದ ಇರುವುದಿಲ್ಲ.

    ವೈದಿಕ ಧರ್ಮ ಶಾಸ್ತ್ರ ಮನುಸ್ಮತಿಯ ಪ್ರಕಾರ ಮಹಿಳೆಯು ಸ್ವತಂತ್ರಳಲ್ಲ : ನ ಸ್ತ್ರೀಯಂ ಸ್ವಾತಂತ್ರ್ಯಂ ಅರ್ಹತಿ. ಮಹಿಳೆಯು ಸದಾ ಅವಲಂಬಿತಳು, ಅದೇ ಅವಳ ಸುಖ, ಸಂತೋಷ. ಬಾಲ್ಯದಲ್ಲಿ ಅವಳು ತನ್ನ ತಂದೆಯ ರಕ್ಷಣೆಯಲ್ಲಿ ಇರಲಿ, ಅನಂತರ ತನ್ನ ಪತಿಯ ರಕ್ಷಣೆಯಲ್ಲಿ ಇರಲಿ. ಮತ್ತು ಅಂತಿಮವಾಗಿ, ವೃದ್ಧೆಯಾಗಿ ಅವಳು ತನ್ನ ಗಂಡು ಮಕ್ಕಳ ರಕ್ಷಣೆಯಲ್ಲಿ ಇರಲಿ. ಇದೆಲ್ಲಾ ಮನುವಿನ ಆದೇಶಗಳು. ಮನು ನಮಗೆ ನೀತಿ ನಿಯಮ ನೀಡಿದ್ದಾನೆ. ಸರಿಯಾದ ತಂದೆ, ಪತಿ ಮತ್ತು ಮಗನ ಮೇಲೆ ಅವಲಂಬಿತಳಾದರೆ ಮಹಿಳೆ ಸಂತೋಷದಿಂದ ಇರುವಳು. ಆದುದರಿಂದ, ನಮ್ಮ ವೈದಿಕ ನಾಗರಿಕತೆಯ ಪ್ರಕಾರ, ತಂದೆಯು ಹದಿ ವಯಸ್ಸಿನಲ್ಲಿಯೇ ತನ್ನ ಮಗಳನ್ನು ಸೂಕ್ತ ಯುವಕನಿಗೆ ಒಪ್ಪಿಸುವ ಕರ್ತವ್ಯಬದ್ಧನಾಗಿರುತ್ತಾನೆ. ಸೂಕ್ತ ಯುವಕನು ಸಿಕ್ಕಾಗ ಅವನು, “ನಾನು ಸರಿಯಾದ ಯುವಕನಿಗೆ ಮಗಳನ್ನು ಒಪ್ಪಿಸಿದ್ದೇನೆ. ನನಗೆ ಸಂತೋಷವಾಗಿದೆ” ಎಂದು ತಂದೆ ಭಾವಿಸುತ್ತಾನೆ.

    ಪ್ರಕೃತಿಯು ಅದು ಹೇಗೆ ಲೌಕಿಕ ಜಗತ್ತಿನಲ್ಲಿ ಸುಖಿಸುವವ- ನಾಗುವುದು ಸಾಧ್ಯ? ಅದು ಸಾದ್ಯವಾಗದು. ಅದು ಕೃತಕ. ಆದುದರಿಂದ ನಮಗಿರುವ ದೊಡ್ಡ ರೋಗವೆಂದರೆ, ನಾವು ಕೃಷ್ಣನಿಂದ ಸುಖಿಸಬೇಕಾಗಿದ್ದರೂ ಕೂಡ ನಾವೇ ಸುಖಿಸುವವರಂತೆ ಆಗಲು ಪ್ರಯತ್ನಿಸುತ್ತೇವೆ. ನಾವು ಕೃಷ್ಣನ ನಿಯಂತ್ರಣಕ್ಕೆ ಒಳಪಡುವುದು ನಿಜವಾದ ಉದ್ದೇಶ. ಆದರೆ ನಾವೇ ನಿಯಂತ್ರಕರಾಗಲು ಪ್ರಯತ್ನಿಸುತ್ತಿದ್ದೇವೆ. ಅದೇ ನಾವು ಮಾಡುವ ತಪ್ಪು. ನಿಯಂತ್ರಕರಾಗಲು ಯತ್ನಿಸಬೇಡಿ. ಕೃಷ್ಣನಿಂದ ನಿಯಂತ್ರಿಸಲ್ಪಟ್ಟವರಾಗಿ. ಆಗ ನೀವು ಸಂತೋಷದಿಂದ ಇರುತ್ತೀರಿ.

    ಮತ್ತೊಮ್ಮೆ ಮಹಿಳೆಯ ಉದಾಹರಣೆ ತೆಗೆದುಕೊಳ್ಳಿ. ಒಳ್ಳೆಯ ತಂದೆ, ಪತಿ ಮತ್ತು ಪುತ್ರನ ರಕ್ಷಣೆಯಲ್ಲಿ ಇರುವವರೆಗೆ ಅವಳು ಸಂತೋಷದಿಂದಿರುತ್ತಾಳೆ. ಅವಳು ಸ್ವತಂತ್ರಳಾದ ಕೂಡಲೇ… ನಾನು ಯೂರೋಪ್‌ ಮತ್ತು ಅಮೆರಿಕದಲ್ಲಿ ನೋಡಿದ್ದೇನೆ, ಅನೇಕ ಮಹಿಳೆಯರು ತಾವು ಸ್ವತಂತ್ರರೆಂದು ಘೋಷಿಸಿಕೊಳ್ಳುತ್ತಾರೆ. ಆದರೆ ಅವರು ಎಳ್ಳಷ್ಟೂ ಸಂತೋಷವಾಗಿರುವುದಿಲ್ಲ. ವೃದ್ಧಾಪ್ಯದಲ್ಲಿ ಅವರು ತುಂಬಾ ದುಃಖಿತರಾಗಿರುತ್ತಾರೆ. ಯೌವನದಲ್ಲಿಯೂ ಕೂಡ. ಒಳ್ಳೆಯ ಪತಿ ಸಿಗದಿದ್ದರೆ ಅವರು ಸಂತೋಷದಿಂದ ಇರಲಾಗದು. ಒಬ್ಬ ಯುವತಿಯು ಪತಿಯೊಂದಿಗಿರುವ ಮತ್ತೊಬ್ಬ ಯುವತಿಯನ್ನು ನೋಡಿದಾಗ, `ಓ, ಇವಳಿಗೆ ಪತಿ ಇದ್ದಾನೆ’ ಎಂದುಕೊಳ್ಳುತ್ತಾಳೆ. ಅದು ಯುವತಿಯರ ಸ್ವಭಾವ.

    ಪ್ರಕೃತಿಯಾಗಿ ನಾವು ಪರಮ ಪಿತ ಅಥವಾ ಪರಮ ಪತಿಯ ಮೇಲೆ ಅವಲಂಬಿತರಾಗಿರಬೇಕು. ನೀವು ಕೃಷ್ಣನನ್ನು ನಿಮ್ಮ ತಂದೆಯನ್ನಾಗಿ ಸ್ವೀಕರಿಸಬಹುದು. ನೀವು ಕೃಷ್ಣನನ್ನು ನಿಮ್ಮ ತಂದೆ, ನಿಮ್ಮ ಪತಿ ಅಥವಾ ನಿಮ್ಮ ಮಾಲೀಕನಾಗಿ ಪ್ರೀತಿಸಬಹುದು. ಒಟ್ಟಿನಲ್ಲಿ, ಕೃಷ್ಣನ ಮೇಲೆ ಅವಲಂಬಿತರಾಗಿರಿ.

    ಜೀವಿಯ ಸ್ವಾಭಾವಿಕ ಸ್ಥಿತಿಯನ್ನು ಬೋಸಲು ಕೃಷ್ಣನು ಬಂದಿದ್ದಾನೆ. ಆದುದರಿಂದ ನಾವು `ನಾನೇ ದೇವರು, ನಾನೇ ಕೃಷ್ಣ, ಎಲ್ಲರೂ ಕೃಷ್ಣನೇ’ ಎಂದು ಯೋಚಿಸುತ್ತಾ ಜಂಭದಿಂದ ಬೀಗಬಾರದು. ಅದು ಮಾಯೆಯ ಕೊನೆಯ ಪ್ರಲೋಭನೆ ಅಥವಾ ಪಾಶ. `ಜಗತ್ತಿನ ಅತಿ ದೊಡ್ಡ, ಶ್ರೀಮಂತ ವ್ಯಕ್ತಿಯಾಗಿ’ ಎಂದು ಮಾಯೆ ಆದೇಶಿಸುತ್ತದೆ. ಮತ್ತು ನೀವು ನಾಯಕರಾಗಲು ಹೋರಾಡುತ್ತೀರಿ.

    ವಾಸ್ತವವಾಗಿ ಯಾರೂ ನಾಯಕರಲ್ಲ.  ಕೃಷ್ಣನೇ ನಾಯಕ. ಅದು ವೈದಿಕ ಧರ್ಮದ ಆದೇಶ. ಮತ್ತು ಕೃಷ್ಣನೇ ಸ್ವತಃ ಹೇಳುತ್ತಾನೆ, `ನಾನು ಭೋಕ್ತಾ, ಸುಖಿಸುವವನು.’ ಕೃಷ್ಣನು `ಜೀವಿಗಳಾದ ನೀವೂ ಕೂಡ ಭೋಕ್ತರು’ ಎಂದು ಹೇಳುವುದಿಲ್ಲ. ಅವನು ಅರ್ಜುನನಿಗೆ, `ನೀನು ಭೋಕ್ತಾ. ನಾನು ಭೋಕ್ತಾ’ ಎಂದು ಹೇಳಲಿಲ್ಲ.

    ನಾವು ಪ್ರಕೃತಿಯಾಗಿ ನಮ್ಮ ಸ್ಥಾನವನ್ನು ಒಪ್ಪಿಕೊಳ್ಳಬೇಕು ಮತ್ತು ಕೃಷ್ಣನ ಮೇಲೆ ಅವಲಂಬಿತರಾಗಬೇಕು. ಆಗ ಕೃಷ್ಣನು ವಹಿಸಿಕೊಳ್ಳುತ್ತಾನೆ. ಕೃಷ್ಣ ಹೇಳುತ್ತಾನೆ, ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ : “ನಾನು ನಿನ್ನನ್ನು ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ.” ಅವನು ನಮಗೆ ರಕ್ಷಣೆ ನೀಡುತ್ತಾನೆ. ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ : “ನನ್ನ ಭಕ್ತ ಎಂದಿಗೂ ನಾಶವಾಗುವುದಿಲ್ಲ.”

    ನಾವು ಕೃಷ್ಣನ ಮೇಲೆ ಅವಲಂಬಿತರು ಎಂಬ ತತ್ತ್ವವನ್ನು ಒಪ್ಪಿಕೊಂಡರೆ ನಮ್ಮ ಬದುಕು ಹಸನಾಗುತ್ತದೆ. ಇಲ್ಲವಾದರೆ, ನಾವು ಅಸ್ತಿತ್ವಕ್ಕಾಗಿ ಹೋರಾಡಬೇಕಾಗುತ್ತದೆ.

    ಕೃಷ್ಣ ಹೇಳುತ್ತಾನೆ, ಜೀವ ಭೂತಾಂ ಮಹಾ ಬಾಹೋ ಯಯೇದಂ ಧಾರ್ಯತೇ ಜಗತ್‌ : “ಇಡೀ ಲೌಕಿಕ ಜಗತ್ತು ಜೀವ ಭೂತ, ಅಂದರೆ ಜೀವಿಗಳಿಂದಾಗಿ ಚಲಿಸುತ್ತಿದೆ.” ಈ ಮುಂಬಯಿ ನಗರವು ತುಂಬಾ ಮುಖ್ಯ. ಏಕೆಂದರೆ ಇಲ್ಲಿ ಎಷ್ಟೊಂದು ಜೀವಿಗಳು ಇದ್ದಾರೆ! ಇಲ್ಲಿ ಏನಾದರು ಸಂಭವಿಸಿದರೆ, ಜನರೆಲ್ಲಾ ಇಲ್ಲಿಂದ ಹೊರಟು ಹೋದರೆ, ದೊಡ್ಡ ಗಗನಚುಂಬಿಯು 200 ರೂಪಾಯಿ ಬಾಡಿಗೆಯನ್ನೂ ಆಕರ್ಷಿಸುವುದಿಲ್ಲ. ಅದೇ ರೀತಿ, ಇಡೀ ಐಹಿಕ ಲೋಕ ಮುಖ್ಯ, ಏಕೆಂದರೆ, ಜೀವಿಗಳು ಇಲ್ಲಿ ತಾವೇ ಸುಖಿಸುವವರು ಎಂದು ಭ್ರಮಿಸಿ ಹೋರಾಟ ಮಾಡುತ್ತಿದ್ದಾರೆ.

    ಇಡೀ ಜಗತ್ತಿನಲ್ಲಿ ಬ್ರಹ್ಮನಿಂದ ಹಿಡಿದು ಗೌಣವಾದ ಇರುವೆವರೆಗೆ ಎಲ್ಲರೂ ಕೃಷ್ಣನಿಗೆ ಸಮಾನರಾಗಲು, ಭೋಕ್ತರಾಗಲು  ಶ್ರಮಿಸುತ್ತಿದ್ದಾರೆ. ಆದುದರಿಂದ ಕೃಷ್ಣ ಪ್ರಜ್ಞೆ ಆಂದೋಲನದ ಉದ್ದೇಶವು ಜನರನ್ನು ಸ್ವಸ್ಥ ಸ್ಥಿತಿಗೆ ತರುವುದು ಅಥವಾ ವಿವೇಕಿಗಳನ್ನಾಗಿ ಮಾಡುವುದೇ ಆಗಿದೆ. “ನೀನು ಭೋಕ್ತನಲ್ಲ: ಕೃಷ್ಣನು ಭೋಕ್ತ. ಭೋಗ್ಯನಾಗು, ಆಗ ನೀನು ಆನಂದದಿಂದ ಇರುವೆ.”

          ವಂದನೆಗಳು.

ಈ ಲೇಖನ ಶೇರ್ ಮಾಡಿ