ಶ್ರೀ ಅದ್ವೈತ ಆಚಾರ್ಯರ ವೈಭವಗಳು

ಶ್ರೀ ಅದ್ವೈತ ಆಚಾರ್ಯರು ಮಹಾವಿಷ್ಣುವಿನ ಅವತಾರಿ. ಶ್ರೀಹರಿಯಿಂದ ಭಿನ್ನವಲ್ಲದ್ದರಿಂದಲೇ ಅವರನ್ನು “ಅದ್ವೈತ” ಎಂದೂ, ಲೋಕಕ್ಕೆ ಭಕ್ತಿಯ ಪಂಥವನ್ನು ಸಾರಿದ್ದರಿಂದ ‘ಆಚಾರ್ಯ’ ಎ೦ದೂ ಕರೆಯುತ್ತಾರೆ. ಈ ಎರಡೂ ಹೆಸರುಗಳಿಂದ ಅವರು ಅದ್ವೈತಾಚಾರ್ಯರೆಂದು ಪ್ರಸಿದ್ಧರಾದರು.

ಮಾಯಶಕ್ತಿಯಿ೦ದ ಸೃಷ್ಟಿಯ ರಚನೆಯನ್ನು ಮಾಡುವುದು ಅವರ ಕೆಲಸ. ತಮ್ಮ ಲೀಲೆಗಳಲ್ಲಿ ಅವರು ಅನೇಕ ಬ್ರಹ್ಮಾಂಡಗಳನ್ನು ಸೃಷ್ಟಿಸಿದ್ದಾರೆ ಮತ್ತು ತಮ್ಮ ಇಚ್ಛೆಯಂತೆ ಅನೇಕ ರೂಪ ಧಾರಣೆ ಮಾಡಿ ಪ್ರಕಟವಾಗಿದ್ದಾರೆ.

ನಾಸ್ತಿಕ ಸಾಂಖ್ಯ ತತ್ತ್ವಶಾಸ್ತ್ರದಲ್ಲಿ ಈ ಜಗತ್ತು ಜಡವಸ್ತುವಿನಿಂದಲೇ ನಿರ್ಮಾಣವಾಗುತ್ತದೆ ಎಂಬ ಪ್ರತಿಪಾದನೆ ಇದೆ. ಆದರೆ ಜಡವಸ್ತುವಿನಿಂದಲೇ ಈ ಲೋಕದ ನಿರ್ಮಾಣವಾಗುವುದಿಲ್ಲ. ಶ್ರೀ ಮಹಾವಿಷ್ಣುವು ತನ್ನ ಕೋಟಿ ಅಂಶ, ಶಕ್ತಿ ಮತ್ತು ಅವತಾರದಿಂದ ಈ ಜಗತ್ತನ್ನು ನಿರ್ಮಿಸುತ್ತಾನೆ. ಆದರೆ ತನ್ನ ಮಾಯೆಯಿಂದ ಈ ಜಗತ್ತನ್ನು ಸೃಷ್ಟಿಸುವಾಗ ಎರಡು ಮುಖ್ಯವಾದ ವಿಷಯಗಳಿಗೆ ಆತ ಪ್ರಾಮುಖ್ಯತೆಯನ್ನು ಕೊಡುತ್ತಾನೆ. ಅವು “ಉಪಾದಾನ ಕಾರಣ” (material cause) ಮತ್ತು “ನಿಮಿತ್ತ ಕಾರಣ” (efficient cause). ಈ ಸೃಷ್ಟಿಯ ಕಾರ್ಯಕ್ಕೆ ಮೂಲಾಧಾರವಾದುದು ‘ ಉಪಾದಾನ ಕಾರಣʼ ವಾಗುತ್ತದೆ. ಅದು ತನ್ನ ಮೂಲದಿಂದ ಸೃಷ್ಟಿಯಾಗಿ ಬದಲಾಗುವುದಕ್ಕೆ ‘ನಿಮಿತ್ತ ಕಾರಣ’ ದ ಅವಶ್ಯಕತೆಯಿದೆ. ಇಲ್ಲಿ ಶ್ರೀ ವಿಷ್ಣುವೇ ನಿಮಿತ್ತ ಕಾರಣನಾಗಿ ಕೆಲಸ ಮಾಡುತ್ತಾನೆ. ಶ್ರೀ ನಾರಾಯಣನ ರೂಪದಲ್ಲಿ ಪುರುಷ ತತ್ತ್ವವಾದ ಶ್ರೀ ಅದ್ವೈತಾಚಾರ್ಯರೇ ಉಪಾದಾನ ಕಾರಣವಾಗುತ್ತಾರೆ.

ಶ್ರೀ ಅದ್ವೈತಾಚಾರ್ಯರು ನಾರಾಯಣನ ಪರಮ ಅಂಗವಾಗಿದ್ದಾರೆ. ಇವರು ಸದ್ಗುಣಗಳ ಧಾಮ. ಭಕ್ತಿಯ ಪಂಥವನ್ನು ಸಾರಲೆಂದೇ ಅವತರಿಸಿದರು. ಶ್ರೀಭಗವದ್ಗೀತಾ ಮತ್ತು ಶ್ರೀಮದ್ಭಾಗವತಮ್‌ನಲ್ಲಿ ಭಕ್ತಿಯ ವ್ಯಾಖ್ಯಾನವನ್ನು ವಿಶೇಷವಾಗಿ ಮಾಡಿದ್ದಾರೆ. ಕಮಲನಯನ ಶ್ರೀವಿಷ್ಣುವಿನ ಅಂಗವಾದ್ದರಿಂದ ಇವರನ್ನು ‘ಕಮಲಾಕ್ಷ’ ಎಂದು ಕೂಡ ಕರೆಯುತ್ತಾರೆ.

ಶ್ರೀ ಅದ್ವೈತಾಚಾರ್ಯರು ಶ್ರೀಕೃಷ್ಣ ಪರಮಾತ್ಮನನ್ನು ತುಳಸಿಯ ಎಲೆಗಳಿಂದ ಮತ್ತು ಗ೦ಗೆಯ ನೀರಿನಿಂದ ಭಕ್ತಿಯಿಂದ ಪೂಜಿಸಿದರು. ಇವರ ಪ್ರೀತಿಗೆ ಮೆಚ್ಚಿ ಶ್ರೀಕೃಷ್ಣ ಪರಮಾತ್ಮನು ಚೈತನ್ಯ ಮಹಾಪ್ರಭುಗಳ ರೂಪದಲ್ಲಿ ತನ್ನ ಸ್ವ-ಗಣಗಳೊಂದಿಗೆ ಅಂದರೆ ಪ್ರೀತಿ ಪಾತ್ರರೊಡನೆ ಈ ಭೂಮಿಯ ಮೇಲೆ ಅವತರಿಸಿದನು.  ಈ ಅದ್ವೈತಾಚಾರ್ಯರಿಂದಲೇ ಶ್ರೀ ಚೈತನ್ಯ ಮಹಾಪ್ರಭುಗಳು ಸಂಕೀರ್ತನಾ ಪಥವನ್ನು ಜಗತ್ತಿಗೆ ಸಾರಿದರು. ಹೀಗೆ ಅದ್ವೈತಾಚಾರ್ಯರ ಗುಣ ಮಹಿಮೆಗಳು, ಸಾಧನಭಕ್ತಿಯು ಅಪಾರವಾಗಿದೆ.

ಶ್ರೀಕೃಷ್ಣ ಪರಮಾತ್ಮನೇ ಚೈತನ್ಯ ಮಹಾಪ್ರಭುವಾದ್ದರಿಂದ ಅವರ ಅಂಗಗಳಾಗಿ ಶ್ರೀ ಅದ್ವೈತಾಚಾರ್ಯ, ಶ್ರೀ ನಿತ್ಯಾನಂದ ಪ್ರಭುಗಳಿದ್ದರು. ಮಹಾಪ್ರಭುಗಳ ಕಣ್ಣು, ಮುಖ, ಕೈ, ಚಕ್ರ, ಅಸ್ತಗಳಂತೆ ಅನೇಕ ಭಕ್ತಗಣಗಳು ಅವರ ಚಿಕ್ಕ ಚಿಕ್ಕ ಅಂಗಗಳಾಗಿದ್ದರು. ಇವರೆಲ್ಲರ ಜೊತೆಗೂಡಿ ಚೈತನ್ಯ ಮಹಾಪ್ರಭುಗಳು ತಮ್ಮ ಲೀಲೆಗಳನ್ನು ತೋರಿಸಿ ತಮ್ಮ ಭಕ್ತಿ ಧ್ಯೇಯವನ್ನು ಸಾರಿದರು, ಸಾಧಿಸಿದರು.

ಶ್ರೀ ಅದ್ವೈತಾಚಾರ್ಯರು ಶ್ರೀ ಮಾಧವೇಂದ್ರ ಪುರಿಗಳ ಶಿಷ್ಯನಾಗಿದ್ದರಿಂದ ಚೈತನ್ಯ ಮಹಾಪ್ರಭುಗಳು ಅವರನ್ನು ತಮ್ಮ ಆಧ್ಯಾತ್ಮಿಕ ಗುರುಗಳೆಂದು ಹೇಳುತ್ತಾರೆ. ಲೌಕಿಕ ಧರ್ಮ ಮರ್ಯಾದೆಯನ್ನು ಪಾಲನೆ ಮಾಡುತ್ತ ಶ್ರೀ ಚೈತನ್ಯರು ಭಕ್ತಿಯಿ೦ದ ಅದ್ವೈತಾಚಾರ್ಯರು ಚರಣಕಮಲಗಳಿಗೆ ವ೦ದಿಸುತ್ತಾರೆ. ಆದರೆ ಅದ್ವೈತಾಚಾರ್ಯರು ಮಹಾಪ್ರಭುಗಳನ್ನು ತಮ್ಮ ಗುರುವೆ೦ದು ತಾವು ಅವರ ದಾಸನೆಂದು ಹೇಳಿಕೊಳ್ಳುತ್ತಾರೆ. ಅದ್ವೈತಾಚಾರ್ಯರು ಆ ಪ್ರೇಮ ಮೂರ್ತಿ ಮಹಾಪ್ರಭುವಿನ ಅಭಿಮಾನ ಸುಖದಲ್ಲಿ ತಮ್ಮನ್ನು ತಾವು ಮರೆತು ಎಲ್ಲ ಜೀವಿಗಳಿಗೂ ನೀವು ಶ್ರೀ ಚೈತನ್ಯ ಮಹಾಪ್ರಭುಗಳ ದಾಸರಾಗಿ ಎಂದು ಉಪದೇಶಿಸುತ್ತಾರೆ. ಭಕ್ತಿಭಾವದ ಅನೇಕ ಪ್ರಕಾರಗಳಲ್ಲಿ ‘ದಾಸ್ಯ ಭಾವ’ವು ಕೂಡ ಮುಖ್ಯವಾದುದು. ಈ ದಾಸ್ಯ ಭಾವದ ಸಮ ಯಾವ ಆನ೦ದವೂ ಇಲ್ಲ. ಇಡೀ ಪಾರಮಾರ್ಥಿಕ ಜಗತ್ತಷ್ಟೇ ಅಲ್ಲ, ಈ ಭೂಮಿಯ ಮೇಲೆ ಇರುವ ಜಡ, ಜೀವಗಳು ಆ ಕೃಷ್ಣನ ಭಕ್ತಿಸೇವೆ ಮಾಡಲು ಪರಿತಪಿಸುತ್ತಿದೆ. ನಾನು, ನಿತ್ಯಾನಂದರು ಪ್ರಭುಗಳ ದಾಸರು ಎಂದು ಅದ್ವೈತಾಚಾರ್ಯರು ಹೇಳಿಕೊಳ್ಳುತ್ತಾರೆ.

ಶ್ರೀಕೃಷ್ಣನ ಶ್ರೇಷ್ಠ ಪ್ರೇಯಸಿ ಶ್ರೀಲಕ್ಷ್ಮಿ ಅವನ ಹೃದಯ ಕಮಲದಲ್ಲಿ ವಾಸಿಸುತ್ತಿದ್ದರೂ ಕೂಡ ಅವನ ಚರಣ ಕಮಲದ ದಾಸ್ಯ ಸುಖವನ್ನು ಬೇಡುತ್ತಾಳೆ.

ಶ್ರೀಕೃಷ್ಣ ಪರಮಾತ್ಮನ ಸಂಗಡಿಗರಾದ ಬ್ರಹ್ಮ, ಶಿವ, ನಾರದ, ಶುಕ, ಸನಾತನರು ಮಹಾಪ್ರಭುವಿನ ದಾಸ್ಯಭಾವದಿಂದ ಆನಂದಿತರಾಗಿದ್ದಾರೆ.

ನಂದ ಮಹಾರಾಜನು ಶ್ರೀಕೃಷ್ಣನ ತಂದೆಯಾಗಿದ್ದರೂ ತನ್ನ ಮಗ ದೇವತಾ ಪುರುಷನೆಂದು ತಿಳಿದಿರುವುದಿಲ್ಲ. ಆದರೂ ಶ್ರೀಕೃಷ್ಣನ ಪ್ರೇಮಕ್ಕೆ ದಾಸನಾಗಿರಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದನು. ಒಂದು ಸಲ ಕೃಷ್ಣನ ಆಪ್ತಮಿತ್ರನಾದ ಉದ್ಧವನ ಬಳಿ ನಂದನು ಮಾತನಾಡುತ್ತಾ ಹೀಗೆ ಹೇಳುತ್ತಾನೆ; ಉದ್ಧವ ಶ್ರೀಕೃಷ್ಣನು ನಿಮಗೆಲ್ಲ ದೈವರೂಪಿ ಭಗವಂತ. ಆದರೆ ನನಗೆ ಆತ ಮಗ ಮಾತ್ರ. ಆದರೆ ನನ್ನ ಮನಸ್ಸೆಲ್ಲಾ ಅವನ ಪ್ರೀತಿ, ಪಾದಕಮಲವನ್ನು ಸ್ಮರಿಸುತ್ತಲೇ ಇರುತ್ತದೆ. ಅವನ ನಾಮಜಪವೇ ನನ್ನ ಮುಖವಾಣಿಯಾಗಿದೆ. ವೃಂದಾವನದಲ್ಲಿ ಅವನಿಗೆ ಎಷ್ಟೊಂದು ಜನ ಸ್ನೇಹಿತರಿದ್ದರು. ಶ್ರೀಧಾಮನಂತು ಅವನ ಪರಮ ಆಪ್ತಸ್ನೇಹಿತನಾಗಿದ್ದ. ಅವರೊಂದಿಗೆ ಆಟ, ಜಗಳ, ಹೆಗಲ ಮೇಲೆ ಹತ್ತಿಕೂರುವುದೆಲ್ಲ ನನ್ನ ಮಗ ಮಾಡುತ್ತಿದ್ದ. ಅವನ ಪರ ಪ್ರೀತಿಯಲ್ಲಿ, ಆತ್ಮೀಯತೆಯಲ್ಲಿ ಎಲ್ಲರೂ ಕರಗಿ ಹೋಗುತ್ತಿದ್ದರು. ಎಲ್ಲ ಗೋಪಿಕಾ ಸ್ತ್ರೀಯರು ತಾವು ಕೃಷ್ಣನ ದಾಸಿಗಳೆ೦ದು ಅಭಿಮಾನಪಟ್ಟುಕೊಳ್ಳುತ್ತಿದ್ದರು. ಈಗ ನನ್ನ ಮಗ ನಮ್ಮನ್ನೆಲ್ಲ ಬಿಟ್ಟು ಮಥುರಾದಲ್ಲಿ ಇದ್ದಾನೆ. ಎಲೈ, ಉದ್ಧವನೇ ನೀನು ಅವನೊಂದಿಗೆ ಇದ್ದು ಬಂದೆ. ಈಗ ಹೇಳು ಅವನು ಈ ತ೦ದೆಯನ್ನು, ತಾಯಿ ಯಶೋದೆಯನ್ನು ಗೋಪಿಕೆಯರನ್ನು, ಸ್ನೇಹಿತರನ್ನು ಎಲ್ಲರನ್ನೂ ನೆನಪಿಸಿಕೊಳ್ಳುವನೇನು? ದುಃಖಪಡುತ್ತಿರುವ ನಮ್ಮೆಲ್ಲರ ಬಳಿ ಓಡಿ ಬಂದು ತನ್ನ ಮೃದು ಕೋಮಲ ಪರಿಮಳಯುಕ್ತ ಕೈಯನ್ನು ನಮ್ಮ ತಲೆಯ ಮೇಲೆ ಇಟ್ಟು ಸವರುತ್ತಾನೇನೂ ಎಂದು ದುಃಖಮಿಶ್ರಿತ ಮುಗ್ಧತೆಯಿಂದ ಕೇಳುತ್ತಾನೆ.

ಎಲ್ಲ ಗೋಪಿಕೆಯರಿಗಿಂತಲೂ ರಾಧಾರಾಣಿ ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯಳಾಗಿದ್ದಳು. ತನ್ನ ಪವಿತ್ರಪೂರ್ಣ ಗುಣ, ನಡತೆಗಳಿ೦ದ, ಇ೦ಪಾದ ಗಾಯನದಿ೦ದ ಆ ಮುರುಳೀಧರನ ಮನಸ್ಸನ್ನೇ ಅಪಹರಿಸಿದವಳು. ಅವಳು ಕೂಡ ತನ್ನನ್ನು ತಾನು ಕೃಷ್ಣದಾಸಿ ಎಂದುಕೊಂಡಿದ್ದಾಳೆ.

ಶ್ರೀಕೃಷ್ಣನ ರಾಣಿಯರಲ್ಲಿ ಶ್ರೇಷ್ಠ ರಾಣಿ ರುಕ್ಮಿಣಿ ಹೇಳುತ್ತಾಳೆ, ಜರಾಸಂಧ, ಶಿಶುಪಾಲ, ರುಕ್ಮಿ ಇವರಿಂದ ನನ್ನನ್ನು ರಕ್ಷಿಸಿ ಕರೆದೊಯ್ದ ಕೃಷ್ಣನ ಪಾದದಾಸಿ ನಾನು, ಅವನಿರುವ ಪುಣ್ಯಧಾಮವನ್ನು ಸ್ವಚ್ಛಗೊಳಿಸುವುದರಲ್ಲಿಯೇ ನನಗೆ ಆನಂದವಿದೆ.

ಬಲದೇವನು ಕೂಡ ತಾನು ಕೃಷ್ಣದಾಸ ಎ೦ದುಕೊಳ್ಳುತ್ತಾನೆ, ಸಾವಿರ ಹೆಡೆಯ ಆಧಿಶೇಷನು, ತಾಂಡವ ನೃತ್ಯವನ್ನು ಮಾಡುವ ಶಿವನೂ ಕೂಡ ಅವನ ಪವಿತ್ರ ನಾಮಸ್ಮರಣೆಯನ್ನು ಮಾಡುತ್ತಾ ಪುನೀತರಾಗಿದ್ದಾರೆ.

ಶ್ರೀ ಕೃಷ್ಣನ ದಾಸರಲ್ಲದವರು ಈ ಪ್ರಪಂಚದಲ್ಲಿ ಯಾರಿದ್ದಾರೆ? ಎಲ್ಲರೂ ದಾಸ್ಯಭಾವದಿಂದ ಉನ್ಮತ್ತರಾಗಿ ಹೋಗಿದ್ದಾರೆ. ಎಲ್ಲರಿಂದಲೂ ಪೂಜಿಸಲ್ಪಡುವ ಅರ್ಹತೆ ಶ್ರೀಕೃಷ್ಣನಿಗೊಬ್ಬನಿಗೆ ಮಾತ್ರ ಅದು ಸಲ್ಲುತ್ತದೆ. ಇಂದು ಆ ಪರಮ ಪ್ರೇಮಮಯಿ ಶ್ರೀಕೃಷ್ಣನು ಚೈತನ್ಯ ಮಹಾಪ್ರಭುವಾಗಿ ಬ೦ದಿದ್ದಾನೆ. ಅವರಿಗೆ ನಾವೆಲ್ಲರೂ ದಾಸರು, ಯಾರು ಮಹಾಪ್ರಭುಗಳನ್ನೇ ಶ್ರೀಕೃಷ್ಣನೆಂದು ನಂಬುತ್ತಾರೋ ಅವರು ಉದ್ಧಾರವಾಗುತ್ತಾರೆ. ಪಾಪ ಭೋಗಗಳಲ್ಲಿ ಮುಳುಗಿದವರೆಲ್ಲ ನಾಶಹೊಂದುತ್ತಾರೆ ಎಂದು ಅದ್ವೈತಾಚಾರ್ಯರು ತಮ್ಮ ಭಕ್ತಿಯೋಗದ ಬಗ್ಗೆ ವಿವರಣೆಯನ್ನು ನೀಡುತ್ತಾರೆ.

ಶ್ರೀ ಅದ್ವೈತಾಚಾರ್ಯರು ಚೈತನ್ಯ ಮಹಾಪ್ರಭುಗಳಿಗೆ ಗುರುಗಳಾಗಿದ್ದರೂ ಕೂಡ ಅವರು ತಮ್ಮನ್ನು ತಾವು ಪ್ರಭುಗಳ ಸೇವಕರೆಂದುಕೊಳ್ಳುತ್ತಾರೆ. ತ್ರೇತಾಯುಗದಲ್ಲಿ ಅವರೇ ಶ್ರೀ ಲಕ್ಷ್ಮಣರಾಗಿದ್ದರು, ದ್ವಾಪರದಲ್ಲಿ ಬಲರಾಮರಾಗಿದ್ದರು. ಕಾರಣಾಬ್ಧಿ ಕ್ಷೀರಸಾಗರದಲ್ಲಿ ಪವಡಿಸಿರುವ ಪರಮಾತ್ಮನ ಸಂಕರ್ಷಣನ ಅವತಾರವು ಕೂಡ ಅವರಾಗಿದ್ದಾರೆ.

ಎಲ್ಲಾ ಅವತಾರಗಳ ಮೂಲ ಶ್ರೀಕೃಷ್ಣನೇ ಆಗಿದ್ದರೂ ಎಲ್ಲವೂ ಶ್ರೇಷ್ಠವಲ್ಲ. ಶ್ರೇಷ್ಠ-ಕನಿಷ್ಟವೇನೇ ಇದ್ದರೂ ಅವೆಲ್ಲವೂ ಶ್ರೀಕೃಷ್ಣ ರೂಪಗಳೇ ಹೌದು. ಶ್ರೀಕೃಷ್ಣನ ಭಕ್ತಿಯಲ್ಲಿ ಸೇವೆಯಲ್ಲಿ ಯಾರು ಶ್ರೇಷ್ಠ ಅವರು ಮಹಾಪ್ರಭುಗಳಾಗಿರುತ್ತಾರೆ. ಯಾರು ಕನಿಷ್ಟರೋ ಅವರು ಭಕ್ತರಾಗಿರುತ್ತಾರೆ. ಶ್ರೀಕೃಷ್ಣ ಮಹಾಪ್ರಭುವಿನಲ್ಲಿ ಸಮಾನತೆಯಿದೆ. ಇಬ್ಬರೂ ಒಂದೇ. ಆದರೆ ಶ್ರೀಕೃಷ್ಣನಿಗೆ ತನ್ನ ಪರಮ ಭಕ್ತರಲ್ಲಿಯೇ ಆತ್ಮೀಯತೆ, ಪ್ರೀತಿ ಹೆಚ್ಚಾಗಿರುತ್ತದೆ. ಏಕೆ೦ದರೆ ಭಕ್ತರ ಹೃದಯದಲ್ಲಿ ಶ್ರೀಕೃಷ್ಣನೇ ಇದ್ದಾನೆ. ಕೃಷ್ಣನ ಮನಸ್ಸಿನಲ್ಲಿಯೂ ಕೂಡ ಭಕ್ತರೇ ತುಂಬಿಕೊಂಡಿದ್ದಾರೆ. ಹಾಗಾಗಿಯೇ ತನಗಿಂತಲೂ ತನ್ನ ಭಕ್ತರೇ ಶ್ರೇಷ್ಠರಾಗಿದ್ದಾರೆ ಎನ್ನುತ್ತಾನೆ. ಇದಕ್ಕೊಂದು ಸುಂದರವಾದ ವ್ಯಾಖ್ಯಾನ ಹೀಗಿದೆ…

ಯಾರು ದಾಸ್ಯ ಭಾವದಲ್ಲಿ ಮಗ್ನರಾಗಿರುವ ಭಕ್ತರೋ ಅವರಿಗೆ ಮಾತ್ರ ಶ್ರೀಕೃಷ್ಣ ಭಕ್ತಿಯ ಮಧುರತೆ ಸಾಧ್ಯವಾಗುತ್ತದೆ. ಲಕ್ಷ್ಮಿ, ಲಕ್ಷ್ಮಣ, ಬಲರಾಮ, ಸಂಕರ್ಷಣ ಇವರೆಲ್ಲರೂ ಕೃಷ್ಣನ ದಾಸರಾಗಿ ಆ ಭಕ್ತಿಯ ಮಧುರತೆಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾರೆ. ಭಕ್ತಿ ಭಾವಕ್ಕಿಂತ ಅಧಿಕವಾದ ಆನ೦ದವಿಲ್ಲ. ಈ ಭಕ್ತಿಯ ಅವತಾರದಲ್ಲಿ ಸ೦ಕರ್ಷಣನೇ ಮೂಲ. ಅದರಲ್ಲಿ ಶ್ರೀ ಅದ್ವೈತಾಚಾರ್ಯರೂ ಒಬ್ಬರು. ಶ್ರೀಕೃಷ್ಣ ಪರಮಾತ್ಮನಿಗೆ ಈ ಭಕ್ತಿಯ ಆಸ್ವಾದನೆ ಮತ್ತು ಲೋಕ ಕಲ್ಯಾಣ ಮಾಡುವ ರೂಪಧಾರಣೆ ಮಾಡಲು ಒಂದು ಕಾರಣ ಬೇಕಿತ್ತು. ಅದ್ವೈತಾಚಾರ್ಯ ಭಕ್ತಿ ಮತ್ತು ಪರಮ ಪವಿತ್ರ ನಾಮ ಜಪದ ಹೂಂಕಾರದಿಂದಲೇ ಶ್ರೀಕೃಷ್ಣ ಪರಮಾತ್ಮ ಚೈತನ್ಯ ಮಹಾಪ್ರಭುಗಳ ರೂಪದಿಂದ ಧರೆಗಿಳಿದನು. ನಾಮಜಪ ಸಂಕೀರ್ತನೆಯಿಂದ ಇಡೀ ಜಗತ್ತಿಗೆ ಭಕ್ತಿಯ ರೂಪದ ಪ್ರೇಮಧನವು ಸಿಕ್ಕಿತು. ಇಂತಹ ಮಹತ್ಸಾಧನೆಯ ಕಾರ್ಯವೊಂದು ಶ್ರೀ ಅದ್ವೈತಾಚಾರ್ಯರಿಂದ ಭಕ್ತಿಯ ಲೋಕದಲ್ಲಿ ಬೆಳಕನ್ನು ಮೂಡಿಸಿತು.

ಅದ್ವೈತ ಆಚಾರ್ಯರು ಜನಿಸಿದ್ದು 1434ರಲ್ಲಿ ಬಂಗಾಳದ ಶ್ರೀ ಹಟ್ಟ ಬಳಿ ಇರುವ ನವಗ್ರಾಮ ಎಂಬ ಹಳ್ಳಿಯಲ್ಲಿ ಅವರ ತಂದೆ ಕುವೇರ ಪಂಡಿತ, ತಾಯಿ ನಭಾ ದೇವಿ. ಇವರಿಗೆ ಕಮಲಾಕ್ಷ ಎಂಬ ಇನ್ನೊಂದು ಹೆಸರಿತ್ತು. ಆದರೆ ಎಲ್ಲರೂ ಅದ್ವೈತ ಎಂದೇ ಕರೆಯುತ್ತಿದ್ದುದರಿಂದ ಆ ಹೆಸರೇ ಜನಜನಿತವಾಯಿತು. ಅದ್ವೈತರಿಗೆ 4 ಅಥವಾ 5 ವರ್ಷವಾಗಿದ್ದಾಗ ಅವರ ಕುಟುಂಬ ನವಗ್ರಾಮದಿಂದ ಗಂಗಾ ನದಿ ತೀರದ ಶಾಂತಿ ಪುರಕ್ಕೆ ವಾಸ್ತವ್ಯ ಬದಲಿಸಿತು.

ತಮ್ಮ ಪೋಷಕರು ಕಾಲವಾದ ನಂತರ ಅದ್ವೈತ ಆಚಾರ್ಯರು ಗಯಾಕ್ಕೆ ತೆರಳಿದರು. ಅನೇಕ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದರು. ಆಗ ಅವರಿಗೆ ಮಾಧವೇಂದ್ರ ಪುರಿಗಳ ಪರಿಚಯವಾಯಿತು. ಅಲ್ಲಿಂದ ಅದ್ವೈತರ ಜೀವನದ ದಿಕ್ಕೇ ಬದಲಾಯಿತು. ಮಾಧವೇಂದ್ರರಿಂದ ದೀಕ್ಷೆಪಡೆದ ಅದ್ವೈತರು ಮಥುರಾ ಮತ್ತು ವೃಂದಾವನ ಪ್ರವಾಸ ಕೈಗೊಂಡರು. ವೃಂದಾವನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅದ್ವೈತರು ಒಂದು ವೃಕ್ಷದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಅದ್ವೈತ ವಟ ಎಂಬ ಆ ವೃಕ್ಷವನ್ನು ಈಗಲೂ ಅಲ್ಲಿ ಕಾಣಬಹುದು.

ನ೦ತರ ಅದ್ವೈತ ಆಚಾರ್ಯರು ನವದ್ವೀಪಕ್ಕೆ ತೆರಳಿದರು. ಅಲ್ಲಿ ಭಗವದ್ಗೀತೆ ಮತ್ತು ಶ್ರೀಮದ್ ಭಾಗವತಗಳ ಕುರಿತು ಪ್ರವಚನಗಳನ್ನು ನೀಡಿದರು. ಜನ ಆಧ್ಯಾತ್ಮಿಕತೆಯಿಂದ ದೂರಾಗುತ್ತಿರುವುದನ್ನು ಕ೦ಡು ಮನನೊಂದ ಅದ್ವೈತ ಆಚಾರ್ಯರು, ಮತ್ತೊಮ್ಮೆ ಧರೆಗವತರಿಸುವಂತೆ ಶ್ರೀ ಕೃಷ್ಣನನ್ನು ಪ್ರಾರ್ಥಿಸಿದರು. ಈ ಪ್ರಾರ್ಥನೆಗೆ ಸ್ಪಂದಿಸಿ ಶ್ರೀಕೃಷ್ಣ ಚೈತನ್ಯರ ರೂಪದಲ್ಲಿ ಅವತರಿಸಿದ. ನಂತರ ಶ್ರೀ ಚೈತನ್ಯರು ಸಂನ್ಯಾಸ ಸ್ವೀಕರಿಸಿದ ಬಳಿಕ ಅದ್ವೈತರು ಶಾಂತಿಪುರಕ್ಕೆ ತೆರಳಿದರು.

ಶ್ರೀ ಶಿವ ಮತ್ತು ಅದ್ವೈತ ಆಚಾರ್ಯರು ಇಬ್ಬರು ಒಂದೇ ಎಂದು ಗೌರ ಗಣೋದ್ದೇಶ ದೀಪಿಕಾದಲ್ಲಿ ಹೇಳಲಾಗಿದೆ. ಅದ್ವೈತರು ಶ್ರೀ ವಿಷ್ಣುವಿನ ಅವತಾರ ಎಂದು ಚೈತನ್ಯ ಚರಿತಾಮೃತದಲ್ಲಿ ಉಲ್ಲೇಖಿಸಲಾಗಿದೆ. ಅದ್ವೈತ ಆಚಾರ್ಯರು ಶ್ರೀ ಕೃಷ್ಣನ ಲೀಲೆಗಳಲ್ಲಿ ವಿಶಾಖ ದೇವಿಯಾಗಿ ಅವತರಿಸಿದ್ದರು ಎಂದೂ ಹೇಳಲಾಗಿದೆ. ಹೀಗಾಗಿಯೇ ಅವರು ಭುಲೋಕದಲ್ಲಿ ಅವತರಿಸಿದಾಗಲೂ ಕೃಷ್ಣನ ಅವತಾರ ಶ್ರೀ ಚೈತನ್ಯ ಮಹಾಪ್ರಭುಗಳ ಆತ್ಮೀಯ ಅನುಯಾಯಿಗಳಲ್ಲಿ ಒಬ್ಬರಾಗಿದ್ದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi