ಅಸಂಗತ ತರ್ಕ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಓರ್ವ ಅಸ್ತಿತ್ವವಾದಿ – ಸಮಾಜವಾದಿ ಪಾದ್ರಿಯ ನಡುವೆ 1973ರ ಡಿಸೆಂಬರ್‌ನಲ್ಲಿ ಲಾಸ್‌ಏಂಜಲೀಸ್‌ನಲ್ಲಿ ನಡೆದ ಸಂವಾದ.

ಪಾದ್ರಿ: ನಾವೀಗ ಅಂತಿಮವಾಗಿ, ಕ್ರೈಸ್ತ ಮತದ ಧ್ವನಿತಾರ್ಥವನ್ನು, ಸಾಮಾನ್ಯ ಧರ್ಮವನ್ನೂ ಗ್ರಹಿಸುವ ಪ್ರಾರಂಭಿಕ ಅವಸ್ಥೆಯಲ್ಲಿದ್ದೇವೆ. ಮನುಷ್ಯನ ಅಳಲನ್ನು ಹಂಚಿಕೊಳ್ಳುವುದರಲ್ಲಿ ಪರಮಾತ್ಮನ ಪಾತ್ರ, ಅಪರಿಹಾರ್ಯ ಸಂಕಷ್ಟವನ್ನು ತಾಳಿಕೊಳ್ಳುವ ಮನುಷ್ಯ ಕಲಿಯಬೇಕೆಂಬುದರ ಬಗ್ಗೆ ತಿಳಿವು.

ಶ್ರೀಲ ಪ್ರಭುಪಾದ: ಇದು ಅಯೋಗ್ಯನ ಲಕ್ಷಣ. ಭಗವಂತನೇಕೆ ಮನುಷ್ಯನ ಸಂಕಷ್ಟಗಳನ್ನು ಹಂಚಿಕೊಳ್ಳಬೇಕು.

ಪಾದ್ರಿ: ಆ ರೀತಿ ಮನುಷ್ಯನ ಕಷ್ಟವನ್ನು ನೈಜತೆಯ ಅವಿಭಾಜ್ಯ ಅಂಗ ಎಂದು ಸುಲಭವಾಗಿ ಸ್ವೀಕರಿಸಬಹುದು.

ಶ್ರೀಲ ಪ್ರಭುಪಾದ: ಒಳ್ಳೆಯದು ಪಾದ್ರಿಗಳೆ. ಜನರು ಸಂತೋಷದಿಂದಿರಲು ಪ್ರಯತ್ನಿಸುತ್ತಿದ್ದಾರೆ. ಅವರು ನೋವನ್ನು ಸ್ವೀಕರಿಸಬೇಕೆಂಬುದು ನಿಮ್ಮ ಸಿದ್ಧಾಂತ. ಈ ಪ್ರಸ್ತಾಪವೇ ಅಯೋಗ್ಯವಾದುದು. ಜೀವಾತ್ಮರಾಗಿ, ಪರಮಾತ್ಮನ ಅವಿಭಾಜ್ಯ ಅಂಗಗಳಾಗಿ, ಸಹಜವಾಗಿ ನಮ್ಮ ಸಂಕಷ್ಟಗಳನ್ನು ನೀಗಿಕೊಂಡು ಆಧ್ಯಾತ್ಮಿಕ ಲೋಕವನ್ನು ತಲಪಲು ಪ್ರಯತ್ನಿಸುತ್ತಿದ್ದೇವೆ; ಅಲ್ಲಿ ಸಾವುನೋವುಗಳಿಲ್ಲ. ಪ್ರತಿಯೊಬ್ಬರೂ ಪರಿಪೂರ್ಣ ಸುಖಿಗಳಾಗಬೇಕು. ಇದು ನಮ್ಮ ಹೋರಾಟ; ಇದು ಮಾನವ ನಾಗರಿಕತೆಯ ಅರ್ಥ.

ನಾವು ಸಂಕಷ್ಟಕ್ಕೆ ಶರಣಾಗುವುದಿಲ್ಲ. ನಮಗೆ ನೋವು ಬೇಡ. ನೀವು ದೇವರನ್ನು ನಂಬಿದ್ದರೆ, ಆಸ್ತಿಕರೇ ಆಗಿದ್ದರೆ, ನೀವು ಏಕೆ ನೋವನ್ನು ಅನುಭವಿಸಬೇಕು, ನಮ್ಮೊಡನೆ ದೇವರು ನೋವನ್ನು ಉಣ್ಣಬೇಕೆಂದು ಠಕ್ಕರಂತೆ ಮಾತಾಡುತ್ತಿದ್ದೀರಿ?

ಪಾದ್ರಿ: ಆಯ್ತು. ನನ್ನನ್ನು ನಾಸ್ತಿಕ – ಆಸ್ತಿಕನೆನ್ನಿ ಚಿಂತೆಯಿಲ್ಲ.

ಶ್ರೀಲ ಪ್ರಭುಪಾದ: ಹುಂ ……..?

ಪಾದ್ರಿ: ಒಬ್ಬ ನಾಸ್ತಿಕ – ಆಸ್ತಿಕ

ಶ್ರೀಲ ಪ್ರಭುಪಾದ: ನಾಸ್ತಿಕ – ಆಸ್ತಿಕ ? ಏನದು?

ಪಾದ್ರಿ: ದೇವರೆಂಬುದು ನಮ್ಮ ಕಲ್ಪನೆ, ನಮ್ಮದೆ ಅನ್ವೇಷಣೆ – ಒಂದು ಅನಿಸಿಕೆ ಎಂಬುದು ನನ್ನ ಗ್ರಹಿಕೆ.

ಶ್ರೀಲ ಪ್ರಭುಪಾದ: ದೇವರು ಒಂದು ಅನಿಸಿಕೆ? ಎಂದೇ ನಿಮ್ಮ ಗ್ರಹಿಕೆ?

ಪಾದ್ರಿ: ಹೌದು; ಆದರೂ ಅದು ಅಗತ್ಯವಾದ ಭಾವನೆ. ಪರಮಾತ್ಮ – ಸಾರ್ವಭೌಮ – ಪರಮಪುರುಷ ಎಂಬೆಲ್ಲ ಕಲ್ಪನೆಗಳನ್ನು ನಾವೇ ನಮ್ಮ ಮೇಲೆ ಹೇರಿಕೊಂಡಿದ್ದೇವೆ. ಏಕೆಂದರೆ ಅದು ನಮಗೆ ಸಮಾಧಾನ ತರುತ್ತದೆ. ನೆಮ್ಮದಿ ತರುತ್ತದೆ. ಬಹಳಷ್ಟು ಜನರು ಮೂಢರು. ಹಾಗಾಗಿ ಅವರಿಗೆ ದೇವರ ಅಗತ್ಯವಿದೆ – ಮಾರ್ಕ್ಸ್‌ ಹೇಳಿದಂತೆ – ಅಫೀಮಿನಂತೆ ಶಮನಕಾರಿ. …..ಸುಖಾಂತದ ಭರವಸೆ, ಅವರ ಸಂಜೀವಿನಿ – ಹತಾಶೆ ನಿರಾಶೆಗಳನ್ನು ಮುಚ್ಚುವ ಆಚ್ಛಾದನ.

ಶ್ರೀಲ ಪ್ರಭುಪಾದ: ದೇವರು ಕೇವಲ ಒಂದು ಚಿಂತನೆ ಯಾ ಅನಿಸಿಕೆ ಎನ್ನುತ್ತೀರಿ. ನಾನು ಅಲ್ಲ, ಅದು ಸತ್ಯ ಎನ್ನುತ್ತೇನೆ. ನೀವು ಅದನ್ನು ಸುಳ್ಳು ಎಂದು ನಿರೂಪಿಸಬಲ್ಲಿರಾ?

ಪಾದ್ರಿ: ನೋಡಿ, ನಾನು ಅಂದುಕೊಂಡಂತೆ, ಪರಮಾತ್ಮನ ಸಂಪೂರ್ಣ ಅಗತ್ಯವಿಲ್ಲ.

ಶ್ರೀಲ ಪ್ರಭುಪಾದ: ಆದರೆ ದೈವದ ಅಗತ್ಯವನ್ನು ನಿಮ್ಮ ಲೆನಿನ್‌ ಕೂಡ ಒಮ್ಮೆ ಒಪ್ಪಿಕೊಂಡಿದ್ದ. ನಿಜವಾಗಿ, ಆತ ತಾನೇ ಪರಮಾತ್ಮನಾಗಬೇಕೆಂದು ಬಯಸಿದ್ದ. ಲೆನಿನ್‌ ದೇವರಾಗಬಯಸಿದ್ದ.

ಪಾದ್ರಿ: ಹೌದು – ಕೆಲಕಾಲ ಅವನು ಪರಮಾತ್ಮನೆ ಆಗಿದ್ದ.

ಶ್ರೀಲ ಪ್ರಭುಪಾದ: ಇಲ್ಲ, ಆತ ದೇವರಾಗಲು ಸಾಧ್ಯವಾಗಲಿಲ್ಲ. ದೈವ ನಿಯಾಮಕಕ್ಕೆ ಬದ್ಧನಾಗಿದ್ದ – ಸತ್ತ. ಆತ ಸತ್ತ. ಆತ ಸಾವಿನಿಂದ ತನ್ನನ್ನು ರಕ್ಷಿಸಿಕೊಳ್ಳಲಾರದೆ ಹೋದ. ಆದ್ದರಿಂದ ಆತ ಸಾರ್ವಭೌಮನಲ್ಲ . ಲೆನಿನ್‌ ಸಾಯಲೇಬೇಕಿತ್ತು. ಆದುದರಿಂದ ಮತ್ತೊಬ್ಬ ಪರಮಪುರುಷ ಇರಲೇಬೇಕೆಂದಾಯಿತು.

ಪಾದ್ರಿ: ನೋಡಿ, ಏನೇ ಆಗಲಿ ಕೊನೆಗೆ ಎಲ್ಲವೂ ಅರ್ಥಹೀನ. ಕೊನೆಗೆ ಸಾವೂ ಅರ್ಥಹೀನ.

ಶ್ರೀಲ ಪ್ರಭುಪಾದ: ಅರ್ಥಹೀನ ಎಂದೇಕೆ ಹೇಳುವಿರಿ? ಅದು ಅರ್ಥಹೀನವಾಗಿದ್ದರೆ ನೀವೇಕೆ ಸಾವಿಗೆ ಅಂಜುತ್ತೀರಿ? ಈಗ ನಾನು, ಈ ಕ್ಷಣ ನಿಮ್ಮನ್ನು ಕೊಲ್ಲಲು ಬಂದರೆ ನೀವೇಕೆ ಅಂಜುತ್ತೀರಿ? ಯಾಕೆ?

ಪಾದ್ರಿ: ಅರ್ಥಹೀನ ಎಂದರೆ, ಒಂದು ನಿರ್ದಿಷ್ಟ ಸಂದರ್ಭದಲ್ಲಿ ನಾನು ಅದಕ್ಕೆ ಬೆಲೆ ಕೊಡಲಾರೆ ಎಂದಲ್ಲ ಅರ್ಥ.

ಶ್ರೀಲ ಪ್ರಭುಪಾದ: ಹಾಗಿದ್ದೂ, ಅರ್ಥಹೀನ ಎಂದೇಕೆ ಹೇಳುವಿರಿ? ಪ್ರಾರಂಭದಲ್ಲಿ ನೀವು `ಕ್ರಾಂತಿ’ಗಾಗಿ ಮತ್ತು ಸಾಮಾಜಿಕ ಬದಲಾವಣೆಗಾಗಿ ಹೋರಾಡುತ್ತೀರಿ ಎಂದು ಹೇಳಿದಿರಿ. ಕೊನೆಗೆ ಎಲ್ಲವೂ ಅನರ್ಥವಾದಲ್ಲಿ, ಆ ಅನರ್ಥಕ್ಕಾಗಿ ವಿಶಿಷ್ಟ ಹೋರಾಟ?

ಪಾದ್ರಿ: ಸಂಖ್ಯೆಗಳನ್ನು ಪರಿಭಾವಿಸಿ; ಅವನ್ನು ಬಳಕೆಗೆ ತಂದಾಗ ಮಾತ್ರ ಅರ್ಥಪೂರ್ಣ ಇಲ್ಲವಾದಲ್ಲಿ ಅರ್ಥಹೀನ.

ಶ್ರೀಲ ಪ್ರಭುಪಾದ: ಎಲ್ಲವೂ ಅನರ್ಥವಾಗುವುದಾಗಿದ್ದರೆ ನೀವು ಮಾಡುತ್ತಿರುವುದೆಲ್ಲವೂ ಅರ್ಥಹೀನ.

ಪಾದ್ರಿ: ಹೌದು; ಏಕೆಂದರೆ, ಕೊನೆಗೆ ಎಲ್ಲವೂ ಅರ್ಥಹೀನ.

ಶ್ರೀಲ ಪ್ರಭುಪಾದ: ಹಾಗಿದ್ದರೆ ನೀವು ಒಬ್ಬ ಅಯೋಗ್ಯನಿಗಿಂತಲೂ ಹೀನ. ನಾನು ನಿಮ್ಮನ್ನು ಅಯೋಗ್ಯ ಎಂದು ಕರೆದರೆ ಅದು ನಿಮಗೆ ಗೌರವ ಸಲ್ಲಿಸಿದಂತೆ. ನೀವು ಅರ್ಥವಂತಿಕೆಯಿಲ್ಲದ ಕೆಲಸಗಳಲ್ಲಿ ಉದ್ಯುಕ್ತರಾಗಿದ್ದೀರಿ.

ಪಾದ್ರಿ: ಪ್ರತಿಯೊಬ್ಬರೂ ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಬಹುದು. ಅವರಿಗೆ ಬೇಕಿರುವಂತೆ.

ಶ್ರೀಲ ಪ್ರಭುಪಾದ: ನೀವು ಯಾಕೆ, ಇಷ್ಟೊಂದು ಬೆಂಬಲಿಗರನ್ನು ನಿಮ್ಮ ಪಡೆಗೆ ನೇಮಿಸಿಕೊಳ್ಳುತ್ತೀರಿ. ಜನರನ್ನು ಅವರಿಷ್ಟದಂತೆ ಹೋಗಲಿಕ್ಕೆ ಬಿಡಿ.

ಪಾದ್ರಿ: ಇಷ್ಟ ಬಂದದ್ದು ಮಾಡಲಿ ಎಂದರೆ ಅದರ ಅರ್ಥ, ನಿಮ್ಮ ಅಭಿಯಾನಕ್ಕೆ ಸೊಪ್ಪು ಹಾಕುವುದು ಎಂದು. ಈಗ ನೀವು ಮಾಡುತ್ತಿರುವುದೂ ಅದೇ ಕೆಲಸ ತಾನೆ.

ಶ್ರೀಲ ಪ್ರಭುಪಾದ: ಇಲ್ಲ, ಇಲ್ಲ ನಿಮ್ಮ ಅರ್ಥ ನಿಮಗೆ; ಅದರಲ್ಲೇ ತೃಪ್ತಿಪಡಿ. ನನಗೆ ತೊಂದರೆ ಮಾಡಬೇಡಿ.

ಪಾದ್ರಿ: ನನ್ನ ಅರ್ಥ, ಭಾಗಶಃ ನಿಮ್ಮ ತಲೆಕೆಡಿಸಬೇಕಂತಲೆ ಹುಟ್ಟು ಹಾಕಿರುವುದು.

ಶ್ರೀಲ ಪ್ರಭುಪಾದ: ಹಾಗಿದ್ದರೆ ನನ್ನ ಅರ್ಥ, ನನ್ನ ಪಾದರಕ್ಷೆಯಿಂದ ನಿಮ್ಮ ತಲೆಗೆ ಹೊಡೆಯೋದು.

ಪಾದ್ರಿ: ಆದರೆ ಲೆನಿನ್‌ ನೋಡಿ, ಆತನನ್ನು ಯಾರೂ ಹೊಡೆಯಲಿಲ್ಲ. ಅವನನ್ನು ಯಾರೂ ಹೊಡೆಯಲೇ ಇಲ್ಲ.

ಶ್ರೀಲ ಪ್ರಭುಪಾದ: ಇಲ್ಲ, ಇಲ್ಲ, ಲೆನಿನ್‌ಗೂ ಏಟುಬಿತ್ತು. ಸಾವಿನಿಂದ. ಆದರೆ ಆತ ಒಪ್ಪಿಕೊಳ್ಳಲಾರ. ಅವನೆಂಥ ಅಯೋಗ್ಯ ಎಂದರೆ, ಹೆಜ್ಜೆ ಹೆಜ್ಜೆಗೂ ಪೆಟ್ಟು ತಿಂದ – ಆತ ಮುದುಕನಾಗುತ್ತಿದ್ದ, ರೋಗಗ್ರಸ್ತನಾಗಿದ್ದ, ಸಾವಿನ ದವಡೆಗೆ ಸಿಕ್ಕಿದ್ದ – ಆದರೂ ಅವನು “ನಾನು ಪೆಟ್ಟು ತಿಂದಿಲ್ಲ ಎಂದುಕೊಂಡಿದ್ದ” ಅದರರ್ಥ ಅವನು ಅಯೋಗ್ಯ ನಂಬರ್‌ 1. ಆರೋಗ್ಯ ಮನಸ್ಕ ಹೇಳುತ್ತಾನೆ – `ನಾನು ಪೆಟ್ಟು ತಿನ್ನುತ್ತಿದ್ದೇನೆ’. ಅಯೋಗ್ಯ ಹೇಳಲಾರ.

ಪಾದ್ರಿ: ನಾವು ಅಸ್ತಿತ್ವವಾದದ ಮೇಲೆ ವಸ್ತುಸ್ಥಿತಿಯನ್ನು ಪರಾಮರ್ಶಿಸಬೇಕು. ಸಜೀವರಾಗಿರುವವರೆಗೆ ಒಂದು ಪದಾರ್ಥಕ್ಕೆ ಬೆಲೆ. ನಿರ್ಜೀವದ ಬಗ್ಗೆ ಚಿಂತಿಸಬಾರದು; ಕೊರಗಬಾರದು.

ಶ್ರೀಲ ಪ್ರಭುಪಾದ: ಕೊರಗುವುದೇನಿಲ್ಲವಾದರೆ ನೀವೇಕೆ  ನಿಡುಗಾಲ ಜೀವಂತವಿರುವ ಬಗ್ಗೆ ಹೋರಾಟ ಮಾಡುತ್ತೀರಿ. ನೀವೇಕೆ ಸುಮ್ಮನೆ ನಿಮ್ಮನ್ನೇ ಸಾಯುವುದಕ್ಕೆ ಬಿಡಬಾರದು?

ಪಾದ್ರಿ: ನಿಮ್ಮಲ್ಲಿ ಹಣ ಇದ್ದರೆ, ಅದು ಇರುವವರೆಗೆ ನಿಮಗೆ ಅದರ ಪ್ರಯೋಜನ. ಅದು ಕಳೆದು ಹೋಯಿತೆಂದರೆ ಚಿಂತಿಸಬೇಡಿ. ಕೊರಗುವುದಂಥದ್ದು ಏನೂ ಇಲ್ಲ. ಸಾವಿನ ಬಗ್ಗೆ ನನ್ನ ಕಲ್ಪನೆ ಇಷ್ಟೆ.

ಶ್ರೀಲ ಪ್ರಭುಪಾದ: ನೀವು ದೊಡ್ಡ ದೊಡ್ಡ ಮಾತಾಡಬಹುದು. ಅನುಷ್ಠಾನಕ್ಕೆ ಬಂದಾಗ ನೀವು ಗೋಳಿಡುತ್ತೀರಿ.

ಪಾದ್ರಿ: ನನ್ನ ತತ್ತ್ವಜ್ಞಾನದಲ್ಲಿ ನಾನು ಅನನುಭವಿ ಇರಬಹುದು. ಆದರೆ ನನ್ನ ತತ್ತ್ವಜ್ಞಾನ ಆದರ್ಶ.

ಶ್ರೀಲ ಪ್ರಭುಪಾದ: ಇವೆಲ್ಲ ವಾದಗಳಲ್ಲ. ಯಾವ ವಿವೇಕಿಯೂ ಈ ವಾದವನ್ನು ಒಪ್ಪುವುದಿಲ್ಲ. ಅದು ತತ್ತ್ವಜ್ಞಾನವಲ್ಲ. ಹತಾಶೆ. ಹತಾಶೆಯೇ ಜೀವನವಲ್ಲ. ಹತಾಶೆ ಹತಾಶೆಯೇ.

ಪಾದ್ರಿ: ಹತಾಶೆಯೇ ಏಕೈಕ ವಾಸ್ತವ ಇರಬಹುದು. ಅದನ್ನೇ ಆಲ್ಬರ್ಟ್‌ ಕ್ಯಾಮಸ್‌ ಅಂದುಕೊಂಡ. ಅವನ ಬರಹದಲ್ಲಿ ಇದನ್ನೇ ಮುಖ್ಯ ವಿಷಯವನ್ನಾಗಿ ಆರಿಸಿಕೊಂಡ. ಹತಾಶೆ – ಅರ್ಥಹೀನ. ಅದೊಂದು ರಾತ್ರಿ ಆತ ಕಾರು ಓಡಿಸುತ್ತಿದ್ದ. ಪರ್ವತಾಗ್ರಹದಲ್ಲಿ ಕಮರಿಯ ಮೇಲೇರಿಸಿಬಿಟ್ಟನೆಂದು ವರದಿ. ಜೀವನ ಅರ್ಥಹೀನ ಎಂದಾದರೆ ಬದುಕಿದ್ದು ಸಾರ್ಥಕವೇನು ಎಂದು; ಈ ಕಮರಿಯ ಮೇಲೆ ಕಾರು ಓಡಿಸಿದರೆ ಹೇಗೆ ಎನ್ನುತ್ತ ಕಾರು ಚಲಾಯಿಸಿದ, ಸತ್ತ.

ಶ್ರೀಲ ಪ್ರಭುಪಾದ: ಹುಚ್ಚ! ಹುಚ್ಚನೇ ಆಗಿರಬೇಕು. ಅವನೋರ್ವ ಚಿರಂತನ ಚೇತನ ಎಂಬುದು ಆತನಿಗೆ ತಿಳಿಯದು. ಭಗವಂತನ ಅವಿಭಾಜ್ಯ ಅಂಗ ಎಂದು ತಿಳಿಯದು. ಅವನು ಹುಚ್ಚ, ಏಕೆಂದರೆ, ತಿಳಿಯಬೇಕಾದುದನ್ನು ತಿಳಿಯದೆ ಹೋದ.

ಪಾದ್ರಿ: ಕೋಟ್ಯಂತರ ಜನರು ಅವನ ಪುಸ್ತಕಗಳನ್ನು ಧರ್ಮಶಾಸ್ತ್ರ ಎಂದು ಅಂಗೀಕರಿಸಿದ್ದಾರೆ.

ಶ್ರೀಲ ಪ್ರಭುಪಾದ: ಏನು ವಿಷಯ?

ಪಾದ್ರಿ: ಪುಸ್ತಕಗಳಲ್ಲಿರುವ ವಿಷಯವೇನೆಂದರೆ, ಜೀವನ, ಅಂತಿಮವಾಗಿ ಅಸಂಗತವಷ್ಟೆ. ಅದಕ್ಕೆ ಅರ್ಥವಿಲ್ಲ. ನಾವು ಅರ್ಥ ಕಲ್ಪಿಸುತ್ತೇವೆ.

ಶ್ರೀಲ ಪ್ರಭುಪಾದ: ಅಸಂಗತದಿಂದ ಸಂಗತವನ್ನು ನಿರೂಪಿಸಲು ಹೊರಟಿದ್ದೇನೆ? ಎಲ್ಲವೂ ಅಸಂಗತವಾದರೆ ಪುಸ್ತಕ ಬರೆಯುವುದಾದರೂ ಏಕೆ?

ಪಾದ್ರಿ: ಹೌದು! ಅದನ್ನೇ ಕ್ಯಾಮಸ್‌ ಮನಗಂಡಿದ್ದು. ಎಲ್ಲವೂ ಅಸಂಗತವಾದರೆ, ಮಾತನಾಡಿ, ಬರೆದು ಬದುಕಿ ಪ್ರಯೋಜನವೇನು?

ಶ್ರೀಲ ಪ್ರಭುಪಾದ: ವಿಷಯವೇನೆಂದರೆ, ನೀವು ಜೀವನ ಅಸಂಗತ ಎನ್ನುತ್ತೀರಿ. ನಾನು ಅಲ್ಲ ಎನ್ನುತ್ತೀನಿ. ಇದು ಬಗೆಹರಿಯುವುದು ಹೇಗೆ? – ಯಾರು ಬಗೆಹರಿಸುತ್ತಾರೆ, ನೀವು ಸರಿಯೇ, ನಾನು ಸರಿಯೇ?

ಪಾದ್ರಿ: ಇದು ಬಗೆಹರಿಯುವುದೆಂದು ನಾನು ನಂಬಲಾರೆ.

ಶ್ರೀಲ ಪ್ರಭುಪಾದ: ಸಾವಿನಲ್ಲಿ ಇದು ಬಗೆಹರಿಯುತ್ತದೆ ಅಷ್ಟೆ. ಒಬ್ಬ ಅಯೋಗ್ಯ ಮೂರ್ಖತನದಿಂದ, ಜೀವನ ಅಸಂಗತವೆಂದು ಭಾವಿಸಬಹುದು. ಆದರೆ ಅಸಂಗತವಲ್ಲ. `ಮೃತ್ಯುಃ ಸರ್ವಹರಶ್ಚಾಹಂ’ ಭಗವಾನ್‌ ಶ್ರೀಕೃಷ್ಣ – “ಪ್ರತಿಯೊಬ್ಬರೂ ಕೊನೆಯಲ್ಲಿ ನನ್ನನ್ನು ಒಪ್ಪಿಕೊಳ್ಳಬೇಕು – ಕಾಲಪುರುಷನೆಂದು”. ನಾವಿಬ್ಬರೂ ಮೃತ್ಯುವನ್ನು ಒಪ್ಪಿಕೊಳ್ಳಲೇಬೇಕು. ನೀವು ಸಾಯಲು ಬಯಸುವುದಿಲ್ಲ. ಹಾಗೆಯೇ ನಾನೂ ಸಾಯಬಯಸುವುದಿಲ್ಲ. ಆದರೆ ನಾವಿಬ್ಬರೂ ಆ ಸಾರ್ವಭೌಮ ಪುರುಷೋತ್ತಮನಾದ ಭಗವಂತನನ್ನು ಒಪ್ಪಿಕೊಳ್ಳಬೇಕು.

ಪಾದ್ರಿ: ಆದರೆ ಕ್ಯಾಮಸ್‌ ಬಗ್ಗೆ ಹೇಳುವುದಾದರೆ – ಅವನು ಲೆಕ್ಕಿಸಲಿಲ್ಲ. ಮನಸಾರೆ ಸತ್ತ. ಸಾಯಲು ಬಯಸಿದ್ದ.

ಶ್ರೀಲ ಪ್ರಭುಪಾದ: ಆತ ಸಾಯಲು ಬಯಸಲಿಲ್ಲ. ಆದರೆ ಪ್ರತಿಷ್ಠೆಗಾಗಿ ಸತ್ತಿರಬೇಕು.

ಪಾದ್ರಿ: ಆತ ಸಾಯಲಿಚ್ಛಿಸಿದ ಎಂದುಕೊಳ್ಳುತ್ತೇನೆ.

ಶ್ರೀಲ ಪ್ರಭುಪಾದ: ನೀನೂ ಸಾಯಬೇಕೆಂದಿದ್ದರೆ, ನಾನು ಕೊಲ್ಲುತ್ತೇನೆ. ನೀನು ಸುಖವಾಗಿರಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi