ಶ್ರೀ ಅಶ್ವತ್ಥ ಲಕ್ಷ್ಮೀನರಸಿಂಹ ದೇವಸ್ಥಾನ

ಭಕ್ತಿಮಯವಾದ ಜೀವನದಲ್ಲಿ ಬರುವ ಅಡಚಣೆಗಳೂ, ಭಯಗಳೂ ದೂರವಾಗುವುದಕ್ಕಾಗಿ ವಿಶೇಷವಾಗಿ ಶ್ರೀ ನರಸಿಂಹ ದೇವರನ್ನು ನಾವು ಪ್ರಾರ್ಥಿಸುತ್ತೇವೆ. ಏಕೆಂದರೆ, ತನ್ನ ಪರಮ ಭಕ್ತನ ಉದ್ಧಾರಕ್ಕಾಗಿ, ಅವನ ಸಂರಕ್ಷಣಕ್ಕಾಗಿ ಈ ಅವತಾರವನ್ನು ದೇವರು ಕೈಗೊಂಡಿದ್ದಾನೆ. ಅದಕ್ಕಾಗಿಯೇ ಅವನನ್ನು ಭಕ್ತವತ್ಸಲ ಎಂದು ಕರೆಯುತ್ತಾರೆ.

ದಕ್ಷಿಣ ಭಾರತದಲ್ಲಿಯ ನರಸಿಂಹ ದೇವರ ಅನೇಕ ಸ್ಥಾನಗಳಲ್ಲಿ ಬೆಳಗಾವಿ ಜಿಲ್ಲೆಯ ಮುಗುಟಖಾನ ಹುಬ್ಬಳ್ಳಿಯ (ಎಂ.ಕೆ. ಹುಬ್ಬಳ್ಳಿ) ಹತ್ತಿರ ಮಲಾಪಹಾರೀ ನದಿಯ ಉತ್ತರವಾಹಿನಿ ದಂಡೆಯಲ್ಲಿ ಇರುವ ಅಶ್ವತ್ಥ ನರಸಿಂಹ ಮಂದಿರ ಬಹಳ ಮಹತ್ತ್ವದಿಂದ ಕೂಡಿದೆ. ಇದೇ ಮಲಾಪಹಾರೀ ನದಿಗೆ ಅಪಭ್ರಂಶದಿಂದ `ಮಲಪ್ರಭಾ’ ಎಂದು ಕರೆಯುತ್ತಾರೆ. ಈ ಸ್ಥಾನಕ್ಕೆ ಅಶ್ವತ್ಥನರಸಿಂಹ ಕ್ಷೇತ್ರವೆಂದು ಕರೆಯುವರು.

ಸ್ಥಳ ಮಹಾತ್ಮೆ

ಪ್ರಾಚೀನ ಕಾಲದಲ್ಲಿ  ಚ್ಯವನ ಋಷಿಗಳು ತಮ್ಮ ಎಲ್ಲ ಶಿಷ್ಯರ ಸಂಗಡ ಭಾರತ ಪರಿಭ್ರಮಣ ಮಾಡುವ ಕಾಲದಲ್ಲಿ ಈ ಸ್ಥಳಕ್ಕೆ ಬಂದಿದ್ದರು. ಇಲ್ಲಿಯ ರಮ್ಯ ಮತ್ತು ಶಾಂತ ವಾತಾವರಣ ನೋಡಿ ಚ್ಯವನ ಋಷಿಗಳಿಗೆ ಬಹಳ ಸಂತೋಷವಾಗುವುದರ ಜೊತೆಗೆ ಇಲ್ಲಿಯೇ ಆಶ್ರಮ ಸ್ಥಾಪಿಸಿ ಇರುವ ಇಚ್ಛೆಯಾಯಿತು. ಅದರಂತೆ ಅವರು ಶಿವೋಪಾಸಕರಾದ್ದರಿಂದ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು ಮತ್ತು ಅನೇಕ ವರ್ಷಗಳವರೆಗೆ ಶಿವಪೂಜೆಯನ್ನು ಮಾಡುತ್ತ ದೀರ್ಘ ತಪಶ್ಚರ್ಯವನ್ನು ಕೈಕೊಂಡರು.

ಕೆಲವು ವರ್ಷ ಕಳೆದ ಅನಂತರ ಜನಕಲ್ಯಾಣಕ್ಕಾಗಿ ಒಂದು ಮಹಾ ಯಜ್ಞವನ್ನು ಮಾಡುವುದಕ್ಕಾಗಿ ಸಂಕಲ್ಪ ಮಾಡಿದರು. ಅವರ ಯಜ್ಞವು ಶಾಸ್ತ್ರಾನುಸಾರ ಎಷ್ಟೋ ವರ್ಷಗಳವರೆಗೆ ನಡೆಯಿತು. ಒಂದು ದಿವಸ ಚ್ಯವನ ಋಷಿಗಳ ಶಿಷ್ಯರು ಕೇಳಿದರು. “ಈ ಯಜ್ಞದ ಫಲವನ್ನು ಯಾರಿಗೆ ಸಮರ್ಪಿಸಬೇಕು? ಇದರ ಅಷ್ಠಾನದೇವತೆ ಯಾರು?” ಆಗ ಮಹರ್ಷಿ ಚ್ಯವನರು ಧ್ಯಾನಮಗ್ನರಾಗಿ ವಿಚಾರ ಮಾಡಿದರು. ಅನಂತರ ತಮ್ಮ ಶಿಷ್ಯರಿಗೆ ಹೇಳಿದರು, “ಈ ಯಜ್ಞದ ಫಲವನ್ನು ನಾವು ಶ್ರೀ ನರಸಿಂಹ ದೇವರಿಗೆ ಸಮರ್ಪಿಸೋಣ. ಶ್ರೀಲಕ್ಷ್ಮೀನರಸಿಂಹ ದೇವರೇ ಈ ಯಜ್ಞದ ಅಷ್ಠಾನದೇವತೆಯಾಗಿದ್ದಾರೆ”. ಹೀಗೆ ಚ್ಯವನ ಋಷಿಗಳು ಶಿಷ್ಯರಿಗೆ ಹೇಳಿದಾಗ ಅವರಿಗೆ ಆಶ್ಚರ್ಯವಾಗಿ ಗುರುಗಳಿಗೆ ಕೇಳಿದರು, “ನೀವಾದರೋ ಶಿವೋಪಾಸಕರು, ಆದರೆ ನರಸಿಂಹ ದೇವರಿಗೆ ಏಕೆ ಸಮರ್ಪಿಸಬೇಕು?” ಎಂದಾಗ ಅವರು“ ಎಲ್ಲ ಯಜ್ಞಗಳಿಗೆ ಮುಖ್ಯ ದೇವತೆ ವಿಷ್ಣುವೇ ಆಗಿದ್ದಾನೆ. ಮತ್ತು ಎಲ್ಲ ಯಜ್ಞಗಳ ಫಲವನ್ನು ಅವನ ಪ್ರೀತಿಗೋಸ್ಕರವೇ ಮಾಡಬೇಕು ಅದರಿಂದಲೇ ಎಲ್ಲರಿಗೂ ಸುಖ ಸಂತೋಷಗಳ ಅಭಿವೃದ್ಧಿಯಾಗುವುದು” ಎಂದು ಹೇಳಿದರು.

ಗುರುಗಳಾದ ಚ್ಯವನ ಋಷಿಗಳ ಆಜ್ಞೆಯಂತೆ ಋತ್ವಿಜರು, ಆ ಯಜ್ಞಫಲವನ್ನು ನರಸಿಂಹ ದೇವರಿಗೆ ಸಮರ್ಪಿಸಲು ನಿಶ್ಚಯಿಸಿದರು. ಆಗ ಮಹರ್ಷಿ ಚ್ಯವನರು ಮಲಾಪಹಾರೀ ನದಿಯಲ್ಲಿಯ ಒಂದು ಶಿಲೆಯನ್ನು ತೆಗೆದುಕೊಂಡು, ಅಲ್ಲಿ ಶ್ರೀ ನರಸಿಂಹದೇವರ ಆವಾಹನೆಯನ್ನು ಮಾಡಿ ಷೋಡಶೋಪಚಾರಾದಿಗಳಿಂದ ಪೂಜೆಯನ್ನು ಮಾಡಿ ಆ ಯಜ್ಞಫಲವನ್ನು ಭಕ್ತವತ್ಸಲನಾದ ಶ್ರೀನರಸಿಂಹ ದೇವರಿಗೆ ಸಮರ್ಪಣೆ ಮಾಡಿದರು.

ಯಜ್ಞ ಮುಗಿದ ಕೆಲವು ದಿವಸಗಳ ಅನಂತರ ಶ್ರೀನರಸಿಂಹ ದೇವರು, ಚ್ಯವನ ಋಷಿಗಳಿಗೆ, “ನೀವು ಈ ಸ್ಥಾನವನ್ನು ಬಿಟ್ಟು ಆಂಧ್ರದ ಗದವಾಲ ಎಂಬ ಸ್ಥಳಕ್ಕೆ ಹೋಗಿರಿ” ಎಂದು ಆಜ್ಞೆ ಮಾಡಿದರು.

ಚ್ಯವನ ಋಷಿಗಳು ಆ ನರಸಿಂಹ ಶಿಲೆಯನ್ನು ಮಲಪ್ರಭೆಯಲ್ಲಿ ಜಲಾವಾಸಕ್ಕಾಗಿ ಇಟ್ಟು ತಾವು ಮುಂದೆ ಪ್ರವಾಸ ಕೈಕೊಂಡರು.

ಅಚ್ಯುತರಾಯನ ಕಟ್ಟೆ

ಈ ವಿಷಯವು ಪೌರಾಣಿಕ ಕಾಲದಲ್ಲಿ ನಡೆದ ಘಟನೆಯಾಯಿತು. ಅನಂತರ ಐತಿಹಾಸಿಕ ಕಾಲದಲ್ಲಿ ಅಂದರೆ 17ನೇ ಶತಮಾನದಲ್ಲಿ ವಿಜಯನಗರದ ಮಹಾರಾಜ ಅಚ್ಯುತರಾಯನು, ಗೋವಾದ ಮೇಲೆ ಯುದ್ಧ ಮಾಡುವುದಕ್ಕಾಗಿ ತನ್ನ ಚತುರಂಗ ಬಲ ಸೈನ್ಯದೊಂದಿಗೆ ಇದೇ ಸ್ಥಳದಲ್ಲಿ ಕೆಲವು ದಿವಸ ವಿಶ್ರಾಂತಿಗಾಗಿ ತಂಗಿದ್ದ. ಈ ವಿಶ್ರಾಂತಿಯ ಕಾಲದಲ್ಲಿ ಅಚ್ಯುತರಾಯನಿಗೆ ಒಂದು ಸ್ವಪ್ನ ಬಿತ್ತು. “ಹೇ ರಾಜಾ! ಈ ಸ್ಥಳದಲ್ಲಿ ಒಂದು ಶಿವಲಿಂಗವಿದೆ. ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಪ್ರತಿದಿನದ ಪೂಜೆಗೆ ವ್ಯವಸ್ಥೆ ಮಾಡು ಮತ್ತು ಇಲ್ಲಿಂದಲೇ ವಿಜಯನಗರಕ್ಕೆ ತಿರುಗಿ ಹೋಗು.” ಈ ಸ್ವಪ್ನದ ಆದೇಶದಂತೆ ಅಚ್ಯುತರಾಯನು ತನ್ನ ಸೈನಿಕರಿಂದ ಸ್ಥಳದ ಶುದ್ಧೀಕರಣ ಹಾಗೂ ಮಂದಿರದ ಜೀರ್ಣೋದ್ಧಾರಕ್ಕಾಗಿ ಕ್ರಮ ಕೈಗೊಂಡು ಕಾರ್ಯ ಪ್ರಾರಂಭಮಾಡಿದನು.

ಆದರೆ ಆ ಸ್ಥಳದ ಶುದ್ಧೀಕರಣ ಮಾಡುವ ಕಾಲಕ್ಕೆ ಆ ಮಂದಿರದ ಹತ್ತಿರವಿರುವ ಅಶ್ವತ್ಥ ವೃಕ್ಷಕ್ಕೆ ಗೊತ್ತಿಲ್ಲದಂತೆ ಕೊಡಲಿಯಿಂದ ಪ್ರಹಾರವಾದಾಗ ಆಶ್ಚರ್ಯವೆಂಬಂತೆ ಆ ವೃಕ್ಷದಿಂದ ರಕ್ತವು ಹರಿಯತೊಡಗಿತು. ಇದರಿಂದ ರಾಜನಿಗೂ ಸೈನಿಕರಿಗೂ ಮಲಮೂತ್ರ ವಿಸರ್ಜನೆ ಸ್ಥಗಿತವಾಗಿ ಬಹಳ ಕಷ್ಟ ಉಂಟಾಯಿತು. ರಾಜನಿಗೆ ಹೊಟ್ಟೆ ಉರಿ ಪ್ರಾರಂಭವಾಯಿತು. ಕೂಡಲೇ ಆ ಅಶ್ವತ್ಥ ವೃಕ್ಷದ ಹತ್ತಿರ ಬಂದು ಗಿಡದಿಂದ ರಕ್ತಸ್ರಾವವಾಗುವುದನ್ನು ನೋಡಿ ಮೂರ್ಛಿತನಾದನು. ಕೆಲವು ಕಾಲದ ಅನಂತರ ಎಚ್ಚರವಾದಾಗ ಒಂದು ಆಕಾಶವಾಣಿ ಆಯಿತು.

“ಹೇ ರಾಜಾ! ಈ ಅಶ್ವತ್ಥ ವೃಕ್ಷದಲ್ಲಿ ಅಶ್ವತ್ಥ ನಾರಾಯಣನು ವಾಸವಾಗಿದ್ದಾನೆ. ಆದ್ದರಿಂದ ಈ ಗಿಡಕ್ಕೆ ಧಾರ್ಮಿಕ ವಿಧಿ ಪ್ರಕಾರ ಪ್ರತಿದಿನದ ಪೂಜೆಗೆ ವ್ಯವಸ್ಥೆ ಮಾಡು ಮತ್ತು ಈ ವೃಕ್ಷದ ಸುತ್ತಲೂ ಒಂದು ದೊಡ್ಡ ಕಟ್ಟೆ ಕಟ್ಟಿಸು.”

ರಾಜಾ ಅಚ್ಯುತರಾಯನು ಕೂಡಲೇ ಆ ವೃಕ್ಷಕ್ಕೆ ದೊಡ್ಡದಾದ ಒಂದು ಕಟ್ಟೆಯನ್ನು ಕಟ್ಟಿಸಿದನು. ಅನಂತರ ಈಗ ಇದ್ದ ಅರ್ಚಕರ ಪೂರ್ವಜರಿಗೆ ಕೆಲವು ಭೂಮಿಯನ್ನು “ಸನದ” ರೀತಿಯಿಂದ ದಾನರೂಪವಾಗಿ ಕೊಟ್ಟು ಪ್ರತಿದಿವಸದ ಪೂಜೆ ಮಾಡಿ ಒಂದು ಸೇರು ಅನ್ನದ ನೈವೇದ್ಯ ಮಾಡಿ, ಹಗಲು-ರಾತ್ರಿ ನಂದಾದೀಪಕ್ಕಾಗಿ ಶಾಶ್ವತ ವ್ಯವಸ್ಥೆಮಾಡಿ ವಿಜಯನಗರಕ್ಕೆ ತಿರುಗಿ ಹೋದನು. ಅಂದಿನಿಂದ ಈ ಸ್ಥಳವು “ಅಚ್ಯುತರಾಯನ ಕಟ್ಟೆ” ಎಂದು ಪ್ರಸಿದ್ಧವಾಯಿತು.

ಶ್ರೀ ಯಾದವಾರ್ಯರು

ಇನ್ನು ಶ್ರೀ ರಾಘವೇಂದ್ರಸ್ವಾಮಿಗಳವರ ಸಮಕಾಲೀನರಲ್ಲಿ ಮಹಾ ತಪಸ್ವಿಗಳೂ ಅಪರೋಕ್ಷಜ್ಞಾನಿಗಳೂ, ಭಾಗವತಾಪರೋಕ್ಷಿಗಳೂ ಹಾಗೂ ಪ್ರಾತಃಸ್ಮರಣೀಯರಾದ ಶ್ರೀ ಯಾದವಾರ್ಯರು ಈ ಸ್ಥಳ ಮಹಾತ್ಮೆಯನ್ನು ಮನಗಂಡು ಇಲ್ಲಿಯೇ ಬಹಳ ಕಾಲದವರೆಗೆ ತಪಶ್ಚರ್ಯೆಯನ್ನು ಆಚರಿಸಿದರು.

ಒಂದು ದಿನ ಅವರು ಸಂಚಾರ ಮಾಡುತ್ತಾ ಬರುತ್ತಿರುವಾಗ ಉತ್ತರವಾಹಿನಿ ಮಲಾಪಹಾರೀ ತೀರ, ಅಶ್ವತ್ಥವೃಕ್ಷದ ಗುಂಪು, ಚ್ಯವನ ಋಷಿಗಳು ಪೂಜೆ ಮಾಡಿದ ಶಿವ, ಈ ರೀತಿಯಾದ ಪವಿತ್ರ ಸ್ಥಳವನ್ನು ನೋಡಿ ನಮ್ಮ ತಪಸ್ಸಿಗೆ ಇದೇ ಯೋಗ್ಯವಾದ ಸ್ಥಳವೆಂದು ತೀರ್ಮಾನಿಸಿದರು.

ನಿತ್ಯ ಭಾಗವತ ಪಾಠ-ಪ್ರವಚನದಲ್ಲಿ ಮಗ್ನರಾದ ಶ್ರೀ ಯಾದವಾರ್ಯರು ಎಂದೂ ಮಧುಕರಿಗಾಗಿ – ಉದರಂಭರಣಕ್ಕಾಗಿ ಯಾಚಿಸುತ್ತಿದ್ದಿಲ್ಲ. ಅನಾಯಾಸವಾಗಿ ದೇವರ ಇಚ್ಛೆಯಂತೆ ಸಿಕ್ಕಿದ್ದರಲ್ಲಿ ತೃಪ್ತರಾಗಿರುತ್ತಿದ್ದರು. ಹೀಗಿರುವಾಗ ಒಂದು ದಿನ ಮನೆಯಲ್ಲಿ ಯಾವುದೆ ಒಂದು ಪದಾರ್ಥವು ಇಲ್ಲದಂತಾಗುತ್ತದೆ. ಇದನ್ನು ಅರಿಯದ ಶ್ರೀ ಯಾದವಾರ್ಯರು ಒಂದು ದಿವಸ ಪೂಜಾನಂತರ ನೈವೇದ್ಯಕ್ಕಾಗಿ ಇಡಲು ಹೆಂಡತಿಗೆ ಹೇಳಲು ಹೆಂಡತಿಯು ವಿಚಾರ ಮಾಡಿದಳು. ಇಂದು ನೈವೇದ್ಯಕ್ಕೆ ಇಡಲು ಮನೆಯಲ್ಲಿ ಏನೂ ಇಲ್ಲ ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗ “ನದಿಯಲ್ಲಿಯ ಉಸುಕನ್ನೇ ನೈವೇದ್ಯಕ್ಕಿಡು” ಎಂದು ಹೇಳಿದಂತಾಯಿತು. ಹೆಂಡತಿಯು ಹಾಗೆಯೇ ಮಾಡಿದಳು. ಶ್ರೀಯಾದವಾರ್ಯರು ಅದನ್ನೇ ನೈವೇದ್ಯಮಾಡಿ ಪೂಜೆ ಮುಗಿಸಿ ಶಿಷ್ಯರ ಸಂಗಡ ಭೋಜನಕ್ಕೆ ಕುಳಿತಾಗ ನೈವೇದ್ಯವನ್ನೇ ಎಲೆಗೆ ಬಡಿಸು ಎಂದು ಹೇಳಿದರು. ಆಗ ಹೆಂಡತಿಯು ಕಣ್ಣೀರಿಡಲು ಪ್ರಾರಂಭಿಸಿದಳು. ಆಗ ಶ್ರೀ ಯಾದವಾರ್ಯರು ಹೆಂಡತಿಯನ್ನು ನೋಡಿ ಏಕೆ ಅಳುತ್ತಿರುವೆ ಎಂದು ಕೇಳಿದಾಗ, ಇಂದು ಮನೆಯಲ್ಲಿ ಏನೂ ಇರಲಿಲ್ಲ ಅದಕ್ಕೆ ನೈವೇದ್ಯಕ್ಕೆ ಉಸುಕನ್ನೆ ತಂದು ಇಟ್ಟಿದ್ದೇನೆ. ಅದನ್ನು ನಿಮಗೆ ಹೇಗೆ ಬಡಿಸಲಿ? ಎಂದಾಗ ಯಾದವಾರ್ಯರು “ಏ ಹುಚ್ಚಿ! ಅಖಿಲ ಬ್ರಹ್ಮಾಂಡಾಪತಿಯಾದ ಭಗವಂತನೇ ಅದನ್ನು ತಿಂದಿರುವಾಗ ನಮಗೂ ಅದನ್ನೇ ಬಡಿಸು” ಎಂದು ಹೇಳಿದರು. ಆಗ ಹೆಂಡತಿಯು ಪಾತ್ರೆಯ ಮೇಲಿದ್ದ ಮುಚ್ಚಳ ತೆಗೆದು ನೋಡಲಾಗಿ ಅವಳಿಗೆ ಆಶ್ಚರ್ಯ ಕಾದಿತ್ತು. ಆ ಪಾತ್ರೆಯಲ್ಲಿಯ ಉಸುಕು ಮಾಯವಾಗಿ ಬಿಸಿಬಿಸಿಯಾದ “ಕೇಸರೀಭಾತ್‌” (ಶಿರಾ) ಆಗಿತ್ತು ಮತ್ತು ಅದರಿಂದ ತುಪ್ಪವು ಸುರಿಯುತ್ತಿತ್ತು. ಶ್ರೀ ಯಾದವಾರ್ಯರು ಹೆಂಡತಿಯನ್ನು “ನೋಡು ಅಖಿಲ ಬ್ರಹ್ಮಾಂಡಾಪತಿಯಾದ ಭಗವಂತನ ಮೇಲೆ ಅಚಲವಾದ ಭಕ್ತಿ ನಂಬಿಕೆ ಇದ್ದರೆ ನಮ್ಮನ್ನು ರಕ್ಷಣೆ ಮಾಡುತ್ತಾನೆ” ಎಂದು  ಹೇಳಿದರು.

ಅವರ ನಿಸ್ವಾರ್ಥ ಭಕ್ತಿಗೆ ಮೆಚ್ಚಿ ಒಂದು ದಿವಸ ಕನಸಿನಲ್ಲಿ ಸ್ವತಃ ನರಸಿಂಹದೇವನು ಸಪ್ತಘಣ, ಶ್ರೀಲಕ್ಷ್ಮೀ, ಕಾಮಧೇನು, ಸೂರ್ಯಚಂದ್ರ, ಶಂಖ, ಚಕ್ರ, ಗದಾ, ಪದ್ಮ, ಗರುಡ ಸಮೇತನಾಗಿ ಬಂದು ಪ್ರಕಟನಾದನು. ಭಗವಂತನನ್ನು ನೋಡಿ ಯಾದವಾರ್ಯರು ಶ್ರೀಲಕ್ಷ್ಮೀನರಸಿಂಹ ದೇವರ ಸ್ತೋತ್ರವನ್ನು ಹೇಳುತ್ತಾ `ವಾಸಿಷ್ಠ ಕೃಷ್ಣ ಮಮ ದೇಹಿ ಕರಾವಲಂಬಂ’ ಎಂದು ಸ್ತೋತ್ರ ಹೇಳಿದರು. ಅದಕ್ಕೆ ಶ್ರೀನರಸಿಂಹ ದೇವರು ಹಸ್ತಲಾಘವವನ್ನು ಕೊಟ್ಟು ಆಲಿಂಗನ ಮಾಡಿಕೊಳ್ಳುತ್ತಾರೆ.

“ನನ್ನನ್ನು ಈಗ ಯಾವ ರೀತಿಯಲ್ಲಿ ನೋಡುತ್ತಿರುವೆಯೋ ಅದೇ ರೀತಿಯಾಗಿ ನಾನು ಈಗ ಇದೇ ನದಿಯಲ್ಲಿ ಶಿಲಾಮಯನಾಗಿ ಇದ್ದೇನೆ. ಅದನ್ನು ನೀನು ತೆಗೆದುಕೊಂಡು ಬಂದು ಗಂಧದಿಂದ ಬರೆ” ಎಂದು ಹೇಳಿ ನರಸಿಂಹ ದೇವನು ಅದೃಶ್ಯನಾದನು.

ಯಾದವಾರ್ಯರು ಶೀಘ್ರವಾಗಿ ನದಿಯ ಕಡೆಗೆ ಹೋಗಿ ನೋಡಿದರೆ ಯಾವ ಶಿಲೆಯನ್ನು ತೆಗೆದುಕೊಳ್ಳಬೇಕೆಂದು ವಿಚಾರಮಾಡಿದರು. ಇಲ್ಲಿ ಅನೇಕ ಶಿಲೆಗಳಲ್ಲಿ ಭಗವಂತನ ವಿಶೇಷ ಸನ್ನಿಧಾನ ಎಲ್ಲಿದೆ ಎಂದು ಯೋಚಿಸುತ್ತ ಮತ್ತೆ ಪ್ರಾರ್ಥಿಸುತ್ತಿರುವಾಗ ಆಕಾಶವಾಣಿ ಆಯಿತು “ಹೇ ಯಾದವಾರ್ಯ! ಒಂದು ದರ್ಭದ ಪವಿತ್ರವನ್ನು ಮಾಡಿ ನೀರಿನ ಮೇಲೆ ತೇಲಿಬಿಡು. ಅದು ಹರಿಯುತ್ತ ಹೋಗುತ್ತದೆ. ಆದರೆ ಅದು ಎಲ್ಲಿ ನೀರಿನ ಪ್ರವಾಹದ ವಿರುದ್ಧ  ಹರಿಯುವದೋ ಮತ್ತು ಎಲ್ಲಿ ಅದಕ್ಕೆ ಬೆಂಕಿ ಹತ್ತುವದೋ ಅಲ್ಲಿ ಒಂದು ಶಿಲೆ ಸಿಗುವುದು. ಆ ಶಿಲೆಯನ್ನು ಹೊರಗೆ ತೆಗೆದು ಅದರ ಮೇಲೆ ನೀನು ಹಿಂದೆ ನೋಡಿದಂತೆ ನನ್ನನ್ನು ಗಂಧದಿಂದ ಬರೆದು ನಿತ್ಯದಲ್ಲಿ ಪೂಜೆಯನ್ನು ಮಾಡು” ಈ ಆಜ್ಞಾಪ್ರಕಾರವಾಗಿ ಹಾಗೆಯೇ ಮಾಡಿ ಅಲ್ಲಿ ಸಿಕ್ಕ ಶಿಲೆಯನ್ನು ತಂದು ಅದರ ಮೇಲೆ ಗಂಧದಿಂದ ಶ್ರೀಲಕ್ಷ್ಮೀನರಸಿಂಹದೇವರನ್ನು ಬರೆದು ನಿತ್ಯ ಪೂಜೆಯನ್ನು ಪ್ರಾರಂಭಿಸಿದರು. ದೇವರು ಇಂದು ಅಲ್ಲಿ ಸಾಕಾರನಾಗಿ ಮೂರ್ತಿಸ್ವರೂಪದಿಂದ ದರ್ಶನಕೊಟ್ಟು ಎಲ್ಲ ಭಕ್ತರ ಮನೋರಥವನ್ನು ಪೂರ್ಣಮಾಡಿಕೊಡುತ್ತಿದ್ದಾನೆ.

ಈ ಲೇಖನ ಶೇರ್ ಮಾಡಿ