ಪನ್ನೀರಿನ ವಿಶೇಷ ವ್ಯಂಜನಗಳು

ಮಕ್ಕಳಿಗೆ ಪ್ರಿಯವಾದ ಪನ್ನೀರ್‌ನಿಂದ ಬಗೆ ಬಗೆಯ ತಿನಿಸು ತಯಾರಿಸಬಹುದು. ಪನ್ನೀರ್‌ ರುಚಿ ಕಂಡಿರುವ ಮಕ್ಕಳು ಅದನ್ನು ಹಾಗೇ ತಿನ್ನುವುದಕ್ಕೂ ರೆಡಿ. ಪುರಾತನ ಕಾಲದಿಂದಲೂ ಭಾರತೀಯ ತಿನಿಸುಗಳಲ್ಲಿ ಪನ್ನೀರ್‌ ಪ್ರಮುಖ ಭಾಗವಾಗಿದೆ. ಭಾರತದ ಪೂರ್ವ ಭಾಗಗಳಲ್ಲಿ ಇದನ್ನು ಚೆನ್ನ ಎಂದೂ ಕರೆಯುತ್ತಾರೆ. ಪನ್ನೀರ್‌ ಮಾಡುವುದು ಹೇಗೆ? ಸಾಮಾನ್ಯವಾಗಿ ನಿಂಬೆ ರಸ ಅಥವಾ ವಿನೆಗರ್‌ ಅನ್ನು ಹಾಲಿಗೆ ಹಾಕಿ ಒಡೆಯುವಂತೆ ಮಾಡಲಾಗುತ್ತದೆ. ಈ ಮೊಸರನ್ನು ತೆಳುವಾದ ಹತ್ತಿ ಬಟ್ಟೆಯಲ್ಲಿ ಹಾಕಿ ಹೆಚ್ಚಾಗಿರುವ ನೀರನ್ನು ಹಿಂಡಿ ತೆಗೆಯಲಾಗುತ್ತದೆ. ಉಳಿದ ಗಟ್ಟಿ ಪದಾರ್ಥವನ್ನು ಬಟ್ಟೆಯಲ್ಲಿ ಸುತ್ತಿ ಕಲ್ಲಿನಂತಹ ಭಾರದ ಕೆಳಗೆ 2-3 ಗಂಟೆ ಇಡಲಾಗುತ್ತದೆ. ಅನಂತರ ಘನ ತುಂಡುಗಳಾಗಿ ಕತ್ತರಿಸಲಾಗುತ್ತದೆ. ಇಲ್ಲಿಂದ ಮುಂದೆ ಅದರ ಉಪಯೋಗ ಭಿನ್ನ – ತಿನಿಸು ಹಾಗೂ ಪ್ರಾದೇಶಿಕತೆ ಮೇಲೆ ಅವಲಂಬಿತ.

ಇಲ್ಲಿ ಪನ್ನೀರ್‌ನಿಂದ ಮಾಡುವ ವಿವಿಧ ಅಡಿಗೆಗಳನ್ನು ನೀಡಿದ್ದೇವೆ. ಇವನ್ನು ಶ್ರದ್ಧೆಯಿಂದ ತಯಾರಿಸಿ, ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಪನ್ನೀರ್‌ ಗ್ರೇವಿ

ಬೇಕಾಗುವ ಪದಾರ್ಥಗಳು

ಪನ್ನೀರ್‌ – 2 ಕಪ್‌

ಹಾಲಿನ ಕೆನೆ – 4 ಚಮಚ                                   

ಮೊಸರು – 1/2 ಕಪ್‌

ಟೊಮೆಟೊ – 2

ಶುಂಠಿ – 1/2 ಇಂಚು

ಗರಂ ಮಸಾಲ – 1 ಚಮಚ

ಅಚ್ಚಮೆಣಸಿನಕಾಯಿ ಪುಡಿ – 1 ಚಮಚ

ಬೆಣ್ಣೆ – 2 ಚಮಚ

ಎಣ್ಣೆ – ಕರಿಯಲು

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಮೊದಲು ಪನ್ನೀರನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಅದನ್ನು ಕಾದ ಎಣ್ಣೆಯಲ್ಲಿ ಕರಿದು ತಣ್ಣೀರಿನಲ್ಲಿ ಹಾಕಿ. ಟೊಮೆಟೊ ಮತ್ತು ಶುಂಠಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಗ್ರೈಂಡ್‌ ಮಾಡಿ. ಫ್ರೈಯಿಂಗ್‌ ಪ್ಯಾನ್‌ಗೆ ಬೆಣ್ಣೆಯನ್ನು ಹಾಕಿ, ಕಾದ ಅನಂತರ ಟೊಮೆಟೊ, ಶುಂಠಿ ಪೇಸ್ಟನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಮೊಸರು, ಗರಂಮಸಾಲ, ಮೆಣಸಿನಕಾಯಿಪುಡಿ, ಉಪ್ಪು ಹಾಕಿ ಕುದಿಸಿ. ಗ್ರೇವಿ ಹದಕ್ಕೆ ಬಂದ ಅನಂತರ ಎಣ್ಣೆಯಲ್ಲಿ ಕರಿದ ಪನ್ನೀರ್‌ ಹಾಕಿ ಮಿಕ್ಸ್‌ ಮಾಡಿ. ಮೇಲೆ ಹಾಲಿನ ಕೆನೆ, ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿದರೆ ಪನ್ನೀರ್‌ ಗ್ರೇವಿ ಸವಿಯಲು ಸಿದ್ಧ.

ಪನ್ನೀರ್‌ ರೋಲ್‌

ಬೇಕಾಗುವ ಪದಾರ್ಥಗಳು

ಪನ್ನೀರ್‌ – 1 ಕಪ್‌

ಮೈದಾ – 3/4 ಕಪ್‌

ಟೊಮೆಟೊ ಸಾಸ್‌ – 3 ಚಮಚ

ಹಸಿಮೆಣಸಿನಕಾಯಿ – 3

ಚೀಸ್‌ – 1/2 ಕಪ್‌

ಚಿಲ್ಲಿ ಸಾಸ್‌ – 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಕರಿಯಲು

ಮಾಡುವ ವಿಧಾನ : ಮೈದಾಹಿಟ್ಟಿಗೆ ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಡಿ. ಅನಂತರ ಪ್ಯಾನ್‌ಗೆ ಎರಡು ಚಮಚ ಎಣ್ಣೆ ಹಾಕಿ, ಕಾದ ಅನಂತರ ಕತ್ತರಿಸಿದ ಹಸಿಮೆಣಸಿನಕಾಯಿ, ಪುಡಿ ಮಾಡಿದ ಪನ್ನೀರ್‌ ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ಟೊಮೆಟೊ ಸಾಸ್‌, ಚಿಲ್ಲಿಸಾಸ್‌, ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರ ಮಾಡಿ ಆರಲು ಬಿಡಿ. ಕಲಸಿದ ಮೈದಾಹಿಟ್ಟನ್ನು ನಾದಿ ಚಪಾತಿಯನ್ನು ಲಟ್ಟಿಸಿ ಇದರ ಮೇಲೆ ಪನ್ನೀರ್‌ ಮಿಶ್ರಣವನ್ನು ಹರಡಿ ಚಪಾತಿಯನ್ನು ರೋಲ್‌ ಮಾಡಿ ಅಂಚುಗಳನ್ನು ಅಂಟಿಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಇದನ್ನು ಟೊಮೆಟೊ ಸಾಸ್‌ ಜೊತೆ ಸವಿಯಲು ಕೊಡಿ.

ಮಸಾಲಾ ಪನ್ನೀರ್‌

ಬೇಕಾಗುವ ಪದಾರ್ಥಗಳು

ಪನ್ನೀರ್‌ – 1 ಕಪ್‌

ಮೊಸರು – 1 ಕಪ್‌

ಫ್ರೆಶ್‌ ಕ್ರೀಮ್‌ – 4 ಚಮಚ

ಟೊಮೆಟೊ – 1

ಹಸಿಮೆಣಸಿನಕಾಯಿ – 4

ಅಚ್ಚಮೆಣಸಿನಕಾಯಿಪುಡಿ – 2 ಚಮಚ

ಧನಿಯಾ ಪುಡಿ – 1 ಚಮಚ

ಗರಂಮಸಾಲಾ – 1/2 ಚಮಚ

ಕರಿಮೆಣಸಿನಪುಡಿ – 1/4 ಚಮಚ

ಶುಂಠಿ ಪೇಸ್ಟ್‌ – 1/2 ಚಮಚ

ನಿಂಬೆರಸ – 1 ಚಮಚ

ಸಕ್ಕರೆ – 1 ಚಮಚ

ಉಪ್ಪು – ರುಚಿಗೆ

ಬೆಣ್ಣೆ – 2 ಚಮಚ

ಎಣ್ಣೆ – 4 ಚಮಚ

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಮಾಡುವ ವಿಧಾನ : ಮೊದಲು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ ಅದರಲ್ಲಿ ಪನ್ನೀರ್‌ ಹಾಕಿ ತೆಗೆದಿಡಿ. ಪ್ಯಾನ್‌ಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಶುಂಠಿ ಪೇಸ್ಟ್‌, ಹಸಿಮೆಣಸಿನಕಾಯಿ, ಕತ್ತರಿಸಿದ ಟೊಮೆಟೊ ಹಾಕಿ ಬಾಡಿಸಿ. ಅನಂತರ ಮೆಣಸಿನಕಾಯಿ ಪುಡಿ, ಧನಿಯಾಪುಡಿ, ಗರಂ ಮಸಾಲ, ಕರಿಮೆಣಸಿನಪುಡಿ, ಮೊಸರು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಕುದಿಸಿ. ಕೊನೆಯದಾಗಿ ಪನ್ನೀರ್‌, ಫ್ರೆಶ್‌ ಕ್ರೀಮ್‌, ಸಕ್ಕರೆ, ನಿಂಬೆರಸ, ಉಪ್ಪು ಹಾಕಿ ಬೇಯಿಸಿ. ಅನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿದರೆ ಮಸಾಲಾ ಪನ್ನೀರ್‌ ಸಿದ್ಧ.

ಚಿಲ್ಲಿ ಪನ್ನೀರ್‌

ಬೇಕಾಗುವ ಪದಾರ್ಥಗಳು

ಕತ್ತರಿಸಿದ ಪನ್ನೀರ್‌ – 2 ಕಪ್‌

ಮೈದಾ – 1 ಕಪ್‌

ಕಾರ್ನ್‌ಫ್ಲೋರ್‌ – 1/2 ಕಪ್‌

ಫ್ರೆಶ್‌ ಕ್ರೀಮ್‌ – 5 ಚಮಚ

ಉದ್ದಕ್ಕೆ ಕತ್ತರಿಸಿದ ಕ್ಯಾಪ್ಸಿಕಂ – 1 ಚಮಚ

ಸಣ್ಣಗೆ ಕತ್ತರಿಸಿದ ಶುಂಠಿ – 1 ಚಮಚ

ಉದ್ದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ – 4

ಗ್ರೀನ್‌ ಚಿಲ್ಲಿ ಸಾಸ್‌ – 2 ಚಮಚ

ವಿನೆಗರ್‌ – 2 ಚಮಚ

ಬಿಳಿಮೆಣಸಿನಪುಡಿ – 1 ಚಮಚ

ಅಜಿನೋಮೋಟೊ – 1/4 ಚಮಚ

ಗೋಡಂಬಿಪುಡಿ – 2 ಚಮಚ

ಉಪ್ಪು – ರುಚಿಗೆ

ಎಣ್ಣೆ – ಕರಿಯಲು

ಮಾಡುವ ವಿಧಾನ : ಒಂದು ಪಾತ್ರೆಗೆ ಮೈದಾ, ಕಾರ್ನ್‌ಫ್ಲೋರ್‌, ಉಪ್ಪು, ಸ್ವಲ್ಪ ನೀರು ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಕಲೆಸಿ, ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಕಲೆಸಿದ ಹಿಟ್ಟಿನಲ್ಲಿ ಪನ್ನೀರ್‌ ಅದ್ದಿ ಬೋಂಡದಂತೆ ಕರಿಯಿರಿ. ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಕಾದ ಅನಂತರ ಕತ್ತರಿಸಿದ ಶುಂಠಿ, ಹಸಿಮೆಣಸಿನಕಾಯಿ, ಕ್ಯಾಪ್ಸಿಕಂ ಸೇರಿಸಿ ಹುರಿಯಿರಿ. ಅದಕ್ಕೆ ವಿನೆಗರ್‌, ಗ್ರೀನ್‌ ಚಿಲ್ಲಿ ಸಾಸ್‌, ಮೆಣಸಿನಪುಡಿ, ಗೋಡಂಬಿ ಪುಡಿ, ಅಜಿನೋಮೋಟೊ, ಕರಿದ ಪನ್ನೀರನ್ನು ಹಾಕಿ ಮಿಕ್ಸ್‌ ಮಾಡಿ. ಕೊನೆಯದಾಗಿ ಫ್ರೆಶ್‌ ಕ್ರೀಮ್‌, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿದರೆ ಚಿಲ್ಲಿ ಪನ್ನೀರ್‌ ಸವಿಯಲು ಸಿದ್ಧ.

ಈ ಲೇಖನ ಶೇರ್ ಮಾಡಿ